ಒಂದು ದಿನ ಸಂಧ್ಯೆಯ ಧ್ಯಾನದ ಅನಂತರ ಮಠದ ಕೆಲವರು ಸಂನ್ಯಾಸಿಗಳೂ ಮಹಾಪುರುಷಜಿಯ ಕೊಠಡಿಯಲ್ಲಿ ನೆರೆದಿದ್ದರು. ಅವರು ತಡೆದು ತಡೆದು ಅಗೊಂದು ಈಗೊಂದು ಮಾತಾಡುತ್ತಿದ್ದರು. ಒಂದೊಂದು ನುಡಿಯಲ್ಲಿಯೂ ಧ್ಯಾನದ ಆನಂದ ಅರಳಿ ತೋರುತ್ತಿತ್ತು. ಜೊತೆಗೆ ಅದೆಂತಹ ಮಧುರ ಮನೋಹರ ಮುಗುಳುನಗೆ? ತಮ್ಮ ಸ್ವಂತ ಜೀವನದ ಅನುಭವ ವಿಚಾರವಾಗಿ ಅವರು ಹೀಗೆಂದರು: “ನನಗೆ ಚಿಕ್ಕಂದಿನಿಂದಲೂ ಭಗವಂತನ ನಿರಾಕಾರಭಾವದಲ್ಲಿಯೆ ವಿಶೇಷ ರುಚಿ; ಅಲ್ಲದೆ ಅದೇ ಭಾವದಿಂದಲೆ ಧ್ಯಾನವನ್ನು ಮಾಡುತ್ತಿದ್ದೆ. ಆದರೆ ಶ್ರೀ ಠಾಕೂರರ ಸಂಸರ್ಗ ದೊರೆತ ಮೇಲೆ ಸಾಕಾರಭಾವದಲ್ಲಿಯೂ ವಿಶ್ವಾಸ ಮೂಡಿ ಅದರಲ್ಲಿಯೂ ಆನಂದಾನುಭವ ಮೂಡತೊಡಗಿದೆ.”

ಇನ್ನೊಂದು ದಿನ ಪೂಜಾದಿಗಳ ವಿಚಾರ ಮಾತು ಬಂದಾಗ ಮಹಾಪುರುಷಜಿ ಹೇಳಿದರು: “ನೋಡಿ, ಆ ಕಾಲದಲ್ಲಿ ನಾವು ಪೂಜೆ ಮಾಡುವಾಗಲೆಲ್ಲ ನಮ್ಮ ಪೂಜೆ ಭಾವಪೂರ್ಣ ಪೂಜೆಯಾಗಿತ್ತು. ಈಗಿನಂತೆ ಇಷ್ಟೊಂದು ಆಡಂಬರ ಸ್ವಲ್ಪವೂ ಇರಲಿಲ್ಲ. ಪೂಜೆಗೆ ಕುಳಿತನೊಡನೆಯೆ ಹೀಗೆಂದು ಭಾವಿಸುತ್ತಿದ್ದೆವು: ಅವರು ದಕ್ಷಿಣೇಶ್ವರದಲ್ಲಿ ಹೇಗೆ ತಮ್ಮ ಚಿಕ್ಕ ಮಂಚದಮೇಲೆ ಕುಳಿತುಕೊಳ್ಳುತ್ತಿದ್ದರೊ ಹಾಗೆ ಪ್ರತ್ಯಕ್ಷಭಾವದಿಂದ ಇಲ್ಲಿಯೂ ಇದ್ದಾರೆ; ಮತ್ತು ಆ ಭಾವದಿಂದಲೆ ಅವರ ಪಾದಗಳನ್ನು ತೊಳೆದು ಒರಸುತ್ತಿದ್ದೆವು; ಸ್ನಾನ ಮಾಡಿಸಿ, ವಸ್ತ್ರ ಉಡಿಸಿ, ಹೂವುಗಂಧಗಳಿಂದ ಅಲಂಕರಿಸಿ, ಹಣ್ಣು ಸಿಹಿ ಇವುಗಳನ್ನೆಲ್ಲ ಅರ್ಪಿಸುತ್ತಿದ್ದೆವು. ಆಮೇಲೆ ಅನ್ನ ವ್ಯಂಜನಾದಿಗಳನ್ನು ನೈವೇದ್ಯ ಮಾಡುತ್ತಿದ್ದೆವು. ಅವರ ಊಟ ಮುಗಿದ ಮೇಲೆ ತಾಂಬೂಲ ತಂಬಾಕುಗಳನ್ನು ಕೊಡುತ್ತಿದ್ದೆವು. ತಂಬಾಕು ಸೇದಿ ಪೂರೈಸಿದ ಮೇಲೆ, ಹಾಸಿಗೆ ಹಾಸಿ ಅವರನ್ನು ಮಲಗಿಸಿ ಪಾದಸೇವೆ ಮಾಡಿ, ಬೀಸಣಿಗೆ ಬೀಸುತ್ತಿದ್ದೆವು. ಅವರು ನಿದ್ದೆ ಮಾಡಿದ ಮೇಲೆ ಸದ್ದಿಲ್ಲದಂತೆ ಬಾಗಿಲು ಮುಚ್ಚಿಕೊಂಡು ನಮ್ಮ ಕೊಠಡಿಗೆ ಹೋಗಿ ವಿಶ್ರಮಿಸಿಕೊಳ್ಳುತ್ತಿದ್ದೆವು. ಈ ಎಲ್ಲ ಅನುಷ್ಠಾನಗಳನ್ನೂ ಅವರು ಜೀವಂತನವಾಗಿ ಪ್ರತ್ಯಕ್ಷವಾಗಿ ಅಲ್ಲಿಯೆ ಇದ್ದಾರೆ ಎಂಬ ಬುದ್ಧಿಯಿಂದಲೂ ಅವರ ಮೇಲೆ ಉಕ್ಕುವ ಅಕ್ಕರೆಯಿಂದಲೂ ಆಚರಿಸುತ್ತಿದ್ದೆವು. ಮಂತ್ರಮಂತ್ರಗಳನ್ನೇನೋ ವಿಧಿಪ್ರಾಕರ ಒಂದೆರಡನ್ನು ಉಚ್ಚರಿಸುತ್ತಿದ್ದೆವಾದರೂ ನಮಗೆ ಅವುಗಳ ಮೇಲೆ ಅಷ್ಟೇನೂ ಇಷ್ಟವಿರಲಿಲ್ಲ. ನಮ್ಮ ಪೂಜೆಯಲ್ಲಿ ಯಾವ ಆಡಂಬರ ಲೇಶಮಾತ್ರವೂ ಇರುತ್ತಿರಲಿಲ್ಲ. ಅವರು ನಮ್ಮ ಹೃದಯದ ಈಶ್ವರ; ಅವರಿಗೆ ಬೇಕಾದುದು ನಮ್ಮ ಹೃದಯದ ಪ್ರೇಮ ಮತ್ತು ಆತ್ಮ ನಿವೇದನೆ. ಆದರೆ ಈಗೀಗ, ಕಾಲ ಸರಿದಂತೆಲ್ಲ, ಬಾಹ್ಯಿಕ ಆಡಂಬರಕ್ಕೇ ಹೆಚ್ಚು ಪ್ರಾಶಸ್ತ್ಯ ಲಭಿಸುತ್ತಾ ಹೋಗುತ್ತಿದೆ. ಪರಿಣಾಮವೇನೆಂದರೆ ಭಾವಭಕ್ತಿಯ ಗಂಭೀರತೆ ಕ್ರಮೇಣ ಕಡಿಮೆಯಾಗುತ್ತಿದೆ.”

“ಸ್ವಾಮೀಜಿಯ ಪೂಜೆಯೂ ಅದೇ ರೀತಿಯಾಗಿತ್ತು. ಅವರು ದೇವರ ಮನೆಗೆ ಹೋದೊಡನೆಯೆ ಮೊದಲು ಆಸನದ ಮೇಲೆ ಕುಳಿತುಕೊಂಡು ಬಹಳ ಕಾಲದವರೆಗೆ ಧ್ಯಾನಮಾಡುತ್ತಿದ್ದರು; ತುಂಬ ಗಂಭೀರ ಧ್ಯಾನ! ಸುಮಾರು ಒಂದೂವರೆ ಗಂಟೆ ಧ್ಯಾನ ಮಾಡಿದ ಮೇಲೆ ಪೂಜೆಗೆ ಪ್ರಾರಂಭಿಸುತ್ತಿದ್ದರು. ಧ್ಯಾನ ದ್ವಾರವಾಗಿಯೆ ಮಿಕ್ಕೆಲ್ಲವೂ ಆಗುತ್ತಿತ್ತು. ಆಮೇಲೆ ಶ್ರೀ ಠಾಕೂರರಿಗೆ ಸ್ನಾನ ಮಾಡಿಸಿ, ಇಡಿಯ ಹೂವಿನ ತಟ್ಟೆಗೇ ಚಂದನವನ್ನು ಬೆರಸಿ, ಎರಡು ಕೈಗಳಿಂದಲೂ ಅಂಜಲಿ ಅಂಜಲಿಯಾಗಿ ಆ ಗಂಧಪುಷ್ಪಗಳನ್ನೆತ್ತಿ ಅವರ ಶ್ರೀ ಚರಣ ತಲದಲ್ಲಿ ಮತ್ತೆ ಮತ್ತೆ ಸಮರ್ಪಿಸುತ್ತಿದ್ದರು. ನಿಜವಾಗಿಯೂ ನೋಡತಕ್ಕದ್ದಾಗಿತ್ತು. ಅವರ ಪೂಜೆ! ಆಮೇಲೆ ಸಾಷ್ಟಾಂಗ ಪ್ರಣಾಮ ಮಾಡಿ ಎದ್ದು ಬರುತ್ತಿದ್ದರು. ಭೋಗಾದಿಯನ್ನು ಇನ್ನಾರಾದರೂ ತೆಗೆದುಕೊಂಡು ಹೋಗಿ ನಿವೇದರೆ ಮಾಡುತ್ತಿದ್ದರು. ಅವರ ಪೂಜೆಯಲ್ಲಿ ಧ್ಯಾನಕ್ಕೇ ಅಗ್ರಪೂಜೆ!”

ಹಾಗೆಯೇ ಮಾತುಕತೆಯಾಡುತ್ತಾ ಆಮೇಲೆ ಹೇಳಿದರು: “ನಾವು ಎಷ್ಟೆಂದರೂ ಸಂನ್ಯಾಸಿಗಳು, ನಮಗೆ ದೇವರಮನೆ, ಪೂಜೆ ಇತ್ಯಾದಿಗಳ ಆವಶ್ಯಕತೆ ಅಷ್ಟೆಂದೇನೂ ಬೇಕಿಲ್ಲ. ಈ ಎಲ್ಲಾ ಬಾಹ್ಯಿಕ ಅನುಷ್ಠಾನ ಮಾಡದೆ ಇದ್ದೂ ನಾವು ಮುಂದುವರಿಯಬಹುದು. ಆದರೆ ಈ ಎಲ್ಲದರ ಪ್ರಯೋಜನ ಬಹುಮಟ್ಟಿಗೆ ಈ ಕಾರಣಕ್ಕಾಗಿ: ಈ ಪೃಥ್ವಿಯ ಸಕಲ ಭಾಗಗಳಿಂದಲೂ ಅನೇಕ ಶ್ರೇಣಿಯ ಸ್ತ್ರೀಪುರುಷರೂ ಆಬಾಲವೃದ್ದ ವನಿತೆಯರೂ ಈ ಮಹಾ ಕೇಂದ್ರದಿಂದ ಆಕೃಷ್ಟರಾಗಿ ಇಲ್ಲಿಗೆ ಬರುತ್ತಾರೆ; ಮತ್ತು ಶ್ರೀ ಶ್ರೀ ಠಾಕೂರರ ಈ ಮಹದುದಾರ ಸಮನ್ವಯಭಾವವನ್ನು ಗ್ರಹಿಸಿ ಧನ್ಯರಾಗುತ್ತಾರೆ.”

ಒಂದು ದಿನ ಬೆಳಿಗ್ಗೆ ಧ್ಯಾನಾದಿಗಳೆಲ್ಲ ಮುಗಿದಮೇಲೆ ಮಠದ ಅನೇಕ ಸಾಧುಗಳು ಮಹಾಪುರುಷಜಿಯ ಕೊಠಡಿಯಲ್ಲಿ ನೆರೆದಿದ್ದರು. ನಾನಾ ಪ್ರಕಾರ ಮಾತುಕತೆ ಆಗುತ್ತಿತ್ತು. ಸ್ವಾಮಿ ಯತೀಶ್ವರಾನಂದರು ಕೇಳಿದರು: “ಮಹಾರಾಜ್, ಸಮುದ್ರವನ್ನು ಈಶ್ವರನ ಪ್ರತೀಕರೂಪವನ್ನಾಗಿ ಕಲ್ಪಸಿಕೊಳ್ಳಬಹುದೆ?” ಅದಕ್ಕೆ ಉತ್ತರವಾಗಿ ಮಹಾಪುರುಷಜಿ ಹೇಳಿದರು: “ಸಮುದ್ರ ಏಕೆ? ಸಮುದ್ರಕ್ಕೆ ಒಂದು ತೀರ- ಮೇರೆ ಇದೆ. ಅಲ್ಲದೆ ಅದೂ ಸರ್ವತ್ರ ಇರುವುದೂ ಇಲ್ಲ. ಆಕಾಶವೆ ಅವನ ಪ್ರತೀಕ. ಆಕಾಶ ಅಸೀಮ; ಪ್ರತಿ ಅನುಪರಮಾಣುವಿನಲ್ಲಿಯೂ ಇರುತ್ತದೆ. ವಿಶ್ವವು ಒಳಗೂ ಹೊರಗೂ ಸಂಪೂರ್ಣವಾಗಿ ಆಕಾಶದಿಂದ ಪರಿವ್ಯಾಪ್ತ. ಬಾಹ್ಯ ವಿಶ್ವದಲ್ಲಿ ನಾವು ಎತ್ತ ಕಡೆ ಕಣ್ಣಿಟ್ಟರೂ ಅತ್ತ ಕಡೆ ಆಕಾಶ ಕಾಣುತ್ತದೆ. ದೂರದಲ್ಲಿ ದೂರಾತಿ ದೂರದಲ್ಲಿ, ಅನಂತದಲ್ಲಿ ಎಷ್ಟು ಅಸಂಖ್ಯ ಸೌರ ಜಗತ್ತುಗಳಿವೆ-ಒಂದೊಂದೂ ನಮ್ಮ ಸೂರ್ಯನಿಗಿಂತ ಸಹಸ್ರಪಾಲು ದೊಡ್ಡದಾಗಿ! ಎಷ್ಟು ಕೋಟಿ ನಕ್ಷತ್ರಗಳು ಗಗನಸಮುದ್ರದಲ್ಲಿ ಕ್ಷುದ್ರ ಬುದ್ಬುದಗಳಂತೆ ಹುಟ್ಟುತ್ತವೆ, ಇರುತ್ತವೆ. ಆಮೇಲೆ ಅದರಲ್ಲಿಯೆ ವಿಲೀನವಾಗುತ್ತವೆ! ಅದರಂತೆಯೆ ಈಶ್ವರನನ್ನೂ ಅನಂತವಿಶ್ವದ ಉತ್ಪತ್ತಿ ಸ್ಥಿತಿ ಲಯಗಳಿಗೆ ಕಾರಣನೆಂದು ಅನುಮತಿಸುತ್ತೇವೆ. ಅಲ್ಲದೆ ಅವನೆ ಈ ಅನಂತ ನಾಮರೂಪಗಳನ್ನು ಪ್ರಕಾಶಗೊಳಸಿ, ಪ್ರತ್ಯೇಕ ಪ್ರತ್ಯೇಕವಾಗಿರುವ ಆ ಒಂದೊಂದರಲ್ಲಿಯೂ ಏಕವೂ ಅದ್ವಯವೂ ಆದ ಭಾವದಿಂದ ಪ್ರವೇಶಿಸಿ, ಅಂತರ‍್ಯಾಮಿಯೂ ಆಗಿದ್ದಾನೆ. ‘ತತ್ ಸೃಷ್ಟ್ವಾತದೇವಾನುಪ್ರಾವಿಶತ್’ ಅವನು ವಿಶ್ವವನ್ನು ಸೃಷ್ಟಿಸಿ ಅದರಲ್ಲಿಯೆ ಅನುಪ್ರವಿಷ್ಟನಾಗಿದ್ದಾನೆ.”

ಒಂದು ದಿನ ಮಹಾಪುರುಷಜಿ ಒಬ್ಬರೆ ಇದ್ದುದನ್ನು ನೋಡಿ ಸಂನ್ಯಾಸಿ ಒಬ್ಬರು ಕಾತರಭಾವದಿಂದ ಹೇಳಿಕೊಂಡರು: “ಮಹಾರಾಜ್, ದಿನ ಹೋದಂತೆಲ್ಲ ಶರೀರಪಟುತ್ವ ಕ್ಷೀಣಿಸುತ್ತಾ ಹೋಗುತ್ತಿದೆ. ಮೊದಲಿನಂತೆ ನಾನೀಗ ಸಾಧನೆ ಭಜನೆ ಮಾಡಲಾರೆ; ಏನು ಗತಿ ಎಂದು ನನಗೆ ಭಯವಾಗುತ್ತದೆ.”

ಮಹಾಪುರುಷಜಿ: “ಅಳಯ್ಯಾ ಅಳು! ಸಾಧನೆ ಭಜನೆಯಿಂದಲೆ ಅವನನ್ನು ಹಿಡಿಯಲು ಸಾಧ್ಯವೆ? ಮನುಷ್ಯನ ಶಕ್ತಿಯಾದರೂ ಎಷ್ಟು ದೂರ ಹೋಗಬಲ್ಲದು? ಮನುಷ್ಯ ಏನು ಮಾಡಿದರೆ ತಾನೆ ಅವನ ಕೃಪೆಗೆ ಅಧಿಕಾರಿಯಾಗಲು ಅರ್ಹತೆ ಪಡೆಯುತ್ತಾನೆ? ಏನೊಂದೂ ಇಲ್ಲ. ಅವನ ಮೇಲೆ ಎಲ್ಲ ಭಾರ ಹಾಕಿ ನಿಶ್ಚಿಂತವಾಗಿರು! ಅವನಿಗೆ ಶರಣಾಗತನಾಗು. ಅವನು ನಿಶ್ಚಯವಾಗಿಯೂ ಕೃಪೆತೋರಿ ತನ್ನ ಶ್ರೀಚರಣದಲ್ಲಿ ಸ್ಥಾನ ಕೊಡುತ್ತಾನೆ. ಅವನ ಕೃಪೆ ಹೊರತು ಅವನನ್ನು ಹಿಡಿಯಲು ಸಾಧ್ಯವಿಲ್ಲ.”

ಸಂನ್ಯಾಸಿ: “ಮಹಾರಾಜ್, ಅದೇನೋ ಸರಿಯಾದ ಮಾತೇ. ಆದರೆ ಈ ಅಹಂಕಾರ, ಅಭಿಮಾನ ಹೋಗಲೊಲ್ಲವಲ್ಲ, ಏನು ಮಾಡೋದು? ಅದನ್ನು ಈ ಮನಸ್ಸಿಗೆ ತಿಳಿಸಿಕೊಡಬೇಕೆಂದು ನಾನು ಎಷ್ಟು ಮಾಡಿದರೂ ಅದು ಮಾತ್ರ ಒಂದಿನಿತೂ ಕೇಳುವುದಿಲ್ಲ. ಕೇವಲ ನಮ್ಮ ಪ್ರಯತ್ನದಿಂದಲೆ ಏನನ್ನಾದರೂ ಸಾಧಿಸಿಬಿಡಬಹುದು ಏಂದೇನೋ ತೋರುತ್ತದೆ. ಆದರೆ ಅದು ಚಂದ್ರನನ್ನು ಹಿಡಿಯುವಷ್ಟೇ ಅಸಂಭವ ವ್ಯಾಪಾರ. ತಾವು ಒಂದಿಷ್ಟು ಆಶೀರ್ವಾದ ಮಾಡಬೇಕು, ಈ ಅಹಂಕಾರ ಅಭಿಮಾನ ಎಲ್ಲ ತೊಲಗಿ ಹೋಗುವಂತೆ, ಆತನ ಶ್ರೀಚರಣದಲ್ಲಿ ಶರಣಾಗತಿ ಲಭಿಸಲು ಸಮರ್ಥವಾಗುವಂತೆ.”

ಮಹಾಪುರುಷಜಿ: “ಹಾಗೆಯೆ ಆಗಲಿ ಅಯ್ಯ, ಅದಾಗಿಯೆ ಆಗುತ್ತದೆ. ನಾನು ಹೇಳುತ್ತೇನೆ, ಶ್ರೀ ಶ್ರೀ ಠಾಕೂರರ ಕೃಪೆಯಿಂದ. ಅವರ ಮೇಲೆ ನೀನು ಸಂಪೂರ್ಣ ನಿರ್ಭರನಾಗಿದ್ದರೆ, ಕೃತಾರ್ಥನಾಗಿಯೆ ಆಗುತ್ತೀಯೆ. ನಿನ್ನ ಮಾನವ ಜೀವನ ಧನ್ಯವಾಗುತ್ತದೆ.”

ಮಠದಲ್ಲಿ ದುರ್ಗಾಪೂಜೆಯ ಉತ್ಸವ ಜರುಗುತ್ತಿತ್ತು. ಮಹಾನವಮಿಯ ರಾತ್ರಿ. ಹಿಂದಿನ ವರ್ಷಗಳಲ್ಲಿ ಈ ಮಹಾನವಮಿಯ ರಾತ್ರಿಯಲ್ಲಿ ಮಠಪ್ರಾಂಗಣವೆಲ್ಲ ಎಷ್ಟೊಂದು ಭಜನೆ ಕೀರ್ತನೆಗಳಿಂದ ಮುಖರಿತವಾಗಿರುತ್ತಿತ್ತು! ಆದರೆ ಈ ಸಾರಿ ಮಹಾಪುರುಷಜಿಯ ಶರೀರ ಸಂಕಟಾಪನ್ನ ಅವಸ್ಥೆಯಲ್ಲಿತ್ತು. ಆದ್ದರಿಂದ ಇಂದು ಮಠಪ್ರದೇಶವೆಲ್ಲ ನೀರವವಾಗಿದೆ. ರಾತ್ರಿ ಬಹಳ ಹೊತ್ತು ಕಳೆದಮೇಲೆ ಭಜನಾದಿ ಶಬ್ದ ಯಾವುದೂ ಕೇಳಬರದಿದ್ದರಿಂದ ಮಹಾಪುರುಷಜಿ ಮಠದ ಸಾಧುಗಳನ್ನು ಬಳಿಗೆ ಕರೆದು ಹೇಳಿದರು: “ಇದು ಮಹಾನವಮಿಯ ರಾತ್ರಿ, ಮಹಾ ಆನಂದದ ಸಮಯ, ಭಜನೆ ಕೀರ್ತನೆ ಏನೂ ಮಾಡದೆ ಸುಮ್ಮನೆ ಇದ್ದೀರಲ್ಲಾ ಏಕೆ ಏನು ವಿಷಯ?”

ಒಬ್ಬರು ಸಾಧು: “ಮಹಾರಾಜ್, ತಮ್ಮ ದೇಹಸ್ಥಿತಿ ತುಂಬ ಕಠಿನಾವಸ್ಥೆಯಲ್ಲಿದೆ. ನಾವು ಹೇಗೆ ಭಜನೆ ಮಾಡುವುದು? ಗಲಾಟೆ ಸದ್ದು ಹೆಚ್ಚಾದರೆ ತಮ್ಮ ಹೃದಯಸ್ಥಿತಿಗೆ ಅಪಾಯಕರವಾಗಬಹುದು. ಅದಕ್ಕಾಗಿ ಭಜನೆ ಕೀರ್ತನೆ ಏನನ್ನೂ ಮಾಡುತ್ತಿಲ್ಲ.”

ಮಹಾಪುರುಷಜಿ: “ಏಕೆ, ಅದರಿಂದೇನಾಗುತ್ತದೆ? ನಾನು ಚೆನ್ನಾಗಿಯೆ ಇದ್ದೇನಲ್ಲಾ. ಭಕ್ತಿಗಾನ ಕೇಳಿದರೆ ನನಗಿನ್ನೂ ಉತ್ತಮವಾಗುತ್ತದೆ. ಈ ದೇಹಕ್ಕೆ ಅಸುಖವಾಗಿದೆ ಎಂದು ಹೇಳಿ ನೀವು ನನ್ನ ಆನಂದಮಾಯೀ ತಾಯಿಯ ಕಿವಿಗೆ ಭಜನೆ ಗೀತ ಕೇಳಿಸದಂತೆ ಮಾಡುವುದೆ? ಆಕೆಯನ್ನು ಸಂತೋಷಗೊಳಿಸದೆ ಇರುವುದೆ? ನನಗೆ ಏನೂ ಕಷ್ಟವಾಗುವುದಿಲ್ಲ. ಹೋಗಿ, ಭಜನೆ ಮಾಡಿ.”

* * *