ಸಿಂಧು ದೇಶದಿಂದ ಬಂದ ಭಕ್ತರೊಬ್ಬರಿಗೆ ಇಂದು ಮಹಾಪುರುಷಜಿ ಮಂತ್ರ ದೀಕ್ಷೆ ಕೊಟ್ಟರು. ಆ ಭಕ್ತರಿಗೆ ಅವರು ತಮ್ಮ ಮನೆಯಲ್ಲಿದ್ದಾಗಲೆ ಕನಸಿನಲ್ಲಿ ಒಂದು ಮಂತ್ರದೀಕ್ಷೆ ಲಭಿಸಿತ್ತು. ಆದರೆ ಅವರಿಗೆ ಅದರ ಮಹತ್ವ ಏನು ಎಂದು ಒಂದೂ ಅರ್ಥವಾಗದ ಮನಸ್ಸಿನಲ್ಲಿ ಕಳವಳವಾಗಿತ್ತು. ಆದ್ದರಿಂದ ಅವರು ಮಹಾಪುರುಷಜಿಗೆ ಕಾಗದ ಬರೆದು ತಮ್ಮ ಮನೋವ್ಯಗ್ರತೆಯನ್ನು ಹೇಳಿಕೊಂಡಿದ್ದರು; ಅಲ್ಲದೆ ಪ್ರತ್ಯಕ್ಷ ಸಂದರ್ಶನಕ್ಕೆ ಅವಕಾಶ ದಯಪಾಲಿಸಬೇಕೆಂದು ಬೇಡಿಕೊಂಡಿದ್ದರು. ಅಪ್ಪಣೆ ದೊರತೊಡನೆಯ ಆ ದೂರದ ಸ್ಥಳದಿಂದ ಅವರು ಬೇಲೂರಿಗೆ ಧಾವಿಸಿದ್ದರು, ಮಹಾಪುರುಷಜಿಯ ಪದತಲಕ್ಕೆ.

ಆಗ ಬೆಳಿಗ್ಗೆ ಸುಮಾರು ಹತ್ತು ಗಂಟೆ. ಮಹಾಪುರುಷಜಿ ಗಂಗಾವಾರಿಯಿಂದ ಶುಚಿರ್ಭೂತರಾಗಿ ಬಂದು ಹೊಸ ಬಟ್ಟೆ ಉಟ್ಟು, ದೇವರ ಮನೆಗೆ ಹೋಗಿ ಶ್ರೀಗುರುವನ್ನು ಪೂಜಿಸಿದ ತರುವಾಯ ಮಂತ್ರೋಪದೇಶ ಮಾಡಿದರು. ಅದಾದ ಮೇಲೆ, ಅವರ ನಿವಾಸವನ್ನು ಪೂಜಾಗೃಹಕ್ಕೆ ಕೂಡಿಸುವ ತಾರಸಿಯ ಮಾರ್ಗದಿಂದ ಅವರ ತಮ್ಮ ವಾಸದ ಕೋಣೆಗೆ ಹಿಂತಿರುಗಿದಾಗ, ಅವರ ವದನ ಮಂಡಲ ಒಂದು ತೇಜಃಪುಂಜದಿಂದ ಪರಿವೃತವಾಗಿದ್ದಂತೆ ತೋರುತ್ತಿತ್ತು. ಬಂದವರು ನಿಚ್ಚವೂ ಮಾಡುತ್ತಿದ್ದಂತೆ ಕುರ್ಚಿಯ ಮೇಲೆ ಕೂರಲಿಲ್ಲ; ಭಾವಾವೇಶದಿಂದ ತುಸು ಓಲಾಡುತ್ತ ಅತ್ತ ಇತ್ತ ತಿರುಗಾಡತೊಡಗಿದರು; ಕೈತಾಳ ಹಾಕುತ್ತಾ “ಸದ್‌ಗುರು ಬೋಧಿಸಿದರೆ ಭಕ್ತಿ ಜ್ಞಾನ ವಿವೇಕ ವೈರಾಗ್ಯ ಉದ್ದೀಪನವಾಗುತ್ತದೆ; ಬೆಂಕಿ ಒಳಹೊಕ್ಕಾಗಲೆ ಇದ್ದಿಲು ತನ್ನ ಕಾಳಿಕೆಯಿಂದ ಪಾರಾಗಿ ಕೆಂಪಾಗುತ್ತದೆ” ಎಂಬರ್ಥದ ಗೀತೆಯೊಂದನ್ನು ಹಾಡತೊಡಗಿದರು. ಆ ದಿವ್ಯ ಭಾವಪರವಶತೆಯನ್ನು ಯಾವ ಮರ್ತ್ಯಭಾಷೆ ತಾನೆ ವರ್ಣೀಸಿತು? ಅವರ ಕಣ್ಣು ಅರೆ ತೆರೆದಿತ್ತು. ಅವರ ಮನಸ್ಸು ಯಾವುದೊ ಒಂದು ಅತೀಂದ್ರಿಯ ಭೂಮಿಕಾಗಾಮಿಯಾಗಿತ್ತು. ಆ ಹಾಡಿನ ಎರಡು ಚರಣಗಳನ್ನೆ ಮತ್ತೆಮತ್ತೆ ಹಾಡುತ್ತಾ ಅವರು ಕೊಠಡಿಯಲ್ಲಿ ಸುಮ್ಮನೆ ಸುತ್ತಾಡಿದರು. ಅವರ ನೇತ್ರಗಳು ಕೆಂಪಾಗಿ, ತುಂಬ ಪ್ರಯತ್ನದಿಂದ ಮಾತ್ರ ತೆರೆಯುತ್ತಿದ್ದವು, ಪಡವಲ ಗೋಡೆಯ ಮೇಲೆ ಎದುರಿಗೆ ತೂಗುಹಾಕಿದ್ದ ಚಿತ್ರಪಟಗಳಲ್ಲಿ ಶ್ರೀಗುರುಮಹಾರಾಜರ ದರ್ಶನದ ಸಲುವಾಗಿ. ಸುತ್ತಣ ಪ್ರಪಂಚದ ಪ್ರಜ್ಞೆಯ ಅವರಿಗಿರಲಿಲ್ಲ. ಸಹಜವಾಗಿಯೆ ಮಧುರವಾಗಿದ್ದ ಅವರ ವಾಣಿ ಅವರ ಆಧ್ಯಾತ್ಮಿಕ ಅನುಭವದಿಂದ ಮತ್ತೂ ಮಧುರತರವಾಗಿ, ನಾಮಾಮೃತ ಧಾರೆಯೆ ಪ್ರವಹಿಸುವಂತಿತ್ತು. ಬಹಳ ಹೊತ್ತು ಕಳೆದ ಮೇಲೆ, ಅವರು ಅನೈಚ್ಛಿಕವಾಗಿಯೆ ಎಂಬಂತೆ ಕುರ್ಚಿಯಲ್ಲಿ ಕುಳಿತು, ಪೂರ್ಣನಿಮೀಲಿತನಯನರಾಗಿಬಿಟ್ಟರು. ಆಗೊಮ್ಮೆ ಈಗೊಮ್ಮೆ ‘ಜಯಗುರುದೇವ! ಜಯಕೃಪಾಮಯ!’ ಎಂಬ ಉದ್ಗಾರ ಅವರ ಹೃದಯಾಂತರಾಳದಿಂದ ಹೊಮ್ಮುತ್ತಿತ್ತು.

ದೀಕ್ಷೆ ತೆಗೆದುಕೊಂಡ ಆ ಶಿಷ್ಯರು ಮಹಾಪುರುಷಜಿಯ ಉಪದೇಶದಂತೆ ಪೂಜಾಗೃಹದ ವರಾಂಡದಲ್ಲಿ ಅಷ್ಟು ಹೊತ್ತು ಧ್ಯಾನ ಮಾಡುತ್ತಿದ್ದರು. ಈಗ ಅವರು ಈ ಕೊಠಡಿಗೆ ಬಂದು, ಮಹಾಪುರುಷಜಿ ಪದತಲಕ್ಕೆ ಸಾಷ್ಟಾಂಗ ಪ್ರಣಾಮ ಸಲ್ಲಿಸಿ, ನೆಲದಮೇಲೆ ಕುಳಿತು, ಅಶ್ರುತಪೂರ್ಣನೇತ್ರರಾಗಿ ಕೈಮುಗಿದುಕೊಂಡು ಇಂತೆಂದರು: “ತಮ್ಮ ಕೃಪೆ ಇಂದು ನನ್ನ ಮನಸ್ಸಿಗೆ ಶಾಂತಿ ತಂದಿದೆ. ನನಗೆ ಕನಸಿನಲ್ಲಿ ಮಂತ್ರೋಪದೇಶವಾದಂದಿನಿಂದ ಮನಸ್ಸಿಗೆ ನೆಮ್ಮದಿ ಇರಲಿಲ್ಲ. ನನ್ನ ಮನಸ್ಸನ್ನು ಸ್ತಿಮಿತಕ್ಕೆ ತರಲು ಸಾಧ್ಯವಾಗುತ್ತಲೆ ಇರಲಿಲ್ಲ; ತೂಕತಪ್ಪಿ ಹುಚ್ಚುಗಿಚ್ಚು ಹಿಡಿಯಬಹುದೆಂದು ಹೆದರಿದ್ದೆ. ಅಂದು ಸ್ವಪ್ನದಲ್ಲಿ ಲಭಿಸಿದ ಅದೇ ಮಂತ್ರವನ್ನೆ ಇಂದು ತಮ್ಮಿಂದಲೂ ಪಡೆದ ಮೇಲೆ ನಾನು ಸ್ವಪ್ನದಲ್ಲಿ ಕಂಡಿದ್ದೆಲ್ಲವೂ ನಿಜ ಎಂಬ ನಂಬಿಕೆ ಮೂಡಿದೆ. ಆ ಕನಸಿನಲ್ಲಿ ನನ್ನನ್ನು ಆಶೀರ್ವದಿಸಿದರೂ ತಾವೆ ಅಲ್ಲದೆ ಬೇರೆ ಯಾರೂ ಅಲ್ಲ ಎಂಬ ದೃಡ ವಿಶ್ವಾಸವೂ ನನಗುಂಟಾಗಿದೆ.”

ಮಹಾಪುರುಷಜಿ: “ಕನಸಿನಲ್ಲಿ ನಿನಗೆ ಕಂಡವನು ಭಗವಂತನೆ. ನಿನ್ನ ಮೇಲೆ ಆತ ದಯೆ ತೋರಿದ್ದಾನೆ. ಇಂದು ನಿನ್ನನ್ನು ಆಶೀರ್ವದಿಸಿದವನೂ ಭಗವಂತನೆ, ಇನ್ನೊಂದು ರೂಪದಲ್ಲಿ. ಅವನು ದಯಾಮಯ. ಆತನ ಆಶೀರ್ವಾದಕ್ಕೆ ಪಕ್ಷಪಾತವಿಲ್ಲ. ಸರ್ವ ಜೀವರುಗಳಿಗೂ ದಯೆ ತೋರಲು ಈ ಯುಗದ ಅವತಾರನಾಗಿ ಬಂದಿರುವವನೂ ಆತನೆ. ನಾನು ಆತನ ಕಿಂಕರಾನುಚರ ಮಾತ್ರ. ದಯೆ ತೋರುವಾತನು ಅವನೊಬ್ಬನೆ. ಕೃಪೆಮಾಡುವ ಸಾಮರ್ಥ್ಯವಿರುವುದು ದೇವರೊಬ್ಬನಿಗೇ-ಇಷ್ಟೇ ನನಗೆ ತಿಳಿದಿರುವುದೆಲ್ಲ. ಶಾಸ್ತ್ರಗಳೂ ಹೇಳುತ್ತವೆ, ನಿಜವಾದ ಗುರು ಮಂತ್ರದೀಕ್ಷೆ ಕೊಟ್ಟಾಗ, ಆ ಗುರುವಿನ ಆಂತರ್ಯದಲ್ಲಿ ಭಗವಂತನೆ ಆವಿರ್ಭವಿಸುತ್ತಾನೆ; ಅಲ್ಲದೆ, ಆ ಗುರುಹೃದಯದಲ್ಲಿ ನಿಂತ ಶಿಷ್ಯನಿಗೆ ಸ್ಫೂರ್ತಿದಾಯಕನಾಗುತ್ತಾನೆ. ನಿಜವಾದ ಗುರು ಭಗವಂತನೊಬ್ಬನೆ. ಮನುಷ್ಯ ಎಂದಿಗೂ ಗುರುವಾಗಲಾರ. ನಿನ್ನ ಪೂರ್ವಜನ್ಮಗಳ ಪುಣ್ಯಸಂಸ್ಕಾರಗಳ ಫಲವಾಗಿ ಭಗವಂತನ ಚರಣತಲದಲ್ಲಿ ನೀನಿಂದು ಆಶ್ರಯ ಪಡೆಯಲು ಸಮರ್ಥನಾಗಿದ್ದೀಯೆ; ಆತನು ಪತಿತೋದ್ಧಾರಕ. ನಿನ್ನನ್ನು ನಾನು ಆತನ ಚರಣಾವಿಂದಗಳಿಗೆ ಅರ್ಪಿಸುತ್ತೇನೆ; ನಿನ್ನನ್ನು ಅವನವನನ್ನಾಗಿ ಮಾಡುತ್ತೇನೆ.”

ಶಿಷ್ಯ: “ಮಹಾರಾಜ್, ನಾನು ಭಗವಂತನನ್ನು ಕಾಣಲಾರದವನಾಗಿದ್ದೇನೆ. ನನಗೆ ಗೊತ್ತಿರುವುದು, ತಾವು ನನ್ನನ್ನು ಆಶೀರ್ವದಿಸಿದ್ದೀರಿ ಎಂಬುದು ಮಾತ್ರ.”

ಮಹಾಪುರುಷಜಿ: “ನಿನಗೆ ಹಾಗೆನ್ನಿಸುತ್ತದೆ. ಆದರೆ ನನಗೆ ಗೊತ್ತು, ನಿನಗೆ ಇಂದು ಕೃಪೆದೋರಿರುವವರು ಶ್ರೀಗುರುಮಹಾರಾಜರೆ. ಇವತ್ತಿನಿಂದ ನೀನು ಅವರವನು. ಇನ್ನು ಮೇಲೆ ನೀನು ಅವರನ್ನು ಎಂದಿಗಿಂತಲೂ ಹೆಚ್ಚಾಗಿ ಬಲವಾಗಿ ಹಿಡಿಯಬೇಕು. ನಿನ್ನ ಒಳಗೂ ಹೊರಗೂ ಅವರನ್ನೆ ಕಾಣಲು ಪ್ರಯತ್ನಿಸು. ಅವರು ನಿನಗೆ ಅತ್ಯಂತ ಆತ್ಮೀಯರೂ ಹತ್ತಿರದವರೂ ಎಂಬುದನ್ನು ಸದಾ ದೃಢವಾಗಿ ನಂಬು. ಈ ಪ್ರಪಂಚ ಎಷ್ಟೆಂದರೂ ನಶ್ವರ. ತಂದೆ, ತಾಯಿ, ಹೆಂಡತಿ, ಮಕ್ಕಳು, ನೆಂಟರು-ಇವರೆಲ್ಲರೂ ಎರಡುದಿನದ ಬಂಧು ಬಾಂಧವರು; ತಾತ್ಕಾಲಿಕ ಮಾತ್ರ. ಆದರೆ ನಮಗೂ ಶ್ರೀಗುರುವಿಗೂ ಇರುವ ಸಂಬಂಧ ಶಾಶ್ವತವಾದದ್ದು. ದೇಹದ ಸಾವಿನೊಂದಿಗೆ ಅದು ವಿನಾಶ ಹೊಂದುವುದಿಲ್ಲ. ಇಂದು ನಿನ್ನ ಹೃದಯದಲ್ಲಿ ಬಿತ್ತಿರುವ ಈ ದಿವ್ಯ ಮಂತ್ರದ ಅನರ್ಘ್ಯವಾದ ಬೀಜ ಮೊಳೆಯುತ್ತದೆ; ದಿನೇ ದಿನೇ ಎರೆಯುವ ಭಕ್ತಿಪ್ರೇಮಗಳ ವಾರಿಯಿಂದ ಬೆಳೆಯುತ್ತದೆ; ಕಾಲಕ್ರಮೇಣ ಅಮೃತಕರ ಮಾಹಾವೃಕ್ಷವಾಗಿ ನಿನ್ನ ಬದುಕನ್ನೆಲ್ಲ ಧನ್ಯವನ್ನಾಗಿ ಮಾಡುತ್ತದೆ. ಮಾನವ ಜನ್ಮ ಸಾರ್ಥಕಕಾರಿಗಳಾದ ನಾಲ್ಕು ಪುರುಷಾರ್ಥಗಳೂ (ಧರ್ಮ, ಅರ್ಥ, ಕಾಮ, ಮೋಕ್ಷ) ನಿನಗೆ ಸಿದ್ಧಿಸುತ್ತವೆ. ನಿನ್ನ ಬಯಕೆಗಳೆಲ್ಲ ಈಡೇರುತ್ತವೆ.”

ಶಿಷ್ಯ: “ನಾನೊ ಸಲಸಲಕ್ಕೂ ಎಡವುತ್ತಿರುವ ಜೀವ. ಜೀವನದ ಜಟಿಲ ಬಂಧನಗಳ ನಡುವೆ ದಿಕ್ಕುತಪ್ಪಿದ್ದೇನೆ. ಪ್ರಾಪಂಚಿಕ ಮಾಯೆಗೆ ಸಿಕ್ಕ ತಮ್ಮ ಕೃಪಾ ಪೂರ್ಣ ಪದತಲವನ್ನು ಮರೆಯದಂತೆ ನನಗೆ ಆಶೀರ್ವಾದಮಾಡಿ ಅನುಗ್ರಹಿಸಬೇಕು. ಸಂಸಾರದಲ್ಲಿ ಹೇಗೆ ಬಾಳಬೇಕು; ಮಾಯೆಯಲ್ಲಿ ಮುಳುಗಿಯೆ ಹೋಗದಂತೆ ಇರಲು ಏನು ಮಾಡಬೇಕು? ಕೃಪೆಮಾಡಿ ತಮ್ಮ ಉಪದೇಶದ ಮಾರ್ಗದರ್ಶನ ನೀಡಿದರೆ ಕೃತಾರ್ಥನಾಗುತ್ತೇನೆ. ತಮ್ಮ ಈ ದೀನಾತಿದೀನ ಶಿಷ್ಯನನ್ನು ಹೇಗಾದರೂ ಮಾಡಿ ರಕ್ಷಿಸಲೇಬೇಕು.”

ಹೀಗೆ ಹೇಳುತ್ತಾ ಹೇಳುತ್ತಾ ಆ ಶಿಷ್ಯನು ಮಹಾಪುರುಷಜಿಯ ಪಾದ ಪದ್ಮಗಳನ್ನು ಹಿಡಿದುಕೊಂಡು ಕಂಬನಿಗರೆಯತೊಡಗಿದನು.

ಆತನ ಹೃತ್ಪೂರ್ವಕ ಶ್ರದ್ಧೆಯನ್ನು ನೋಡಿ ಮಹಾಪುರುಷಜಿಯ ಬಹಿರಂಗವಾಗಿಯೆ ಭಾವಾವಿಷ್ಟರಾದಂತೆ ತೋರಿದರು. ಅತ್ಯಂತ ವಾತ್ಸಲ್ಯಪೂರಿತವಾದ ಸಕರುಣ ಧ್ವನಿಯಿಂದ ಹೇಳತೊಡಗಿದರು: “ವತ್ಸ, ನಿನಗಾಗಲೆ ನಾನು ಹೇಳಿದ್ದೇನೆ, ನಿನ್ನನ್ನು ಶ್ರೀಗುರುದೇವನ ಪದಕ್ಕೆ ಅರ್ಪಿಸಿದ್ದೇನೆ ಎಂದು. ಆತನೂ ಕೃಪೆಯಿಟ್ಟು ನನ್ನ ಅರ್ಪಣೆಯನ್ನು ಸ್ವೀಕರಿಸಿದ್ದಾನೆ; ನಿನ್ನ ಹೊಣೆಯನ್ನೆಲ್ಲ ಆತನೆ ಹೊತ್ತುಕೊಂಡಿದ್ದಾನೆ. ನಿನ್ನನ್ನು ಸ್ವೀಕರಿಸುವುದಕ್ಕಾಗಿಯೆ ಆತನು ನಿನ್ನನ್ನು ಇಲ್ಲಿಗೆ ಬರುವಂತೆ ಪ್ರೇರಿಸಿದ್ದು. ಇಂದು ನಿನಗೆ ಹೊಸ ಜನ್ಮ ಬಂದಿದೆ. ಶ್ರೀಗುರು ನಿಜವಾಗಿದ್ದರೆ ನಾನು ಹೇಳುವುದು ಅಷ್ಟೆ ಸತ್ಯವೆಂದು ತಿಳಿ. ನಿನ್ನ ಮನಸ್ಸು ಪ್ರಾಣ ಜೀವ ಎಲ್ಲವನ್ನು ಆತನಿಗೆ ನಿವೇದಿಸಿ ಆತನಲ್ಲಿ ಆಶ್ರಯ ಪಡೆ. ನಿನ್ನ ಹೊಣೆ ಹೊರೆಗಳನ್ನೆಲ್ಲಾ ಆತನ ಮೆಲೆ ಹಾಕಿಬಿಡು. ಭಕ್ತದೀನನಾಗಿ ಹೋಗಿ ಅವನನ್ನು ಶ್ರದ್ಧೆಯಿಂದ ಪ್ರಾರ್ಥಿಸಿ ಕರೆ. ಅಷ್ಟೆ ನೀನು ಮಾಡಬೇಕಾದ್ದು; ಬೇರೆ ಏನೂ ಇಲ್ಲ. ಏನೇ ಬರಲಿ, ಎಲ್ಲಿಯೇ ಇರಲಿ, ಆತನ ರಕ್ಷೆ ಇದ್ದೇ ಇರುತ್ತದೆ. ಸಂಸಾರದಲ್ಲಿ ಹೇಗಿರಬೇಕು ಎಂದು ಕೇಳಿದೆಯಲ್ಲಾ? ಅದಕ್ಕೆ ಉತ್ತರ ಶ್ರೀರಾಮಕೃಷ್ಣರ ‘ವಚನವೇದ ‘ದಲ್ಲಿ ಅವರ ಸ್ವಂತ ಮಾತುಗಳಲ್ಲಿಯೆ ನಿನಗೆ ದೊರೆಯುತ್ತದೆ. ನಿನ್ನ ಎಲ್ಲ ಕರ್ತವ್ಯಗಳನ್ನೂ ತಪ್ಪದೆ ಮಾಡುತ್ತಿರು. ಆದರೆ ಮನಸ್ಸು ಮಾತ್ರ ಭಗವಂತನಲ್ಲಿಯೆ ನೆಲೆಸಿರಲಿ, ಶ್ರೀಮಂತರ ಮನೆಯ ಕೆಲಸದವಳಂತೆ. ಅಂದರೆ ಅವಳು ಕೆಲಸಗಳನ್ನೆಲ್ಲ ಮಾಡುತ್ತಿರುತ್ತಾಳೆ, ಮನಸ್ಸು ಮಾತ್ರ ಊರಿನ ಹೊರಗಡೆ ಇರುವ ತನ್ನ ಮನೆಯಲ್ಲಿರುತ್ತದೆ. ಹಾಗೆಯೆ ನಾವು ಪ್ರಪಂಚದಲ್ಲಿ ಬದುಕಬೇಕು, ಸಂಗವರ್ಜಿತರಾಗಿ. ನೀನು ನಿನ್ನ ಕುಟುಂಬದ ಜನರೆಲ್ಲರ-ಹೆಂಡತಿ ಮಕ್ಕಳು ನಂಟರು ಇಷ್ಟರು-ಎಲ್ಲರ ಸೇವೆಯನ್ನೂ ಮಾಡುತ್ತಿರಬೇಕು; ಆದರೆ ಮನಸ್ಸಿನ ಮನಸ್ಸಿನೊಳಗೆ ಅರಿತಿರಬೇಕು. ದೇವರೊಬ್ಬನೆ ನಿನ್ನವನೆಂದು, ನಿನ್ನ ಪ್ರಾಣದ ಪ್ರಾಣ ಎಂದು. ಅವನನ್ನು ಬಿಟ್ಟು, ನಿಜವಾಗಿಯೂ ನನ್ನವರು ಎಂದು ಹೇಳಿಕೊಳ್ಳುವಂತಹರು ಯಾರು ಇಲ್ಲ; ಹಾಗೆಂದ ಮಾತ್ರಕ್ಕೆ ನಿನ್ನ ಕುಟುಂಬದ ಯೋಗಕ್ಷೇಮ ನಿರ್ಲಕ್ಷಿಸಬೇಕು ಎಂದರ್ಥವಲ್ಲ. ನಿನ್ನ ಸರ್ವಸಾಮರ್ಥ್ಯಕ್ಕೂ ಸಾಧ್ಯವಾಗುವ ಪ್ರಮಾಣದಲ್ಲಿ ಅವರೆಲ್ಲರ ಸೇವೆ ಮಾಡಬೇಕು. ಅವರನ್ನೆಲ್ಲ ನೋಡಿಕೊಳ್ಳಲೆಂದು ನಿನಗೆ ಕೊಟ್ಟಿರುವ ಭಗವಂತನ ಮಕ್ಕಳೆಂದೋ ಅಥವಾ ಭಗವದಂಶಗಳೆಂದೋ ಭಾವಿಸಿ, ಅವರೊಡನೆ ನೀನು ದೇವರ ವಿಚಾರವಾಗಿ ಮಾತಾಡಬೇಕು; ಅವರ ಹೃದಯಗಳಲ್ಲಿ ಭಗವದ್‌ಭಕ್ತಿ ಮೂಡವಂತೆ ಪ್ರಯತ್ನಿಸಬೇಕು. ನೀನೇನೋ ಸಂಸಾರದಲ್ಲಿರಬಹುದು, ಆದರೆ ನಿನ್ನ ಮನಸ್ಸು ಅದರಲ್ಲಿಯೇ ಮುಳುಗಿರಬಾರದು, ಅದರಿಂದ ಬಂಧಿತವಾಗಬಾರದು. ಶ್ರೀಗುರುಮಹಾರಾಜರು ಹೇಳುತ್ತಿದ್ದರು: ‘ನಿತ್ಯಾನಿತ್ಯ ವಿವೇಕ ವಿಚಾರ ಅತ್ಯಂತ ಆವಶ್ಯಕ. ಜಗತ್ತು ನಶ್ವರ, ದೇವನೊಬ್ಬನೆ ಸತ್ಯ ಮತ್ತು ಶಾಶ್ವತ, ಎಂಬ ಬುದ್ಧಿ ಸ್ಥಿರವಾಗಿರಬೇಕು. ಬರಿಯ ಹಣ ಏನು ಕೊಟ್ಟೀತು? ಆಹಾರ, ವಸನ, ನಿವಾಸ ಇವುಗಳನ್ನು ಕೊಡಬಲ್ಲುದು, ಅಷ್ಟೆ. ಈಶ್ವರ ಸಾಕ್ಷಾತ್ಕಾರವನ್ನು ಕೊಡುತ್ತದೆಯೆ? ಆದ್ದರಿಂದಲೆ ಹಣ ಸಂಪಾದನೆ ಎಂದಿಗೂ ಜೀವನದ ಮುಖ್ಯ ಗುರಿಯಾಗಲಾರದು. ಹೀಗೆಲ್ಲ ಆಲೋಚಿಸುವುದಕ್ಕೆ ವಿವೇಕವಿಚಾರ ಎನ್ನುತ್ತಾರೆ.’ ಲೌಕಿಕವಾದ ಮಹತ್ವಾಕಾಂಕ್ಷೆ ನಿನ್ನ ಮನಸ್ಸನ್ನು ಅತಿಯಾಗಿ ಆಕ್ರಮಿಸದಂತೆ ನೋಡಿಕೊ. ಜೀವನಕ್ಕೆ ಎಷ್ಟು ಆವಶ್ಯಕವೂ ಅಷ್ಟನ್ನು ನೀನು ಈಗಾಗಲೇ ಸಂಪಾದಿಸಿದ್ದೀಯೆ. ಅಷ್ಟರಿಂದಲೆ ತೃಪ್ತಿಯಿಂದಿರು. ಮನಸ್ಸಿನ ಸಹಜ ಪ್ರವೃತ್ತಿಯೆ ಇಂದ್ರಿಯ ಸುಖಗಳ ಕಡೆಗಿರುತ್ತದೆ; ವಿಷಯಲೋಲುಪತೆಯ ಇಳಿಜಾರಿನಲ್ಲಿ ಜಾರುವುದೆ ಅದಕ್ಕೆ ಸ್ವಾಭಾವಿಕ. ಕಾಮಿನಿ, ಕಾಂಚನ, ಕೀರ್ತಿ, ಗೌರವ ಇತ್ಯಾದಿಗಳ ಕಡೆಗೇ ಅದರ ಪಾತ. ಹರಿದಾಡುವ ಮನಸ್ಸನ್ನು ಹಿಡಿದಿಟ್ಟು ಭಗವಂತನ ಪಾದಪದ್ಮಗಳಲ್ಲಿ ಅದು ಸದಾ ನಡೆಸುವಂತೆ ಮಾಡುವುದೇ ನಿನ್ನ ಮುಂದಿನ ಕರ್ತವ್ಯ. ಈಶ್ವರ ಸಾಕ್ಷಾತ್ಕಾರವೆ ನಮ್ಮ ಬಾಳಿನ ಅತ್ಯಂತ ಮಹೋನ್ನತವಾದ ಆಕಾಂಕ್ಷೆಯಾಗಬೇಕು. ನಿನ್ನ ಮನಸ್ಸು, ಹೃದಯ, ಬುದ್ಧಿ, ಭಾವ ಎಲ್ಲವೂ ಆ ದಿವ್ಯ ಗುರಿಯ ಸಿದ್ಧಿಗಾಗಿ ನಿರಂತರವೂ ಯತ್ನಶೀಲವಾಗಿರಲಿ.”

ಹೀಗೆ ಮಾತನಾಡುತ್ತಿದ್ದಾಗಲೆ ಪ್ರಸಾದ ಸ್ವೀಕಾರಕ್ಕಾಗಿ ಭಕ್ತರನ್ನು ಕರೆಯುವ ಗಂಟೆ ಘೋಷಿಸಿತು. ಮಹಾಪುರುಷಜಿ ಶಿಷ್ಯನನ್ನು ಊಟಕ್ಕೇಳುವಂತೆ ಹೇಲಿ ಕಳುಹಿಸಿಕೊಟ್ಟರು.

ತುಸು ಹೊತ್ತಿನ ಮೇಲೆ ಒಬ್ಬ ಅನುಚರ ಮಹಾಪುರುಷಜಿಯಗಾಗಿ ಸ್ವಲ್ಪ ಪ್ರಸಾದ ತಂದರು. ಅವರು ಊಟಕ್ಕೆ ಕುಳಿತರು. ಪೂಜಾಗೃಹದಿಂದ ಹಿಂತಿರುಗಿದಾಗಿನಿಂದ ಅವರು ಯಾವುದೇ ಒಂದು ದಿವ್ಯಸ್ಫೂರ್ತಿವಶರಾಗಿದ್ದಂತೆ ತೋರುತ್ತಿದ್ದರು. ಅವರ ಮನಸ್ಸು ಅಂತರ್ಮುಖವಾಗಿತ್ತು; ಕಣ್ಣು ಅರೆಮುಚ್ಚಿದ್ದುವು; ತಾವು ಏನನ್ನು ಊಟಮಾಡುತ್ತಿದ್ದಾರೆ ಎಂಬುದರ ಕಡೆಗೂ ಅವರ ಗಮನ ಹೋದಂತಿರಲಿಲ್ಲ. ಅಭ್ಯಾಸಬಲದಿಂದ ಎಂಬಂತೆ ತುತ್ತುಗಳನ್ನು ಬಾಯಿಗೆ ಹಾಕಿಕೊಳ್ಳುತ್ತಿದ್ದರು. ಏನಾದರೂ ಸಂಭಾಷಣೆಗೆ ತೊಡಗಿದರೆ ಅವರ ಮನಸ್ಸು ಕೆಳಗಿಳಿಯಬಹುದೆಂದು ಭಾವಿಸಿ ಅನುಚರರು ಮೌನಭಂಗಮಾಡಿ ಮಾತನಾಡಿದನು.

“ಮಹಾರಾಜ್, ನೀವು ಇವತ್ತು ದೀಕ್ಷೆಯ ಕಾಲದಲ್ಲಿ ದೇವರ ಮನೆಯಲ್ಲಿ ಬಹಳಹೊತ್ತು ಕಳೆಯಬೇಕಾಗಿಬಂತು.”

ಮಹಾಪುರುಷಜಿ ಬೆಚ್ಚಿದಂತಾದರು. ನಿದ್ರೆಯಿಂದೇಳುವಂತೆ ಹೇಳಿದರು ತಲೆ ಎತ್ತಿ: “ಹೌದು, ಆತ ತುಂಬ ಭಕ್ತವಂತ. ಶ್ರೀಗುರುಮಹಾರಾಜ್ ಆತನ ಮೇಲೆ ಕೃಪೆದೋರಿದ್ದಾರೆ. ಇಲ್ಲದಿದ್ದರೆ ಆತನಿಗೆ ಅಂತಹ ಭಕ್ತಿ ಎಲ್ಲಿಂದ ಬರಬೇಕು? ದೀಕ್ಷಾ ಸಮಯದಲ್ಲಿ ಶಿಷ್ಯನ ಅಂತಸ್ಸತ್ವವನ್ನು ಚೆನ್ನಾಗಿ ತಿಳಿದುಕೊಳ್ಳಬಹುದು. ವಿಶೇಷ ಆಧ್ಯಾತ್ಮಿಕ ಪ್ರವೃತ್ತಿ ಇರುವವರು ಮಂತ್ರಸ್ವೀಕಾರ ಕಾಲದಲ್ಲಿ ದಿವ್ಯಭಾವದಿಂದ ಅವಶರಾಗುತ್ತಾರೆ; ಕಣ್ಣೀರು ಸುರಿಸುವುದು, ಮೈಕಂಪಿಸುವುದು, ನವಿರೇಳುವುದು ಮೊದಲಾದ ಚಿಹ್ನೆಗಳಿಂದ ಅದು ಪ್ರಕಟವಾಗುತ್ತದೆ; ಗಂಭೀರ ಧ್ಯಾನದಲ್ಲಿ ಮಗ್ನರಾಗಿಬಿಡುತ್ತಾರೆ. ಈ ಶಿಷ್ಯ ಆ ತರಹದವನು ಎಂದು ಕಂಡುಕೊಂಡೆ. ಮಂತ್ರ ಕಿವಿಗೆ ಬಿದ್ದೊಡನೆಯ ಆತನ ದೇಹ ನಡುಗತೊಡಗಿತು; ಎಂತಹ ಭಕ್ತಿಯ ಬಾಷ್ಪಧಾರೆ ಆತನ ಕಣ್ಣಿಂದ ಹರಿಯಿತು! ಕಡೆಗಣ್ಣುಗಳಿಂದ ಅಶ್ರುಬಿಂದುಗಳೂ ಮಾಲೆಮಾಲೆಯಾಗಿ ಉರುಳಿದವು; ಅದನ್ನು ಕಂಡು ನನಗೆ ಮಹದಾನಂದವಾಯಿತು. ನಿಜವಾದ ಭಕ್ತನಿಗೆ ದೀಕ್ಷೆ ಕೊಡುವುದೆಂದರೆ ಒಂದು ಆನಂದದ ಸಂಗತಿ; ಮಂತ್ರದೀಕ್ಷೆ ನಿಜವಾಗಿಯೂ ಸಾರ್ಥಕವಾಗುತ್ತದೆ, ಸಫಲವಾಗುತ್ತದೆ. ಯಾರಿಗೆ ಮಂತ್ರ ಪಡೆಯುವ ಕಾಲ ಪರಪಕ್ವವಾಗಿರುತ್ತದೆಯೊ ಅಂತವರಿಗೆ ಅವರ ಹೃದಯಪದ್ಮ ಅದನ್ನು ಸ್ವೀಕರಿಸಲು ಕಾತರವಾಗಿ ಬಾಯ್ದೆರೆದಂತೆ ಅರಳಿರುತ್ತದೆ; ಆದ್ದರಿಂದಲೆ ಮಂತ್ರವನ್ನು ಪಡೆದೊಡನೆ ಅದನ್ನು ತನ್ನ ವಕ್ಷದಲ್ಲಿ ಅತ್ಯಂತ ಆಸಕ್ತಿಯಿಂದ ಮುಚ್ಚಿಟ್ಟು ಕೊಳ್ಳುತ್ತದೆ. ಇಷ್ಟುಹೊತ್ತು ನಾನು ಶ್ರೀಗುರುಮಹಾರಾಜರ ಕೃಪಾಮಹಿಮೆಯನ್ನೆ ಕುರಿತು ಆಲೋಚಿಸುತ್ತಿದ್ದೆ; ಮತ್ತೇನನ್ನೂ ಅಲ್ಲ. ಆಹಾ; ಎಷ್ಟೊಂಉದ ಜನರಿಗೆ ಎಷ್ಟೆಲ್ಲ ರೀತಿಗಳಿಂದ ಅವರ ಆಶೀರ್ವಾದ ದೊರೆಯುತ್ತಿದೆ! ಈ ದೇಶದಲ್ಲಿ ಮತ್ತು ಹೊರದೇಶಗಳಲ್ಲಿ ಅವರ ಕೃಪೆಗೆ ಪಾತ್ರರಾಗುತ್ತಿರುವ ಜನಗಳ ಸಂಖ್ಯೆ ಅಸಂಖ್ಯೇಯ; ಯಾರಿಗಾದರೂ ಲೆಕ್ಕ ಇಡಲು ಸಾಧ್ಯವೆ? ಜಯ್ ಗುರು ಮಹಾರಾಜ್!”

ಅನುಚರ: “ಆದರೆ ದೀಕ್ಷಾಸಮಯದಲ್ಲಿ ಎಲ್ಲರಿಗೂ ಅಂತಹ ಪರವಶತೆ, ಉನ್ಮೇಷ ಉಂಟಾಗಲು ಸಾಧ್ಯವೆ? ಅಂತಹ ಭಾವೋನ್ಮೇಷನ ಇಲ್ಲದವರು ನಿಮ್ಮ ಆಶೀರ್ವಾದದಿಂದ ಲಾಭ ಪಡೆಯುವುದಿಲ್ಲವೆ, ಮಹಾರಾಜ್? ಅಂಥವರೂ ಸಾಧನೆಯಲ್ಲಿ ಮುಂದುವರಿಯುವುದಿಲ್ಲವೆ?”

ಮಹಾಪುರುಷಜಿ: “ಹೌದು, ಏಕೆ ಮುಂದುವರಿಯುವುದಿಲ್ಲ? ಅವರೂ ಮುಂದುವರಿದೇವರಿಯುತ್ತಾರೆ; ಸ್ವಲ್ಪ ನಿಧಾನವಾಗಬಹುದು, ಅಷ್ಟೆ. ಸಿದ್ಧ ಪುರುಷನಾದವನಿಗೆ ಶಿಷ್ಯನ ಮನಸ್ಸನ್ನು ರೂಪಿಸುವ ಶಕ್ತಿಯಿರುತ್ತದೆ. ಕೆಲವು ದಿನಗಳಲ್ಲಿಯೆ ಅವನ ಮನಸ್ಸನ್ನು ಆಧ್ಯಾತ್ಮಿಕದ ಕಡೆಗೆ ತಿರುಗಿಸಿಬಿಡಬಲ್ಲನು. ಯಾರಿಗಾದರೂ ಒಬ್ಬನಿಗೆ ಸಿದ್ಧಿಯನ್ನು ತಂದುಕೊಟ್ಟ ಒಂದು ಮಂತ್ರದ ಶಕ್ತಿ ಅದನ್ನು ಇನ್ನೊಬ್ಬನಿಗೆ ನೀಡಿದಾಗಲೂ ಅಪ್ರತಿಹತಿವಾಗುತ್ತದೆ. ಅದರಲ್ಲೂ ಸ್ವತಃ ಆತ್ಮಸಾಕ್ಷಾತ್ಕಾರ ಮಾಡಿಕೊಂಡ ಗುರುವಿನಿಂದ ಅದು ಬಂದಿತೆಂದರೆ ಅದರ ಶಕ್ತಿ ಅತ್ಯಂತ ದುರ್ದಮ್ಯವಾಗುತ್ತದೆ. ಶ್ರೀಗುರುಮಹಾರಾಜ್ ಹೇಳುತ್ತಿದ್ದರು, ಸಿದ್ಧ ಗುರು ದೀಕ್ಷೆಯಿರುತ್ತರೆ ಶಿಷ್ಯನ ಅಹಂಕಾರ ಮೂರೇ ಕೂಗಿಗೆ ನೆಗೆದು ಬೀಳುತ್ತದೆ ಎಂದು.* ಆದರೆ ಗುರು ಸಿದ್ಧನಲ್ಲದಿದ್ದರೆ ಶಿಷ್ಯನ ಬಂಧನ ವಿಮೋಚನವಾಗುವುದಿಲ್ಲ; ಅವನಿಗೆ ಮುಕ್ತಿಯೂ ದೊರೆಯುವುದಿಲ್ಲ.”

* * ** ಶ್ರೀರಾಮಕೃಷ್ಣ ‘ವಚನವೇದ ‘ದಲ್ಲಿ ಬರುವ ‘ಹಾವು-ಕಪ್ಪೆ ‘ಯ ದೃಷ್ಟಾಂತಕಥೆಗೆ ಈ ಸಂದರ್ಭ ಅನ್ವಯವಾಗಿದೆ. ನೀರೊಳ್ಳೆಹಾವು ಕಪ್ಪೆಯನ್ನು ಹಿಡಿದು ನುಂಗತೊಡಗಿದರೆ ಆ ಕಪ್ಪೆ ಬಹು ದೀರ್ಘಕಾಲ ಕೂಗಿಕೊಳ್ಳಬೇಕಾಗುತ್ತದೆ. ಕಪ್ಪೆ ಸಾಯುವುದೂ ಇಲ್ಲ; ಹಾವಿಗೂ ಅದನ್ನು ಬೇಗ ನುಂಗಲು ಸಾಮರ್ಥ್ಯವಿರುವುದಿಲ್ಲ. ಆದರೆ ವಿಷದ ಸರ್ಪ ಹಿಡಿಯಿತೆಂದರೆ ಕಪ್ಪೆಗೆ ಮೂರು ಸಾರಿ ಒರಲುವುದಕ್ಕೂ ಸಮಯವಿರುವುದಿಲ್ಲ.