ಇಂದು ಕ್ರೈಸ್ತ ಹೊಸ ವರುಷದ ಪ್ರಾರಂಭದ ದಿನ. ಕಾಂಕುರ್ಗಾಚಿ ಯೋಗೋದ್ಯಾನದಲ್ಲಿ ‘ಕಲ್ಪತರು’* ಉತ್ಸ ಆಚರಿಸುತ್ತಾರೆ. ಮಠದಲ್ಲಿಯೂ ಶ್ರೀಠಾಕೂರರಿಗೆ ವಿಶೇಷ ಪೂಜೆಯ ಮತ್ತು ನೈವೇದ್ಯಾದಿಗಳ ಏರ್ಪಾಟಾಗಿತ್ತು. ಬೆಳಗಿನಿಂದಲೂ ಭಕ್ತರು ವೃಂದವೃಂದವಾಗಿ ಬರತೊಡಗಿದ್ದಾರೆ. ವಿಶೇಷವಾಗಿ ರಜಾದಿನವಾದ್ದರಿಂದಲೂ ಅವರೆಲ್ಲ ಶ್ರೀ ಗುರುದೇವರ ದರ್ಶನಾನಂತರ ಪೂಜಾಮಂದಿರದಿಂದ ಹಿಂತಿರುಗಿ ಮಹಾಪುರುಷಜಿಯ ಕೊಠಡಿಯಲ್ಲಿ ನೆರೆದಿದ್ದಾರೆ. ಅವರೂ ಆನಂದದಿಂದ ಎಲ್ಲರ ಸಂಗಡವೂ ನಾನಾ ವಿಷಯಗಳನ್ನು ಕುರಿತು ಮಾತನಾಡುತ್ತಿದ್ದರು. ಭಕ್ತನೊಬ್ಬನು ಮಹಾಪುರುಷಜಿಗೆ ಪ್ರಣಾಮ ಸಮರ್ಪಿಸಿ ‘Happy New Year’ (ಶುಭ ನವ ವರ್ಷ) ‘Happy English Year’ (ಶುಭ ಆಂಗ್ಲೇಯ ನವ ವರ್ಷ) ಎಂದನು; ನಮ್ಮ ಶುಭ ನವ ವರ್ಷ. ನೋಡಿದೆಯಾ ನೂರೈವತ್ತು ವರ್ಷದ ಆಂಗ್ಲೇಯ ವಿದ್ಯಾಭ್ಯಾಸದ ಪ್ರಭಾವ ನಮ್ಮ ಮನಸ್ಸಿನ ಮೇಲೆ ಹೇಗೆ ಆಗಿದೆ? ಇನ್ನೇನು ನಮ್ಮ ರಾಷ್ಟ್ರೀಯತೆಯ ವೈಶಿಷ್ಟ್ಯವನ್ನೆ ಕಳೆದುಕೊಳ್ಳಲಿದ್ದೇವೆ. ಇದು ನಮ್ಮ ಪರಾಧೀನರಾಗಿಯೆ ಬಂದಿದ್ದೇವೆ. ಮುಸಲ್ಮಾನರು ನಮ್ಮನ್ನು ಏಳೆಂಟು ಶತಮಾನಗಳಿಂದಲೂ ಆಳಿದರೂ ನಮ್ಮ ಭಾರತೀಯ ವೈಶಿಷ್ಟ್ಯ ಸಂಸ್ಕೃತಿಗಳನ್ನು ನಷ್ಟಗೊಳಿಸಲು ಸಮರ್ಥರಾಗಲಿಲ್ಲ. ಆದರೆ ಪಾಶ್ಚಾತ್ಯ ನಾಗರಿಕತೆಯ ಸಂಮೋಹಿನೀ ಶಕ್ತಿ ಅಂಥಾದ್ದು. ಜೊತೆಗೆ ಅವರ ವಿಧಾನ ಕೌಶಲ ಎಂಥಾದ್ದೆಂದರೆ, ಅವರ ಪ್ರಚಾರದ ಉದ್ದೇಶ ನಮ್ಮ ಸಂಸ್ಕೃತಿ ಮತ್ತು ಧರ್ಮವಿಶ್ವಾಸಗಳನ್ನು ಮುಲೋತ್ಪಾಟನ ಮಾಡುವುದಕ್ಕಾಗಿಯೆ ಎಂಬುದು ನಮ್ಮ ಬುದ್ಧಿಗೆ ಹೊಳೆಯುವುದೆ ಕಷ್ಟವಾಗುವಷ್ಟು ಸುಸೂಕ್ಷ್ಮವಾದದ್ದು. ಆದ್ದರಿಂದಲೆ ಎಷ್ಟು ಅಲ್ಪಾವಧಿಯಲ್ಲಿಯೆ ಇಷ್ಟು ದೊಡ್ಡ ಜನಾಂಗ, ಒಂದಲ್ಲ ಎಲ್ಲ ವಿಷಯಗಳಲ್ಲಿಯೂ. ಪಾಶ್ಚಾತ್ಯ ಭಾವಾಪನ್ನವಾಗಿಬಿಟ್ಟಿದೆ. ಕ್ರಮಕ್ರಮೇಣ ನಮ್ಮ ಆಲೋಚನೆಯ ದಾರಿಯೆ ದಿಕ್ಕು ಬದಲಾಯಿಸಿದೆ; ಚಿಂತನಧಾರೆಯ ಆಮೂಲಪರಿವರ್ತಿತವಾಗಿದೆ. ಎಲ್ಲಕ್ಕಿಂತಲೂ ಹೆಚ್ಚಾಗಿ ಒದಗಿರುವ ಅನರ್ಥವೆಂದರೆ, ಸಮಸ್ತ ಹಿಂದೂ ಜನತೆಯ ತನ್ನ ವೈದಿಕ ಧರ್ಮದಲ್ಲಿ ಶ್ರದ್ಧಾಶೂನ್ಯವಾಗುತ್ತಿದೆ. ಸಾಧಾರಣ ಜನರ ಮನೋವೃತ್ತಿಯಲ್ಲಿ ಸನಾತನ ಹಿಂದೂಧರ್ಮ ಹೇಳುವುದೆಲ್ಲ ಮಿಥ್ಯೆ ಮತ್ತು ಕಾಲ್ಪನಿಕವೆಂದೂ, ಕ್ರಿಸ್ತಧರ್ಮ ಧ್ವಜಧಾರಿಗಳು ಹೇಳುವುದೆಲ್ಲ ಧ್ರುವಸತ್ಯವೆಂದೂ ಭಾವನೆ ಹುಟ್ಟಿಬಿಟ್ಟಿದೆ. ಅವರ ಆಶಯವಿದ್ದುದು ಕಾಲಕ್ರಮದಲ್ಲಿ ಸಮಸ್ತ ಹಿಂದೂ ಜನಾಂಗವನ್ನೆ ಕ್ರೈಸ್ತರನ್ನಾಗಿ ಮಾಡಬೇಕೆಂದು; ಆದರೆ ಭಗವಂತನ ಇಚ್ಛೆ ಬೇರೆಯಾಗಿತ್ತು. ಈ ಸನಾತನ ವೈದಿಕ ಧರ್ಮ ಲೋಪಗೊಂಡಿದ್ದರೆ ಸಮಗ್ರ ಜಗತ್ತಿನ ಆಧ್ಯಾತ್ಮಿಕತೆಯ ವಿನಷ್ಟವಾಗುತ್ತಿತ್ತು. ಅದನ್ನು ತಪ್ಪಿಸಿ ಸನಾತನಧರ್ಮವನ್ನು ರಕ್ಷಿಸಲೆಂದೇ ಭಗವಂತನು ಶ್ರೀರಾಮಕೃಷ್ಣ ರೂಪದಿಂದ ಅವತೀರ್ಣನಾದದ್ದು. ಯಾವುದನ್ನು ಕ್ರಿಸ್ತಧರ್ಮಾಲಂಬಿಗಳೂ ಮತ್ತು ಪಾಶ್ಚಾತ್ಯಶಿಕ್ಷಿತರಾದ ನಮ್ಮ ಸಮಾಜಸುಧಾರಕರೂ ಪುತ್ಥಲಿಪೂಜೆ (Idolatry) ಎಂದು ಗೇಲಿ ಮಾಡುತ್ತಿದ್ದರೊ ಆ ಮೂರ್ತಪೂಜೆಯಿಂದಲೆ ಶ್ರೀರಾಮಕೃಷ್ಣದೇವನು ತನ್ನ ದಿವ್ಯಸಾಧನೆಯನ್ನು ಪ್ರಾರಂಭ ಮಾಡಿದನು. ಆ ಅವತಾರಪುರುಷನ ಸರ್ವಧರ್ಮಗಳ ಸಾಧನೆಯನ್ನೂ ಸಿದ್ಧಿಯನ್ನೂ ಕಂಡು ಸಮಗ್ರ ಜಗತ್ತೇ ಆಶ್ಚರ್ಯಚಕಿತವಾಗಿದೆ. ಅದರಿಂದಾಗಿ ಪಾಶ್ಚಾತ್ಯ ದೇಶಗಳ ದೊಡ್ಡದೊಡ್ಡ ಮನೀಷಿಗಳೂ ಭಾರತೀಯ ವೈದಿಕ ಧರ್ಮದ ಪ್ರಾಧಾನ್ಯ ಮತ್ತು ವೈಶಿಷ್ಟಗಳಿಗೆ ತಲೆಬಾಗಿ ಅದನ್ನು ಒಪ್ಪಿಕೊಳ್ಳತೊಡಗಿದ್ದಾರೆ. ಅದರ ಪ್ರತಿಕ್ರಿಯೆಯ ಫಲರೂಪವಾಗಿ ಅಂಧಾನುಕರಣ ಪ್ರಿಯರಾಗಿದ್ದ ಭಾರತೀಯರ ದೃಷ್ಟಿಯೂ ಶ್ರೀರಾಮಕೃಷ್ಣರ ಅದ್ಭುತ ಜೀವನದ ಕಡೆಗೂ, ಜೊತೆಜೊತೆಗೆ ತಮ್ಮ ಧರ್ಮದ ಕಡೆಗೂ ತಿರುಗುತ್ತದೆ. ಶ್ರೀ ಠಾಕೂರರ ಆಗಮನಾನಂತರ ಭಾರತದೇಶದ ವಾತಾವರಣವೆ ಬದಲಾಯಿಸಲು ಶುರುವಾಗಿದೆ. ಕಳೆದುಕೊಂಡಿದ್ದ ಆತ್ಮವಿಶ್ವಾಸವನ್ನು ಭಾರತೀಯರು ಮತ್ತೆ ಪಡೆಯಲು ತೊಡಗಿದ್ದಾರೆ; ಠಾಕೂರರ ಅಲೌಕಿಕ ಸಾಧನೆಯ ಫಲವಾಗಿ ಭಾರತೀಯರ ಆತ್ಮಶಕ್ತಿ ಜಾಗ್ರತವಾಗಿ ಮೇಲೇಳುತ್ತಿದೆ. ಇನ್ನು ನೋಡುತ್ತೀಯೆ, ದಿನದಿನಕ್ಕೂ ಭಾರತೀಯರ ಅಭೂತಪೂರ್ವ ಉನ್ನತಿಪ್ರಗತಿಗಳನ್ನು, ಸರ್ವವಿಷಯಗಳಲ್ಲಿಯೂ. ಸ್ವಾಮೀಜಿ (ಸ್ವಾಮಿ ವಿವೇಕಾನಂದರು) ಹೇಳಿದ್ದಾರೆ, ಧರ್ಮವೆ ಭರತವರ್ಷದ ಮೇರುದಂಡ. ಆ ಮೇರುದಂಡವೆ ಮುರಿದಂತಾಗಿತ್ತು; ಅದರ ಪರಿಣಾಮವಾಗಿ ಭರತವರ್ಷ ಸರ್ವ ವಿಷಯಗಳಲ್ಲಿಯೂ ಹೀನಬಲವಾಗಿತ್ತು, ದುರ್ಬಲವಾಗಿತ್ತು, ಅವನತವಾಗಿತ್ತು, ಹಿಂದೆ ಬಿದ್ದಿತ್ತು. ಶ್ರೀರಾಮಕೃಷ್ಣರು ಬಂದು ಆ ಮೇರುದಂಡವನ್ನು ನೆಟ್ಟಗೆ ನಿಲ್ಲಿಸಿದರು; ಅದಕ್ಕೆ ಬಲಿದಾನ ಮಾಡಿದರು. ಇನ್ನು ಮುಂದೆ ಭಾರತದೇಶ ಧರ್ಮದಲ್ಲಿ ಮಾತ್ರವಲ್ಲದೆ ಸರ್ವಕ್ಷೇತ್ರಗಳಲ್ಲಿಯೂ ಮುಂದುವರಿಯುವುದನ್ನು ಕಂಡು ಜಗತ್ತೆಲ್ಲ ವಿಸ್ಮಿತವಾಗುವುದನ್ನು ನೋಡುತ್ತೀಯೆ.

“ಯಾವ ಶಕ್ತಿಯ ಪ್ರಭಾವದಿಂದ ಈ ಬ್ರಹ್ಮಾಂಡ ನಿಯಂತ್ರಿತವಾಗಿದೆಯೊ ಆ ಬ್ರಹ್ಮಶಕ್ತಿಯನ್ನೆ ಠಾಕೂರರು ಜಾಗರಿತವನ್ನಾಗಿ ಮಾಡಿದ್ದಾರೆ. ತನಗಾಗಿ ಅವರು ಏನು ಮಾಡಿದ್ದಾರೆ ಎಂಬುದನ್ನು ಈ ಲೋಕ ಕ್ರಮೇಣ ಅರಿತುಕೊಳ್ಳುತ್ತದೆ. ಆಹಾ! ಅಂತಹ ಭಗವತ್‌ಸ್ವರೂಪದ ಸಂಗಡವೆ ಇದ್ದು, ಆತನ ದರ್ಶನ, ಸ್ಪರ್ಶನ ಮತ್ತು ಸೇವಾದಿಗಳನ್ನು ಮಾಡುವ ಎಂತಹ ಪರಮ ಸೌಭಾಗ್ಯ ನಮ್ಮದಾಗಿತ್ತು! ಆತನ ಸ್ಪರ್ಶಮಾತ್ರದಿಂದಲೆ ನಮ್ಮ ಜೀವನ ಧನ್ಯವಾಗಿ ಹೋಯಿತು. ಆತನ ದಶ್ನ ಸೌಭಾಗ್ಯ ಲಭಿಸದಿದ್ದರೂ ಯಾರು ಆತನ ಭಾವವನ್ನು ಆಶ್ರಯಿಸಿ, ಅದಕ್ಕೆ ಅನುರೂಪವಾಗಿ ತನ್ನ ಜೀವನವನ್ನು ರೂಪಿಸಿ, ಆತನನ್ನೆ ಜೀವನದ ಆದರ್ಶವನ್ನಾಗಿ ಮಾಡಿಕೊಳ್ಳುತ್ತಾರೆಯೊ ಅವರೂ ಧನ್ಯರಾಗುತ್ತಾರೆ, ನಿಸ್ಸಂದೇಹವಾಗಿ. ಸರ್ವಭಾವಮಯ ಆ ಪ್ರಭು, ತ್ರಿಲೋಕೇಶ್ವರ, ಅಹೇತುಕ ಕೃಪಾಸಿಂಧು, ವಾಂಛಾ ಕಲ್ಪತರು, ಧರ್ಮ, ಅರ್ಥ, ಕಾಮ, ಮೋಕ್ಷ- ಈ ಚತುರ್ವರ್ಗದಲ್ಲಿ ಯಾವುದನ್ನು ಬೇಕಾದರೂ, ಯಾರೂ ಆಂತರಿಕ ಭಾವದಿಂದ ಬೇಡುವರೊ, ಅವರಿಗೆ ಅದನ್ನು ನೀಡುತ್ತಾನೆ. ಆತನ ವಿಚಾರ ಹೆಚ್ಚಾಗಿ ಇನ್ನೇನನ್ನು ತಾನೆ ಹೇಳಲಿ”?

ಭಕ್ತ: “ಅಂದು ಈ ದಿನ ಅವರು ಸಾಕ್ಷಾತ್ ಕಲ್ಪತರುವೇ ಆಗಿಬಿಟ್ಟರು. ಎಷ್ಟೊಂದು ಜನ ಭಕ್ತರಿಗೆ ಕೃಪೆ ಮಾಡಿದರು!”

ಮಹಾಪುರುಷಜಿ: “ಅವತ್ತು ಮಾತ್ರಕ್ಕೆ ಏಕೆ ಅವರು ಕಲ್ಪತರು? ಹಾಗೇನೂ ಅಲ್ಲ. ಅವರು ಸದಾಕಾಲವೂ ಕಲ್ಪತರುವೆ. ಜೀವರಿಗೆ ಕೃಪೆಮಾಡುವುದೆ ಅವರ ಏಕಮಾತ್ರ ಕಾರ್ಯ. ನಾವು ಕಣ್ಣಿಂದಲೆ ಕಂಡಿದ್ದೇವೆ, ಅವರು ನಿತ್ಯವೂ ಅದೆಷ್ಟು ಜೀವರಿಗೆ ಅದೆಂತೆಂತಹ ಭಾವಗಳಿಂದ ಕೃಪೆ ತೋರುತ್ತಿದ್ದರು! ಹೌದು, ಕಾಶೀಪುರದ ತೋಟದಲ್ಲಿ ಆ ದಿನ ಅವರು ಒಂದೇ ಏಟಿಗೆ ಅನೇಕ ಭಕ್ತರಿಗೆ ಕೃಪೆದೋರಿದರು. ಆ ದೃಷ್ಟಿಯಿಂದ ಈ ದಿನಕ್ಕೆ ಒಂದು ವಿಶೇಷತ್ವವಿದೆ. ಏಕೆಂದರೆ ಆವೊತ್ತು ಅವರು ಎಂಥ ವಿಭೂತಿ ಪ್ರಮಾಣದಲ್ಲಿ ಕೃಪಾಸಿಂಧುವಾಗಿದ್ದರೆಂದರೆ, ಆ ಒಂದೆ ಘಟನೆಯಿಂದ ಭಕ್ತರಿಗೆಲ್ಲ ಅವರ ಅನಂತರ ಅಪಾರ ಕೃಪೆಯ ಅರಿವು ಪ್ರತ್ಯಕ್ಷವಾಯಿತು.”

ಭಕ್ತ: “ಮಹಾರಾಜ್, ಆ ದಿನ ತಾವೂ ಅಲ್ಲಿಯೆ ಇದ್ದಿರೇನು?”

ಮಹಾಪುರುಷಜಿ: “ಇಲ್ಲ, ನಾನಿರಲಿಲ್ಲ. ನಾನೇ ಏನು? ಠಾಕೂರರ ಸಂನ್ಯಾಸಿ ಶಿಷ್ಯವರ್ಗದಲ್ಲಿ ಯಾರೊಬ್ಬರು ಆ ಸಮಯದಲ್ಲಿ ಅಲ್ಲಿರಲಿಲ್ಲ. ಆಗ ಗುರು ಮಹಾರಾಜರ ಕಾಯಿಲೆ ತುಂಬಾ ಕಠಿಣಾವಸ್ಥೆಯಲ್ಲಿತ್ತು; ನಮ್ಮ ಹೃದಯಗಳಲ್ಲಿಯೂಊ ವೈರಾಗ್ಯ ತುಂಬಿತ್ತು. ಠಾಕೂರರ ಶರೀರದ ಅಸ್ವಸ್ಥತೆ ಎಂತಹ ವಿಷಮ ಸ್ಥಿತಿಯಲ್ಲಿತ್ತು ಎಂದರೆ ನಾವು ಹಗಲೂ ಇರುಳೂ ಇಪ್ಪತ್ತು ನಾಲ್ಕು ಗಂಟೆಯೂ ಸರದಿಯ ಮೇಲೆ ಅವರ ಸೇವಾಕಾರ್ಯವನ್ನು ಹಂಚಿಕೊಂಡು ಕಾತರತೆಯಿಂದ ಜಾಗರೂಕರಾಗಿದ್ದೆವು. ಇತರ ಭಕ್ತರು ಹಗಲಿನ ಹೊತ್ತು ಅವರಿಗೆ ಸಮಯಾನುಕೂಲವಾದಾಗಲೆಲ್ಲ ಬಂದು ಔಷಧಿಪಥ್ಯಾದಿ ಖರ್ಚು ವೆಚ್ಚ ಎಲ್ಲ ವ್ಯವಸ್ಥೆ ನೋಡಿಕೊಳ್ಳುತ್ತಿದ್ದರು. ಆದರೆ ಅವರ ಸೇವೆಯ ಸಂಪೂರ್ಣ ಭಾರವನ್ನು ನಾವೆ ಹೊತ್ತಿದ್ದೆವು. ಹಾಗೆಯೆ ಅವರ ಸೇವಾಕಾರ್ಯದ ಜೊತೆಜೊತೆಗೆ ನಮ್ಮ ಸಾಧನೆ ಭಜನೆ ಧ್ಯಾನಾದಿಗಳೂ ತೀವ್ರವಾಗಿಯೆ ಸಾಗಿದ್ದುವು. ಆ ವಿಚಾರದಲ್ಲಿ ಠಾಕೂರರು ನಮಗೆ ತುಂಬ ಪ್ರೋತ್ಸಾಹ ಕೊಡುತ್ತಿದರು. ಪ್ರತ್ಯೇಕವಾಗಿ ಒಬ್ಬೊಬ್ಬರನ್ನೆ ಕರೆದು ಸಾಧನೆ ಭಜನೆಗಳ ಸಂಬಂಧವಾಗಿ ಉಪದೇಶಕೊಡುತ್ತಿದ್ದರು. ಅಲ್ಲದೆ ಯಾರು ಎಷ್ಟು ಮಟ್ಟಿಗೆ ಧ್ಯಾನ ದರ್ಶನಾದಿಗಳಲ್ಲಿ ಮುಂದುವರಿಯುತ್ತಿದ್ದಾರೆ ಎಂಬುದರ ಮೇಲೆಯೂ ಒಂದು ಕಣ್ಣಿಟ್ಟಿರುತ್ತಲೆ ಇದ್ದರು. ರಾತ್ರಿಯಲ್ಲಿ ಸ್ವಾಮೀಜಿ ಧುನಿ ಹೊತ್ತಿಸಿ ನಮ್ಮ ಜೊತೆಯಲ್ಲಿಯೆ ಧ್ಯಾನಜಪ ಮಾಡುತ್ತಿದ್ದರು. ನಕ್ಷತ್ರಮಯ ಆಕಾಶದ ಕೆಳಗೆ ಪ್ರಜ್ವಲಿಸುತ್ತಿತ್ತು ಧುನಿಜ್ವಾಲೆ. ಕೆಲವು ಸಾರಿ ಸ್ವಾಮೀಜಿ ನಮ್ಮೊಡನೆ ಭಜನೆ ಕೀರ್ತನೆಯನ್ನೂ ಮಾಡುತ್ತಿದ್ದರು. ಹೀಗೆ ಠಾಕೂರರ ಸೇವೆಯನ್ನು ಸರದಿಯ ಮೇಲೆ ಮಾಡುತ್ತಾ ಇಡೀ ರಾತ್ರಿಯೆಲ್ಲ ಧ್ಯಾನ ಜಪ ಭಜನೆ ಕೀರ್ತನೆಗಳಲ್ಲಿ ತುಂಬಾ ಆನಂದದಿಂದ ಕಳೆಯುತ್ತಿದ್ದೆವು. ಇರುಳೆಲ್ಲ ಜಾಗರಣೆ ಮಾಡುತ್ತಿದ್ದುರಿಂದ ನಮ್ಮಲ್ಲಿ ಅನೇಕರು ಬೆಳಗಾದ ಮೇಲೆ ಸ್ವಲ್ಪ ಉಪಾಹಾರ ತೆಗೆದುಕೊಂಡು ಕೊಂಚ ಹೊತ್ತು ನಿದ್ದೆಮಾಡಿಬಿಡುತ್ತಿದ್ದೆವು. ಆ ದಿನವೂ ಬೆಳಿಗ್ಗೆ ಉಪಾಹಾರಾನಂತರ ಕೆಳಗಿದ್ದ ನಡುಮನೆಯ ಪಕ್ಕದ ಸಣ್ಣಕೋಣೆಯಲ್ಲಿ ನಾವು ನಿದ್ದೆಹೋಗಿದ್ದೆವು. ಆವೊತ್ತೆ ಕಾಶೀಪುರಕ್ಕೆ ಬಂದಂದಿನಿಂದ ಮೊತ್ತ ಮೊದಲಾಗಿ ಠಾಕೂರರು ತೋಟದಲ್ಲಿ ತುಸು ಅಡ್ಡಾಡಲೆಂದು ಮಹಡಿಯಿಂದ ಕೆಳಗಿಳಿದು ಬಂದರು. ರಜಾದಿನವಾದ್ದರಿಂದ ಅಲ್ಲಿ ನೆರೆದಿದ್ದ ಅನೇಕ ಭಕ್ತರೂ ಅದೇ ಸಮಯದಲ್ಲಿ ಅಲ್ಲಿಯೆ ತಿರುಗಾಡುತ್ತಲೊ ಮಾತಾಡುತ್ತಲೊ ಗುಂಪುಗುಂಪಾಗಿದ್ದರು. ಬಹಳ ದಿನಗಳ ಮೇಲೆ ಸಗುರು ಮಹಾರಾಜರಿಗೆ ಕೆಳಗಿಳಿಯುವಷ್ಟರಮಟ್ಟಿಗೆ ಗುಣಮುಖವಾಯಿತಲ್ಲಾ ಎಂಬ ಹರ್ಷದಿಂದ ಅವರೆಲ್ಲರೂ ಅವರ ಹಿಂದೆ ಹಿಂದೆಯೆ ಸುತ್ತಮುತ್ತಲೂ ಬರತೊಡಗಿದರು. ಮೆಲ್ಲಮೆಲ್ಲನೆ ಠಾಕೂರರು ತೋಟದ ಹೆಬ್ಬಾಗಿಲ ಕಡೆ ಮುಂದುವರಿದರು. ಆಗ ಇದ್ದಕ್ಕಿದ್ದ ಹಾಗೆ ಗಿರೀಶಬಾಬು ಠಾಕೂರರ ಚರಣತಲದಲ್ಲಿ ಅಡ್ಡಬಿದ್ದು, ಸಾಷ್ಟಾಂಗ ಪ್ರಣಾಮ ಮಾಡುತ್ತಾ ಕೈಮುಗಿದುಕೊಂಡು ಅವರನ್ನು ಸ್ತೋತ್ರ ಮಾಡತೊಗಿದನು. ಗಿರೀಶಬಾಬುವಿನ ಅದ್ಭುತ ಭಕ್ತಿವಿಶ್ವಾಸದ ಆ ಸ್ತವನವನ್ನು ಆಲಿಸುತ್ತಾ ಆಲಿಸುತ್ತಾ ಠಾಕೂರರು ನಿಂತಿದ್ದಂತೆಯೇ ಸಮಾಧೀಸ್ಥರಾಗಿಬಿಟ್ಟರು. ಭಕ್ತರೂ ಠಾಕೂರರ ಆ ದಿವ್ಯ ಭಾವಾವೇಶವನ್ನು ನೋಡಿ ಆನಂದೋನ್ಮತ್ತರಾಗಿ ‘ಜಯ ರಾಮಕೃಷ್ಣ! ಜಯ ರಾಮಕೃಷ್ಣ!’ ಎಂದು ಹರ್ಷಧ್ವನಿಗೈಯುತ್ತಾ ಠಾಕೂರರ ದಿವ್ಯ ಪಾದಗಳಿಗೆ ಪುನಃ ಪುನಃ ಪ್ರಣಾಮ ಮಾಡತೊಡಗಿದರು. ಕ್ರಮೇಣ ಠಾಕೂರರ ದಿವ್ಯ ಪಾದಗಳಿಗೆ ಪುನಃ ಪುನಃ ಪ್ರಣಾಮ ಮಾಡತೊಡಗಿದರು. ಕ್ರಮೇಣ ಠಾಕೂರರ ಮನಸ್ಸು ಅರ್ಧಬಾಹ್ಯಾವಸ್ಥೆಗಿಳಿಯಿತು. ಆಗ ನೆರೆದಿದ್ದ ಭಕ್ತರನ್ನೆಲ್ಲ ಕೃಪಾದೃಷ್ಟಿಯಿಂದ ಈಕ್ಷಿಸುತ್ತಾ ‘ಮತ್ತೇನು ಹೇಳಲಿ? ನಿಮಗೆಲ್ಲರಿಗೂ ಚೈತನ್ಯವಾಗಲಿ!’ ಎಂದು ಆಶೀರ್ವದಿಸಿದರು. ಅವರು ಹಾಗೆಂದೊಡನೆ ಭಕ್ತರೆಲ್ಲರ ಹೃದಯದಲ್ಲಿ ಒಂದು ಅನಿರ್ವಚನೀಯ ಆನಂದದ ಸ್ರೋತ ಹರಿಯತೊಡಗಿತು. ಎಲ್ಲರೂ ಏಕಕಂಠದಿಂದೆಂಬಂತೆ ‘ಜಯ ರಾಮಕೃಷ್ಣ!’ ಎಂದು ಜಯಘೋಷ ಮಾಡುತ್ತಾ ಮತ್ತೆ ಮತ್ತೆ ಠಾಕೂರರಿಗೆ ಪ್ರಣಾಮಮಾಡತೊಡಗಿದರು. ಅವರೂ ಕೂಡ ಆ ದಿವ್ಯಾವಸ್ಥೆಯಲ್ಲಿಯೆ ನೆರೆದೆಲ್ಲರನ್ನೂ ಒಬ್ಬೊಬ್ಬರನ್ನಾಗಿ ಮುಟ್ಟುತ್ತಾ ‘ಚೈತನ್ಯವಾಗಲಿ, ಚೈತನ್ಯವಾಗಲಿ! ಎಂದು ಸರ್ವರಲ್ಲಿಯೂ ಚೈತನ್ಯೋದ್ಬೋಧನ ಮಾಡಿದರು. ಅವರ ಆ ದಿವ್ಯಸ್ಪರ್ಶದಿಂದ ನೆರೆದ ಭಕ್ತರಲ್ಲಿ ಒಬ್ಬೊಬ್ಬರಿಗೂ ಅದ್ಭುತ ಅನುಭೂತಿ ಉಂಟಾಯಿತು. ಕೆಲವರು ಧ್ಯಾನಸ್ಥರಾದರು. ಆನಂದಭರಿತರಾಗಿ ನೃತ್ಯ ಮಾಡತೊಡಗಿದರು. ಕೆಲವರು ಆಳತೊಡಗಿದರು. ಮತ್ತೆ ಕೆಲವರು ಉನ್ಮತ್ತರಂತೆ ಜಯಧ್ವನಿ ಮಾಡಲಾರಂಭಿಸಿದರು. ಎಂತಹ ಅನೂಹ್ಯವ್ಯಾಪಾರ! ಅದನ್ನೆಲ್ಲಾ ನೋಡುತ್ತ ಅವರ ಮಧ್ಯೆ ಶ್ರೀ ಠಾಕೂರರು ಆನಂದದಿಂದ ನಿಂತಿದ್ದರು. ಆ ಎಲ್ಲ ಘೋಷ ಗಲಭೆ ಗಲಾಟೆಗೆ ನಮ್ಮ ನಿದ್ದೆ ಹಾರಿಹೋಯಿತು. ನಾವು ದಡಬಡನೆ ಎದ್ದು ಹೊರನುಗ್ಗಿ ನೋಡುತ್ತೇವೆ: ಶ್ರೀಠಾಕೂರರ ಸುತ್ತಲೂ ಮುತ್ತಿ ಭಕ್ತರೆಲ್ಲ ಹುಚ್ಚರಂತೆ ವ್ಯವಹರಿಸುತ್ತಿದ್ದಾರೆ; ಅವರು ಮಾತ್ರ ನಗುಮೊಗದಿಂದ ಅವರನ್ನೆಲ್ಲಾ ಸಸ್ನೇಹ ದೃಷ್ಟಿಯಿಂದ ಈಕ್ಷಿಸುತ್ತಾ ಸುಖವಾಗಿ ನಿಂತಿದ್ದಾರೆ! ನಾವು ಅಲ್ಲಿಗೆ ಹೋಗುವಷ್ಟರಲ್ಲಿ ಠಾಕೂರರ ಮನಸ್ಸು ಸಹಜಾವಸ್ಥೆಗೆ ಇಳಿದುಬಿಟ್ಟಿತ್ತು; ಆದರೆ ಭಕ್ತರು ಇನ್ನೂ ಅದೇ ಆನಂದದ ಅಮಲಿನಲ್ಲಿ ಮುಳುಗಿಯೆ ಇದ್ದರು. ತರುವಾಯ ಆ ಭಕ್ತರನ್ನೆಲ್ಲ ಕೇಳಲಾಗಿ ನಡೆದ ಸಂಗತಿ ಗೊತ್ತಾಯಿತು. ಒಬ್ಬೊಬ್ಬರೂ ಹೇಳಿದರು, ಠಾಕೂರರು ಮುಟ್ಟಿದೊಡನೆಯೆ ತಮಗೆ ಅದ್ಭುತ ಆಧ್ಯಾತ್ಮಿಕ ಅನುಭೂತಿ ಉಂಟಾಯಿತು ಎಂದು. ಅಲ್ಲದೆ ಆ ಭಾವಾವೇಶದ ಪ್ರಭಾವ ದೀರ್ಘಕಾಲ ಸ್ಥಾಯಿಯಾಗಿತ್ತಂತೆ. ಅವರ ಸ್ಪರ್ಶದಿಂದ ಹಾಗಾಗುವುದರಲ್ಲಿ ಏನಚ್ಚರಿ? ಅವರು ಸ್ವಯಂ ಭಗವಾನ್ ಅಲ್ಲವೆ? ಆವೊತ್ತು ಠಾಕುರರು ಯಾರೋ ಒಬ್ಬಿಬ್ಬರಿಗೆ ಸ್ಪರ್ಶಕೃಪೆ ದಯಪಾಲಿಸಲಿಲ್ಲ. ಅವರಿಗೆ ‘ಈಗಿಲ್ಲ; ಆಮೇಲೆ!’ ಎಂದರಂತೆ, ಅದರಿಂದ ಏನು ಗೊತ್ತಾಗುತ್ತದೆ? ಸಮಯ ಬಾರದೆ ಏನು ಆಗುವುದಿಲ್ಲ ಎಂದಲ್ಲವೆ! ಅಂತಹ ಸಮಯಕ್ಕಾಗಿ ಕಾಯುತ್ತಾ ಅಭೀಪ್ಸೆಯಿಂದಿರಬೇಕು.”

ಭಕ್ತ: “ಮಹಾರಾಜ್, ಅವರಾದರೋ ಇಚ್ಛಾಮಾತ್ರದಿಂದಲೆ ಜೀವರ ಮನಸ್ಸನ್ನು ಭಗವನ್ಮುಖಿಯನ್ನಾಗಿ ಮಾಡಲೂ, ಜೀವರ ಹೃದಯವನ್ನು ಪವಿತ್ರವನ್ನಾಗಿ ಪರಿವರ್ತಿಸಲೂ ಸಮರ್ಥರು. ಹಾಗಿದ್ದರೂ ಅವರೇಕೆ ಹಾಗೆ ಮಾಡಲೊಲ್ಲರು? ಒಂದು ವೇಳೆ ಅವರ ಕೃಪೆಯೂ ಸಾಧನ ಭಜನ ಸಾಪೇಕ್ಷವಾದುದಾದರೆ ಅವರು ಅಹೇತುಕ ಕೃಪಾಸಿಂಧು ಹೇಗೆ ಆಗುತ್ತಾರೆ?”

ಮಹಾಪುರುಷಜಿ: “ಹೌದು, ನೀನು ಹೇಳುವುದೂ ಸರಿಯೆ. ನಾನೇನೊ ಹಾಗೆ ಹೇಳಿದೆ, ನನಗೆ ಹಾಗೆ ತೋರುತ್ತೆ. ನಿಜವಾಗಿ ನೋಡಿದರೆ, ಭಗವಂತನು ಸಾಧನೆ ಭಜನೆಯ ಪ್ರಯತ್ನದ ಫಲವಾಗಿ ಲಭ್ಯವಾಗುವವನಲ್ಲ. ಅಥವಾ ಇನ್ನೂ ಸರಿಯಾಗಿ ಹೇಳುವುದಾದರೆ, ಅವನನ್ನು ‘ಲಭ್ಯ’ ಎಂದೂ ಹೇಳುವುದಕ್ಕಾಗುವುದಿಲ್ಲ. ಏಕೆಂದರೆ ಪ್ರತಿಯೊಂದು ಜೀವದ ಸ್ವರೂಪವೇ ಅವನು; ಅವನು ಸಕಲ ಪ್ರಾಣಿಗಳ ಅಂತರಾತ್ಮ. ಯಾವ ಎಲ್ಲ ಆವರಣಗಳ ದೆಸೆಯಿಂದ ಜೀವರುಗಳ ಅಂತರ್ದೃಷ್ಟಿ ರುದ್ಧವಾಗಿದೆಯೊ ಆ ಆವರಣಗಳನ್ನೆಲ್ಲ ದೂರಮಾಡುವುದಕ್ಕಾಗಿ ಮಾತ್ರ ಈ ಸಾಧನೆ ಭಜನೆ. ಯಾವ ಕ್ಷಣ ಜೀವಕ್ಕೆ ಸ್ವಸ್ವರೂಪದ ಜ್ಞಾನವಾಗುತ್ತದೆಯೊ ಆಗ ಅದು ಅಂತರಾತ್ಮನಲ್ಲಿ ಐಕ್ಯವಾಗಿಬಿಡುತ್ತದೆ. ಆತನು ಕೃಪೆದೋರಿ ಜೀವರ ಅಜ್ಞಾನಾವರಣವನ್ನು ತೆಗೆದುಹಾಕುವುದರಿಂದಲೆ ಜೀವರಿಗೆ ದೇವರನ್ನು ಪಡೆಯಬೇಕೆಂಬ ಆಕಾಂಕ್ಷಾರೂಪದ ಘವದಭೀಪ್ಸೆ ತೀವ್ರವಾಗುತ್ತದೆ; ಅದಕ್ಕೆ ಆತನ ಕೃಪೆ ಎನ್ನುತ್ತೇವೆ. ಆದರೆ ಅವೆಲ್ಲವೂ ಒಂದು ನಿಯಮ ಮತ್ತು ಕ್ರಮಾನುಸಾರವಾಗಿಯೆ ನಡೆಯುತ್ತವೆ ಎಂಬುದೂ ಸತ್ಯ. ಅಂತಹ ಕ್ರಮ ನಿಯಮಗಳಲ್ಲದ ರೀತಿಯನ್ನು ನಿರೀಕ್ಷಿಸುವುದೆಂದರೆ, ಒಂದು ಚಿಕ್ಕ ಮಗುವನ್ನು ಇದ್ದಕ್ಕಿದ್ದ ಹಾಗೆ ದೊಡ್ಡವನನ್ನಾಗಿ ಮಾಡುವ ಪ್ರಯತ್ನದಂತೆ ಅಸ್ವಾಭಾವಿಕ ಮತ್ತು ವ್ಯಥ. ದೇಹ ಮನಸ್ಸುಗಳು ಕ್ರಮವಾಗಿ ವಿಕಾಸಗೊಂಡಂತೆಲ್ಲ ಶಿಶು ಕ್ರಮೇಣ ಬಾಲಕತ್ವ, ಯುವತ್ವ, ಪ್ರೌಢತ್ವ ಮತ್ತು ವಾರ್ಧಕ್ಯಗಳನ್ನು ಪಡೆಯುತ್ತದೆ. ಹಾಗೆಯೇ ಜೀವದ ಮನಸ್ಸಿನಲ್ಲಿ ಭಗವದ್‌ಭಾವ ಸ್ಫುರಣವಾಗುವುದಕ್ಕೂ ಒಂದು ಸ್ತರ ಇರುತ್ತದೆ; ಸಹಜ ಮತ್ತು ಸ್ವಾಭಾವಿಕವಾಗಿ ಒದಗುವ ವಿಕಾಸ ಧ್ರುವವಾಗಿರುತ್ತದೆ, ಅಲ್ಲದೆ ಫಲಕಾರಿ. ಸತ್ಯವೆ. ಭಗವಂತ ಇಚ್ಛಿಸಿದರೆ ಒಂದೆ ದಿನದಲ್ಲಿ ಎಲ್ಲ ಜೀವರನ್ನೂ ಮುಕ್ತರನ್ನಾಗಿ ಮಾಡಿಬಿಬಡಬಲ್ಲ. ಏಕೆಂದರೆ ಅವನು ಸರ್ವಶಕ್ತ. ಆದರೆ ವಸ್ತುಸ್ಥಿತಿ-ಅವನು ಹಾಗೆ ಮಾಡುತ್ತಿಲ್ಲ. ಸಮಗ್ರ ವಿಶ್ವ ಬ್ರಹ್ಮಾಂಡವನ್ನು ಏಕಮಾತ್ರ ನಿಯಮದಿಂದ ಚಾಲಿಸುತ್ತಾನೆ. ವಿಶೇಷ ಕಾರಣವಿಲ್ಲದೆ ನಿಯಮದ ವ್ಯತಿಕ್ರಮಕ್ಕೆ ಒಮ್ಮೆಯಾದರೂ ಅವಕಾಶ ಕೊಡುವುದಿಲ್ಲ. ಅವನು ಅಹೇತುಕ ಕೃಪಾಸಿಂಧುವೂ ದಿಟ; ಅದರಲ್ಲಿ ಬಿಂದು ಮಾತ್ರ ಸಂಶಯವಿಲ್ಲ. ತನ್ನ ಸೃಷ್ಟಿಯ ಜೀವರ ಮೇಲೆ ಆತನಿಗೆ ಎಂತಹ ಕೃಪೆ, ಎಂತಹ ದಯೆ ಇದೆ ಎಂಬುದನ್ನು ತಿಳಿಯಲು ಒಂದಿನಿತಾದರೂ ನೀನು ಸಮರ್ಥನಾಗಿದ್ದರೆ, ಆತನು ಕೃಪಾಸಿಂಧು ಹೌದೊ ಅಲ್ಲವೊ ಎಂಬ ಪ್ರರ್ಶನೆಯ ಸುಳಿವಿಗೂ ಸ್ಥಾನವಿರುತ್ತಿರಲಿಲ್ಲ ನಿನ್ನ ಮನಸ್ಸಿನಲ್ಲಿ. ಆತನು ಜೀವರ ದುಃಖಕ್ಕೆ ಮರುಗಿ ಕಾತರತೆಯಿಂದ ಜೀವೋದ್ಧಾರದ ಸಲುವಾಗಿ ಸ್ಥೂಲ ದೇಹಧಾರಣ ಮಾಡಿ ಜಗತ್ತಿಗೆ ಅವತೀರ್ಣ ನಾಗುತ್ತಾನೆ ಎಂಬುದೊಂದೆ ಸಾಲದೆ ಆತನು ಕೃಪಾಸಿಂಧು ಎಂಬುದಕ್ಕೆ ಪ್ರಮಾಣ? ಅವನೋ ಸದಾ ಪೂರ್ಣ; ಪಡೆಯಲಾರದುದಾಗಲಿ ಪಡೆಯಬೇಕಾದುದಾಗಲಿ ಯಾವುದೂ ಅವನಿಗಿಲ್ಲ. ಆದರೂ ಅವನು ಕೃಪಾಪರವಶನಾಗಿ ಜೀವೋದ್ಧಾರ ರೂಪದ ಕರ್ಮರಲ್ಲಿ ಪ್ರವೃತ್ತನಾಗುತ್ತಾನೆ. ಆತನ ಎಷ್ಟು ಕೃಪಾಮಯ ಎಂದು ಯಾರಿಗಾಗಲಿ ಬಾಯಿಂದ ಹೇಳಲು ಸಾಧ್ಯವೆ? ಅದು ಅನುಭವದ ವಸ್ತು. ಮಾನುಷ ಲೀಲಾಮತ್ತನಾದ ಅವನ ಕೃಪೆಯನ್ನು ಯಾರು ತಾನೆ ತಿಳಿದಾರು? ಶ್ರೀಗುರು ಮಹಾರಾಜ್ ಹೇಳುತ್ತಿದ್ದರು: ‘ಮನುಷ್ಯ ದೇವರ ಕಡೆಗೆ ಒಂದು ಅಡಿ ಇಡಲು ಯತ್ನಿಸಿದರೆ ಅವನು ಹತ್ತು ಅಡಿ ಇಟ್ಟು ಹತ್ತಿರಕ್ಕೆ ಓಡಿ ಬರುತ್ತಾನೆ.’ ಅಂಥಾದ್ದು ಅವನ ದಯೆ! ಅವನ ಕೃಪೆಯಲ್ಲಿ ನಿನಗೆ ಎಂದೆಂದೂ ಸಂದೇಹ ಬೇಡ; ಅಂತಹ ಭಾವ ನಿನ್ನ ಮನಸ್ಸಿನಲ್ಲಿ ಇಣುಕುವುದಕ್ಕೂ ಅವಕಾಶ ಕೊಡಬೇಡ. ಪ್ರೇಮಸಹಿತ ಅವನನ್ನು ಕರೆಯುತ್ತಾ ಹೋಗು; ಅವನ ಕೃಪೆ ನಿನ್ನ ಹೃದಯ ಮನಸ್ಸುಗಳನ್ನೆಲ್ಲ ತುಂಬಿ ತುಳುಕುತ್ತದೆ. ಎಲ್ಲ ಉಪಲಬ್ಧಿ ಏನು ಒಂದೆ ದಿನಕ್ಕೆ ಆಗುತ್ತದಯೆ, ಹಠಾತ್ತಾಗಿ? ಕ್ರಮೇಣ ಎಲ್ಲ ಆಗುತ್ತದೆ; ಎಲ್ಲ ದೊರೆಯುತ್ತದೆ. ನಮಗೂ ಕೂಡ ಠಾಕೂರರ ಸಾಕ್ಷಾತ್ ದರ್ಶನ ಭಾಗ್ಯ ದೊರೆಯದೆ ಇದ್ದಿದ್ದರೆ ಗೊತ್ತಾಗುತ್ತಿತ್ತೇನು, ಜೀವರ ಮೇಲೆ ಭಗವಂತಹ ಕೃಪೆ ಎಂಥಾದ್ದೆಂದು? ಅವರೋ ಕೃಪೆಯನ್ನು ದಯಪಾಲಿಸುವುದಕ್ಕಾಗಿ ಚಡಪಡಿಸುತ್ತಿದ್ದರು, ಅಳುತ್ತಿದ್ದರು! ಆಂತರಿಕ ಭಾವಪೂರ್ವಕವಾಗಿ ಯಾರಿಗೆ ತಾನೆ ಬೇಕಾಗಿದೆ ಭಗವಂತನ ಕೃಪೆ? ಮನುಷ್ಯನೋ ವೈಷಯಿಕ ಸುಖಗಳಲ್ಲಿ ಮತ್ತನಾಗಿಬಿಟ್ಟಿದ್ದಾನೆ. ಭಗವದಾನಂದ ಯಾರಿಗೆ ನಿಜವಾಗಿ ಬೇಕಾಗಿದೆಯೊ ಅವರಿಗೆ ಲಭಿಸಿಯೆ ಲಭಿಸುತ್ತದೆ.”

ಋತದ ಚಿತ್ತಾಗಿ ವಿಶ್ವಗಳ ಸೃಜಿಸಿ ನೆಡೆಸುತಿಹ ಶಕ್ತಿಯೆ.
ಅನ್ನ ಪ್ರಾಣಗಳ ಮನೋಲೋಕಗಳ ಸೂತ್ರಧರ ಯುಕ್ತಿಯೆ,
ಅಖಿಲ ಬಂಧನದ ಹೃದಯದಲ್ಲಿ ಅವಿನಾಶಿ ಆಸಕ್ತಿಯೆ,
ನಿನ್ನ ಅವತಾರವೆನ್ನ ಉದ್ಧಾರ; ಬಾ, ದಿವ್ಯ ಮುಕ್ತಿಯೆ |  – ಋತಚಿನ್ಮಯಿ ಜಗನ್ಮಾತೆಗೆ ‘ಅಗ್ನಿಹಂಸ ‘ದಿಂದ

* * *
* ಕಾಶೀಪುರದ ತೋಟದ ಮನೆಯಲ್ಲಿ ಶ್ರೀರಾಮಕೃಷ್ಣರು ಕಾಯಿಲೆ ಮಲಗಿದ್ದಾಗ ಜನವರಿ ಒಂದರಂದು ಒಂದು ದಿನ ಮಹಡಿಯಿಂದ ಇಳಿದುಬಂದು, ತಮ್ಮನ್ನು ಕಾಲು ಮುಟ್ಟಿ ನಮಸ್ಕರಿಸಿದ ಅಲ್ಲಿದ್ದ ಭಕ್ತವೃಂದಕ್ಕೆ ಆಧ್ಯಾತ್ಮಿಕ ಅನುಭವಗಳುಂಟಾಗುವಂತೆ ಅನುಗ್ರಹಿಸಿದ ದಿನದ ನೆನಪಿಗಾಗಿ ನಡೆಸುವ ಉತ್ಸವ. ಕಲ್ಪತರು ತನ್ನಡಿ ಬಂದವರ ಆಸೆಗಳನ್ನೆಲ್ಲ ಈಡೇರಿಸುವಂತೆ ಶ್ರೀ ಗುರು ಆವೊತ್ತು ಅರ್ಹಾನರ್ಹ ಭೇದವಿಲ್ಲದೆ ಎಲ್ಲರನ್ನೂ ಅನುಗ್ರಹಿಸಿದ್ದರು.