ಒಂದು ದಿನ ಮಧ್ಯಾಹ್ನ ಮಹಾಪುರುಷಜಿ ತಮ್ಮ ಕೊಠಡಿಯಲ್ಲಿ ವಿಶ್ರಾಂತಿಗಾಗಿ ಮಲಗಿದ್ದರು. ಒಬ್ಬ ಸಂನ್ಯಾಸೀ ಶಿಷ್ಯರು ಪಕ್ಕದಲ್ಲಿ ನಿಂತು ನಿಶ್ಯಬ್ದವಾಗಿ ಬೀಸಣಿಗೆ ಬೀಸುತ್ತಿದ್ದರು. ಕೋಣೆಯಲ್ಲಿ ಮತ್ತಾರೂ ಇರಲಿಲ್ಲ. ಮಹಾಪುರುಷಜಿ ಹಠಾತ್ತನೆ ಹೇಳಿದರು: “ನೋಡು, ಸಂಸಾರಬದ್ಧರಾದ ಜೀವರು ಯೋಚಿಸುತ್ತಾರೆ, ಬ್ರಹ್ಮಜ್ಞಾನ ಎಂಬುದು ಒಂದು ಅಸಂಭವ ವ್ಯಾಪಾರ ಎಂದು. ಆದರೆ ಬ್ರಹ್ಮಜ್ಞಾನಿ ಯೋಚಿಸುತ್ತಾನೆ, ಮನುಷ್ಯರಾಗಿ ಹುಟ್ಟಿಯೂ ಸಂಸಾರ ಬದ್ಧರಾಗಿ ಆತ್ಮವಿಸ್ಮೃತಿರೂಪವಾದ ಅಜ್ಞಾನದಿಂದಿರುವುದೇ ಅಸಂಭವ ವ್ಯಾಪಾರ ಎಂದು.” ಆ ಶಾಂತ, ಗಂಭೀರ, ಕರುಣಾಸಿಕ್ತ ವಾಣಿ ಎಷ್ಟು ಮರ್ಮ ಸ್ಪರ್ಶಿಯಾಗಿತ್ತು ಎಂದರೆ ಶಿಷ್ಯನ ಸ್ಮೃತಿಪಟಲದಲ್ಲಿ ಅದು ಚಿರಕಾಲವೂ ಅಂಕಿತವಾಗಿ, ಹೃದಯದಲ್ಲಿ ದಿವ್ಯ ಸಂದೇಶವೊಂದು ನಿತ್ಯಜಾಗ್ರತವಾಗಿರುವಂತೆ ಮಾಡಿತು.

ಇನ್ನೊಂದು ದಿನ ಮಠದ ಸಂನ್ಯಾಸಿಯೊಬ್ಬರನ್ನು ಉದ್ದೇಶಿಸಿ ಮಹಾಪುರುಷಜಿ ಹೇಳಿದರು: “ಲ…ನೀನೀಗ ಯಾವ ಶಾಸ್ತ್ರ ಓದುತ್ತಿದ್ದೀಯೆ ಹೇಳು? ನಮ್ಮ ಜೀವನ ಓದಬಲ್ಲೆಯಾ? ನಮ್ಮ ಜೀವನವೇ ಉಪನಿಷತ್ತು. ಶಾಸ್ತ್ರ ರಹಸ್ಯವನ್ನೆಲ್ಲ ಅಲ್ಲಿಯೆ ಕಾಣುತ್ತೀಯೆ.” ಕೊಠಡಿಯಲ್ಲಿದ್ದ ಸಾಧುಗಳು ಆ ಮಾತುಗಳನ್ನು ವಾಚ್ಯಾರ್ಥಪೂರ್ವಕವಾಗಿಯೆ ಸ್ವೀಕರಿಸಿದರು. ವಸ್ತುತಃ ಇರುವುದೂ ಹಾಗೆಯೆ. ಮಹಾಪುರುಷರ ಜೀವನವೇದವನ್ನು ಓದಲು ನಾವು ಸಮರ್ಥರಾದರೆ ಶಾಸ್ತ್ರಮರ್ಮಗಳೆಲ್ಲ ತಾವಾಗಿಯೆ ಮನೋಗೋಚಾರವಾಗುತ್ತವೆ.

ಪೂರ್ವೋಕ್ತ ಸಂನ್ಯಾಸೀ ಶಿಷ್ಯನೇ ಒಂದು ದಿನ ಸ್ವಾಮಿ ವಿವೇಕಾನಂದ ಪ್ರಣೀತವಾದ ಮಠದ ನಿಯಮಾವಳಿಯನ್ನು ತೆಗೆದುಕೊಂಡು ಸ್ವಾಮಿ ಶಾರದಾನಂದರ ಬಳಿಗೆ ಹೋದರು. ಆ ಪುಸ್ತಿಕೆಯಲ್ಲಿರುವ ನಿಯಮಾವಳಿಯಲಿ ಎಷ್ಟುಪಾಲು ಸ್ವಾಮೀಜಿಯ ನಿಜಸ್ವಮತ ಅಥವಾ ವ್ಯಕ್ತಿಗತವಾದ ಸ್ವಂತ ಅಭಿಪ್ರಾಯ ಮತ್ತು ಆ ವಿಷಯದಲ್ಲಿ ಸ್ವಾಮಿ ಶಾರದಾನಂದರೇನಾದರೂ ಭಿನ್ನವಾದ ಸ್ವತಂತ್ರಾಭಿಪ್ರಾಯಗಳನ್ನು ವ್ಯಕ್ತಪಡಿಸುವರೆ ಎಂಬುದನ್ನು ಅರಿತುಕೊಳ್ಳುವುದೇ ಆ ಸಂನ್ಯಾಸಿ ಶಿಷ್ಯನ ಉದ್ದೇಶವಾಗಿತ್ತು. ನಿಯಮಗಳನ್ನು ಒಂದೊಂದನ್ನಾಗಿ ಓದಲಾಯಿತು. ಸ್ವಾಮಿ ಶಾರದಾನಂದರು ಒಂದೊಂದನ್ನೂ ವಿವರಿಸಿ ಅವುಗಳಲ್ಲಿ ಪ್ರತಿಯೊಂದು ನಿಯಮವೂ ಹೇಗೆ ಶ್ರೀರಾಮಕೃಷ್ಣರ ಅನುಭವ ಮತ್ತು ಉಪದೇಶಗಳ ಆಧಾರದ ಮೇಲೆಯೇ ನಿಂತಿದೆ ಎಂಬುದನ್ನು ತೋರಿಸಿ ಕೊಟ್ಟರು. ಕೊನೆಯಲ್ಲಿ ಆ ವಿಚಾರವಾಗಿ ತಮ್ಮ ಸ್ವಂತ ವ್ಯಕ್ತಿಗತವಾದ ಯಾವ ಸ್ವತಂತ್ರಾಭಿಪ್ರಾಯವೂ ಇಲ್ಲವೆಂದು ಹೇಳಿ, ಆ ವಿಷಯವನ್ನು ಮಹಾಪುರಷಜಿಯೊಡನೆ ಪ್ರಸ್ತಾಪಿಸುವಂತೆ ಶಿಷ್ಯನಿಗೆ ಆದೇಶವಿತ್ತರು. ಶಿಷ್ಯರು ಮಹಾಪುರುಷಜಿಯ ಬಳಿಗೆ ಹೋಗಿ ಆ ಮಾತನ್ನೆತ್ತುತ್ತಲೆ ಅವರು ಸ್ವಾಮಿ ಶಾರದಾನಂದರು ಹೇಳಿದುದನ್ನೇ ಮತ್ತೊಮ್ಮೆ ಹೇಳಿ ಇಂತೆಂದರು: “ನೋಡು, ಶ್ರೀರಾಮಕೃಷ್ಣರ ವೇದ, ಸ್ವಾಮಿ ವಿವೇಕಾನಂದರ ಭಾಷ್ಯ; ಅದನ್ನುಇದು ನಾವು ಹೇಳುವುದು ಏನೊಂದೂ ಇಲ್ಲ.”

ಈ ಸಂನ್ಯಾಸೀ ಶಿಷ್ಯ ತಾನು ಎಲ್ಲಿ ಕೆಲಸಮಾಡಲು ನಿಯುಕ್ತನಾಗಿದ್ದನೊ ಆ ಶ್ರೀರಾಮಕೃಷ್ಣ ಮಿಷನ್ನಿನ ಶಾಖಾಸಂಸ್ಥೆಯಿಂದ ಬೇರೆಕಡೆಗೆ ಹೋಗಲು ಅನೇಕ ಬಾರಿ ಆಶಿಸಿದ್ದನು. ಪ್ರತಿಯೊಂದು ಸಾರಿಯೂ ಆ ಶಿಷ್ಯ ತನ್ನ ಆಶೆಯನ್ನು ವ್ಯಕ್ತಪಡಿಸಿದಾಗಲೆಲ್ಲಾ ಮಹಾಪುರುಷಜಿ ನಾನಾ ರೀತಿಯಿಂದ ಧೈರ್ಯ ಹೇಳಿ ಉತ್ಸಾಹವಿತ್ತು ಅವನನ್ನು ಹಾಗೆ ಮಾಡದಂತೆ ಪ್ರೇರಿಸಿದ್ದರು. ಕೊನೆಯ ಸಾರಿ ಆ ಶಿಷ್ಯ ಅವರ ಅನುಮತಿ ಬೇಡಲು ಹೋದಾಗ ಅವರು ಸಕರುಣಧ್ವನಿಯಿಂದ ಶಿಷ್ಯರ ಹೃದಯತಂತಿ ಮಿಡಿಯುವಂತೆ ಇಂತೆಂದು ನುಡಿದರು: “ನೋಡು, ಶಾಖಾ ಕೇಂದ್ರದಿಂದ ಎಷ್ಟೋ ಜನರಿಗೆ ಕಲ್ಯಾಣವಾಗುತ್ತದೆ. ಅಲ್ಲದೆ ಅಲ್ಲಿಯೆ ಇರುವುದರಿಂದ ನಿನಗೆ ಒಂದು ವೇಳೆ ಸ್ವಲ್ಪ ನಷ್ಟವಾದರೂ ಅದೇನೂ ಗಣನೀಯವಾದುದಲ್ಲ; ಹೆಚ್ಚು ಎಂದರೆ ನಿನ್ ಅಭೀಷ್ಟಲಾಭ ತುಸು ತಡವಾಗಬಹುದು. ತಡವಾಗದೆ ಇರುವುದೂ ಹೆಚ್ಚು ಸಂಭವನೀಯ ತಡವಾಗುತ್ತದೆ ಎಂದೇ ಇಟ್ಟುಕೊ. ಹಾಗಾದರೂ ಇಷ್ಟೊಂದು ಜನರ ಕಲ್ಯಾಣಾರ್ಥವಾಗಿ ನೀನು ನಿನ್ನ ಪರಮ ಕಲ್ಯಾಣವನ್ನು ಒಂದಿನಿತು ಮುಂದಕ್ಕೆ ಹಾಕುವಷ್ಟು ತ್ಯಾಗಕ್ಕೆ ಮನಸ್ಸು ತರಲಾರೆಯಾ?”

* * *

ಒಮ್ಮೆ ಮಹಾಪುರುಷಜಿ ಕಾಶಿಯಲ್ಲಿದ್ದಾಗ ಮಾತಿನ ನಡುವೆ ಮಠದ ಸಾಧುಗಳಿಗೆ ಹೇಳಿದರು: “ತನ್ನ ಸಾಧನೆ ಭಜನೆಯ ವಿಚಾರವಾಗಿ ಯಾರೂ ಬಡಾಯಿ ಕೊಚ್ಚಿಕೊಳ್ಳಬಾರದು. ನಿನಗೆ ನಿರ್ವಿಕಲ್ಪ ಸಮಾಧಿಯೆ ಉಂಟಾಯಿತು ಅಂತಾಇಟ್ಟುಕೊ, ಅದರಿಂದೇನಂತೆ? ನೀನು ಏನಾಗಿದ್ದೆಯೊ ಅದೇ ಮತ್ತೊಮ್ಮೆ ಆದೆ, ಅಷ್ಟೆ. ಅದರಲ್ಲಿ ಜಂಭಕೊಚ್ಚಿಕೊಳ್ಳುವಂತಹದ್ದೇನೂ ಇಲ್ಲ.”  ಎಂತಹ ಅದ್ಭುತ ನಿರಭಿ ಮಾನತೆ, ಎಂತಹ ಆಧ್ಯಾತ್ಮಿಕ ಶಕ್ತಿಯ ಪರಿಚಯ -ಆ ಸರಳ ಮಾತಿನ ಮಧ್ಯೆ ಅಡಗಿವೆ!

ಒಮ್ಮೆ ಬೇಲೂರು ಮಠದಲ್ಲಿ ಮಹಾಪುರುಷಜಿ ಹೇಳಿದರು: ಆಗ ನಾವು ಸ್ವಾಮೀಜಿಯೊಡನೆ ಆಲ್ಮೋರದಲ್ಲಿರುತ್ತಿದ್ದೆವು, ಒಬ್ಬ ಭಕ್ತ ‘ನಿಮಗೆ ಮತ್ತೊಬ್ಬರ ಮನಸ್ಸಿನಲ್ಲಿರುವುದನ್ನು ಹೇಳುವುದಕ್ಕೆ ಬರುತ್ತದೆಯೆ?’ ಎಂದು ಪ್ರಶ್ನೆ ಹಾಕಿದನು. ಸ್ವಾಮೀಜಿ ನನ್ನನ್ನು ಒಂದು ಪಕ್ಕಕ್ಕೆ ಕರೆದುಕೊಂಡು ಹೋಗಿ,  ಅದನ್ನು ಹೇಗೆ ಮಾಡಬೇಕು ಎಂಬುದನ್ನು ಕಲಿಸಿಕೊಟ್ಟರು: ‘ಯಾರ ಮನಸ್ಸನ್ನಾದರೂ ಅರಿಯಬೇಕೆಂದು ನಿನಗೆ ಮನಸ್ಸಾದರೆ ಮೊದಲು ನಿನ್ನ ಮನಸ್ಸನ್ನು ಸಂಪೂರ್ಣವಾಗಿ ಖಾಲಿಮಾಡಿಕೊ. ಆಗ ಯಾವ ಆಲೋಚನೆ ನಿನ್ನ ಮನಸ್ಸಿನಲ್ಲಿ ಏಳುತ್ತದೆಯೋ ಆ ಆಲೋಚನೆಯ ಪೃಚ್ಛಕನ ಆಲೋಚನೆ ಎಂದು ತಿಳಿ.’ ಸ್ವಾಮೀಜಿಯ ವಿವರಣೆಯನ್ನು ಕೇಳಿ ತಿಳಿದುಕೊಂಡಮೇಲೆ ಪ್ರಶ್ನೆಹಾಕಿದ ಆ ಭಕ್ತನಿಗೆ ನಾನು ‘ಆಗಬಹುದು, ನಿನ್ನ ಮನಸ್ಸಿನಲ್ಲಿರುವುದನ್ನು ಹೇಳುತ್ತೇನೆ’ ಎಂದೆ. ಹಾಗೆ ಹೇಳಿ ಒಮ್ಮೆಗೆ ಧ್ಯಾನದಿಂದ ಮನಸ್ಸನ್ನೆಲ್ಲ ಬರಿದು ಮಾಡಿಕೊಂಡುಬಿಟ್ಟೆ. ಆಮೇಲೆ ಯಾವುದೇ ಒಂದು ಚಿಂತನೆ ನನ್ನ ಮನಸ್ಸಿನಲ್ಲಿ ಏಳುತ್ತಿರುವುದು ಗೊತ್ತಾಯಿತು. ತಕ್ಷಣ ಭಕ್ತನಿಗೆ ಹೇಳಿದೆ ‘ಇದನ್ನೆ ನೀನು ಆಲೋಚಿಸುತ್ತಿದ್ದೀಯೆ’ ಎಂದು. ಅವನೂ ಒಪ್ಪಿಕೊಂಡ.

* * *

ಒಮ್ಮೆ ಮಹಾಪುರುಷಜಿಯ ಅನೇಕ ಸಾಧು ಬ್ರಹ್ಮಚಾರಿ ಭಕ್ತರೊಡನೆ ದೇವಗಡದ ಶ್ರೀರಾಮಕೃಷ್ಣ ಮಿಶನ್ನಿನ ವಿದ್ಯಾಪೀಠದ ಪ್ರಾರಂಭೋತ್ಸವವನ್ನು ನೆರವೇರಿಸುವುದಕ್ಕೆ ಹೋಗಿ ಅಲ್ಲಿಯೆ ಒಂದು ತಿಂಗಳು ಇದ್ದರು. ಆಗ ಆ ವಿದ್ಯಾಪೀಠದ ಸಾಧುಗಳಿಗೂ ಬ್ರಹ್ಮಚಾರಿಗಳಿಗೂ ಅವರ ದಿವ್ಯ ಸಂಗದ ಮತ್ತು ಉಪದೇಶದ ಲಾಭ ದೊರೆಯುವ ಸುಯೋಗ ಒದಗಿತು. ಆ ದಿನಗಳೆಲ್ಲ ತುಂಬ ಆನಂದದಿಂದ ಸಾಗಿದುವು. ಒಂದು ದಿನ ಅವರಿಗೆ ಫಕ್ಕನೆ ತಂಡಿಯಾಗಿ, ತುಂಬ ಶೀತಕ್ಕೆ ತಿರುಗಿ ದಮ್ಮು ಹೆಚ್ಚಿ. ತೊಂದರೆಗಿಟ್ಟುಕೊಂಡಿತು. ಬೆಳಿಗ್ಗೆ ಅವರಿಗೆ ಪ್ರಣಾಮ ಸಲ್ಲಿಸಲು ಹೋದ ಸಾಧುವೊಬ್ಬರೊಡನೆ ಅವರಿಗೆ ಮಾತನಾಡುವುದೂ ಕಷ್ಟವಾಗಿತ್ತು. ಆದರೂ ಹಸನ್ಮುಖದಿಂದಲೆ ಕುಶಲಪ್ರಶ್ನೆ ಕೇಳಿದರು: “ಹೇಗಿದ್ದೀಯಾ?”

ಸಾಧು: “ನಾನೇನೋ ಚೆನ್ನಾಗಿಯೆ ಇದ್ದೇನೆ. ತಗೆ ಕಳೆದ ರಾತ್ರಿ ಹೇಗಿತ್ತು?”

ಮಹಾಪುರುಷಜಿ: “ಕಳೆದ ರಾತ್ರಿ ತುಂಬಾ ಕಷ್ಟಪಟ್ಟೆ. ಉಸಿರೇ ಕಟ್ಟಿ ಹೋದಂತಾಗಿತ್ತು. ಮೂಗೆಲ್ಲ ಕಟ್ಟಿಕೊಂಡಿತು, ದಮ್ಮೂ ಭಯಂಕರವಾಯಿತು. ಕೂತುಕೊಳ್ಳುವುದಕ್ಕೂ ಆಗುತ್ತಿರಲಿಲ್ಲ. ಮಲಗುವುದಕ್ಕೂ ಆಗುತ್ತಿರಲಿಲ್ಲ, ನೀನು ನೋಡುತ್ತಿದ್ದೀಯಲ್ಲ ಹೇಗೆ ತಲೆದಿಂಬುಗಳನ್ನೆಲ್ಲ ಸುತ್ತಮುತ್ತ ಪೇರಿಸಿಕೊಂಡು ಒಂದಿಷ್ಟು ತಲೆ ಒರಗಿಸಿಕೊಂಡೆ. ಅದರಿಂದಲೂ ಏನೂ ಸುಖವಾಗಲಿಲ್ಲ. ಆಮೇಲೆ ಇಂದ್ರಿಯಗಳೆಲ್ಲ ಕೆಲಸ ನಿಲ್ಲಿಸಿ ಪ್ರಾಣವೂ ಹೋಗುತ್ತದೆಯೊ ಎನ್ನುವಂತೆ ತೋರಿತು. ಏನು ಮಾಡುವುದಕ್ಕೂ ತೋರದೆ, ಧ್ಯಾನಕ್ಕೆ ತೊಡಗಿದೆ. ಎಷ್ಟಾದರೂ ಹಳಬನ ಧ್ಯಾನವಲ್ಲವೆ? (ಅಂದರೆ, ಆ ಅಭ್ಯಾಸದಲ್ಲಿ ಬಹಳ ಕಾಲ ಕಳೆದವನ ಧ್ಯಾನವಲ್ಲವೆ ಎಂದರ್ಥ.) ನನ್ನ ಮನಸ್ಸು ಬಹುಬೇಗ ಅಂತರ್ಮಗ್ನವಾಯಿತು. ಆಗ ನನಗೆ ಯಾವ ಯಾತನೆಯ ಅರಿವೂ ಉಂಟಾಗಲಿಲ್ಲ. ಮನಸ್ಸು ಸ್ಥಿರವೂ ಪ್ರಶಾಂತವೂ ಆಯಿತು. ಹೊರಗಿನ ಝಡಝಾಪಡ ಯಾವುದೂ ಅಲ್ಲಿಗೆ ಪ್ರವೇಶಿಸುವುದಕ್ಕೆ ಆಗುತ್ತಿರಲಿಲ್ಲ. ಆ ಸ್ಥಿತಿಯಲ್ಲಿ ಸ್ವಲ್ಪ ಕಾಲ ಇದ್ದು ತರುವಾಯ ಮನಸ್ಸು ಮತ್ತೆ ಬಹಿರ್ಮುಖವಾಯಿತು. ಆಗ ನನಗೆ ತೋರಿತು, ಯಾತನೆ ಮೊದಲಿಗಿಂತಲೂ ಎಷ್ಟೋ ಪಾಲು ಕಡಿಮೆಯಾಗಿತ್ತು.”

ಸಾಧು: “ಅದೇನು ಸ್ಥಿತಿ?”

ಮಹಾಪುರುಷಜಿ: “ಅದೇ ಆತ್ಮಾ.”

* * *

ಮಹಾಪುರುಷಜಿ ಕೊನೆಯ ಸಾರಿ ಕಾಶಿಗೆ ಹೋಗಿದ್ದಾಗ ಒಂದು ದಿನ ಮಾತುಕತೆಯ ಸಂದರ್ಭದಲಿ ಹೀಗೆಂದರು: “ಈ ಕಾಶೀಕ್ಷೇತ್ರ ಸಮಸ್ತವೂ ಶಿವನ ಶರೀರ. ನಾವು ಶಿವನ ಮಧ್ಯೆ ವಾಸಮಾಡುತ್ತಿದ್ದೇವೆ.”

ಇನ್ನೊಂದು ದಿನ ಹೇಳಿದರು: “ಇದು ಮಹಾಸ್ಮಶಾನ. ಇಲ್ಲಿ ಗೃಹಸ್ಥರು ಸಂಸಾರ ಮಾಡಿಕೊಂಡಿರುವುದು ಒಳ್ಳೆಯದಲ್ಲ. ಯಾರು ಭಗವಂತನನ್ನು ಕರೆಯುತ್ತಾರೊ, ಯಾರು ದೇವರ ನಾಮೋಚ್ಚಾರಣೆ ಮಾಡುತ್ತಾರೊ ಅವರು ಮಾತ್ರವೆ ಇಲ್ಲಿ ವಾಸಿಸುವುದು ಉಚಿತ.”

ಕಾಶಿಯಿಂದ ಮಠಕ್ಕೆ ಹಿಂತಿರುಗಿ ಬಂದ ಮೇಲೆ ಮಹಾಪುರುಷಜಿಗೆ ವಾಯುಪ್ರಕೋಪವುಂಟಾಯಿತು. ಔಷಧಾದಿ ವ್ಯವಹಾರಗಳಿಂದ ಏನೂ ಫಲ ದೊರೆಯದೆ ಇದ್ದುದ್ದನ್ನು ನೋಡಿ ಪೂರ್ವೋಕ್ತ ಸಂನ್ಯಾಸಿ ಏಕಾಂತದಲ್ಲಿದ್ದಾಗ ಅವರನ್ನು ಕೇಳಿದರು: “ಡಾಕ್ಟರು ಹೇಳುತ್ತಾರೆ, ನಿಮಗೆ ಬಂದಿರುವುದು ವಾಯುರೋಗ ಎಂದು. ಆದರೆ ನನಗೇನೋ ಅದು ಹಾಗೆ ತೋರುವುದಿಲ್ಲ, ಇದೇನೊ ಒಂದು ಯೋಗವ್ಯಾಪಾರವೆ ಇರಬೇಕು. ಕಾಶಿಯಲ್ಲಿ ತಮಗೆ ಏನಾದರೂ ಒಂದು ತರಹದ ದರ್ಶನ ಅನುಭವವಾಯಿತೇನು? ಏಕೆಂದರೆ ತಾವು ಕಾಶಿಯಿಂದ ಹಿಂದಿರುಗಿದ ಒಡನೆಯೆ ಇದು ಕಾಣಿಸಿಕೊಂಡಿತು, ಅದಕ್ಕಾಗಿ ಕೇಳಿದ್ದು.”

ಮಹಾಪುರುಷಜಿ: “ಹೌದು, ಕಾಶಿಯಲ್ಲಿ ಒಂದು ಶ್ವೇತಕಾಯದ ಯೋಗ ಮೂರ್ತಿಯನ್ನು ಕಂಡೆ. ಆ ಅನುಭವವಾದ ತರುವಾಯವೆ ಈ ವ್ಯಾಧಿ ತಲೆದೋರಿತು.”

|| ಗುರು ಬ್ರಹ್ಮ ನಮಾಮ್ಯಹಂ ||

* * *

ಅಂತರತಮ ನೀ ಗುರು ಹೇ ಆತ್ಮ ತಮೋಹಾರಿ:
ಜಟಿಲಕುಟಿಲತಮ ಅಂತರಂಗ ಬಹುಭಾವವಿಪಿನ ಸಂಚಾರಿ | – ಅಗ್ನಿಹಂಸ