ಸ್ಥಳೀಯ ಶ್ರೀರಾಮಕೃಷ್ಣಾಶ್ರಮದ ಪ್ರಾಂಗಣದಲ್ಲಿ ಸ್ವಾಮಿ ವಿವೇಕಾನಂದರ ಅರವತ್ತೈದನೆಯ ಜನ್ಮೋತ್ಸವ ಮಹಾವೈಭವದಿಂದ ಜರುಗಿತು. ಪೂಜೆ, ವೇದ ಶಾಸ್ತ್ರವಾಚನ, ಭಜನೆ ಕೀರ್ತನೆ, ಭಕ್ತರ ಮತ್ತು ದರಿದ್ರನಾರಾಯಣರ ಅನ್ನಸೇವೆ ಇವೇ ಉತ್ಸವದ ಪ್ರಧಾನ ಅಂಗಗಳಾಗಿದ್ದುವು. ಪೂಜನೀಯ ಮಹಾಪುರುಷ ಮಹಾರಾಜರೂ ಅಲ್ಲಿದ್ದುದರಿಂದ ಉತ್ಸವದ ಆನಂದ ಶತಗುಣವರ್ಧಿತವಾಗಿತ್ತು.

ಸಂಜೆ ಮಂಗಳಾರತಿ ಆದ ಮೇಲೆ ಆಶ್ರಮದ ಸಂನ್ಯಾಸಿಗಳೂ ಬ್ರಹ್ಮಚಾರಿಗಳೂ ಮಹಾಪುರುಷಜಿ ಇಳಿದುಕೊಂಡಿದ್ದ ಕೊಠಡಿಯಲ್ಲಿ ನೆರೆದು, ಅವರ ಬಾಯಿಂದಲೆ ಸ್ವಾಮಿ ವಿವೇಕಾನಂದರ ವಿಚಾರವಾಗಿ ಏನನ್ನಾದರೂ ಕೇಳಬೇಕೆಂಬ ಆಶೆಯನ್ನು ಪ್ರಕಟಪಡಿಸಿದರು. ಅವರೂ ಕೂಡ ಸ್ವಾಮೀಜಿಯೊಡನೆ ತಮಗೆ ಪ್ರಥಮತಃ ಪರಿಚಯವಾದ ದಿನದಿಂದ ಹಿಡಿದು ಕಾಶೀಪುರದ ತೋಟದಲ್ಲಿ ಠಾಕೂರರ ಸೇವೆಯಲ್ಲಿ ತಾವಿಬ್ಬರೂ ಒಟ್ಟಿಗೆ ಇದ್ದುದನ್ನೂ, ಆಮೇಲೆ ವರಾಹ ನಗರದ ಮಠಸ್ಥಾಪನಾದಿ ಘಟನೆಗಳನ್ನೂ ಸಂಕ್ಷೇಪವಾಗಿ ತಿಳಿಸಿದ ಅನಂತರ ಒಬ್ಬರು ಸಂನ್ಯಾಸಿ “ಮಹಾರಾಜ್, ಪರಿವ್ರಾಜಕ ಸಮಯದಲ್ಲಿ ತಾವೂ ಸ್ವಾಮೀಜಿಯೂ ಯಾವಾಗಲಾದರೂ ಒಟ್ಟಿಗೆ ಇದ್ದಿರೇನು?” ಎಂದು ಪ್ರಶ್ನಿಸಿದರು.

ಮಹಾಪುರುಷಜಿ: “ಹೌದು, ಆಗೊಮ್ಮೆ ಈಗೊಮ್ಮೆ ಸ್ವಾಮೀಜಿಯ ಜೊತೆಯಲ್ಲಿ ಒಟ್ಟಿಗೆಯೂ ಇದ್ದೆ; ಪರಿವ್ರಾಜಕನಾಗಿ ತಿರುಗುವಾಗಲೂ ಒಮ್ಮೊಮ್ಮೆ ಆಕಸ್ಮಾತ್ತಾಗಿ ಅವರನ್ನು ಸಂಧಿಸುತ್ತಿದ್ದೆ. ಒಂದು ಸಾರಿ ನಾನೂ, ಕಾಶಿಯ ಬ್ರಹ್ಮಚಾರಿ ಹಾರಾನನೂ ಪಶ್ಚಿಮ ಹಿಮಾಲಯದ ತೀರ್ಥಕ್ಷೇತ್ರಗಳಲ್ಲಿ ದರ್ಶನಾರ್ಥವಾಗಿ ಹೊರಟಿದ್ದೆವು. ಮೊದಲು ಬೃಂದಾವನಕ್ಕೆ ಹೋಗುವ ಸಲುವಾಗಿ ದಾರಿಯಲ್ಲಿ ಹಾತರಾಸ ಜಂಕ್ಷನ್ನಿನಲ್ಲಿ ಇಳಿದಾಗ ಸ್ವಾಮೀಜಿ ಅಲ್ಲಿ ಒಬ್ಬ ರೈಲ್ವೆ ಆಫೀಸರನ ಮನೆಯಲ್ಲಿದ್ದಾರೆ ಎಂಬುದಾಗಿ ಕೇಳಿದೆವು. ಆಗ ಅವರಿಗೆ ಖಾಯಿಲೆಯಾಗಿತ್ತು; ಜ್ವರದಿಂದ ನರಳುತ್ತಿದ್ದರು. ಅವರನ್ನು ನೋಡಲು ಹೋದೆವು. ಅನಿರೀಕ್ಷಿತವಾಗಿ ಬಂದ ನಮ್ಮನ್ನು ನೋಡಿ ಅವರಿಗೆ ಭಾರಿ ಆನಂದವಾಯಿತು. ಅಷ್ಟೊಂದು ಜ್ವರ ಪೀಡಿತರಾಗಿದ್ದರೂ ಅವರು ನಮ್ಮೊಡನೆ ಎಷ್ಟು ವಿನೋದವಾಡಿದರು, ಏನು ತಮಾಷೆ ಮಾಡಿ ನಗಿಸಿದರು, ಏನೇನು ಸಂಗತಿಗಳನ್ನು ಹೇಳಿ ನಮ್ಮನ್ನು ಹಾಸ್ಯ ಪರಿಹಾಸ್ಯದಲ್ಲಿ ಮುಳುಗಿಸಿಬಿಟ್ಟರು, ಅದನ್ನೆಲ್ಲ ನಾನು ಹೇಳಿ ಪೂರೈಸಲಾರೆ. ಅಷ್ಟು ಕಾಯಲೆಯಾಗಿದ್ದರೂ ಅವರ ಆನಂದವೋ ಅಲ್ಲೋಲಕಲ್ಲೋಲವಾಗಿತ್ತು. ಮೂರು ದಿನದ ಮೇಲೆ ಜ್ವರ ಬಿಟ್ಟಿತು; ಆದರೆ ಬಹಳ ನಿಃಶಕ್ತರಾಗಿದ್ದರು. ನಮ್ಮನ್ನು ಬೃಂದಾವನ ದರ್ಶನಕ್ಕೆ ಹೋಗಿಬರುವಂತೆ ಹೇಳಿದರು. ಹೋಗಿ ಬಂದಮೇಲೆ ಸ್ವಾಮೀಜಿಯೊಡಗೂಡಿ ನಾವೂ ಹೃಷೀಕೇಶಕ್ಕೆ ಹೋಗುವುದೆಂದು ಗೊತ್ತು ಮಾಡಲಾಯಿತು. ಅಷ್ಟರೊಳಗೆ ಅವರ ಶರೀರವೂ ಸ್ವಸ್ಥವಾಗಿ ಪ್ರಯಾಣಾರ್ಹ ಸಬಲತೆ ಉಂಟಾಗುವುದೆಂದು ನಮ್ಮ ನಿರೀಕ್ಷೆ.”

ನಾನೂ ಹಾರಾನ ಇಬ್ಬರೂ ಬೃಂದಾವನ ದರ್ಶನಕ್ಕೆ ಹೊರಟುಹೋದೆವು. ಅಲ್ಲಿ ಕೆಲವು ದಿನಗಳನ್ನು ತುಂಬ ಆನಂದದಿಂದ ಕಳೆದೆವು, ಬೃಂದಾವನವೇನು ಸಾಮಾನ್ಯ ಕ್ಷೇತ್ರವೆ? ಸ್ವಯಂ ಭಗವಂತನ ಲೀಲಾಸ್ಥಳ. ಆ ಸ್ಥಾನದ ಆಧ್ಯಾತ್ಮಿಕ ವಾತಾವರಣವೂ ಅನುಪಮವಾದ್ದು. ಬೃಂದಾವನದಿಂದ ಶ್ಯಾಮಕುಂಡ ಮತ್ತು ರಾಧಾಕುಂಡಗಳಿಗೂ ಹೋದೆವು. ದಾರಿಯಲ್ಲಿ ಒಂದು ಕಡೆ ಹಾರಾನ ತನ್ನ ಸಾಮಾನಿನ ಗಂಟನ್ನು ಒಂದೆಡೆ ಇಟ್ಟು, ಶೌಚಾದಿ ಕಾರ್ಯಕ್ಕಾಗಿ ಸ್ವಲ್ಪ ದೂರ ಹೋಗಿದ್ದ. ಬಂದು ನೋಡಿದಾಗ ಗಂಟು ಕಳುವಾಗಿತ್ತು. ನಮ್ಮಿಬ್ಬರ ಹಣವೂ ನನ್ನ ಹತ್ತಿರವೆ ಇರುವುದೆಂದು ಗೊತ್ತಾಗಿತ್ತು. ಆದರೆ ಹಾರಾನ ತನ್ನ ಗಂಟಿನಲ್ಲಿ ಪ್ರತ್ಯೇಕವಾಗಿ ಹತ್ತು ರೂಪಾಯಿ ನೋಟು ಇಟ್ಟುಕೊಂಡಿದ್ದ. ತನ್ನ ಗಂಟು ಕಳುವಾದುದಕ್ಕಾಗಿ ಆತನಿಗೆ ಮಹಾದುಃಖ. ಒಮ್ಮೆಗೆ ಮನಸ್ಸು ಕುಂದಿ ನಿರುತ್ಸಾಹಿಯಾಗಿಬಿಟ್ಟ. ಆಮೇಲೆ ನಾವು ಮತ್ತೆ ಸ್ವಾಮೀಜಿಯನ್ನು ಸಂಧಿಸಿದಾಗ ಅವರು ಇದನ್ನೆಲ್ಲ ಕೇಳಿ ಬಿದ್ದು ಬಿದ್ದು ನಕ್ಕು ತುಂಬ ಹಾಸ್ಯ ಪರಿಹಾಸ್ಯ ಮಾಡಿದರು. ಬೃಂದಾವನದ ಎಲ್ಲ ದರ್ಶನೀಯ ಸ್ಥಾನಗಳನ್ನೂ ನೋಡಿಕೊಂಡು  ನಾವು ಹಾತರಾಸಕ್ಕೆ ಹಿಂತಿರುಗಿ ಬಂದು ನೋಡುತ್ತೇವೆ; ಸ್ವಾಮೀಜಿಗೆ ಜ್ವರ ಮರುಕಳಿಸಿ ಬಿಟ್ಟಿದೆ, ಟೆಂಪರೇಚರೂ ಬಹಳ ಏರಿತ್ತು. ಬಿಡದೆ ಜ್ವರ ಹೊಡೆದೂ ಹೊಡೆದೂ ತುಂಬ ದುರ್ಬಲರಾಗಿದ್ದರು; ಶರೀರ ಬಹಳ ಕೃಶವಾಗಿತ್ತು. ಆದ್ದರಿಂದ ಅಲ್ಲಿ ಇನ್ನು ತಳುವಬಾರದೆಂದು ನಿಶ್ಚಯಿಸಿ, ಅವರನ್ನು ಕಲ್ಕತ್ತಾಕ್ಕೆ ಸಾಗಿಸಲು ಮನಸ್ಸು ಮಾಡಿದೆವು. ಅವರೂ ಒಪ್ಪಿದರು. ನಾನು ಕಲ್ಕತ್ತೆಗೂ ವರಾಹನಗರದ ಮಠಕ್ಕೂ ವಿವರಗಳನ್ನೆಲ್ಲ ತಿಳಿಸಿ ಒಂದು ಕಾಗದ ಬರೆದೆ. ಆದರೆ ಹಾತರಾಸದ ರೈಲು ಕೆಲಸಗಾರರೂ ಮತ್ತು ಇತರ ವಿಶಿಷ್ಟ ವ್ಯಕ್ತಿಗಳು ಸ್ವಾಮೀಜಿಯನ್ನು ಕಲ್ಕತ್ತೆಗೆ ಕರೆದುಕೊಂಡು ಹೋಗುವ ವಿಚಾರದಲ್ಲಿ ಸುಲಭವಾಗಿ ಒಪ್ಪಿಗೆ ನೀಡಲಿಲ್ಲ. ಅವರಲ್ಲಿ ಅನೇಕರು ಸ್ವಾಮೀಜಿಯ ಭಕ್ತರಾಗಿಬಿಟ್ಟಿದ್ದರು. ಯಾರಾದರಾಗಲಿ ಒಮ್ಮೆ ಅವರ ಜೊತೆ ಮಾತಾಡಿಬಿಟ್ಟರಾಯಿತು, ಒಂದೆ ಬಾರಿಗೆ ಮುಗ್ಧರಾಗಿ ಹೋಗುತ್ತಿದ್ದರು- ಹಾಗಿತ್ತು ಅವರ ವ್ಯಕ್ತಿತ್ವ. ಸ್ವಾಮೀಜಿಯನ್ನು ಕರೆದುಕೊಂಡು ಹೋಗುವ ವಿಚಾರದಲ್ಲಿ ನಾನು ಅವರೊಡನೆ ಬಹಳ ವಾದ ಮಾಡಬೇಕಾಯಿತು. ಕೊನೆಗೆ ಎಷ್ಟೋ ಹೇಳಿ ಅವರನ್ನು ಒಪ್ಪಿಸಿದೆ. ಆಮೇಲೆ ಉಚ್ಚ ಪದವಿಯಲ್ಲಿದ್ದ ಒಬ್ಬರು ಅಧಿಕಾರಿಗಳಿಂದ ಸ್ವಲ್ಪ ಹಣವನ್ನು ಕಡ ತೆಗೆದುಕೊಂಡು ಸ್ವಾಮೀಜಿ ಸಹಿತ ಕಲ್ಕತ್ತೆಯ ಕಡೆಗೆ ಹೊರಟೆ. ಅದಕ್ಕಾಗಿ ಹಾರಾನನಿಗೆ ನನ್ನ ಮೇಲೆ ಭಾರಿ ಅಸಂತುಷ್ಟಿ. ಆತನ ಜೊತೆಯಲ್ಲಿ ನಾನು ಹರಿದ್ವಾರಕ್ಕೆ ಹೋಗಲಿಲ್ಲ ಎಂಬುದು ಆತನ ದುಃಖ. ಅವನು ನನಗೆ ಹೇಳಿದ  ‘ನೀವು ಸಂನ್ಯಾಸಿ; ನಿಮಗೆ ಇಷ್ಟೊಂದು ಮಾಯೆ ಏಕೆ? ಸ್ವಾಮೀಜಿಯ ಜೊತೆಯಲ್ಲಿ ನೀವು ಹೋಗದಿದ್ದರೆ ಆಗುವುದೆ ಇಲ್ಲೇನು? ಸಾಧುವಾದವಗೆ ಇಷ್ಟು ಮಾಯೆ ಇರುವುದು ಒಳ್ಳೆಯದಲ್ಲ’ -ಇತ್ಯಾದಿ. ನಾನು ಹೇಳಿದೆ ಅವನಿಗೆ: ‘ಅಣ್ಣಾ, ನನಗೂ ಚೆನ್ನಾಗಿ ಗೊತ್ತು, ನಾನು ಸಾಧು ಎಂದು; ಸಂನ್ಯಾಸಿಯಾದವನಿಗೆ ಯಾರ ಮೇಲೆಯೂ ಮಾಯೆ ಇರುವುದು ಒಳ್ಳೆಯದಲ್ಲ ಎಂಬುದೂ ಸತ್ಯ. ಆದರೆ ಗುರು ಭಾಯಿಯಾದವರ ವಿಚಾರದಲ್ಲಿ ನಮಗೆ ಮಾಯೆ ಇದ್ದೆ ಇದೆ; ಮುಂದೆಯೂ ಇದ್ದೆ ಇರುತ್ತದೆ. ಇದನ್ನು ಶ್ರೀಗುರುಮಹಾರಾಜರಿಂದಲೆ ಕಲಿತಿದ್ದೇವೆ. ತಮ್ಮ ಅಂತರಂಗ ಶಿಷ್ಯರಾಗಿರುವ ಸಂನ್ಯಾಸಿ ಸಹೋರರಲ್ಲಿ ಈ ತೆರನಾದ ಪರಸ್ಪರ ವಿಶ್ವಾಸ ಇರುವಂತೆ ಮಾಡಿರುವವರೂ ಅವರೇ. ಅದರಲ್ಲಿಯೂ ವಿಶೇಷತಃ ಸ್ವಾಮೀಜಿ ನಮ್ಮೆಲ್ಲರ ಶಿರೋರತ್ನ. ಅವರಿಗಾಗಿ ನಾವು ನಮ್ಮ ಪ್ರಾಣಕೊಡಲೂ ಬಿಂದು ಮಾತ್ರವೂ ಹಿಂಜರಿಯುತ್ತೇವೆಂದು ತಿಳಿಯಬೇಡ. ನಮ್ಮ ಎದೆಯ ನೆತ್ತರನ್ನು ಹರಿಸಿ ಅವರ ಸೇವೆ ಮಾಡಲು ಸಮರ್ಥರಾದರೆ ನಾವು ಧನ್ಯರಾದೆವೆಂದು ಭಾವಿಸುತ್ತೇವೆ. ಸ್ವಾಮೀಜಿ ಯಾರು? ಏನು? ಎಂತಹ ವಸ್ತು? ಎಂಬುದನ್ನೆಲ್ಲ ನೀನು ಹೇಗೆತಾನೆ ತಿಳಿಯಬಲ್ಲೆ?’ ನನ್ನ ಮಾತನ್ನೆಲ್ಲ ಕೇಳಿ ಹಾರಾನ ಬಾಯಿ ಮುಚ್ಚಿಕೊಂಡ. ಹಾತರಾಸದ ಭಕ್ತರಿಗೆ ಹೇಳಿ ಹಾರಾನನ ಹೃಷಿಕೇಶ ಯಾತ್ರೆಗೆ ಬೇಕಾದ ವ್ಯವಸ್ಥೆಯನ್ನೆಲ್ಲ ಏರ್ಪಾಡು ಮಾಡಿಕೊಟ್ಟೆ. ಅವರುಗಳೆ ಒಂದು ಟಿಕೆಟ್ಟು ಕೊಂಡುಕೊಟ್ಟು, ಸ್ಟೇಷನ್ನಿಗೂ ಹೋಗಿ, ಹೃಷೀಕೇಶಕ್ಕೆ ಅವನನ್ನು ರೈಲು ಹತ್ತಿಸಿದರು.

“ಸರಿ, ನಾನು ಸ್ವಾಮೀಜಿಯನ್ನು ಕರೆದುಕೊಂಡು ಕಲ್ಕತ್ತೆಗೆ ಹೊರಟೆ. ಇತ್ತ ನಿರಂಜನಾನಂದರು ಸ್ವಾಮೀಜಿಯ ಕಾಯಿಲೆ ಸುದ್ದಿ ಮಠಕ್ಕೆ ಮುಟ್ಟಿದ ಕೂಡಲೆ ಹಾತರಾಸಕ್ಕೆ ರೈಲು ಹತ್ತಿದ್ದರು. ಬಹುಶಃ ಅಲಹಾಬಾದಿನಲ್ಲಿ ಎರಡು ಗಾಡಿಗಳೂ ಕ್ರಾಸ್ ಮಾಡಿದುವೆಂದು ತೋರುತ್ತವೆ. ಆದರೆ ಅವರಿದ್ದುದು ನಮಗೆ ಗೊತ್ತಿಲ್ಲ; ನಾವಿದ್ದುದು ಅವರಿಗೆ ಗೊತ್ತಾಗಲಿಲ್ಲ. ಮಠಕ್ಕೆ ತಲುಪಿದ ಮೇಲೆ ಡಾಕ್ಟರ್‌ ವಿಪಿನಬಾಬುಗೆ ತೋರಿಸಿದೆವು; ಅಂತೂ ಅವರ ಚಿಕಿತ್ಸೆಯಿಂದಲೆ ಸ್ವಾಮೀಜಿ ಸಂಪೂರ್ಣ ಗುಣಹೊಂದಿದರು.”

“ತರುವಾಯ ಸ್ವಾಮೀಜಿ ಸ್ವಲ್ಪಕಾಲ ಅಲ್ಲಿ ಇಲ್ಲಿ ಸುತ್ತಾಡಿಕೊಂಡಿದ್ದು, ಆಮೇಲೆ ಕೆಲವರು ಗುರುಭಾಯಿಯರ ಜೊತೆಯಲ್ಲಿ ತಪಸ್ಯೆಗಾಗಿ ಹೃಷೀಕೇಶಕ್ಕೆ ಹೋದರು. ಹಗಲೂ ಇರುಳೂ ಕಠೋರ ತಪಸ್ಯೆಯಲ್ಲಿ ಧ್ಯಾನ ಜಪಗಳಲ್ಲಿ ಮತ್ತು ವೇದಾಂತ ಚರ್ಚೆಯಲ್ಲಿ ಕಳೆಯತೊಡಗಿದೆವು. ಸ್ವಾಮೀಜಿ ಹೇಳುತ್ತಿದ್ದರು, ಅಂತಹ ಆನಂದದ ದಿನಗಳನ್ನು ತಮ್ಮ ಜೀವಮಾನದಲ್ಲಿಯೆ ಕಂಡಿಲ್ಲ ಎಂದು. ಆಗ ಮಳೆಗಾಲ; ಇತರ ವರ್ಗದ ಸಂನ್ಯಾಸಿಗಳಾರೂ ಅಲ್ಲಿರುತ್ತಿರಲಿಲ್ಲ. ಉಳಿದುಕೊಳ್ಳಲು ಇದ್ದುದೆಂದರೆ ಒಂದೇ ಜಾಗ-ಸತ್ರ. ಆಗಿನ ಕಾಲದಲ್ಲಿ ಹೃಷೀಕೇಶ ನಿಜವಾಗಿಯೂ ತಪಸ್ಯೆಗೆ ಅನುಕೂಲಸ್ಥಾನವಾಗಿತ್ತು. ಈಗ ಅದು ಒಂದು ಪೇಟೆಯೂರಾಗಿ ಬಿಟ್ಟಿದೆ. ಹೀಗೆ ಸ್ವಲ್ಪಕಾಲ ಕಠೋರ ತಪಸ್ಯೆಯಲ್ಲಿ ಮತ್ತು ವೇದಾಂತ ಚರ್ಚೆಯಲ್ಲಿ ಆನಂದದಿಂದ ಕಳೆದ ಮೇಲೆ ಸ್ವಾಮೀಜಿಗೆ ಜ್ವರ ಬಂದಿತು. ಹರಿ ಮಹಾರಾಜ್ (ಸ್ವಾಮಿ ತುರೀಯಾನಂದರು) ಮತ್ತು ಶರತ್ ಮಹಾರಾಜ್ (ಸ್ವಾಮಿ ಶಾರದಾನಂದರು) ಇನ್ನೂ ಕೆಲವು ಸೋದರ ಸಂನ್ಯಾಸಿಗಳು ಸ್ವಾಮೀಜಿಯ ಸಂಗಡ ಇದ್ದರು. ಜ್ವರ ಹೆಚ್ಚಾಗತೊಡಗಿತು. ಈ ಸ್ಥಳದಲ್ಲಿ ಡಾಕ್ಟರಾಗಲಿ ಕವಿರಾಜರಾಗಲಿ ಇರಲಿಲ್ಲ. ಸ್ವಾಮೀಜಿಯ ಕ್ಷೇಮಕ್ಕಾಗಿ ಎಲ್ಲರಿಗೂ ಚಿಂತೆಹತ್ತಿತು. ಒಂದು ದಿನ ಎನಾಯಿತೆಂದರೆ, ಜ್ವರ ಅತ್ಯಧಿಕವಾಗಿ ಏರಿದ ಮೇಲೆ ಹಠಾತ್ತನೆ ಇಳಿಯತೊಡಗಿತು. ಇಳಿಯುತ್ತಾ ಇಳಿಯುತ್ತಾ ಒಮ್ಮಿಂದೊಮ್ಮೆಗೆ ಸ್ವಾಮೀಜಿಯ ಶರೀರ ತಣ್ಣಗಾಯಿತು. ನಾಡಿ ಕೂಡ ನಿಂತು ಹೋದಂತಾಯಿತು. ಬಚಾವಾಗುವ ಆಶೆಯೂ ಏನೂ ಉಳಿಯಲಿಲ್ಲ. ಯಾರಿಗೂ ಏನು ಮಾಡಬೇಕೆಂಬುದು ತೋರಲಿಲ್ಲ. ಕಿಂಕರ‍್ತವ್ಯವಿಮೂಢರಾಗಿ ಅತೀವ ಕಾತರತೆಯಿಂದ ಶ್ರೀ ಗುರುಮಹಾರಾಜರಿಗೆ ಪ್ರಾರ್ಥನೆ ಸಲ್ಲಿಸತೊಡಗಿದೆವು; ‘ಠಾಕೂರ್‌, ಈ ವಿಪತ್ತಿನಿಂದ ನಮ್ಮನ್ನು ಪಾರುಮಾಡಿ, ನರೇನ್ ಗುಣಹೊಂದುವಂತೆ ಅನುಗ್ರಹಿಸಿ. ಒಂದು ವೇಳೆ ನರೇನ್ ಅನ್ನು ನೀವು ಕರೆದುಕೊಳ್ಳುವುದೆ ಹೌದಾದರೆ ನಮ್ಮನ್ನೂ ಅವರ ಜೊತೆಯಲ್ಲಿಯೆ ಕರೆದುಕೊಳ್ಳಿ.’ ಎಲ್ಲರಿಗೂ ಸಂಕಟವೋ ಸಂಕಟ; ಆದರೆ ಯಾರಿಗೂ ಏನು ಮಾಡುವುದಕ್ಕೂ ತೋಚಲಿಲ್ಲ. ಸೋದರ ಸಂನ್ಯಾಸಿಗಳಲ್ಲಿ ಒಬ್ಬರು ಗಂಗೆಗೆ ಸ್ನಾನದಲ್ಲಿ ಹೋಗಿದ್ದರು. ಅಲ್ಲಿ ಒಬ್ಬ ಸಾಧು ಸ್ನಾನ ಮಾಡುತ್ತಿದ್ದರು. ಅವರು ಬಹಳ ವಯಸ್ಸಾದವರು. ಆ ಪ್ರದೇಶದವರೆ ಆಗಿ ಯಾವಾಗಲೂ ಹೃಷಿಕೇಶದಲ್ಲಿಯೆ ಇರುತ್ತಿದ್ದವರು. ಈ ಗುರುಭಾಯಿಯನ್ನು ನೋಡಿ ಅವರು ‘ಏಕೆ ಚಿಂತಾಗ್ರಸ್ತರಾದಂತೆ ತೋರುತ್ತೀರಲ್ಲ!’ ಎಂದು ವಿಚಾರಿಸಿದರು. ಗುರುಭಾಯಿ ಸ್ವಾಮೀಜಿಯ ಕಾಯಿಲೆಯ ಅವಸ್ಥೆಯನ್ನೆಲ್ಲ ಹೇಳಿದರು. ಕೂಡಲೆ ಆ ಸಾಧು ಸ್ವಾಮೀಜಿಯ ಬಳಿಗೆ ಬಂದು, ಅವರ ಸ್ಥಿತಿಯನ್ನೆಲ್ಲ ಬಹಳ ಹೊತ್ತು ಎಚ್ಚರಿಕೆಯಿಂದ ಪರೀಕ್ಷಿಸಿ  ‘ನೀವೇನೂ ಗಾಬರಿಪಡುವ ಆವಶ್ಯಕತೆಯಿಲ್ಲ. ನಾನೊಂದು ಔಷಧ ಕೊಡ್ತೇನೆ. ಅದನ್ನು ಹಿಪ್ಪಲಿ ಚೂರ್ಣ ಮತ್ತು ಜೇನುತುಪ್ಪದಲ್ಲಿ ಕಲಸಿ ನೆಕ್ಕಿಸಿದರೆ ಮತ್ತೆ ಪ್ರಜ್ಞೆ ಬರುತ್ತದೆ, ಬೇಗ ಗುಣಮುಖರಾಗುತ್ತಾರೆ’ ಎಂದರು. ಹೀಗೆಂದು ಅವರು ತಮ್ಮ ಕುಟಿಗೆ ಹೋಗಿ, ಬೂದಿಯಂತಿದ್ದ ಏನೂ ಔಷಧ ತಂದುಕೊಟ್ಟರು. ಅವರು ಹೇಳಿದ ಇತರ ಮದ್ದಿನ ಸಾಮಾನುಗಳನ್ನು ಒದಗಿಸಿಕೊಂಡು, ಸಾಧು ಹೇಳಿದಂತೆಯೆ ಅದನ್ನು ಸ್ವಾಮೀಜಿಯ ಜಿಹ್ವೆಗೆ ಬಳಿಯಲಾಯಿತು. ಏನಾಶ್ಚರ್ಯ! ಆ ಔಷಧ ನೆಕ್ಕಿಸಿದ ತುಸು ಹೊತ್ತಿನಲ್ಲಿಯೆ ಸ್ವಾಮೀಜಿಯ ಶರೀರ ಬೆಚ್ಚಗಾಗತೊಡಗಿತು; ಎಷ್ಟೋ ಪಾಲು ಸ್ವಸ್ಥರಾದಂತೆ ತೋರಿ ಹೇಳಿದರು; ‘ನೀವು ನನಗೇಕೆ ಆ ಔಷಧಿ ನೆಕ್ಕಿಸಿದ್ದು? ನಾನು ಎಂಥ ಮಹಾನಂದದಲ್ಲಿದ್ದೆ!’

ಕ್ರಮೇಣ ಸ್ವಾಮೀಜಿ ಸ್ವಸ್ಥರಾಗಿ ಮೇಲೆದ್ದರು. ದಾರುಣ ವರ್ಷಾಕಾಲವಾದ್ದರಿಂದಲೂ ಮಲೇರಿಯಾ ವಿಪರೀತವಾಗಿದ್ದುದರಿಂದಲೂ ಆ ಸ್ಥಳದಲ್ಲಿಯೆ ಇರುವುದು ಎಷ್ಟು ಮಾತ್ರಕ್ಕೂ ಒಳ್ಳೆಯದಲ್ಲವೆಂದು ಸ್ಥಳಾಂತರಕ್ಕೆ ನಿಶ್ಚಯಿಸಿದೆವು. ಆದರೆ ಸ್ವಾಮೀಜಿ ಇನ್ನೂ ತುಂಬ ನಿಶ್ಯಕ್ತರಾಗಿದ್ದುದರಿಂದ ಅವರನ್ನು ಹೇಗೆ ಸಾಗಿಸುವುದು ಎಂಬುದೇ ಸಮಸ್ಯೆ ಯಾಯಿತು. ಅದೇ ಸಮಯದಲ್ಲಿ ಟೆಹೆರಿಘರ್‌ವಾಲದ ರಾಜರು ಯಾವುದೊ ಕೆಲಸದ ಮೇಲೆ ಅಲ್ಲಿಗೆ ಬಂದರು. ಪ್ರಸಿದ್ಧ ಇತಿಹಾಸ ಕಾರರಾದ ಶ್ರೀ ಹರಿಪ್ರಸಾದ ಶಾಸ್ತ್ರಿಗಳ ಸಹೋದರ ಶ್ರೀರಘುನಾಥ ಶಾಸ್ತ್ರಿ ಆಗ ಟೆಹರಿ ರಾಜರ ಆಪ್ತಕಾರ್ಯದರ್ಶಿಗಳಾಗಿದ್ದರು. ನಮ್ಮ ಕಷ್ಟದ ವಿಚಾರ ಅವರಿಗೆ ಗೊತ್ತಾಗಿ ಅವರು ಹೃಷೀಕೇಶದಿಂದ ಹರಿದ್ವಾರಕ್ಕೆ ಒಂದು ಎತ್ತಿನ ಗಾಡಿ ಗೊತ್ತು ಮಾಡಿ ಕೊಟ್ಟರು. ಹರಿದ್ವಾರದಲ್ಲಿ ಸ್ವಲ್ಪ ದಿನ ಕಳೆದು ಸ್ವಾಮೀಜಿ ಮೀರತ್ತಿಗೆ ಹೋದರು. ಸೋದರ ಸಂನ್ಯಾಸಿಗಳೆಲ್ಲ ಅಲ್ಲಿಯೂ ಅವರ ಜೊತೆ ಸೇರಿದರು. ಮೀರತ್ ಒಳ್ಳೆಯ ಆರೋಗ್ಯಕರ ಸ್ಥಾನ. ಎರಡೊ ಮೂರೊ ತಿಂಗಳು ಅಲ್ಲಿದ್ದ. ಮೇಲೆ ಸ್ವಾಮೀಜಿಗೆ ಪೂರ್ತಿ ಗುಣವಾಗಿ ಮೊದಲಿನ ಆರೋಗ್ಯಸ್ಥಿತಿಗೆ ಬಂದರು. ಒಂದು ದಿನ ಅವರು ಹೇಳಿದರು : ‘ಈ ಸಾರಿ ನನಗೆ ಒಂದು ಅನುಭವ ಬಂದಿದೆ. ಇನ್ನು ಮೇಲೆ ನಾನು ನನ್ನ ಗುರುಭಾಯಿಯರೊಡನೆ ಇರುವುದಿಲ್ಲ; ನಾನೊಬ್ಬನೆ ಒಂಟಿಯಾಗಿರುತ್ತೇನೆ. ನನಗೆ ಕಾಯಿಲೆಯಾದಾಗ ನೀವೆಲ್ಲ ಎಷ್ಟು ಪಾಡುಪಟ್ಟಿರಿ? ನೀವೆಲ್ಲರೂ ಅಲ್ಲಿಗೆ ಹೋದದ್ದು ತಪಸ್ಯೆಗಾಗಿ. ಆದರೆ ಆದದ್ದೇನು? ನಿಮ್ಮ ಸಮಯವೆಲ್ಲ ನನ್ನ ಶುಶ್ರೂಷೆಯಲ್ಲಿಯೆ ಕಳೆದುಹೋಯಿತು. ಇನ್ನು ಮೇಲೆ ನಿಮ್ಮಲ್ಲಿ ಯಾರಾದರೂ ಕಾಯಿಲೆ ಬಿದ್ದರೆ ನಾನು ಅದಕ್ಕಿಂತಲೂ ಹೆಚ್ಚಾಗಿ ಸೇವೆ ಮಾಡಬೇಕಾಗುತ್ತದೆ. ಸೋದರ ಸಂನ್ಯಾಸಿಗಳ ಮೇಲಣ ಅಕ್ಕರೆಯೂ ಒಂದು ತರಹದ ಬಂಧನವೆ. ಆ ಬಂಧನವನ್ನೂ ನಾನು ಕಿತ್ತೊಗೆಯಬೇಕಾಗಿದೆ.’ ಏನು ಹೇಳಿದರೋ ಅದನ್ನೇ ಮಾಡಿಯೂಬಿಟ್ಟರು. ಅವಾಗಿನಿಂದ ಅವರು ಒಂಟಿಯಾಗಿಯೆ ಭಾರತ ಭೂಮಿಯನ್ನೆಲ್ಲ ಸುತ್ತಿದ್ದರು; ಅವರು ಅಮೆರಿಕಾಕ್ಕೆ ಹೊರಡುವ ಪರ್ಯಂತ ಎಲ್ಲಿದ್ದಾರೆ ಏನು ಮಾಡುತ್ತಿದ್ದಾರೆ ಎಂಬುದು ಯಾರಿಗೂ ಗೊತ್ತಾಗಿರಲಿಲ್ಲ.”

ಆಮೇಲೆ ಒಬ್ಬ ಸಂನ್ಯಾಸಿ ಪ್ರಶ್ನೆ ಕೇಳಿದರು : “ಸ್ವಾಮೀಜಿಯ ದೇಹತ್ಯಾಗದ ಸಮಯದಲ್ಲಿ ತಾವು ಬೇಲೂರು ಮಠದಲ್ಲಿ ಇದ್ದಿರೇನು?”

ಮಹಾಪುರುಷಜಿ : “ಇಲ್ಲ, ಆಗ ನಾನು ಮಠದಲ್ಲಿರಲಿಲ್ಲ. ಆ ಘಟನೆ ನಡೆಯುವುದಕ್ಕೆ ಹತ್ತೊ ಹನ್ನೆರಡು ದಿನಗಳ ಮುಂಚೆ, ಸ್ವಾಮೀಜಿಯೆ ತುಂಬ ಒತ್ತಿ ಹೇಳಿದ್ದರಿಂದ, ವೇದಾಂತ ಪ್ರಚಾರಕಾರ್ಯಕ್ಕಾಗಿ ನಾನು ವಾರಾಣಸಿಗೆ ಹೋಗಿದ್ದೆ. ಜೂನ್ ಕೊನೆಯ ಭಾಗದಲ್ಲಿ ನಾನು ವಾರಾಣಸಿ ತಲುಪಿದೆ. ಅದಕ್ಕೆ ಮೊದಲು ಸ್ವಾಮೀಜಿ ಕೊನೆಯ ಬಾರಿ ವಾರಾಣಸಿಯಲ್ಲಿದ್ದಾಗ ನಾನು ಅವರ ಸಂಗಡ ಇದ್ದೆ. ಆಗ ಭಿಂಗದ ಮಹಾರಾಜರು ಸ್ವಾಮೀಜಿಗೆ ವಿನಿಯೋಗಕ್ಕಾಗಿ ಐನೂರು ರೂಪಾಯಿಗಳನ್ನು ಕೊಟ್ಟು ವೇದಾಂತ ಪ್ರಚಾರದ ಸಲುವಾಗಿ ವಾರಾಣಸಿಯಲ್ಲೊಂದು ಸಂಸ್ಥೆ ತೆರೆಯುವಂತೆ ಕೇಳಿಕೊಂಡಿದ್ದರು. ಆ ಮಹಾರಾಜರಿಗೆ ಸ್ವಾಮೀಜಿಯಲ್ಲಿ ತುಂಬ ಶ್ರದ್ಧೆ ಮತ್ತು ಭಕ್ತಿ. ಅವರು ತಮ್ಮ ವೃದ್ಧ ವಯಸ್ಸಿನಲ್ಲಿ ತಮ್ಮ ರಾಜ್ಯವನ್ನು ಪರಿತ್ಯಜಿಸಿ, ಕಾಶಿಯಲ್ಲಿ ದುರ್ಗಾ ದೇವಾಲಯದ ಸಮೀಪ ಒಂದು ತೋಟದ ಮನೆ ಕಟ್ಟಿಸಿಕೊಂಡು, ಅಲ್ಲಿ ವಾನಪ್ರಸ್ಥರಾಗಿ ವಾಸಿಸುತ್ತಿದ್ದರು. ತಮ್ಮ ಮನೆಯ ಆವರಣದಿಂದ ಅವರು ಹೊರಗೆ ಬರುತ್ತಲೆ ಇರಲಿಲ್ಲ. ಸ್ವಾಮೀಜಿ ವಾರಾಣಸಿಗೆ ಬಂದಿರುವ ಸಮಾಚಾರ ಅವರಿಗೆ ಗೊತ್ತಾಗಲು, ಅವರು ತಮ್ಮ ಆಪ್ತಾಧಿಕಾರಿಯೊಬ್ಬರ ಕೈಲಿ ಹಣ್ಣು ಹೂವು ಸಿಹಿತಿಂಡಿಗಳನ್ನು ಕೊಟ್ಟುಕಳುಹಿಸಿ, ತಮ್ಮ ಮನೆ ಸ್ವಾಮೀಜಿಯ ಪಾದಧೂಳಿಯಿಂದ ಪವಿತ್ರವಾಗುವಂತೆ ಮಾಡಬೇಕೆಂದು ಅವರನ್ನು ಗೌರವಪೂರ್ವಕ ಆಹ್ವಾನಿಸಿದರು. ತಾವು ಗೃಹಾವರಣದಿಂದಾಚೆ ಹೋಗುವುದಿಲ್ಲವೆಂದು ವ್ರತ ತೊಟ್ಟಿರುವುದರಿಂದ ತಾವು ವ್ಯಕ್ತಿಶಃ ಸ್ವಾಮೀಜಿಯ ಬಳಿಗೆ ಬಂದು ಅವರ ಶ್ರೀಚರಣಗಳಿಗೆ ಗೌರವ ಸಲ್ಲಿಸಲು ಸಾಧ್ಯವಾಗದಿದ್ದುದಕ್ಕಾಗಿ ಕ್ಷಮೆದೋರ ಬೇಕೆಂದು ಅವರು ತಮ್ಮ ಸಂದೇಶವಾಹಕನ ಕೈಲಿ ಹೇಳಿಕಳಿಸಿದ್ದರು. ಮಹಾರಾಜರ ಭಕ್ತಿಗೆ ಮುಗ್ಧರಾಗಿ ಸ್ವಾಮೀಜಿ ಹೇಳಿದರು:  ‘ನಾನು ಸಾಧು. ಆತನ ಆಹ್ವಾನ ಕಳಿಸಿದಾಗ ನಾನು ಏತಕ್ಕೆ ಹೋಗಬಾರದು? ಹೋಗಿಯೆ ಹೋಗುತ್ತೇನೆ ‘. ಸರಿ, ಅವರು ಮಹಾರಾಜರ ಕರೆಗೆ ಓಗೊಟ್ಟು ಅವರ ಮನೆಗೆ ಹೋದರು, ನಾನೂ ಅವರ ಸಂಗಡ ಹೋದೆ. ಮಹಾರಾಜರು ತುಂಬ ಭಕ್ತಿ ಭಾವದಿಂದ ಸ್ವಾಮೀಜಿಯನ್ನು ಎದುರುಗೊಂಡು ಮನೆಯೊಳಗೆ ಕರೆದುಕೊಂಡು ಹೋದರು. ಹಾಗೇ ಮಾತಾಡುತ್ತಿದ್ದಾಗ ಮಾತಿನ ಮಧ್ಯೆ ಹೇಳಿದರು: ‘ತಮ್ಮ ಕೆಲಸಕಾರ್ಯಗಳನ್ನೆಲ್ಲ ನಾನು ಅನೇಕ ದಿನಗಳಿಂದ ಕೇಳಿ ತಿಳಿಯುತ್ತಿದ್ದೇನೆ. ಅದಕ್ಕಾಗಿ ನನಗೆ ತುಂಬ ಆನಂದವೂ ಆಗಿದೆ. ತಮ್ಮ ಉದ್ದೇಶ ಅತ್ಯಂತ ಮಹತ್ತಾದುದು. ತಮ್ಮನ್ನು ನೋಡಿ ನನಗನ್ನಿಸುತ್ತಿದೆ, ತಾವು ಬುದ್ಧದೇವ, ಶಂಕರಾಚಾರ್ಯ ಮೊದಲಾದ ಅವತಾರ ಪುರುಷಗಣದಂತೆ ಧರ್ಮದ ಪುನಃಪ್ರತಿಷ್ಠಾನ ಕಾರ್ಯಕ್ಕಾಗಿ ದೇಹಧಾರಣ ಮಾಡಿ ಬಂದಿದ್ದೀರಿ. ತಮ್ಮ ಸಂಕಲ್ಪವು ಸಿದ್ಧಿ ಹೊಂದಲಿ ಎಂಬುದೇ ನನ್ನ ಹೃದಯದ ಹಾರೈಕೆ.’ ಅಂತಹ ಕಾರ್ಯ ವಾರಾಣಸಿಯಲ್ಲಿಯೂ ಪ್ರಾರಂಭವಾಗಲಿ ಎಂದು ಅದಕ್ಕಾಗಿ ಐನೂರು ರೂಪಾಯಿ ಕಾಣಿಕೆ ಕೊಡಲು ಬಂದರು. ಆಗ ಸ್ವಾಮೀಜಿ ಅದನ್ನು ತೆಗೆದುಕೊಳ್ಳಲಿಲ್ಲ. ಅದರ ವಿಚಾರವಾಗಿ ಸ್ವಲ್ಪ ಆಲೋಚನೆಮಾಡಿ, ಮುಂದೆ ಸೂಕ್ತಕ್ರಮ ತೆಗೆದುಕೊಳ್ಳುತ್ತೇವೆ ಎಂದರು. ಅಷ್ಟಾದರೂ ಆ ಮಹಾರಾಜರು ಕೆಲವು ದಿನಗಳ ತರುವಾಯ ಸ್ವಾಮೀಜಿಗೆ ಆ ಹಣ ಕಳಿಸಿಕೊಟ್ಟು, ಕಾಶಿಯಲ್ಲಿ ಕೆಲಸ ಪ್ರಾರಂಭಿಸಬೇಕೆಂದು ಒತ್ತಾಯಪೂರ್ವಕ ಕೇಳಿಕೊಂಡರು. ಆಗ ಸ್ವಾಮೀಜಿ ಆ ಹಣ ಸ್ವೀಕರಿಸಿದರು.”

“ಬೇಲೂರು ಮಠಕ್ಕೆ ಹಿಂತಿರುಗಿದ ಮೇಲೆ ಸ್ವಾಮೀಜಿ ಮೊದಲು ಸ್ವಾಮಿ ಶಾರದಾನಂದರನ್ನು ವಾರಾಣಸಿಗೆ ಹೋಗುವಂತೆ ಕೇಳಿಕೊಂಡರು. ಆದರೆ ಅವರು ಒಪ್ಪಲಿಲ್ಲ. ‘ಕಾಶಿ ನನಗೆ ಸರಿಹೋಗುವುದಿಲ್ಲ’ ಎಂದುಬಿಟ್ಟರು. ಆದ್ದರಿಂದ ಅವರು ನನ್ನನ್ನು ಮತ್ತೆಮತ್ತೆ ಕಾಶಿಗೆ ಹೋಗುವಂತೆ ಕೇಳಿಕೊಳ್ಳತೊಡಗಿದರು. ಆ ಸಮಯದಲ್ಲಿ ಸ್ವಾಮೀಜಿಯ ಆರೋಗ್ಯ ಬಹಳ ಕೆಟ್ಟಿತ್ತು. ಅವರಿಗಿದ್ದ ಡಯಾಬಿಟೀಸ್ (ಬಹುಮೂತ್ರ) ರೋಗ ಬಹಳ ಉಲ್ಬಣವಾಗಿತ್ತು. ನಾನೇ ಅವರಿಗೆ ಔಷಧಿ ಕುಡಿಸುವುದು, ಅನುಪಾನ ಉಪಾಹಾರಾದಿಗಳನ್ನೆಲ್ಲ ನೋಡಿಕೊಳ್ಳುತ್ತಿದ್ದೆ. ಆದ್ದರಿಂದ ನನಗೆ ಅದನ್ನೆಲ್ಲ ಬಿಟ್ಟು ಕಾಶಿಗೆ ಹೋಗಲು ಮನಸ್ಸಾಗಲಿಲ್ಲ. ತರುವಾಯ ಅವರಿಗೆ ಸ್ವಲ್ಪ ಉತ್ತಮವಾದಂತೆ ತೋರಿದ ಮೇಲೆಯೆ ಅವರು ನನ್ನನ್ನು ಕಾಶಿಗೆ ಕಳುಹಿಸಿದರು.”

ಸಂನ್ಯಾಸಿ: “ಕಾಶೀ ಸೇವಾಶ್ರಮದ ವಿಚಾರ ಮಾತಾಡುತ್ತ ಮಾಸ್ಟರ್‌ ಮಹಾಶಯ ಹೇಳುತ್ತಿದ್ದರು ‘ನೋಡಿ, ಸ್ವಾಮಿ ಶಿವಾನಂದರ ತಪಸ್ಸಿನ ಫಲವಾಗಿ ಕಾಶೀ ಸೇವಾಶ್ರಮ ಹೇಗೆ ಮೇಲೆದ್ದಿದೆ?”

ಮಹಾಪುರುಷಜಿ: “ಅದೆಲ್ಲ ಏನು ಮಾತು? ಎಲ್ಲ ಅವನ ಇಚ್ಛೆ: ಎಲ್ಲ ಅವನ ಕೃಪೆಯಿಂದಲೆ ನಡೆಯುತ್ತದೆ. ಶ್ರೀ ಠಾಕೂರರ ಸಂದೇಶ ದಿನದಿನಕ್ಕೂ ಇನ್ನೂ ಹೆಚ್ಚು ಹೆಚ್ಚಾಗಿ ಪ್ರಸಾರಿತವಾಗುತ್ತದೆ. ಅದೇ ಈ ಯುಗಧರ್ಮದ ಪ್ರಭಾವ. ಕಾಣುವುದಿಲ್ಲವೆ, ಮುಂಬಯಿಯಲ್ಲಿ ಮೊದಲು ಏನಿತ್ತು, ಈಗ ಏನೇನು ಆಗಿದೆ ಎಂದು? ಕಾಲಕ್ರಮೇಣ ಇನ್ನೂ ಅಷ್ಟು ಆಗುತ್ತದೆ! ಎಲ್ಲ ಅವನ ಲೀಲೆ!”

ಮಾತಿನ ನಡುವೆ ಒಬ್ಬ ಪಾರ್ಸೀ ಭಕ್ತ ಮಹಿಳೆಯ ಗಾಯನದ ವಿಚಾರ ಬಂದಾಗ ಮಹಾಪುರುಷಜಿ ಹೇಳಿದರು: “ಆಹಾ, ಎಷ್ಟು ಭಕ್ತಿಯಿಂದ  ‘ಮೇರೆತೊ ಗಿರಿಧರ ಗೋಪಾಲ, ದುಸರಾ ನ ಕೋಇ’ ಹಾಡಿದರು! ಹಾಗೆ ಹೇಳುತ್ತಾ ಅವರೇ ಅದನ್ನು ಹಾಡತೊಡಗಿದರು.”

ಎಲ್ಲವನು ಮಾಡಿ, ಎಲ್ಲರೊಳಗೂಡಿ, ನೀನೆ ಎಲ್ಲವಾದೆ
ಜ್ಯೋತಿಯಾದರೂ ತಮೋಲೀಲೆಯಲಿ ಜಡದ ಮುದ್ರೆಯಾದೆ;
ಎನಿತು ಕರೆದರೂ ಓಕೊಳ್ಳದಿರುವ ಆ ಚಿನ್ನಿದ್ರೆಯಾದೆ;
ಬೆಳಗಿ ನನ್ನಾತ್ಮಕ್ಕಿಳಿದು ಬಾ, ತಾಯಿ, ನೀನೆ ಬ್ರಹ್ಮ ಬೋಧೆ | – ಋತಚಿನ್ಮಯೀ ಜಗನ್ಮಾತೆಗೆ ‘ಅಗ್ನಿಹಂಸ’ ದಿಂದ

* * *