ಸ್ವಾಮಿ ಬ್ರಹ್ಮಾನಂದ ಮಹಾರಾಜರ ದೇಹತ್ಯಾಗದ ಅನಂತರ ನಾಲ್ಕು ಐದು ತಿಂಗಳಾದ ಮೇಲೆ ಒಂದು ಸಂಜೆ ಒಬ್ಬ ಉಚ್ಚಪದಸ್ಥ ಸರಕಾರೀ ಅಧಿಕಾರಿ ಮಹಾಪುರುಷ ಮಹಾರಾಜರ ದರ್ಶನಾರ್ಥಿಯಾಗಿ ಮಠಕ್ಕೆ ಬಂದನು. ಆತನು ಅತ್ಯಂತ ಭಕ್ತಿಭಾವದಿಂದ ಮಹಾಪುರುಷಜಿಗೆ ಪಾದವಂದನೆ ಮಾಡಿ, ನೆಲದ ಮೇಲೆ ಕುಳಿತುಕೊಂಡು, ತನ್ನ ಪರಿಚಯ ಮಾಡಿಕೊಳ್ಳುತ್ತಾ ಹೇಳಿದನು: “ನಾನು ರಾಜಾಮಹಾರಾಜರನ್ನು ಮೊದಲ ಸಲ ಸಂಧಿಸಿದ್ದು ಮೂರು ವರುಷಗಳ ಹಿಂದೆ. ಅಂದಿನಿಂದ ಸಮಯಸಿಕ್ಕಿದಾಗಲೆಲ್ಲ ನಾನು ಬಂದು ಅವರ ದರ್ಶನ ತೆಗೆದುಕೊಳ್ಳುತ್ತಿದ್ದೆ. ಅವರು ನನ್ನ ಮೇಲೆ ದಯೆತೋರಿ ಅನೇಕ ಉಪದೇಶಗಳನ್ನು ನೀಡುತ್ತಿದ್ದರು. ನಾನು ಮನಸ್ಸಿನಲ್ಲಿ ಅವರನ್ನೆ ಗುರುವಾಗಿ ಆರಿಸಿಕೊಂಡಿದ್ದೆ. ಒಂದು ದಿನ ದೀಕ್ಷೆ ತೆಗೆದುಕೊಳ್ಳುವ ನನ್ನ ಅಭಿಲಾಷೆಯನ್ನು ಅವರಿಗೆ ತಿಳಿಸಿದಾಗ ಅವರು ಆಶ್ವಾಸವಿತ್ತು ಹೇಳಿದರು: ‘ದೀಕ್ಷೆ ಸಿಕ್ಕಿಯೆ ಸಿಗುತ್ತದೆ; ಅದಕ್ಕಾಗಿ ಇಷ್ಟು ತರಾತುರಿ ಬೇಕಿಲ್ಲ. ಅವಸರ ಮಾಡುವುದರಿಂದ ಏನು ಪ್ರಯೋಜನ? ಈಗ ನಾನೇನು ಹೇಳುತ್ತೇನೆಯೊ ಅದರಂತೆ ಮಾಡುತ್ತಾ ಹೋಗು. ಮನಸ್ಸು ಸಿದ್ಧವಾಗಲಿ. ಆಮೇಲೆ ಎಲ್ಲ ಆಗುತ್ತೆ.’ ಆ ದಿನ ಸಾಧನೆಭಜನೆಯ ವಿಚಾರವಾಗಿ ಅನೇಕ ಉಪದೇಶ ಮಾಡಿದರು. ಈ ಅವಧಿಯಲ್ಲಿ ಅವರ ನಿರ್ದೇಶಾನುಸಾರಿಯಾಗಿ ಸ್ವಲ್ಪ ಜಪ-ಧ್ಯಾನ ಮಾಡುತ್ತಿದ್ದೆ. ಆಗಾಗ ಹೋಗಿ ಅವರ ದರ್ಶನ ಮಾಡುತ್ತಲೂ ಇದ್ದೆ. ಆದರೆ ನನ್ನ ದೌರ್ಭಾಗ್ಯ ಏನೆಂದು ಹೇಳಲಿ; ಅವರಿಂದ ದೀಕ್ಷೆ ಪಡೆಯುವ ಪುಣ್ಯ ನನ್ನದಾಗಲಿಲ್ಲ. ಈಗ ನನ್ನ ಪ್ರಾಣದ ಐಕಾಂತಿಕ ಇಚ್ಛೆ, ತಾವು ಕೃಪೆಮಾಡಿ ನನಗೆ ದೀಕ್ಷೆ ಕೊಡಬೇಕು. ತಾವು ಅವರ ಸ್ಥಾನಭಿಷಿಕ್ತರು; ಅವರ ಪೀಠದಲ್ಲಿ ಕುಳಿತಿದ್ದೀರಿ. ಅವರ ಶಕ್ತಿ ತಮ್ಮ ಒಳಗಣ್ಣಿಂದ ಕೆಲಸಮಾಡುತ್ತಿದೆ. ತಾವು ನಿರಾಶೆಗೊಳಿಸದೆ ನನಗೆ ಕೃಪೆ ತೋರಬೇಕು.”

ಇದಕ್ಕೆ ಮುಂಚೆ ಮಹಾಪುರುಷಜಿ ಈ ಭಕ್ತನನ್ನು ಯಾವಾಗಲೂ ನೋಡಿರಲಿಲ್ಲ; ಆದರೂ ಆತನು ತಮಗೆ ಕೇವಲ ಪರಿಚಿತವೂ ಅತ್ಯಂತ ಆತ್ಮೀಯನೂ ಎಂಬಂತೆ ಸಸ್ನೇಹವಾಣಿಯಿಂದ ಹೇಳಿದರು: “ನೀವು ಮಹಾಭಾಗ್ಯವಂತರೆ ನಿಜ; ಏಕೆಂದರೆ, ಮಹಾರಾಜ್ ಅವರ ಆಶೀರ್ವಾದ ಪಡೆದಿದ್ದೀರಿ: ಅಲ್ಲದೆ ಅವರು ದಯೆತೋರಿ ನಿಮಗೆ ಅನೇಕ ಉಪದೇಶ ನೀಡಿದ್ದಾರೆ. ಅವರು ಏನು ಹೇಳಿದ್ದಾರೆಯೋ ಅದನ್ನೆಲ್ಲ ನೀವು ಮಂತ್ರವೆಂದೇ ಭಾವಿಸಬೇಕು. ಅದರಿಂದಲೇ ನಿಮ್ಮ ಅಭೀಷ್ಟ ಸಿದ್ಧವಾಗುತ್ತದೆ. ಇನ್ನು ಬೇರೆಯಾಗಿ ದೀಕ್ಷೆ ತೆಗೆದಕೊಳ್ಳುವುದರಿಂದ ಏನು ಪ್ರಯೋಜನ ಇದೆಯೋ ನನಗಂತೂ ಗೊತ್ತಾಗುವುದಿಲ್ಲ. ತುಂಬ ಕಾತರ ಹೃದಯದಿಂದ ಅವರನ್ನು ಕರೆಯಿರಿ; ಅಳುತ್ತಳುತ್ತಾ ಪ್ರಾರ್ಥನೆ ಮಾಡಿ; ನಿಶ್ಚಯವಾಗಿಯೂ ಅವರು ದರ್ಶನ ಕೊಡುತ್ತಾರೆ; ಅಲ್ಲದೆ ಅದರಿಂದ ಪ್ರಯೋಜನವಿರುವ ಪಕ್ಷದಲ್ಲಿ ಅವರೇ ನಿಮಗೆ ದಿಕ್ಷೆಯನ್ನೂ ದಯಪಾಲಿಸುತ್ತಾರೆ. ಅವರ ಕೃಪೆ ಅಮೋಘ. ಅವರೇನು ಸಾಧಾರಣ ಸಿದ್ಧಗುರು ಮಾತ್ರವೇನು? ಅವರು ಸ್ವಯಂ ಭಗವಂತನ ಪಾರ್ಷದ. ಅವರ ಕೃಪಾಕಟಾಕ್ಷದಿಂದ ಜೀವನ ಸಂಸಾರಬಂಧನ ಮುಕ್ತವಾಗಿ ಹೋಗುತ್ತದೆ, ಸಾಧಕ ಸಿದ್ಧನಾಗಿ ಹೋಗುತ್ತಾನೆ. ಭಗವಂತನ ಯಾವಾಗ ಜೀವಕಲ್ಯಾಣಾರ್ಥವಾಗಿ ನರದೇಹಧಾರಣೆ ಮಾಡಿ ಜಗತ್ತಿನಲ್ಲಿ ಅವತೀರ್ಣ ನಾಗುತ್ತಾನೆಯೊ ಆಗ ಅವರು ಶ್ರೀಭಗವಂತನ ಜೊತೆ ಬರುತ್ತಾರೆ. ಯುಗಧರ್ಮ ಪ್ರಚಾರಕ್ಕಾಗಿ, ಭಗವಂತನ ನರಲೀಲೆಯನ್ನು ಪೂರ್ಣಗೊಳಿಸುವುದಕ್ಕಾಗಿ. ಅವರು ಬಹುಮಟ್ಟಿಗೆ ತಾವೇ ಪ್ರತ್ಯೇಕವಾಗಿ ಬರುವುದಿಲ್ಲ. ಅಲ್ಲದೆ ಅವರು ಹೋಗಿರುವುದಾದರೂ ಎಲ್ಲಿಗೆ? ಪಾಂಚಭೌತಿಕ ದೇಹವನ್ನು ಪರಿತ್ಯಜಿಸಿದ್ದಾರೆ, ಅಷ್ಟೇ ಅಲ್ಲವೆ? ಈಗ ಅವರು ಚಿನ್ಮಯಧಾಮದಲ್ಲಿ ಚಿನ್ಮಯ ದೇಹದಲ್ಲಿ ಠಾಕೂರರ ಜೊತೆಯಲ್ಲಿ ಇದ್ದಾರೆ; ಅಲ್ಲದೆ ಭಕ್ತರ ಅಶೇಷ ಕಲ್ಯಾಣವನ್ನು ಮಾಡುತ್ತಿದ್ದಾರೆ. ನಾನು ಹೇಳುತ್ತೇನೆ-ನಿಮಗೆ ನಿಶ್ಚಯವಾಗಿಯೂ ಅವರ ದರ್ಶನ ಲಭಿಸುತ್ತದೆ.”

ಭಕ್ತ: “ಮಹಾರಾಜ್, ತಾವು ಹೇಳುತ್ತಿರುವುದು ಪರಮಸತ್ಯ. ಅದರ ವಿಚಾರವಾಗಿ ನನಗೂ ಪ್ರತ್ಯೇಕ ಪ್ರಮಾಣ ದೊರೆತಿದೆ. ರಾಜಾಮಹಾರಾಜರ ದೇಹತ್ಯಾಗದ ಅನಂತರ ನನ್ನ ಪ್ರಾಣದಲ್ಲಿ ಅತಿ ದಾರುಣ ಕ್ಷೋಭೆಯುಂಟಾಯಿತು, ಸದ್ಗುರುಸಂಗ ಪ್ರಾಪ್ತಿಯಾದರೂ ಕೃಪಾಲಾಭ ಪಡೆಯುವ ಅದೃಷ್ಟ ನನ್ನದಾಗದೆ ಹೋಯಿತಲ್ಲಾ ಎಂದು! ಮನಸ್ಸು ತುಂಬ ಅಶಾಂತವಾಯಿತು. ಠಾಕೂರರ ಹತ್ತಿರ ಕಾತರನಾಗಿ ಪ್ರಾರ್ಥನೆ ಮಾಡಿದೆ; ಅವರು ನನ್ನ ಪ್ರಾರ್ಥನೆಗೆ ಕಿವಿಗೊಟ್ಟರು. ಇವೊತ್ತಿಗೆ ಮೂರು ದಿನಗಳ ಹಿಂದೆ ಸ್ವಪ್ನದಲ್ಲಿ ಮಹಾರಾಜ್ ಅವರು ದರ್ಶನವಿತ್ತರು; ಅಲ್ಲದೆ ಅವರು ಕೃಪೆಮಾಡಿ ನನಗೆ ಮಂತ್ರವನ್ನೂ ಕೊಟ್ಟರು. ಆದರೆ ಎಚ್ಚತ್ತಮೇಲೆ ಎಷ್ಟು ಪ್ರಯತ್ನಿಸಿದರೂ ಅದರ ಸ್ಮರಣೆ ಪೂರ್ತಿಯಾಗಿ ಬರಲೇ ಇಲ್ಲ. ನೆನಪಿಗೆ ತಂದುಕೊಳ್ಳಲು ಬಹಳ ಪ್ರಯತ್ನಿಸಿದರೆ, ಆದರೆ ಏನೂ ಪ್ರಯೋಜನವಾಗಲಿಲ್ಲ. ಆಗಿನಿಂದ ನನ್ನ ಮನಸ್ಸು ತುಂಬ ಉದ್‌ಭ್ರಾಂತವಾಗಿಬಿಟ್ಟಿದೆ. ಬೇರೆ ಏನೂ ದಾರಿಕಾಣದೆ ಅನನ್ಯೋಪಾಯವೆಂದು ತಮ್ಮೆಡೆಗೆ ಓಡಿಬಂದೆ. ತಾವು ಕರುಣೆಯಿಟ್ಟು ಏನಾದರೂ ದಾರಿ ತೋರಿಸಬೇಕು. ಅವರು ತಮ್ಮ ಮುಖಾಂತರ ನನ್ನ ಈ ಅಭಾವವನ್ನು ಪೂರ್ಣಮಾಡಿಕೊಡುತ್ತಾರೆ ಎಂಬ ಸಂಪೂರ್ಣ ಭರವಸೆ ನನಗಿದೆ.” ಹೇಳುತ್ತಾ ಹೇಳುತ್ತಾ ಆ ಭಕ್ತನು ತುಂಬ ವ್ಯಾಕುಲತೆಯಿಂದ ಅಳತೊಡಗಿದನು.

ಮಹಾಪುರುಷಜಿ ಭಕ್ತನ ಹೇಳಿಕೆಯನ್ನು ಧೀರಭಾವದಿಂದ ಗಮನವಿಟ್ಟು ಕೇಳುತ್ತಿದ್ದರು. ಭಕ್ತನ ಆ ರೀತಿಯ ವ್ಯಾಕುಲತೆಯನ್ನು ಕಂಡು ಅವರ ಮುಖ ಮಂಡಲ ಕರುಣೆಯಿಂದ ದೀಪ್ತವಾಯಿತು. ಅವರು ಪುನಃ ಆತನಿಗೆ ಆಶ್ವಾಸವಿತ್ತು. ಹೇಳಿದರು: “ಮಹಾರಾಜ್ ಈ ರೀತಿ ದಯೆತೋರಿದ ಮೇಲೆ ನಿಮಗೆ ಇನ್ನು ಏನೂ ಭಯ ಇಲ್ಲ. ಅವರ ಕೃಪೆಯಿಂದ ಎಲ್ಲ ಸರಿಹೋಗುತ್ತದೆ; ನೀವಿನ್ನು ಹತಾಶರಾಗಬೇಕಾಗಿಲ್ಲ. ಸಮಯ ಪಕ್ವವಾದಾಗ ಅವರು ಮತ್ತೆ ನಿಮಗೆ ದರ್ಶನವಿತ್ತು ಕೃಪೆಮಾಡುತ್ತಾರೆ. ತುಂಬ ಕಾತರಪ್ರಾಣರಾಗಿ ಅವರನ್ನು ಕರೆಯುತ್ತಾ ಹೋಗಿ.”

ಆದರೆ ಭಕ್ತನು ಮಹಾಪುರುಷಜಿಯ ಆಶ್ವಾಸವಾಣಿಯಿಂದ ಶಾಂತನಾಗದೆ ಮಂತ್ರದೀಕ್ಷೆಗಾಗಿ ಅವರ ಹತ್ತಿರವೇ ಮತ್ತೆ ಮತ್ತೆ ಪ್ರಾರ್ಥನೆ ಮಾಡತೊಡಗಿದನು. ಆಗ ಮಹಾಪುರುಷಜಿ ತುಸು ಒಪ್ಪಿದವರಂತೆ ತೋರಿ, ಭಕ್ತನಿಗೆ ಸ್ವಲ್ಪ ಹೊತ್ತು ಕಾಯುತ್ತಿರುವಂತೆ ಹೇಳಿ, ಮಹಾರಾಜ್ ಅವರು ವಾಸಿಸುತ್ತಿದ್ದ ಕೊಠಡಿಯನ್ನು ಪ್ರವೇಶಿಸಿ ಬಾಗಿಲು ಹಾಕಿಕೊಂಡರು. (ಆಗಿನ್ನೂ ಮಹಾರಾಜ್ ಅವರ ಮಂದಿರ ನಿರ‍್ಮಾಣವಾಗಿರಲಿಲ್ಲ. ಮಹಾರಾಜ್ ಅವರು ವಾಸಿಸುತ್ತಿದ್ದ ಕೊಠಡಿಯಲ್ಲಿ ಅವರು ಬಳಸುತ್ತಿದ್ದ ಎಲ್ಲ ಸಾಮಾನುಗಳೂ ಇದ್ದುವು. ಅಲ್ಲದೇ ಅಲ್ಲಿಯೇ ಅವರಿಗೆ ನಿತ್ಯಪೂಜೆ ನಡೆಯುತ್ತಿತ್ತು.) ಸುಮಾರು ಅರ್ಧಗಂಟೆ ಕಳೆದ ಮೇಲೆ ಮಹಾಪರುಷಜಿ ಕೊಠಿಡಿಯ ಬಾಗಿಲನ್ನು ತೆರೆದು ಆ ಭಕ್ತನಿಗೆ ಮಹಾರಾಜರ ಕೊಠಡಿಯೊಳಕ್ಕೆ ಬರುವಂತೆ ಸನ್ನೆ ಮಾಡಿ ಕರೆದರು. ಕೆಲವು ಕ್ಷಣಗಳ ಅನಂತರ ಮಹಾಪುರುಷಜಿ ಒಬ್ಬರೆ ಹೊರಕ್ಕೆ ಬಂದು ತಮ್ಮ ಮಂಚದಮೇಲೆ ಮೌನಮುಖಮುದ್ರೆಯಿಂದ ಕುಳಿತುಬಿಟ್ಟರು. ಒಂದು ಗಂಟೆಯಾದ ಮೇಲೆ ಆ ಭಕ್ತನು ಮಹಾರಾಜರ ಕೊಠಡಿಯಿಂದ ಹೊರಗೆಬಂದು, ಮಹಾಪುರುಷಜಿಗೆ ಸಾಷ್ಟಾಂಗ ಪ್ರಣಾಮಮಾಡಿ, ಹೇಳಿದನು: ಈವೊತ್ತು ನನ್ನ ಜೀವನ ಧನ್ಯವಾಗಿ ಹೋಯಿತು. ಸ್ವಪ್ನದಲ್ಲಿ ರಾಜಾಮಹಾರಾಜರು ಯಾವ ಮಂತ್ರವನ್ನು ಕೊಟ್ಟಿದ್ದರೋ ಅದೇ ಮಂತ್ರವನ್ನು ತಾವು ದಯಪಾಲಿಸಿದ್ದೀರಿ. ಅದರಿಂದ ನನಗೆ ಮತ್ತಷ್ಟು ಆನಂದವಾಗಿದೆ. ಅವರು ತಮ್ಮಲ್ಲಿಯೆ ಇದ್ದಾರೆ ಎಂಬುದನ್ನು ನಾನು ಪ್ರತ್ಯಕ್ಷ ಕಂಡೆ! ಈ ಜೀವನದಲ್ಲಿಯೆ ನನಗೆ ಇಷ್ಟದರ್ಶನವಾಗುವಂತೆ ಆಶೀರ್ವಾದ ಮಾಡಿ.

ಮಹಾಪುರುಷಜಿ: “ನೀವು ಮಹಾ ಭಾಗ್ಯವಂತರು. ಪೂರ್ವಜನ್ಮಾರ್ಜಿತ ಬಹು ಸುಕೃತಿ ಇರುವುದರಿಂದಲೆ ನಿಮಗೆ ಮಹಾರಾಜ್ ಇಷ್ಟು ದಯೆ ತೋರಿದ್ದಾರೆ; ನಾನಾ ರೀತಿಗಳಲ್ಲಿ ಕೃಪೆ ಮಾಡುತ್ತಿದ್ದಾರೆ. ಈಗ ಯಾವ ವಸ್ತು ನಿಮಗೆ ಲಭಿಸಿದೆಯೊ ಅದನ್ನು ತೆಗೆದುಕೊಂಡು ಸಾಧನೆ ಭಜನೆಗಳಲ್ಲಿ ಮಗ್ನರಾಗಿಬಿಡಿ. ನಿಮ್ಮ ಅಭೀಷ್ಟ ಸಿದ್ಧಿಯಾಗುತ್ತದೆ. ಭಕ್ತನಾದವನು ಸರ್ವಾವಸ್ಥೆಗಳಲ್ಲಿಯೂ ಭಗವಂತನ ಮೆಲೆ ಬೆಕ್ಕಿನ ಮರಿ ತನ್ನ ತಾಯಿಯ ಮೇಲೆ ಎಲ್ಲ ಹೊಣೆಗಾರಿಕೆಯನ್ನೂ ಹಾಕಿಬಿಡುವಂತೆ, ಭರವಸೆ ಇಡಲೇಬೇಕು. ಅಲ್ಲದೆ ಆಳುತ್ತಳುತ್ತಾ ಕರೆಯಬೇಕು-ಆತನ ಹತ್ತಿರ ಕಾತರನಾಗಿ ಪ್ರಾರ್ಥನೆಮಾಡಬೇಕು. ತನ್ನ ಭಕ್ತನಿಗೆ ಯಾವಾಗ ದರ್ಶನ ಕೊಡಬೇಕೆಂಬುದು ಅವನಿಗೆ ಗೊತ್ತು. ಆತನಿಗೆ ಶರಣಾಗತರಾಗಿ ಆತನ ಬಾಗಿಲಬಳಿ ಬಿದ್ದುಕೊಂಡಿರಿ. ಮನೋವಾಕ್ಕಾಯಗಳಲ್ಲಿ ಪೂರ್ಣ ವಿಶ್ವಾಸಗಳಿಂದಲೂ ಪ್ರಾರ್ಥನೆ ಮಾಡಿ. ಆತನು ನಿಮ್ಮ ಹೃದಯವನ್ನು ತುಂಬಿಕೊಡುತ್ತಾನೆ.”

ಭಕ್ತ: “ಯಾವ ಭಾವದಿಂದ ಧ್ಯಾನ ಜಪ ಮಾಡಬೇಕು ಎಂಬುದರ ವಿಚಾರವಾಗಿ ಸ್ವಲ್ಪ ಉಪದೇಶಮಾಡಿ. ಸಂಸಾರದಲ್ಲಿ ನಾನಾ ಕಾರ್ಯಗಳಲ್ಲಿ ಸಿಕ್ಕಿ ಬಿದ್ದಿರುತ್ತೇನೆ. ಜೊತೆಗೆ ಈ ಚಾಕರಿಯ ಜವಾಬುದಾರಿಯೂ ಭೀಷಣ. ಈ ಎಲ್ಲ ಬಂಧನಗಳಿಂದ ಮುಕ್ತನಾಗಿ ಭಗವಂತನನ್ನು ಕರೆಯಲು ಸಮರ್ಥನಾಗುವಂತೆ ನನಗೆ ಆಶೀರ್ವಾದಮಾಡಿ.”

ಮಹಾಪುರುಷಜಿ: “ನಮ್ಮ ಆಶೀರ್ವಾದವೇನೋ ಇದ್ದೆ ಇರುತ್ತದೆ. ನೀವೂ ಸ್ವಲ್ಪ ದೃಢಮನಸ್ಸು ಮಾಡಿ ಸಾಧನೆಭಜನೆಯಲ್ಲಿ ತೊಡಗಬೇಕು. ಇವತ್ತು ಯಾವ ಮಂತ್ರ ನಿಮಗೆ ದೊರೆತಿದೆಯೋ ಅದನ್ನು ನಿಯಮಿತ ಭಾವದಲ್ಲಿ ಜಪ ಮಾಡುತ್ತಾ ಹೋಗಿ. ಜಪದ ಜೊತೆಜೊತೆಗೇ ತುಂಬ ಕಾತರಭಾವದಿಂದ ಹೀಗೆಂದು ಪ್ರಾರ್ಥನೆ ಸಲ್ಲಿಸಿ: ‘ಪ್ರಭು, ನಿನ್ನ ಧ್ಯಾನದಲ್ಲಿ ಮಗ್ನನಾಗುವಂತೆ ನನ್ನನ್ನು ಹರಸು: ನಿನ್ನ ಶ್ರೀಪಾದಪದ್ಮದಲ್ಲಿ ನನ್ನ ಮನಸ್ಸು ಲೀನವಾಗುವಂತೆ ಕರುಣೇದೋರು.’ ಆತನು ಅನುಗ್ರಹಿಸುತ್ತಾನೆ, ನಿಶ್ಚಯವಾಗಿ, ನಂಬಿ. ಆತನೆ ಎಲ್ಲರ ಹೃದಯದಲ್ಲಿಯೂ ಗುರು, ಮಾರ್ಗದರ್ಶಕ, ಪ್ರಭು, ಪಿತಾ, ಸಖಾ ಮತ್ತು ಜೀವದ ಸರ್ವಸ್ಥ. ಸಂಸಾರದಲ್ಲಿ ನನ್ನವರು ನನ್ನವರು ಎಂದು ಯಾರಿಗಾಗಿ ಜನರು ಕಣ್ಣೀರು ಕರೆಯುತ್ತಾರೊ ಅವರೆಲ್ಲ ಎರಡು ದಿನದ ಸಂಗಾತಿಗಳು, -ಚಿರಸಂಗಾತಿ ಎಂದರೆ ಏಕಮಾತ್ರ ಅವನೆ. ನೀವು ಒಂದೇ ಮನಸ್ಸಿನಿಂದ ನಾಮಜಪ ಮಾಡುತ್ತಾ ಹೋಗಿ; ಕ್ರಮೇಣ ಗೊತ್ತಾಗುತ್ತದೆ ನಿಮಗೆ, ತನಗೆತಾನೆ ಧ್ಯಾನಾಭ್ಯಾಸ ಸಿದ್ಧಿಸುತ್ತದೆ. ತುಂಬಿದ ಪ್ರೇಮದಿಂದ ಇಷ್ಟಮಂತ್ರ ಜಪ ಮಾಡುತ್ತಾ ಮಾಡುತ್ತಾ ಕ್ರಮೇಣ ಪ್ರಾಣದಲ್ಲಿ ಒಂದು ವಿಮಲ ಆನಂದದ ಅನುಭವವಾಗುತ್ತದೆ. ಆ ಆನಂದ ಸ್ಥಾಯಿಯಾಗುವುದೆ ಒಂದು ರೀತಿಯ ಧ್ಯಾನ. ಧ್ಯಾನದಲ್ಲಿ ಬಹು ಪ್ರಕಾರಗಳಿವೆ. ತುಂಬಿದ ಪ್ರೇಮದಿಂದ ಪ್ರಭುವಿನ ಜ್ಯೋತಿರ್ಮಯ ಶ್ರೀಮೂರ್ತಿಯನ್ನು ಹೃದಯದಲ್ಲಿ ಧಾರಣಮಾಡಿಕೊಳ್ಳಬೇಕು; ಮತ್ತು ಆತನ ಶ್ರೀಅಂಗಜ್ಯೋತಿಯಿಂದ ನಿಮ್ಮ ಹೃದಯಕಂದರ ಆಲೋಕಿತವಾಗಿ ಹೋದಂತೆ ಭಾವಿಸಿಕೊಳ್ಳಬೇಕು. ಈ ರೀತಿ ಭಾವಿಸುತ್ತಾ ಭಾವಿಸುತ್ತಾ ಒಂದು ಅಪೂರ್ವ ಆನಂದ ಮನಃಪ್ರಾಣಗಳನ್ನೆಲ್ಲ ತುಂಬುತ್ತದೆ; ಕ್ರಮೇಣ ಮೂರ್ತಿಯೂ ಲಯವಾಗಿ ಹೋಗುತ್ತದೆ; ಕೇವಲ ಚೈತನ್ಯಮಯವಾದ ಒಂದು ಪ್ರಕಾರದ ಆನಂದ ಅನುಭೂತವಾಗುತ್ತದೆ:- ಅದೂ ಒಂದು ಪ್ರಕಾರದ ಧ್ಯಾನ. ಇನ್ನೂ ಕೆಲವು ತರಹದ ಧ್ಯಾನಗಳಿವೆ. ಆಮೇಲಾಮೇಲೆ ನಿಮಗೆ ತಾನಾಗಿಯೇ ಎಲ್ಲವೂ ಉಪಲಬ್ಧವಾಗುತ್ತದೆ. ಮುಖ್ಯವಾದದ್ದೆಂದರೆ, ಆಂತರಿಕಭಾವದಿಂದ ಆತನನ್ನು ಕರೆಯುವುದು. ಆತನನ್ನು ಕರೆಯುತ್ತಾ ಕರೆಯುತ್ತಾ ಕಂಬನಿಗರೆಯುತ್ತಾ ಕರೆಯುತ್ತಾ ಮನದ ಮೈಲಿಗೆಯೆಲ್ಲಾ ಕೊಚ್ಚಿ ಹೋಗುತ್ತದೆ; ಮನಸ್ಸು ಶುದ್ಧವಾಗುತ್ತದೆ. ಆಗ ಆ ಸಂಸ್ಕೃತವಾದ ಮನಸ್ಸೇ ಗುರುವಾಗಿ ಕೆಲಸಮಾಡುತ್ತದೆ. ನಿಮಗೆ ಯಾವಾಗ ಏನು ಬೇಕಾಗುತ್ತದೆ, ಯಾವ ಭಾವದಿಂದ ಹೇಗೆ ಧ್ಯಾನ ಮಾಡಬೇಕು, ಅವನನ್ನು ಹೇಗೆ ಕರೆಯಬೇಕು-ಎಂಬ ಎಲ್ಲ ಸಮಸ್ಯೆ ಮತ್ತು ಪ್ರಶ್ನೆಗಳಿಗೆ ಒಳಗಣ್ಣಿಂದಲೆ ಪರಿಹಾರ ಮತ್ತು ಉತ್ತರ ದೊರೆಯುತ್ತದೆ. ಠಾಕೂರರ ‘ವಚನವೇದ ‘ದಲ್ಲಿ ನೀವು ಓದಿರಬೇಕಲ್ಲವೇ? ‘ಕೃಪೆಯ ಗಾಳಿ ಯಾವಾಗಲೂ ಬೀಸುತ್ತದೆ; ಪಟ ಬಿಚ್ಚುವ ಕೆಲಸ ನಿನ್ನದು’ ಎಂದು. ಪಟಬಿಚ್ಚುವುದು ಎಂದರೆ ಆಂತರಿಕ ಅಧ್ಯವಸಾಯದ ಸಹಕಾರದಿಂದ ಸಾಧನೆ ಭಜನೆ ಮಾಡುವುದು ಎಂದರ್ಥ. ಅವನು ಯಾವಾಗಲೂ ಕೃಪೆದೋರುವುದಕ್ಕಾಗಿ ಆತುರನಾಗಿದ್ದಾನೆ, ಅರಿಯದ ಮಗನನ್ನು ಎತ್ತಿಕೊಳ್ಳಲು ಅಮ್ಮ ಯಾವಾಗಲೂ ಕೈಚಾಚಿರುವ ಹಾಗೆ. ಸ್ವಲ್ಪ ಪ್ರಯತ್ನಮಾಡಿ ನೋಡಿ-ಆಗ ನಿಮಗೆ ಅನುಭವದಿಂದಲೆ ಗೊತ್ತಾಗುತ್ತದೆ, ಆತನ ಕೃಪೆ ಎಂಥಾದ್ದು ಎಂದು.”

ಭಕ್ತ: “ಸಂಸಾರದಲ್ಲಿ ಹೇಗಿರಬೇಕು ಎಂದು ಅನೇಕ ಸಾರಿ ತಿಳಿಯುವುದೆ ಕಷ್ಟವಾಗುತ್ತದೆ. ಸಕಲರ ಮನಸ್ಸಿಗೆ ಹೊಂದಿಕೊಂಡು ನಡೆಯುವುದು ಒಂದು ಮಹಾ ಕಠಿಣ ಸಮಸ್ಯೆಯಾಗಿದೆ.”

ಮಹಾಪುರುಷಜಿ: “ಕಥಾಮೃತ (ಕನ್ನಡದಲ್ಲಿ ‘ಶ್ರೀರಾಮಕೃಷ್ಣ ವಚನವೇದ’ ಎಂದು ಭಾಷಾಂತರವಾಗಿದೆ.) ಓದಿದ್ದೀರಲ್ಲವೆ? ಅದನ್ನು ಇನ್ನೂ ಹೆಚ್ಚು ಮನಸ್ಸಿಟ್ಟು ಓದಬೇಕು. ಈ ಎಲ್ಲ ಸಮಸ್ಯೆಗಳಿಗೆ ಅತಿ ಸುಂದರ ಸಮಾಧಾನ ಅಲ್ಲಿ ಠಾಕೂರರ ಮಾತುಗಳಲ್ಲಿಯೆ ದೊರೆಯುತ್ತದೆ. ಈ ಸಂಸಾರ ನನ್ನದೂ ಅಲ್ಲ; ನಿಮ್ಮದೂ ಅಲ್ಲ; ಈ ಸಂಸಾರ ಸೃಷ್ಟಿಮಾಡಿರುವವನು ಭಗವಂತನೆ. ಯಾವಾಗ ನಿಮ್ಮ ಮನದಲ್ಲಿ ‘ನನ್ನದು’ ಎಂಬ ಭಾವ ಉಂಟಾಗುತ್ತದೆಯೊ ಆಗ ‘ಎಲ್ಲವೂ ಭಗವಂತನದೆ’ ಎಂಬ ಭಾವವನ್ನು ಮನಸ್ಸಿನಲ್ಲಿ ಬಲಿದು ಸಂಸಾರದಲ್ಲಿ ನಡೆಯಬೇಕು. ಹೆಂಡತಿ, ಮಗಳು, ಮಗ, ಆತ್ಮೀಯ ಸ್ವಜನರು, ನನ್ನವರು, ಎಲ್ಲರೂ ಭಗವಂತನಿಗೆ ಸೇರಿದ ಜೀವಗಳೆ. ಅವರಿಗೆ ಏನು ಸೇವೆ ಮಾಡುತ್ತಿದ್ದರೂ ನಾರಾಯಣ ಬುದ್ಧಿಯಿಂದಲೆ ಮಾಡಿದರೆ ಸಂಸಾರದ ಉಸುಬಿನಲ್ಲಿ ಹೆಚ್ಚಾಗಿ ಸಿಕ್ಕಿಬೀಳುವುದಿಲ್ಲ. ಅದರ ಜೊತೆಗೆ ವಿಚಾರ ಬುದ್ಧಿಯೂ ಜಾಗ್ರತವಾಗಿರಬೇಕು. ಸದಸದ್ ವಿಚಾರದ ಮುಖಾಂತರ ವೈರಾಗ್ಯದ ಉದಯವಾಗುತ್ತದೆ. ನೀವು ಗೃಹಸ್ಥಾಶ್ರಮದಲ್ಲಿದೀರಿ; ಒಳ್ಳೆಯದೇ. ಹಾಗೆಂದು ಅದರಲ್ಲಿ ಆಳವಾಗಿ ಸಿಕ್ಕಿ ಹಾಕಿಕೊಳ್ಳಬೇಕೇನು? ಯಾರು ಯಾರಿಗೆ ಏನೇನು ಕರ್ತವ್ಯ ಸಲ್ಲಿಸಬೇಕೋ ಅದನ್ನೆಲ್ಲ ಆವಶ್ಯಕವಾಗಿ ಸಲ್ಲಿಸಬೇಕು, -ಆದರೆ ಸೇವಾಜ್ಞಾನದಿಂದ. ನಿಮ್ಮ ಮೇಲೆ ಭಗವಂತನ ವಿಶೇಷದಯೆ ಇದೆ. ಎಷ್ಟು ಜನ ‘ಹಾ ಅನ್ನ! ಹಾ ಅನ್ನ!’ ಎಂದು ಹುಚ್ಚರಂತೆ ತಿರುಗಬೇಕಾಗಿದೆ! ಹೊಟ್ಟೆ ಬಟ್ಟೆಯ ಚಿಂತೆಯಿಂದ ಅಸ್ಥಿರವಾದ ಮನಸ್ಸಿಗೆ ಭಗವಂತನನ್ನು ಕರೆಯಲು ಸಾಧ್ಯವೆ? ಆದರೆ ನಿಮಗಾದರೋ ಊಟಕ್ಕೆ ಇನ್ನೊಬ್ಬರ ಕೈ ಹಾರೈಸುವುದು ಬೇಡ. ಅದೇನು ಕಡಿಮೆ ದಯೆಯೆ? ಯಾರು ನಿಜವಾಗಿ ಭಕ್ತರೊ ಅವರಿಗೆ ಬೇಕಾಗುವ ಅನುಕೂಲಗಳನ್ನು ದೇವರೆ ಒದಗಿಸಿಕೊಡುತ್ತಾನೆ. ಎಲ್ಲರೂ ಮಲಗಿ ನಿದ್ರಿಸಿದ ಮೇಲೆ, ನಟ್ಟಿರುಳಿನಲ್ಲಿ, ರಾತ್ರಿಯ ಗಭೀರ ಮೌದಲ್ಲಿ, ಮೇಲೇಳಿ; ಏಕಾಂತ ಮನಸ್ಸಿನಿಂದ ಭಗವಂತನನ್ನು ಕರೆಯಿರಿ. ಕರೆಯುತ್ತಾ ಅವನಲ್ಲಿ ಒಂದಾಗಿ ಹೋಗಬೇಕು. ಕಣ್ಣೀರು ಸುರಿಸುತ್ತಾ ಅವನ ಬಳಿ ಪ್ರಾಣದ ವೇದನೆಯನ್ನು ನಿವೇದಿಸಿಕೊಳ್ಳಬೇಕು. ಮಹಾನಿಶೆಯ ಸಾಧನೆ ಭಜನೆಗೆ ಪ್ರಶಸ್ತ ಸಮಯ. ನಿಮಗೆ (ಆಧ್ಯಾತ್ಮಿಕ ಜೀವಿಯ) ಒಳ್ಳೆಯ ಲಕ್ಷಣಗಳಿವೆ; ನಿಮಗೆ ಎಲ್ಲವೂ ದೊರೆಯುತ್ತದೆ. ಅದಕ್ಕಾಗಿ ನಾನು ನಿಮಗೆ ಇಷ್ಟೊಂದು ಹೇಳುತ್ತಿರುವುದು. ಮೊದಮೊದಲು ಕೊಂಚ ಕಷ್ಟಪಟ್ಟು ಕೆಲಸ ಮಾಡಬೇಕಾಗುತ್ತದೆ. ಆಮೇಲೆ ನೀವೇ ನೋಡುತ್ತೀರಿ, ವಿಮಲ ಆನಂದದಿಂದ ಮನಸ್ಸು ಪ್ರಾಣ ತುಂಬಿ ಹೋಗುತ್ತವೆ; ಆನಂದದ ಅಮಲು ಹುಚ್ಚು ಹೊಳೆಯಾಗಿ ನಿಮ್ಮನ್ನು ಮುಳುಗಿಸಿಬಿಡುವಂತಾಗುತ್ತದೆ? ಆ ಆನಂದದ ಮುಂದೆ ಜಾಗತಿಕ ಭೋಗ ಯಾರಿಗೆ ಬೇಕಾಗುತ್ತದೆ? ಭಗವದಾನಂದ ಒಂದು ಕ್ಷಣ ಯಾರಿಗಾದರೂ ಲಭಿಸಿದ್ದೆ ಆದೆ, ಅವರಿಗೆ ಸಂಸಾರಸುಖ ಕಸಕ್ಕೂ ಕೀಳಾಗಿ ತೋರುತ್ತದೆ.”

ಭಕ್ತ: “ಜಪ ಮಾಡುವಾಗ ಅದರ ಲೆಕ್ಕ ಇಟ್ಟುಕೊಳ್ಳಬೇಕೇನು? ಎಷ್ಟು ಜಪ ಮಾಡಬೇಕು, ಹೇಗೆ ಮಾಡಬೇಕು, ಅದನ್ನೆಲ್ಲ ತಾವು ದಯೆಯಿಟ್ಟು ಸ್ವಲ್ಪ ತಿಳಿಸಬೇಕು.”

ಮಹಾಪುರುಷಜಿ: “ಜಪ ಮೂರು ರೀತಿಯಲ್ಲಿ ಮಾಡಬಹುದು, ಜಪ ಮಾಲೆಯಲ್ಲಿ, ಕೈಬೆರಳಲ್ಲಿ ಅಥವಾ ಮನದಲ್ಲಿ. ಮನದಲ್ಲಿಯೆ ಜಪ ಮಾಡುವುದು ಸರ್ವಶ್ರೇಷ್ಠ ವಿಧಾನ. ತುಲಸೀದಾಸ ಹೇಳುತ್ತಾನೆ: ‘ಮಾಲಾ ಜಪೇ ಶಾಲಾ, ಕರ ಜಪೇ ಭಾಇ, ಮನ ಮನ ಜಪೇತೋ ಬಲಿ ಹಾರಿ ಜಾಇ.’ ಮಾಲೆಯಲ್ಲಿ ಮಣಿ ಎಣಿಸಿ ಜಪಮಾಡುವವನು ಅಧಮ; ಕೈಬೆರಳೆಣಿಸಿ ಜಪ ಮಾಡುವವನು ಮಧ್ಯಮ; ಮನದಲ್ಲಿಯೆ ಜಪ ಮಾಡುವವನು ಉತ್ತಮ. ಮನದಲ್ಲಿಯೆ ಜಪಭ್ಯಾಸ ಮಾಡಿದರೆ ಕುಳಿತಾಗ, ನಡೆವಾಗ, ಉಣುವಾಗ, ಮಲಗಿರುವಾಗ ಎಲ್ಲ ಸಮಯಗಳಲ್ಲಿಯೂ ಜಪ ಮಾಡಲು ಸುಲಭಸಾಧ್ಯ. ಸ್ವಲ್ಪಕಾಲ ಈ ತರಹದ ಮಾನಸ ಜಪ ಅಭ್ಯಾಸಮಾಡಿದರೆ ಆಮೇಲೆ ಮಲಗಿ ನಿದ್ದೆ ಮಾಡುವಾಗಲೂ ಜಪ ತನಗೆ ತಾನೆ ನಡೆಯುತ್ತದೆ. ಅಲ್ಲದೆ ಸರ್ವಕ್ಷಣದಲ್ಲಿಯೂ ಮನದಲ್ಲಿ ಒಂದು ಆನಂದದ ಧಾರೆ ಹರಿಯುತ್ತದೆ. ಆದರೆ ಮೊದಮೊದಲು ಲೆಕ್ಕ ಇಟ್ಟುಕೊಂಡು ಜಪಮಾಡುವುದು ಲೇಸು. ನಿಷ್ಠೆಯಿಂದ ಪ್ರತಿದಿನವೂ ಕೊನೆಯ ಪಕ್ಷ ಎರಡು ಸಾರಿ ಆಸನದಲ್ಲಿ ಕುಳಿತು ನಿದಿಷ್ಟ ಸಂಖ್ಯೆಯ ಜಪ ಮಾಡಬೇಕು. ನಿಮ್ಮ ವಿಷಯದಲ್ಲಿ ಹೇಳುವುದಾದರೆ ಒಂದು ಸಾರಿಗೆ ಸಾವಿರಕ್ಕೆ ಕಡಿಮೆ ಇರಬಾರದು-ಅದಕ್ಕಿಂತಲೂ ಹೆಚ್ಚು ಸಧ್ಯವಾದರೆ ಇನ್ನೂ ಒಳ್ಳೆಯದೆ. ಲೆಕ್ಕ ಮಾಡುವಾಗ ಕೈಬೆರಳಿಂದಾದರೂ ಮಾಡಬಹುದು, ಜಪಮಾಲೆಯಿಂದಾದರೂ ಮಾಡಬಹುದು.” ಹೀಗೆಂದು ಆ ಭಕ್ತರಿಗೆ ಕೈಯಲ್ಲಿ ಜಪ ಮಾಡುವುದು ಹೇಗೆಂಬುದನ್ನು ತೋರಿಸಿಕೊಟ್ಟರು.

ಮತ್ತ ಮುಂದುವರಿದು: “ಠಾಕೂರರು ಹೇಳುತ್ತಿದ್ದರು, ‘ನಾಮನಾಮೀ ಅಭೇದ.’ ಇಷ್ಟಮಂತ್ರ ಜಪದ ಜೊತೆಜೊತೆಗೆ ಇಷ್ಟಮೂರ್ತಿಯನ್ನೂ ಚಿಂತಿಸಬೇಕು- ಹಾಗೆ ಮಾಡುವುದರಿಂದ ಜಪ ಮತ್ತು ಧ್ಯಾನ ಎರಡೂ ಜೊತೆಜೊತೆಗೇ ಆಗುವಂತಾಗುತ್ತದೆ. ಭಗವಾನ್ ಅಂತರ‍್ಯಾ-ಅವನು ನೋಡುವುದು ಹೃದಯವನ್ನು; ಅವನು ಸಂಖ್ಯೆಯನ್ನೂ ನೋಡುವುದಿಲ್ಲ; ಸಮಯವನ್ನೂ, ನೋಡುವುದಿಲ್ಲ. ಭಾವವಿಲ್ಲದ ಮನಸ್ಸಿನಿಂದ ಮಂತ್ರಜಪವನ್ನು ಸಾವಿರ ಸಾರಿ ಮಾಡುವುದಕ್ಕಿಂತಲೂ ಹೃತ್ಪೂರ್ವಕವಾದ ಭಾವದಿಂದ ಒಮ್ಮೆ ಕರೆದರೂ ಸಾಕು, ಅದು ಸಫಲಕರವಾಗುತ್ತದೆ. ತೀವ್ರತೆ ಬೇಕು; ಆಂತರಿಕತೆಬೇಕು; ಪ್ರಾಣದಲ್ಲಿ ವ್ಯಾಕುಲತೆ ಮೂಡಿತೆಂದರೆ ಶೀಘ್ರದಲ್ಲಿಯೆ ಸಿದ್ಧಿಯಾಗುತ್ತದೆ. ಇದೆಲ್ಲ ಒಂದು ದಿನದಲ್ಲಿ ಆಗುವ ಕೆಲಸವಲ್ಲ; ಗಟ್ಟಿಮನಸ್ಸು ಮಾಡಿ ಪ್ರಯತ್ನ ಮುಂದುವರಿಸಿದರೆ ಕ್ರಮೇಣ ಎಲ್ಲ ಆಗುತ್ತದೆ. ನಡುನಡುವೆ ಮಠಕ್ಕೆ ಬಂದು ಹೋಗುತ್ತೀರಿ. ಈ ಸ್ಥಳದಲ್ಲಿ ಅನೇಕ ಸಾಧುಗಳಿದ್ದಾರೆ; ನಿಮಗೆ ಸಾಧುಸಂಗ ಲಾಭವಾಗುತ್ತದೆ. ಸಾಧುಗಳ ದರ್ಶನ ಮಾಡಿದರೂ ಪ್ರಾಣದಲ್ಲಿ ಭಗವದ್ ಭಾವನೆ ಉದ್ದೀಪನವಾಗುತ್ತದೆ. ಸಾಧನೆ ಭಜನೆ ಮಾಡುತ್ತಾ ನಿಮ್ಮ ಮನಸಿನಲ್ಲಿ ಏನಾದರೂ ಸಂದೇಹುವುಂಟಾದರೆ ನನ್ನೊಡನೆ ಜಿಜ್ಞಾಸೆಮಾಡಬಹುದು. ಅದಕ್ಕಾಗಿಯೆ ಠಾಕೂರರು ನಮ್ಮನ್ನು ಈ ಸ್ಥಾನದಲ್ಲಿ ಇಟ್ಟಿದ್ದಾರೆ. ಸತ್ಯ ಏನೆಂದರೆ, ಋಜುಭಾವವೊಂದಿದ್ದರೆ ಸಂದೇಹಗಳು ಬರುವುದೆ ಅಪೂರ್ವ; ಬಂದರೂ ಅಂತರಂಗದಿಂದಲೆ ಅದಕ್ಕೆ ಉತ್ತರ ರೂಪದ ಪರಿಹಾರ ದೊರೆತುಬಿಡುತ್ತದೆ; ಅವನು ಒಳಗಿದ್ದುಕೊಂಡು ಎಲ್ಲವನ್ನೂ ತಿಳಿಸಿಕೊಡುತ್ತಾನೆ. ಸರಳತೆ, ಆಂತರಿಕತೆ ಮತ್ತು ಪವಿತ್ರತೆ ಇದೇ ಧರ್ಮಜೀವನದ ಪ್ರಧಾನಭಿತ್ತಿ. ರತ್ನಾಕರ ದುಸ್ಯು ‘ಮರಾ! ಮರಾ!’ ಎಂದು ಜಪಮಾಡಿ ಸಿದ್ಧಿಪಡೆದ ಆ ಕಥೆ ನಿಮಗೆ ಗೊತ್ತಿರಬೇಕಲ್ಲವೆ?’* ಗುರುವಾಕ್ಯದಲ್ಲಿ ವಿಶ್ವಾಸ-ಬಾಲಕನಂತೆ ವಿಶ್ವಾಸ ಬೇಕು. ಏನು ಸಂದೇಹಗಳಿದ್ದರೂ ಅವೆಲ್ಲ ಹೊರಗಿನವು; ಅದರೆ ಮನಸ್ಸು ಯಾವಾಗ ಅಂತರ್ಮುಖವಾಗುತ್ತದೆಯೊ, ಕ್ರಮೇಣ ಅಂತರತಮ ಪ್ರದೇಶಕ್ಕೆ ಪ್ರವೇಶಿಸುತ್ತದೆಯೊ, ಆಗ ಅದು ಸಂದೇಹಗಳಿಂದ ಹೆಚ್ಚು ಹೆಚ್ಚು ದೂರವಾಗುತ್ತದೆ. ಅಲ್ಲಿ ಬರಿಯ ಆನಂದವೆ ಸಾಮ್ರಾಜ್ಯವಾಳುತ್ತದೆ. ಭಗವತ್ ಪ್ರೇಮ ಹೃದಯವನ್ನೆಲ್ಲ ತುಂಬಿಬಿಡುತ್ತದೆ. ನಿಜ; ಭಗವದ್ದರ್ಶನವಾದಲ್ಲದೆ ಎಲ್ಲ ಸಂದೇಹಗಳೂ ಪೂರ್ಣವಗಿ ನಿರಸನ ಹೊಂದುವುದಿಲ್ಲ.”

ಭಿದ್ಯತೇ ಹೃದಯ ಗ್ರಂಥಿಶ್ಫಿದ್ಯಂತೇ ಸರ್ವಸಂಶಯಾಃ |
ಕ್ಷೀಯಂತೇ ಚಾಸ್ಯ ಕರ‍್ಮಾಣಿ ತಸ್ಮಿನ್ ದೃಷ್ಟೇ ಪರಾವರೇ ||**

* * ** ಇದೊಂದು ದಂತಕತೆ ವಾಲ್ಮೀಕಿಗೆ ಸಂಬಂಧಪಟ್ಟದ್ದು:

ರತ್ಯಾಕರ ಎಂಬ ಹಗಲುಗಳ್ಳ ವ್ಯಾಧ ಇತರರನ್ನು ತಲೆಬಡಿದು ಕೊಳ್ಳೆಹೊಡೆದಂತೆಯೆ ಕಾಡಿನ ನಡುವೆ ಹೋಗುತ್ತಿದ್ದ ನಾರದಮಹರ್ಷಿನ್ನೂ ಅಡ್ಡಗಟ್ಟಿದನು. ಆದರೆ ಋಷಿಯ ಮಹಿಮೆ ಅವನನ್ನು ಪರಿವರ್ತಿಸಿತು. ತನ್ನ ದುರ್ಮಾರ್ಗವನ್ನು ತ್ಯಜಿಸಿ, ಮಹರ್ಷಿಯಿಂದ ಮಂತ್ರದೀಕ್ಷೆ ಪಡೆದನು. ನಾರದ ಮಹರ್ಷಿ ವ್ಯಾಧ ರತ್ನಾಕರನಿಗೆ ‘ರಾಮ’ ಮಂತ್ರವನ್ನು ಕೊಟ್ಟು ಹೊರಟು ಹೋದ ಮೇಲೆ ವ್ಯಾಧನಿಗೆ ಅದನ್ನು ನೆನಪಿಟ್ಟುಕೊಂಡು ಸರಿಯಾಗಿ ಉಚ್ಚರಿಸಲಾಗಲಿಲ್ಲ. ಅಷ್ಟು ಅಧಃಪತನಕ್ಕೆ ಹೋಗಿತ್ತು ಅವನ ಚೇತನ. ಆದರೂ ಹೊಸ ಉದ್ಧಾರದ ಅಭೀಪ್ಸೆ ಉದ್ದೀಪನವಾಗಿದ್ದುದರಿಂದ ತಪ್ಪು ತಪ್ಪಾಗಿಯೇ ಅದನ್ನು ಹೇಳತೊಡಗಿದನು, ‘ಮರ ಮರಾ’ ಎಂದು! ಮರಾಮರಾಮರಾಮರಾಮ-ಎಂದು ಹೇಳುತ್ತಾ ಹೋದರೂ ಅಕ್ಷರಸಂಯೋಜನೆಯಿಂದ ರಾಮನಾಮವನ್ನೆ ಜಪಸಿದಂತಾಗಿ, ಅವನು ಮಹರ್ಷಿಯಾಗಿ, ಮುಂದೆ ಶ್ರೀಮದ್ ರಾಮಾಯಣವನ್ನು ಬರೆದು ವಾಲ್ಮೀಕಿಯಾದನು.

** ಕಾರ್ಯ ಮತ್ತು ಕಾರಣರೂಪೀ ಬ್ರಹ್ಮದರ್ಶನವಾದಾಗ ದ್ರಷ್ಟಾರನ ಹೃದ್ ಗ್ರಂಥಿ ವಿನಷ್ಟವಾಗುತ್ತದೆ. ಸರ್ವಪ್ರಕಾರ ಸಂಶಯಗಳೂ ಭಿನ್ನವಾಗುತ್ತವೆ, ಮತ್ತು ಆತನ ಕರ್ಮಗಳೆಲ್ಲ ಕ್ಷಯವಾಗುತ್ತವೆ.