ಬೇಲೂರು ಮಠ
೧೯ನೆಯ ಮಂಗಳವಾರ, ಮಾರ್ಚಿ ೧೯೨೯

ಮಹಾಪುರುಷ ಮಹಾರಾಜರ ದೇಹಸ್ಥಿತಿ ಅಷ್ಟೇನೂ ಸರಿಯಾಗಿಲ್ಲ. ಎರಡೆ ದಿನಗಳ ಹಿಂದೆ ಶ್ರೀರಾಮಕೃಷ್ಣರ ಜನ್ಮೋತ್ಸವ ವಿರಾಟ್ ಪ್ರಮಾಣದಲ್ಲಿ ತುಂಬ ವಿಜೃಂಭಣೆಯಿಂದ ಆಚರಿಸಲ್ಪಟ್ಟಿತ್ತು. ಸುಮಾರು ನೂರೈವತ್ತು ಸಾವಿರ ಜನರು ಆ ಉತ್ಸವಾನಂದದಲ್ಲಿ ಭಾಗಿಯಾಗಿದ್ದರು. ಆ ದಿನ ಬೆಳಗಿನಿಂದ ಬೈಗಿನವರೆಗೂ ಅಸಂಖ್ಯೇಯ ಜನರು ಅವರನ್ನು ದೂರದಿಂದಲೆ ದರ್ಶಿಸಿಯೊ ಇಲ್ಲವೆ ಕಾಲು ಮುಟ್ಟಿ ನಮಸ್ಕರಿಸಿಯೊ ಧನ್ಯರಾಗಿದ್ದರು. ಭಕ್ತರಿಗೆ ಅವರ ಕೊಠಡಿಯ ಬಾಗಿಲು ಸದಾ ತೆರದೇ ಇರುತ್ತಿತ್ತು. ಅವರೂ ಕೂಡ ಶ್ರೀ ಗುರುಮಹಾರಾಜರ ಭಾವದಿಂದ ಮತ್ತರಾಗಿ ನಮ್ಮ ಶರೀರದ ಕಡೆಗೆ ಒಂದಿನಿತೂ ಲಕ್ಷ್ಯ ಕೊಡಲಿಲ್ಲ. ದೈವಬಲದಿಂದಲೆ ಬಲೀಯರಾದಂತೆ ಅಕ್ಲಾಂತ ಭಾವದಿಂದ ಎಲ್ಲರ ಜೊತೆಯಲ್ಲಿಯೂ ಆನಂದದಲ್ಲಿ ಶ್ರೀ ಗುರುದೇವನ ವಿಚಾರವಾಗಿ ಮಾತಾಡುತ್ತಿದ್ದರು. ನಾನಾ ಪ್ರಕಾರವಾದ ಧರ್ಮೋಪದೇಶದಿಂದ ಭಕ್ತರ ಪ್ರಾಣಕ್ಕೆ ವಿಮಲ ಆನಂದಸುಧೆ ವರ್ಷಿಸುವಂತೆ ಮಾಡಿದರು. ಆ ದಿನದ ಅತಿಯಾದ ಶ್ರಮದಿಂದ ಅವರ ಶರೀರ ಇನ್ನೂ ಚೇತರಿಸಿಕೊಳ್ಳುವುದರಲ್ಲಿಯೆ ಇತ್ತು. ಆದರೆ ಅವರು ಮಾತ್ರ ಸದಾ ಪ್ರಫುಲ್ಲರೂ ಆನಂದಮಯರೂ ಆಗಿದ್ದರು.

ಇವತ್ತು ಪ್ರಾತಃಕಾಲದಿಂದಲೂ ಮಠದ ಸಾಧುಗಳೂ ಬ್ರಹ್ಮಚಾರಿಗಳೂ ಅವರ ಕೊಠಡಿಯಲ್ಲಿ ಒಬ್ಬೊಬ್ಬರಾಗಿ ನೆರೆದು ಭಕ್ತಿನಮ್ರರಾಗಿ ಪ್ರಣಾಮಮಾಡ ತೊಡಗಿದರು. ಅವರೂ ಅಕ್ಕರೆಯಿಂದ ಎಲ್ಲರನ್ನೂ ಕುಶಲ ಪ್ರಶ್ನೆ ಕೇಳಿ ಆಶೀರ್ವದಿಸಿದರು. ಸಾಧುಗಳಲ್ಲಿ ಒಬ್ಬರ ಉತ್ತರೀಯ ಸ್ವಲ್ಪ ಚಿಂದಿಯಾಗಿದ್ದುದನ್ನು ಗಮನಿಸಿ ಸಮೀಪವಿದ್ದ ತಮ್ಮ ಒಂದು ಹೊಸ ವಸ್ತ್ರವನ್ನು ಅವರಿಗೆ ಕೊಡಲು ಆದೇಶವಿತ್ತು ಮತ್ತೆ ಹೇಳಿದರು : “ಸಾಧುಗಳಲ್ಲಿ ಯಾರಿಗೆ ಏನು ಬೇಕಾಗಿದೆ ಎನ್ನುವುದರ ಮೇಲೆ ಸ್ವಲ್ಪ ಕಣ್ಣಿಟ್ಟಿರಲೂ ಆಗುವುದಿಲ್ಲವೆ?”

ಹಿರಿಯ ಸಂನ್ಯಾಸಿಯೊಬ್ಬರು ತಮ್ಮೆಡೆಗೆ ಬರಲು ‘ಓಂ ನಮಃ ಶಿವಾಯ! ಜಯ್ ಮಾ!’ ಎಂದು ಅವರಿಗೆ ಅಭಿವಾದನ ಮಾಡಿದರು: ಕ್ರಮೇಣ ಮಾತು ದಕ್ಷಿಣೇಶ್ವರದ ವಿಚಾರಕ್ಕೆ ತಿರುಗಿತು. ನವದೀಕ್ಷಿತರಾದ ಸಂನ್ಯಾಸಿ ಬ್ರಹ್ಮಚಾರಿಗಳೆಲ್ಲರೂ ಆವೊತ್ತು ದಕ್ಷಿಣೇಶ್ವರಕ್ಕೆ ತಾಯಿ ಭವತಾರಿಣಿಯ ದರ್ಶನ ಮಾಡಲು ಹೋಗುವವರಾಗಿದ್ದರು. ಅಲ್ಲದೆ ದಿನವೆಲ್ಲವನ್ನೂ ಅಲ್ಲಿ ಧ್ಯಾನ ಭಜನಾದಿಗಳಲ್ಲಿ ಕಳೆಯುವ ಸಂಕಲ್ಪ ಮಾಡಿದ್ದರು. ಮಂದಿರದ ಪರಿಚಾರಕ ಗಣದವರು ಮೂವತ್ತು ಜನ ಸಾಧುಗಳಿಗೆ ಪ್ರಸಾದ ಹಂಚುವ ವ್ಯವಸ್ಥೆ ಮಾಡಿದ್ದರು. ಅದನ್ನೆಲ್ಲ ಕೇಳಿ ಮಹಾಪುರುಷಜಿಗೆ ತುಂಬ ಸಂತೋಷವಾಗಿ ಹೇಳಿದರು: “ದಕ್ಷಿಣೇಶ್ವರ ನಮ್ಮ ಭೂಸ್ವರ್ಗ, ನಮ್ಮ ಕೈಲಾಸ, ನಮ್ಮ ವೈಕುಂಠ. ಅದೇನು ಸಾಧಾರಣ ಸ್ಥಾನವೆ? ಪಂಚವಟಿ ಮಹಾ ಸಿದ್ದಿಪೀಠ. ಆ ಪಂಚವಟಿಯಲ್ಲಿ ಠಾಕೂರರಿಗೆ ಎಂತಹ ಭಾವ ಮಹಾಭಾವಗಳೆಲ್ಲ ಅನುಭವವಾಗಿವೆ! ಅಲ್ಲಿ ಹನ್ನೆರಡು ವರ್ಷ ದೀರ್ಘಕಾಲ ಶ್ರೀಗುರು ಎಷ್ಟು ವಿಭಿನ್ನ ಭಾವಗಳಲ್ಲಿ ಸಾಧನೆ ಮಾಡಿದ್ದಾರೆ! ಎಷ್ಟೊಂದು ದಿವ್ಯ ದರ್ಶನಗಳು, ಎಷ್ಟೊಂದು ದಿವ್ಯ ಅನುಭೂತಿಗಳು ಆ ಸ್ಥಳದಲ್ಲಿ ಅವರಿಗೆ ಆಗಿವೆ! ಅದಕ್ಕೆಲ್ಲಿಯಾದರೂ ಇಷ್ಟು ಕಠೋರ ಮತ್ತು ವಿಭಿನ್ನ ಭಾವ ಸಾಧನೆಗಳಾದುದಾಗಲಿ ಇಷ್ಟೊಂದು ಉಚ್ಚ ಆಧ್ಯಾತ್ಮಿಕ ಅನುಭೂತಿಗಳಾದುದನ್ನಾಗಲಿ ಧರ್ಮದ ಇತಿಹಾಸದಲ್ಲಿ ಎಲ್ಲಿಯೂ ನಾವು ಕಾಣುವುದಿಲ್ಲ. ಠಾಕೂರರೆ ಹೇಳುತ್ತಿದ್ದರು. ‘ಇಲ್ಲಿಯ (ಎಂದರೆ ತಮ್ಮಲ್ಲಿಯ) ಅನುಭೂತಿಗಳೆಲ್ಲ ವೇದವೇದಾಂತಗಳನ್ನು ದಾಟಿಹೋಗಿವೆ’ ಎಂದು. ಆದ್ದರಿಂದಲೆ ಸ್ವಾಮೀಜಿ ಶ್ರೀಗುರುವನ್ನು ಕುರಿತು  ‘ಅವತಾರ ವರಿಷ್ಠಾಯ’  ‘ಅವತಾರಗಳಲ್ಲೆಲ್ಲ ವರಿಷ್ಠನಾದವನಿಗೆ’ ಎಂದು ಹೇಳಿದ್ದಾರೆ. ಶ್ರೀ ಠಾಕೂರರು ಬೃಂದಾವನದ ಮೃತ್ತಿಕೆಯನ್ನು ತಂದು ಪಂಚವಟಿಯಲ್ಲಿ ಹರಡಿದ್ದಾರೆ. ದಕ್ಷಿಣೇಶ್ವರದ ಒಂದೊಂದು ಧೂಳೀ ಕಣವೂ ಪವಿತ್ರವಾದದ್ದು. ಸ್ವಯಂ ರ್ಶರೀ ಭಗವಂತನ ಪಾದಸ್ಪರ್ಶದಿಂದ ದಕ್ಷಿಣೇಶ್ವರ ಮಹಾ ತೀರ್ಥವಾಗಿ ಪರಿಣಮಿಸಿದೆ. ಅದ್ವೈತವಾದಿಯಾಗಲಿ, ದ್ವೈತವಾದಿಯಾಗಲಿ, ಶಾಕ್ತನಾಗಲಿ, ವೈಷ್ಣವನಾಗಲಿ, ಶೈವನಾಗಲಿ, ತಾಂತ್ರಿಕನಾಗಲಿ, ಎಲ್ಲರಿಗೂ ಮಹಾಪೀಠವಾಗಿದೆ ದಕ್ಷಿಣೇರ್ಶವರ. ಏಕೆಂದರೆ ಅಲ್ಲಿ ಶ್ರೀ ರಾಮಕೃಷ್ಣರು ಸರ್ವ ಭಾವಸಾಧನೆಗಳನ್ನು ಮಾಡಿ ಸಿದ್ಧಿ ಲಾಭಪಡೆದಿದ್ದಾರೆ. ಈ ಸಾರಿ ಭಗವಂತನ ಮಹಾ ಸಾತ್ವಿಕಭಾವದ ವಿಕಾಸವಾಗಿದೆ. ಯಾರು ಸ್ವಯಂ ಆಧ್ಯಾಶಕ್ತಿಯೋ ಯಾರು ಸಮಗ್ರ ವಿಶ್ವ ಬ್ರಹ್ಮಾಂಡಕ್ಕೆ ಆಧಾರಭೂತೆಯಾಗಿದ್ದಾಳೆಯೊ ಆ ಜಗಜ್ಜನನಿಯೆ ಸ್ವಯಂ ಶ್ರೀ ರಾಮಕೃಷ್ಣರ ದೇಹವನ್ನು ಆಶ್ರಯಿಸಿ ಲೀಲೆಯಲ್ಲಿ ತೊಡಗಿದ್ದಾಳೆ. ಶ್ರೀ ಗುರುವಿನ ತಪಸ್ಯೆಯಿಂದ  ‘ಭೂರ್ಭುವಸ್ಸುವಃ’ ಇತ್ಯಾದಿ ಲೋಕಲೋಕಾಂತರಗಳೂ ಉಪಕೃತವಾಗಿವೆ. ಉ: ! ಶಕ್ತಿಯ ಎಂಥ ಲೀಲೆ!” ಹೇಳುತ್ತಾ ಹೇಳುತ್ತಾ ಮಹಾಪುರುಷಜಿಯ ಮುಖಮಂಡಲ ಸಮಗ್ರವೂ ಪ್ರದೀಪ್ತವಾಗಿಹೋಯಿತು; ಅಧೋವದನರಾಗಿ ಗಂಭೀರಭಾವದಿಂದ ನೀರವವಾಗಿ ಕುಳಿತುಬಿಟ್ಟರು.

ಮಹಾಪುರುಷಜಿ ಉಪಾಹಾರಕ್ಕೆ ಕುಳಿತಿದ್ದಾಗ ಸ್ವಾಮಿ ಶುದ್ಧಾನಂದರು ಬಂದು, ಪ್ರಣಾಮ ಮಾಡಿದ ಅನಂತರ ‘‘ನಮ್ಮ ಶರೀರ ಇವತ್ತು ಹೇಗಿದೆ, ಮಹಾರಾಜ್?” ಎಂದು ಕೇಳಿದರು.

ಮಹಾಪುರುಷಜಿ ಅವರ ಕಡೆಗೆ ಸ್ವಲ್ಪಕಾಲ ಶೂನ್ಯದೃಷ್ಟಿ ಬೀರುತ್ತಿದ್ದು, ತರುವಾಯ ತಟಕ್ಕನೆ ಎಚ್ಚರಗೊಂಡವರಂತೆ ನಿಧಾನವಾಗಿ ಹೇಳಿದರು: “ಈ ಶರೀರದ ವಿಚಾರ ಕೇಳುತ್ತಿದ್ದೀಯಾ? ಶರೀರ ಬುಡ ಸಡಿಲವಾಗಿ ಅಲುಗಾಡುತ್ತಾ ಇದೆ. ಯಾವಾಗ ಏನಾಗುತ್ತದೆಯೊ ಏನೂ ಹೇಳುವಂತಿಲ್ಲ. ಇನ್ನು ನಿಮ್ಮ ಸರದಿ, ಠಾಕೂರರ ಕಾರ್ಯಕ್ರಮಗಳನ್ನೆಲ್ಲ ನೋಡಿಕೊಳ್ಳುವ ಭಾರ. ಈ ಸಾರಿ ಗುರು ಮಹಾರಾಜ್ ನನಗೆ ಬಿಡುಗಡೆ ಕೊಡುತ್ತಾರೆ ಎಂಬಂತೆ ತೋರುತ್ತಿದೆ. ಶರೀರ ಒಳಗೆಲ್ಲ ಟೊಳ್ಳಾದಂತಿದೆ; ಒಂದಿಷ್ಟೂ ಗಟ್ಟಿ ಇರುವಂತೆ ಕಾಣುವುದಿಲ್ಲ. ಆದರೆ ಶ್ರೀಗುರು ಮನಸ್ಸಿನ ಶಕ್ತಿಯನ್ನೇನೊ ದಿನದಿನಕ್ಕೂ ಹೆಚ್ಚು ಮಾಡುತ್ತಿದ್ದಾರೆ. ಈಗ ನಾನು ನಿರ್ವಾಣದ ಅಂಚಿನಲ್ಲಿ ನಿಂತಿದ್ದೇನೆ; ಮುಂದೆ ಸಮೀಪವೆ ಕಾಣಿಸುತ್ತಿದೆ ಆ ವಿರಾಟ್ ಅನಂತ ಧಾಮ. ತಮ್ಮ ಅಪಾರ ಕೃಪೆಯಿಂದ ಠಾಕೂರ್‌ ನನ್ನೆಲ್ಲ ಬಂಧನಗಳನ್ನು ಕಳಚಿಹಾಕಿದ್ದಾರೆ. ನಿರ್ವಾಣದ ರಸ್ತೆಯನ್ನು ಪರಿಷ್ಕಾರ ಮಾಡಿ ಕೊಟ್ಟಿದ್ದಾರೆ. ಸಾಕೆಸಾಕು! ಶ್ರೀಗುರು ನನಗೆಲ್ಲವನ್ನೂ ತೋರಿಸಿದ್ದಾರೆ; ಪರಿಪೂರ್ಣನನ್ನಾಗಿ ಮಾಡಿದ್ದಾರೆ; (ಕಣ್ಣುಮುಚ್ಚಿಕೊಂಡು) ಈಗ ನನಗೆ ಯಾವ ಅರಿಕೆಯೂ ಇಲ್ಲ,- ಶರೀರ ಇರಲಿ, ಹೋಗಲಿ.”

ಶುದ್ಧಾನಂದ : “ಇದೇನು ಹೀಗೆ ಮಾತಾಡುತ್ತೀರಿ, ಮಹಾರಾಜ್! ನಮಗೇನೊ ದೃಢವಿಶ್ವಾಸವಿದೆ, ಬಹುಜನರ ಕಲ್ಯಾಣಕ್ಕಾಗಿ, ಈ ಸಂಘದ ಕಲ್ಯಾಣಕ್ಕಾಗಿ ಇನ್ನೂ ಬಹುಕಾಲ ಶ್ರೀ ಗುರುಮಹಾರಾಜ್ ತಮ್ಮನ್ನು ಇಲ್ಲಿಯೆ ಇರಿಸುತ್ತಾರೆ. ತಮಗೀಗ ಒಂದು ಭೀಷಣ ಕ್ಲಾಂತಿಯುಂಟಾಗಿದೆ; ಆದ್ದರಿಂದಲೆ ತಮ್ಮ ಶರೀರ ಇಷ್ಟು ಜಜ್ಜರಿತವಾದದ್ದು. ಈ ಕ್ಲೇಶ ಹೇಗಾದರೂ ಪರಿಹಾರವಾಗಲಿ ಎಂದು ನಾವೆಲ್ಲ ಮನಃಪೂರ್ವಕ ಪ್ರಯತ್ನಿಸುತ್ತಿದ್ದೇವೆ. ತಮ್ಮ ಶರೀರ ಇರುವಲ್ಲಿಯವರೆಗೆ, ತಮ್ಮ ಸಾನ್ನಿಧ್ಯ ಮಾತ್ರದಿಂದಲೆ ಎಷ್ಟೋ ಜನರಿಗೆ ಮಂಗಳ ಉಂಟಾಗುತ್ತದೆ; ನಾವು ಕೂಡ ನಿಶ್ಚಿಂತರಾಗಿರುತ್ತೇವೆ.”

ಮಹಾಪುರುಷಜಿ: “ನೀವೆಲ್ಲರೂ ಎಷ್ಟರಮಟ್ಟಿಗೆ ನನ್ನನ್ನು ವಿಶ್ವಾಸದಿಂದ ಕಾಣುತ್ತಿದ್ದೀರಿ ಎಂಬುದೂ ನನಗೆ ಚೆನ್ನಾಗಿ ಗೊತ್ತಿದೆ. ನಾನೂ ಕೂಡ ನಿಮ್ಮಂತಹ ಸಾಧು ಭಕ್ತಸಂಗದಲ್ಲಿ ತುಂಬ ಆನಂದದಿಂದಲೆ ಇದ್ದೇನೆ. ಅಲ್ಲದೆ ನನಗೂ ಗೊತ್ತಿದೆ, ಠಾಕೂರರು ಈ ದೇಹದಿಂದ ಮಾಡಿಸಬೇಕಾದ ಕೆಲಸಗಳನ್ನೆಲ್ಲ ಮಾಡಿಸಿಕೊಂಡ ಮೇಲೆಯೆ ನನಗೆ ಬಿಡುಗಡೆ ದಯಪಾಲಿಸುತ್ತಾರೆ. ಒಮ್ಮೊಮ್ಮೆ ಭಾವಿಸುತ್ತೇನೆ, ಠಾಕೂರ್‌ ಈ ಶರೀರವನ್ನು ಏತಕ್ಕಾಗಿ ಉಳಿಸಿದ್ದಾರೊ ಎಂದು. ನಿಶ್ಚಯವಾಗಿಯೂ ಅವರಿಗೆ ಏನೊ ಒಂದು ಗೂಢ ಉದ್ದೇಶವಿದೆ. ಇಲ್ಲದೆ ಹೋದರೆ ಈ ಒಡಕಲು ಮುರುಕಲು ಒಡಲಿನಿಂದಲೆ ಇಷ್ಟೊಂದು ಕೆಲಸ ಮಾಡಿಸುತ್ತಾರೇನು? ನನಗೋ ವಿದ್ಯೆ ಇಲ್ಲ, ಬುದ್ಧಿ ಇಲ್ಲ, ಚೆನ್ನಾಗಿ ಮಾತಾಡಲೂ ಬರುವುದಿಲ್ಲ; ಆದರೂ ಈ ಮುರುಕಲು ಯಂತ್ರದಿಂದಲೆ ಎಷ್ಟೊಂದು ಕೆಲಸ ತೆಗೆದುಕೊಳ್ಳುತ್ತಿದ್ದಾರೆ!”

ಸ್ವಾಮಿ ಶುದ್ಧಾನಂದರು ಬೇರೆ ವಿಷಯ ಎತ್ತಬೇಕೆಂದು ಮನಸ್ಸುಮಾಡಿ “ಗಂಗಾಧರ ಮಹಾರಾಜರನ್ನು (ಸ್ವಾಮಿ ಅಖಂಡಾನಂದರು) ಕರೆತರಲೆಂದು ಮೂರು ಜನ ಹೋಗಿದ್ದಾರೆ” ಎಂದರು.

ಮಹಾಪುರುಷಜಿ : “ಹೌದ್ಹೌದು, ಗಂಗಾಧರ್‌ ಬಂದರೆ ತುಂಬ ಚೆನ್ನಾಗಿರಿಸುತ್ತದೆ. ಠಾಕೂರರ ಜನ, ಅವರನ್ನು ನೋಡುವುದೂ ಒಂದು ಮಹದಾನಂದ. ಅವರನ್ನು ಹಠಹಿಡಿದು ಹೊರಗೆ ಕರೆತರದಿದ್ದರೆ ಮನೆ ಬಿಟ್ಟೇ ಹೊರಡುವುದಿಲ್ಲ. ಖೋಕಾನೂ (ಸ್ವಾಮಿ ಸುಬೋಧಾನಂದರು) ಇವತ್ತೇ ಬರುತ್ತಾರೆ. ಆಹಾ, ಖೋಕಾ ಮಹಾರಾಜರ ಶರೀರ ತುಂಬ ಇಳಿದುಹೋಗಿದೆ. ನಿಮ್ಮ ಊಟಗೀಟ ಆಯಿತೆ?”

ಶುದ್ಧಾನಂದ : “ಇಲ್ಲ, ಇನ್ನೂ ಆಗಿಲ್ಲ. ಮುಂಜಾನೆಯಿಂದಲೂ ತಮ್ಮ ಹತ್ತಿರ ಬರಬೇಕು ಎಂದು ಪ್ರಯತ್ನಿಸುತ್ತಲೆ ಇದ್ದೆ. ಆದರೆ ಅವಕಾಶವೆ ಸಿಗಲಿಲ್ಲ; ತಮ್ಮೆಡೆಗೆ ಯಾವಾಗ ನೋಡಿದರೂ ಭಕ್ತರು ಕಿಕ್ಕಿರಿದೆ ಇರುತ್ತಿದ್ದರು.”

ಮಹಾಪುರುಷಜಿ: “ಆಹಾ ! ಹಾಗಾದರೆ ಹೋಗು, ಹೋಗು, ಊಟ ಮಾಡಿಬಿಡು. ಇಷ್ಟು ತಡಮಾಡಬಾರದು.”

ಅವರು ಹಾಗೆ ಹೇಳಲು ಶುದ್ಧಾನಂದರು ಹೊರಟುಹೋದರು. ಆಗ ಮಹಾಪುರುಷಜಿ ಕಣ್ಣುಮುಚ್ಚಿಕೊಂಡು “ಪ್ರಭೂ, ಸರ್ವರಿಗೂ ಕಲ್ಯಾಣವಾಗಲಿ, ಸರ್ವರಿಗೂ ಚೈತನ್ಯವಾಗಲಿ’ ‘ ಎಂದು ಪ್ರಾಥಿಸಿದರು.

ಆಹಾರಾನಂತರ ಅನುಚರರೊಬ್ಬರು ಅವರನ್ನು ಊಟದ ಮಣೆಯಿಂದ ಸಯತ್ನವಾಗಿ ಮೆಲ್ಲಗೆ ಮೇಲೆತ್ತಿ ನಿಲ್ಲಿಸಿದರು. ಈಗೀಗ ಅವರಿಗೆ ತಾವೆ ಸ್ವತಃ ಎದ್ದು ನಿಲ್ಲುವುದೂ ಕಷ್ಟವಾಗುತ್ತದೆ. ಅವರು ಮೆಲ್ಲಮೆಲ್ಲಗೆ ಕುರ್ಚಿಯ ಮೇಲೆ ಕುಳಿತರು. ಅವರ ಕೊಠಡಿಯ ಎದುರು ದಿಕ್ಕಿನಲ್ಲಿ ಸಂನ್ಯಾಸಿಯೊಬ್ಬರು ಒಂದು ಮಣ್ಣಿನ ಹೂಜಿಯಿಂದ ಕುಡಿ ನೀರು ಹೊಯ್ಯುತ್ತಿದ್ದುದನ್ನು ನೋಡಿ “ಏನಯ್ಯಾ ಹಾಗಾದರೆ ಈ ಸಾರಿ ನೀನು (ತಪಸ್ಯೆಗೆ) ಹೊರಡುತ್ತೀಯ?”

“ಹೌದು,” ಅವರು ಉತ್ತರಿಸಿದರು “ಮುಂದಿನ ಗುರುವಾರ ಹೊರಡಬೇಕೆಂದು ಮಾಡಿದ್ದೇನೆ.”

ನಿಡಿದಾಗಿ ಸುಯ್ದು ಮಹಾಪುರುಷಜಿ ಹೇಳಿದರು! “ಹೋಗ್ತೀಯ ತಾನೆ? ಸರಿ! ಎಲ್ಲರೂ ಹೋಗಲೇಬೇಕು. ಅಷ್ಟೆ ತಾನೆ ಸಂಸಾರ! ಎರಡು ದಿನ ಸೇರುತ್ತೇವೆ; ಆಮೇಲೆ ಯಾರೊ ಎಲ್ಲಿಯೊ? ಪರಮಾನಂದಮಯಿ ತಾಯಿಯೊಬ್ಬಳೆ ಸತ್ಯ, ಉಳಿದದ್ದೆಲ್ಲ ಎರಡು ದಿನದ್ದು. ಸೃಷ್ಟಿಯೋ ಪ್ರವಾಹದಂತೆ ಹರಿಯುತ್ತದೆ, ನಿತ್ಯವಾಗಿ ನಿರಂತರ. ಈ ಎಲ್ಲ ಸೃಷ್ಟಿಯ ಆಚೆ ನಿತ್ಯಾನಂದಮಯಿ ತಾಯಿ-ವಾಙ್ಮನಾತೀತೆ,  ‘ಯತೋ ವಾಚೋ ನಿವರ್ತಂತೇ ಅಪ್ರಾಪ್ಯ ಮನಸಾ ಸಹ ‘.”

ಮರೆವು ನೀನೆ ಮೇಣರಿವು ನೀನೆ ಮೇಣ್ ಗುರುವು ನೀನೆ, ದೇವಿ;
ರೋಗಶಕ್ತಿ ನೀನೌಷಧಿಯಶಕ್ತಿ, ಕೊಲುವೆ ಕಾವೆಯೋವಿ.
ಮಾವಿನಲ್ಲಿ ಸಿಹಿ, ಬೇವಿನಲ್ಲಿ ಕಹಿ; ನಿನ್ನ ಇಚ್ಛೆಯಂತೆ
ಗಾಳಿ ಸೇರಿ ನೀರಾಗಿ ತೋರಲೀ ಪ್ರಕೃತಿ ನಿಯಮವಂತೆ |  – ಋತಚಿನಮ್ಮಯೀ ಜಗನ್ಮಾತೆಗೆ ‘ಅಗ್ನಿಹಂಸ’ದಿಂದ

* * *