ದೇವಘಡದಲ್ಲಿ ನೂತನವಾಗಿ ನಿರ್ಮಿತವಾದ ಶ್ರೀರಾಮಕೃಷ್ಣ ಮಹಾಸಂಘದ ವಿದ್ಯಾಪೀಠದ ಕಟ್ಟಡಗಳನ್ನು ಉದ್ಘಾಟಿಸುವ ಸಲುವಾಗಿ ಮಹಾಪುರುಷಜಿ ಬೇಲೂರು ಮಠದಿಂದ ಅನೇಕ ಜನ ಸಾಧು ಸಂನ್ಯಾಸಿಗಳೊಡನೆ ಅಲ್ಲಿಗೆ ಹೋದರು. ಅವರ ಶುಭಾಗಮನದಿಂದ ಅಲ್ಲಿದ್ದವರಿಗೆಲ್ಲ ನಿತ್ಯವೂ ಆನಂದೋತ್ಸವವಾಗಿ ಪರಿಣಮಿಸಿತು. ಮಹಾಪುರಷಜಿಯ ಪೂತಸಂಗದಲ್ಲಿ ಅವರೆಲ್ಲರ ಹೃದಯಗಳಲ್ಲಿಯೂ ಒಂದು ಆಧ್ಯಾತ್ಮಿಕ ಪ್ರೇರಣವಾದಂತೆ ಅನುಭವವಾಗಿ ಧನ್ಯರಾದರು. ಅವರೂ ಕೂಡ ಆ ಪವಿತ್ರ ತೀರ್ಥಕ್ಷೇತ್ರಗಳಲ್ಲಿ ತುಂಬ ಹರ್ಷಚಿತ್ತರಾಗಿದ್ದರು. ಒಂದು ದಿನ ಅನೇಕ ಸಾಧುಗಳೂ ಬ್ರಹ್ಮಚಾರಿಗಳೂ ಅವರ ಬಳಿ ನೆರೆದಿದ್ದಾಗ ಸಂನ್ಯಾಸಿಯೊಬ್ಬರು ಕೇಳಿದರು: “ಮಹರಾಜ್, ತಮ್ಮ ಪರಿವ್ರಾಜಕ ಜೀವನದ ಸಂಗತಿಗಳನ್ನು ಕೇಳಬೇಕೆಂದು ನಮಗೆಲ್ಲ ಬಹಳ ಆಸೆಯಾಗಿದೆ.”

ನಗುಮೊಗರಾಗಿ ಮಹಾಪುರುಷಜಿ ಹೇಳಿದರು; “ಆ ಹಳೆಯ ಕಥೆಯನ್ನೆಲ್ಲ ಕೇಳುವುದರಿಂದ ಏನು ಪ್ರಯೋಜನ? ಆಗ ಅದನ್ನೆಲ್ಲ ನಾವು ಒಂದು ವ್ರತಭಾವದಿಂದ ಆಚರಿಸಿದೆವು; ಈಗಲಾದರೊ ಶ್ರೀಠಾಕೂರರು ನಮ್ಮನ್ನು ಈ ಕರ್ಮ ಪ್ರವಾಹಕ್ಕೆ ಎಳೆದು ತಂದಿದ್ದಾರೆ. ಅವರ ಯುಗಧರ್ಮ ಪ್ರಚಾರಕ್ಕೆ ಈ ರೀತಿಯೆ ಹೆಚ್ಚು ಪ್ರಯೋಜನಕರ. ಆದ್ದರಿಂದಲೆ ಠಾಕೂರರು ಈ ಮುದಿವಯಸ್ಸಿನಲ್ಲಿ ಯೂ ನಮ್ಮಿಂದ ಅಷ್ಟೊ ಇಷ್ಟೊ ಕೆಲಸ ಮಾಡಿಸುತ್ತಿದ್ದಾರೆ. ನಾವು ಭಾವಿಸಿದ್ದೆವು. ತಪಸ್ಯೆಯಲ್ಲಿಯೆ ಜೀವನ ಕಳೆಯುತ್ತೇವೆ ಎಂದು; ಹಾಗೆಯೆ ಮಾಡುತ್ತಲೂ ಇದ್ದೆವು. ಆದರೆ ಠಾಕೂರರು ಹಾಗೆ ಮಾಡಲು ಎಲ್ಲಿ ಬಿಡುತ್ತಾರೆ? ನೋಡಲಿಲ್ಲವೆ, ದುಡಿದೂ ದುಡಿದೂ ಸ್ವಾಮೀಜಿಯ ಶರೀರ ಎಷ್ಟು ಅಲ್ಪ ವಯಸ್ಸಿನಲ್ಲಿಯೆ ಬಿದ್ದು ಹೋಯಿತು. ಅವರೂ ಎಷ್ಟೊ ಸಾರಿ ತಪಸ್ಸು ಮಾಡಬೇಕೆಂದು ಹಿಮಾಲಯಕ್ಕೆ ಹೋದರು; ಆದರೆ ಪ್ರತಿಸಲವೂ ಯಾರೊ ಅವರನ್ನು ಆ ಪರ್ವತೇಂದ್ರನ ಅಂಕಪೀಠದಿಂದ ಕೆಳಗೆಳೆದು ತರುವಂತೆ ಅವರಿಗೆ ಅನುಭವವಾಗುತ್ತಿತ್ತು. ಆಮೇಲೆ ಅವರು ರಾಜಪುತಾನ ಮುಂತಾದ ಸ್ಥಳಗಳಲ್ಲಿ ಪರಿವ್ರಜಿಸತೊಡಗಿದರು; ಅನೇಕ ರಾಜಮಹಾರಾಜರಿಗೆ ಅವರ ಪರಿಚಯವಾಯಿತು; ಮಾಡುವ ಕೆಲಸವೂ ಇತ್ತು. ತಿರುಗುತ್ತಾ ತಿರುಗುತ್ತಾ ಪೋರಬಂದರಿಗೆ ಹೋದರು; ಆಗ ಆ ಸಂಸ್ಥಾನದಲ್ಲಿ ರಾಜ ಇರಲಿಲ್ಲ; ರಾಜ್ಯದಲ್ಲಿ ನಾನಾ ವಿಧವಾದ ಅವ್ಯವಸ್ಥೆ ತಲೆಹಾಕಿತ್ತು. ಅದಕ್ಕಾಗಿ ಬ್ರಿಟಿಷ್ ಸರಕಾರ ಶ್ರೀ ಶಂಕರರಾವ್ ಪಾಂಡುರಂಗ ಎಂಬುವರನ್ನು ಆಡಳಿತಗಾರರನ್ನಾಗಿ ನೇಮಿಸಿತ್ತು. ಶ್ರೀ ಶಂಕರರಾವ್ ದೊಡ್ಡ ವಿದ್ವಾಮಸರು, ಮೇಧಾವಿಗಳು, ವಿಚಕ್ಷಣರು; ಜೊತೆಗೆ ತುಂಬ ಸದ್ಭಾವದ ವ್ಯಕ್ತಿ. ಅವರು ಯೂರೋಪಿನ ಅನೇಕ ಭಾಗಗಳಲ್ಲಿ ಪ್ರವಾಸ ಮಾಡಿದ್ದರು; ಅಲ್ಲದೆ ಫ್ರೆಂಚ್ ಮತ್ತು ಜರ್ಮನ್ ಭಾಷೆಗಳಲ್ಲಿಯೂ ಪರಿಶ್ರಮವಿತ್ತು. ಅವರ ಮನೆಯಲ್ಲಿಅವರದೆ ಆಗಿದ್ದ ಬಹು ದೊಡ್ಡ ಪುಸ್ತಕ ಭಂಡಾರವಿತ್ತು; ಸ್ವತಃ ಅವರೂ ತುಂಬ ಅಧ್ಯಯನ ಪ್ರಿಯರಾಗಿದ್ದರು.ಅ ವರ ಲೈಬರಿ ಕಂಡು ಸ್ವಾಮೀಜಿ ಬಹಳ ಆಕರ್ಷಿತರಾದರು. ಸ್ವಾಮೀಜಿಯ ಅಭಿಲಾಷೆ ತಿಳಿಯಿತೊ ಇಲ್ಲವೊ ಶ್ರೀ ಶಂಕರರಾವ್‌ಗೆ ಬಹು ಖುಷಿಯಾಗಿ ‘ತಮಗೆ ಮನಸ್ಸು ಬಂದಷ್ಟು ದಿನ ಇಲ್ಲಿದ್ದುಕೊಂಡು ಮನಃಪೂರ್ತಿಯಾಗಿ ಅಧ್ಯಯನ ಮಾಡಬಹುದು’ ಎಂದರು. ಸ್ವಾಮೀಜಿ ಅಲ್ಲಿಯೆ ಕೆಲವು ದಿನ  ಇದ್ದುಬಿಟ್ಟರು. ಶಂಕರರಾವ್ ಚೆನ್ನಾಗಿ ಸಂಸ್ಕೃತ ಬಲ್ಲವರು. ಒಂದು ದಿನ ಅವರು ಸ್ವಾಮೀಜಿಗೆ ಹೇಳಿದರು: ‘ಸ್ವಾಮಿಜಿ ನಿಜ ಹೇಳ್ತೇನೆ, ಮೊದಲು ಈ ಶಾಸ್ತ್ರಗಳನ್ನು ಓದಿದಾಗ ನನಗನ್ನಿಸಿತ್ತು, ಈ ಶಾಸ್ತ್ರಗಳಲ್ಲಿ ಏನೂ ಸತ್ಯ ಇಲ್ಲ, ಅವೆಲ್ಲ ಈ ಶಾಸ್ತ್ರಕಾರರ ಮೆದುಳಿನ ಭ್ರಾಂತಿವಿಲಾಸಗಳು, ಯಾರಿಗೆ ಹೇಗೆ ತೋಚಿತೊ ಹಾಗೆ ಗೀಚಿಬಿಟ್ಟಿದ್ದಾರೆ ಎಂದು. ಆದರೆ ಈಗ ತಮ್ಮನ್ನು ನೋಡಿದ ಮೇಳೆ ತಮ್ಮ ಸಂಗಪ್ರಭಾವದಿಂದ ನನ್ನ ಅಭಿಪ್ರಾಯ ಬದಲಾವಣೆ ಹೊಂದಿದೆ. ನನಗೆ ಈಗ ಅನ್ನಿಸತೊಡಗಿದೆ, ನಮ್ಮ ಧರ್ಮಗ್ರಂಥಗಳಲ್ಲಿ ಇರುವುದೆಲ್ಲ ನಿಜ ಎಂದು. ಪಾಶ್ಚಾತ್ಯ  ದೇಶಗಳಲ್ಲಿ ನಾನು ನೋಡಿದ್ದೇನೆ; ಸ್ವಲ್ಪ ಆಲೋಚನಾಶೀಲರಾದವರು ನಮ್ಮ ಹಿಂದೂದರ್ಶನ ಮತ್ತು ಶಾಸ್ತ್ರಾದಿಗಳ ಸಂಬಂಧವಾಗಿ ಹೆಚ್ಚು ವಿಷಯ ತಿಳಿಯಲು ತುಂಬ ಉತ್ಸುಕರಾಗಿರುತ್ತಾರೆ. ಆದರೆ ನಮ್ಮ ಶಾಸ್ತ್ರಗಳಿಗೆ ಸರಿಯಾದ ವ್ಯಾಖ್ಯಾನ ಕೊಡುವ ಒಬ್ಬನಾದರೂ ವ್ಯಕ್ತಿ ಇದುವರೆಗೂ ಅವರಿಗೆ ದೊರೆತಿಲ್ಲ. ತಾವೇನಾದರೂ ಆ ಪಾಶ್ಚಾತ್ಯ ದೇಶಗಳಿಗೆ ಹೋಗಿ ನಮ್ಮ ವೈದಿಕ ಧರ್ಮವನ್ನು ಅವರಿಗೆ ದೊರೆತಿಲ್ಲ. ತಾವೇನಾದರೂ ಆ ಪಾಶ್ಚಾತ್ಯ ದೇಶಗಳಿಗೆ ಹೋಗಿ ನಮ್ಮ ವೈದಿಕ ಧರ್ಮವನ್ನು ಅವರಿಗೆ ವಿವರಿಸುವುದಾದರೆ ಅದೊಂದು ಮಹತ್ಕಾರ್ಯ ಸಿದ್ಧಿಯೆ ಆದೀತು!’ ನೋಡಿದೆಯಾ ಠಾಕೂರರ ಕಾರ್ಯ ಹೇಗೆ ಸೂಚಿತವಾಗಿ ಪ್ರಾರಂಭವಾಗುತ್ತದೆ! ಅದನ್ನು ಕೇಳಿ ಸ್ವಾಮೀಜಿ ಹೇಳಿದರು; ‘ಅದೇನೊ ಒಳ್ಳೆಯ ಸೂಚನೆಯೆ! ನಾನು ಸಂನ್ಯಾಸಿ. ನನಗೆ ಆ ದೇಶ ಈ ದೇಶ ಏನೂ ಇಲ್ಲ. ಅವಕಾಶವೊದಗಿದರೆ ಹೋಗಿಯೆ ಹೋಗುತ್ತೇನೆ. ‘ಅದಕ್ಕೆ ಶಂಕರಾವ್ ಹೇಳಿದರು ‘ಆ ದೇಶಗಳಲ್ಲಿ ಅಭಿಜಾತ ಸಂಪ್ರದಾಯದವರೊಡನೆ ಬೆರೆಯಬೇಕಾದರೆಫ್ರೆಂಚ್ ಭಾಷೆ ಬೇಕಾಗುತ್ತದೆ. ತಾವು ಸ್ವಲ್ಪ ಫ್ರೆಂಚ್ ಕಲಿಯಿರಿ: ನಾನೆ ನೆರವಾಗುತ್ತೇನೆ. ‘ಸರಿ, ಸ್ವಾಮೀಜಿ, ಅವರಿಂದ ಚೆನ್ನಾಗಿಯೆ ಫ್ರೆಂಚ್ ಕಲಿತರು. ನಾನು ಆವಾಗ ಆಲಂಬಜಾರ್‌ ಮಠದಲ್ಲಿದ್ದೆ. ಸ್ವಾಮಿಜಿ ಎಲ್ಲಿದ್ದಾರೆ, ಏನು ಮಾಡುತ್ತಿದ್ದಾರೆ ಎಂಬ ಯಾವ ಸಮಾಚಾರವೂ ಸುಮಾರು ಎರಡು ವರ್ಷಗಳಿಂದ ನಮಗೆ ಸಿಕ್ಕಿರಲಿಲ್ಲ. ಯಾರನ್ನು ಕೇಳಿದರೂ ಒಂದೆ ಉತ್ತರ-‘ಗೊತ್ತಿಲ್ಲ.’ ಅವರಂತೂ ಅಲಂಬಜಾರ್‌ ಮಠವನ್ನು ನೋಡಿಯೂ ಇರಲಿಲ್ಲ. ಒಂದು ದಿನ ಇದ್ದಕ್ಕಿದ್ದ ಹಾಗೆ ನಾಲ್ಕು ಪುಟ ಭರ್ತಿಯಾದ ಒಂದು ಕಾಗದ ಬಂತು. ಅದರಲ್ಲಿದ್ದುದು ಯಾವ ಭಾಷೆ ಎಂಬುದೂ ನಮ್ಮಲ್ಲಿ ಯಾರಿಗೂ ಗೊತ್ತಾಗಲಿಲ್ಲ. ಯಾರು ಬರೆದದ್ದು, ಏನು ವಿಷಯ ಒಂದೂ ಬಗೆಹರಿಯಲಿಲ್ಲ. ಶಶಿಮಹಾರಾಜರಿಗೆ (ಸ್ವಾಮಿ ರಾಮಕೃಷ್ಣಾಂನದರು) ಮತ್ತು ಶಾರದಾಗೆ (ಸ್ವಾಮಿ ತ್ರಿಗುಣಾತೀತಾನಂದರು) ಚೂರೋ ಪಾರೋ ಫ್ರೆಂಚ್ ತಿಳಿದಿತ್ತು. ಅವರಿಬ್ಬರೂ ಸೇರಿ ಬಹಳ ಕಾಳ ಅಜಮಾಯಿಸಿ ಮಾಡಿ ಹೇಳಿದರು: ‘ಕಾಗದ ತೆಗೆದುಕೊಂಡು ಓಡಿದೆವು ಕಲ್ಕತ್ತಾದಲ್ಲಿದ್ದ ಅಘೋರ ಚಾಟರ್ಜಿ ಹತ್ತಿರಕ್ಕೆ. ಅವರು ಹೈದರಾಬಾದ್ ಸ್ಟೇಟ್ ಕಾಲೇಜಿನ ಪ್ರಿನ್ಸಿಪಾಲ್ ಆಗಿದ್ದರು. ಅವರಿಗೆ ಫ್ರೆಂಚ್ ಚೆನ್ನಾಗಿ ಗೊತ್ತಿತ್ತು. ಅವರು ಅದನ್ನೋದಿ ಬಂಗಾಳಿಗೆ ಭಾಷಾಂತರ ಮಾಡಿ ಹೇಳಿದರು. ಆವಾಗಲೆ ನಮಗೆ ಗೊತ್ತಾಗಿದ್ದು, ಸ್ವಾಮೀಜಿ ಎಲ್ಲಿದ್ದಾರೆ, ಏನು ಮಾಡುತ್ತಿದ್ದಾರೆ, ಫ್ರೆಂಚ್ ಕಲಿತಿದ್ದಾರೆ ಎಂದೆಲ್ಲ. ಸರಿ, ಆಗಲೆ ನಿನಗೆ ಹೇಳಿದೆನಲ್ಲವೆ, ಸ್ವಾಮೀಜಿ ತಮ್ಮ ಬದುಕನ್ನೆಲ್ಲ ಧ್ಯಾನ ಜಪ ಮತ್ತು ಇತರ ಆಧ್ಯಾತ್ಮಿಕ ಸಾಧನೆಗಳಲ್ಲಿ ಕಳೆಯಲು ಮನಸ್ಸು ಮಾಡಿದರು ಎಂದು. ಆದರೆಯಾವ ಮಹಾಶಕ್ತಿ ರಾಮಕೃಷ್ಣ ರೂಪದಲ್ಲಿ ಅವತೀರ್ಣವಾಯಿತೊ ಅದು ಅವರನ್ನು ಹಾಗೆ ಮಾಡಲು ಬಿಡಲಿಲ್ಲ; ಜಗತ್ತಿನ ಉದ್ಧಾರಕ್ಕಾಗಿ ಯುಗಧರ ಪ್ರಚಾರ ರೂಪದ ಕಾರ್ಯದ ನೊಗವನ್ನು ಅವರ ಹೆಗಲ ಮೇಲೆ ಹೇರಿಯೆಬಿಟ್ಟಿತು. ಯೋಗಿರಾಜರಾಗಿದ್ದ ಸ್ವಾಮೀಜಿಗೆ ಅವರು ಹಾಗೆ ಮನಸ್ಸು ಮಾಡಿದ್ದರೆ, ತಮ್ಮ ಜೀವಮಾನವನ್ನೆಲ್ಲ ಸಮಾಧಿಸ್ಥರಾಗಿಯೇ ಕಳೆಯುವುದೇನೊ ಸುಲಭವಾಗಿತ್ತು; ಆದರೆ ಗುರುಮಹಾರಾಜರು ಅವರನ್ನು ತೀವ್ರ ಕರ್ಮಾರಂಗಕ್ಕೆ ಎಳೆದುತಂದರು. ನಿಮ್ಮೆಲ್ಲರನ್ನೂ ಅವರೇ ತಮ್ಮ ಯುಗಧರ್ಮ ಪ್ರತಿಷ್ಠಾಪನೆಗೆ ಸಹಾಯರೂಪರನ್ನಾಗಿ ನಿಯೋಜಿಸಿಕೊಂಡಿದ್ದಾರೆ. ಯಾರನ್ನು ಅವರು ಆರಿಸಿಕೊಂಡಿದ್ದಾರೋ ಅವರೆಲ್ಲ ಧನ್ಯರು!”

ಸಂನ್ಯಾಸಿ: “ಹಾಗಾದರೆ ತಪಸ್ಯೆ ಮತ್ತು ಸಾಧನೆ ಭಜನೆಗಳಿಂದ ಪ್ರಯೋಜನವಿಲ್ಲವೆ? ತಾವೂ ಎಷ್ಟೊಂದು ಮಾಡಿದ್ದೀರಿ!”

ಮಹಾಪುರುಷಜಿ: “ಹೌದು ಸಾಧನೆ ಭಜನೆಗಳೂ ಬೇಕು; ತಪಸ್ಯೆಯೂ ಅವಶ್ಯಕ. ಜೀವನದ ಗತಿ ಭಗವನ್ಮುಖಿಯಾಗುವಂತೆ ಮಾಡಲು ಇರುವುದೊಂದೇ ಉಪಾಯ – ಸಾಧನೆ ಭಜನೆ. ಆದರೆ ಆ ಸಾಧನೆ ಭಜನೆ ತಪಸ್ಯೆಗಳೆಲ್ಲ ಒಂದೇ ತರಹವೇನು? ಈಗ ನೋಡು, ನೀನೆ ಎಷ್ಟು ಕಷ್ಟ ಸಹಿಸಬೇಕಾಗಿದೆ; ಎಂತಹ ಪ್ರತಿಕೂಲ ಪರಿಸ್ಥಿತಿಯೊಡನೆ ಕಾದಾಡಿ ಭಗವಂತನ ಕೆಲಸ ಮಾಡುತ್ತಿದ್ದೀಯೆ. ಇದೂ ಒಂದು ರೀತಿಯ ತಪಸ್ಯೆಯೆ. ಸದಾಕಾಲವೂ ಹೃದಯದಲ್ಲಿ ಈ ಭಾವ ಜಾಗ್ರತವಾಗಿದ್ದರೆ ಯಾರು ಯಾವ ಕೆಲಸ ಮಾಡಿದರೂ ಅದು ಅವನ ಕೆಲಸವೆ, ಆತನ ಸೇವೆಯೆ. ನಿನ್ನದೆಂಬುದು ಏನೂ ಇಲ್ಲ. ಇದು ಒಂದು ರೀತಿಯ ಸಾಧನೆಯೆ. ಆತನೇ ಕೃಪೆಯಿಟ್ಟು ನಿನ್ನನ್ನು ತನ್ನ ಕಾರ್ಯಸಾಧನೆಗೆ ಯಂತ್ರಸ್ವರೂಪವನ್ನಾಗಿ ಮಾಡಿಕೊಂಡಿದ್ದಾನೆ; ಅಷ್ಟರಿಂದಲೆ ನಿನ್ನ ಜೀವನ ಧನ್ಯವಾಗಿ ಹೋಗಿದೆ. ಒಂದು ವಿಷಯ ಜ್ಞಾಪಕವಿಡು; ಆತನ ಯುಗಧರ್ಮ ಸಂಸ್ಥಾಪನಾಕಾರ್ಯ ಯಾವ ಒಬ್ಬ ವ್ಯಕ್ತಿಯ ಮೇಲೂ ನಿಂತಿಲ್ಲ; ಭಾಗ್ಯವಂತೊ ಅವನಿಗೆ ಆತನ ಸೇವೆ ಮಾಡುವ ಪುಣ್ಯ ದೊರೆಯುತ್ತದೆ. ಒಳ್ಳೆಯ ಗುಣವಂತರಾದ ಎಷ್ಟೋ ಜನರನ್ನು ನೋಡಿದ್ದೇನೆ; ಆದರೆ ಠಾಕೂರರು ಅವರನ್ನೇಕೋ ಯಾತಕ್ಕೂ ಬೇಡದವರು; ಆದರೂ ಠಾಕೂರರು ಅವರ ಕೈಲಿ ಆಶ್ಚರ್ಯಕರವಾದ ಸುಯೋಗ ದೊರೆಯುತ್ತದೆಯೊ ಅವರು ಧನ್ಯರಾಗಿ ಹೋಗುತ್ತಾರೆ. ಅದಕ್ಕೇ ಸ್ವಾಮೀಜಿ ಹೇಳುವುದು – ಅವರಿಗೆ ಇಚ್ಛೆಯಾದರೆ ಲಕ್ಷ ವಿವೇಕಾನಂದರನ್ನು ತಯಾರು ಮಾಡಲು ಸಮರ್ಥರು ಎಂದು. ಈ ಭಾವ ನಿನ್ನ ಮನಸ್ಸಿನಲ್ಲಿ ನಿತ್ಯವೂ ಜ್ವಲಿಸುತ್ತಿರಲಿ. ಅವರ ಕಾರ್ಯ ಮಾಡಿದರೆ ನಮ್ಮ ಜೀವನ ಸಾರ್ಥಕವಾಗುತ್ತದೆ. ಭಗವಂತನ ಕೆಲಸ ಮಾಡುತ್ತಾ ಮಾಡುತ್ತಾ ಕರ್ಮಿಯ ಹೃದಯದಲ್ಲಿ ಭಕ್ತಿ ವಿಶ್ವಾಸಗಳು ಕ್ರಮೇಣ ತಮ್ಮಷ್ಟಕ್ಕೆ ತಾವೆ ಮೂಡಿಯೆ ಮೂಡುತ್ತವೆ, ನಿಶ್ಚಯವಾಗಿ. ಕಾಡು ಬೆಟ್ಟಗಳಲ್ಲಿ ತಿರುಗಿ ತಿರುಗಿ, ಮಾಧುಕರೀ ಭಿಕ್ಷೆಯಿಂದ ಬದುಕುತ್ತಾ ಸಾಧನ ಭಜನಾದಿ ತಪಸ್ಯೆ ಮಾಡುವರೊಡನೆ ಹೋಲಿಸಿದರೆ ನೀವೇನು ಮಾಡುತ್ತಿದ್ದೀರೊ ಅದೂ ಯಾವ ಅಂಶದಲ್ಲಿಯೂ ಕಡಿಮೆಯಾದ್ದೂ ಅಲ್ಲ, ಕೀಳಾದ್ದೂ ಅಲ್ಲ.  ‘ಆತ್ಮನೋ ಮೋಕ್ಷಾರ್ಥಂ ಜಗದ್ಧಿತಾಯ ಚ’ – ಈ ಯುಗಧರ್ಮ.”

ಸಂನ್ಯಾಸಿ : “ಕೆಲಸ ಮಾಡುತ್ತಾ ಮಾಡುತ್ತಾ ಒಳಗೊಳಗೇ ಬಂದುಬಿಡುತ್ತದೆ ಅಹಂಕಾರ ಅಭಿಮಾನ ಇತ್ಯಾದಿ.”

ಮಹಾಪುರುಷಜಿ : “ಎಲ್ಲಿಯವರೆಗೆ ನಿನಗೆ ನೀನು ಮಾಡುತ್ತಿರುವ ಕೆಲಸ ಭಗವಂತನದು ಎಂಬ ಬುದ್ಧಿ ಸ್ಥಿರವಾಗಿರುತ್ತದೆಯೊ ಅಲ್ಲಿಯವರೆಗೆ ಅಹಂಕಾರ ಅಭಿಮಾನ ಇತ್ಯಾದಿ ತಲೆಹಾಕಲಾರವು. ಭಾವಸ್ಥಿರತೆಯೊಂದಿದ್ದರೆ ಯಾವ ಭಯವೂ ಇಲ್ಲ. ಕೆಲಸದ ಜೊತೆಗೆ ನಿಯಮ ಪ್ರಕಾರವಾಗಿ ಧ್ಯಾನ ಜಪಗಳೂ ಇರಬೇಕು; ಎರಡೂ ಸಮತೋಲನವಾಗಿ ಸಾಗಬೇಕು. ಎಲ್ಲಿಯಾದರೂ ಒಂದು ಚೂರು ಪಾರು ಅಹಂಕಾರ ಅಭಿಮಾನ ಇಣಿಕಿದರೂ ಅದರಿಂದ ಅಂಥ ಹಾನಿಯೇನೂ ಇಲ್ಲ; ಆಮೇಲೆ ಅವನೇ ನಿನ್ನನ್ನು ಘಟನಾ ಚಕ್ರದಲ್ಲಿ ಸಿಕ್ಕಿಸಿ ಅದನ್ನೆಲ್ಲ ದೂರ ಮಾಡಿಕೊಡುತ್ತಾನೆ. ಅದೂ ಅಲ್ಲದೆ ಈ ಅಭಿಮಾನ ಅಹಂಕಾರಗಳು ಏಕಾಂತ ತಪಸ್ವಿಗೂ ತಪ್ಪಿದ್ದಲ್ಲ; ಅವನಿಗೂ ನಾನು ಭಾರಿ ದೊಡ್ಡ ತಪಸ್ವಿ ಎಂಬ ಹಮ್ಮು ತಲೆಯೆತ್ತಬಹುದು. ನಿಜವಾಗಿ ಇರಬೇಕಾದ್ದು ಏನು ಅಂತೀಯಾ? ಭಾವ ಶುದ್ಧಿ! ಆತ್ಮವಂಚನೆ ಇತ್ತು ಅಂದರೆ ನಿಜವಾದ ತಪಸ್ಯೆಯೂ ಆಗುವುದಲ್ಲ, ನಿಜವಾದ ಕೆಲಸವೂ ಆಗುವುದಿಲ್ಲ. ಆತ್ಮಸಾಕ್ಷಿಯಾಗಿ, ಒಳಗೊಂದು ಹೊರಗೊಂದು ಇಟ್ಟುಕೊಳ್ಳದೆ, ಕರ್ಮವನ್ನಾದರೂ ಮಾಡು, ತಪಸ್ಸನ್ನಾದರೂ ಮಾಡು; ಯಾವ ಅವಸ್ಥೆಯಲ್ಲಿದ್ದರೂ ಅಹಂಕಾರ ಅಭಿಮಾನ ಪ್ರವೇಶ ಮಾಡಲಾರವು. ಉದ್ದೇಶದ ಕಡೆ ಸದಾ ಲಕ್ಷ್ಯವಿರಲಿ; ಬದುಕಿನ ಗುರಿ ಮರೆಯದಿರಲಿ.”

ಅವಿಭಕ್ತವಾಗಿ ಸುವಿಭಕ್ತದಂತೆ ತೋರುತಿರುವ ಮಾಯೆ,
ಪ್ರಕೃತಿಪುರುಷರಿಗೆ ನಿತ್ಯ ಜನ್ಮವನು ನೀಡುತಿರುವ ತಾಯೆ,
ಕಾಲದೇಶ ಆಕಾಶಕೋಶಗಳನೂದುತಿರುವ ಛಾಯೆ,
ಅನೃತದಲ್ಲಿ ಋತುವಾಗಿ ಸಂಭವಿಸು, ಸಾವು ನೋವು ಸಾಯೆ |  – ಋತುಚಿನ್ಮಯೀ ಜಗನ್ನಾತೆಗೆ ‘ಅಗ್ನಿಹಂಸ’ ದಿಂದ

* * *