ಮಹಾಪುರುಷರ ದಯೆ ತಿಂಗಳಬೆಳಕಿನಂತೆ ತಂಪಾಗಿ ಮಧುರವಾಗಿ ಜಗತ್ತನ್ನೆಲ್ಲ ಪ್ಲಾವಿತವನ್ನಾಗಿ ಮಾಡುತ್ತದೆ. ಅವರಲ್ಲಿ ಪಾತ್ರಾಪಾತ್ರ ಭೇದವಿರುವುದಿಲ್ಲ; ಜಾತಿ ವರ್ಣಧ ವಿಚಾರವಿರುವುದಿಲ್ಲ. ಶ್ರೀಮಂತ ಬಡ, ಬ್ರಾಹ್ಮಣ ಶೂದ್ರ, ಧಾರ್ಮಿಕ ಆಧಾರ್ಮಿಕ ಎಲ್ಲರನ್ನೂ ತೃಪ್ತಗೊಳಿಸುತ್ತಾ ಅವರ ಹೃದಯದಿಂದ ಕರುಣಾಜಾಹ್ನವಿ ಪ್ರವಹಿಸುತ್ತಿರುತ್ತದೆ.

ಒಂದು ದಿನ ಬೆಳಿಗ್ಗೆ ಮಹಾಪುರುಷಜಿ ಸ್ವಲ್ಪ ವಿಶ್ರಾಂತಿಯ ಅನಂತರ ತಮ್ಮ ಮಂಚದ ಮೇಲೆ ಕೂತುಕೊಂಡಿದ್ದರು. ಅವರ ಭಾವ ತುಂಬ ಗಂಭೀರವೂ ಅಂತರ್ಮುಖವೂ ಆಗಿತ್ತು. ಇದಕ್ಕಿದ್ದ ಹಾಗೆ ಪಕ್ಕದಲ್ಲಿದ್ದ ಒಬ್ಬ ಸೇವಕನಿಗೆ ಹೇಳಿದರು: “ಹೋಗಿ ನೋಡು, ಯಾರಾದರೂ ದೀಕ್ಷಾಪ್ರಾರ್ಥಿಗಳು ಬಂದಿದ್ದಾರೆಯೆ ಎಂದು.” ಸೇವಕ ಹೊರಗೆ ಬಂದು, ಈ ಕಡೆ ಆ ಕಡೆ ನೋಡಿ ಯಾರನ್ನೂ ಕಾಣೆ, ಉಪ್ಪರಿಗೆಯಿಂದ ಕೆಳಗಿಳಿದು ಹೋಗಿ ನೋಡಲಾಗಿ ಅಲ್ಲೊಬ್ಬ ಮಹಿಳೆ ದೀಕ್ಷೆ ತೆಗೆದುಕೊಳ್ಳಲೆಂದು ಬಂದಿರುವುದನ್ನು ಕಂಡನು, ಆಕೆಯನ್ನು ಯಾರು ಎಂತು ಎಂದು ವಿಚಾರಿಸಲಾಗಿ, ಆಕೆ ತನ್ನ ವಿಚಾರವಾಗಿ ಹೇಳಿಕೊಂಡ ವಾರ್ತೆಯನ್ನು ಕೇಳಿ ಆ ಸೇವಕ ಒಮ್ಮೆಯೆ ಸ್ತಂಭಿತನಾಗಿ ಹೋದನು. ಆ ಮಹಿಳೆ ಯುವತಿ; ಹಳ್ಳಿಯಿಂದ ಬಂದಿದ್ದಳು; ಜೊತೆಯಲ್ಲಿ ಬ್ಬ ಗಂಡಸಿದ್ದನು. ಆಕೆ ತಾನೆ ತನ್ನ ಕೊಳಕು ಬಾಳಿನ ಕತೆ ಹೇಳಿದಳು: ತಾನು ಬ್ರಾಹ್ಮಣ ಕುಲದಲ್ಲಿ ಹುಟ್ಟಿದ್ದರೂ ಕೆಟ್ಟಸಂಗಕ್ಕೆ ಸಿಕ್ಕಿ ಅಡ್ಡದಾರಿ ಹಿಡಿದು ಒಬ್ಬ ಕೀಳುಜಾತಿಯವನ ಜೊತೆ ವಾಸ ಮಾಡಿಕೊಂಡಿದ್ದಳು. ಆಕೆಯ ಜೊತೆಯಲ್ಲಿ ಬಂದಿದ್ದವನೆ ಅವನು.

ತುಂಬ ಕರುಣಭಾವದ ಪಶ್ಚಾತ್ತಾಪದ ಧ್ವನಿಯಿಂದ ಆಕೆ ಅಂಗಲಾಚಿ ಕೊಂಡಳು: “ನನಗೆ ಒಂದು ಸಾರಿ ಅವರ ದರ್ಶನ ದೊರೆಯಲಾರದೆ? ಅವರು ನನ್ನಂತಹ ಅಧಮರಿಗೆ ಕೃಪೆತೋರುವುದಿಲ್ಲವೆ?” ಸೇವಕ ತುಂಬಾ ಭಾರಾಕ್ರಾಂತ ಮನದಿಂದ ಮಹಾಪುರುಷಜಿಯ ಬಳಿಗೆ ಬರುವಷ್ಟರಲ್ಲಿಯೆ ಅವರು ತುಂಬ ವ್ಯಗ್ರ ಭಾವದಿಂದ ಪ್ರಶ್ನಿಸಿದರು: “ಏನೋ? ಯಾರಾದರೂ ಇದ್ದಾರೇನೋ?”

ಸೇವಕ ತುಂಬ ಕುಂಠಿತನಾಗಿ ಹೇಳಿದ: “ಮಹಾರಾಜ್, ಒಬ್ಬ ಹೆಂಗಸು ದೀಕ್ಷೆ ತೆಗೆದುಕೊಳ್ಳುವುದಕ್ಕಾಗಿ ಬಂದಿದ್ದಾಳೆ. ಆದರೆ…”

ಬಾಯಿಂದ ಹೊರಟ ಮಾತು ಇನ್ನೂ ಪೂರೈಸುವುದರೊಳಗಾಗಿಯೆ ಮಹಾಪುರುಷಜಿ ಹೇಳಲಾರಂಭಿಸಿದರು: “ಅದರಿಂದೆಲ್ಲ ಏನು? ಗಂಗಾಸ್ಥಾನ ಮಾಡಿ ಠಾಕೂರ್ ದರ್ಶನ ಮಾಡಿಕೊಂಡು ಇಲ್ಲಿಗೆ ಬರುವಂತೆ ಹೇಳಿ ಆಕೆಗೆ. ನಮ್ಮ ಠಾಕೂರ್ (ಶ್ರೀ ರಾಮಕೃಷ್ಣರು) ಪತಿತಪಾವನ. ಅವರು ಬಂದದ್ದೆ ಪತಿತರ ಉದ್ಧಾರಕ್ಕಾಗಿ, ಅವರು ಎತ್ತಿಕೊಳ್ಳದಿದ್ದರೆ ಇವರಿಗೆಲ್ಲ ಏನು ಗತಿ? ಹಾಗಲ್ಲದಿದ್ದರೆ ಅವರಿಗೇಕೆ ಪತಿತಪಾವನ ಎಂಬ ನಾಮ?”

ತಮ್ಮ ಹೃದಯದ ಅನಂತಭಾಂಡಾರವನ್ನು ತೆರೆದು ಜೀವರಿಗೆ ಕೃಪೆ ದೋರುವುದಕ್ಕೋಸ್ಕರ ಉನ್ಮುಖರಾಗಿದ್ದವರಂತೆ ತೋರಿದರು ಮಹಾಪುರುಷಜಿ. ಆಮೇಲೆಯೂ ಆ ಮಹಿಳೆ ಸ್ನಾನಾದಿಗಳನ್ನು ಮುಗಿಸಿ ದೀಕ್ಷೆಗಾಗಿ ಬಂದಾಗ ಮಹಾಪುರುಷಜಿ ಆಕೆಯ ವಿಚಾರವೆಲ್ಲವನ್ನೂ ಸಮಗ್ರವಾಗಿ ತಿಳಿದವರಂತೆ ಮಾತಾಡಿದರು: “ಭಯವೇಕಮ್ಮಾ? ನೀನು ಯಾವಾಗ ಪತಿತಪಾವನ ಶ್ರೀರಾಮಕೃಷ್ಣರ ಚರಣಾಶ್ರಯದಲ್ಲಿ ಮರೆಹೊಕ್ಕೆಯೊ ಆವಾಗಲೆ ನಿನಗೆ ಪರಮ ಮಂಗಳ ಲಾಭವಾಯಿತೆಂದು ಭಾವಿಸು. ಹೇಳು-ಈ ಜನ್ಮದಲ್ಲಿ ಮತ್ತು ಹೋದ ಜನ್ಮಗಳಲ್ಲಿ ನಾನು ಏನೇ ಪಾಪಗಳನ್ನು ಮಾಡಿರಲಿ ಅದೆಲ್ಲವನ್ನೂ ಇಲಿ (ಶ್ರೀರಾಮಕೃಷ್ಣರಲ್ಲಿ) ಅರ್ಪಿಸುತ್ತೇನೆ; ಇನ್ನು ಮುಂದೆ ಪಾಪಮಾಡುವುದಿಲ್ಲ.” ಯಥಾವಿಧಿ ದೀಕ್ಷಾದಿ ಮುಗಿದ ಮೇಲೆ ಆ ಮಹಿಳೆ ಹೊರಗೆ ಬಂದಾಗ ಯಾರೊ ಬೇರೊಬ್ಬಳು ಹೊಸಬಳಂಬಂತೆ ಕಾಣಿಸಿದಳು. ಆ ದಿನವೆ ಆಮೇಲೆ ಮಹಾಪುರುಷಜಿ ಹೇಳಿದಳು: “ಈ ಶರೀರದಲ್ಲಿ ಇಷ್ಟೊಂದು ಅಸುಖ, ಇಷ್ಟೊಂದು ಕಷ್ಟ ಭೋಗ ಏಕೆ ನಿನಗೆ ಗೊತ್ತೆ? ಆ ಎಲ್ಲರ ಪಾಪಗಳನ್ನೂ ಈ ಶರೀರ ಭೋಗಿಸುತ್ತಾ ಹೋಗುತ್ತಿದೆ. ಹಾಗಲ್ಲದಿದ್ದರೆ ಈ ಶರೀರಕ್ಕೆ ಇಷ್ಟೊಂದು ರೋಗ ಎಲ್ಲಿಂದ ಬರಬೇಕು?”

* * *