ಬೇಲೂರು ಮಠ
ನವೆಂಬರ್ , ೧೯೨೯

ಕಳೆದ ರಾತ್ರಿ ಮಠದಲ್ಲಿ ತುಂಬ ಸಂಭ್ರಮದೊಡನೆ ಶ್ರೀ ಕಾಳೀ ಪೂಜೆ ಆಚರಿಸಲ್ಪಟ್ಟಿತು. ಇರುಳೆಲ್ಲ ಪೂಜೆ, ಪಠನೆ, ಭಜನೆ, ಕೀರ್ತನೆಗಳಿಂದ ಮಠ ಮುಖರಿತವಾಗಿ ಹೋಗಿತ್ತು. ಕಲ್ಕತ್ತೆಯಿಂದಲೂ ಅನೇಕ ಸಾಧುಗಳೂ ಭಕ್ತರೂ ಮಠಕ್ಕೆ ಆಗಮಿಸಿ ಪೂಜೆಯ ಆನಂದೋತ್ಸವದಲ್ಲಿ ಭಾಗಿಗಳಾಗಿದ್ದರು. ತಾಯಿಯ ಪೂಜೆ ಸುಮಾರು ರಾತ್ರಿ ೯ ಗಂಟೆಗೆ ಪ್ರಾರಂಭವಾಗಿ ಬೆಳಿಗ್ಗೆ ಐದೂ ಮುಕ್ಕಾಲು ಗಂಟೆಗೆ ಕೊನೆಮುಟ್ಟಿತು. ಪೂಜಾಂತ್ಯದಲ್ಲಿ ಅದೇ ಹೋಮಾಗ್ನಿಯಲ್ಲಿ ಸಪ್ತಶತೀ ಹೋಮವೂ ನಡೆಯಿತು.

ಇಡೀ ರಾತ್ರಿ ಮಹಾಪುರುಷಜಿಯೂ ಆರಾಧನೆಯ ಆನಂದಲ್ಲಿ ಮುಳುಗಿ ಹೋಗಿದ್ದರು. ರಾತ್ರಿ ಅನೇಕ ಸಾರಿ ತಮ್ಮ ಸೇವಾನುಚರರನ್ನು ಕಳುಹಿಸಿ ಶ್ರೀ ಪೂಜೆಯ ವಿವರಗಳನ್ನೂ, ಎಲ್ಲಿಯವರೆಗೆ ಬಂದಿದೆ ಏನಾಗಿದೆ ಎಂಬುದನ್ನೂ ತಿಳಿದುಕೊಳ್ಳುತ್ತಿದ್ದರು. ಕಾಳೀಕೀರ್ತನೆ ಪ್ರಾರಂಭವಾದಾಗ ಅವರೂ ಕೂಡ ಕೀರ್ತನಕಾರರೊಡನೆ ತಮ್ಮ ಧ್ವನಿಗೂಡಿಸಿ ಹಾಡತೊಡಗಿದರು. ಕೀರ್ತನಕಾರರು ‘ಗಯಾ ಗಂಗಾ ಪ್ರಭಾಸಾದಿ! ಕಾಶೀ ಕಾಂಚೀ ಯಾರಿಗೆ ಬೇಕು?|| ಕಾಲೀ ಕಾಲೀ ಕಾಲೀ ಎಂದು| ಕೊನೆಯುಸಿರೆಳೆದರೆ ಸಾಕೇಸಾಕು||’ ಎಂಬ ಹಾಡನ್ನು ಹಾಡತೊಡಗಲು ಮಹಾಪುರಷಜಿ  ‘ಆಹಾ! ಈ ಹಾಡನ್ನು ಠಾಕೂರರು ಪದೇ ಪದೇ ಹಾಡುತ್ತಿದ್ದರು!’ ಎಂದು ಹೇಳಿ, ಕೀರ್ತನಕಾರರು ಜೊತೆಜೊತೆಗೇ ತಾವೂ ಇಡೀ ಕೀರ್ತನೆಯನ್ನು ಹಾಡಿದರು.

ಬೆಳಿಗ್ಗೆ ಮಹಾಪುರುಷಜಿ ತಮ್ಮ ಕೊಠಡಿಯಲ್ಲಿ ಕುಳಿತಿದ್ದರು. ಸಾಧುಗಳೂ ಭಕ್ತರೂ ಅವರಿಗೆ ಪ್ರಣಾಮ ಸಲ್ಲಿಸುವ ಸಲುವಾಗಿ ಅವರಿದ್ದಲ್ಲಿಗೆ ಒಬ್ಬೊಬ್ಬರಾಗಿ ಬಂದು ಸೇರಿದರು. ಕಳೆದ ಇರುಳಿನ ಪೂಜೆಯ ಆನಂದದಲ್ಲಿ ಅವರಿನ್ನೂ ಮತ್ತರಾದಂತಿದ್ದರು. ಅವರ ಪ್ರತಿಯೊಂದು ನುಡಿಯಲ್ಲಿಯೂ ಪ್ರತಿಯೊಂದು ನಡೆಯಲ್ಲಿಯೂ ಆ ಆನಂದದ ಅಭಿವ್ಯಕ್ತಿ ಕಾಣಬರುತ್ತಿತ್ತು. ತುಸು ಹೊತ್ತಿನ ಮೇಲೆ ಅವರಿಗಾಗಿ ತಾಯಿಯ ಪೂಜೆಯ ಪ್ರಸಾದಾದಿಗಳನ್ನು ತಂದರು. ಪ್ರಸಾದ ನೋಡಿ ಭಾರಿ ಹರ್ಷಿತರಾದರು. ನಗುನಗುತ್ತಾ ಹೇಳಿದರು: ‘ಇದರಲ್ಲಿ ಒಂದು ಚೂರನ್ನೂ ನಾನು ತೆಗೆದುಕೊಳ್ಳಲಾರೆ. ದೃಷ್ಟಿಭೋಗದಿಂದಲೇ ತೃಪ್ತಿಪಡಬೇಕಾಗಿದೆ’ ಎನ್ನುತ್ತಾ ಅಲ್ಲಿದ್ದ ಬೇರೆಬೇರೆ ಪದಾರ್ಥಗಳನ್ನು ಒಂದೊಂದು ಸಾರಿ ತಮ್ಮ ಅಂಗುಲಿಯ ಅಗ್ರಭಾಗದಿಂದ ಮುಟ್ಟಿ ಮೊದಲು ಮಸ್ತಕದ ಮೇಲೆಯೂ ಆಮೇಲೆ ಜಿಹ್ವೆಯ ಮೇಲೆಯೂ ಇಟ್ಟುಕೊಂಡು ಹೇಳತೊಡಗಿದರು: ‘ಅಬ್ಬ, ಭೇಷ್! ಬಹಳ ಚೆನ್ನಾಗಿದೆ! ತಾಯಿಗೆ ಸೊಗಸಾದ ನೈವೇದ್ಯವಾಗಿದೆ!’ ಸೇವಕನು ಪ್ರಸಾದದ ಥಾಲಿಯನ್ನು ಅವರ ಎದುರಿನಿಂದ ತೆಗೆದುಕೊಂಡು ಹೋಗುತ್ತಿದ್ದಾಗ  ‘ನೋಡು, ಮಹಾಪ್ರಸಾದದಲ್ಲಿ ‌ಸ್ವಲ್ಪವನ್ನು ನಾಯಿಗಳಿಗಾಗಿ ತೆಗೆದಿಡಬೇಕು, ಅವು ಯಾರ ನೆನಪಿಗೂ ಬರುವುದಿಲ್ಲ, ಪಾಪ! ಅವೂ ಏನನ್ನಾದರೂ ನಿರೀಕ್ಷಿಸುತ್ತವೆ. ಅವಕ್ಕೆ ಎಷ್ಟು ಆನಂದವಾಗುತ್ತದೆ!’ ಎಂದು ಹೇಳುತ್ತಾ  ‘ಕೇಲೋ! ಕೇಲೋ!’ ಎಂದು ತಮ್ಮ ನಾಯಿಯ ಹೆಸರು ಹಿಡಿದು ಕರೆಯತೊಡಗಿದರು.

ಕಳೆದ ರಾತ್ರಿಯ ಪೂಜೆಯ ಪ್ರಸ್ತಾಪ ಬಂದಾಗ ಹೇಳಿದರು : “ಆಹಾ! ಈಗಲೂ ಮಠವೆಲ್ಲ ಹೋಮದ ಗಂಧದಿಂದ ತುಂಬಿಹೋದಂತಿದೆ. ಹೋಮದ ಸುವಾಸನೆ ಎಲ್ಲಿಯವರೆಗೆ ಹೋಗುತ್ತದೆಯೊ ಅಲ್ಲಿಯವರೆಗೆ ಎಲ್ಲವೂ ಪವಿತ್ರವಾಗುತ್ತವೆ. ಆಃ ಎಂತಹ ಸೊಂಪಾದ ಕಂಪು!” ಹೀಗೆ ಹೇಳುತ್ತಾ ತಮ್ಮ ಮೂಗಿನಿಂದ ಆ ಗಂಧವನ್ನು ದೀರ್ಘ ಎಳೆದು ಆಘ್ರಾಣಿಸತೊಡಗಿದರು.

ಸಂನ್ಯಾಸಿಯೊಬ್ಬರು ಕಳೆದಿರುಳ ಪೂಜೆಯ ಪ್ರಸ್ತಾಪವೆತ್ತಿ ಹೇಳಿದರು : “ಮಹಾರಾಜ್, ನಿನ್ನೆ ತುಂಬ ಆನಂದಮಯವಾಯಿತು. ಅಂಥ ಆನಂದ ಕಾಣದೆ ಬಹಳ ದಿನಗಳಾಗಿತ್ತು- ಭಜನೆಯೂ ತುಂಬ ಚೆನ್ನಾಗಿ ನಡೆಯಿತು, ರಾತ್ರಿ ಸುಮಾರು ಮೂರು ಗಂಟೆಯವರೆಗೆ.”

ಮಹಾಪುರುಷಜಿ : “ಯಾಕಾಗಬಾರದು? ತಾಯಿಯದಲ್ಲವೆ! ತಾಯಿ ಕೃಪೆಮಾಡಿ ಎಲ್ಲರಿಗೂ ಮಹದಾನಂದ ಕೊಟ್ಟಿದ್ದಾಳೆ. ತಾಯಿ ಸಾಕ್ಷಾತ್ ಆವಿರ್ಭೂತೆಯಾಗಿ ಪೂಜೆಯನ್ನು ಸ್ವೀಕರಿಸಿದ್ದಾಳೆ. ಅಲ್ಲದೆ ಈ ಅಮ್ಮ ಬೇರೆಯ ಸಾಧಾರಣ ಅಮ್ಮನಲ್ಲ; ಅವಳು ಠಾಕೂರರೆ ಪೂಜಿಸಿರುವ  ‘ಅಮ್ಮ ‘. ಠಾಕೂರರು ತಾವೆ ಕಾಳೀಮಾತೆಗೆ ಪೂಜೆ ಮಾಡಿದರು. ವೇದ ಯಾರನ್ನು  ‘ಸತ್ಯಂ ಜ್ಞಾನಮನಂತಂ ಬ್ರಹ್ಮ’ ಎಂದು ವರ್ಣಿಸಿದೆಯೊ, ದ್ವೈತವಾದಿಗಳು ಯಾರನ್ನು ಈಶ್ವರ ಎಂದು ಕರೆಯುತ್ತಾರೊ, ಶಾಕ್ತರು ಯಾರನ್ನು ಶಕ್ತಿ ಎಂದು ಪೂಜಿಸುತ್ತಾರೊ, ವೈಷ್ಣವರಿಗೆ ಯಾರು ವಿಷ್ಣು ಆಗಿದ್ದಾನೊ, ಶೈವರಿಗೆ ಯಾರು ಶಿವ ಆಗಿದ್ದಾನೊ, ಅದನ್ನೇ ಠಾಕೂರರು  ‘ಅಮ್ಮ’ ಎಂದು ಕರೆಯುತ್ತಿದ್ದರು. ಮತ್ತು ಆ ಮಾತೆಯನ್ನೆ ಪೂಜೆ ಮಾಡುವುದರಿಂದಲೆ ಠಾಕೂರರಿಗೆ ಸರ್ವ ವಿಧವಾದ ಅನುಭೂತಿಗಳೂ ಉಂಟಾದದ್ದು. ಅವರು ಅದ್ವೈತ, ದ್ವೈತ, ವಿಶಿಷ್ಟಾದ್ವೈತ – ಇತ್ಯಾದಿ ಸರ್ವ ಭಾವಗಳಲ್ಲಿಯೂ ಸಿದ್ಧಿಲಾಭ ಪಡೆದರು. ಇಲ್ಲಿ ನಡೆದ ಪೂಜೆಗೆ ಎಣೆಯಾಗಿ ಇನ್ನೆಲ್ಲಿ ನಡೆದ ಯಾವ ಪೂಜೆಯೂ ಇರುವುದಿಲ್ಲ. ಇಲ್ಲಿ ನಡೆಯುವುದು ಸಾಧುಭಕ್ತರ ಭಕ್ತಿಯ ಪೂಜೆ. ಯಾರಿಗೆ ದುಡ್ಡಿದೆಯೊ ಅವರು ನಾನಾ ಪರಿಯಿಂದ ಸಾವಿರ ಸಾವಿರಗಟ್ಟಲೆ ಖರ್ಚುಮಾಡಿ ಪೂಜೆ ಮಾಡಲು ಸಮರ್ಥರಾಗಿದ್ದಾರೆ. ಆದರೆ ಇಲ್ಲಿಯಂತೆ ಭಕ್ತಿಭಾವದ ಪೂಜೆ ಇನ್ನೆಲ್ಲಿಯೂ ನಡೆಯುವುದಿಲ್ಲ. ಇಲ್ಲಿ ಶುದ್ಧಸತ್ವದ ಸಾಧುಗಳೂ ಬ್ರಹ್ಮಚಾರಿಗಳೂ ತಮ್ಮ ಪ್ರಾಣಸರ್ವಸ್ವದಿಂದಲೂ ಪೂಜೆ ಮಾಡುತ್ತಾರೆ-ಎಂಥ ಆಂತರಿಕತೆ, ಎಂಥ ಶ್ರದ್ಧೆ ! ಆದ್ದರಿಂದಲೆ ತಾಯಿಗೆ ಅಷ್ಟೊಂದು ಪ್ರೀತಿ. ಬಹುಮಟ್ಟಿಗೆ ಜನರು ನಾನಾ ಕಾಮನೆಗಳನ್ನು ಇಟ್ಟುಕೊಂಡೆ ಪೂಜೆ ಮಾಡುತ್ತಾರೆ; ನಿಷ್ಕಾಮ ಪೂಜೆ, ಭಕ್ತಿ ಪೂಜೆ ಮಾಡುವವರೆಷ್ಟು ಮಂದಿ? ಇಲ್ಲಿ ಯಾರಿಗೂ ಯಾವ ಕಾಮನೆಯೂ ಇಲ್ಲ, ಯಾವ ವಾಸನೆಯೂ ಇಲ್ಲ, ಬರಿಯ ಪ್ರೀತಿಯ ಸಲುವಾಗಿಯೆ ಇಲ್ಲಿ ನಡೆಯುತ್ತದೆ. ಅದರ ಜೊತೆಗೆ ಎಷ್ಟೊಂದು ಜಪ, ಧ್ಯಾನ ಭಜನೆ ಎಲ್ಲ ಜರುಗುತ್ತದೆ; ಅಲ್ಲದೆ ಶುದ್ಧ ಸಾತ್ವಿಕ ಪವಿತ್ರ ಸಾಧು ಬ್ರಹ್ಮಚಾರಿಗಳೆ. ಎಲ್ಲರೂ ತಮ್ಮ ತಾಯಿಯ ಪೂಜೆ ಆಯೋಜನೆಯನ್ನು ತಾವೆ ನೆರವೇರಿಸುತ್ತಾರೆ. ಈ ರೀತಿ, ಅಯ್ಯಾ, ಇನ್ನೆಲ್ಲಿಯೂ ನಡೆಯುವುದಿಲ್ಲ. ಇಂತಹ ಸರ್ವಾಂಗ ಸುಂದರ ಸಾತ್ತ್ವಿಕ ಪೂಜೆ ಜಗತ್ತಿನಲ್ಲಿ ಅತಿವಿರಳ.”

ಆಗಲೆ ಬೆಳಗ್ಗೆ ಸುಮಾರು ಹತ್ತು ಗಂಟೆಯಾಗಿತ್ತು. ಸ್ತ್ರೀ ಭಕ್ತರೊಬ್ಬರು ಬಂದರು. ಅವರು ಮಹಾಪುರುಷಜಿಯಿಂದಲೆ ದೀಕ್ಷೆ ತೆಗೆದುಕೊಂಡವರಾಗಿದ್ದರು. ಅವರು ಚರಣದಲ್ಲಿ ಭಕ್ತಿಭರದಿಂದ ಪ್ರಣತರಾಗಿ, ಕುಶಲ ಪ್ರಶ್ನೆ ಕೇಳಿದಾಗ ಮಹಾಪುರುಷಜಿ ಹೇಳಿದರು : “ಇಲ್ಲ, ತಾಯೀ, ಶರೀರ ಚೆನ್ನಾಗಿಲ್ಲ. ನಿಜ ಹೇಳುವುದಾದರೆ, ತುಂಬ ಕೆಟ್ಟಹೋಗಿದೆ. ದಿನದಿನಕ್ಕೂ ಹೆಚ್ಚು ಹೆಚ್ಚು ಕೆಡುವ ಕಡೆಗೇ ಸರಿಯುತ್ತಿದೆ. ಶರೀರಕ್ಕೂ ಒಂದು ಧರ್ಮ ಇದೆ ತಾನೆ? ಈ ದೇಹಕ್ಕೆ ವಯಸ್ಸೂ ಏನು ಕಡಿಮೆ ಆಗಿಲ್ಲ. ಇನ್ನು ಅದು ನಿಧಾನವಾಗಿ ನಾಶ ಹೊಂದುತ್ತದೆ.”

ಕಣ್ಣೀರು ತುಂಬಿ ಆ ಭಕ್ತೆ ಹೇಳಿದರು : “ತಂದೆ, ತಾವು ಹೊರಟುಹೋದರೆ ನಾವು ಇನ್ನು ಯಾರ ಹತ್ತಿರ ಹೋಗುವುದು? ನಮ್ಮ ಪ್ರಾಣದ ಹೊರೆಯನ್ನೆಲ್ಲ ಇಳಿಸುವುದಾದರೂ ಎಲ್ಲಿ?”

ಮಹಾಪುರುಷಜಿ : “ಏಕೆ, ತಾಯೀ! ಠಾಕೂರ್‌ಇದ್ದಾರೆ. ಅವರು ಇರುವುದಾದರೂ ನಿನ್ನ ಒಳಗೆ ಇದ್ದಾರೆ. ಯಾರು ನಿನ್ನ ಅಂತರಾತ್ಮವೆ ಆಗಿದ್ದಾರೊ ಅವರೇ ಎಲ್ಲರ ಪ್ರಾಣದ ಪ್ರಾಣ. ಅವರನ್ನೆ ಆಶ್ರಯಿಸು; ಅವರ ಹತ್ತಿರವೆ ಪ್ರಾರ್ಥನೆ ಮಾಡು; ಅವರು ನಿನ್ನ ಮನಸ್ಸಿಗೆ ಶಾಂತಿ ಕೊಡುತ್ತಾರೆ; ಎಲ್ಲ ಅಭಾವಗಳನ್ನೂ ಪೂರ್ಣಮಾಡಿಕೊಡುತ್ತಾರೆ. ಈ ದೇಹ ಒಂದು ದಿನ ಬಿದ್ದು ಹೋಗುವುದೆ. ಯಾರ ದೇಹವೂ ಚಿರಕಾಲ ಇರುವುದಿಲ್ಲ. ಪಾಂಚಭೌತಿಕ ದೇಹ ಪಂಚಭೂತಗಳಲ್ಲಿ ಸೇರಿಹೋಗುವುದೆ ನಿಶ್ಚಯ. ಆದ್ದರಿಂದ ಯಾರು ಚಿರಸತ್ಯವೊ, ನಿತ್ಯವೊ, ಅಪರಿಣಾಮಿಯೊ, ಸರ್ವ ಭೂತಗಳ ಚೈತನ್ಯಸ್ವರೂಪವೊ ಆ ಶ್ರೀ ಭಗವಂತನನ್ನೆ ಆಶ್ರಯಿಸು, ಆತನನ್ನೆ ಭದ್ರವಾಗಿ ಹಿಡಿ. ಹಾಗೆ ಮಾಡಿದರೆ ಈ ದುಸ್ತರವಾದ ಸಂಸಾರ ಸಮುದ್ರದಲ್ಲಿ ಮತ್ತೆ ಯಾವ ಭಯವೂ ಇರುವುದಿಲ್ಲ – ಅನಾಯಾಸವಾಗಿ ಪಾರಾಗಬಹುದು.”

ಭಕ್ತೆ : “ತಂದೆ, ತಾವು ನನ್ನ ಗುರು; ತಾವೆ ನನಗೆ ಕೃಪೆಮಾಡಿದ್ದೀರಿ. ನಮ್ಮ ಮನದಲ್ಲಿ ಎಷ್ಟು ತರಹದ ಪ್ರಶ್ನೆಗಳು, ಏನೇನು ಸಂದೇಹಗಳು, ಅದೆಷ್ಟು ನಿರಾಶೆಗಳು! ಅದನ್ನೆಲ್ಲ ಪರಿಹರಿಸುವವರು ಯಾರು? ಈಗಲಾದರೂ ನಾನು ತಮ್ಮ ಚರಣ ಪ್ರಾಂತಕ್ಕೆ ಬಂದಿದ್ದೇನೆ. -ಈಗ ನನ್ನ ಹೃದಯದಲ್ಲಿ ಎಂತಹ ಶಾಂತಿ, ಎಷ್ಟು ಆನಂದ! ಆದರೆ ತಾವು ಹೋದಮೇಲೆ ನಮ್ಮ ಪಾಡೇನಾಗುತ್ತದೆಯೊ ಎಂದು ಯೋಚಿಸಿದರೇ ನನಗೇ ಅಳು ಬರುತ್ತದೆ.”

ಮಹಾಪುರುಷಜಿ : “ನೋಡು, ತಾಯೀ, ನಾನು ಹೇಳುವುದನ್ನೆಲ್ಲ ಹೇಳಿದ್ದೇನೆ: ಗುರು ಏಕಮಾತ್ರ ಭಗವಾನ್. ಆತನೆ ಜಗದ್ಗುರು, ಸ್ವಯಂಪೂರ್ಣ ಬ್ರಹ್ಮ. ಭಗವಂತನು ಜೀವನ ಉದ್ಧಾರ ಮಾಡುವುದಕ್ಕಾಗಿ ನರದೇಹಧಾರಣ ಮಾಡಿ ರಾಮಕೃಷ್ಣ ರೂಪದಿಂದ ಬಂದಿದ್ದಾನೆ. ನಮ್ಮನ್ನೂ ಆತನ ಜೊತೆಯಲ್ಲಿ ಕರೆತಂದನು. ಶ್ರೀ ಠಾಕೂರರು ಐವತ್ತು ವರ್ಷಕಾಲ ನರದೇಹದಲ್ಲಿದ್ದುಕೊಂಡು ಬಹುಜನರಿಗೆ ಬಹುಭಾಗಗಳಲ್ಲಿ ಕೃಪೆ ಮಾಡಿ, ಸಮಗ್ರ ಜಗತ್ತಿನ ಎದುರಿಗೆ ಒಂದು ಅಲೌಕಿಕ ಜೀವನಾದರ್ಶವನ್ನು ಇಟ್ಟು ಹೋಗಿದ್ದಾರೆ. ಅವರ ಜೀವನದ ಸಾರೋಪದೇಶ- ಯಾವುದು ಅವರ ಸಮಗ್ರ ಜೀವನ ವ್ಯಾಪಿಯಾಗಿ, ಕಾಣಬರುತ್ತಿತ್ತೊ ಅದು – ಜಗತ್ ಅಸತ್ಯ, ಅನಿತ್ಯ; ಏಕಮಾತ್ರ ಭಗವಂತನೆ ಸತ್ಯ, ನಿತ್ಯ. ಈಗಲೂ ಅವರು ಸೂಕ್ಷ್ಮ ದೇಹದಲ್ಲಿದ್ದುಕೊಂಡು ಸೂಕ್ಷ್ಮ ಭಾವದಿಂದ ಜಗತ್ತಿನ ಹಿತಸಾಧನೆ ಮಾಡುತ್ತಿದ್ದಾರೆ. ಭಗವದ್‌ಭಕ್ತರು ಈಗಲೂ ವ್ಯಾಕುಲರಾಗಿ ಅವರನ್ನು ಕರೆದರೆ ಅವರಿಗೆ ದರ್ಶನ ನೀಡುತ್ತಾರೆ. ನಾನಾ ಭಾವಗಳಲ್ಲಿ ಕೃಪೆ ಮಾಡುತ್ತಾರೆ. ಈ ದೇಹ ನಷ್ಟವಾದ ಮೇಲೆ ನಾವೂ ಕೂಡ ಚಿನ್ಮಯ ದೇಹದಲ್ಲಿ ಭಗವಂತನ ಜೊತೆಯಲ್ಲಿ ಏಕವಾಗಿ ಇರುತ್ತೇವೆ. ನಾವು ಯಾರಿಗೆ ಆಶ್ರಯ ಕೊಟ್ಟಿದ್ದೇವೆಯೊ ಅವರು ಇಲ್ಲಿಯ ಮತ್ತು ಅಲ್ಲಿಯ ಎಲ್ಲ ಭಾರವನ್ನು ಹೊರುವ ಹೊಣೆ ಹೊತ್ತಿದ್ದೇವೆ. ಭಕ್ತರು ಪವಿತ್ರ ಹೃದಯದಿಂದ ವ್ಯಾಕುಲ ಭಾವದಿಂದ ಕರೆದರೆ ನಮ್ಮನ್ನು ಕಾಣಲೂಬಹುದು-ಈಗ ಇಲ್ಲಿ ನೀನು ನೋಡುತ್ತಿರುವುದಕ್ಕಿಂತ ಹೆಚ್ಚು ಜೀವಂತವಾಗಿ, ಮತ್ತಷ್ಟು ಸ್ಪಷ್ಟತರವಾಗಿ. ಆದ್ದರಿಂದ, ತಾಯೀ, ಈವೊತ್ತಿನಿಂದ ಮುಂದೆ ಒಳಗೆ ಕಾಣಲೂ ಪ್ರಯತ್ನಮಾಡು. ಈ ಹೊರಗೆ ಕಾಣುವುದು ಕೇಳುವುದು ಎಲ್ಲ ಎಷ್ಟು ದಿನದ್ದು?”

ಭಕ್ತೆ: “ಹಾಗೆಯೆ ಆಶೀರ್ವಾದ ಮಾಡಿ, ಬಾಬಾ, ಒಳಗೂ ಹೊರಗೂ ಯಾವಾಗಲೂ ತಮ್ಮ ದರ್ಶನ ಪಡೆಯಲು ಸಮರ್ಥೆಯಾಗುವಂತೆ.”

ಮಹಾಪುರುಷಜಿ: “ಅದೇನೋ ನಿನಗೆ ದೊರೆಯುತ್ತದೆ. ತೀವ್ರ ವ್ಯಾಕುಲತೆಯಿಂದ ಅಳುತ್ತಳುತ್ತಾ ಕರೆದರೆ ದರ್ಶನ ಲಭಿಸುತ್ತದೆ. ಆದರೆ ವ್ಯಾಕುಲತೆ ತೀವ್ರವಾದ ಹೊರತು ಅದು ಸಿದ್ಧಿಸುವುದಿಲ್ಲ.”

ಭಕ್ತೆ: “ಬಾಬಾ, ನಾನೊಂದು ಪ್ರಶ್ನೆ ಕೇಳಬೇಕಾಗಿದೆ. ಶಾಸ್ತ್ರ ಹೇಳುತ್ತದೆ, ಬ್ರಹ್ಮಚರ್ಯ ಪಾಲನೆ ಮಾಡದಿದ್ದರೆ ಭಗವಂತನ ದರ್ಶನವಾಗುವುದಿಲ್ಲ ಎಂದು. ಬ್ರಹ್ಮಚರ್ಯ ಪಾಲನೆ ಮಾಡದಿದ್ದರೆ ಚಿತ್ತ ಶುದ್ಧಿ ಉಂಟಾಗುವುದಿಲ್ಲ. ಈ ಬ್ರಹ್ಮಚರ್ಯ ವನ್ನು ಹೇಗೆ ಯಾವ ರೀತಿ ಪಾಲನೆ ಮಾಡಬೇಕು ಎಂಬುದನ್ನು ತಾವು ಕೃಪೆಯಿಟ್ಟು ತಿಳಿಸಬೇಕು. ತಿನ್ನೋದು ಉಣ್ಣೋದರಲ್ಲಿ ಏನಾದರೂ ಕಠಿಣ ವ್ರತಾಚರಣೆ ಮಾಡಬೇಕೆ?”

ಮಹಾಪುರುಷಜಿ: “ಇಲ್ಲ, ಇಲ್ಲ, ಅದೇನೂ ಬೇಕಾಗಿಲ್ಲ. ತಿನ್ನೋದು ಗಿನ್ನೋದರಲ್ಲಿ ಅಂತ ವಿಶೇಷ ವ್ರತ ಏನನ್ನೂ ಮಾಡಬೇಕಾಗಿಲ್ಲ. ದಿನದಿನದ ರೂಢೀಯನ್ನೇ ಅನುಸರಿಸುವಾಗ ಸ್ವಲ್ಪ ನೋಡಿ ಮಾಡಿ ತಿಂದುಂಡುರಾಯಿತು. ಯಾವ ಪದಾರ್ಥಗಳು ತುಂಬ ಉತ್ತೇಜಕವೊ ಅವುಗಳನ್ನು ತಿನ್ನದಿದ್ದರಾಯಿತು. ಆಹಾರದ ಉದ್ದೇಶ ಕೇವಲ ನಾಲಗೆಯ ತೃಪ್ತಿ ಸಾಧನೆಯೆ ಅಲ್ಲ. ಶರೀಧಾರಣೆಗಾಗಿ ಆಹಾರ; ಶರೀರಧಾರಣೆಯ ಉದ್ದೇಶವೂ ಭಗವತ್‌ಸಾಕ್ಷಾತ್ಕಾರ. ಯಾವುದನ್ನು ತಿಂದರೆ ಮನಸ್ಸು ಚಂಚಲವಾಗುತ್ತದೆಯೊ, ಯಾವ ಆಹಾರ ಮನಸ್ಸನ್ನು ಭಗವನ್ಮುಖಿಯನ್ನಾಗಿ ಮಾಡುವುದಕ್ಕೆ ಅಡ್ಡಿಯಾಗುತ್ತದೆಯೊ, ಅಂತಹ ಎಲ್ಲ ತಿನಿಸನ್ನೂ ಬಿಟ್ಟುಬಿಡುವುದು ಒಳ್ಳೆಯದು. ಕೇವಲ ಆಹಾರದಲ್ಲಿ ಮಾತ್ರ ಸಂಯಮ. ಸಾಧನೆ ಮಾಡುವುದೆ ಬ್ರಹ್ಮಚರ್ಯ ಪಾಲನೆ ಮಾಡಿದಂತಾಗುವುದಿಲ್ಲ. ನಿಜವಾದ ಬ್ರಹ್ಮಚರ್ಯ ಎಂದರೆ ಇಂದ್ರಿಯ ಸಂಯಮ. ಅದನ್ನು ಸಾಧಿಸದಿದ್ದರೆ ಭಗವದಾನಂದ ಎನ್ನುವುದು ಬಹುದೂರದ ಮಾತು. ತುಚ್ಛ ರಕ್ತಮಾಂಸಗಳ ಈ ದೇಹದ ಆನಂದವನ್ನು ತೊರೆಯಲಾಗದಿದ್ದರೆ ಆ ಬ್ರಹ್ಮಾನಂದ ಲಾಭ ಎಂದಾದರೂ ಸಂಭವವಾದೀತೆ ನೀನು ಸಂಸಾರಾಶ್ರಮದಲ್ಲಿದ್ದೀಯೆ. ಠಾಕೂರರು ಸಂಸಾರಿಗಳಿಗಾಗಿ ಭಗವತ್ ಸಾಕ್ಷಾತ್ಕಾರಮಾಡಿಕೊಳ್ಳುವ ದಾರಿಯನ್ನು ಸರಾಗಮಾಡಿ ಹೋಗಿದ್ದಾರೆ. ಠಾಕೂರರು ಹೇಳುತ್ತಿದ್ದರು. ಒಂದೆರಡು ಮಕ್ಕಳಾದಮೇಲೆ ಗಂಡಹೆಂಡಿರು ಅಣ್ಣತಂಗಿಯರಂತೆ ಇದ್ದುಕೊಂಡು, ದೇಹದ ಸಂಬಂಧದಿಂದ ದೂರವಾಗಿ ಪರಸ್ಪರ ಭಗವತ್ ಪ್ರಸಂಗಮಾಡುತ್ತಾ ಇಬ್ಬರೂ ಭಗವಂತನ ಪಾದಸೇವಕರಂತಿರಬೇಕು ಎಂದು. ದೇಹದ ಸುಖ-ಭೋಗಕ್ಕಾಗಿ ಅಲ್ಲ ಈ ಬದುಕು ಬಂದಿರುವುದು. ಭಗವಲ್ಲಾಭವ ಮಾನವ ಜೀವನದ ಉದ್ದೇಶ. ದುರ್ಲಭವಾದ ಮನುಷ್ಯಜನ್ಮ ನಿನಗೀಗ ಲಭಿಸಿದೆ; ಆದ್ದರಿಂದ ಜೀವನವನ್ನು ವ್ಯರ್ಥವಾಗಿ ಹೋಗಲು ಬಿಡಬಾರದು. ಆತ್ಮಸ್ವರೂಪವನ್ನು ಅರಿಯುವ ಪ್ರಯತ್ನಮಾಡಬೇಕು. ಠಾಕೂರರೆ ನಿನ್ನ ಆತ್ಮವಾಗಿದ್ದಾರೆ; ಅವರನ್ನು ಪಡೆದುಕೊಳ್ಳುವ ಪ್ರಯತ್ನಮಾಡು. ಅವರೇನು ನಾಲ್ಕು ಮತ್ತೊಂದು ಅಡಿ ಎತ್ತರದ ಬರಿಯ ಮನುಷ್ಯರೆಂದು ತಿಳಿದೆಯಾ? ಅವರು ಸ್ವಯಂ ಭಗವಾನ್, ಅವರೆಯೆ ಜೀವರ ಅಂತರಾತ್ಮ. ಅವರನ್ನು ಪಡೆದೆವೆಂದರೆ ಭವಬಂಧನ ಚಿರತರವಾಗಿ ಕಡಿದು ಹೋಗುತ್ತದೆ; ಈ ಸಂಸಾರಕ್ಕೆ ಮತ್ತೆ ಮತ್ತೆ ಬಂದುಹೋಗುವ ಕೆಲಸವಿರುವುದಿಲ್ಲ. ಗೀತೆ ಹೇಳುತ್ತದೆ-

ಯದ್ ಗತ್ವಾನ ನಿವರ್ತಂತೇ
ತದ್ಧಾಮ ಪರಮಂ ಮಮ |

ಆ ಪರಮಪುರುಷನನ್ನು ಸಾಕ್ಷಾತ್ಕರಿಸಿಕೊಂಡರೆ, ತಾಯೀ, ಈ ಜನನ ಮರಣ ಪ್ರಹೇಳಿಕೆಯಿಂದ ಶಾಶ್ವತವಾಗಿ ಪಾರಾಗಿ ಹೋಗಬಹುದು. ಹಾಗಾದರೆ ಮಾತ್ರ ಪರಮಗತಿಯನ್ನು ಪಡೆಯಲು ಸಾಧ್ಯ. ಆತನ ದರ್ಶನಸಿದ್ದಿಯಾದರೆ ಎಲ್ಲ ವಾಸನೆ ಕಾಮನೆಗಳೂ ನಿವೃತ್ತಿಹೊಂದುತ್ತವೆ; ಮನುಷ್ಯ ಪೂರ್ಣನಾಗುತ್ತಾನೆ; ಆತ್ಮಸ್ವರೂಪ ಸಿದ್ಧಿಯಾಗುತ್ತದೆ. ‘ಯಂ ಲಬ್ಧ್ವಾಚಾಪರಂ ಲಾಭಂ ಮನ್ಯತೇ ನಾಧೀಕಂ ತತಃ’ ಯಾವುದನ್ನು ಪಡೆದರೆ ಅದಕ್ಕಿಂತಲೂ ಅಧಿಕತರವಾದ ಮತ್ತೊಂದು ಲಾಭವನ್ನು ಪಡೆಯುವುದೆಂಬುದು ಇರುವುದಿಲ್ಲವೋ ಅದು ಉಂಟಾಗುತ್ತದೆ.

ಭಕ್ತೆ: “ಏನು ಮಾಡಬೇಕು ಆತನನ್ನು ಪಡೆಯುವುದಕ್ಕೆ?”

ಮಹಾಪುರುಷಜಿ: “ತಾಯೀ, ಠಾಕೂರರು ಹೀಗೆ ಹೇಳುತ್ತಿದ್ದರು, ಮೂರು ಎಳೆತಗಳು ಒಂದಾದಾಗ ಭಗವಂತನ ದರ್ಶನವಾಗುತ್ತದೆ ಎಂದು. ಸತಿಗೆ ಪತಿಯ ಮೇಲಣ ಎಳೆತ, ತಾಯಿಗೆ ಮಗುವಿನ ಮೇಲಣ ಎಳೆತ ಮತ್ತು ಜಿಪುಣನಿಗೆ ಹಣದ ಮೇಲಣ ಎಳೆತ. ಈ ಮೂರೂ ಎಳೆತಗಳೂ ಮುಪ್ಪುರಿಗೊಂಡು ಒಂದಾಗಿ ಭಗವಂತನನ್ನು ಕರೆಯತೊಡಗಿದರೆ ಅವನನ್ನು ಪಡೆಯಬಹುದು. ಅವನ ನಾಮೋಚ್ಛಾರಣೆ ಮಾಡು, ಅವನ ಧ್ಯಾನ ಮಾಡು, ಮತ್ತು ತೀವ್ರ ವ್ಯಾಕುಲತೆಯಿಂದ ಪ್ರಾರ್ಥನೆಮಾಡು-‘ಪ್ರಭೂ, ಮೈದೋರು; ಪ್ರಭೂ ಮೈದೋರು’ ಎಂದು ಅಳು, ಅಳು, ಚೆನ್ನಾಗಿ ಅಳು. ಹಾಗೆ ಮಾಡಿದರೇ ಅವನ ಕೃಪೆದೋರಿ ಕಾಣಿಸಿಕೊಳ್ಳುತ್ತಾನೆ. ಆತನು ಅತ್ಯಂತ ಆಶ್ರಿತವತ್ಸಲ. ಯಾರಿಗೆ ಆಶ್ರಯ ಕೊಡುತ್ತಾನೆಯೊ ಅವರನ್ನು ಎಂದಿಗೂ ಕೈಬಿಡುವುದಿಲ್ಲ.”

ಹೃದಯಪದ್ಮ ತಾನರಳೆ ಕರೆವೆ, ಬಾರಮ್ಮ ಬಾ, ಇಳಿದು ಬಾ:
ಮನೋದಾವರೆ ತಾ ಬಿರಿಯೆ ಕರೆವೆ, ಜಗದಂಬೆ, ಬಾ, ಇಳಿದು ಬಾ;
ಅಗ್ನಿ ಹಂಸ ಗರಿಗೆದರೆ ಕರೆವೆ. ಬಾ ತಾಯಿ ಬಾ ಇಳಿದು ಬಾ;
ಚೈತ್ಯಪುರುಷ ಯಜ್ಞಕ್ಕೆ ನೀನೇ ಅಧ್ವರ್ಯು ಬಾ ಇಳಿದು ಬಾ | – ಋತಚಿನ್ಮಯೀ ಜಗನ್ಮಾತೆಗೆ ‘ಅಗ್ನಿಹಂಸ ‘ದಿಂದ

* * *