ಕಾಶೀ
೧೯೨೭೨೮

 

ಕಾಶಿಯಲ್ಲಿದ್ದಾಗ ಮಹಾಪುರುಷ ಮಹಾರಾಜ್ ಸ್ತ್ರೀಪುರುಷರಾದಿಯಾಗಿ ಸುಮಾರು ಐವತ್ತು ಮಂದಿಗೆ ಮಂತ್ರದೀಕ್ಷೆ ಕೊಟ್ಟರು. ಕಾಶಿ ಶಿವಕ್ಷೇತ್ರ; ಆದ ಕಾರಣ ಇದುವರೆಗೂ ಸ್ವಾಮಿ ಬ್ರಹ್ಮಾನಂದರು, ಸ್ವಾಮಿ ಶಾರದಾನಂದರು – ಮೊದಲಾದ ಶ್ರೀ ರಾಮಕೃಷ್ಣ ದೇವರ ಪ್ರಮುಖ ಅಂತರಂಗ ಶಿಷ್ಯರಲ್ಲಿ ಯಾರೂ ಕಾಶಿಯಲ್ಲಿ ಮಂತ್ರದೀಕ್ಷೆ ಕೊಡಲು ಸಮ್ಮತಿಸಿರಲಿಲ್ಲ.  ಸ್ವಾಮಿ ಶಿವಾನಂದರು ಆ ನಿಯಮಕ್ಕೆ ವ್ಯತಿಕ್ರಮವಾಗಿ ದೀಕ್ಷೆಕೊಟ್ಟದ್ದು ಅನೇಕ ಸಾಧು ಮತ್ತು ಸೇವಾನುಚರರ ಮನಸ್ಸಿನಲ್ಲಿ ಏನೊ ತುಸು ಕಳವಳದ ಸಂದೇಹಕ್ಕೆ ಕಾರಣವಾಗಿತ್ತು. ಆ ಸಂದೇಹ ನಿವಾರಣಾರ್ಥವಾಗಿ ಒಂದು ದಿನ ಒಬ್ಬ ಅನುಚರ ಅವರನ್ನು ಕೇಳಿದನು:  ‘ಮಹಾರಾಜ್, ನಾವೊಂದು ಪ್ರಶ್ನೆ ಕೇಳಬೇಕಾಗಿದೆ. ನಮ್ಮ ಮನಸ್ಸಿನಲ್ಲಿ ಒಂದು ಸಂದೇಹ ತಲೆದೋರಿದೆ. ತಾವು ದಯೆತೋರಿ ಅದನ್ನು ನಿವಾರಿಸಬೇಕೆಂದು ಬೇಡುತ್ತೇವೆ. ನಾವು ಕೇಳಿದ್ದೇವೆ, ರಾಜಾ ಮಹಾರಾಜ್ (ಸ್ವಾಮಿ ಬ್ರಹ್ಮಾನಂದರು) ಮೊದಲಾದವರು ಯಾರೂ ಕಾಶಿಯಲ್ಲಿ ದೀಕ್ಷೆ ಕೊಡಲು ಒಪ್ಪಿರಲಿಲ್ಲವಂತೆ. ತಾವಾದರೋ ದೀಕ್ಷೆ ಕೊಟ್ಟಿದ್ದೀರಿ: ಅದೇಕೆ?’

ಸೇವಾನುಚರನ ಈ ಪ್ರಶ್ನೆ ಕೇಳಿ ಅವರು ಸ್ವಲ್ಪ ಹೊತ್ತು ತುಂಬ ಗಂಭೀರ ಭಾವದಿಂದ ಮೌನವಾಗಿದ್ದರು. ಆಮೇಲೆ ಮೆಲ್ಲಮೆಲ್ಲಗೆ ಹೇಳಿದರು; “ನೋಡು, ಬಾಬಾ, ನಾನು ಯಾರಿಗಾದರೂ ದೀಕ್ಷೆ ಕೊಡುತ್ತೇನೆ ಎಂಬ ಬುದ್ಧಿ ನನ್ನ ಮನಸ್ಸಿನಲ್ಲಿ ಇರುವುದೇ ಇಲ್ಲ. ಶ್ರೀ ಠಾಕೂರರ ಕೃಪೆಯಿಂದ ನನ್ನಲ್ಲಿ ಗುರು ಬುದ್ಧಿ ಯಾವತ್ತೂ ತಲೆಹಾಕಿಲ್ಲ. ಜಗದ್ಗುರುವಾಗಿದ್ದಾನೆ ಆ ಶಂಕರ ಮಹಾದೇವ; -ಈ ಯುಗದಲ್ಲಿ ಶ್ರೀ ರಾಮಕೃಷ್ಣದೇವ. ಆತನೆ ಭಕ್ತರ ಹೃದಯದಲ್ಲಿ ಪ್ರೇರಣೆಯಾಗಿ ಇಲ್ಲಿಗೆ ಅವರನ್ನು ಕಳಿಸುತ್ತಾನೆ. ಇತ್ತ ಆತನೆ ನನ್ನಲ್ಲಿ ಕುಳಿತು ಏನು ಹೇಳಿಸುತ್ತಾನೊ ಅದನ್ನು ನಾನು ಮಾಡುತ್ತೇನೆ. ಶ್ರೀ ಠಾಕೂರರೇ ನನ್ನ ಅಂತರಾತ್ಮವಾಗಿದ್ದಾರೆ…”

ಕಾಶಿಯ ಅದ್ವೈತಾಶ್ರಮದ ಉಪ್ಪರಿಗೆಯ ಮೇಲೆ ಒಂದು ಮೂಲೆಯ ಕೊಠಡಿಯಲ್ಲಿ ಮಹಾಪುರಷಜಿ ಇಳಿದುಕೊಂಡಿದ್ದರು. ಆಗ ಚಳಿಗಾಲ. ಎರಡು ಆಶ್ರಮಗಳಲ್ಲಿಯೂ (ಶ್ರೀರಾಮಕೃಷ್ಣ ಅದ್ವೈತಾಶ್ರಮ ಮತ್ತು ಶ್ರೀರಾಮಕೃಷ್ಣ ಸೇವಾಸದನ) ಸಾಧುಗಳೂ ಬ್ರಹ್ಮಚಾರಿಗಳೂ ಭರ್ತಿಯಾಗಿದ್ದರು. ಅವರಲ್ಲಿ ಅನೇಕರು ಮಹಾಪುರಷಜಿಯ ಪೂತಸಂಗಲಾಭಕ್ಕಾಗಿಯೆ ಅಲ್ಲಿಗೆ ಬಂದಿದ್ದರು. ನೋಡಿದರೆ ಏನೋ ಒಂದು ಉತ್ಸವವೋ ಆನಂದದ ವೇಳವೊ ನೆರೆದಿದೆ ಎಂಬಂತಿತ್ತು. ಒಂದು ದಿನ ಬೆಳಿಗ್ಗೆ ಎರಡು ಆಶ್ರಮಗಳ ಸಾಧು ಬ್ರಹ್ಮಚಾರಿಗಳೂ ಯಥಾ ರೀತಿ ಒಬ್ಬೊಬ್ಬರಾಗಿ ಬಂದು ಪ್ರಣಾಮ ಮಾಡಿ, ಆಶೀರ್ವಾದ ಪಡೆದು ಹೋಗುತ್ತಿರುವಾಗ ಒಬ್ಬ ಸಂನ್ಯಾಸಿಗೆ ಮಹಾಪುರುಷಜಿ ಹೇಳಿದರು: “ನೋಡಿದೆಯಾ, ನಿನ್ನೆ ರಾತ್ರಿ ನನಗೆ ಒಂದು ವಿಚಿತ್ರ ಅನುಭವವಾಯ್ತು. ಮಧ್ಯರಾತ್ರಿ; ಮಲಗಿದ್ದೆ; ಹಠಾತ್ತನೆ ನೋಡುತ್ತೇನೆ, ಒಬ್ಬ ಶ್ವೇತಕಾಯ ಪುರುಷ, ಜಟಾ ಜೂಟಧಾರಿ, ತ್ರಿನಯನ, ನನ್ನ ಹತ್ತಿರವೆ ಬಂದು ನಿಂತಿದ್ದಾನೆ! ಆತನ ದಿವ್ಯ ಕಾಂತಿಯಿಂದ ನಾಲ್ಕೂದಿಕ್ಕು ಆಲೋಕಿತವಾಗಿಬಿಟ್ಟಿತ್ತು. ಆಹಾ ಎಂಥ ಸುಂದರ ಕಮನೀಯ ಮೂರ್ತಿ; ಕಣ್ಣುಗಳಲ್ಲಿ ಎಂತಹ ಕರುಣೆ! ಆತನನ್ನು ನೋಡಿದ ಮಾತ್ರದಿಂದಲೆ ಒಳಗಿದ್ದ ಮಹಾವಾಯು (ಆಧ್ಯಾತ್ಮಿಕ ಕುಂಡಲಿನೀ ಶಕ್ತಿ) ಒಂದೆ ಏಟಿಗೆ ಗರಗರ ಶಬ್ದ ಮಾಡುತ್ತಾ ಊರ್ಧ್ವದ ಕಡೆಗೆ ಏರತೊಡಗಿತು; ಕ್ರಮವಾಗಿ ಧ್ಯಾನಸ್ಥನಾದೆ: ಸಮಸ್ತ ಚೈತನ್ಯವೂ ಸ್ತಬ್ಧವಾಯಿತು; ಅ: ಅಂಥ ಆನಂದಾನುಭವ! ಆಗ ನೋಡುತ್ತೇನೆ, ಆ ರೂಪ ಮೆಲ್ಲಮೆಲ್ಲನೆ ಅಂತರ್ಧಾನವಾಗಿ ಅದರ ಸ್ಥಾನದಲ್ಲಿ ಶ್ರೀ ಗುರುಮಹಾರಾಜ್ ಮಂದಹಾಸ ಬೀರುತ್ತಾ ನಿಂತಿದ್ದುದನ್ನು ಕಂಡೆ. ನನ್ನ ಕಡೆಗೆ ಕೈತೋರಿಸುತ್ತಾ ಅವರು ಹೇಳಿದರು : ‘ನೀನಿನ್ನೂ ಇರಬೇಕಾಗಿದೆ, ಇನ್ನೂ ಸ್ವಲ್ಪ ಕೆಲಸ ಬಾಕಿ ಇದೆ.’ ಠಾಕೂರರು ಹೀಗೆ ಹೇಳಿದೊಡನೆಯೆ ಮನಸ್ಸು ಮತ್ತೆ ಕೆಳಕ್ಕೆ ಇಳಿಯತೊಡಗಿತು. ಮತ್ತೆ ಶ್ವಾಸಕ್ರಿಯೆ ಪ್ರಾರಂಭವಾಗಿ ನನ್ನ ದೇಹವೂ ಉಸಿರಾಡತೊಡಗಿತು. ಎಲ್ಲವೂ ಶ್ರೀ ಗುರು ಇಚ್ಛೆ. ನಾನಂತೂ ಮಹಾನಂದದಲ್ಲಿದ್ದೆ! ಮತ್ತಾರೂ ಅಲ್ಲ, ಸಾಕ್ಷಾತ್ ಕಾಶೀ ವಿರ್ಶವನಾಥ!”

ಸಂನ್ಯಾಸಿ : “ತಮಗೆ ದರ್ಶನವಾದದ್ದು ಸ್ವಪ್ನದಲ್ಲಿಯೆ?”

ಮಹಾಪುರುಷಜಿ: “ಇಲ್ಲ, ಇಲ್ಲ; ಚೆನ್ನಾಗಿ ಎಚ್ಚರವಾಗಿದ್ದಾಗಲೆ.”

ಹಾಗೆಂದವರೆ ಬೇರೆ ಪ್ರಸ್ತಾಪವೆತ್ತಿದರು, ಆ ವಿಚಾರವನ್ನು ಅಷ್ಟಕ್ಕೇ ನಿಲ್ಲಿಸಲೊ ಎಂಬಂತೆ.

* * *