ಬೇಲೂರು ಮಠ
ಮೇ , ೧೯೨೯

ಮಹಾಪುರುಷ ಮಹಾರಾಜ್ ತಮ್ಮ ಕೊಠಡಿಯಲ್ಲಿ ಕೆಲವು ಭಕ್ತರೊಡನೆ ಕುಳಿತು, ಆನಂದದಿಂದ ಎಲ್ಲರೊಡನೆಯೂ ಮಾತುಕತೆಯಲ್ಲಿ ತೊಡಗಿದ್ದರು. ಆಗ ಮಹಾಪುರುಷಜಿಯಿಂದ ಮಂತ್ರದೀಕ್ಷೆ ಪಡೆದು ಅವರ ಕೃಪೆಗೆ ಪಾತ್ರಳಾಗಿದ್ದ ಒಬ್ಬ ಹುಡುಗಿ ತನ್ನ ತಾಯಿಯನ್ನು ಜೊತೆಯಲ್ಲಿ ಕರೆದುಕೊಂಡು ಗುರುದರ್ಶನಕ್ಕಾಗಿ ಕಲ್ಕತ್ತೆಯಿಂದ ಬಂದಳು. ಆ ಬಾಲಿಕಾ ಭಕ್ತೆಯ ವಯಸ್ಸು ಹದಿಮೂರೊ ಹದಿನಾಲ್ಕೊ; ಅವಳು ಸ್ಕೂಲಿನಲ್ಲಿ ಓದುತ್ತಿದ್ದಳು. ಅವರಿಬ್ಬರೂ ಮಹಾಪುರುಷಜಿಗೆ ಭಕ್ತಿಭಾವದಿಂದ ಪ್ರಣಾಮಮಾಡಿ, ಸಕಾತರವಾಗಿ ಆಶೀರ್ವಾದಬೇಡಿ, ಕುಶಲಪ್ರಶ್ನೆ ಕೇಳಿದರು. ಆಮೇಲೆ ಆ ಹುಡುಗಿಯ ತಾಯಿ ಅತ್ಯಂತ ವಿನೀತಭಾವದಿಂದ ಹೇಳಿದರು: “ಇವಳಿಗೆ ತಾವು ಆಶೀರ್ವಾದ ಮಾಡಬೇಕು, ಶ್ರೀ ಶ್ರೀಠಾಕೂರರ ಶ್ರೀಪಾದ ಪದ್ಮಗಳಲ್ಲಿ ಇವಳ ಭಕ್ತಿ ವಿಶ್ವಾಸ ದೃಢವಾಗಿರುವಂತೆ. ಇವಳನ್ನು ಮದುವೆ ಮಾಡಿಕೊಡುವುದಿಲ್ಲ ಎಂಬುದೂ ನನ್ನಿಚ್ಛೆ. ಶ್ರೀಗುರು ಮಹಾರಾಜರ ನಾಮಗ್ರಹಣ ಮಾಡಿ, ಆನಂದದಿಂದಿರಲಿ ಎಂಬುದೆ ನನ್ನ ಹಾರೈಕೆ ತಂದೆ. ಈ ಸಂಸಾರ ಒಂದು ದೊಡ್ಡ ಜ್ವಾಲೆ. ನಾನೂ ಒಬ್ಬಳು ಅದರಲ್ಲಿ ಸಿಕ್ಕಿ ಬೆಂದವಳೆ. ಸಂಸಾರದಲ್ಲಿ ಏನು ಸುಖ ಇದೆ ಎಂಬುದರ ಕಹಿ ಅನುಭವ ನನಗೂ ಆಗಿದೆ. ಅದನ್ನೆಲ್ಲ ಕಂಡೂ ಉಂಡೂ ನನ್ನ ಮಗುವನ್ನು ಸಂಸಾರದ ಕಾಡುಗಿಚ್ಚಿಗೆ ನೂಕುವುದಕ್ಕೆ ನನಗೆ ಮನಸ್ಸಿಲ್ಲ. ಕೃಪೆಯಿಟ್ಟು ತಾವು ಇವಳಿಗೆ ಸ್ವಲ್ಪ ಆಶೀರ್ವಾದ ಮಾಡಬೇಕು.’’

ಮಹಾಪುರುಷಜಿ : “ತುಂಬ ಆಶೀರ್ವಾದ ಮಾಡುತ್ತೇನೆ, ತಾಯೀ, ಹೃತ್ಪೂರ್ವಕ ಆಶೀರ್ವದ ಮಾಡುತ್ತೇನೆ.”

ಆಮೇಲೆ ಆ ಹುಡುಗಿಯ ಕಡೆ ಅಕ್ಕರೆಯಿಂದ ನೋಡಿ ಹೇಳಿದರು: “ಠಾಕೂರರನ್ನು ಅತ್ಯಂತ ಪ್ರಾಣಭರೆಯಾಗಿ ಕರೆಯಮ್ಮ. ಅಲ್ಲದೆ ಪರಿಶುದ್ಧೆಯಾಗಿರು. ಠಾಕೂರರೆ ಪಿತಾ ಮಾತಾ ಸಖಾ-ಎಲ್ಲವೂ ಠಾಕೂರರೆ.”

ತ್ವಮೇವ ಮಾತಾ ಚ ಪಿತಾ ತ್ವಮೇವ,
ತ್ವಮೇವ ಬಂಧುಶ್ಚ ಸಖಾ ತ್ವಮೇವ,
ತ್ವಮೇವ ವಿದ್ಯಾ ದ್ರವಿಣಂ ತ್ವಮೇವ,
ತ್ವಮೇವ ಸರ್ವಂ ಮಮ ದೇವದೇವ ||

‘ಹೇ ದೇವದೇವ, ನೀನೆ ತನ್ನ ತಾಯಿ, ತಂದೆ, ಬಂಧು, ಸ್ನೇಹಿತ; ನೀನೆ ವಿದ್ಯೆ; ನೀನೆ ಐಶ್ವರ್ಯ; ನೀನೆ ನನ್ನ ಸರ್ವಸ್ವ.’ ನೀನೀಗ ವಿದ್ಯಾರ್ಥಿನಿ; ಮನಸಿಟ್ಟು ಓದು; ಜೊತೆಗೆ ನೀನು ದೀಕ್ಷೆ ತೆಗೆದುಕೊಂಡಿರುವ ನಾಮಜಪ ಮಾಡು. ಅಧ್ಯಯನ ಮಾಡು, ಮತ್ತೇನನ್ನಾದರೂ ಮಾಡು, ತಾಯೀ. ಆದರೆ ಜೀವನದ ಉದ್ದೇಶ ಭಗವಂತನ ಸಾಕ್ಷಾತ್ಕಾರ ಎಂಬುದು ನೆನಪಿರಲಿ. ಲಕ್ಷ್ಯವೆಲ್ಲ ಆ ದಿಕ್ಕಿಗಿರಲಿ. ಈ ಸಂಸಾರವೊ ಎರಡು ದಿನ -ಕ್ಷಣಸ್ಥಾಯೀ. ಭಗವಂತನೆ ಏಕಮಾತ್ರ ನಿತ್ಯವಸ್ತು. ಬಾಳು ಶುದ್ಧವಾಗಿ, ಪವಿತ್ರವಾಗಿರಲಿ. ಸರಳವಾದ ಪವಿತ್ರ ಹೃದಯದಲ್ಲಿ ಭಗವಂತ ಪ್ರಕಾಶಿಸುತ್ತಾನೆ. ಪರಿಶುದ್ಧಿಯೆ ಧರ್ಮಜೀವನದ ಏಕಮಾತ್ರ ಭಿತ್ತಿ. ಶ್ರೀ ಶ್ರೀಮಾತೆಯ ಜೀವನ ಚರಿತ್ರೆಯನ್ನು ನೀನು ಓದಿರಬೇಕಲ್ಲವೆ? ಈ ಯುಗದ ಸಮಗ್ರನಾರೀಕುಲದ ಆದರ್ಶವಾಗಿದ್ದಾರೆ ಅವರು. ಅವರ ಜೀವನ ಅತ್ಯದ್ಭುತ. ನರದೇಹಧಾರಣ ಮಾಡಿ ಸಾಧಾರಣ ಗೃಹಸ್ಥ ವಧುವಿನಂತೆ ಇದ್ದರು. ಆದರೆ ಅವರು ಸಾಕ್ಷಾತ್ ಆದ್ಯಾಶಕ್ತಿ, ಜಗಜ್ಜನನಿಯೆ ಅಲ್ಲದೆ ಅನ್ಯರಲ್ಲ. ಶಾಸ್ತ್ರಗಳಲ್ಲಿ ಯಾರು ಕಾಲೀ, ತಾರಾ, ಮಹಾವಿದ್ಯೆಯರೆಂದು ವರ್ಣಿತರಾಗಿದ್ದಾರೆಂದು ವರ್ಣಿತರಾಗಿದ್ದಾರೆಯೊ ಆ ದಶಮಹಾವಿದ್ಯೆಯರೆಲ್ಲರೂ ಏಕೀಭವಿಸಿದ ಪ್ರತಿರೂಪವಾಗಿದ್ದಾರೆ ಶ್ರೀಮಾತೆ. ಠಾಕೂರರ ಯುಗಧರ್ಮ ಸಂಸ್ಥಾಪನಾರೂಪದ ನರಲೀಲೆಯನ್ನು ಪೂರ್ಣಗೊಳಿಸುವುದಕ್ಕಾಗಿ ಜಗತ್ತಿನಲ್ಲಿ ಅವತೀರ್ಣರಾಗಿದ್ದಾರೆ. ಸಾಧಾರಣ ಮಾನವರು ಅವರನ್ನು ಗುರುತಿಸಬಲ್ಲರೆ? ನಾವೂ ಮೊದಮೊದಲು ಅವರನ್ನು ಒಂದು ಸ್ವಲ್ಪವೂ ಅರಿಯಲಾರದೆ ಹೋದೆವು. ತಮ್ಮ ಈಶ್ವರೀಭಾವವನ್ನು ಎಷ್ಟು ಸಮರ್ಪಕವಾಗಿ ಅಡಗಿಸಿಟ್ಟುಕೊಂಡರೆಂದರೆ ಅವರೆ ನಿಜವನ್ನು ಒಂದಿನಿತೂ ಕಂಡುಹಿಡಿಯಲು ಆಗುತ್ತಿರಲಿಲ್ಲ, ಅವರು ಯಾರು ಎಂಬುದು ಠಾಕೂರರೊಬ್ಬರಿಗೆ ಮಾತ್ರ ಗೊತ್ತಿತ್ತು; ಅಲ್ಲದೆ ಸ್ವಾಮೀಜಿಗೂ ಒಂದು ಕಿಂಚಿತ್ ಅರಿವಾಗಿತ್ತು. ಸ್ವಾಮೀಜಿ ಪಾಶ್ಚಾತ್ಯ ದೇಶಗಳಿಗೆ ಹೋಗುವ ಮುನ್ನ ಶ್ರೀಮಾತೆಯೊಬ್ಬರಿಗೇ ತಿಳಿಸಿದರು; ಅವರ ಆಶೀರ್ವಾದವನ್ನು ಪಡೆದ ಮೇಲೆಯೆ ಸ್ವಾಮೀಜಿ ಸಮುದ್ರ ದಾಟಿದ್ದು. ಅಮ್ಮನವರೂ ಅವರಿಗೆ ಹೃತ್ಪೂರ್ವಕವಾಗಿ ಆಶೀರ್ವಾದ ಮಾಡಿ ಹೇಳಿದರಂತೆ: “ಬಾಬಾ. ನೀನು ದಿಗ್ವಿಜಯಿಯಾಗಿ ಹಿಂತಿರುಗು. ನಿನ್ನ ಮುಖದಲ್ಲಿ ಸರಸ್ವತಿ ನೆಲಸಲಿ!” ಹಾಗೆಯೇ ಆಯಿತು! ತಾಯಿಯ ಆಶೀರ್ವಾದದಿಂದ ಸ್ವಾಮೀಜಿ ವಿಶ್ವವಿಜಯಿಯಾದರು. ಅವರು ಅನೇಕ ಬಾರಿ ಹೇಳುತ್ತಿದ್ದರು, ತಾಯಿಯು ಠಾಕೂರರಿಗಿಂತಲೂ ದೊಡ್ಡವರು ಎಂದು. ಎಷ್ಟು ಗಂಭೀರವಾಗಿತ್ತು ಅವರ ಶ್ರದ್ಧೆ ಶ್ರೀ ಶ್ರೀ ಮಾತೆಯ ಮೇಲೆ! ಠಾಕೂರರು ಹೇಳುತ್ತಿದ್ದರು  ‘ವಾದ್ಯಕುಟಿಯಲ್ಲಿ ಯಾರು ವಾಸಿಸುತ್ತಾರೊ ಅವರು ಯಾವ ಕಾರಣಕ್ಕಾದರೂ ಯಾರ ಮೇಲಾದರೂ ಮುನಿದದ್ದೇ ಆದರೆ ಅವರನ್ನು ರಕ್ಷಿಸುವುದು ನನಗೂ ಸಾಧ್ಯಾತೀತ.’ ಲೋಕದ ನಾರೀಕುಲವನ್ನೆಲ್ಲ ಜಾಗ್ರತಗೊಳಿಸುವ ಸಲುವಾಗಿ ತಾಯಿ ನರದೇಹವೆತ್ತಿ ಬಂದರು. ಕಾಣೆಯಾ, ತಾಯಿಯ  ಆಗಮನವಾದ ಮೇಲೆ ಅದೆಷ್ಟು ಶೀಘ್ರವಾಗಿ ಎಲ್ಲ ದೇಶಗಳಲ್ಲಿಯೂ ಸ್ತ್ರೀವರ್ಗದಲ್ಲಿ ಎಂತಹ ಅದ್ಭುತ ಜಾಗೃತಿ ಶುರುವಾಯಿತು ಎಂದು! ಅವರೆಲ್ಲ ಈಗ ತಮ್ಮ ಜೀವನವನ್ನು ಸರ್ವಾಂಗಸುಂದರವನ್ನಾಗಿ ಮಾಡುವುದಕ್ಕಾಗಿಯೂ ಮತ್ತು ಸರ್ವ ವಿಷಯಗಳಲ್ಲಿಯೂ ಉನ್ನತಿ ಸಾಧನೆಗಾಗಿಯೂ ಬದ್ಧಕಂಕಣರಾಗಿದ್ದಾರೆ. ಇದೇನು ಅದರ ಕೊನೆಯೆ? ಅದರ ಪ್ರಾರಂಭ ಮಾತ್ರ. ವೈದಿಕ ಮತ್ತು ಪೌರಾಣಿಕ ಯುಗಗಳಲ್ಲಿ, ಗಾರ್ಗಿ, ಮೈತ್ರೇಯಿ, ಸೀತೆ, ಸಾವಿತ್ರ ಮೊದಲಾದವರ ಅದ್ಭುತ ನಾರೀಚಾರಿತ್ರರ್ಯ ವಿಕಾಸಗೊಂಡಂತೆ ಈ ಯುಗದ ಸ್ತ್ರೀಯರಲ್ಲಿ ಅವರಿಗಿಂತಲೂ ದೊಡ್ಡದೊಡ್ಡ  ‘ಆಧಾರ ‘ಗಳು ವಿಕಾಸವಾಗಲಿವೆ. ಈಗಾಗಲೆ ಹೆಂಗಸರಲ್ಲಿ ಆಧ್ಯಾತ್ಮಕತೆ, ರಾಜನೀತಿ, ವಿಜ್ಞಾನ, ಶಿಲ್ಪಕಲೆ, ಸಾಹಿತ್ಯ ಮೊದಲಾದ ಎಲ್ಲ ವಿಷಯಗಳಲ್ಲಿಯೂ ಆತ್ಯಾಶ್ಚರ್ಯಕರವಾದ ಜಾಗೃತಿಯುಂಟಾಗಿದೆ; ಇನ್ನೂ ಆಗುತ್ತದೆ. ಇದೆಲ್ಲ ಐತೀಶಕ್ತಿಯ ಖೇಲಾ. ಸಾಧಾರಣ ಮನುಷ್ಯರು ಎಲ್ಲದರ ಗೂಢಮರ್ಮವನ್ನು ಸ್ವಲ್ಪ ಮಾತ್ರವೂ ಅರಿಯಲಾರದವರಾಗಿದ್ದಾರೆ.

ಸ್ತ್ರೀ ಭಕ್ತೆ: “ನನಗೆ ಶ್ರೀ ಮಾತೆಯ ವಿಷಯವಾಗಿ ಹೆಚ್ಚೇನೂ ಗೊತ್ತಿಲ್ಲ. ಅವರ ಜೀವನವನ್ನಾಗಲಿ ಉಪದೇಶವನ್ನಾಗಲಿ ನಾನು ಏನೂ ಓದಿಲ್ಲ. ತಾವು ದಯೆತೋರಿ ಅವರ ಸಂಬಂಧವಾಗಿ ಏನಾದರೂ ತಿಳಿಸುವ ಕೃಪೆಮಾಡಬೇಕು. ಕೇಳಬೇಕು ಎಂದು ತುಂಬ ಆಶೆಯಗಿದೆ.”

ಮಹಾಪುರುಷಜಿ: “ಶ್ರೀಮಾತೆ ಸರ್ವರ ಮಾತೆ ಆಗಿದ್ದರು. ಅವರ ದಯೆ ಎಂಥಾದ್ದು; ಅವರ ಕ್ಷಮೆ ಎಂಥಾದ್ದು; ಎಂತಹ ಅದ್ಭುತ ಸಹನೆಯ ಗುಣವಿತ್ತು ಅವರಲ್ಲಿ! ನನಗೂ ಅವರ ವಿಷಯ ಏನು ಗೊತ್ತಿದೆ? ಏನೊ ಅವರ ಕೃಪೆಯಿಟ್ಟು ಒಂದು ಸ್ವಲ್ಪ ತಿಳಿವಳಿಕೆ ದಯಪಾಲಿಸಿದ್ದಾರೆ, ಅವರು ಸಾಕ್ಷಾತ್ ಜಗನ್ಮಾತೆ ಎಂಬುದಾಗಿ. ಅವರ ಸ್ವರೂಪ ಎಂಥಾದ್ದೆಂದರೆ, ಅವರೆ ದಯೆತೋರಿ ಅದನ್ನು ತಿಳಿಸಿಕೊಡದಿದ್ದರೆ ಅವರನ್ನು ಅರಿಯುವ ಉಪಾಯವೆ ಇಲ್ಲ. ಮೊದಲ ಯೋಗಿನ್ ಮಹಾರಾಜ್ (ಸ್ವಾಮಿ ಯೋಗಾನಂದರು), ಆಮೇಲೆ ಶರತ್ ಮಹಾರಾಜರು (ಸ್ವಾಮ ಶಾರದಾನಂದರು), ಅವರಿಗೆ ತುಂಬ ಸೇವೆ ಸಲ್ಲಿಸಿದರು. ನನಗೂ ಒಮ್ಮೆ ಜಯರಾಮಬಾಟಿಗೆ ಹೋಗಿದ್ದಾಗ ಅವರಿಗೆ ಅಡುಗೆ ಮಾಡುವ ಸುಯೋಗ ಲಭಿಸಿತ್ತು. ಅದು ಬಹಳ ಹಿಂದಿನ ಕತೆ, -ಠಾಕೂರರ ದೇಹತ್ಯಾಗವಾದ ಕೆಲವೆ ವರ್ಷಗಳಲ್ಲಿ. ಆಗ ಶ್ರೀಮಾತೆ ಜಯರಾಮಬಾಟಿಯಲ್ಲಿಯೆ ಇರುತ್ತಿದ್ದರು. ನಾನು, ಶಶಿಮಹಾರಾಜ್ (ಸ್ವಾಮಿ ರಾಮಕೃಷ್ಣಾನಂದರು) ಮತ್ತೊಬ್ಬರು ಯಾರೊ ಸರಿಯಾಗಿ ನೆನಪಿಲ್ಲ. ಖೋಕಾಮಹಾರಾಜ್ (ಸ್ವಾಮಿ ಸುಬೋಧಾನಂದರು) ಅಂತ ಕಾಣ್ತದೆ. ನಾವು ಮೂವರು ತಾಯಿಯವರ ದರ್ಶನಕ್ಕಾಗಿ ಜಯರಾಮಬಾಟಿಗೆ ಹೋದೆವು. ಆಗಿನ ಕಾಲದಲ್ಲಿ ಭಕ್ತರಾರೂ ಹೆಚ್ಚಾಗಿ ಜಯರಾಮಬಾಟಿಗೆ ಹೋಗುತ್ತಿರಲಿಲ್ಲ; ಹೋಗುವುದಕ್ಕೆ ದಾರಿಯೂ ಬಹಳ ಕಷ್ಟಕರವಾಗಿತ್ತು. ನಾವು ತಾಯಿಯವರಿಗೆ ಮೊದಲೆ ತಿಳಿಸಿದ್ದೆವು, ನಾವು ಬರುವುದಾಗಿ. ನಮ್ಮನ್ನು ನೋಡಿ ಅಮ್ಮಗೆ ಎಷ್ಟು ಆನಂದವಾಯಿತೊ! ನಮ್ಮನ್ನು ಕಂಡದ್ದೆ, ಯಾರಿಗೆ ಯಾವ ಊಟ ರುಚಿಸುತ್ತೆ, ಏನು ಮಾಡಿದರೆ ನಾವೆಲ್ಲ ಸುಖಿಗಳಾಗಿ ಸಂತೋಷಪಡುತ್ತೇವೆ ಎಂದು ದಿನವೆಲ್ಲ ಅವರು ವ್ಯಸ್ತರಾಗಿದ್ದರು. ಜಯರಾಮಬಾಟಿ ಒಂದು ಸಣ್ಣಹಳ್ಳಿ; ಅಲ್ಲಿ ಏನೂ ಸಿಕ್ಕುತ್ತಿರಲಿಲ್ಲ. ಆದರೂ ಅಮ್ಮ ಗೌಳಿಗರಿಗೆ ಹೇಳಿ ಹಾಲಿನ ಬಂದೋಬಸ್ತು ಮಾಡಿದ್ದರು; ಬೆಸ್ತರಿಗೆ ಹೇಳಿ ಮೀನಿನ ಸರಬರಾಜು ಮಾಡಿಸಿದ್ದರು; ಇನ್ನು ಏನೇನೋ ತರಕಾರಿಗಿರಕಾರಿ ಎಲ್ಲ ಜಮಾಯಿಸಿಬಿಟ್ಟಿದ್ದರು. ಕಲ್ಕತ್ತೆಯ ಜನರಿಗೆ ಚಾ ಕುಡಿಯುವ ಅಭ್ಯಾಸ; ಅಮ್ಮಗೆ ಗೊತ್ತಿತ್ತು. ನಮಗಾಗಿ ಚಾನೂ ಏರ್ಪಾಡು ಮಾಡಿದ್ದರು. ಆ ದಿನವನ್ನೆಲ್ಲ ನಾವು ಅತ್ಯಂತ ಆನಂದದಲ್ಲಿ ಕಳೆದೆವು. ತಾಲಪುಕುರ ಕೆರೆಯಲ್ಲಿ ಚೆನ್ನಾಗಿ ಸ್ನಾನ ಮಾಡಿದೆವು. ಅಮ್ಮ ನಮ್ಮ ಬಳಿಗೆ ಬರುತ್ತಿರಲಿಲ್ಲ. ಅವರಿಗೆ ತುಂಬ ಸಂಕೋಚ. ನಮ್ಮೊಡನೆ ಮಾತೂ ಆಡುತ್ತಿರಲಿಲ್ಲ. ರಾತ್ರಿ ಊಟವಾದ ಅನಂತರ ನಾವು ಮಲಗುವುದಕ್ಕೆ ಹೋದಾಗ ನಾನು ಶಶಿಮಹಾರಾಜರೊಡನೆ ಮಸಲತ್ತು ಮಾಡಿ, ಮರುದಿನ ನಾವೆ ಅಡುಗೆ ಮಾಡಿ ಶ್ರೀಮಾತೆಗೆ ಉಣಬಡಿಸಬೇಕು ಎಂದು ನಿಶ್ಚಯಿಸಿದೆವು. ಮರುದಿನ ಬೆಳಿಗ್ಗೆ ಚಾ ಕುಡಿಯುವ ಸಮಯದಲ್ಲಿ ಅಮ್ಮನೊಡನೆ ಆ ಪ್ರಸ್ತಾಪ ಮಾಡಿದೆವು. ಒಡನೆಯೆ ತಾಯಿ ನಕ್ಕು ನಮ್ಮ ಮಾತನ್ನು ತಳ್ಳಿಹಾಕಿಬಿಟ್ಟರು.  ‘ಅದು ಹೇಗಾಗುತ್ತೆ, ಬಾಬಾ? ನಾನು ತಾಯಿ; ನಿಮಗೆ ಅಡುಗೆ ಮಾಡಬೇಕಾದ್ದು ನನ್ನ ಕರ್ತವ್ಯ! ಅದು ಬಿಟ್ಟು ನೀವೆ ಅಡುಗೆಮಾಡಿ ನನಗೆ ಬಡಿಸುತ್ತೇವೆ ಅಂತ ಹೇಳ್ತಿದ್ದೀರಲ್ಲಾ! ಅಡುಗೆಮನೆಯ ಹೊಗೆಸಹಿಸುವುದಕ್ಕಾದರೂ ನಿಮ್ಮಿಂದ ಆಗುತ್ತದೆಯೇ? ಕಣ್ಣೆಲ್ಲ ಉರಿಹತ್ತಿ ಹೋಗ್ತೀರಿ, ಅಷ್ಟೆ!’ ಹೀಗೆಲ್ಲ ಹೇಳಿ ನಮ್ಮ ಆಶೆಗೆ ಅಡ್ಡಿ ತಂದೊಡ್ಡಿ ಬಿಟ್ಟರು. ನಾವೂ ಅವರ ಮಾತಿಗೆ ಸ್ವಲ್ಪವೂ ಜಗ್ಗಲಿಲ್ಲ; ತುಂಬ ಹಟ ಮಾಡತೊಡಗಿದೆವು. ಕಡೆಗೆ ಕೊನೆಯ ಅಸ್ತ್ರ ಎಂದು ನಾನು ಹೇಳಿಬಿಟ್ಟೆ:  ‘ನಮ್ಮದೂ ಬ್ರಾಹ್ಮಣ ಶರೀರವೆ. ನಾವು ಮಾಡಿದ ಅಡುಗೆ ಉಂಡರೆ ನಿಮಗೆ ಏನು ಆಪತ್ತಿ? ಠಾಕೂರರೂ ನಾವು ಮಾಡಿದ ಅಡುಗೆ ಉಣ್ಣುತ್ತಿದ್ದರು,’ ಇತ್ಯಾದಿಯಾಗಿ. ಇನ್ನೇನು ಮಾಡ್ತಾರೆ? ಬೇರೆ ದಾರಿತೋರದೆ ಕೊನೆಗೆ ಒಪ್ಪಿಗೆ ಕೊಟ್ಟರು. ಶಶಿಮಹಾರಾಜರೂ ನಾನೂ ಅಡುಗೆ ಮಾಡಿದೆವು. ಅಮ್ಮ ಊಟಮಾಡಿ ಬಹಳ ಸಂತೋಷಪಟ್ಟರು.”

ಸ್ತ್ರೀ ಭಕ್ತೆ: “ಹಾಗಾದರೆ, ಮಹಾರಾಜ್, ನೀವು ಠಾಕೂರರಿಗೂ ಕೂಡ ಅಡುಗೆ ಮಾಡಿದ್ದೀರಿ?”

ಮಹಾಪುರುಷಜಿ: “ಹೌದಮ್ಮಾ! ಆಗ ಠಾಕೂರರ ಶರೀರ ತುಂಬ ಅಸ್ವಸ್ಥವಾಗಿತ್ತು. ಚಿಕಿತ್ಸೆಗಾಗಿ ಕಾಶೀಪುರದ ತೋಟದಲ್ಲಿದ್ದರು. ಸ್ವಾಮಿಜಿಯೆ ಮೊದಲಾಗಿ ನಾವೆಲ್ಲರೂ ಅಲ್ಲಿದ್ದುಕೊಂಡು, ಹಗಲೂ ರಾತ್ರಿ ಸಂಜೆಯ ಮೇಲೆ ಅವರ ಸೇವೆಯಲ್ಲಿ ಸಮಭಾಗಿಗಳಾಗಿದ್ದೆವು. ಊಟಗೀಟ ಎಲ್ಲರಿಗೂ ಅಲ್ಲೆ. ಸುರೇಶ ಬಾಬು ಎಲ್ಲ ಏರ್ಪಾಟು ಮಾಡಿದ್ದರು. ಒಬ್ಬ ಬ್ರಾಹ್ಮಣ ಅಡುಗೆಯವನನ್ನು ಗೊತ್ತು ಮಾಡಿತ್ತು. ಒಂದು ಸಾರಿ ಅವನಿಗೆ ಕಾಯಿಲೆಯಾಯಿತು. ಆಗ ನಾವೆ ಸರದಿಯ ಮೇಲೆ ಕೆಲಸ ಹಂಚಿಕೊಂಡು ಅಡುಗೆ ಕೆಲಸ ಮಾಡಬೇಕಾಯಿತು. ಅಡುಗೆಯೇನೂ ಅಂಥಾ ಹೇಳಿಕೊಳ್ಳತಕ್ಕದಲ್ಲ; ತುಂಬಾ ಸಾಧಾರಣವಾದ್ದು – ಅನ್ನ, ರೊಟ್ಟಿ, ಬೇಳೆ, ಚಚ್ಚಡಿ, ಹುಳಿ ಇಷ್ಟೆ! ಆಗ ನಮ್ಮೆಲ್ಲರ ಅವಸ್ಥೆ ಹೇಗಿತ್ತೆಂದರೆ, ತಿನ್ನುಣ್ಣುವ ವಿಷಯದಲ್ಲಿ ಯಾರೂ ಅಷ್ಟು ಲೆಕ್ಕಿಸುತ್ತಿರಲಿಲ್ಲ. ಯಾವ ಸಮಯಕ್ಕೆ ಏನು ದೊರೆತರೂ ತಿಂದುಬಿಡುತ್ತಿದ್ದೆವು. ಒಂದು ಕಡೆ, ಠಾಕೂರರ ಕಾಯಿಲೆ ಅತ್ಯಂತ ಕಠಿಣ ಸ್ಥಿತಿಗೇರಿತ್ತು; ಜೊತೆಗೆ ನಾವೆಲ್ಲರೂ ಆಗ ಬಹಳ ಕಠೋರ ಸಾಧನೆ ಭಜನೆಯಲ್ಲಿ ತೊಡಗಿದ್ದೆವು. ಆ ಸಮಯದಲ್ಲಿಯೆ ಒಮ್ಮೆ ರಾತ್ರಿ ನನ್ನ ಅಡುಗೆ ಸರದಿ ಬಂತು. ಬೇಳೆ, ರೊಟ್ಟಿ, ಚಚ್ಚಡಿ ಮಾಡಿದೆ. ನಾನು ಚಚ್ಚಡಿಗೆ ಒಗ್ಗರಣೆ ಹಾಕಿದ್ದರ ಕಂಪು ಉಪ್ಪರಿಗೆಯ ಮೇಲೆ ಮಲಗಿದ್ದ ಠಾಕೂರರ ಮೂಗಿಗೆ ಮುಟ್ಟಿ, ಅವರು ಅಲ್ಲಿದ್ದ ಒಬ್ಬರನ್ನು ವಿಚಾರಿಸಿದರು: ‘ಅರೆ! ಯಾರೊ ಇವತ್ತು ಅಡಿಗೆ ಮಾಡೋರು ವ್ಹಾ! ಒಳ್ಳೆ ಸೊಗಸಾದ ಒಗ್ಗರಣೆ ವಾಸನೆ ಹೊಡೀತಿದೆಯಲ್ಲ! ಯಾರದ್ದು ಅಡಿಗೆ?’ ನಾನು ಮಾಡುತ್ತಿದ್ದೇನೆ ಎಂಬುದನ್ನು ಕೇಳಿ ಅವರು  ‘ಹೋಗು; ನನಗೆ ಒಂದು ಸ್ವಲ್ಪ ತೆಗೆದುಕೊಂಡು ಬಾ’ ಎಂದರು. ಅವತ್ತು ರಾತ್ರಿ ಅವರು ನಾನು ಮಾಡಿದ್ದ ಚಚ್ಚಡೀನ ಸ್ವಲ್ಪ ತಿಂದರು. ಅವರು ಗಂಟಲು ನೋವಿನಿಂದ ನರಳುತ್ತಿದ್ದ ಕಾಲ ಅದು; ಯಾವ ಪದಾರ್ಥವನ್ನೂ ತಿನ್ನಲಾಗುತ್ತಿರಲಿಲ್ಲ. ಆದ್ದರಿಂದ ಎಲ್ಲಿಯೊ ಸ್ವಲ್ಪ ತೆಗೆದುಕೊಂಡರಷ್ಟೆ. ಸಾಮಾನ್ಯವಾಗಿ ಹಾಲಿನಲ್ಲಿ ಬೇಯಿಸಿದ ರವೆಗಂಜಿಯನ್ನು ಕೊಡುತ್ತಿದ್ದೆವು; ಅದನ್ನು ಅವರು ಬಹಳ ಕಷ್ಟದಿಂದ ತೆಗೆದುಕೊಳ್ಳುತ್ತಿದ್ದರು. ಕೆಲವು ಸಮಯ ಅದನ್ನೂ ತಿನ್ನಲಾಗುತ್ತಿರಲಿಲ್ಲ. ಜೊತೆಗೆ ಬೇರೆ ಮತ್ತೆ ಮತ್ತೆ ಭಾವ ಸಮಾಧಿಗೇರುತ್ತಿದ್ದರು; ಬಾಹ್ಯಿಕವಾದ ಯಾವ ಜ್ಞಾನವೂ ಇರುತ್ತಿರಲಿಲ್ಲ. ಕಾಶೀಪುರದ ತೋಟದಲ್ಲಿ, ಠಾಕೂರರ ಸೇವೆಯಲ್ಲಿ ಮತ್ತು ಸಾಧನೆ ಭಜನೆಯಲ್ಲಿ ಎಷ್ಟು ಆನಂದದಿಂದ ನಮ್ಮ ದಿನಗಳು ಕಳೆದುಹೋದುವೊ! ನಮ್ಮನ್ನೆಲ್ಲ ಒಟ್ಟುಗೂಡಿಸಿ ಮುಂದಿನ ಸಂಘ ನಿರ್ಮಾಣಮಾಡಲೋಸುಗವೊ ಏನೊ ಠಾಕೂರರಿಗೆ ಆ ಕಾಯಿಲೆ ಬಂದುದರ ಉದ್ದೇಶ? ಅವತಾರಪುರುಷರ ಲೀಲೆಯ ಗೂಢರಹಸ್ಯ ಮನುಷ್ಯರಿಗೆ ತಿಳಿಯುವುದಾದರೂ ಎಂತು?”

ಹೇಳುತ್ತಾ ಹೇಳುತ್ತಾ ಅವರಿಗೆ ಮಾತು ಹೊರಡದೆ ಸ್ವಲ್ಪಹೊತ್ತು ಸುಮ್ಮನಾದರು. ಮತ್ತೆ ನಿಧಾನವಾಗಿ ಮುಂದುವರಿದು; “ಓಹೋ! ನಿನಗೆ ಜಯರಾಮಬಾಟಿ ವಿಚಾರ ಹೇಳುತ್ತಿದ್ದೆನಲ್ಲವೆ, ತಾಯಿ. ಆ ಸಾರಿ ನಾವು ಶ್ರೀ ಮಾತೆಯವರ ಸನ್ನಿಧಿಯಲ್ಲಿ ಮೂರು ದಿನ ಮಹಾ ಆನಂದದಲ್ಲಿ ಮುಳುಗಿದ್ದೆವು. ಆಹಾ, ಆ ತಾಯಿಯ ಅಕ್ಕರೆಗೆ ಎಣೆಯುಂಟೆ! ನಮಗೆ ಇನಿತೂ ತೊಂದರೆಯಾಗದಂತೆ ನೋಡಿಕೊಳ್ಳುವ ಸಲುವಾಗಿ ಅವರು ಬೆಳಗಿನಿಂದ ಹಿಡಿದು ರಾತ್ರಿಯವರೆಗೂ ಸರ್ವದಾ ಮಹಾವ್ಯಸ್ತರಾಗಿರುತ್ತಿದ್ದರು. ನನ್ನ ಮಟ್ಟಿಗೆ ಹೇಳುವುದಾದರೆ ಚಿಕ್ಕ ವಯಸ್ಸಿನಲ್ಲಿಯೆ ನನ್ನ ಹೆತ್ತಮ್ಮನನ್ನು ಕಳೆದುಕೊಂಡಿದ್ದೆ; ತಾಯಿಯ ಅಕ್ಕರೆ ಅಂದರೆ ಏನೆಂಬುದು ಮರೆತುಹೋದಂತಾಗಿತ್ತು. ಆದರೆ ಜಯರಾಮಬಾಟಿಯಲ್ಲಿ ಶ್ರೀಮಾತೆಯ ಸಾನ್ನಿಧ್ಯದಲ್ಲಿ ಆ ಅಕ್ಕರೆಯ ರುಚಿ ಏನೆಂದು ಸವಿದೆ. ಅಲ್ಲಿದ್ದ ಮೂರನೆಯ ದಿನ ರಾತ್ರಿ ನನಗೆ ಚಳಿಜ್ವರ ಬಂದು ಗಡಗಡ ನಡುಗಿಸಿಬಿಟ್ಟಿತು. ಸಂಜೆಯಾಗುತ್ತಾ ಜ್ವರ ಇನ್ನೂ ಏರತೊಡಗಿತು. ಬೆಳಗಿನ ಜಾವ ಶಶಿ ಮಹಾರಾಜರಿಗೆ ಹೇಳಿದೆ; ‘ಅಣ್ಣಾ. ಇನ್ನು ಇಲ್ಲಿ ಇರೋದು ಬೇಡ. ನಾನಿಲ್ಲಿ ಜ್ವರ ಬಂದು ಬಿದ್ದುಕೊಂಡರೆ ತಾಯಿಗೆ ತುಂಬ ಕಷ್ಟಕೊಡ್ತೇವೆ. ನಾಳೆ ಬೆಳಿಗ್ಗೆ ಮಾತೆಗೆ ನಮಸ್ಕರಿಸಿ ಬೀಳ್ಕೊಂಡು ಇಲ್ಲಿಂದ ಹೊರಟುಬಿಡೋಣ.’ ನನ್ನ ಸೂಚನೆಗೆ ಅವರೂ ಒಪ್ಪಿದರು. ಬೆಳಿಗ್ಗೆ ಮುಂಚೆ ನಾವು ಮೂವರೂ ಮಾತೆಗೆ ಪ್ರಣಾಮಮಾಡಿ ಹೊರಟುಬಿಟ್ಟೆವು. ಮೊದಮೊದಲು ಶ್ರೀಮಾತೆ ನಮ್ಮ ಪ್ರಯಾಣಕ್ಕೆ ಒಪ್ಪಲಿಲ್ಲ. ಆಮೇಲೆ ನಾವು ಹೊರಡಲೇಬೇಕೆಂದು ಕಾತರರಾಗಿದ್ದುದನ್ನು ನೋಡಿ ಸುಮ್ಮನಾದರು.”

“ಮಾತೆಯ ಮನೆಯಿಂದ ಸ್ವಲ್ಪ ದೂರದವರೆಗೆ ಕಷ್ಟದಿಂದಲೆ ಕಾಲುಹಾಕಿದೆ. ಅಷ್ಟರಲ್ಲಿ ಒಂದು ಎತ್ತಿನ ಗಾಡಿ ಇದಿರಾಯಿತು, ಆರಾಮಬಾಗಿನವರೆಗೆ ಅದನ್ನು ಬಾಡಿಗೆಗೆ ಗೊತ್ತು ಮಾಡಿ ಮೂವರೂ ಹತ್ತಿದೆವು. ಗಾಡಿಯಲ್ಲಿ ನಾನು ಪ್ರಜ್ಞೆಯಿಲ್ಲದೆ ಬಿದ್ದಿದ್ದೆ. ಮಧ್ಯಾಹ್ನ ದಾರಿಯಲ್ಲಿ ಸಿಕ್ಕ ಒಂದು ಹಳ್ಳಿಯಲ್ಲಿ ಗಾಡಿ ನಿಲ್ಲಿಸಿ, ಸ್ವಲ್ಪ ಬಿಸಿನೀರು ಸಂಪಾದಿಸಿದೆವು. ನನ್ನ ಸ್ಥಿತಿ ನೋಡಿ ಗ್ರಾಮಸ್ಥನೊಬ್ಬನು ಬೇವಿನ ಕಷಾಯ ಕುಡಿದರೆ ಜ್ವರ ಇಳಿಯುತ್ತದೆ ಎಂದನು. ಬೇರೆ ಯಾವ ಔಷಧವೂ ನಮ್ಮ ಬಳಿ ಇರಲಿಲ್ಲವಾದ್ದರಿಂದ ಅವನು ಕೊಟ್ಟ ಬುದ್ಧಿವಾದವನ್ನೆ ಸ್ವೀಕರಿಸಬೇಕಾಯಿತು. ಅವನು ಬೇವಿನ ಎಲೆಯ ರಸ ಮಾಡಿಕೊಂಡು ಬಂದು, ಬಿಸಿನೀರಿನೊಡನೆ ಅದನ್ನು ಕುಡಿಯಲು ಕೊಟ್ಟನು. ಉಳಿದ ಸಾಧುಗಳು ಸ್ವಲ್ಪ ಅವಲಕ್ಕಿ ಕೊಂಡು ತಿಂದು ತಮ್ಮ ಊಟ ಪೂರೈಇದರು. ಆಮೇಲೆ ಪಯಣ ಮುಂಬರಿಸಿದೆವು. ನನ್ನ ಜ್ವರ ಸ್ವಲ್ಪವೂ ಇಳಿಯಲಿಲ್ಲ. ಆರಾಮಭಾಗನ್ನು ತಲುಪಿದ ಮೇಲೆ ಒಬ್ಬ ಡಾಕ್ಟರನ್ನು ಕರೆತಂದರು. ಅವರು ಪರೀಕ್ಷಿಸಿ ರೋಗ ಮಲೇರಿಯಾ ಎಂದರು. ಅವರ ರೋಗವಿಧಾನವನ್ನು ಕೇಳಿ ನಾನು ಆಶ್ಚರ್ಯಚಕಿತನಾದೆ. ನನಗೆ ಮಲೇರಿಯಾ ಅಂಟಿದುದಾದರೂ ಎಲ್ಲಿಂದ? ಕಳೆದ ಹತ್ತು ಹದಿನೈದು ವರ್ಷಗಳಿಂದ ನನಗೆ ಅಂತಹ ಜ್ವರವೇನೂ ಬಂದಿರಲಿಲ್ಲ. ಚಿಕ್ಕಂದಿನನಲ್ಲೇನೊ ನನಗೆ ಮಲೇರಿಯಾ ಇತ್ತು. ಆ ಕಾಯಿಲೆ ಬಂದು ಹೋದ ಮೇಲೆ ನಾನು ಯಾವಾಗಲೂ ಬಾರಾಸಾತ್‌ನ (ಮಹಾಪುರುಷಜಿ ಹುಟ್ಟೂರು) ಹೊರಗೆ ಇರುತ್ತಿದ್ದೆ. ಗುರುಮಹಾರಾಜರನ್ನು ಸಂಧಿಸುವ ಪೂರ್ವದಲ್ಲಿ ಬಾರಾಸಾತ್‌ನಲ್ಲಿ ನನಗೊಮ್ಮೆ ಭಯಂಕರ ಮಲೇರಿಯಾ ಹಿಡಿದಿತ್ತು. ಸ್ವಲ್ಪ ಸ್ವಲ್ಪ ಸುಧಾರಿಸಿದ ಮೇಲೆ ಹವಾ ಬದಲಾವಣೆಗಾಗಿ ಭಾರತದ ವಾಯವ್ಯ ದಿಕ್ಕಿನ ಪ್ರದೇಶಗಳಿಗೆ ಹೋದೆ. ಆಗ ನನಗೆ ಹದಿನಾಲ್ಕೊ ಹದಿನೈದೊ ವರ್ಷ. ಅನಂತರ ನಾನು ಬಾರಾಸಾತ್‌ಗೆ ಹೋಗುತ್ತಲೆ ಇರಲಿಲ್ಲ; ಅದರಲ್ಲಿಯೂ ಮಲೇರಿಯಾ ಸಮಯದಲ್ಲಂತೂ ಅತ್ತಕಡೆ ಮುಖ ಹಾಕುತ್ತಿರಲಿಲ್ಲ. ಡಾಕ್ಟರ್‌ ಮಲೇರಿಯಾ ಎಂದು ಹೇಳಲು, ತಾಲಪುಕುರ ಕೆರೆಯಲ್ಲಿ ಬಹಳ ಹೊತ್ತು ಸ್ನಾನ ಮಾಡಿದುದರ ಫಲವಾಗಿ ನನ್ನ ದೇಹದಲ್ಲಿ ಸುಪ್ತಸ್ಥಿತಿಯಲ್ಲಿದ್ದ ಮಲೇರಿಯಾ ರೋಗಾಣುಗಳು ಚೇತರಿಸಿಕೊಂಡಿರಬೇಕೆಂದು ನಿರ್ಣಯಿಸಿದೆವು. ಅದೇನೆ ಇರಲಿ ನನಗೆ ಕಾಯಿಲೆ ಗುಣವಾಗುವತನಕ ಆರಾಮಬಾಗಿನಲ್ಲಿಯೆ ಉಳಿಯಬೇಕಾಯಿತು. ಆಮೇಲೆಯೆ ನಾವು ಕಲ್ಕತ್ತಕ್ಕೆ ಹಿಂತಿರುಗಿದ್ದು.”

* * *