ಕ್ರಿ.ಶ. ೧೯೨೨ನೆಯ ಆದಿಭಾಗದಲ್ಲಿ ಮಹಾಪುರುಷ ಮಹಾರಾಜ್ ಢಾಕಾಕ್ಕೆ ಹೋಗಿದ್ದರು. ಮಠದಲ್ಲಿ ಇರುತ್ತಿರುವಾಗ ಒಮ್ಮೆ ಭಕ್ತರ ಆಗ್ರಹಾತಿಶಯಕ್ಕೆ ಒಳಗಾಗಿ ಫರಾಶಗಂಜದಲ್ಲಿರುವ ‘ಗೌರಾವಾಸ ಸಮ್ಮೇಳನ ‘ಕ್ಕೆ ಹೋದರು. ಅವರು ಬರುವ ಸುದ್ದಿ ಹಬ್ಬಿ, ಅನೇಕ ಭಕ್ತ ನರನಾರಿಯರೂ ಸಾಧುಗಳೂ ಅಲ್ಲಿ ಸಮಾವೇಶಗೊಂಡಿದ್ದರು. ಆ ಸಮ್ಮೇಳನದ ಪದ್ಧತಿಯಂತೆ ಭಕ್ತನೊಬ್ಬನು ಪ್ರಾರಂಭದಲ್ಲಿ “ರಾಮಕೃಷ್ಣಚರಣ ಸರೋಜೇ ಮಝರೇ ಮನ ಮಧುಪ ಮೋರ್” “ಓ ನನ್ನ ಮನವೆಂಬ ತುಂಬಿಯೆ, ನಲಿದಾಡು ಶ್ರೀರಾಮಕೃಷ್ಣ ಚರಣ ಸರೋಜದಲಿ!” ಎಂಬ ಪ್ರಾರ್ಥನಾಗೀತವನ್ನು ಹಾಡಿದನು. ಅದಾದ ಮೇಲೆ ಕಾರ್ಯಕ್ರಮದಂತೆ ‘ಶ್ರೀರಾಮಕೃಷ್ಣ ವಚನವೇದ’ವನ್ನು ಓದಬೇಕಾಗಿತ್ತು. ಆದರೆ ಭಕ್ತರು ಮಹಾಪುರುಷಜಿಯ ಉಪದೇಶ ಕೇಳಬೇಕೆಂಬ ಆಗ್ರಹಪ್ರಾಕಶ ಮಾಡತೊಡಗಿದರು. ಆದರೆ ಮಹಾಪುರುಷಜಿ ‘ವಚನವೇದ ‘ವನ್ನೆ ಓದಬೇಕೆಂದು ಒತ್ತಿ ಹೇಳಲಾಗಿ ಅದರ ವಾಚನ ಪ್ರಾರಂಭವಾಯಿತು. ಅದರಲ್ಲಿ ಒಂದು ಕಡೆ ಠಾಕೂರರು ‘ಸಂನ್ಯಾಸಿಯಾದವನು ಕಾಮಿನೀ ಕಾಂಚನವನ್ನು ತ್ಯಾಗ ಮಾಡಬೇಕೆಂದೂ, ಸಂನ್ಯಾಸಿಯಾದವನು ಸ್ತ್ರೀಯರ ಚಿತ್ರವನ್ನು ಕೂಡ ನೋಡಬಾರದೆಂದೂ’ ಹೇಳಿದ್ದರು. ಆ ವಿಚಾರವಾಗಿ ಒಬ್ಬ ಬ್ರಹ್ಮಚಾರಿ ಪ್ರಶ್ನೆ ಹಾಕಿದನು: “ಮಹಾರಾಜ್, ಠಾಕೂರ್ ಹೇಳುತ್ತಾರೆ, ಸಂನ್ಯಾಸಿಯು ಸ್ತ್ರೀಯ ಪಟವನ್ನೂ ನೋಡಬಾರದೆಂದು. ಆದರೆ ನಾವು ಎಷ್ಟೋ ಬಾರಿ ಅವರೊಡನೆ ಮಾತನಾಡಬೇಕಾಗಿಯೂ ಬರುತ್ತದಲ್ಲಾ. ಇಂತಹ ಸನ್ನಿವೇಶಗಳಲ್ಲಿ ನಾವು ಹೇಗೆ ವರ್ತಿಸಬೇಕು?” ಮಹಾಪುರುಷಜಿ ಸ್ವಲ್ಪ ಹೊತ್ತು ಸುಮ್ಮನಿದ್ದರು: “ಏನಯ್ಯಾ, ನೀನು ನಿಮ್ಮ ಮನೆಯಲ್ಲಿ ನಿನ್ನ ತಾಯಿ ತಂಗಿಯರೊಡನೆ ಇರುತ್ತಿರಲಿಲ್ಲವೆ? ನಿನ್ನ ಕರ್ತವ್ಯ ನಿರ್ವಹಣೆಯ ಅಂಗವಾಗಿ ಹೆಂಗಸರೊಡನೆ ಮಾತುಕತೆ ನಡೆಸಬೇಕಾಗಿ ಬಂದಾಗ ಅದೇ ರೀತಿಯ ಸರಳ ಹೃದಯದಿಂದ, ಅದೇ ರೀತಿಯ ಬಾಲ ಸಹಜ ಭಾವದಿಂದ, ನಿನ್ನ ಮನೆಯ ಅಮ್ಮ ಅಕ್ಕ ತಂಗಿಯರೊಡನೆ ವ್ಯವಹರಿಸುತ್ತಿದ್ದಂತೆ ವರ್ತಿಸು. ಅವರೆಲ್ಲ ನಿನ್ನ ತಾಯಿತಂಗಿಯರೆಂದು ಭಾವಿಸು. ಆದರೆ ನಾನೇನು ಹೇಳಬೇಕಾಗಿಲ್ಲ. ಅವಶ್ಯಬೀಳದೆ, ಕರ್ತವ್ಯ ನಿರ್ವಹಣೆಯ ಅಂಗವಾದ ಹೊರತು ಸ್ತ್ರೀಯರಿಂದ ದೂರವಾಗಿರುವುದು ಒಳ್ಳೆಯದು; ಅದರಲ್ಲಿಯೂ ಸ್ತ್ರೀ ಒಂದು ವೇಳೆ ಭಕ್ತೆಯಾಗಿದ್ದರೂ ಆಕೆಯೊಡನೆ ಏಕಾಂತವಾಗಿ ವ್ಯವಹರಿಸಲೇಬಾರದು. ಅವಶ್ಯಬಿದ್ದಾಗ ನಾಲ್ಕು ಜನರ ಎದುರಿನಲ್ಲಿ ಮಾತಾಡಬಹುದು. ನೀನು ಸಾಧುವಾಗಲು ಬಂದಿದ್ದೀಯೆ. ನಿನ್ನ ವ್ರತಕ್ಕೆ ಭಂಗಬರದಂತೆ ನೋಡಿಕೊಳ್ಳಬೇಕು; ನಿನ್ನ ದೃಷ್ಟಿರೇಖೆ ನಿನ್ನ ಆದರ್ಶದ ದಿಕ್ಕಿಗೇ ಸರ್ವದಾ ಚಲಿಸುತ್ತಿರಲಿ. ನಾರೀ ಜಾತಿಯೆ ಸಾಕ್ಷಾತ್ ಜಗಜ್ಜನನಿಯ ಅಂಶ ಎಂಬ ಜ್ಞಾನ ಉಂಟಾಗಬೇಕು. ಅದೇ ಸಾಧನೆ ಆಗುತ್ತದೆ.”

ಬ್ರಹ್ಮಚಾರಿ: “ಆದರೂ ಒಂದು ವೇಳೆ ಮನಸ್ಸಿನಲ್ಲಿ ಕುಭಾವ ಸಂಚಾರವಾದರೆ ಏನು ಮಾಡಬೇಕು, ಮಹಾರಾಜ್?”

ಅದಕ್ಕೆ ಉತ್ತರವಾಗಿ ಮಹಾಪುರುಷಜಿ ಸ್ವಲ್ಪ ದೃಢಸ್ವರದಿಂದಲೇ ಹೇಳಿದರು: “ಎಲ್ಲಿ ಅಂದರಲ್ಲಿ ಹೆಂಗಸರನ್ನು ಕಂಡೊಡನೆಯೆ ಯಾವನ ಮನಸ್ಸಿನಲ್ಲಿ ಕುಭಾವ ಉದಯವಾಗುತ್ತದೆಯೊ ಆತ ಸಾಧುವಾಗಲು ಉಪಯುಕ್ತನಲ್ಲ; ಮಾತ್ರವಲ್ಲ, ಸಾಮಾನ್ಯ ಸಭ್ಯ ಸಮಾಜದಲ್ಲಿಯೂ ಆತನು ಇರಲು ಯೋಗ್ಯನಲ್ಲ. ಅಂತವನಿಗೆ ಉಚಿತವಾದದ್ದು ಎಂದರೆ, ಯಾವುದಾದರೂ ಒಂದು ನಿಭೃತ ಸ್ಥಾನಕ್ಕೆ, ಎಲ್ಲಿ ಹೆಂಗಸರ ಮುಖವೂ ಕಾಣಸಿಗುವುದಿಲ್ಲವೋ ಅಂತಹ ಸ್ಥಳಕ್ಕೆ, ಸ್ತ್ರೀ ಲೋಕದ ಯಾವ ಸಂಪರ್ಕವೂ ಇಲ್ಲದಲ್ಲಿಗೆ ಹೋಗಿ, ಅಲ್ಲಿ ದೀರ್ಘಕಾಲ ಕಠೋರ ಭಾವದಿಂದ ಜೀವಯಾಪನ ಮಾಡಿ, ಆಮೇಲೆ ಲೋಕ ಸಮಾಜಕ್ಕೆ ಹಿಂತಿರುಗುವುದು ಮೇಲು. ಸಮಾಜಕ್ಕೂ ಒಂದಿಷ್ಟು ಕಟ್ಟುನಿಟ್ಟೂ ಇದೆ.”

ಮತ್ತೆ ‘ವಚನದೇವ ‘ದ ವಾಚನ ಒಂದು ಸ್ವಲ್ಪ ಮುಂದುವರಿದ ಮೇಲೆ ಕುಳಿತಿದ್ದವರಲ್ಲಿ ಒಬ್ಬರು “ಭಗವಂತನ ಸಾಕ್ಷಾತ್ಕಾರಕ್ಕೆ ಉತ್ತಮ ಮಾರ್ಗಯಾವುದು” ಎಂದು ಕೇಳಿದರು.

ಮಹಾಪುರುಷಜಿ: “ಶಾಸ್ತ್ರಗಳಲ್ಲಾದರೋ ಈಶ್ವರ ಸಾಕ್ಷಾತ್ಕಾರದ ಸಂಬಂಧವಾಗಿ ನಾನಾ ರೀತಿಯ ಉಪದೇಶಗಳಿವೆ. ಆದರೆ ಒಟ್ಟಿನಲ್ಲಿ ಸಾರಾಂಶ: ಬೇಕಾದ್ದು ಶರಣಾಗತಿ-ಶರಣಾಗತಿ. ಶ್ರೀ ಭಗವಂತನ ಚರಣಗಳಲ್ಲಿ ಆತ್ಮನಿವೇ ದನಮಾಡಿ, ಸಂಪೂರ್ಣ ನಿರ್ಭರತೆಯಿಂದ ಇದ್ದು ಬಿಟ್ಟರೆ ನಿರಾತಂಕವಾಗಿರಬಹುದು. ಗೀತೆಯಲ್ಲಿ ಭಗವಂತನು ಅರ್ಜುನನಿಗೆ ಯೋಗ, ಕರ್ಮ, ಭಕ್ತಿ, ಜ್ಞಾನ ಇತ್ಯಾದಿ ಎಲ್ಲವನ್ನೂ ಉಪದೇಶಮಾಡಿ, ಕೊನೆಗೆ ಹೇಳುತ್ತಾನೆ:

ಸರ್ವಧರ‍್ಮಾನ್ ಪರಿತ್ಯಜ್ಯ ಮಾಮೇಕಂ ಶರಣಂ ವ್ರಜ |
ಅಹಂ ತ್ವಾ ಸರ್ವಪಾಪೇಭ್ಯೋ ಮೋಕ್ಷಯಿಷ್ಯಾಮೀ ಮಾ ಶುಚಃ ||

ಇದೇ ಸಮಗ್ರ ಗೀತೆಯ ಸಾರ. ಭಗವಂತ ಪ್ರತಿಜ್ಞೆ ಮಾಡಿ ಹೇಳಿದ್ದಾನೆ. “ಧರ್ಮ ಅಧರ್ಮ ಎಲ್ಲವನ್ನು ಪರಿತ್ಯಾಗಮಾಡಿ ಏಕಮಾತ್ರ ನನ್ನನ್ನೇ ಶರಣಹೋಗು. ನಾನು ನಿನ್ನನ್ನು ಎಲ್ಲ ಪಾಪಗಳಿಂದಲೂ ಮುಕ್ತನನ್ನಾಗಿ ಮಾಡುತ್ತೇನೆ; ಚಿಂತಿಸಬೇಡ.” ಆದರೆ ಭಗವಂತನಲ್ಲಿ ಸರ್ವತೋಭಾವದಿಂದಲೂ ಆತ್ಮನಿವೇದನ ಮತ್ತು ಶರಣಾಗತಿಯನ್ನು ಸಾಧಿಸುವುದೇನು ಒಂದು ದಿನದಲ್ಲಿ ಆಗುವ ಕೆಲಸವಲ್ಲ. ತುಂಬ ಶ್ರಮಸಾಧ್ಯವಾದದ್ದೆ. ಪೂಜೆ, ಪಾಠ, ಜಪ, ಧ್ಯಾನ, ಕಠೋರ ಸಾಧನೆ-ಎಲ್ಲವೂ ಇರುವುದು ಶರಣಾಗತಿಯ್ನು ಸಾಧಿಸಲೋಸುಗವೆ. ಎಲ್ಲಕ್ಕಿಂತಲೂ ಮುಖ್ಯವಾಗಿ ಬೇಕಾದ್ದು ಭಗವತ್ ಕೃಪೆ. ಅನನ್ಯ ಮನದಿಂದ ಆತನ ಧ್ಯಾನ, ಚಿಂತನೆ ಮತ್ತು ಪ್ರಾರ್ಥನೆ ಮಾಡುತ್ತಾ ಮಾಡುತ್ತಾ ಆತನು ಕೃಪೆದೋರಿ ಈ ಅತ್ಯಂತ ದುರ್ಲಭವಾದ ಶರಣಾಗತಿಯನ್ನು ದಯಪಾಲಿಸುತ್ತಾನೆ.”

* * *

ಇನ್ನೊಂದು ಸಂದರ್ಭದಲ್ಲಿ ಢಾಕಾ ಮಠದ ಒಬ್ಬರು ಕೆಲಸಗಾರರು ತುಂಬ ಭಾರಾಕ್ರಾಂತ ಪ್ರಾಣರಾಗಿ ಮಹಾಪುರುಷಜಿ ಬಿನ್ನವಿಸಿದರು: “ರಾಜಾ ಮಹಾರಾಜ್ (ಸ್ವಾಮಿ ಬ್ರಹ್ಮಾನಂದರು) ನನಗೆ ಹೇಳುತ್ತಿದ್ದರು: ‘ನೀನು ಏನು ಮಾಡು ಬಿಡು, ಬೆಳಿಗ್ಗೆ ಸಾಯಂಕಾಲ ಜಪ ಮಾಡುವುದನ್ನು ಮಾತ್ರ ಮರೆಯಬೇಡ’ ಎಂದು. ಆದರೆ ನನ್ನ ಕೆಲಸ-ಭಜನೆ ಮತ್ತು ಕ್ಲಾಸ್ ಇತ್ಯಾದಿ-ಎಂಥಾದ್ದೆಂದರೆ ವಾರಕ್ಕೆ ಐದು ದಿನಗಳಾದರೂ ಸಾಯಂಕಾಲ ನಾನು ಹೊರಗೆ ಹೋಗಬೇಕಾಗುತ್ತದೆ. ಸಾಯಂ ಸಂಧ್ಯಾ ಜಪಕ್ಕೆ ನನಗೆ ಸಮಯವೆ ಸಿಗುವುದಿಲ್ಲ. ಅದಕ್ಕಾಗಿ ನನ್ನ ಮನಸ್ಸಿಗೆ ತುಂಬಾ ಅಶಾಂತಿಯಾಗುತ್ತದೆ.”

ಅದಕ್ಕೆ ಉತ್ತರವಾಗಿ ಮಹಾಪುರುಷಜಿ ಹೇಳಿದರು: “ನೋಡು ಈ ಭಜನೆ ಇತ್ಯಾದಿ ಎಲ್ಲವನ್ನೂ ಜಪಧ್ಯಾನಗಳಂತೆ ಭಾವಿಸಿ ಸಾಧನಾ ಜ್ಞಾನದಿಂದಲೆ ಮಾಡಬೇಕು. ಶ್ರೀಭಗವಂತನ ಭಜನೆ, ಆತನ ವಿಷಯವಾದ ಪಾಠ ಮತ್ತು ಆಲೋಚನೆ-ಇವೆಲ್ಲವೂ ಸಾಧನೆ ಭಜನೆಯ ಒಂದು ಅಂಗಮಾತ್ರ. ಈ ಭಾವ ಮನಸ್ಸಿನಲ್ಲಿ ಸರ‍್ವಕ್ಷಣವೂ ಜಾಗರೂಕವಾಗಿದ್ದರೆ ನೀನು ಆತನ ಕೆಲಸವನ್ನೆ ಮಾಡುತ್ತಿರುತ್ತೀಯೆ. ಆತನ ಸೇವೆ ಎಂಬ ಬುದ್ಧಿಯಿಂದ ಅದನ್ನೆಲ್ಲ ಮಾಡುತ್ತಾ ಹೋದರೆ ನಿನಗೆ ಪರಮಕಲ್ಯಾಣವಾಗುತ್ತದೆ. ಭಜನೆ ಕ್ಲಾಸು ಇತ್ಯಾದಿ ಕೆಲಸಗಳಿಂದ ನೀನು ಹಿಂತಿರುಗಿದ ಮೇಲೆಯೂ, ಸಮಯ ನೋಡಿ, ನಿಯಮಿತ ಜಪಧ್ಯಾನಕ್ಕೆ ಕುಳಿತುಕೊ. ಮಲಗುವುದಕ್ಕೆ ಮುನ್ನವಾದರೂ ಚಿಂತೆಯಿಲ್ಲ ಮಾಡಲೇಬೇಕು. ಮಹಾರಾಜ್ ಅವರ ಆದೇಶವನ್ನು ಚಾಚೂ ತಪ್ಪದೆ ನೀನು ಪಾಲನೆ ಮಾಡತಕ್ಕದ್ದಲ್ಲವೆ?”

* * *

ಭಕ್ತರೊಬ್ಬರು ಮಹಾಪುರುಷಜಿಗೆ ಪ್ರಶ್ನೆ ಹಾಕಿದರು: “ಠಾಕೂರರು ಹೇಳುತ್ತಿದ್ದರು,  ಐಂದರಿಯವಾಸಲೆ ಲೇಶಮಾತ್ರವಿದ್ದರೂ ಭಗವಲ್ಲಾಭವಾಗುವುದಿಲ್ಲ, ದಾರದ ತುದಿಯಿಂದ ಒಂದು ಚೂರು ಜುಂಗು ಎದ್ದಿದ್ದರೂ ಅದು ಸೂಜಿಯ ಕಣ್ಣಿನೊಳಗೆ ಹೋಗಲು ಹೇಗೆ ಸಾಧ್ಯವಾಗುವುದಿಲ್ಲವೋ ಹಾಗೆ ಎಂದು. ಆದರೆ ನಮ್ಮ ಮನಸ್ಸಿನಲ್ಲಿಯೋ ಅಸಂಖ್ಯ ಕಾಮನೆ ವಾಸನೆ ತುಂಬಿದೆ; ನಮಗೇನು ಉಪಾಯ?” ಮಹಾಪುರುಷಜಿ ಸ್ವಲ್ಪ ಹೊತ್ತು ಸುಮ್ಮನಿದ್ದು ಹೇಳಿದರು: “ಉಪಾಯ ಇದೆ. ಚಿತ್ತರೂಪದ ಸೂತ್ರವನ್ನು ಭಕ್ತಿವಿಶ್ವಾಸರೂಪದ ಎಣ್ಣೆ ನೀರಿನಲ್ಲಿ ಅದ್ದಿ ನೀವಿದರೆ, ಕಾಮನಾ ರೂಪದ ಜಂಗುಗಳೆಲ್ಲ ಮುದುರಿ ಅಂಟಿಕೊಳ್ಳುತ್ತವೆ. ಆಗ ಚಿತ್ತ ಅನಾಯಾಸವಾಗಿ ಭಗವಂತನ ಶ್ರೀಪಾದಪದ್ಮಗಳಲ್ಲಿ ಮಗ್ನವಾಗುತ್ತದೆ. ತುಂಬ ವ್ಯಾಕುಲತೆಯಿಂದ ಅವನನ್ನು ಕರೆ; ಅಳುತ್ತಾ, ಅಳುತ್ತಾ ನಿನ್ನ ಹೃದಯದ ಅಭೀಪ್ಸೆ ಈಡೇರದೆ ಇರುವುದರಿಂದ ನಿನ್ನ ಪ್ರಾಣಕ್ಕೆ ಒದಗಿರುವ ಅರ್ತಿಯನ್ನು ಹೇಳಿಕೊ. ಆತನು ತುಂಬ ಆಶ್ರಿತವತ್ಸಲ-ಶರಣಾಗತರನ್ನು ಎಂದಿಗೂ ಕೈಬಿಡುವುದಿಲ್ಲ.”

* * *