ಬೇಲೂರು ಮಠ
ಆಗಸ್ಟ್, ೧೯೨೯

ಇವತ್ತು ಸ್ವಾಮಿ ಯ…..ಮದರಾಸಿಗೆ ಹಿಂತಿರುಗಿ ಹೋಗುತ್ತಾರೆ. ಆದ್ದರಿಂದ ಅವರು ಬೆಳಿಗ್ಗೆ ಬಂದು ಪ್ರಣಾಮ ಸಲ್ಲಿಸಿದಾಗ ಮಹಾಪುರುಷಜಿ ಹೇಳಿದರು : “ಓಹೋ ಯ…. ಇವತ್ತೆ ಹೊರಡುವುದೊ? ಈ ಮಠದಲ್ಲಿ ನೀವು ಬಹಳ ದಿನ ಇದ್ದಿರಿ. ಒಳ್ಳೆಯದು, ಹೋಗಿ ಬನ್ನಿ. ನೀವು ಪ್ರಭುವಿನ ಭಕ್ತರು; ನೀವು ಹೋದೆಡೆಗಳಲ್ಲೆಲ್ಲ ಶ್ರೀಗುರು ನಿಮ್ಮೊಡನೆ ಇರುತ್ತಾರೆ. ಆತನ ಭಕ್ತರು ಎಲ್ಲಿಯೆ ಇರಲಿ, ಆತನು ಅವರ ಸಂಗಡವೆ ಇರುತ್ತಾನೆ.”

ಬೇರೊಂದು ಸಮಯದಲ್ಲಿ, ಮಠದ ಸಾಧು ಒಬ್ಬರೊಡನೆ, ಮಠಕ್ಕೂ ಮಿಷನ್ನಿಗೂ ಪ್ರಾಪ್ತವಾದ ಅನೇಕ ಗುರುತ್ವಪೂರ್ಣ ಘಟನೆಗಳ ಸಂಬಂಧವಾಗಿ ಜಿಜ್ಞಾಪಿಸುತ್ತಾ, ಠಾಕೂರರ ಸಂಘಶಕ್ತಿಯನ್ನು ಕುರಿತು ಮಹಾಪುರುಷಜಿ ಹೇಳಿದರು; “ಸತ್ಯಮೇವ ಜಯತೇ ನಾನೃತಮ್‌; ಅಯ್ಯಾ, ಸತ್ಯಕ್ಕೆ ಯಾವಾಗಲೂ ತುದಿಯಲ್ಲಿ ಜಯ ಲಭಿಸಿದೆ, ಮುಂದೆಯೂ ಲಭಿಸುತ್ತದೆ. ಇದೆಲ್ಲ ಐಶೀಶಕ್ತಿಯ ಖೇಲನ. ಠಾಕೂರರು ಸ್ಥೂಲ ಶರೀರವನ್ನು ಪರಿತ್ಯಾಗ ಮಾಡಿದ ಮೇಲೆ ಈ ಸಂಘದಲ್ಲಿಯೆ ನೆಲೆಸಿದ್ದಾರೆ, ಹಾಗೆಂದು ಸ್ವಾಮೀಜಿಯೆ ಹೇಳಿದ್ದಾರೆ, ಸಂಘ ರೂಪದಲ್ಲಿ ಶ್ರೀ ಠಾಕೂರರಿದ್ದಾರೆ ಎಂದು. ಈಗ ನೀವೆಲ್ಲ ದೂರ ದೂರ ಕೇಂದ್ರಗಳಿಂದ ಬಂದು ಇಲ್ಲಿ ನೆರೆದಿದ್ದೀರಿ: ಅದರ ಫಲ ಮಹತ್ ಶುಭದಲ್ಲಿ ಪರಿಣಮಿಸುತ್ತದೆ; ಮುಂದೆಯೂ ಅವರೆ ರಕ್ಷಿಸುತ್ತಾರೆ. ಆದರೂ ಆಗಾಗ್ಗೆ ಬುಡಭದ್ರ ಪರೀಕ್ಷೆ ಮಾಡಲು ಸ್ವಲ್ಪ ಅಲುಗಾಡಿಸಿ ನೋಡುತ್ತಾರೆ. ಸ್ವಯಂ ಸ್ವಾಮಿಜಿಯೆ ಠಾಕೂರರ ನಿರ್ದೇಶನದಂತೆ ಈ ಸಂಘದ ಸಂಘಟನೆ ಮಾಡಿದ್ದಾರೆ. ಅವರ ಉದಾರ ಧರ್ಮ ಭಾವಗಳನ್ನು ಸಮಗ್ರ ಜಗತ್ತಿನಲ್ಲಿ ಪ್ರಚಾರ ಮಾಡುವ ಕರ್ತವ್ಯಬಾರವನ್ನು ಈ ಸಂಘದ ಮೇಲೆ ಹೊರಿಸಿದ್ದಾರೆ. ಯಾರೂ ಈ ಸಂಘಕ್ಕೆ ಅನಿಷ್ಟವುಂಟುಮಾಡಲು ಸಮರ್ಥರಾಗುವುದಿಲ್ಲ. ಈ ಮಾತು ನಿಶ್ಚಿತ ಎಂದು ತಿಳಿ. ಒಂದು ವೇಳೆ ಯಾರಾದರೂ ಯಾವಾಗಲಾದರೂ ಅಂತಹ ದುರ್ಮನಸ್ಸಿನಿಂದ ಬಂದರೂ ಠಾಕೂರರು ಅವರ ಮನಸ್ಸನ್ನೆ ಪರಿವರ್ತಿಸುತ್ತಾರೆ. ನಾನಾ ಪ್ರತಿಕೂಲ ಸನ್ನಿವೇಶಗಳಿಂದಾದರೂ ಎಲ್ಲರಿಗೂ ತಿಳಿಯುವಂತೆ ಮಾಡುತ್ತಾರೆ, ನಿಜ ಏನು ಎಂಬುದನ್ನು. ಕ್ಷುದ್ರಬುದ್ಧಿಯ ಮಾನವ ತಪ್ಪು ಮಾಡುವುದು ಅಸಹಜವೇನಲ್ಲ; ಆದರೆ ಶ್ರೀಗುರು ಸರ್ವರಿಗೂ ಕೃಪೆ ಮಾಡಿಯೆ ಮಾಡುತ್ತಾನೆ. ಪಾಪಿಯೊ ತಾಪಿಯೊ ಯಾರೂ ಆತನ ಕೃಪೆಯಿಂದ ವಂಚಿತರಾಗುವುದಿಲ್ಲ. ಸ್ವಾಮೀಜಿ ಹೇಳಿಲ್ಲವೆ- ‘ಆಚಂಡಾಲಾಪ್ರತಿಹತರಯೋ ಯಸ್ಯ ಪ್ರೇಮಪ್ರವಾಹಃ’ ಎಂದು. ಆತನ ಪ್ರೇಮಪ್ರವಾಹ ಅತ್ಯಂತ ನೀಚನಾದ ಚಂಡಾಲನವರೆಗೂ ಅಪ್ರತಿಹತವಾಗಿ ಹರಿಯುತ್ತದೆ, ಆತನು ಎಲ್ಲರನ್ನೂ ಕ್ಷಮಿಸುತ್ತಾನೆ. ಚಂಡಾಲರಿಗೂ ಕೃಪೆದೋರುವ ಸಲುವಾಗಿಯೆ ಆತನು ಶ್ರೀರಾಮಕೃಷ್ಣ ದೇಹಧಾರಣೆ ಮಾಡಿ ಬಂದದ್ದು. ಯೇಸುಕ್ರಿಸ್ತನ ವಿಚಾರವಾಗಿ ನೀನು ಓದಿರಬಹುದು, ಯಾರು ತನ್ನನ್ನು ಶಿಲುಬೆಗಿಟ್ಟು ಮೊಳೆಹೊಡೆದು ಕೊಂದರೊ ಅವರಿಗಾಗಿಯೆ ಆತನು ಪರಮಪಿತನಿಗೆ ಕಾತರಪ್ರಾಣನಾಗಿ ಕ್ಷಮಾ ಭಿಕ್ಷೆ ನೀಡಲು ಪ್ರಾರ್ಥನೆ ಮಾಡಿದರು: ‘ಪ್ರಭು, ಇವರನ್ನು ಕ್ಷಮಿಸು, ತಾವು ಏನು ಅನ್ಯಾಯ ಮಾಡುತ್ತಿದ್ದೇವೆ ಎಂಬುದನ್ನೆ ಇವರು ಅರಿಯದವರಾಗಿದ್ದಾರೆ.’ ಆ ಪರಬ್ರಹ್ಮನ ಇಂದು ರಾಮಕೃಷ್ಣರೂಪದಲ್ಲಿ ಬಂದಿದ್ದಾನೆ. ನಾವೆ ಸ್ವಚಕ್ಷುಗಳಿಂದಲೆ ಕಂಡಿದ್ದೇವೆ; ಆತನದು ಎಂತಹ ಅಸೀಮ ದಯೆ, ಎಂತಹ ಅದ್ಭುತ ಕ್ಷಮೆ! ಇನ್ನು ಶ್ರೀಮಾತೆಯೊ? ಅವರಿಗೆ ಎಣೆಯೆ ಇಲ್ಲ, ಸಾಕ್ಷಾತ್ ಜಗದಂಬೆ! ನಾನೆ ಕೇಳಿದ್ದೇನೆ, ಒಮ್ಮೆ ಒಬ್ಬರು ಮಹಾಮಾತೆಯ ಬಳಿಗೆ ಬಂದು, ಯಾರೊ ಒಬ್ಬರ ಹೆಸರನ್ನು ಹೇಳಿ, ಕಿವಿಯಿಂದ ಕೇಳಬಾರದ ಅತ್ಯಂತ ಹೀನವಾದ ಅಸಹ್ಯ ಅಪರಾಧ ಮಾಡಿದುದಾಗಿ ದೂರು ಹೇಳಿದರಂತೆ. ತಾಯಿ ತುಂಬ ಗಂಭೀರಭಾವದಿಂದ ಎಲ್ಲವನ್ನೂ ಆಲಿಸಿದ ಮೇಲೆ, ಆ ವ್ಯಕ್ತಿ ಮತ್ತೆ ಅತ್ಯಂತ ಅನುರೋಧ ಪೂರ್ವಕವಾಗಿ  ‘ನೀವು ಆ ವ್ಯಕ್ತಿಯನ್ನು ಕರೆಯಿಸಿ ಸ್ವಲ್ಪ ಛೀಮಾರಿ ಮಾಡಿದರೆ ಒಳ್ಳೆಯದಾಗುತ್ತದೆ’ ಎಂದು ಒತ್ತಾಯ ಮಾಡಿದರಂತೆ. ಅದಕ್ಕೆ ಶ್ರೀಮಾತೆ ‘ಬಾಬಾ, ನೀನೇನೋ ಹಾಗೆ ಹೇಳುತ್ತಿ. ಆದರೆ ನಾನು ಅವನ ತಾಯಿ. ನನ್ನ ಹತ್ತಿರ ಎಲ್ಲರೂ ಸಮಾನರೆ. ಅವನು ನಿನ್ನ ದೃಷ್ಟಿಯಿಂದೇನೊ ಮಹಾ ಅಪರಾಧಿ ಮತ್ತು ಘೃಣ್ಯನೂ ಆಗಿದ್ದಾನೆ. ಆದರೆ ತಾಯಿಗೆ ಅವನು ಅಂಥವನೇನೂ ಆಗಿಲ್ಲ. ಅವನ ತಾಯಿಯಾಗಿ ಅವನನ್ನು ದ್ವೇಷಿಸಲು ನನಗೆ ಸಾಧ್ಯವಿಲ್ಲ.’ ಅಂಥ ಕ್ಷಮೆ ಶ್ರೀಮಾತೆಯದು! ಇದೆಲ್ಲ ಇನ್ನೂ ನಮ್ಮ ಕಣ್ಣಮುಂದೆಯೆ ಇದೆ. ನಾವೂ ಕೂಡ ಅದನ್ನೆ ಕಲಿತಿದ್ದೇವೆ. ಶ್ರೀಗುರು ಶ್ರೀಮಾತೆ ಮತ್ತು ಸ್ವಾಮೀಜಿ ಇವರ ಜೀವನದಿಂದಲೆ ನಾವೂ ಪಾಠ ಕಲಿತಿದ್ದೇವೆ. ಹೇಳುತ್ತಾ ಹೇಳುತ್ತಾ ಹಠಾತ್ತನೆ ಅವರ ಕೊರಳ ಸೆರೆ ಬಿಗಿದುಬಿಟ್ಟಿತು; ಕಂಠಸ್ವರ ಗದ್ಗದವಾದಂತಾಗಿ ಮುಂದೆ ಮಾತು ಹೊರಡಲಿಲ್ಲ. ಸ್ವಲ್ಪ ಹೊತ್ತು ಸುಮ್ಮನಿದ್ದು ತಮಗೆ ತಾವೆ ಹಾಡಿಕೊಂಡರು:

ಗಾಯಿಯೆ ಜಗಪತಿ ಜಗವಂದನ,
ಬ್ರಹ್ಮಸನಾತನ ಪಾತಕನಾಶನ!
ಏಕ ದೇವ ತ್ರಿಭುವನ ಪರಿಪಾಲನ,
ಕೃಪಾಸಿಂಧು ಸುಂದರ ಭವನಾಯಕ ||

ಸೇವಕ ಮನೋಮುದ ಮಂಗಲದಾತಾ
ವಿದ್ಯಾಸಂಪದ ಬುದ್ಧಿ ವಿಧಾತ |
ಯಾಚೇ ಚರಣ ಭರತ ಕರಜೋಡೇ
ವಿಗತ ಪ್ರೇಮಸುಧಾ ಚಿತ್ತಚಕೋರೇ ||

ಸ್ತುತಿಸಿ ಜಗತ್ತು ವಂದಿಸುವ ಜಗತ್‌ಪತಿಯ,
ಬ್ರಹ್ಮಸನಾತನ ಪಾತಕನಾಶನ
ಏಕ ದೇವನವನು ತ್ರಿಭುವನ ಪರಿಪಾಲಕನು;
ಕೃಪಾಸಿಂಧು ಸುಂದರೆ ಭವನಾಯಕನವನು;
ಸೇವಕ ಮನೋಜನ ಮುದನವನು;
ಮಂಗಲದಾತನವನು;
ವಿದ್ಯಾ ಸಂಪದ ಬುದ್ಧಿ ವಿಧಾತನವನು;
ಚರಣಕೆ ಕೈ ಜೋಡಿಸಿ ಭಕ್ತನು ಬೇಡುವನು;
‘ನಿನ್ನ ಪ್ರೇಮಸುಧೆಯಿಂದೆನ್ನ ಚಿತ್ತಚಕೋರವನು ತಣಿಸು
ದೇವ ದೇವ!’

* * *