ಬೇಲೂರು ಮಠ
ಶನಿವಾರ, ಡಿಸೆಂಬರ್, ೧೯೨೯

ಪ್ರಾತಃಕಾಲ. ಮಠದ ಒಬ್ಬ ಸಂನ್ಯಾಸಿ ಈ ಪ್ರಚಂಡ ಶೀತಕಾಲದಲ್ಲಿ ಕಾಶ್ಮೀರಕ್ಕೆ ಹೋಗಿರುವ ವಿಚಾರ ಬಂದಾಗ ಮಹಾಪುರುಷಜಿ ಹೇಳಿದರು: “ಪೇ-ಈ ಶೀತಕಾಲದಲ್ಲಿ ಹೋಗಿದ್ದಾನೆ. ಹೃಷಿಕೇಶದಿಂದ ಉದ್ದಕ್ಕೂ ನಡೆದುಕೊಂಡೆ ಹೋದ ಎಂದು ಹೇಳುತ್ತಾರೆ. ಅದನ್ನು ಕೇಳಿದ ಮೇಲೆ ನನ್ನ ಮನಸ್ಸಿಗೆ ಹೇಗೆ ಹೇಗೋ ಆಗುತ್ತಿದೆ. ಆಹಾ! ಠಾಕೂರರೆ ಕಾಪಾಡಿ, ನಿಮ್ಮವನೆ ಆಶ್ರಿತ ಅವನು. ನನಗೆ ಅನ್ನಿಸುತ್ತದೆ, ಅವನ ತಲೆಯಲ್ಲಿ ಏನೊ ತೂಕ ತಪ್ಪಿದೆ ಎಂದು; ಈ ಸಮಯದಲ್ಲಿ ಯಾರಾದರೂ ಕಾಶ್ಮೀರಕ್ಕೆ ಹೋಗುತ್ತಾರೆಯೆ? (ಸ್ವಲ್ಪ ಹೊತ್ತು ಸುಮ್ಮನಿದ್ದು) ಅಯ್ಯಾ, ಇದು ತುಂಬ ಕಠಿನ ಪಥ. ಈ ಬ್ರಹ್ಮವಿದ್ಯೆ ಅದೇನು ಸುಲಭ ವ್ಯಾಪಾರದ್ದಲ್ಲ. ಎಲ್ಲರ ತಲೆಗೂ ಹಿಡಿಸುವಂಥಾದ್ದಲ್ಲ ಆ ಸೂಕ್ಷ್ಮಾತಿಸೂಕ್ಷ್ಮ. ಲೌಕಿಕ ವಿದ್ಯಾರ್ಜನೆ ಎಷ್ಟು ಸುಲಭತರವಾದ್ದು. ದೊಡ್ಡ ದಾರ್ಶನಿಕನಾಗುವುದು, ದೊಡ್ಡ ವೈಜ್ಞಾನಿಕನಾಗುವುದು, ದೊಡ್ಡ ಕವಿಯಾಗುವುದು, ದೊಡ್ಡ ಚಿತ್ರಕಾರನಾಗುವುದು, ದೊಡ್ಡ ರಾಜನೀತಿಜ್ಞನಾಗುವುದು-ಅವೆಲ್ಲ ಎಷ್ಟೋ ಸುಲಭ; ಆದರೆ ಬ್ರಹ್ಮಜ್ಞಾನ ಪಡೆಯುವುದು ಮಹಾಕಠಿನವ್ಯಾಪಾರ. ಆದ್ದರಿಂದಲೇ ಉಪನಿಷತ್ಕಾರ ಹೇಳಿದ್ದಾನೆ: ‘ಕ್ಷುರಸ್ಯ ಧಾರಾ ನಿಶಿತಾ ದುರತ್ಯಯಾ ದುರ್ಗಂ ಪಥಸ್ತತ್ ಕವೆಯೋ ವದಂತಿ’* ಯಾರು ಈ ದಾರಿಯಲ್ಲಿ ನಡೆಯುವ ಪ್ರಯತ್ನ ಮಾಡಿಲ್ಲವೋ ಅವರು ಈ ಪಂಥ ಎಷ್ಟು ದುರ್ಗಮ ಎಂಬುದನ್ನು ಅರಿಯಲೂ ಅಸಮರ್ಥರಾಗಿರುತ್ತಾರೆ. ಉಪನಿಷತ್ತಿನಲ್ಲಿ ಈ ಬ್ರಹ್ಮ ವಿದ್ಯೆಯನ್ನು-ಯಾವುದರ ಮುಖಾಂತರ ಆ ಅಕ್ಷರಪುರುಷನನ್ನು ಅರಿಯುತ್ತಾರೊ ಅದನ್ನು-ಪರಾವಿದ್ಯೆ ಎಂದು ಕರೆಯುತ್ತಾರೆ. ಉಳಿದ ಎಲ್ಲ ವಿಧವಾದ ಜಾಗತಿಕ ವಿದ್ಯೆಯೂ ಅಪರಾವಿದ್ಯೆ. ಪರಾವಿದ್ಯೆಯನ್ನು ಪಡೆಯಬೇಕಾದರೆ ಅಖಂಡ ಅಸ್ಖಲಿತ ಬ್ರಹ್ಮಚರ್ಯ ಅತ್ಯಂತ ಅವಶ್ಯಕ. ಕಾಯಮನೋವಾಕ್ಯುಗಳಲ್ಲಿ ದೀರ್ಘಕಾಲ ಬ್ರಹ್ಮಚರ್ಯದ ಫಲವಾಗಿ ಶರೀರ ಮತ್ತು ಮನಸ್ಸುಗಳಲ್ಲಿ ಶುದ್ಧ ಮತ್ತು ಪವಿತ್ರವಾದ ಭಗವದ್ಭಾವ ಅಥವಾ ಬ್ರಹ್ಮಭಾವವನ್ನು ಧಾರಣೆಮಾಡುವ ಸಲುವಾಗಿ ಒಂದು ಶಕ್ತಿ ಸಂಭವಿಸುತ್ತದೆ; ಪುಸ್ತಕದಲ್ಲಿ ನೂತನ ಸ್ನಾಯು ಸೃಷ್ಟಿಯಾಗುತ್ತದೆ; ಶರೀರದ ಒಳಗೂ ಸಂಪೂರ್ಣವಾಗಿ ಅಣು ಪರಮಾಣು ಪರ್ಯಾಂತ ಬದಲಾವಣೆ ಹೊಂದುತ್ತದೆ. ಅದಕ್ಕೆ ಅಖಂಡ ಬ್ರಹ್ಮ ಚರ್ಯ ಬೇಕು. ಠಾಕೂರ್‌ ಹೇಳುತ್ತಿದ್ದರು, ಮೊಸರು ಹಾಕಿದ ಪಾತ್ರೆಯಲ್ಲಿ ಹಾಳು ಇಡಲು ಹಿಂದೆ ಮುಂದೆ ನೋಡಬೇಕಾಗುತ್ತದೆ, ಎಲ್ಲಿ ಯಾದರೂ ಹಾಲು ಕೆಟ್ಟು ಹೋದೀತು ಎಂಬ ಭಯದಿಂದ. ಅದಕ್ಕಾಗಿಯೆ ಶುದ್ಧ ಸತ್ವದ ಹುಡುಗರನ್ನು ಕಂಡರೆ ಅವರಿಗೆ ಅಷ್ಟೊಂದು ಅಕ್ಕರೆ: ಏಕೆಂದರೆ ಅವರಿಗೇ ಭಗವದ್ ಭಾವವನ್ನು ಚೆನ್ನಾಗಿ ಧಾರಣೆಮಾಡಲು ಸಾಮರ್ಥ್ಯವಿರುವುದು. ಇದೆಲ್ಲ ತುಂಬ ಸೂಕ್ಷ್ಮ ವ್ಯಾಪಾರ. ಎಲ್ಲಕ್ಕಿಂತಲು ಹೆಚ್ಚಾಗಿ ಅವಶ್ಯಕವಾದದ್ದೆಂದರೆ ಭಗವತ್ ಕೃಪೆ. ಮಹಾಮಾಯೆಯ ವಿಶೇಷ ಕೃಪೆ  ಇಲ್ಲದೆ ಹೋದರೆ ಉಳಿದುದೆಲ್ಲವೂ ಏತಕ್ಕೂ ಬರುವುದಿಲ್ಲ. ಆತನು ಕೃಪೆಮಾಡಿ ಬ್ರಹ್ಮ ವಿದ್ಯೆಯ ಬಾಗಿಲನ್ನು ತೆರೆದುಕೊಟ್ಟರೆ ಮಾತ್ರ ಜೀವ ಬ್ರಹ್ಮ ವಿದ್ಯೆಗೆ ಅಧಿಕಾರಿಯಾಗುತ್ತದೆ; ಇಲ್ಲದಿದ್ದರೆ ಇಲ್ಲ. ಚಂಡಿಯಲ್ಲಿ ಹೀಗೆ ಇದೆ-‘ಸೈಷಾ ಪ್ರಸನ್ನಾ ವರದಾ ನೃಣಾಂ ಭವತಿ ಮುಕ್ತಯೇ!’ ಆ ಮಹಾಮಾಯೆ ಪ್ರಸನ್ನಳಾದರೆ ಮಾನವರಿಗೆ ಮುಕ್ತಿಯ ವರಪ್ರದಾನ ಮಾಡುತ್ತಾಳೆ. ತಲೆಯಲ್ಲಿ ಎಷ್ಟೊಂದು ಸೂಕ್ಷ್ಮ ಸ್ನಾಯುಗಳಿವೆ! ಅವುಗಳಲ್ಲಿ ಏನಾದರೂ ಒಂದಿಷ್ಟು ವ್ಯತ್ಯಾಸವಾಯಿತುಎ ಂದರೆ ತೂಕವೆ ತಪ್ಪಿಹೋಗುತ್ತದೆ. ಶ್ರೀಮಾತೆ ಹೇಳುತ್ತಿದ್ದರು “ಠಾಕೂರರ ಹತ್ತಿರ ಪ್ರಾರ್ಥಿಸು, ತಲೆ ಕೆಡದಿರಲಿ ಎಂದು.” ತಲೆ ಕೆಟ್ಟುಹೋಯಿತು ಎಂದರೆ ಆಯಿತು ಎಲ್ಲ ಮುಗಿದಂತೆ. ಸ್ವಾಮೀಜಿ ಹೇಳುತ್ತಿದ್ದರು. ‘Shoot me if my brain goes wrong. ನನ್ನ ತಲೆ ಕೆಟ್ಟರೆ ಗುಂಡಿಕ್ಕಿ ಕೊಲ್ಲಿ’ ಎಂದು. ಪೇ-ಮಟಕ್ಕೆ ಬಂದ ಮೊದಲಲ್ಲಿಯೆ ಆತನ ತಲೆಯ ಮಾಟ ನೋಡಿಯೆ ನನಗನಿಸಿತ್ತು, ಮೆದುಳು ತೂಕತಪ್ಪಿ ತಲೆ ಕೆಟ್ಟುಹೋಗುತ್ತದೆ ಎಂದು. ಹೃಷಿಕೇಶದಲ್ಲಿ ಯಾರೊ ಹಠಯೋಗಿಯ ಹತ್ತಿರ ಹಠಯೋಗ ಅಭ್ಯಾಸಮಾಡುತ್ತಿದ್ದಾನೆ ಎಂದು ಕೇಳಿದ್ದೆ. ಇದೆಲ್ಲ, ಬಾಬಾ, ಏಕೊ ಚೆನ್ನಾಗಿ ಕಾಣುವುದಿಲ್ಲ. ಅಲ್ಲದೆ, ಬಹುದಿನಗಳಿಂದ ಆತ ಸುಮ್ಮನೆ ಅಲ್ಲಿ ಇಲ್ಲಿ ಹೊರಗೇ ಅಲೆಯುತ್ತಿದ್ದಾನೆ, ಮಠದ ಸಾಧುಗಳೊಡನೆ ಏನೂ ಸಂಪರ್ಕವನ್ನೇ ಇಟ್ಟುಕೊಂಡಿಲ್ಲ. ಖುಷಿ ಬಂದ ಹಾಗೆ ಸ್ಥಳದಿಂದ ಸ್ಥಳಕ್ಕೆ ತೊಳಲುತ್ತಿದ್ದಾನೆ. ಈಗ ನೋಡಿದೆಯಾ ತಲೆಯೇ ಕೆಟ್ಟುಹೋಗಿದೆ. ಮಹಾರಾಜ್ (ಸ್ವಾಮಿ ಬ್ರಹ್ಮಾನಂದರು) ಕೂಡ ಹೇಳುತ್ತಿದ್ದರು, ಪ್ರಾರಂಭದಲ್ಲಿ ಸಾಧುಗೆ ಕಟ್ಟೇಕಾಂತವಾದ ಬಾಳು ಕ್ಷೇಮಕರವಲ್ಲ ಎಂದು. ಕಡೆಯ ಪಕ್ಷ ಇಬ್ಬರಾದರೂ ಒಟ್ಟಿಗಿರುವುದು ಮೇಲು. ಸುಮ್ಮನೆ ತಿರ‍್ರನೆ ತಿರುಗಿಬಿಟ್ಟರೆ ತಪಸ್ಯೆಯಾದೀತೆ? ಸುಮ್ಮನೆ ಹೃಷೀಕೇ, ಉತ್ತರ ಕಾಶಿ, ಬೆಟ್ಟ ಕಾಡುಗಳಲ್ಲಿ ಅಲೆಯುವುದೇ ತಪಸ್ಯೆಯೆ?” ಸ್ವಲ್ಪಹೊತ್ತು ಮೌನವಾಗಿದ್ದು ಮತ್ತೆ ಹೇಳಿದರು: “ಠಾಕೂರ್‌, ನೀವೆ ಕಾಪಾಡಬೇಕು, ನಿಮ್ಮ ಆಶ್ರಯಕ್ಕೆ ಬಂದಿದ್ದಾನೆ ಆತ. ನೀವು ಕಾಪಾಡದಿದ್ದರೆ ಇನ್ನಾರು ದಿಕ್ಕು? ಆಹಾ, ಆತ ಒಳ್ಳೆಯ ಹುಡುಗನೆ ಆಗಿದ್ದನಲ್ಲಾ!”

ಒಬ್ಬ ಬ್ರಹ್ಮಚಾರಿ: “ಭಾಗವತದಲ್ಲಿ ಉದ್ಧವಗೀತೆ ಹೇಳುತ್ತದೆ: ದೇವತೆಗಳು ಗ್ರಹಗಳು ವ್ಯಾಧಿಗಳು ಆತ್ಮೀಯ ಸ್ವಜನರು ಇವರೇ ಮೊದಲಾದವರು ನಾನಾ ರೀತಿಯಲ್ಲಿ ಘೋರತರ ವಿಘ್ನಗಳನ್ನು ತಂದೊಡ್ಡುವುದರಿಂದ ಸಾಧಕರಿಗೆ ಸಾಧನ ಮಾರ್ಗದಲ್ಲಿ ಮುಂಬರಿಯುವುದೇ ಮಹಾಕಠಿನವಾಗುತ್ತದೆ ಎಂದು.”

ಮಹಾಪುರುಷಜಿ: “ಶ್ರೀ ಭಗವಂತನ ಕೃಪೆಯೊಂದಿದ್ದರೆ ಎಲ್ಲ ವಿಘ್ನಗಳನ್ನೂ ದಾಟಬಹುದು. ಠಾಕೂರರು ಕಪಾಲಮೋಚನರಾಗಿದ್ದಾರೆ. ಅವರ ಆಶ್ರಯ ಪಡೆದರೆ ಆದಿಭೌತಿಕ, ಆದಿದೈವಿಕ ಮೊದಲಾದ ಎಲ್ಲ ವಿಘ್ನಗಳೂ ಅಪಸಾರಿತವಾಗುತ್ತವೆ! ಚಂಡಿಯಲ್ಲಿದೆ, ‘ರೋಗಾನಶೇಷಾನಪಶಂಸಿ ತುಷ್ಟಾ! ರುಷ್ಟಾತು ಕಾಮಾನ್ ಸಕಲಾನಭಿಷ್ಟಾನ್‌| ತ್ವಾಮಾಶ್ರೀತಾನಾಂ ನ ವಿಪನ್ನರಾಣಾಂ| ತ್ವಾಮಾಶ್ರಿತಾ ಹ್ಯಾಶ್ರಯತಾಂ ಪ್ರಯಾಂತಿ||’ ಅರ್ಥಾತ್ ಆ ಮಹಾಮಾಯೆ ಪ್ರಸನ್ನಳಾದರೆ ಅಶೇಷ ರೋಗಗಳನ್ನು ನಾಶಮಾಡುತ್ತಾಳೆ; ಮತ್ತೆ ಅವಳು ಕೋಪಗೊಂಡರೆ ಸಕಲ ವಾಂಛಿತ ಅಭೀಷ್ಟಗಳನ್ನೂ ಧ್ವಂಸ ಮಾಡಿಬಿಡುತ್ತಾಳೆ; ಅವಳನ್ನು ಆಶ್ರಯಿಸಿದವರಿಗೆ ವಿಪತ್ತೆಂಬುದಿಲ್ಲ,-ಅವರು ಎಲ್ಲ ಪ್ರಕಾರದ ವಿಪತ್ತುಗಳಿಂದಲೂ ಪಾರಾಗುತ್ತಾರೆ. ಅಲ್ಲದೆ ಆಕೆಯ ಆಶ್ರಯಕ್ಕೂ ಕೃಪೆಗೂ ಒಳಗಾದವರು ಸರ್ವ ಜೀವರುಗಳಿಗೆ ಆಶ್ರಯ ನೀಡುವ ಸಾಮರ್ಥ್ಯವನ್ನೂ ಪಡೆಯುತ್ತಾರೆ; ಅವರು ಬ್ರಹ್ಮ ಸ್ವರೂಪರಾಗುವುದರಿಂದ ಸಕಲರ ಅಧಿಷ್ಠಾನ ಸ್ವರೂಪರಾಗುತ್ತಾರೆ. ಜೊತೆಗೆ ಸತ್ಸಂಗ ಎಂಬುದು ಬೇರೆ ಇದೆ; ಅದು ಮನುಷ್ಯರನ್ನು ರಕ್ಷಿಸುತ್ತದೆ. ‘ಸತಾಂ ಸಂಗಃ’ -ಮಹಾಪುರುಷರ ಸಂಗ ವಿಶೇಷವಾಗಿ ಅವಶ್ಯಕ. ಸಾವಿರಾರು ಜನರು ಪ್ರಯತ್ನಿಸುತ್ತಾರೆ; ಆದರೆ ಒಬ್ಬರೊ ಇಬ್ಬರೊ ಮಾತ್ರ ತತ್ತ್ವಜ್ಞಾನ ಪಡೆಯಲು ಸಮರ್ಥರಾಗುತ್ತಾರೆ. ಮಹಾರಾಜರಿಗೆ (ಸ್ವಾಮಿ ಬ್ರಹ್ಮಾನಂದರು) ಒಬ್ಬ ಭಕ್ತ ಪ್ರಶ್ನೆ ಹಾಕಿದ ‘ಭಕ್ತಿ ಪಡೆಯುವುದು ಹೇಗೆ?’ ಎಂದು. ಅದಕ್ಕೆ ಉತ್ತರವಾಗಿ ಮಹರಾಜ್ ಮತ್ತೆ ಮತ್ತೆ ಉಚ್ಚರಿಸಿದರು ‘ಸತ್ಸಂಗ! ಸತ್ಸಂಗ! ಮತ್ತೂ ಸತ್ಸಂಗ!’ ಮಹಾಪುರುಷರು ಭಗವಂತನ ಪರಿಚಯ ಮಾಡಿಕೊಡುತ್ತಾರೆ. ಸತ್ಸಂಗ ಬೇಕಯ್ಯಾ ಸತ್ಸಂಗ ಬೇಕು. ಸಮಸ್ತ ಶಾಸ್ತ್ರಗಳಲ್ಲಿಯೂ ಸತ್ಸಂಗ ಪ್ರಶಂಸೆ ತುಂಬಿದೆ.

ಬ್ರಹ್ಮಚಾರಿ: “ರಾಮಾಯಣದಲ್ಲಿದೆ ‘ಋಷೀನಾಮಗ್ನಿ ಕಲ್ಪಾನಾಂ’ ಇತ್ಯಾದಿ.”

ಮಹಾಪುರುಷಜಿ: “ಸರಿಯಾಗಿ ಹೇಳಿದೆ. ಶ್ರೀರಾಮಚಂದ್ರನು ರಾವಣನ ವಧೆಗಾಗಿ ಅಗ್ನಿಸಮರಾದ ಋಷಿಗಳಿಂದ ಆಶೀರ್ವಾದವನ್ನೂ ವರಗಳನ್ನೂ ಪಡೆದ ಮೇಲೆಯೇ ರಾಕ್ಷಸಕುಲ ಧ್ವಂಸನ ಉದ್ಯೋಗದಲ್ಲಿ ತೊಡಗುತ್ತಾನೆ.” ಎಂದವರು ಮತ್ತೆ ಮತ್ತೆ ‘ಸತಾಂ ಸಂಗಃ ‘‘ಸತಾಂ ಸಂಗಃ’ ಎಂದು ಉಚ್ಚರಿಸುತ್ತಾ ಕೊನೆಯಲ್ಲಿ “ಏನೆ ಇರಲಿ ಬಿಡಲಿ, ಮಹಾಮಾಯೆಯ ಕೃಪೆ ಒದಗಿದ್ದರೆ ಏನೂ ಆಗುವುದಿಲ್ಲ. ಆಕೆ ಪ್ರಸನ್ನಳಾದರೆ ತನ್ನ ಈ ಮಾಯಾಜಾಲದಿಂದ ಹೊರಗೆ ಹೋಗುವಂತೆ ರಕ್ಷೆ ನೀಡುತ್ತಾಳೆ. ಇಲ್ಲದೆಹೋದರೆ ಮತ್ತೆ ಬೇರೆ ಯಾವ ಉಪಾಯವೂ ಇಲ್ಲ. ಕೃಪೆ! ಕೃಪೆ! ಸರಳ ಹೃದಯವಿದ್ದರೆ ಆಕೆ ಕೃಪೆ ಮಾಡಿಯೆ ಮಾಡುತ್ತಾಳೆ.”

ಮನ ಏವ ಮನುಷ್ಯಾಣಾಂ ಕಾರಣಂ ಬಂಧ ಮೋಕ್ಷಯೋಃ
ಬಂಧಾಯ ವಿಷಯಾಸಕ್ತಂ ಮುಕ್ತ್ಯೈ ನಿರ್ವಿಷಯಂ ಸ್ಮೃತಮ್ || – ‘ಪಂಚದಶೀ’ ೧೧-೧೧೭

“ಮನುಷ್ಯರ ಬಂಧಕ್ಕೂ ಮೋಕ್ಷಕ್ಕೂ ಮನಸ್ಸೆ ಕಾರಣವಾಗಿದೆ. ಮನಸ್ಸು ವಿಷಯಗಳಲ್ಲಿ ಆಸಕ್ತವಾದರೆ ಬಂಧವಾಗುತ್ತದೆ, ವಿಷಯಗಳಲ್ಲಿ ಆಸಕ್ತವಾಗದಿದ್ದರೆ ಮೋಕ್ಷವಾಗುತ್ತದೆ.”

* * *
* “ಜ್ಞಾನಿಗಳು ಹೇಳುತ್ತಾರೆ, ಕ್ಷೌರದ ಕತ್ತಿಯ ಅಲಗಿನ ಮೇಲೆ ನಡೆಯುವುದು ಎಷ್ಟು ಸುಕಠಿನವೋ ಅದರಂತೆಯೇ ಬ್ರಹ್ಮಜ್ಞಾನದ ದಾರಿಯೂ ದುರ್ಗಮವಾದದ್ದು.