ಪೂಜ್ಯರಾದ ಮಹಾಪುರುಷ ಮಹಾರಾಜರು ಮದ್ರಾಸಿನಿಂದ ಹೊರಟು ಜೂನ್‌೪ನೆಯ ದಿನದಂದು ನೀಲಗಿರಿಗೆ ಹೋಗಿ, ತಿರುಪತಿಯ ಬಾಲಾಜಿ ದೇವಸ್ಥಾನಕ್ಕೆ ಸೇರಿದ್ದ ಶ್ರೀ ಹತಿರಾಮಜಿ ಮಠವೆಂಬ ಆ ಮಹಂತರ ಬೇಸಗೆ ಮನೆಯಲ್ಲಿ ತಂಗಿದರು. ಉದಕಮಂಡಲದ ಹವಾ ತುಂಬ ಹಿತಕರವಾದ್ದು; ಅಲ್ಲಿಯ ದೃಶ್ಯಗಳೂ ಅತ್ಯಂತ ಮನೋಹರ. ಅದರ ಎತ್ತರ ಸಮುದ್ರಮಟ್ಟದಿಂದ ಸುಮಾರು ೮೦೦೦ ಅಡಿಗಳಷ್ಟು. ಈ ಕಾಲದಲ್ಲಿ ಅದು ಮದರಾಸು ಗವರ್ನರರ ಗ್ರೀಷ್ಮ ನಿವಾಸವಾಗಿತ್ತು. ಹಿಂದೆ ೧೯೨೪ ರಲ್ಲಿ ಒಮ್ಮೆ ಮಹಾಪುರುಷಜಿ ಮೇ ತಿಂಗಳ ಪ್ರಥಮ ಭಾಗದಲ್ಲಿ ನೀಲಗಿರಿಗೆ ಭೇಟಿ ಕೊಟ್ಟಿದ್ದರು. ಆಗ ಉದಕಮಂಡಲಕ್ಕೆ ಹತ್ತು ಮೈಲಿ ದೂರವಿರುವ ಕೂನೂರಿನಲ್ಲಿ ಬಿಡಾರ ಮಾಡಿದ್ದರು. ಅವಾಗಲೆ ಅವರು ಉದಕಮಂಡಲ ಶ್ರೀರಾಮಕೃಷ್ಣಾಶ್ರಮದ ಶಂಕುಸ್ಥಾಪನೆಯ ಸಮಾರಂಭ ನೆರವೇರಿಸಿದ್ದರು.

ಉದಕಮಂಡಲಕ್ಕೆ ಬಂದಮೇಲೆ ಮಹಾಪುರುಷಜಿ ಬಹುಮಟ್ಟಿಗೆ ಏಕಾಕಿಯಾಗಿಯೆ ಇರುತ್ತಿದ್ದರು; ಜನಗಳೊಡನೆ ವಿಶೇಷವಾಗಿ ಸೇರಲು ಇಚ್ಛಿಸುತ್ತಿರಲಿಲ್ಲ. ಆದರೂ ಸ್ಥಳೀಯ ಭಕ್ತರು ನಿತ್ಯವೂ ಅಪರಾಹ್ನದಲ್ಲಿ ಅವರ ಬಳಿಗೆ ಬಂದು, ನಾನಾವಿಧ ಧರ್ಮ ಪ್ರಸಂಗ ಕೇಳಿ, ಅವರ ಪವಿತ್ರ ಆಶೀರ್ವಾದ ಪಡೆದು ಪರಿತೃಪ್ತಪ್ರಾಣರಾಗಿ ಹಿಂತಿರುಗುತ್ತಿದ್ದರು. ಅವರ ಭಗವದ್ ಭಾವದಿಂದ ಆಕೃಷ್ಟರಾಗಿ ಬರುತ್ತಿದ್ದ ಭಕ್ತವೃಂದ ದಿನದಿನಕ್ಕೆ ಹೆಚ್ಚಾಗುತ್ತಾ ಹೋಯಿತು. ಭಕ್ತಸಂಗವೊಂದನ್ನು ಬಿಟ್ಟು ಅನ್ಯಸಮಯದಲ್ಲೆಲ್ಲ ಅವರು ಆತ್ಮಾರಾಮರಾಗಿ  ‘ಚಿದಾನಂದ ಸಿಂಧುವಾರಿ ‘ಯಲ್ಲಿ ಮಗ್ನರಾದಂತೆ ಇರುತ್ತಿದ್ದರು. ಬಹಿರ್ಜಗತ್ತಿನಿಂದ ಅವರ ಮನಸ್ಸು ದಿನೇದಿನೇ ಮೇಲಕ್ಕೇರಿ, ಕ್ರಮೇಣ ಅತ್ಯಂತ ಗಂಭೀರವೂ ಅಂತರ್ಮುಖವೂ ಆದ ಭೂಮಿಕೆಯಲ್ಲಿ ನಿಂತುಬಿಟ್ಟಿತು. ಅವರ ಸಾಧಾರಣ ಸ್ಥಿತಿಯ ಜೀವನದ ಮಾತುಕತೆ ವಿನೋಧ ವ್ಯವಹಾರ ಏನಿದ್ದರೂ ಅದೆಲ್ಲ ಸರಳ ಬುದ್ಧಿಯ ಅಲ್ಲಿಯ ಗುಡ್ಡಗಾಡಿನ ಬಾಲಕ ಬಾಲಕಿಯರೊಡನೆ ಮಾತ್ರ ನಡೆಯುತ್ತಿತ್ತು. ಬೆಳಿಗ್ಗೆ ಸಾಯಂಕಾಲ ಅವರು ಅಲೆದಾಡಲು ಹೋಗುವಾಗ ತಮ್ಮ ಕೈಯಲ್ಲಿ ಕೊಂಚ ತಿಂಡಿ ಸಾಮಾನು, ಒಂದು ಆರುಕಾಸು ದುಡ್ಡು ತೆಗೆದುಕೊಂಡು ಹೋಗುತ್ತಿದ್ದರು. ದಾರಿಯಲ್ಲಿ ಆ ದುಡ್ಡನ್ನೂ ತಿಂಡಿಯನ್ನೂ ಬೆಟ್ಟದ ಹುಡುಗ ಹುಡುಗಿಯರಿಗೆ ಹಂಚಿ, ಅವರ ಜೊತೆಯಲ್ಲಿ ತಾವೂ ಸಮ ವಯಸ್ಕರೆಂಬಂತೆ ಸರಳಭಾವದಿಂದ ಕಲೆತು ಆಟವಾಡಿ ತಮಾಷೆ ಮಾಡುತ್ತಿದ್ದರು.

ಶ್ರೀ ಹತಿರಾಮ್‌ಜಿ ಮಠದ ತಮ್ಮ ಕೊಠಡಿಯಲ್ಲಿ ಅವರು ಒಬ್ಬರೆ ಕುಳಿತಿರುವಾಗ ಬಹುಮಟ್ಟಿಗೆ ಮುದ್ರಿತನಯನರಾಗಿಯೊ ಇಲ್ಲವೆ ಉದಾಸ ದೃಷ್ಟಿಯಾಗಿಯೋ ಯಾವುದೋ ಅತೀಂದ್ರಿಯ ರಾಜ್ಯದಲ್ಲಿ ಮನಸ್ಸು ಸಂಚರಿಸುವಂತೆ ತೋರುತ್ತಿದ್ದರು. ಅಂತಹ ಸಮಯಗಳಲ್ಲಿ ಅವರ ಬಳಿಸಾರಲು ಭಯವಾಗುತ್ತಿತ್ತು. ಆಗೊಮ್ಮೆ ಈಗೊಮ್ಮೆ ಅವರು ಶ್ರೀರಾಮಕೃಷ್ಣ ಮಠ ಮಿಷನ್ನಿನ ಅಧ್ಯಕ್ಷತೆಯ ಹೊಣೆಗಾರಿಕೆಯಿಂದ ಪಾರಾಗಿ, ನೀಲಗಿರಿಗಳ ಗಂಭೀರ ಪ್ರಶಾಂತ ಏಕಾಂತತೆಯಲ್ಲಿ ತಮ್ಮ ಉಳಿದ ಜೀವಮಾನ ಕಾಲವನ್ನೆಲ್ಲ ಕಳೆಯುವುದಾಗಿಯೂ ಹೇಳುತ್ತಿದ್ದರು. ಎಲ್ಲದರಿಂದಲೂ ದೂರವಾಗಿ ವ್ಯಾವಹಾರಿಕ ವ್ಯಾಪಾರಗಳಿಂದ ಸಂಪೂರ್ಣ ನಿರ್ಲಿಪ್ತರಾಗಿ ಇರುತ್ತಿದ್ದರು.

ಒಂದು ದಿನ ಪ್ರಾತಃಸಂಚಾರ ನಂತರ ಅವರು ತಮ್ಮ ಕೊಠಡಿಯಲ್ಲಿ ವಿಶಾಲವಾದ ಗಾಜಿನ ಕಿಟಕಿಯ ಕಡೆ ಮುಖ ಹಾಕಿಕೊಂಡು ಕುಳಿತಿದ್ದರು; ತರಂಗತರಂಗವಾಗಿ ಎದುರಿಗೆ ಪ್ರಸರಿಸಿದ್ದ ನೀಲಗಿರಿ ಪಂಕ್ತಿಗಳಲ್ಲಿ ಅವರ ದೃಷ್ಟಿ ನಟ್ಟಂತಿತ್ತು. ಯಾವುದೊ ಕೆಲಸದ ಮೇಲೆ ಅವರ ಕೊಠಡಿಯಲ್ಲಿ ಪ್ರವೇಶಿಸಿದ ಅನುಚರರೊಬ್ಬರು ಅವರು ಹಾಗೆ ಅತ್ಯಂತ ಉದಾಸಭಾವದಿಂದ ಕುಳಿದಿದ್ದುದನ್ನು ನೋಡಿ, ಸ್ವಲ್ಪ ಶಂಕೆಗೊಂಡು, ಕೇಳಿದರು “ಮಹಾರಾಜ್, ತಮಗೆ ಮೈ ಸರಿಯಾಗಿದೆ ತಾನೆ?” ಅನುಚರನ ಪ್ರಶ್ನೆ ಅವರ ಚಿಂತನಧಾರೆಗೆ ಬಾಧೆ ತಂದಿತಾದರೂ ಅವರ ಕಿವಿಹೊಕ್ಕಂತೆ ತೋರಲಿಲ್ಲ. ತತ್ಸಮಯದಲ್ಲಿದ್ದ ಚಂತನಧಾರೆಯನ್ನೆ ಭಾಷೆಯಲ್ಲಿ ಮುಂದುವರಿಸುವಂತೆ ಹೇಳಿದರು: “ನೋಡು, ಈ ಸ್ಥಾನದ ಆಧ್ಯಾತ್ಮಿಕ ವಾತಾವರಣವೆ ತುಂಬ ಉನ್ಮೇಷನಕರವಾಗಿದೆ. ಮನಸ್ಸು ತನ್ನಷ್ಟಕ್ಕೆ ತಾನೆ ಅಸೀಮದಕಡೆಗೆ ಧಾವಿಸುತ್ತದೆ. ಇಲ್ಲಿ ಇಷ್ಟು ಉಚ್ಚ ಆಧ್ಯಾತ್ಮಿಕ ಭಾವಮಂಡಲ ಇದೆ ಎಂದು ನಾನು ಮೊದಲು ಭಾವಿಸಿರಲಿಲ್ಲ. ಈಗ ದಿನ ಹೋದಂತೆಲ್ಲ ಅನೇಕಾನೇಕ ಆಶ್ಚರ್ಯಾಶ್ಚರ್ಯಕರ ವ್ಯಾಪಾರಗಳನ್ನು ಕಂಡು ಮುಗ್ಧನಾಗಿ ಹೋಗಿದ್ದೇನೆ. ನನಗನ್ನಿಸುತ್ತಿದೆ, ಇದೆಲ್ಲ ಠಾಕೂರರ ದಯೆಯ ಪರಿಣಾಮ. ಅವರೆ ಕೃಪೆ ಮಾಡಿ ಈ ಎಲ್ಲ ದಿವ್ಯ ಅನುಭೂತಿಯ ಆನಂದವನ್ನು ಕೊಡುವುದಕ್ಕೆಂದೆ ನನ್ನನ್ನು ಇಲ್ಲಿಗೆ ಎಳೆತಂದದ್ದು ಎಂಬ ಬೋಧೆಯುಂಟಾಗುತ್ತಿದೆ. ಅನೇಕ ವರ್ಷಗಳ ಹಿಂದೆ ಹಿಮಾಲಯಗಳಲ್ಲಿರುತ್ತಿದ್ದಾಗ ನನಗೆ ಇಂತಹ ಅನುಭವ ಉಂಟಾಗಿತ್ತು. ಮನಸ್ಸಿನ ಸಹಜಗತಿಯೆ ಧ್ಯಾನದ ದಿಕ್ಕಿಗೆ. ಅದು ಬಹು ಶೀಘ್ರವಾಗಿ ಸ್ಥಿರವೂ ಶಾಂತವೂ ಆಗಿಬಿಡುತ್ತದೆ. ಸ್ವಲ್ಪ ಬಲಪ್ರಯೋಗ ಮಾಡಿಯೆ ಅದನ್ನು ಕೆಳಗೆಳೆಯಬೇಕಾಗುತ್ತದೆ. ಇಲ್ಲಿ ನಿಶ್ಚಯವಾಗಿಯೂ ಪ್ರಾಚೀನ ಕಾಲದಲ್ಲಿ ಅನೇಕ ಮುನಿಗಳೂ ಋಷಿಗಳೂ ಕಠೋರ ತಪಸ್ಯೆ ಆಚರಿಸಿರಬೇಕು. ಆ ತಪೋ ಮಹಿಮೆಯಿಂದ ಈ ಸ್ಥಳವೆಲ್ಲ  ಶಕ್ತಿಮಯವಾದಂತಿದೆ. ಈ ಸ್ಥಾನ ತಪಸ್ಯೆಗೆ ಬಹಳ ಅನುಕೂಲವಾದ್ದು. ಆ ದಿನ ಚಿ – ಮತ್ತು ಇತರರು ಇಲ್ಲಿಯ ಕಾಡುಗಳಲ್ಲಿ ನಾನಾ ಜಾತಿಯ ಹಣ್ಣು ಹಂಪಲುಗಳಿವೆ ಎಂದು ಹೇಳಿದರು. ಬಹುಶಃ ಆ ಋಷಿಗಳೂ ಈ ಫಲಮೂಲಗಳನ್ನೆ ತಿಂದು ತಪಸ್ಯಾಚರಣೆ ಮಾಡಿರಬಹುದೆಂದು ತೋರುತ್ತದೆ.”

ಸ್ವಲ್ಪಹೊತ್ತು ಮೌನವಾಗಿದ್ದು ಮತ್ತೆ ಮುಂದುವರಿದರು: “ಮೊನ್ನೆ ಈ ನೀಲಿ ಮಲೆಯ ಸಾಲುಗಳ ಕಡೆ ನೋಡುತ್ತಾ ಸುಮ್ಮನೆ ಕುಳಿತಿದ್ದೆ: ಆಗ ಕಂಡೆ, ಈ ಶರೀರದಿಂದ ಯಾರೊ ಒಬ್ಬರು ಹೊರಗೆ ಬಂದು ಒಯ್ಯನೆ ಸಮಸ್ತ ಭುವನವನ್ನೂ ವ್ಯಾಪಿಸಿಬಿಟ್ಟಂತೆ.” ಇಷ್ಟನ್ನು ಮಾತ್ರ ಹೇಳಿ ಒಮ್ಮಿಂದೊಮ್ಮೆಗೆ ನೀರವವಾಗಿಬಿಟ್ಟರು. ಬಹಳ ಹೊತ್ತಾದ ಮೇಲೆ ದೀರ್ಘನಿಃಶ್ವಾಸ ಬಿಟ್ಟು ಹೇಳಿದರು : “ಶ್ರೀಗುರು ಮಹಾರಾಜರೆ ನಮ್ಮ ಪರಮಾತ್ಮ; ಅವರೇ ಈ ವಿರಾಟ್ ವಿಶ್ವ ಬ್ರಹ್ಮಾಂಡವನ್ನೆಲ್ಲ ವ್ಯಾಪಿಸಿದ್ದಾರೆ – ಪಾದೋsಸ್ಯ ವಿಶ್ವಭೂತಾನಿ ತ್ರಿಪಾದಸ್ಯಾಮೃತಂ ದಿವಿ.”

ಅನುಚರನು ಅಚ್ಚರಿಬಡಿದಂತೆ ಒಂದು ಕ್ಷಣ ನೀರವವಾಗಿದ್ದು ಆಮೇಲೆ ಕೈಮುಗಿದುಕೊಂಡು ಮುಗ್ಧಭಾವದಿಂದ ಬಿನ್ನವಿಸಿದನು: “ಮಹಾರಾಜ್, ನಮಗೇಕೆ ಈ ಎಲ್ಲ ಅನುಭೂತಿ ಒಂದು ಸ್ವಲ್ಪವೂ ಆಗುವುದಿಲ್ಲ? ಈ ಸ್ಥಳದಲ್ಲಿರುವ ಆಧ್ಯಾತ್ಮಿಕ ಭಾವಮಂಡಲದ ವಿಶೇಷತೆ ನನಗಂತೂ ಕಿಂಚಿತ್ತಾದರೂ ಅನುಭವಕ್ಕೆ ಬರುವುದಿಲ್ಲ!”

ಮಹಾಪುರುಷಜಿ: “ನೋಡು, ಬಾಬಾ, ಅನುಮತಿ ಉಂಟುಮಾಡಿಕೊಡುವ ಏಕಮಾತ್ರ ಒಡೆಯ ಅವನೊಬ್ಬನೆ. ಅವನನ್ನು ಬಲವಾಗಿ ಹಿಡಿ. ಅತ್ತೂಕರೆದು ಬೇಡಿಕೊ. ಅವನ ಕೃಪೆ, ಕಾಲ ಪಕ್ವವಾದಾಗ, ನಿನಗೆ ಎಲ್ಲವನ್ನೂ ನೀಡುತ್ತದೆ. ನಮ್ಮ ಮನಸ್ಸಿನ ಪ್ರಭುವೂ ಆತನೆ- ಈ ಪರಮಾತ್ಮರೂಪಿಯಾಗಿ ಇಳಿದಿರುವ ಶ್ರೀ ಗುರು. ಆತ ಒಂದಿನಿತು ದಯೆ ತೋರಿ ಮನಸ್ಸನ್ನು ಕವಿದಿರುವ ಮೋಡವನ್ನು ಒಂದಿನಿತು ಸರಿಸಿದರೆ ಸಾಕು, ಮತ್ತೆ ಕರಿಸದೃಶವಾದ ಅಶಾಂತ ಮನಸ್ಸು ಕೂಡ ಶಾಂತವಾಗಿ ಸಮಾಧಿಸ್ಥವಾಗಿಬಿಡುತ್ತದೆ. ಮನಸ್ಸು ತುಂಬ ಸೂಕ್ಷ್ಮವಾಗದಿದ್ದರೆ ಆಧ್ಯಾತ್ಮಿಕ ಭಾವದ ಅನುಭವ ಹೇಗೆ ತಾನೆ ಆಗುತ್ತದೆ? ಏನು ಒಂದು ದಿನಕ್ಕೆ ಮನಸ್ಸು ನಿರ್ವಿಷಯಸ್ಥಿತಿಗೆ ಏರಿಬಿಡಲು ಸಾಧ್ಯವೆ? ಸಾಧನೆ ಭಜನೆ ಎಷ್ಟು ಬೇಕಾಗುತ್ತದೆ: ಯಾವಾಗ ಮನಸ್ಸು ಅತ್ಯಂತ ಸೂಕ್ಷ್ಮಾತಿ ಸೂಕ್ಷ್ಮಸ್ಥಿತಿಗೆ ಏರುತ್ತದೆಯೊ ಮತ್ತು ಒಂದು ಉಚ್ಚ ಭೂಮಿಕೆಯಲ್ಲಿ ನಿಲ್ಲುತ್ತದೆಯೊ, ಆಗಲೆ ಇಂಥ ಎಲ್ಲ ಸೂಕ್ಷ್ಮ ಅನುಭೂತಿ ಉಂಟಾಗಲು ಸಾಧ್ಯವಾಗುತ್ತದೆ. ಮನಸ್ಸು ಶುದ್ಧವಾದಾಗಲೆ ಅಲ್ಲಿ ಆಧ್ಯಾತ್ಮಿಕ ಭಾವ ಸ್ಪಂದಿತವಾಗುತ್ತದೆ. ಮನಸ್ಸು ಯಾವಾಗ ಉಚ್ಚ ಭೂಮಿಕೆಯಲ್ಲಿ ಆರೂಢವಾಗುತ್ತದೆಯೊ ಆಗ ಅಂತಹ ಮನಸ್ಸಿನಲ್ಲಿ ಉಚ್ಚ ಉಚ್ಚ ಆಧ್ಯಾತ್ಮಿಕಭಾವ ಪ್ರತಿಫಲಿತವಾಗುತ್ತದೆ. ಸಾರಾಂಶ ಇಷ್ಟು – ಆತನ ಪಾದಪದ್ಮದಲ್ಲಿ ಭಕ್ತಿ ವಿಶ್ವಾಸ ಉಂಟಾಗಬೇಕು; ಅದಾದರೆ ಉಳಿದುದೆಲ್ಲ ಆದಂತೆಯೆ.”

ಉದಕಮಂಡಲಕ್ಕೆ ಮಹಾಪುರುಷಜಿ ಬಂದಿರುವ ಸುದ್ದಿ ನಾಲ್ಕೂ ಕಡೆಗೂ ಹಬ್ಬಲು ಮದರಾಸು ಪ್ರದೇಶದ ನಾನಾ ಭಾಗಗಳಿಂದ ಅನೇಕ ಭಕ್ತರು ಅವರ ಪವಿತ್ರ ಸಂಗದ ಮತ್ತು ಕೃಪಾಲಾಭದ ಹಾರೈಕೆಯಿಂದ ಅಲ್ಲಿಗೆ ಬರತೊಡಗಿದರು. ಅವರೆಲ್ಲರೂ ನೂತನ ಆಧ್ಯಾತ್ಮಿಕ ಪ್ರೇರಣೆಯಿಂದಲೂ ದೀಪ್ತಿಯಿಂದಲೂ ಪರಿಪೂರ್ಣ ಹೃದಯರಾಗಿ ಹಿಂತಿರುಗಿದರು. ಮಲಬಾರಿನಿಂದಲೂ ಕೆಲವು ಜನ ಭಕ್ತರು ಬಂದು ಮಹಾಪುರುಷಜಿಯಿಂದ ದೀಕ್ಷೆ ಪಡೆದು ಕೃತಾರ್ಥರಾದರು. ಅವರಲ್ಲೊಬ್ಬರು ಬೀಳ್ಕೊಳ್ಳುವ ಸಲ್ಲುವಾಗಿ ಮಹಾಪುರುಷಜಿಯ ಬಳಿಗೆ ಬಂದು ಆಶೀರ್ವಾದ ಪಡೆದು ಇಂತೆಂದರು ಪ್ರಾರ್ಥನಾರೂಪವಾಗಿ: “ಶ್ರೀ ಗುರುಮಹಾರಾಜರನ್ನು ನೋಡುವ ಸೌಭಾಗ್ಯ ನನ್ನದಾಗಲಿಲ್ಲ. ತಾವೇ ನಮಗೆ ಹತ್ತಿರ ಇರುವ ಶ್ರೀ ಗುರುಮಹಾರಾಜರು, ತಾವೇ ನಮ್ಮ ಪರಮಗತಿ.”

ಅದನ್ನು ಆಲಿಸಿ ಮಹಾಪುರುಷಜಿ ಸಸ್ನೇಹವಾಗಿ: “ಏನು ಮಾತು ಹೇಳುತ್ತಿದ್ದೀಯೆ? ಎಲ್ಲರ ಪರಮಗತಿಯೂ ಆತನೆ-ಆ ಪ್ರಭು. ಶ್ರೀ ರಾಮಕೃಷ್ಣರ ಮಾತುಕತೆ ಓದ್ದಿದ್ದೀಯಷ್ಟೆ? ಅವರು ಹೇಳುತ್ತಾರೆ: ‘ಸಮುದ್ರದ ಒಂದು ಅಂಗ ತರಂಗ; ತರಂಗ ಎಷ್ಟು ಮಾತ್ರಕ್ಕೂ ಸಮುದ್ರವಲ್ಲ.’ ನಾನು ಅವರ ಚರಣಾಶ್ರಿತದಾಸ ಮಾತ್ರ. ಗೀತೆಯಲ್ಲಿ ಶ್ರೀ ಭಗವಾನ್ ಹೇಳಿದ್ದಾನೆ:”

ಗತಿರ್ಭರ್ತಾ ಪ್ರಭುಃಸಾಕ್ಷೀ ನಿವಾಸಃ ಶರಣಂ ಸುಹೃತ್ |
ಪ್ರಭವಃ ಪ್ರಲಯಃ ಸ್ಥಾನಂ ನಿಧಾನಂ ಬೀಜಮವ್ಯಯಮ್ ||

ಶ್ರೀ ಭಗವಂತನೆ ಎಲ್ಲರ ಏಕಮಾತ್ರ ಗತಿ, ಭರ್ತಾ,  ಪ್ರಭು, ಸಾಕ್ಷಿ, ಆಶ್ರಯ, ರಕ್ಷಕ ಮತ್ತು ಸುಹೃತ್ ಅಥವಾ ಮಿತ್ರ; ಅವನು ಸೃಷ್ಟಿಸ್ಥಿತಿ ಲಯದ ಕರ್ತ, ಎಲ್ಲರ ಆಧಾರ, ಮತ್ತು ಸಂಸಾರದ ಅವ್ಯಯ ಮೂಲ. ಎಲ್ಲರಿಗೂ ಆತನೆಯೆ ಭಗವಂತ. ನಿನ್ನ ಪೂರ್ವಜನ್ಮಾರ್ಜಿತ ಬಹು ಸುಕೃತಫಲದಿಂದ ಯುಗಾವತಾರ ಶ್ರೀರಾಮಕೃಷ್ಣರ ಆಶ್ರಯ ಲಭಿಸಿದೆ. ಮತ್ತು ಆತನ ನಗಣ್ಯ ಭೃತ್ಯನೊಬ್ಬನು ನಿನ್ನನ್ನು ಆತನ ಶ್ರೀ ಚರಣಗಳಿಗೆ ಸಮರ್ಪಿಸಿದ್ದಾನೆ. ಭಗಚ್ಚರಣದಲ್ಲಿ ಸಮರ್ಪೀಕೃತವಾದ ಹೊಸ ಜೀವನವನ್ನು ಪಡೆದು ನೀನು ಧನ್ಯನಾಗಿದ್ದೀಯೆ. ಆಚಾರ್ಯ ಶಂಕರರು ಹೇಳಿದ್ದಾರೆ.

ದುರ್ಲಭಂ ತ್ರಯಮೇವೈತದ್ದೇವಾನುಗ್ರಹ ಹೇತುಕಮ್ |
ಮನುಷ್ಯತ್ವಂ ಮುಮುಕ್ಷುತ್ವಂ ಮಹಾಪುರುಷಸಂಶ್ರಯಃ ||

ಈ ಮೂರು ವಾಸ್ತವವಾಗಿಯೂ ದುರ್ಲಭವಾದುವು; ಭಗವಂತನ ಕೃಪೆಯಿಂದ ಮಾತ್ರ ಪ್ರಾಪ್ತವಾಗುತ್ತವೆ; ಯಾವುದೆಂದರೆ-ಮನುಷ್ಯಜನ್ಮ, ಮುಕ್ತಿಗಾಗಿ ತೀವ್ರ ಆಕಾಂಕ್ಷೆ ಮತ್ತು ಮಹಾಪುರುಷನ ಅರ್ಥಾತ್‌ಬ್ರಹ್ಮವಿದ್ ಗುರುವಿನ ಆಶ್ರಯಲಾಭ. ದೈವಕೃಪೆಯಿಂದ ನೀನು ಈ ಮೂರೂ ದುರ್ಲಭ ಸಂಪತ್ತುಗಳಿಗೆ ಅಧಿಕಾರಿಯಾಗಿದ್ದೀಯೆ; ಇನ್ನು ಆತನ ಪ್ರೇಮದ ಸಾಗರದಲ್ಲಿ ಮುಳುಗಿಬಿಡು; ಅಮರ ನಾಗುತ್ತೀಯೆ. ವೈಷ್ಣವ ಗ್ರಂಥಗಳಲ್ಲಿ ಒಂದು ಸೊಗಸಾದ ಹಿತೋಕ್ತಿ ಇದೆ.  ‘ಗುರು, ಕೃಷ್ಣ, ವೈಷ್ಣವ ಈ ಮೂವರ ದಯೆಯೇನೊ ಇದೆ; ಆದರೆ ಒಂದರ ದಯೆ ಇಲ್ಲದೆ ಜೀವ ಪಾಡು ಪಡುತ್ತದೆ.’ ದೇವರ ಕೃಪೆ ಇದೆ; ಗುರುಕೃಪೆ ಇದೆ; ವೈಷ್ಣವ ಎಂದರೆ ವಿಷ್ಣುವನ್ನು ತಿಳಿದು ಆತನಿಗೆ ಎಣೆಯಾಗಿರುವ ಪರಮ ಭಕ್ತನ ಕೃಪೆಯೂ ಇದೆ; ಆದರೆ ಒಂದರ ದಯೆ ಇಲ್ಲದೆ- ಎಂದರೆ, ತನ್ನ ಪ್ರಯತ್ನದ ಅಭಾವದಿಂದ ಉಳಿದುದೆಲ್ಲವೂ ವ್ಯರ್ಥವಾಗುತ್ತದೆ; ಜೀವ ಮುಕ್ತನಾಗಲಾರ. ಎಲ್ಲ ತರಹದ ಸುಯೋಗಗಳೂ ಒದಗಿವೆ. ಪಡೆದ ಈ ಎಲ್ಲವನ್ನೂ ಉಪಯೋಗಿಸಿಕೊಂಡು ಸಾಧನೆ ಭಜನೆಯಲ್ಲಿ ಮಗ್ನನಾಗು, ಅಮೃತತ್ವ ಹೊಂದು, ಅಮರನಾಗು. ಈ ಹುಟ್ಟು ಸಾವಿನ ಪ್ರಹೇಳಿಕೆಯಲ್ಲಿ ಮತ್ತೆ ಸಿಕ್ಕಿ ಬೀಳಬೇಡ.”

ಭಕ್ತ : “ತಾವು ಆಶೀರ್ವಾದ ಮಾಡಿ, ನಾನು ಸಾಧನೆ ಭಜನೆಯಲ್ಲಿ ಮುಳುಗಿ ಹೋಗುವಂತೆ, ಮತ್ತೆ ಈ ಸಂಸಾರಜಾಲದಲ್ಲಿ ಸಿಕ್ಕಿಬೀಳದಂತೆ.”

ಮಹಾಪುರುಷಜಿ: “ಆಶೀರ್ವಾದ ಮಾಡಲೆಂದೇ ಅಲ್ಲವೆ ಇದನ್ನೆಲ್ಲ ನಿನಗೆ ಹೇಳಿದ್ದು. ಹೃತ್ಪೂರ್ವಕವಾಗಿ ಆಶೀರ್ವಾದ ಮಾಡುತ್ತೇನೆ, -ನಿನ್ನ ಮನಸ್ಸು ಪ್ರಾಣ ಎಲ್ಲ ಶ್ರೀ ಗುರುಮಹಾರಾಜರ ಚರಣಧ್ಯಾನದಲ್ಲಿ ಮಗ್ನವಾಗಿರಲಿ. ನಮ್ಮ ಬಳಿ ಆಶೀರ್ವಾದವಲ್ಲದೆ ಬೇರೆ ಏನೂ ಇಲ್ಲವಯ್ಯಾ. ಯಾರಾದರೂ ಭಗವಂತನ ಸಾಕ್ಷಾತ್ಕಾರಕ್ಕಾಗಿ ಹಾತೊರೆಯುವುದನ್ನು ಕಂಡಾಗ, ಅಥವಾ ಆ ದಿಕ್ಕಿನಲ್ಲಿ ಒಂದಿನಿತಾದರೂ ಪ್ರಯತ್ನ ಮಾಡುವವರನ್ನು ಸಂಧಿಸಿದಾಗ ನಮಗೆಷ್ಟು ಆನಂದವಾಗುತ್ತದೆಯೊ ಅದನ್ನೇನೆಂದು ಹೇಳಲಿ? ಯಾರೆ ಆಗಲಿ ಭವಬಂಧನದಿಂದ ಮುಕ್ತಿ ಹೊಂದಲೆಂದು ಪ್ರಾಣಪಣವಾಗಿ ಪ್ರಯತ್ನಿಸುವವರೆಲ್ಲ ನಮಗೆ ಅತ್ಯಂತ ಪ್ರಿಯರು. ಶ್ರೀ ಗುರುಮಹಾರಾಜರು ಬಂದದ್ದೇ ಜೀವರಿಗೆ ಮುಕ್ತಿ ನೀಡುವುದಕ್ಕಾಗಿ ನಾವೂ ಕೂಡ ಆತನ ಚರಣಾಶ್ರಿತದಾಸರು, ಯುಗಯುಗದಲ್ಲಿಯೂ ಆತನ ಭೃತ್ಯರು. ಜೀವ ಭಗವನ್ನುಖಿಯಾಗಿ ಏರುವಂತೆ ಅದಕ್ಕೆ ಸಹಾಯ ಮಾಡುವುದೆ ನಮ್ಮ ಜೀವನದ ಏಕಮಾತ್ರ ವ್ರತ. ಅದಕ್ಕಾಗಿಯೆ ಠಾಕೂರರು ನಮ್ಮನ್ನೂ ಸಂಗಡ ಕರೆದುಕೊಂಡು ಬಂದರು. ಮತ್ತೆ ಅದಕ್ಕೋಸ್ಕರವೆ ನಮ್ಮನ್ನು ಈಗಲೂ ಜಗತ್ತಿನಲ್ಲಿ ನಿಲ್ಲಿಸಿದ್ದಾರೆ. ಬದುಕಿನ ಕೊನೆಯ ಮುಹೂರ್ತಪರ್ಯಂತ ನಾವೂ ಇದನ್ನೆ ಲೋಕಕ್ಕೆ ಬೋಧಿಸುತ್ತೇವೆ- ಏನು ಮಾಡಿದರೆ ಭಗವಂತನ ಸಾಕ್ಷಾತ್ಕಾರ ಆಗುತ್ತದೆ ಎಂದು..”

“ಈ ಸಂಸಾರ ಅನಿತ್ಯ; ಎರಡು ದಿನದ್ದು. ಎಂಥಾ ವಿಡಂಬನೆ? ಆದರೂ ಈ ಕ್ಷಣಭಂಗುರ ಜೀವನದಲ್ಲಿ, ಅನಿತ್ಯ ಸಂಸಾರದ ಕ್ಷಣಿಕ ಸುಖದಲ್ಲಿಯೆ ಮತ್ತನಾಗಿ, ಮನುಷ್ಯ ಒಮ್ಮೆಗೇ ಜೀವನದ ಲಕ್ಷ್ಯವನ್ನು ಮರೆತುಬಿಡುತ್ತಾನೆ. ಹಾಗಿದೆ ಭುವನಮೋಹಿನಿ ಮಾಯೆಯ ಆಟ! ನೋಡು, ಬಾಬಾ, ನೀನಿನ್ನೂ ಯುವಕ, ಪ್ರಭುವಿನ ಕೃಪೆಯಿಂದ ನಿನ್ನ ಮನಸ್ಸಿನ ಮೇಲೆ ಇನ್ನೂ ಸಂಸಾರದ ಮುದ್ರೆ ಬಿದ್ದಿಲ್ಲ. ಸಾರಾಂಶ ನಿನಗೆ ನಾವು ಹೇಳುವುದಿಷ್ಟೆ – ನಮ್ಮ ಹೃದಯದಲ್ಲಿ ಏನನ್ನು ಸತ್ಯ ಎಂದು ಗ್ರಹಿಸಿದ್ದೇವೆಯೊ ಅದನ್ನು. ತ್ಯಾಗವಿಲ್ಲದೆ ಏನೂ ಆಗುವುದಿಲ್ಲ. ಆದ್ದರಿಂದಲೆ ಉಪನಿಷತ್ತು ಹೇಳುತ್ತದೆ; ‘ತ್ಯಾಗೇನೈಕೇsಮೃತತ್ವಮಾನಶುಃ’ ತ್ಯಾಗದ್ವಾರವೊಂದರಿಂದಲೆ ಅಮೃತತ್ವ ದೊರೆಯುವುದು. ಯೋಗ ಭೋಗ ಜೊತೆಗೂಡಿ ಇರಲಾರವು. ಸಂಸಾರದ ಈ ಭೋಗಸುಂಕವನ್ನು ಬಿಡದಿದ್ದರೆ ಆ ಬ್ರಹ್ಮಾನಂದದ ಆಸ್ವಾದ ದೊರೆಯುವುದು ಅಸಂಭವ. ಈ ಸಂಸಾರ ಏನು ಎಂಬುದನ್ನು ಠಾಕೂರರು ಬಹಳ ಸರಳವಾದ ಮಾತಿನಲ್ಲಿ ಹೇಳಿದ್ದಾರೆ. ಕಾಮಿನಿ ಮತ್ತು ಕಾಂಚನ, ಇವೆ ಸಂಸಾರ, ಬರಿಯ ಬಾಹ್ಯಿಕ ತ್ಯಾಗ ಮಾಡಿದರೆ ಸಾಲದು; ಮನದಲ್ಲಿರುವ ಕಾಮಿನೀ ಕಾಂಚನ ಭೋಗದ ಆಸಕ್ತಿಯನ್ನೂ ತ್ಯಾಗ ಮಾಡಬೇಕು. ತುಲಸೀದಾಸರೂ ಹೇಳಿದ್ದಾರೆ: ‘ಎಲ್ಲಿರುವನೊ ಕಾಮ. ಅಲ್ಲಿರನಯ್‌ರಾಮ!’ ಕಾಮನಿರುವಲ್ಲಿ ರಾಮನಿಲ್ಲ.  ಅರ್ಥಾತ್- ಭಗವಂತನನ್ನು ಪಡೆಯಬೇಕಾದರೆ ಪ್ರಾಪಂಚಿಕವಾದ ಎಲ್ಲ ಭೋಗವಾನೆಯನ್ನೂ ಬಿಟ್ಟುಬಿಡಬೇಕಾಗುತ್ತದೆ.”

* * *