ಬೇಲೂರು ಮಠ
ಮಾರ್ಚಿ ೨೩, ೧೯೨೯

ಕಳೆದ ಕೆಲದಿನಗಳಿಂದ ಮಹಾಪುರುಷ ಮಹಾರಾಜರಿಗೆ ತುಂಬ ನೆಗಡಿಯಾಗಿ ಬಹಳ ತೊಂದರೆಯಾಗಿತ್ತು. ಇವತ್ತು ಸ್ವಲ್ಪ ವಾಸಿ ಎಂಬಂತಿದೆ. ಶಾರೀರಿಕ ಅಸ್ವಸ್ಥತೆಯ ಕಡೆ ಅವರು ಒಂದಿನಿತೂ ಕಣ್ಣು ಕೂಡ ಹಾಯಿಸುವುದಿಲ್ಲ,- ಎಂಥ ಅಸುಖದ ಸಮಯವಾಗಲಿ ಅವರು ಸದಾನಂದರಾಗಿರುತ್ತಾರೆ. ದೇಹದ ಕಷ್ಟವಾಗಲಿ ಅಥವಾ ಯಾವ ವಿಪತ್ತು ಬಂದೊದಗಲಿ ಅವು ಅವರ ಕೂಟಸ್ಥ ಮನಸ್ಸಿನ ಮೇಲೆ ಸ್ವಲ್ಪ ಮಾತ್ರವೂ ತಮ್ಮ ಪ್ರಭಾವ ಬೀರಲಾರವು. ಹೊತ್ತಾರೆ ಸುಮಾರು ಎಂಟು ಗಂಟೆ ಸಮಯದಲ್ಲಿ ಶ್ರೀರಾಮಕೃಷ್ಣ ಮಿಷನ್ನಿನ ಒಂದು ಶಾಖಾ ಕೇಂದ್ರದಿಂದ ಆಗಮಿಸಿದ ಒಬ್ಬ ಹಿರಿಯ ಸಂನ್ಯಾಸಿ ಉಪ್ಪರಿಗೆಯ ಮೇಲಕ್ಕೆ ಬಂದು ಮಹಾರಾಜರಿಗೆ ಸಾಷ್ಟಾಂಗ ಪ್ರಣಾಮ ಮಾಡಿ ಕುಶಲಪ್ರಶ್ನೆ ಕೇಳಿದರು: ‘ಮಹಾರಾಜ್, ತಮ್ಮ ಶರೀರಸ್ಥಿತಿ ಹೇಗಿದೆ?’

ಮಹಾಪುರುಷಜಿ: “ಈ ಅನಿತ್ಯ ಶರೀರದ ವಿಷಯ ಕೇಳುತ್ತಿರುವೆಯಲ್ಲವೆ? ಈ ವೃದ್ಧ ವಯಸ್ಸಿನಲ್ಲಿ ಶರೀರ ಸರಿಯಾಗಿರಲು ಹೇಗೆತಾನೆ ಸಾಧ್ಯ?”

ಸಂನ್ಯಾಸಿ: “ಹೌದು, ಮಹಾರಾಜ್. ಕಂಡರೇ ಗೊತ್ತಾಗುತ್ತದೆ. ತಮ್ಮ ಶರೀರ ಹೋಗಿಬಿಟ್ಟಿದೆ! ನೋಡಿದರೆ ಸಂಕಟವಾಗುತ್ತೆ.”

ಮಹಾಪುರುಷಜಿ: “ಈ ಶರೀರ ಇನ್ನು ಹೆಚ್ಚುದಿನ ಇರುವುದಿಲ್ಲ. ಶರತ್‌ಮಹಾರಾಜ್ (ಸ್ವಾಮಿ ಶಾರದಾನಂದರು) ಹೋದ ಮೇಲೆ ನನ್ನ ಬಲಪಾರ್ಶ್ವವೆ ಬಿದ್ದು ಹೋದಂತಾಗಿದೆ; ಮನಸ್ಸು ಒಮ್ಮಿಂದೊಮ್ಮೆಗೆ ಬಕ್ಕಬಯಲಾದಂತಾಗಿದೆ. ನಾನು ಹೊರಡಲು ಸಿದ್ಧನಾಗಿಯೆ ಇದ್ದೆ. ಶರಣ್ ಮಹಾರಾಜರ ಶರೀರ ಹೋದುದರ ಜೊತೆಜೊತೆಗೆ ನನ್ನ ಶರೀರವೂ ಬಹಳ ಅಸ್ವಸ್ಥವಾಗಿಬಿಟ್ಟಿತು. ಎಲ್ಲ ಕೆಲಸಕಾರ್ಯಗಳಿಂದಲೂ ಮನಸ್ಸು ತಟಕ್ಕನೆ ತಿರೋಹಿತವಾಯಿತು. ಠಾಕೂರರಿಗೆ ಹೇಳಿಕೊಂಡೆ, ನಾನಿನ್ನು ಇಲ್ಲಿ ಇರುವುದಿಲ್ಲ ಎಂದು. ಆದರೆ ನನ್ನ ಪ್ರಾರ್ಥನೆಯನ್ನು ಅವರು ಕಿವಿಗೆ ಹಾಕಿಕೊಳ್ಳದೆ ಇಲ್ಲ. ಜೋರುಮಾಡಿ ಹಿಂದಕ್ಕೆ ಅಟ್ಟಿಬಿಟ್ಟರು. ಆದ್ದರಿಂದಲೆ ಇಲ್ಲಿದ್ದೇನೆ. ನನ್ನನ್ನೇಕೆ ಅವರು ಹೋಗುವುದಕ್ಕೆ ಬಿಡಲಿಲ್ಲವೊ ಅದು ಅವರಿಗೇ ಗೊತ್ತು. ಸರ್ವವೂ ಅವರ ಇಚ್ಛೆ. ಅವರು ಎಷ್ಟು ಕಾಲ ಇರಿಸುತ್ತಾರೆ ಅಷ್ಟು ಕಾಲ ಇರಲೇಬೇಕಾಗಿದೆ.”

ಸಂನ್ಯಾಸಿ : “ಅದೊಂದೇ ಧೈರ್ಯ ನಮಗೆ, ಮಹಾರಾಜ್. ಏನು ನಡೆಯುತ್ತದೆಯೊ ಅದೆಲ್ಲವೂ ಶ್ರೀ ಠಾಕೂರರ ಇಚ್ಛೆಯಂತೆ ನಡೆಯುತ್ತದೆ. ಠಾಕೂರರಿಗೆ ನಮ್ಮ ಹೃತ್ಪೂರ್ವಕ ಪ್ರಾರ್ಥನೆ ಸಲ್ಲಿಸುತ್ತೇವೆ, ನಮಗಾಗಿ ಇನ್ನೂ ದೀರ್ಘಕಾಲ ತಮ್ಮನ್ನು ಇಲ್ಲಿಡಬೇಕು ಎಂದು. ತಾವು ಹೋದರೆ ಸಂಘದ ಆಧ್ಯಾತ್ಮಿಕ ವಿಕಾಸವೆ ಕುಂಠಿತವಾಗುತ್ತದೆ. ತಾವೇನೂ ಕಯ್‌ಗಿಯ್‌ಹಾಕಿ ಕೆಲಸಮಾಡುವುದು ಬೇಡ. ತಮ್ಮ ಸಾನ್ನಿಧ್ಯವೊಂದೇ ಸಾಕು ನಮಗೆ. ತಮ್ಮ ಇಚ್ಛಾಶಕ್ತಿ ಮಾತ್ರದಿಂದಲೆ ಎಲ್ಲ ಕೆಲಸಗಳೂ ಸಾಂಗವಾಗಿ ಸಾಗುತ್ತವೆ, ಈಗಾಗುತ್ತಿರುವಂತೆಯೆ. ತಾವು ನಮಗೆ ಶಕ್ತಿ ಕೊಡುತ್ತೀರಿ, ಸ್ಫೂರ್ತಿ ಕೊಡುತ್ತೀರಿ, ಆಶೀರ್ವಾದ ಕೊಡುತ್ತೀರಿ. ಕೆಲಸದ ಭಾರವನ್ನೆಲ್ಲ ನಾವು ಹೊರುತ್ತೇವೆ. ನಾವು ಎಲ್ಲಿಯೆ ಇರಲಿ, ತಾವು ನಮ್ಮ ಹಿಂದೆ ಇದ್ದೀರಿ ಎಂಬ ಭಾವನೆಯು ನಮ್ಮ ಪ್ರಾಣಕ್ಕೆ ಎಂತಹ ಬಲ ನೀಡುತ್ತದೆ ಎಂಬುದನ್ನು ನಾನು ಹೇಗೆತಾನೆ ತಿಳಿಸಲಿ?”

ಮಹಾಪುರುಷಜಿ: “ನಿಮಗೆಲ್ಲ ನನ್ನನ್ನು ಕಂಡರೆ ಎಷ್ಟು ವಿಶ್ವಾಸ, ಎಷ್ಟು ಶ್ರದ್ಧೆ, ಎಷ್ಟು ಭಕ್ತಿ ಎಂಬುದನ್ನು ನಾನು ಹೃದಯ ತುಂಬಿ ಅನುಭವಕ್ಕೆ ತಂದು ಕೊಂಡಿದ್ದೇನೆ. ಪ್ರಭುವಿನ ಈ ಸಂಘದ ಜೀವನೀ ಶಕ್ತಿ ಎಂದರೆ ಪರಸ್ಪರ ಪ್ರೀತಿ, ವಿಶ್ವಾಸ, ಶ್ರದ್ಧೆ ಇವುಗಳೆ. ಪರಸ್ಪರ ಪ್ರೀತಿ ಮತ್ತು ಈ ನಿಸ್ವಾರ್ಥ ಪ್ರೇಮ ಸಂಬಂಧ ಇವು ಎಷ್ಟು ದಿನ ಇರುತ್ತವೆಯೊ ಅಷ್ಟೂದಿನ ಸಂಘದ ಐಕ್ಯಭಾವ ಮತ್ತು ಆಧ್ಯಾತ್ಮಿಕ ಶಕ್ತಿ ಅಕ್ಷುಣ್ಣವಾಗಿರುತ್ತವೆ. ಕಾರಣ, ಈ ಪ್ರೇಮದ ಸಂಬಂಧಕ್ಕೂ ಠಾಕೂರರೆ ಕೇಂದ್ರ. ಆ ಕೇಂದ್ರದಿಂದಲೆ ಹೊಮ್ಮಿ ಅದು ವಿಸ್ತರಿಸುತ್ತಿದೆ. ದೇಹದ ನಾಶದಿಂದ ಅದು ನಷ್ಟಹೊಂದುವುದಿಲ್ಲ. ಅಲ್ಲದೆ ಈ ಸಂಘದ ಆಚಾರ್ಯ ಗಣದ ಯಾವ ಶಕ್ತಿ ಈ ಸಂಘದ ಒಳಗೆ ಕೆಲಸಮಾಡುತ್ತಿರುವುದೊ ಅದು ಎಂದಿಗೂ ನಿಃಶೇಷವಾಗಿ ಹೋಗುವುದಿಲ್ಲ, ಉದಾಹರಣೆಗಾಗಿ ನೋಡು, ಸ್ವಾಮೀಜಿ, ಮಹಾರಾಜ್ (ಸ್ವಾಮಿ ಬ್ರಹ್ಮಾನಂದರು), ಬಾಬುರಾಂ (ಸ್ವಾಮಿ ಪ್ರೇಮಾನಂದರು), ಹರಿ ಮಹಾರಾಜ್ (ಸ್ವಾಮಿ ತುರೀಯಾನಂದರು) ಮತ್ತು ಶರತ್ ಮಹಾರಾಜ್ (ಸ್ವಾಮಿ ಶಾರದಾನಂದರು) ಎಲ್ಲರೂ ಒಬ್ಬೊಬ್ಬರಾಗಿ ದೇಹತ್ಯಾಗ ಮಾಡಿದರು. ಆದರೆ ಅವರ ಮೇಲಣ ನಮ್ಮ ವಿಶ್ವಾಸ ಶ್ರದ್ಧಾಭಕ್ತಿಗಳು ಕಡಿಮೆಯಾದುವೇನು? ಅಥವಾ ಅವರ ಆಧ್ಯಾತ್ಮಿಕ ಶಕ್ತಿಗೇನಾದರೂ ನಷ್ಟ ಒದಗಿತೇನು? ಎಂದಿಗಾದರೂ ಒದಗ ಬಲ್ಲುದೇನು? ಎಂದಿಗೂ ಇಲ್ಲ. ಅವರೆಲ್ಲ ಈಗಲೂ ಈ ಕ್ಷಣದಲ್ಲಿಯೂ ಇದ್ದಾರೆ; ಅವರ ಆಧ್ಯಾತ್ಮಿಕ ಶಕ್ತಿಯೂ ವಿಭಿನ್ನ ಆಧಾರಗಳ (ಪಾತ್ರಗಳ) ಮೂಲಕವಾಗಿ ಕೆಲಸ ಮಾಡುತ್ತಲೆ ಇದೆ. ಅವರ ಜೀವನ ಈಗಲೂ ನಮಗೆಲ್ಲ ಆಧ್ಯಾತ್ಮಿಕ ಸ್ಫೂರ್ತಿಯಾಗಿ ನಮ್ಮನ್ನು ಋಜುಪಥದಲ್ಲಿ ನಡೆಸುತ್ತಿದೆ. ಈಗ ಅವರು ತಮ್ಮ ಚಿನ್ಮಯ ದೇಹಗಳಲ್ಲಿ ಇದ್ದಾರೆ; ಮತ್ತು ಆ ಅತೀಂದ್ರಿಯ ಸೂಕ್ಷ್ಮಭಾವದಿಂದ ಮೊದಲಿಗಿಂತಲೂ ಅತಿಶಯವಾಗಿ ಕೆಲಸ ಮಾಡುತ್ತಿದ್ದಾರೆ. ಈಗಲೂ ನಾವು ಅವರನ್ನು ಕಾಣಬಹುದು. ಅವರು ಸ್ಥೂಲ ಶರೀರದಲ್ಲಿದ್ದಾಗ ಯಾವ ರೀತಿ ಕೆಲಸಕಾರ್ಯಗಳಲ್ಲಿ ನಾನಾ ಉಪದೇಶ ಕೊಟ್ಟು ಮಾರ್ಗದರ್ಶನ ಮಾಡುತ್ತಿದ್ದರೂ ಹಾಗೆಯೆ ಈಗಲೂ ಅವಶ್ಯಬಿದ್ದಾಗ ಉಪದೇಶ ನೀಡುತ್ತಾರೆ, ಮಾರ್ಗದರ್ಶನ ಮಾಡುತ್ತಾರೆ. ಮನಸ್ಸು, ಸಮಾಧಿಸ್ಥವಾಗಿರುವಾಗ ಒಂದು ಊರ್ಧ್ವಭೂಮಿಕೆಯ ಅವಸ್ಥೆಗೇರುತ್ತದೆ; ಆಗ ಈ ಮಹಾಪುರುಷರೆಲ್ಲರೊಡನೆ ಒಂದು ಘನಿಷ್ಠ ಸಂಯೋಗ ಉಂಟಾಗುತ್ತದೆ; ಅಂತಹ ಸಂದರ್ಭಗಳಲ್ಲಿ, ಅವಶ್ಯವಿದ್ದರೆ, ಯಾವದಾರಿಯಲ್ಲಿ ಮುಂಬರಿಯಬೇಕು ಎಂಬುದಕ್ಕೆ ಅವರಿಂದ ನಿರ್ದೇಶನವನ್ನೂ ಪಡೆಯಬಹುದು. ದೇಹ ನಷ್ಟವಾದ ಮೇಲೆ ನಾವು ಆತನಲ್ಲಿಯೆ ಲೀನವಾಗುತ್ತೇವೆ. ಆದಕಾರಣ ಯಾರಾದರೂ ಠಾಕೂರರನ್ನು ನೆನೆದರೆ ಅನಿವಾರ್ಯವಾಗಿ ನಮ್ಮನ್ನೂ ನೆನೆದಂತೆಯೆ ಆಗುತ್ತದೆ. ನಾವು ಆತನ ಭಕ್ತರು; ಆತನ ದಾಸರು; ಆತನ ಹೊರತಾಗಿ ನಮಗೆ ಪೃಥಕ್‌ಸತ್ತೆ ಒಂದಿನಿತೂ ಇಲ್ಲ. ನಮ್ಮ ವ್ಯಕ್ತಿತ್ವ ಆತನಲ್ಲಿ ಲೀನವಾಗಿ ಹೋಗಿದೆ. ಠಾಕೂರರು ಸನಾತನ ಪರಬ್ರಹ್ಮವಲ್ಲದೆ ಬೇರೆಯಲ್ಲ.”

ಸಂನ್ಯಾಸಿ: “ಮಹಾರಾಜ್, ನಾವಾದರೂ ಸ್ಥೂಲ ಜಗತ್ತಿನಲ್ಲಿದ್ದೇವೆ. ನಮಗೆ ತಮ್ಮನ್ನು ಈ ಸ್ಥೂಲ ರೂಪದಲ್ಲಿಯೆ ಕಾಣುವ ಅಪೇಕ್ಷೆ. ಅದೂ ಅಲ್ಲದೆ ನಮ್ಮ ಮನಸ್ಸು ಅಂತಹ ಉಚ್ಚ ಅವಸ್ಥೆಗೆ ಏರಲೂ ಆರದು. ತಾವು ಠಾಕೂರರ ಪಾರ್ಷದರು (ಎಂದರೆ ಸಂಗಿ); ತಾವು ಅವರ ಅಂತರಂಗಿ. ಅವರದೆ ಪ್ರತಿನಿಧಿ ರೂಪವಾಗಿ ನಮ್ಮ ಹತ್ತಿರ ಇದ್ದೀರಿ. ತಮ್ಮ ಮೂಲಕವಾಗಿಯೆ ಠಾಕೂರರನ್ನು ಅರಿಯಲು ಪ್ರಯತ್ನಿಸುತ್ತಿದ್ದೇವೆ. ತಮ್ಮಡಿಗೆ ನಾವು ಸಲ್ಲಿಸುವ ಪ್ರಾರ್ಥನೆ ಠಾಕೂರರಿಗೇ ಸಲ್ಲುತ್ತದೆಂದು ನಮ್ಮ ದೃಢವಿಶ್ವಾಸ.”

ಮಹಾಪುರುಷಜಿ : “ನಮ್ಮ ಶರೀರ ಬಿದ್ದುಹೋದರೂ ನಿಮ್ಮ ಜೊತೆಯ ಸಂಬಂಧ ಎಂದೂ ಬಿಟ್ಟು ಹೋಗುವುದಿಲ್ಲ. ನಾನು ಹೃತ್ಪೂರ್ವಕ ಆಶೀರ್ವದಿಸುತ್ತೇನೆ, ನಿಮ್ಮ ಪ್ರಗತಿ ಶೀಘ್ರವಾಗಲಿ: ಭಕ್ತಿ, ವಿಶ್ವಾಸ, ಪ್ರೇಮ ಪವಿತ್ರತೆಗಳೆಲ್ಲ ನಿಮ್ಮ ಹೃದಯದಲ್ಲಿ ತುಂಬಿ ತುಳುಕಲಿ; ಜಗತ್ತಿನ ಬಹುವಿಧ ಕಲ್ಯಾಣ ನಿಮ್ಮ ಮೂಲಕವಾಗಿ ಸಾಧಿತವಾಗಲಿ. ಠಾಕೂರರೆ ನಿಮ್ಮನ್ನು ಕೈಬಿಡದೆ ನಡೆಸುತ್ತಾರೆ; ನಿಮಗೆ ಬೇಕಾದ್ದೆಲ್ಲ ಶಕ್ತಿಯನ್ನೂ ದಯಪಾಲಿಸುತ್ತಾರೆ. ಠಾಕೂರ್‌, ಸ್ವಾಮೀಜಿ ಅವರೆಲ್ಲ ಅವತರಿಸಿದ್ದು ಲೋಕದ ಹಿತಕ್ಕಾಗಿ. ನೂತನ ಆಧ್ಯಾತ್ಮಿಕ ಅಲೋಕವಿತ್ತು, ಸಮಗ್ರ ಜಗತ್ತನ್ನೂ ಶಾಂತಿಯ ಮಡಿಲಿಗೊಯ್ಯಲೆಂದೇ ಅವರು ದೇಹ ಧಾರಣೆ ಮಾಡಿದ್ದು. ಆ ಯುಗಪ್ರವರ್ತನಕ್ಕಾಗಿಯೆ ಸ್ವಾಮೀಜಿ ಈ ಸಂಘ ಸಂಸ್ಥಾಪನೆ ಮಾಡಿದ್ದು. ಯಾವ ಆದರ್ಶವನ್ನು ಸ್ವಾಮೀಜಿ ಪ್ರಚಾರ ಮಾಡಿದರೊ ಆ ಆದರ್ಶವನ್ನು ಸಮಗ್ರ ಜಗತ್ತೂ ಕ್ರಮೇಣ ಸ್ವೀಕರಿಸಿಯೇ ತೀರುತ್ತದೆ. ಸಮಗ್ರ ಪ್ರಪಂಚದ ಶಾಂತಿ ಸಂಸ್ಥಾಪನೆಗೆ ಬೇರೆ ಯಾವ ದಾರಿಯೂ ಇಲ್ಲ.”

ಗಾಳಿಗುಸಿರು ನೀ ಬೆಂಕಿಗುರಿಯು ನೀನುದಕಕದರ ಜೀವ:
ಅಗ್ನಿ ಇಂದ್ರ ವರುಣಾರ್ಕ ದೇವರನು ಮಾಡಿ ನೋಡಿ ಕಾವ
ಶಿವನ ಭಕ್ತಿ ನೀ, ವಿಷ್ಣು ಲಕ್ಷ್ಮಿ ನೀ, ಚತುರ್ಮುಖನ ರಾಣಿ;
ದಿವ್ಯ ವಿಜ್ಞಾನನ ನನ್ನೊಳುದ್ಭವಿಸೆ ಮತಿಗಾಗಮಿಸು, ವಾಣಿ |

ಮೃತ್ಯು ರೂಪಿ ನೀನಮೃತ ರೂಪಿ ನೀನಖಿಲ ಜನ್ಮದಾತೆ;
ಪರಾಪ್ರಕೃತಿ ನೀ ನಿನ್ನ ಮಾಯೆಯಲಿ ಸಕಲ ಜೀವಭೂತೆ.
ನಿನ್ನ ಕೃಪೆಯಿಲ್ಲದಿದ್ದರೆಮಗೆಲ್ಲಿ ಮುಕ್ತಿ, ಜಗನ್ಮಾತೆ?
ನಿನ್ನ ಋತಚಿತ್ತನೆಮಗೆ ಕೃಪೆಯಿತ್ತು ಕಾಯಿ, ದಿವ್ಯಮಾತೆ | – ಋತಚಿನ್ಮಯೀ ಜಗನ್ಮಾತೆಗೆ ‘ಅಗ್ನಿಹಂಸ’ ದಿಂದ

* * *