ಬೆಳಗಿನ ಹೊತ್ತು. ಮಹಾಪುರುಷಜಿ ದೇವರ ಮನೆಯಿಂದ ಹಿಂತಿರುಗುತ್ತಿದ್ದರು. ತಮ್ಮ ಭಾವದಲ್ಲಿಯೆ ತನ್ಮಯರಾಗಿ ಬಾಯಲ್ಲಿ ಏನೊ ಮೆಲ್ಲನೆ ಹಾಡಿಕೊಳ್ಳುತ್ತಿದ್ದರು, ಮೃಗಚರ‍್ಮಾಸನವನ್ನು ಬಗಲಲ್ಲಿಟ್ಟುಕೊಂಡು. ತಮ್ಮ ಕೊಠಡಿಯನ್ನು ದೇವರಮನೆಗೆ ಜೋಡಿಸಿದ್ದ ತಾರಸಿದಾರಿಯಲ್ಲಿ ನಡೆದು ಬರುತ್ತಾ ದಕ್ಷಿಣೇಶ್ವರದ ಕಡೆ ಮುಖಮಾಡಿ ಕೈ ಜೋಡಿಸಿ ಪ್ರಣಾಮ ಮಾಡಿದರು; ಹಾಗೆಯೆ ಎದುರು ಹರಿಯುತ್ತಿದ್ದ ಗಂಗಾಮಾತೆಗೂ ನಮಿಸಿ, ತಮ್ಮ ಕೊಠಡಿಗೆ ಹೋದರು. ಮಠದ ಸಂನ್ಯಾಸಿಗಳೂ ಬ್ರಹ್ಮಚಾರಿಗಳೂ ತಮ್ಮ ಧ್ಯಾನ ಜಪಗಳನ್ನು ಪೂರೈಸಿ, ಒಬ್ಬೊಬ್ಬರಾಗಿ ಬಂದು ಅವರಿಗೆ ಪ್ರಣಾಮ ಸಲ್ಲಿಸಿ ಹೊರಗೆ ಹೋದರು. ಅವರು ಯಾರೊಬ್ಬರೊಡನೆಯೂ ಏನನ್ನೂ ಮಾತನಾಡಲಿಲ್ಲ. ಆತ್ಮಸ್ವಭಾವರಾಗಿ ಸುಮ್ಮನಿದ್ದರು. ತುಸು ಹೊತ್ತಿನಮೇಲೆ ಒಬ್ಬರು ಹಿರಿಯ ಸಾಧುಗಳು ಪ್ರವೇಶಿಸಿ. ನಮಸ್ಕರಿಸಿ ಕುಶಲಪ್ರಶ್ನೆ ಕೇಳಿದರು. ಆ ಸಂನ್ಯಾಸಿಯು ಮಠದ ದೈನಂದಿನ ವ್ಯವಹಾರವನ್ನೆಲ್ಲ ನೋಡಿಕೊಲ್ಳುವವರು. ಮಹಾಪುರುಷಜಿಯೊಡನೆ ಕಾರ್ಯ ಕಲಾಪಗಳ ವಿಚಾರವಾಗಿ ಸಾಮಾನ್ಯ ಮಾತುಕತೆ ನಡೆಸಿದ ಮೇಲೆ ಆ ಸಂನ್ಯಾಸಿ ಕೇಳಿದರು,  “ಮಹಾರಾಜ್, ಈಗ ದಕ್ಷಿಣೇಶ್ವರ ಮತ್ತು ಅದಕ್ಕೆ ಸಂಬಂಧಪಟ್ಟ ಆಸ್ತಿ ಎಲ್ಲವನ್ನೂ ರಿಸೀವರ್ ಕೈಗೆ ತೆಗೆದುಕೊಂಡಾಯಿತಲ್ಲಾ, ಅದರಿಂದೇನಾದರೊ ಒಳ್ಳೆಯದಾಗುತ್ತದೆಯೆ!

ಮಹಾಪುರುಷಜಿ: “ನನಗನ್ನಿಸುತ್ತದೆ, ಒಳ್ಳೆಯದಾಗಬಹುದು ಎಂದು. ಇತ್ತೀಚೆಗೆ ತಾಯಿಯ ಸೇವಾಪೂಜಾದಿ ಸರಿಯಾಗಿ ನಡೆಯದೆ, ತುಂಬ ಕೆಟ್ಟು ಹೋಗಿತ್ತು. ಅಮ್ಮನವರ ಇಚ್ಛೆಯಿಂದಲೆ ಈ ವ್ಯವಸ್ಥೆ ಆಗಿದೆ ಎಂದು ತೋರುತ್ತದೆ. ದಕ್ಷಿಣೇಶ್ವರವೇನು ಸಾಮಾನ್ಯ ಸ್ಥಾನವೆ? ಜೀವರ ಕಲ್ಯಾಣಕ್ಕಾಗಿ ಸ್ವಯಂ ಭಗವಂತನೆ ನರದೇಹ ಧಾರಣಮಾಡಿ ಅಲ್ಲಿ ಕಠೋರ ತಪಸ್ಯೆ ಆಚರಿಸಿದ್ದಾನೆ. ಅಂತಹ ಸಾಧನೆಯನ್ನು ಜಗತ್ತಿನ ಇತಿಹಾಸ ಹಿಂದೆಂದೂ ಕಂಡಿಲ್ಲ. ಮುಂದೆಯೂ ಕಾಣಲಾರದು ಎನಿಸುತ್ತದೆ. ದಕ್ಷಿಣೇಶ್ವರ ಎಂದರೆ ಸರ್ವತೀರ್ಥಗಳ ಸಮಾವೇಶ, ಅಲ್ಲಿರುವ ಒಂದೊಂದು ಧೂಳಿನ ಕಣವೂ ಪವಿತ್ರ. ಹಿಂದುವಾಗಲಿ ಮುಸಲ್ಮಾನನಾಗಲಿ ಕ್ರೈಸ್ತನಾಗಲಿ, ಅಥವಾ ಶೈವ ಶಾಕ್ತ ವೈಷ್ಣವರಲ್ಲಿ ಯಾರೇ ಆಗಲಿ ಎಲ್ಲ ಧರ್ಮದ ಎಲ್ಲ ಮತದ ಸಾಧಕರಿಗೆ ಅದು ಮಹಾತೀರ್ಥಯಾತ್ರಾ ಸ್ಥಾನವಾಗಿದೆ. ಲೋಕದಲ್ಲಿ ಎಷ್ಟೋ ಪುಣ್ಯಕ್ಷೇತ್ರಗಳಿವೆ. ಯಾವನಾದರೊಬ್ಬ ಸಾಧಕನು ಯಾವುದಾದರೊಬ್ಬ ಸಿದ್ಧಪುರುಷನು ದೇಹತ್ಯಾಗ ಮಾಡಿದುದರಿಂದ ತೀರ್ಥಕ್ಷೇತ್ರಗಳೆಂದು ಪ್ರಸಿದ್ಧವಾಗಿದೆ. ಆದರೆ ದಕ್ಷಿಣೇಶ್ವರ ಸ್ವಯಂ ಭಗವಂತನ ಸಾಧನಾಪೀಠ. ಆ ಸ್ಥಾನದಲ್ಲಿ ಎಂತೆಂತಹ ಆಧ್ಯಾತ್ಮಿಕ ಭಾವಗು ಹೇಗೆ ಹೇಗೆ ವಿಕಾಸವಾಗಿವೆಯೂ ಅದರ ಇತಿಮಿತಿ ಹೇಳಬಲ್ಲವರಾರು? ಕಾಲಕ್ರಮದಲ್ಲಿ ಈ ಸ್ಥಾನದಲ್ಲಿ ಮಹಾತ್ಮೈ ಲೋಕಕ್ಕೆ ಅರಿವಾಗುತ್ತದೆ. ಆಗ ಅಲ್ಲಿಯ ಒಂದು ಧೂಳೀಕಣಕ್ಕಾಗಿ ನಾಮುಂದೆ ತಾಮುಂದೆ ಎಂದು ಜನ ನುಗ್ಗುತ್ತಾರೆ. ಆ ಸ್ಥಾನದ ಘನೀಭೂತ ಆಧ್ಯಾತ್ಮಿಕತೆಯ ವಾತಾವರಣ ಎಂದೆಂದಿಗೂ ನಶಿಸಿ ಹೋಗುವುದಿಲ್ಲ. ದಕ್ಷಿಣೇಶ್ವರದಲ್ಲಿ ತಾಯಿಗೆ ಸಲ್ಲಬೇಕಾದ ಸೇವಾಪೂಜೆ ಮತ್ತು ಭೋಗರಾಗಾದಿ ಸರಿಯಾಗಿ ನಡೆಯುತ್ತಿಲ್ಲ ಎಂದು ಕೇಳಿದಂದಿನಿಂದ ನಾನು ಆಕೆಯನ್ನು ಆಹ್ವಾನಿಸಿ ಮಾನಸವಾಗಿಯೆ ಪೂಜೆ ಭೋಗಾದಿಗಳನ್ನು ಇಲ್ಲಿಯೆ ನಿವೇದಿಸುತ್ತಿದ್ದೇನೆ. ತಾಯಿಗೆ ಹೇಳುತ್ತೇನೆ ‘ಅಮ್ಮ, ನಿನ್ನ ಊಟೋಪಚಾರ ಎಲ್ಲ ಇಲ್ಲೆ ನಡೆಯಲಿ. ನಮ್ಮ ಸೇವೆಯನ್ನು ಸ್ವೀಕರಿಸು’ ಎಂದು. ಇನ್ನು ಮೇಲೆ ಮಂದಿರದ ಸೇವಾಪೂಜಾದಿಗಳೆಲ್ಲ ಸುವ್ಯವಸ್ಥಿತವಾಗಿ ನಡೆಯತೊಡಗಿದರೆ ನಾನು ನಿಶ್ಚಿಂತವಾಗುತ್ತೇನೆ…”

“ಸ್ವಾಮೀಜಿ ಹೇಳುತ್ತಿದ್ದರು, ದಕ್ಷಿಣೇಶ್ವರದ ಜಾಗವೆಲ್ಲ ಕಾಲಕ್ರಮೇಣ ಮಠದ ಅಧೀನಕ್ಕೆ ಬರುತ್ತದೆ ಎಂದು. ಮಹಾಪುರುಷರ ಆಕಾಂಕ್ಷೆ ಎಂದಾದರೂ ಮಿಥ್ಯೆಯಾಗುತ್ತದೆಯೆ? ಒಂದು ರೀತಿಯಲ್ಲಿ ಮಥುರಬಾಬುವೆ ಪ್ರಾಣಪೂರ್ವಕವಾಗಿ ಎಲ್ಲವನ್ನೂ ಠಾಕೂರರಿಗೆ ದಾನ ನೀಡಿದ್ದನು. ಆದರೆ ಆಗ ಶ್ರೀಗುರು ಮಹಾರಾಜ್ ಅದನ್ನು ಸ್ವೀಕರಿಸಲಿಲ್ಲ. ಈಗ ಅವರ ಕಾರ್ಯ ನಾನಾ ದಿಕ್ಕುಗಳಲ್ಲಿ ನಾನಾ ರೂಪಗಳಲ್ಲಿ ವಿಸ್ತರಿಸುತ್ತಿರುವುದರಿಂದ ಈ ಸ್ಥಾನದ ರಕ್ಷೆ ವಿಶೇಷತಃ ಆವಶ್ಯಕವಾಗಿದೆ. ತಾಯಿಯ ಇಚ್ಛೆ ಯಾವಾಗ ಆಗುತ್ತದೆಯೊ ಆಗ ನೋಡುತ್ತೀಯೆ, ಎಲ್ಲವೂ ಮಠದ ಅಧೀನವಾಗುತ್ತದೆ.”

ಸಂನ್ಯಾಸಿ: “ಆದರೆ, ಮಹಾರಾಜ್, ಈ ಹಣಕಾಸಿನ ವ್ಯವಹಾರಕ್ಕೆ ಕೈಹಾಕುವುದು ತುಂಬ ಅಪಾಯಕಾರಿ ಅಲ್ಲವೆ? ಜೊತೆಗೆ ಜಮೀನ್ದಾರಿ ಬೇರೆ ಇದೆ; ಅದನ್ನೂ ನೋಡಿಕೊಳ್ಳಬೇಕಾಗುತ್ತದೆ. ಇಂತಹ ವೈಷಯಿಕ ವ್ಯಾಪಾರ ಮತ್ತು ಐಶ್ವರ್ಯದ ಸಂಗಕ್ಕೆ ಬಿದ್ದು ಆದರ್ಶಚ್ಯುತವಾದ ಎಷ್ಟೋ ಧರ್ಮ ಸಂಪ್ರದಾಯಗಳು ಪತನವಾದುದಕ್ಕೆ ಇತಿಹಾಸದಲ್ಲಿ ಅನೇಕ ದೃಷ್ಟಾಂತಗಳಿವೆ.”

ಮಹಾಪುರುಷಜಿ: “ನೀನು ಹೇಳುವುದೇನೊ ಸರಿಯೆ, ಒಂದು ದೃಷ್ಟಿಯಲ್ಲಿ. ಆದರೆ ನನಗೆ ಏನು ತೋರುತ್ತದೆ, ಗೊತ್ತೆ? ಆ ಧರ್ಮಸಂಘಗಳ ಪತನಕ್ಕೆ ಮೂಲಕಾರಣ ಸಾಧನೆ ಭಜನೆ ತ್ಯಾಗ ತಪಸ್ಸುಗಳ ಅಭಾವವೆ. ಶ್ರೀ ಶ್ರೀ ಠಾಕೂರರ ಈ ಸಂಘದಲ್ಲಿಯೂ ಎಲ್ಲಿಯವರೆಗೆ ತ್ಯಾಗ ವೈರಾಗ್ಯಗಳು ಸಮುಜ್ವಲವಾಗಿರುತ್ತವೆಯೊ, ಸಂಘದ ಪ್ರತಿಯೊಬ್ಬ ಸದಸ್ಯನೂ ಎಲ್ಲಿಯವರೆಗೆ ಈಶ್ವರ ಸಾಕ್ಷಾತ್ಕಾರವೆ ಜೀವನದ ಮುಖ್ಯ ಉದ್ದೇಶ ಎಂದು ತಿಳಿದು ಸಾಧನೆ ಭಜನೆ ತಪಸ್ಯಾದಿಗಳಲ್ಲಿ ನಿರತನಾಗಿರುತ್ತಾನೆಯೊ, ಅಲ್ಲಿಯವರೆಗೆ ಯಾವ ಭಯವೂ ಇಲ್ಲ- ಎಲ್ಲ ಸರಿಯಾಗಿ ನಡೆಯುತ್ತದೆ. ಸಾಧುವಿನ ದೃಷ್ಟಿ ಭಂಗಿ ಹೇಗಿದ್ದರೆ ಉಚಿತ ಎಂಬುದರ ವಿಚಾರವಾಗಿ ಮಹಾರಾಜ್ (ಸ್ವಾಮಿ ಬ್ರಹ್ಮಾನಂದರು) ಒಂದು ಸ್ವಾರಸ್ಯವಾದ ದೃಷ್ಟಾಂತ ಹೇಳುತ್ತಿದ್ದರು: ‘ನಾನು ಮರದ ಕೆಳಗೆ ಇದ್ದೇನೆ’ ಎಂದು ಭಾವಿಸುತ್ತಾನೆ; ಭಕ್ಷ್ಯ ಭೋಜ್ಯಗಳನ್ನು ತಿನ್ನುತ್ತಿದ್ದರೂ ಮನಸ್ಸಿನಲ್ಲಿಯೆ ಭಾವಿಸುತ್ತಾನೆ, ‘ನಾನು ಪವಿತ್ರ ಭಿಕ್ಷಾನ್ನ ತಿನ್ನುತ್ತಿದ್ದೇನೆ,’ ಎಂದು. ಅದರ ಅರ್ಥ: ಸಾಧುವಾದವನು ಸರ್ವಾವಸ್ಥೆಯಲ್ಲಿಯೂ ನಿರ್ಲಿಪ್ತನಾಗಿದ್ದು ಕೊಂಡು, ಆಂತರ್ಯದಲ್ಲಿ ತಪಸ್ಯೆಯ ಅಗ್ನಿ ಸದಾ ಜ್ವಲಿಸುವಂತೆ ಮಾಡುತ್ತಿರಬೇಕು. ಭಾವ ಶುದ್ಧವಾಗಿದ್ದರೆ ಯಾರಿಗೂ ಯಾವ ಭಯವೂ ಇಲ್ಲ. ಭಾವನೆ ಮುಖ್ಯವಾದುದು. ಅಲ್ಲದೆ ನೀವು ಏನು ಕೆಲಸ ಕಾರ್ಯ ಮಾಡಿದರೂ ಅದೆಲ್ಲ ಶ್ರೀ ಭಗವಾನರ ಕಾರ್ಯ;- ನಿಮಗಾಗಿ ನೀವು ಯಾರೂ ಯಾವ ಕೆಲಸವನ್ನೂ ಮಾಡುವುದಿಲ್ಲ ತಾನೆ? ಆ ಕೆಲಸ ಕಾರ್ಯವೂ ನಿಮ್ಮ ಸಾಧನೆಯ ಒಂದಂಗ. ಅವನ ಸೇವಾ ಜ್ಞಾನದಲ್ಲಿಯೇ ಅವನ ಕೆಲಸವನ್ನೆಲ್ಲ  ಮಾಡಿದರೆ, ನಿಶ್ಚಯವಾಗಿ ಚಿತ್ತರ ಮಾಲಿನ್ಯ ಕೊಚ್ಚಿಹೋಗುತ್ತದೆ. ಜೊತೆಗೆ ಅವಶ್ಯವಾಗಿ ಭಜನೆ ಸಾಧನೆ ಇವು ಜೋರಾಗಿ ನಡೆಯುತ್ತಿರಬೇಕು. ಸಾಧನೆ ಭಜನೆಯ ರೂಪದ ಆಧ್ಯಾತ್ಮಿಕ ಪ್ರಯತ್ನದಲ್ಲಿ ಏನಾದರೂ ಶಿಥಿಲತೆ, ಆಲಸ್ಯ ತೋರಿತು ಎಂದರೆ ಬಂತು ತೊಂದರೆ! ಅವನ ಕೆಲಸವನ್ನು ನೀವು ಅನಾಸಕ್ತವಾಗಿಯೆ ಮಾಡಬೇಕು. ಇಷ್ಟು ಮಾತ್ರ ಸರ್ವದಾ  ನೆನಪಿರಲಿ; ಯಾರು ಎಲ್ಲಿಯತನಕ ಆಂತರಿಕವಾಗಿ ‘ಠಾಕೂರರ ಕೆಲಸ ಮಾಡುತ್ತಿದ್ದೇನೆ’ ಎಂಬ ಬುದ್ಧಿಯಿಂದ ಆತನ ಕೆಲಸಕಾರ್ಯ ಮಾಡಿಕೊಂಡು ಹೋಗುತ್ತಾರೊ ಅಲ್ಲಿಯತನಕ ಅವರಿಗೆ ಯಾವ ಅಕಲ್ಯಾಣವೂ ಉಂಟಾಗುವುದಿಲ್ಲ. ಸತತವೂ ಶ್ರೀಗುರುವೆ ರಕ್ಷೆಯಾಗಿರುತ್ತಾನೆ. ಆದರೆ ಅಹಂಕಾರ ಅಭಿಮಾನ ಹೊಕ್ಕಿತು ಎಂದರೆ ಮುಗಿಯಿತು ಗತಿ. ಶ್ರೀ ಠಾಕೂರರು ಹೇಳುತ್ತಿದ್ದರು ‘ಭಾವದ ಮನೆಯಲ್ಲಿ ಚೌರ್ಯ ವಂಚನೆ ಯಾವುದೂ ಇರಬಾರದು’ ಎಂದು. ಆತನ ಕೆಲಸ ಮಾಡಿದರೆ ಆತನ ಸೇವೆ ಮಾಡಿದರೆ ನಾನು ಧನ್ಯನಾಗುತ್ತೇನೆ-ಎಂಬ ಭಾವವನ್ನು ಆಶ್ರಯಿಸಿದವರಿಗೆ ಯಾವ ಭಯವೂ ಇಲ್ಲ. ತನ್ನ ಮನಸ್ಸಿನ ಮೇಲೆ ತಾನೆ ಸತರ್ಕ ದೃಷ್ಟಿಯ ಕಾವಲಿಟ್ಟು ಕೊಂಡು ಪ್ರತಿಯೊಂದು ಕೆಲಸದಲ್ಲಿಯೂ ತನ್ನ ಮನೋವ್ಯಾಪಾರವನ್ನು ತಾನೆ ವಿಷ್ಲೇಷಣ ಮಾಡಿಕೊಳ್ಳಬೇಕು. ಮನಸ್ಸಿನ ದಾರಿ ಒಂದಿನಿತಾದರೂ ಬದಲಾಯಿಸುವುದು ಗೊತ್ತಾದೊಡನೆ ಆತನ ಬಳಿ ಕಾರತರೆಯಿಂದ ಪ್ರಾರ್ಥನೆ ಸಲ್ಲಿಸಬೇಕು. ಕೆಲಸ ಕಾರ್ಯವನ್ನಾದರೂ ಏನೂ ಹಗಲೂ ಇರುಳೂ ಇಪ್ಪತ್ತುನಾಲ್ಕು ಗಂಟೆಯೂ ಮಾಡುತ್ತಿರಬೇಕೆ? ಅಲ್ಲದೆ ಕೆಲಸದ ನಡುವೆಯೂ ಭಗವಂತನ ಸ್ಮರಣಮನನ ನಿರಂತರವಾಗಿ ನಡೆಯುತ್ತಿರುವಂತೆ ಅಭ್ಯಾಸ ಮಾಡಬೇಕು.”

ಸಂನ್ಯಾಸಿ: “ಒಂದು ಜೀವಂತ ಆದರ್ಶ ನಮ್ಮ ಎದುರಿಗಿರದಿದ್ದರೆ, ಬದುಕಿನ ಗತಿ ಎಡೆಬಿಡದೆ ಆದರ್ಶದ ಕಡೆಗೆ ಹೋಗುವುದು ತುಂಬ ಕಷ್ಟಸಾಧ್ಯ. ಇಲ್ಲಿ ನೀವೆಲ್ಲ (ಶ್ರೀರಾಮಕೃಷ್ಣರ ಅಂತರಂಗ ಶಿಷ್ಯರು) ಎಲ್ಲಿಯವರೆಗೆ ಇರುವಿರೋ ಅಲ್ಲಿಯತನಕ ಎಲ್ಲ ಸರಿಯಾಗಿ ನಡೆದುಕೊಂಡು ಹೋಗುತ್ತದೆ; ಆಮೇಲೆ ಏನಾಗುತ್ತದೆಯೋ ಶ್ರೀಠಾಕೂರರೆ ಬಲ್ಲರು!’

ಮಹಾಪುರುಷಜಿ: “ಅದೇಕೆ? ಇದೊಂದನ್ನು ಚೆನ್ನಾಗಿ ಅರಿತಿರು, ಶ್ರೀಗುರುಮಹಾರಾಜರೇ ಜೀವಂತ ಆದರ್ಶವಾಗಿದ್ದಾರೆ. ನಾವು ಇಲ್ಲಿದ್ದೇವೆ ನಿಜ. ದೇಹನಾಶದ ಜೊತೆಯಲ್ಲಿಯೆ ಎಲ್ಲ ಕೊನೆಗೊಂಡುಬಿಡುತ್ತದೇನು? ಸಾಧನೆ ಭಜನೆಯ ಮೂಲಕ ಮನಸ್ಸು ಸಂಸ್ಕೃತವಾದಾಗ ಅಂತಹ ಮನಸ್ಸಿನಲ್ಲಿ ಭಗವಂತನ ದಿವ್ಯ ಮತ್ತು ಜೀವಂತ ಆವಿರ್ಭೂತಿಯಾಗುತ್ತದೆ. ಅಂತಹ ಅನುಭೂತಿಯೆ ನಿಜವಾದ ಅನುಭೂತಿ; ಅದರ ಪ್ರಭಾವ ಸಮಗ್ರ ಜೀವನವ್ಯಾಪಿಯಾಗಿ ಪರಿಣಮಿಸುತ್ತದೆ. ಅದಲ್ಲದೆ ನಿನ್ನಂತಹವರೂ ಏನು ಕಡಿಮೆಯೆ? ನೀನು ತಿಳಿದುಕೊಂಡಿರುವಷ್ಟು ಯಃಕಶ್ಚಿತನೇನಲ್ಲ ನೀನು. ಶ್ರೀಗುರುಮಹಾರಾಜರ ಸಂತಾನ ಸ್ವರೂಪರಾದ ಅವರ ಅಂತಹರಂಗ ಶಿಷ್ಯರನ್ನು ಕಣ್ಣುಮುಂದೆಯೆ ನೋಡುತ್ತಾ ಅವರ ಆದರ್ಶಜೀವನದ ನಿದರ್ಶನವನ್ನು ಪ್ರತ್ಯಕ್ಷ ಅನುಭವಿಸುತ್ತಾ ಇರುವುದೇನು ಅಲ್ಪ ಸುಕೃತವಲ್ಲ; ಅವರ ಸಂಗಲಾಭದಿಂದ ನೀವೆಲ್ಲ ಧನ್ಯರಾಗಿದ್ದೀರಿ. ಭಯಾಶಂಕೆಗಳಿಗೆ ಏನೇನೂ ಕಾರಣವಿಲ್ಲ. ಯಾರಲ್ಲಿ ಅಕುಟಿಲವಾದ ತ್ಯಾಗ ವೈರಾಗ್ಯಗಳಿರುತ್ತವೆಯೋ ಅವರಿಗೆ ಯಾವ ಕಾಲದಲ್ಲಿಯೂ ಭಯವಿಲ್ಲ. ಶ್ರೀ ಭಗಂತನು ಅವರ ಹೃದಯದಲ್ಲಿ ಪ್ರಕಟಿತವಾಗುತ್ತಾನೆ; ದರ್ಶನವಿತ್ತು ಅವರ ಜೀವನವನ್ನು ಧನ್ಯವನ್ನಾಗಿ ಮಾಡುತ್ತಾನೆ. ನಿಜವಾಗಿ ಇರಬೇಕಾದ್ದು ಎಂದರೆ ತ್ಯಾಗ, ವೈರಾಗ್ಯ, ಪವಿತ್ರತೆ ಮತ್ತು ಭಗವತ್ ಸಾಕ್ಷಾತ್ಕಾರಕ್ಕಾಗಿ ಆಂತರಿಕ ಆಕಾಂಕ್ಷೆ, ಅಭೀಪ್ಸೆ. ಈ ಕಾಲವೆಲ್ಲವೂ ಒಂದು ಶುಭಮುಹೂರ್ತವಾಗಿದೆ. ಈ ಕಾಲದಲ್ಲಿ ಒಂದು ಸ್ವಲ್ಪ ಸಾಧನೆ ಭಜನೆ ಮಾಡಿದರೂ ಚೈತನ್ಯ ಉದ್ಭೋಧನವಾಗುತ್ತದೆ. ಶ್ರೀ ಠಾಕೂರರ ಆಗಮನದಿಂದ ಈಶ್ವರ ಸಾಕ್ಷಾತ್ಕಾರದ ಪಥ ಅತಿಸುಗಮವಾಗಿಹೋಗಿದೆ. ಇಂದು ಯಾವ ಆಧ್ಯಾತ್ಮಿಕ ಸ್ತೋತ್ರ ಆತನಿಂದ ಉದ್ಭವವಾಗಿ ಹರಿಯತೊಡಗಿದೆಯೊ ಅದು ಶತಶತಮಾನಗಳ ಕಾಲ ಪ್ರವಹಿಸುತ್ತದೆ. ಅದರಲ್ಲಿ ಸ್ವಲ್ಪವೂ ಸಂದೇಹವಿಲ್ಲ. ಸ್ವಾಮೀಜಿ(ಸ್ವಾಮಿ ವಿವೇಕಾನಂದರು) ತಮ್ಮ ದೇಹತ್ಯಾಗಕ್ಕೆ ಕೆಲವು ದಿನಗಳು ಮೊದಲು ಈ ಮಠದ ಇದೇ ಅಂಗಳದಲ್ಲಿ ನಿಂತುಕೊಂಡು ಹೇಳಿದ್ದಾರೆ- ‘ಯಾವ ಸ್ರೋತ ಇಲ್ಲಿಂದ ಹೊರಟಿದೆಯೋ ಅದು ಅಡೆತಡೆಯಿಲ್ಲದೆ ಏಳೆಂಟು ಶತಮಾನ ಮುಂದುವರಿಯುತ್ತದೆ; ಯಾರಿಂದಲೂ ಅದರ ಗತಿಯನ್ನು ತಡೆಗಟ್ಟಲು ಸಾಧ್ಯವಾಗುವುದಿಲ್ಲ.’ ಈ ಯುಗಪ್ರವಾಹ ತನ್ನ ಶಕ್ತಿಯಿಂದಲೆ ತಾನು ಚಲಿಸುತ್ತದೆ; ಯಾರ ಸಹಾಯವನ್ನೂ ಅದು ಅಪೇಕ್ಷಿಸುವುದಿಲ್ಲ. ಇದೆಲ್ಲ ಐಶೀಶಕ್ತಿಯ ವ್ಯಾಪಾರ. ಕ್ಷುದ್ರ ಮನುಷ್ಯ ಏನುತಾನೆ ಮಾಡಬಲ್ಲ? ಈ ಯುಗಪ್ರಯೋಜನ ಸಾಧನೆಯಲ್ಲಿ ಯಾರು ಯಾರು ಸಹಾಯಕರಾಗುತ್ತಾರೊ ಅವರು ನಿಜವಾಗಿಯೂ ಧನ್ಯರಾಗುತ್ತಾರೆ. ಶ್ರೀಠಾಕೂರರು ಎಂತಹ ಆಧ್ಯಾತ್ಮಿಕ ಶಕ್ತಿ ಸಮೇತರಾಗಿ ಈ ಜಗತ್ತಿಗೆ ಬಂದರೋ ಮತ್ತು ಎಂತಹ ಅದ್ಭುತ ಶಕ್ತಿಯನ್ನು ಅವರು ಈ ಲೋಕದಲ್ಲಿ ಉದ್ಬುದ್ಧಗೊಳಿಸಿರುವರೊ ಆ ಐಶೀಶಕ್ತಿ ಅವ್ಯಾಹತವಾಗಿ ಮುಂಬರಿಯುವುದಕ್ಕಾಗಿ ಶ್ರೀಠಾಕೂರರ ಇಂಗಿತಾನುಸಾರಿವಾಗಿಯೆ ಸ್ವಾಮೀಜಿ ಈ ಮಹಾ ಧರ್ಮಸಂಘವನ್ನು ಸಂಸ್ಥಾಪನೆಮಾಡಿ, ಈ ಮಠವೇ ಆಧ್ಯಾತ್ಮಿಕ ಶ್ಕತಿಯ ಉತ್ಪತ್ತಿ ಕೇಂದ್ರ, ಈ ಕೇಂದ್ರದಿಂದಲೇ ಆಧ್ಯಾತ್ಮಿಕ ಶಕ್ತಿಸ್ರೋತ ಹೊಮ್ಮಿ, ಪ್ರವಹಿಸಿ, ಜಗತ್ತನ್ನೆಲ್ಲ ಪ್ಲಾವಿತವನ್ನಾಗಿ ಮಾಡುತ್ತದೆ. ಅದಕ್ಕಾಗಿಯೆ ಅವರು ಶ್ರೀಠಾಕೂರರನ್ನು ತಮ್ಮ ಮಸ್ತಕದ ಮೇಲೆಯೆ ಹೊತ್ತು ತಂದು ಈ ಸ್ಥಾನದಲ್ಲಿ ಸಂಸ್ಥಾಪಿಸಿದ್ದಾರೆ.’*

“ಶ್ರೀಠಾಕೂರರು ಸ್ವಾಮೀಜಿಗೆ ಹೇಳಿದ್ದರು ‘ನಿನ್ನ ತಲೆಯ ಮೇಲೆ ಹೊತ್ತುಕೊಂಡು ಹೋಗಿ ನನ್ನನ್ನು ಎಲ್ಲಿರಿಸುತ್ತೀಯೋ ಅಲ್ಲಿ ನಾನಿರುತ್ತೇನೆ’ ಎಂದು. ಈ ಮಠ ಯಾವ ದಿನ ಪ್ರತಿಷ್ಠಿತವಾಯಿತೊ ಆ ದಿನ ಸ್ವಾಮೀಜಿ ‘ಆತ್ಮಾರಾಮ ‘ನನ್ನು (ಶ್ರೀರಾಮಕೃಷ್ಣ ಭಸ್ಮಾವಶೇಷವಿದ್ದ ಕರಂಡಕ್ಕೆ ಸ್ವಾಮಿ ವಿವೇಕಾನಂದರು ಕೊಟ್ಟ ಹೆಸರು) ತಲೆಯ ಮೇಲೆಯೆ ಹೊತ್ತು ತಂದು ಇಲ್ಲಿ ಸ್ಥಾಪನೆ ಮಾಡಿದರೆ. ಪೂಜೆ, ಹೋಮ, ನೈವೇದ್ಯ ಎಲ್ಲ ಶಾಸ್ತ್ರಕ್ರಮಬದ್ಧವಾಗಿ ವಿಜೃಂಭಣೆಯಿಂದ ನಡೆದುವು. ನಾನೆ ಠಾಕೂರರ ನೈವೇದ್ಯಕ್ಕೆ ಪಾಯಸ ಮಾಡಿದೆ. ಮಠದಲ್ಲಿ ಶ್ರೀಗುರು ಮಹಾರಾಜರನ್ನು ಕೂರಿಸಿದ ಮೇಲೆ ಸ್ವಾಮೀಜಿ ಹೇಳಿದರು: ‘ಇಂದು ನ್ನ ತಲೆಯಮೇಲಿದ್ದ ಈ ಲೋಕದ ಅತ್ಯಂತ ಭಾರವಾದ ಒಂದು ಹೊಣೆ ಇಳಿದಂತಾಗಿದೆ. ಇನ್ನು ನನ್ನ ಶರೀರ ಇದ್ದರೂ ಒಂದೆ, ಹೋದರೂ ಒಂದೆ.’ ಆ ತರುವಾಯ ನಮ್ಮೆಲ್ಲರ ಸಾಧನೆ ಭಜನೆ ಧ್ಯಾನ ಪ್ರಾರ್ಥನೆ ತಪಸ್ಸು ಎಲ್ಲಕ್ಕೂ ‘ಆತ್ಮಾರಾಮ ‘ವೆ ಕೇಂದ್ರವಾಯಿತು. ಸ್ವಾಮೀಜಿ, ಮಹಾರಾಜ್ (ಸ್ವಾಮಿ ಬ್ರಹ್ಮಾನಂದರು), ಬಾಬೂರಾಮ್ ಮಹಾರಾಜ್ (ಸ್ವಾಮಿ ಪ್ರೇಮಾನಂದರು) – ಎಲ್ಲರೂ ಇಲ್ಲಿಯೆ ಎಷ್ಟೊಂದು ಸಾಧನೆ ಭಜನೆ ಮಾಡಿದ್ದಾರೆ! ಅವರೆಲ್ಲರೂ ಅವರತಾರಕಲ್ಪರಾದ ಮಹಾಪುರುಷರೆ; ಭಗವಂತನ ಪಾರ್ಷದರೆ; ಅವರ ಅತ್ಯಂತಾಂತರಂಗಿತ ಅಂಶಸ್ವರೂಪರೆ. ಅವತಾರನೆ ಸಂಗಿಗಳಾಗಿ, ಅವನೊಡನೆಯಲ್ಲದೆ ಅವರು ಒಬ್ಬೊಬ್ಬರಾಗಿ ಒಂಟಿಯಾಗಿ ಬರುವುದೆ ಅಪೂರ್ವ. ಎಷ್ಟು ಜನ ಮಹಾಪುರುಷರು ಈ ಮಠದಲ್ಲಿ ಸಾನೆ, ಭಜನೆ, ತಪಸ್ಯೆ ಮಾಡಿದ್ದಾರೆ. ಸ್ವಲ್ಪ ಆಲೋಚಿಸಿ ನೋಡು, ಗೊತ್ತಾಗುತ್ತದೆ, ಈ ಮಠ ಎಂತಹ ಪವಿತ್ರ ಸ್ಥಾನ! ಇಲ್ಲಿಗೆ ಸ್ವಯಂ ತಾಯಿ ಜಗಜ್ಜನನಿಯೆ (ಮಹಾಮಾತೆ ಶ್ರೀ ಶಾರದಾದೇವಿಯವರು) ಆಗಮಿಸಿದ್ದಾರೆ! ಇನ್ನೂ ಕೇಳಿದ್ದೇನೆ: ಈ ಮಠ ಸ್ಥಾಪನೆಯಾಗುವ ಮೊದಲೆ ಒಂದು ಸಾರಿ ಶ್ರೀಮಾತೆ ನೌಕೆಯಲ್ಲಿ ಕುಳಿತು ಗಂಗೆಯಲ್ಲಿ ಹೋಗುತ್ತಿದ್ದಾಗ ಈ ಸ್ಥಾನದಲ್ಲಿಯೆ ಅವರಿಗೆ ಶ್ರೀಠಾಕೂರರ ದರ್ಶನವಾಯಿತಂತೆ. ನಿಜ, ಈ ಮಠ ಆದಮೇಲೆಯೂ ನಾವು ಪರ್ವತಾರಣ್ಯಗಳಲ್ಲಿ ತಪಸ್ಸು ಮಾಡುವುದಕ್ಕಾಗಿ ಹೊರಗೆ ಹೋಗಿದ್ದುಂಟು; ಆದರೆ ನಮ್ಮ ಪ್ರಾಣ ಮಾತ್ರ ಮಠದಲ್ಲಿರುವ ‘ಆತ್ಮಾರಾಮನ’ ಸನ್ನಿಧಿಯಲ್ಲೆಯೆ ಆಬದ್ಧವಾಗಿತ್ತು. ಈಗಲೂ ಇಂದೊ ನಾಳೆಯೊ ಶ್ರೀಗುರುಮಹಾರಾಜರ ಅಂತರಂಗ ಶಿಷ್ಯರು ಒಬ್ಬೊಬ್ಬರಾಗಿ ಅವರೊಡನೆ ಮಿಳಿತವಾಗಲು ಹಿಂತಿರುಗುತ್ತಿದ್ದಾರೆ. ಆಮೇಲೆ ನಿಮ್ಮ ಪಾಲಿಗೆ ತಾನೆ ಹೊರೆ ಹೊಣೆ ಎಲ್ಲ. ತ್ಯಾಗ ತಪಸ್ಯೆ ಮತ್ತು ಸಾಧನೆ ಭಜನೆಗಳಿಂದ ಈ ಮಠದ ಆಧ್ಯಾತ್ಮಿಕ ಪ್ರಭಾವ ಅಕ್ಷುಣ್ಣವಾಗಿರುವಂತೆ ನೋಡಿಕೊಳ್ಳುವುದು ನಿಮ್ಮ ಕರ್ತವ್ಯ. ನಿಮ್ಮ ಆದರ್ಶ ಜೀವನ ಹೇಗೆ ರೂಪಗೊಳಬೇಕೆಂದರೆ, ನಿಮ್ಮ ಬಳಿಗೆ ಬರುವವರಿಗೆ ತಾವು ಶ್ರೀ ರಾಮಕೃಷ್ಣರು ಮತ್ತು ಅವರ ಪಾರ್ಷದರಾದ ಅಂತರಂಗ ಶಿಷ್ಯರ ಸಂಗದಲ್ಲಿಯೆ ಇದ್ದೇವೆ ಎಂಬ ಭಾವನೆ ಉಂಟಾಗಬೇಕು. ಒಟ್ಟಿನಲ್ಲಿ ಹೇಳುವುದಾದರೆ ಇಷ್ಟೆ, ಠಾಕೂರರ ಉಪದೇಶದ ಸಾರಾಂಶ: ಭಗವತ್ ಸಾಕ್ಷಾತ್ಕಾರವೆ ಬದುಕಿನ ಉದ್ದೇಶ; ತ್ಯಾಗ, ತಪಸ್ಯೆ ಮತ್ತು ಸರ್ವ ಧರ್ಮಸಮನ್ವಯಗಳೆ ಅದಕ್ಕೆ ಹಾದಿ.”

ಸಂನ್ಯಾಸಿಯೊಬ್ಬರು ದಕ್ಷಿಣಾಭಾರತವೊಂದರ ಶಾಖಾಕೇಂದ್ರದಲ್ಲಿ ಶ್ರೀ ರಾಮಕೃಷ್ಣರ ಸಂದೇಶಪ್ರಚಾರಕ್ಕಗಿ ಹೊರಡುವ ಮುನ್ನ ಮಹಾಪುರುಷಜಿಯ ಆಶೀರ್ವಾದ ಪಡೆಯಲೆಂದು ಬಂದು, ನಮಸ್ಕಾರ ಮಾಡಿ, ಇಂತೆಂದರು: “ಮಹಾರಾಜ್, ನನ್ನನ್ನು ಆಶೀರ್ವದಿಸಿ, ಈ ಜನ್ಮದಲ್ಲಿಯೆ ನನಗೆ ಭಗವಂತನ ಸಾಕ್ಷಾತ್ಕಾರವಾಗುವಂತೆ. ಇಷ್ಟು ಕಾಲವೂ ನಾನು ತಮ್ಮ ಹತ್ತಿರವೆ ಇದ್ದೆ; ಈಗ ತಮ್ಮನ್ನು ಬಿಟ್ಟು ಬಹುದರೂರದ ಮದರಾಸಿಗೆ ಹೋಗುತ್ತಿದ್ದೇನೆ: ಅದಕ್ಕಾಗಿ ಮನಸ್ಸಿಗೆ ತುಂಬ ಕಳವಳವಾಗುತ್ತಿದೆ. ಇನ್ನು ಮೇಲೆ ಮನಸ್ಸಾದಗಲೆಲ್ಲ ತಮ್ಮ ದರ್ಶನ ತೆಗೆದುಕೊಳ್ಳಲಾಗುವುದಿಲ್ಲ;’ ಇನ್ನು ತಾವು ನನ್ನ ಧ್ಯಾನದ ವಸ್ತು. ಅಲ್ಲಿ ನಾನು ಹೇಗಿರಬೇಕು? ಹೇಗೆ ಬಾಳಬೇಕು? ಏನಾದರೂ ಹಿತೋಪದೇಶ ಮಾಡಿದರೆ ನಾನು ಕೃತಾರ್ಥನಾಗುತ್ತೇನೆ.”

ಮಹಾಪುರುಷಜಿ ಸಂನ್ಯಾಸಿಗೆ ಹೃತ್ಪೂರ್ವಕವಾಗಿ ಆಶೀರ್ವಾದ ಮಾಡಿ, ಉಕ್ಕಿಬಂದ ಸ್ನೇಹಭರದಿಂದ ಹೇಳಿದರು: “ಬಾಬಾ, ನೀನು ಠಾಕೂರರ ಶ್ರೀಪಾದ ಪದ್ಮದಲ್ಲಿ ಆಶ್ರಯಪಡೆದಿದ್ದೀಯೆ. ಅವರೇ ಸರ್ವದಾ ನಿನ್ನ ರಕ್ಷಣೆ ಮಾಡುತ್ತಾರೆ. ನೀನು ಎಲ್ಲಿಯೇ ಇರು, ಇದೊಂದನ್ನು ಚೆನ್ನಾಗಿ ಮನಸ್ಸಿನಲ್ಲಿ ಇಟ್ಟುಕೊ, ಠಾಕೂರರು ನಿನ್ನ ಜೊತೆಯಲ್ಲಿಯೆ ಇದ್ದಾರೆ ಎಂದು. ನೀನು ಅವರಿಗೆ ಪರಮಪ್ರಿಯ. ನೀನು ಸುಶಿಕ್ಷಿತ ಓದುಬರಹ ಬಲ್ಲೆ; ನಿನ್ನ ಹೃದಯ ಪವಿತ್ರ, ಆತನನ್ನು ಪಡೆಯಲೆಂದು ಸರ್ವಸ್ವ ತ್ಯಾಗಮಾಡಿ ಬಂದಿದ್ದೀಯೆ; ಅವರಿಗೇನು ಅದೆಲ್ಲ ಗೊತ್ತಲ್ಲವೆ? ಅಹ! ನಾನು ಒಮ್ಮೊಮ್ಮೆ ಭಾವಿಸುತ್ತೇನೆ, ಸ್ವಾಮೀಜಿ ಈಗ ಸ್ಥೂಲ ಶರೀರದಲ್ಲಿ ಇದ್ದಿದ್ದರೆ ಈ ಎಲ್ಲ ಶಿಷ್ಯರನ್ನು ಕಂಡು ಎಷ್ಟು ಆನಂದಪಡುತ್ತಿದ್ದರೊ! ನೀನು ಎಲ್ಲಿಗೆ ಹೋಗುತ್ತಿದ್ದೀಯೊ ಅಲ್ಲಿಯೂ ಶ್ರೀ ಗುರುಮಹಾರಾಜರಿಗೆ ಅನೇಕರು ಶಿಷ್ಯರಿದ್ದಾರೆ. ನಮ್ಮ ಹತ್ತಿರವಿದ್ದು ಏನನ್ನು ಕಂಡಿದ್ದೀಯೊ ಏನನ್ನು ಕಲಿತಿದ್ದೀಯೊ ಅದನ್ನೆ ಅವರಿಗೆ ಹೇಳು. ನಿಜವಾಗಿ ಬೇಕಾದ್ದು, ತ್ಯಾಗತಪಸ್ಯಾ ಪೂರ್ನ ಆದರ್ಶ ಸಂನ್ಯಾಸಿಯ ಜೀವನ. ಶ್ರೀಠಾಕೂರರ ಜೀವನ ತ್ಯಾಗದ ಜ್ವಲಂತ ಮೂರ್ತಿಯಾಗಿತ್ತು. ನೀನು ಅವರದೇ  ಆಗಿರುವ ಈ ಪವಿತ್ರ ಸಂಘದ ಸಂನ್ಯಾಸಿ. ಅವರ ಸಂದೇಶವನ್ನೇ ಸಾರಲು ಹೋಗುತ್ತಿದ್ದೀಯೆ. ಆದರೆ ಎಲ್ಲಕ್ಕಿಂತಳು ಅತ್ಯಂತ ಪರಿಣಾಮಕಾರಿಯಾದ ಪ್ರಚಾರವೆಂದರೆ ನೀನು ನಡೆಸುವ ಆದರ್ಶ ಜೀವನ. ಏಕೆಂದರೆ ನಿನ್ನ ಜೀವನವನ್ನು ನೋಡಿ ಲೋಕದ ಜನ ಶ್ರೀಗುರುದೇವನನ್ನು ಅರಿಯುತ್ತಾರೆ. ಆದಕಾರಣ ಠಾಕೂರರ ಮತ್ತು ಸ್ವಾಮೀಜಿಯ ಜೀವನಾದರ್ಶಕ್ಕೆ ಅನುರೂಪವಾಗಿ ನಿನ್ನ ಜೀವನವನ್ನು ಎಷ್ಟರಮಟ್ಟಿಗೆ ಎರಕೆ ಹೊಯ್ಯಲು ಸಮರ್ಥವಾಗುತ್ತೀಯೋ ಅಷ್ಟರಮಟ್ಟಿಗೆ ನಿನ್ನ ಮುಖಾಂತರ ಅವರ ಭಾವಪ್ರಚಾರ ಸಮರ್ಪಕವಾಗಿ ನಡೆಯುತ್ತದೆ. ಯಾವಾಗಲಾದರೂ ನಿನಗೆ ದಿಕ್ಕುತೋಚದೆ ಹೋದಂತಾದರೆ ಆಗ ಕಾತರಪ್ರಾಣನಾಗಿ ಆತನನ್ನು ಪ್ರಾರ್ಥಿಸು; ಅವನು ನಿನ್ನ ಅಂತರ್ಯಾಮಿ. ನಿನ್ನೊಳಗೆಯೆ ಇದ್ದಾನೆ. ಅವನು ಒಳಗಣ್ಣಿಂದಲೆ ಬೆಳಕು ತೋರಿಸುತ್ತಾನೆ; ಯಾವುದು ಕರ್ತವ್ಯ, ಏನು ಮಾಡಿದರೆ ಎಲ್ಲ ಸರಿಹೋಗುತ್ತದೆ ಎಲ್ಲವನ್ನೂ ತಿಳಿಸಿಕೊಡುತ್ತಾನೆ. ನೀನು ಮಾಡಬೇಕಾಗುವ ಅಲ್ಪಸ್ವಲ್ಪ ಸಂದೇಶ ಪ್ರಸಾರಕಾರ್ಯವನ್ನೂ ‘ನಾನು ಮಾಡುತ್ತೇನೆ’ ಎಂಬುದಾಗಿ ಎಂದೆಂದಿಗೂ ಭಾವಿಸಬೇಡ. ಶ್ರೀಠಾಕೂರರು ತಮ್ಮ ಸಂದೇಶವನ್ನು ತಾವೇ ಪ್ರಸರಿಸುತ್ತಾರೆ. ನೀನು ನಾನು ಏನು ಪ್ರಚಾರ ಮಾಡಿಯೇವು? ಯಾರಿಗೆ ತಾನೆ ಅವರನ್ನು ಅರಿಯಲು ಸಾಧ್ಯ? ಶ್ರೀಗುರುಮಹಾರಾಜರು ಅನಂತ ಭಾವಮಯರು. ಆತನಿಗೆ ‘ಇತಿ’ ಹೇಳಲು ಸಾಧ್ಯವೆ?. ಸ್ವಾಮೀಜಿಯಂಥವರೆ “ಠಾಕೂರರು ಏನು ಎಂತು ಎಂಬುದನ್ನು ನಾನರಿಯಲಾರೆ” ಎಂದಮೇಲೆ ಇನ್ನುಳಿದವರ ಪಾಡೇನು? ಆತನ ಪಾದಪದ್ಮದಲ್ಲಿ ಭಕ್ತಿ ವಿಶ್ವಾಸಗಳು ಹುಟ್ಟುವಂತೆ ಮಾಡುವುದೆ ಜೀವನದ ಉದ್ದೇಶ. ನೀನಿಲ್ಲಿ ಭಜನೆ ಸಾಧನೆ ಓದುವುದು ಬರೆಯುವುದು ಎಲ್ಲವನ್ನು ಹೇಗೆ ಮಾಡುತ್ತಿದ್ದೀಯೊ ಹಾಗೆ ಅಲ್ಲಿಯೂ ಮಾಡು; ಇನ್ನೂ ಸ್ವಲ್ಪ ಹೆಚ್ಚಾಗಿಯೆ ಮಾಡು. ಅದರಿಂದ ನಿನಗೆ ಕಲ್ಯಾಣವಾಗುತ್ತದೆ. ಇದೇ ಸರಿಯಾದ ಕಾಲ ನಿನಗೆ, ಆಧ್ಯಾತ್ಮ ಸಾಧನೆಗೆ; ಅತ್ತ ಕಡೆಗೇ ನಿನ್ನ ಮನಸ್ಸೆಲ್ಲವನ್ನೂ ನಿವೇದಿಸಬೇಕು. ನಾನು ಹೃತ್ಪೂರ್ವಕ ಪ್ರಾರ್ಥಿಸುತ್ತೇನೆ, ಭಕ್ತಿ ವಿಶ್ವಾಸ ಪ್ರೇಮ ಪವಿತ್ರತೆ ಎಲ್ಲ ಹೃದಯ ತುಂಬುವಂತೆ ನಿನಗೊದಗಲಿ ಎಂದು. ನಿನ್ನ ಮಾನವ ಜನ್ಮ ಸಾರ್ಥಕವಾಗಲಿ.

* * ** ಸ್ವಾಮಿ ವಿವೇಕಾನಂದರು ಶ್ರೀರಾಮಕೃಷ್ಣರ ಪವಿತ್ರ ಭಸ್ಮಾವಶೇಷವಿದ್ದ ಕರಂಡವನ್ನು ತಮ್ಮ ತಲೆಯ ಮೇಲೆ ಹೊತ್ತು ಬೇಲೂರು ಮಠದ ಪೂಜಾಗೃಹದಲ್ಲಿ ಇಟ್ಟರು. ಈ ಮಾತು ಆ ಸಂದರ್ಭಕ್ಕೆ ಅನ್ವಯವಾಗಿದೆ.