ಬೇಲೂರು ಮಠ
ಮಾರ್ಚಿ ೨೨, ೧೯೨೯

ಮಹಾಪುರುಷಜಿ ತಮ್ಮ ಕೊಠಡಿಯಲ್ಲಿ ಒಂದು ಕಿರು ಜಮಖಾನದ ಮೇಲೆ ಊಟಕ್ಕೆ ಕುಳಿತಿದ್ದರು. ಊಟ ತುದಿಮುಟ್ಟುವುದಲ್ಲಿದ್ದಾಗ ಒಬ್ಬ ಮೋಚಿ ಅಂಗಳದಲ್ಲಿದ್ದ ಮಾವಿನ ಮರದ ಕೆಳಗೆ ಸಾಧು ಬ್ರಹ್ಮಚಾರಿಗಳ ಮೆಟ್ಟುಗಳಣ್ನು ರಿಪೇರಿ ಮಾಡುತ್ತಿದ್ದುದು ಅವರ ಕಣ್ಣಿಗೆ ಬಿತ್ತು. ಊಟ ಮುಗಿಸಿ ಸೇವಕರೊಬ್ಬರಿಗೆ ಹೇಳಿದರು : “ಆಹಾ ! ನಾವೆಲ್ಲ ಹೊಟ್ಟೆತುಂಬ ಉಂಡಿದ್ದೇವೆ. ಆದರೆ, ಪಾಪ! ಆ ಬಡವ ಈ ಮಟಮಟ ಮಧ್ಯಾಹ್ನ ಹಸಿದುಕೊಂಡೆ ಕೆಲಸ ಮಾಡುತ್ತಿದ್ದಾನೆ. ಕೆಳಗೆ ಹೋಗಿ, ಅವನಿಗೆ ಚೆನ್ನಾಗಿ ಹೊಟ್ಟೆ ತುಂಬುವಂತೆ ಹಣ್ಣು ಮಿಠಾಯಿಯ ದೇವರ ಪ್ರಸಾದ ಕೊಟ್ಟು ಬಾ.” ಅವರು ಹೇಳಿದಂತೆ ಮಾಡಿಬಂದು ಅನುಚರ ನೋಡುತ್ತಾರೆ, ಮಹಾಪುರುಷಜಿ ಕಿಟಕಿ ಬಳಿ ನಿಂತು ಆ ಮೋಚಿಯ ಕಡೆ ಒಂದೇ ಸಮನೆ ನೋಡುತ್ತಿದ್ದಾರೆ; ಅವರ ಕೈಯಲ್ಲಿ ಎಂಟಾಣೆ. ಆ ಮೋಚಿ ಪ್ರಸಾದ ಸಿಕ್ಕಿದೊಡನೆ ಅದನ್ನು ತಿನ್ನತೊಡಗಿದ್ದನ್ನು ನೋಡಿ “ನೋಡಿದೆಯಾ ಅವನಿಗೆ ಎಷ್ಟು ಹಸಿವೆಯಾಗಿತ್ತು. ಅದಕ್ಕೇ ಪ್ರಸಾದ ಸಿಕ್ಕಿದೊಡನೆ ತಿನ್ನತೊಡಗಿದ್ದಾನೆ. ಈಗೊಂದು ತಮಾಷೆ ಮಾಡುತ್ತೇನೆ. ನೋಡು”, ಎಂದು ಕೈಯಲ್ಲಿ ಹಿಡಿದಿದ್ದ ಎಂಟಾಣೆಯನ್ನು ಮೋಚಿಯ ಬಳಿಗೆ ಎಸೆದರು. ಮೇಲಿಂದ ಹಠಾತ್ ದುಡ್ಡು ಬಿದ್ದುದನ್ನು ಗಮನಿಸಿ, ಮೋಚಿ ಮುಖವೆತ್ತಿ ನೋಡಲು ಸ್ವಾಮಿಗಳು ನಿಂತು ತನ್ನ ಕಡೆಗೆ ನೋಡುತ್ತಿದ್ದುದನ್ನು ಕಂಡನು. ನಡೆದದ್ದೆಲ್ಲ ಅವನ ಮನಸ್ಸಿಗೆ ಹೊಳೆಯಲು ತನ್ನೆರಡು ಕೈಗಳನ್ನು ಜೋಡಿಸಿ ನಮಸ್ಕಾರ ಮಾಡಿ, ತನ್ನ ಹೃದಯದ ಆನಂದ ಮತ್ತು ಕೃತಜ್ಞತೆಗಳನ್ನು ಮಾತಿನಿಂದ ಪ್ರಕಾಶಪಡಿಸತೊಡಗಿನು. ಇದು ನಡೆದು ತುಸು ಹೊತ್ತಾದ ಮೇಲೆ ಸಂನ್ಯಾಸಿಯೊಬ್ಬರು ಮೋಚಿಯೊಡನೆ ಕೂಲಿಯ ವಿಚಾರವಾಗಿ ಚೌಕಾಶಿ ಮಾಡುತ್ತಿದ್ದುದನ್ನು ಕೇಳಿ, ಒಂದಿನಿತು ನೊಂದುಕೊಂಡು ಹೇಳಿದರು : “ಪಾಪ ! ಆ ಬಡವನ ಹತ್ತಿರ ಏಕೆ ಅಷ್ಟೊಂದು ಚೌಕಾಸಿ?”

* * *

ರಾತ್ರಿಹೊತ್ತು ಮಹಾಪುರುಷಜಿ ಬಹಳ ಸ್ವಲ್ಪವೆ ಆಹಾರ ಸೇವಿಸುತ್ತಿದ್ದರು. ಕೆಲವು ಸಾರಿ ಒಂದು ಬಟ್ಟಲು ಹಾಲಿನಲ್ಲಿಯೆ ಅದು ಕೊನೆಗಾಣುತ್ತಿತ್ತು; ಹೆಚ್ಚು ಎಂದರೆ ದ್ರಾಕ್ಷಿಯನ್ನೊ ಫ್ರೂನ್ ಅನ್ನೊ (prunes) ಹಾಲಿನಲ್ಲಿ ಹಾಕಿ ತೆಗೆದುಕೊಳ್ಳುತ್ತಿದ್ದರು. ಇವತ್ತು ರಾತ್ರಿಯೂ ಅವರು ಸ್ವಲ್ಪ ಹಾಲು ತೆಗೆದುಕೊಳ್ಳುತ್ತಿದ್ದಾಗ ಸ್ವಾಮಿ-ರು ಬಂದು ಪ್ರಣಾಮ ಮಾಡಿ ಎದ್ದು ಅವರೆದುರು ನಿಂತುಕೊಂಡರು. ಆ ಮಾತು ಈ ಮಾತು ಆಡಿ, ಕೊನೆಗೆ ಶ್ರೀರಾಮಕೃಷ್ಣ ಮಠ ಮತ್ತು ಮಿಶನ್ನಿನ ಪ್ರಸ್ತಾಪ ಬಂತು. ಆಗ ಮಹಾಪುರುಷಜಿ ಹೇಳಿದರು: “ಇಲ್ಲಿ ಈಗ ನೀವೆಲ್ಲಾ ಸೇರಿರುವುದು ನನಗೆ ತುಂಬ ಸಂತೋಷ. ಶ್ರೀಗುರು ಒಮ್ಮೊಮ್ಮೆ ಸಂಘದ ಶಕ್ತಿಯನ್ನು ಉದ್ಭುದ್ಧಗೊಳಿಸಲೆಂದು ಅದನ್ನು ಚೆನ್ನಾಗಿ ಅಳ್ಳಾಡಿಸಿ ನೋಡುತ್ತಾರೆ. ಸಂಘದ ಶಕ್ತಿ ಯಾವೊಬ್ಬ ವ್ಯಕ್ತಿಯ ಮೇಲೂ ನಿಂತಿಲ್ಲ ಎಂಬುದನ್ನೂ ತೋರಿಸಿಕೊಡುತ್ತಾರೆ. ಈ ಸಮಸ್ತ ಸಾಧುಮಂಡಲಿ ಏಕತ್ರಿತವಾಗಿ ಕೆಲಸ ಮಾಡಿದರೇ ಸರ್ವವೂ ಸುನಿಯಂತ್ರಿತವಾಗುತ್ತದೆ. ಈ ಹೋರಾಟ ಹೊಯ್ದಾಟ ಈ ಆಪತ್ತು ವಿಪತ್ತುಗಳಿಂದ ಶ್ರೀಠಾಕೂರರ ಸಂಘದ ಶಕ್ತಿ ಜಾಗೃತವಾಗೇಳುತ್ತದೆ: ‘ಶ್ರೇಯಾಂಸಿ ಬಹುವಿಘ್ನಾನಿ.’ ಎಲ್ಲಿ ಬಾಧಾವಿಪತ್ತಿಗಳಿರುತ್ತವೆಯೊ ಅಲ್ಲಿ ಠಾಕೂರರ ಮೇಲಣ ಭಕ್ತಿ ವಿಶ್ವಾಸಗಳು ಅಧಿಕವಾಗುತ್ತವೆ; ಮತ್ತು ನಿರ್ಭರತೆಯೂ ಹೆಚ್ಚುತ್ತದೆ. ಅವರ ಯುಗಧರ್ಮದ ಪ್ರವರ್ತನಕ್ಕಗಿಯೆ ಈ ಸಂಘದ ಸೃಷ್ಟಿಯಾಗಿದೆ; ಅವರು ಈ ಸಂಘದ ಪ್ರತಿ ಅಂಗದಲ್ಲಿಯೂ ಇದ್ದುಕೊಂಡು ತಮ್ಮ ಕೆಲಸ ಮಾಡಿಸುತ್ತಿದ್ದಾರೆ. ಈ ಯುಗಪ್ರವರ್ತನದ ಕಾರ್ಯ ಅನೇಕ ಶತಾಬ್ಧಿಕಾಲ ಅಬಾಧಿತವಾಗಿ ಮುಂದುವರಿಯುತ್ತದೆ. ಯಾರೂ ಅದರ ಗತಿರೋಧ ಮಾಡಲು ಸಮರ್ಥರಾಗುವುದಿಲ್ಲ. ಅದು ತ್ರಿಕಾಲಜ್ಞ ಋಷಿ ಸ್ವಯಂ ಸ್ವಾಮೀಜಿಯ ಉಕ್ತಿ.”

ಸಂನ್ಯಾಸಿ: “ಅಂದು ಸ್ವಾಮೀಜಿ ಹೇಳಿದ್ದೂ, ಇಂದು ನೀವು ಹೇಳುತ್ತಿರುವುದೂ ಎಂದೂ ಸುಳ್ಳಾಗದು. ಆದರೂ, ಮಹಾರಾಜ್, ಒಂದೊಂದು ಸಮಯದಲ್ಲಿ ಪರಿಸ್ಥಿತಿಯ ದುರವಸ್ಥೆಯನ್ನೂ ಸಂಧಿಸಿದಾಗ ಆ ವಿಶ್ವಾಸ ಕದಲದ ರೀತಿಯಲ್ಲಿ ಅದನ್ನು ರಕ್ಷಿಸಿಕೊಂಡು ಬರುವುದೆ ಕಷ್ಟವಾಗುತ್ತದೆ. ಪರಿಣಾಮವಾಗಿ ಒಮ್ಮೊಮ್ಮೆ ಯಾವ ಕೆಲಸ ಮಾಡುವುದಕ್ಕೂ ಉತ್ಸಾಹವೆ ಇಂಗಿಹೋದಂತಾಗುತ್ತದೆ. ಏನೊ ಒಂದು ವಿವರಿಸಲಾಗದ ಭೀತಿ, ಏನೊ ಒಂದು ಮುಕ ಅಪನಂಬಿಕೆ ಮನವನ್ನೆಲ್ಲ ಆಕ್ರಮಿಸುವಂತೆ ಭಾಸವಾಗುತ್ತದೆ.”

ಮಹಾಪುರುಷಜಿ: “ಅದೆಲ್ಲ ಹಾಗೆ ಆಗತಕ್ಕದ್ದೆ. ಅನೇಕ ಸಾರಿ ಭಯಗ್ರಸ್ತರಾಗುತ್ತೇವೆ; ನಿರಾಶೆ ಜುಗುಪ್ಸೆ ಇವುಗಳಿಗೂ ಈಡಾಗುತ್ತೇವೆ; ಮತ್ತು ಸರಿಯಾದ ಕಾಲ ಬಂದಾಗ ಅವೆಲ್ಲ ಕವಿದ ಮೋಡ ಚೆದರುವಂತೆ ಮಾಯವಾಗುತ್ತವೆ. ಕರ್ಮದ ರೀತಿಯೆ ಹಾಗೆ. ಜಗತ್ತಿನಲ್ಲಿ ಬಾಧೆಯಿಲ್ಲದ ಕಾರ್ಯ ಯಾವುದಾದರೂ ಇದೆಯೇನು? ಕೆಲಸ ದೊಡ್ಡದಾದಷ್ಟೂ ವಿಘ್ನವೂ ದೊಡ್ಡದಾಗುತ್ತದೆ. ಅಲ್ಲದೆ ಅಂತಹ ಸಂಘರ್ಷಣೆಯ ಮೂಲಕವಾಗಿಯೆ ಆತ್ಮಶಕ್ತಿ ಉದ್ದೀಪನವಾಗುತ್ತದೆ. ಆ ಶಕ್ತಿ ಬೇರೆ ಯಾರು ಅಲ್ಲ; ಸ್ವಯಂ ‘ತಾಯಿ ‘ಯೆ! ಕೆಲಸ ಕಾರ್ಯಗಳೆಲ್ಲ ಅಮ್ಮನದೆ; ನಾವೂ ಅಮ್ಮನ ಮಕ್ಕಳೆ! ಸತ್ಯಪಥದಿಂದ ಹೊರಳದೆ ಈ ಜ್ಞಾನವನ್ನು ಚೆನ್ನಾಗಿ ಇಟ್ಟುಕೊಂಡು, ಕೆಲಸ ಮಾಡುತ್ತಾ ಹೋದರಾಯಿತು. ಇದು ಶ್ರೀಗುರು ಬೋಧಿಸಿರುವ ಯುಗಧರ್ಮದ ಸಂಸ್ಥಾಪನೆಯ ಕಾರ್ಯ. ಅದಕ್ಕಾಗಿಯೆ ತನ್ನ ಜೊತೆಯಲ್ಲಿ ನಮ್ಮನ್ನೂ ಎಳೆದು ತಂದಿದ್ದಾನೆ. ಹಾಗಿಲ್ಲದಿದ್ದರೆ, ನಮಗೇನು ನಮಷ್ಟಕ್ಕೆ ನಾವು ಭಜನೆ ಸಾಧನೆಗಳಲ್ಲಿ ಮಗ್ನರಾಗಿರಲು ಅಸಾಧ್ಯವಾಗಿತ್ತೆ? ನಾವು ಮಾಡುತ್ತಿದ್ದುದೂ ಅದನ್ನ. ಆದರೆ ಶ್ರೀಠಾಕೂರರಿಂದ ಅಜ್ಞಪ್ರರಾದ ಸ್ವಾಮೀಜಿಯೆ ಈ ಎಲ್ಲ ಕೆಲಸಗಳಲ್ಲಿ ಪ್ರವರ್ತರಾದರು. ಅಲ್ಲದೆ ನಮ್ಮೆಲ್ಲರನ್ನೂ ಅದಕ್ಕೆ ಎಳೆದು ತಂದರು. ಕಾಣಲಿಲ್ಲವೆ, ಸ್ವಾಮೀಜಿ ತಮ್ಮ ಜೀವನದ ಕಡೆಯ ಮುಹೂರ್ತದವರೆಗೂ ಎಂತಹ ಅಕ್ಲಾಂತಭಾವದಿಂದ ದುಡಿದರು ಎಂದು? ದುಡಿದು ದುಡಿದೂ, ದುಡಿದೇ ಅವರ ದೇಹ ನಾಶವಾಯಿತು. ಅವರಿಗಾದರೂ ತಮ್ಮ ಕಾರ್ಯವು ಜಂಝಾಟವಿಲ್ಲದೆ ಆಯಿತೇನು? ಅವರು ಪಾಶ್ಚಾತ್ಯ ದೇಶಗಳಿಗೆ ಹೋದ ಘಟನೆಯನ್ನೆ ತೆಗೆದುಕೊ, ನಿದರ್ಶನಕ್ಕಾಗಿ. ಎಂತೆಂತಹ ಬಾಧೆ ವಿಘ್ನಗಳ ಮಧ್ಯೆ ಅವರು ಭಗವಂತನ ಕಾರ್ಯಸಾಧನೆಯಲ್ಲಿ ತೊಡಗಬೇಕಾಯಿತು! ನನಗೂ ಕೂಡ ಆಗಾಗ್ಗೆ ಮನಸ್ಸಾಗುತ್ತಿದೆ, ಠಾಕೂರರ ಸಗುಣಭಾವದಲ್ಲಿಯೆ ನಿಲ್ಲದೆ, ಒಮ್ಮೆಗೆ ನಿರ್ಗುಣಾವಸ್ಥೆಗೆ ನುಗ್ಗಿಬಿಡಬೇಕು – ಸಮಾಧಿಸ್ಥನಗಿದ್ದು ಬಿಡಬೇಕು ಎಂದು. ಆದರೆ ಹಾಗೆ ಮಾಡಲು ಠಾಕೂರರು ಎಲ್ಲಿ ಬಿಡುತ್ತಾರೆ? ನನಗೂ ಗೊತ್ತು, ಅವರೆ ಎಲ್ಲ ಎಂದು; ಸಗುಣವೂ ಅವರೆ ಮತ್ತೆ ನಿರ್ಗುಣವೂ ಅವರೇ. ‘ಪದೋsಸ್ಯ ವಿಶ್ವಭೂತಾನಿ ತ್ರಿಪಾದಸ್ಯಾಮೃತಂ ದಿವಿ’ ‘ಅವರ ಒಂದು ಪಾದಾಂಶ ಮಾತ್ರ ಈ ಸೃಷ್ಟಿ; ಉಳಿದ ಮೂರು ಅಮೃತ ಪಾದಾಂಶಗಳೂ ಊರ್ಧ್ವ ಜ್ಯೋತಿರ್ಲೋಕಗಳಲ್ಲಿ.’ ಅವರ ಇಚ್ಛೆ ಇಲ್ಲದೆ ನಾವು ಏನನ್ನೂ ಮಾಡಲಗುವುದಿಲ್ಲ. ಅವರು ಎಲ್ಲಿ ಯಾವ ಅವಸ್ಥೆಯಲ್ಲಿ ನಮ್ಮನ್ನಿಡುತ್ತಾರೊ ಅಲ್ಲಿ ಆ ಸ್ಥಿತಿಯಲ್ಲಿ ನಾವಿರಬೇಕಾಗುತ್ತದೆ. ಅಂತೂ ಅವರೇನೊ ಕೃಪೆದೋರಿ ನನಗೆ ಎಲ್ಲವನ್ನೂ ತೆರೆದು ಕಾಣಿಸುತ್ತಿದ್ದಾರೆ. ಈ ಅಮೃತಧಾಮದ ರಸ್ತೆಗೆ ಗೇಟುತೆಗೆದು ಹಾರು ಹೊಡೆದಿದ್ದಾರೆ. ‘ಯತೋ ವಾಚೋ ನಿವರ್ತಂತೇ ಅಪ್ರಾಪ್ಯ ಮನಸಾ ಸಹ’- ಮನಸ್ಸಾಗಲಿ ಮಾತಾಗಲಿ ಯಾವುದನ್ನು ಮುಟ್ಟಲರಿಯದೆ ಸೋತು ಹಿಂತಿರುಗುವುವೊ ಆ ಅಮೃತಧಾಮಕ್ಕೆ.”

ಹುಲ್ಲು ಬೆಳವೆಲ್ಲಿ, ನೆಲ್ಲು ಮೊಳೆವಲ್ಲಿ, ಕಾಯಿ ಪಣ್ಣುವಲ್ಲಿ,
ಗೂಡು ಕಟ್ಟಿ ತಾಯ್ ಮೊಟ್ಟೆಯಿಟ್ಟು, ಮರಿಮಾಡಿ ಸಲಹುವಲ್ಲಿ,
ಮಮತೆಯಂತೆ ಮೇಣ್ ಕಾಮದಂತೆ ಮೇಣ್ ಪ್ರೇಮಭಾವದಲ್ಲಿ
ನಿನ್ನ ಚಿಚ್ಛಕ್ತಿ ತನ್ನ ನಿತ್ಯಸದ್ ರಸವ ಸವಿವುದಿಲ್ಲ |
ಏಳು ಲೋಕಗಳನಿಳಿದು ದುಮುಕಿ ಜಡವಾಗಿ ಕಡೆಗೆ ನಿಂದೆ;
ಜಡದ ನಡುವೆ ಜೀವವನು ಕಡೆದೆ ಚಿತ್ತಪಃಶ್ಯಕ್ತಿಯಿಂದೆ.
ಜೀವದಿಂದ ಮನಸಾಗುತರಳಿ ಪರಿಣಾಮ ಪಡೆದು ಬಂದೆ;
ಮನವ ಮೀರ್ದ ವಿಜ್ಞಾನವನು ತೋರೆ ತೇರನೇರು ಇಂದೆ |  – ಋತಚಿನ್ಮಯೀ ಜಗನ್ಮಾತೆಗೆ ‘ಅಗ್ನಿಹಂಸ’ದಿಂದ

* * *