ಬೇಲೂರು ಮಠ
ರವಿವಾರ, ಡಿಸೆಂಬರ್ ,೧೯೨೯

ಬೆಳಗಿನ ಸಮಯ. ಮಠದ ಅನೇಕ ಸಂನ್ಯಾಸಿಗಳೂ ಬ್ರಹ್ಮಚಾರಿಗಳೂ ಮಹಾಪರುಷಜಿಯ ಕೊಠಡಿಯಲ್ಲಿ ನೆರದಿದ್ದರು. ಮಾತು ಸಾಧನೆ-ಭಜನೆ ಸಂಬಂಧವಾಗಿತ್ತು.

ಮಹಾಪುರುಷಜಿ: “ಭಗವಂತನ ನಾಮಭಜನೆ ಮಾಡುತ್ತಾ ಸಂಯಮ ತನ್ನಷ್ಟಕ್ಕೆ ತಾನೆ ಉಂಟಾಗುತ್ತದೆ. ದೇವರ ಹೆಸರಿನಲ್ಲಿ ಎಂತಹ ಶಕ್ತಿ ಇದೆ ಎಂದರೆ ಅಂತರಿಂದ್ರಿಯ ಬಹಿರಿಂದ್ರಿಯ ಎಲ್ಲ ಸಂಯಮವಾಗಿಬಿಡುತ್ತದೆ. ಆದರೆ ತುಂಬಿದ ಪ್ರೇಮದಿಂದ ನಾಮಜಪ ಮಾಡಬೇಕು. ಯಾವ ರೀತಿಯಿಂದಲಾದರೂ ಆತನ ಪರವಾಗಿ ಅಕ್ಕರೆ ಮೂಡಿತು ಎಂದರೆ ಸಾಕೇ ಸಾಕು, ನಿಶ್ಚಿಂತೆಯಿಂದ ಇರಬಹುದು! ಆದರೆ ಎಲ್ಲಿಯವರೆಗೆ ಮನಸ್ಸು ನಿಮ್ನ ಭೂಮಿಕೆಯಲ್ಲಿಯೆ ಇರುವುದೋ ಅಲ್ಲಿಯವರೆಗೆ ಭಗವಂತನ ಪರವಾಗಿ ನೈಜವಾದ ಪ್ರೀತಿ ಮೂಡುವ ಸಂಭವವಿಲ್ಲ. ಆತನ ನಾಮಭಜನೆ ಮಾಡುತ್ತಾ ಮಾಡುತ್ತಾ ಹೃತ್ಪೂರ್ವಕವಾದ ಸಾಧನೆಯಿಂದ ಕುಂಡಲಿನಿ ಜಾಗ್ರತವಾಗಿ ಮನಸ್ಸು ಕ್ರಮೇಣ ಕೆಳಗಣ ಮೂರು ಭೂಮಿಕೆಗಳನ್ನು ದಾಟಿ ನಾಲ್ಕನೆಯ ಭೂಮಿಕೆಗೆ ಏರಿದಾಗಲೆ ಸಾಧಕನಿಗೆ ಈಶ್ವರೀಯ ರೂಪಾದಿ ದರ್ಶನಗಳಾಗಿ, ಅದರ ಪರಿಣಾಮವಾಗಿ ಆತನ ಮೇಲೆ ಪ್ರೀತಿಯೂ ಹುಟ್ಟುತ್ತದೆ. ಮನಸ್ಸು ಶುದ್ಧವಾಗದಿದ್ದರೆ ಆ ‘ಶುದ್ಧಮಪಾಪವಿದ್ಧಮ್’ ಆಗಿರುವ ಭಗವಂತನ ಪ್ರೇಮ ಹೇಗೆ ತಾನೆ ಸಾಧ್ಯ? ಅದಕ್ಕಾಗಿಯೆ ಬೇಕು, ಹೃತ್ಪೂರ್ವಕ ಸಾಧನೆ ಭಜನೆ ಮತ್ತು ವ್ಯಾಕುಲತೆ. ನಿಮಗೆ ದೊರೆಯುತ್ತದೆ; ಶೀಘ್ರ ಶೀಘ್ರವಾಗಿಯೆ ಸಂಪೂರ್ಣವೂ ದೊರೆಯುತ್ತದೆ. ಏಕೆಂದರೆ ನೀವೆಲ್ಲ ಆಕೌಮಾರ ಬ್ರಹ್ಮಚಾರಿಗಳು; ಕಾಮಕಾಂಚನಗಳವರೆಗೂ ನಿಮ್ಮ ಮನಸ್ಸು ಹೋಗಿಯೂ ಇಲ್ಲ; ನೀವೆಲ್ಲರೂ ಅತಿ ಪವಿತ್ರ ಆಧಾರಗಳು. ಶುದ್ಧ ಆಧಾರದಲ್ಲಿ ಆತನ ಪ್ರಕಾಶ ಬಹುಬೇಗನೆ ಆಗುತ್ತದೆ. ಸ್ವಲ್ಪ ಜೋರಾಗಿ ಕೆಲಸಮಾಡಿ ನೋಡಿ, ಯಾಕಾಗುವುದಿಲ್ಲ? ಸಾಧನೆ ಭಜನೆಯೆ ಸ್ವಲ್ಪ ಜೋರಾಗಿ ಕೆಲಸಮಾಡಿ ನೋಡಿ, ಯಾಕಾಗುವುದಿಲ್ಲ? ಸಾಧನೆ ಭಜನೆಯೆ ನಿಮ್ಮ ಬದುಕಿನ ಮುಖ್ಯ ವ್ಯಾಪಾರ; ಬಾಕಿ ಏನು ಕಾರ್ಯಕರ್ಮಗಳಿದ್ದರೂ-ಉಪನ್ಯಾಸ, ಕ್ಲಾಸು, ಅವೆಲ್ಲ ಗೌಣ ಎಂದು ತಿಳಿಯಬೇಕು. ಒಂದೇ ಸ್ಥಾನದಲ್ಲಿ, ಒಂದೇ ಆಸನದಲ್ಲಿ ಕುಳಿತು ಜಪಧ್ಯಾನ ಮಾಡುವುದು ಒಳ್ಳೆಯದು; ಅದರಿಂದ ಒಂದು ವಾತಾವರಣ ಸೃಷ್ಟಿಯಾಗುತ್ತದೆ ಮತ್ತು ಮನಸ್ಸು ಬೇಗನೆ ಸ್ಥಿರವಾಗುವುದಕ್ಕೂ ಸಹಾಯವಾಗುತ್ತದೆ. ಅಲ್ಲದೆ ಮಾತೃ ಜಾತಿಯನ್ನು ಕಂಡೊಡನೆ ಶ್ರದ್ಧೆಯಿಂದ ಮನದಲ್ಲಿಯೆ ಪ್ರನಾಮಮಾಡಬೇಕು. ಠಾಕೂರರು ನಮಗೆ ಹಾಗೆಂದೇ ವಿಶೇಷ ರೀತಿಯಿಂದ ಬೋಧಿಸಿದರು; ತಮ್ಮ ಜೀವನದಲ್ಲಿಯೂ ಅವರು ಅದನ್ನೆ ಅನುಷ್ಠಾನಕ್ಕೆ ತಂದಿದ್ದರು. ಸಂನ್ಯಾಸಿಯ ಜೀವನ ಎಂದರೆ ನಿರ್ಜಲ ಏಕಾದಶಿಯಂತೆ. ಒಂದಿನಿತಾದರೂ ಮಾಲಿನ್ಯ ಇರಕೂಡದು. ಬಾಳೆಲ್ಲ ನಿಷ್ಕಲಂಕವಾಗಿರಬೇಕು. ಕಾಮಕಾಂಚನದ ಒಂದಿನಿತು ಸುಳಿವೂ ಕೂಡ ಮನಸ್ಸನ್ನು ಪ್ರವೇಶಿಸದಂತೆ ನೋಡಿಕೊಳ್ಳಿ. ಸರ್ವಕ್ಷಣವೂ ಉಚ್ಛಚಿಂತನೆ, ಭಗವದ್ ಧ್ಯಾನ, ಭಜನೆ, ಪಾಠ, ಪ್ರಾರ್ಥನೆ ಇವುಗಳಲ್ಲಿ ತೊಡಗಿರಬೇಕು. ನಿಮ್ಮದು ಆಧ್ಯಾತ್ಮಿಕ ಜೀವನ. ಠಾಕೂರ್‌ ಹೇಳುತ್ತಿದ್ದರು: ‘ಜೇನುಹುಳು ಹೂವಿನಮೇಲೆಯ ಕೂತುಕೊಳ್ಳುತ್ತದೆ, ಮಧುವನ್ನು ಮಾತ್ರವೆ ಪಾನ ಮಾಡುತ್ತದೆ; ನಿಜವಾದ ಸಂನ್ಯಾಸಿಯ ಜೀವನ ಜೇನುಹುಳುವಿನಂತೆ ಇರಬೇಕು. ಅವನ ಮನಸ್ಸು ಭಗವದಾನಂದವನ್ನು ಮಾತ್ರ ಅನುಭವಿಸುತ್ತದೆ; ಬೇರೆ ಯಾವದಿಕ್ಕಿಗೂ ಮನಸ್ಸು ತಿರುಗುವ ವಿಚಾರವೆ ಇಲ್ಲ. ನೀವೆಲ್ಲ ಯುಗಾವತಾರನ ಲೀಲೆಯನ್ನು ಪುಷ್ಟಿಗೊಳಿಸುವುದಕ್ಕಾಗಿ ಆತನ ಪವಿತ್ರ ಸಂಘದಲ್ಲಿ ಆಶ್ರಯ ಪಡೆದಿದ್ದೀರಿ. ಸಮಗ್ರ ಪೃಥಿವಿಯೆ ತೃಷಿತ ನಯನದಿಂದ ನಿಮ್ಮ ಕಡೆಗೆ ನೋಡುತ್ತಿದೆ, ಶ್ರೀಗುರುವಿನ ಸಂದೇಶಾಮೃತಕ್ಕಾಗಿ. ನಮ್ಮ ಕಾಲವೂ ಕೊನೆ ಸಾರುತ್ತಿದೆ; ನಮ್ಮ ಪಾರ್ಥಿವ ಜೀವನ ಇನ್ನೇನು ಕೊನೆ ಮುಟ್ಟಿದಂತೆಯೆ. ತೆರವಾಗುವ ಆ ಸ್ಥಾನವನ್ನು ತುಂಬಬೇಕಾದವರು ನೀವು. ಒಮ್ಮೆ ಭಾವಿಸಿ ನೋಡಿ-ಎಂತಹ ಹೊಣೆ ನಿಮ್ಮ ಮೇಲೆ ಬಿದ್ದಿರುತ್ತದೆ! ಎಲ್ಲ ಶಕ್ತಿಯ ಆಧಾರವೂ ಆತನೆ ತಾನೆ? ಯಾವಾಗ ಅವಶ್ಯಕತೆ ಬೀಳುವುದೊ ಆವಾಗ ಆತನೆ ನಿಮ್ಮಲ್ಲಿ ಶಕ್ತಿ ಸಂಚಾರ ಮಾಡಿಕೊಡುತ್ತಾನೆ; ನೀವು ಆತನ ವಾಣಿಯನ್ನು ಆತನ ಭಾವವನ್ನೂ ಪ್ರಚಾರಮಾಡುವಂತೆ ನಿಮ್ಮನ್ನು ಅರ್ಹ ಅಧಿಕಾರೀ ಪಾತ್ರಗಳನ್ನಾಗಿ ಮಾಡುತ್ತಾನೆ. ಎಷ್ಟರಮಟ್ಟಿಗೆ ನೀವು ಆತನನ್ನು ನಿಮ್ಮ ಹೃದಯದಲ್ಲಿ ಪ್ರತಿಷ್ಠಿತ ಮಾಡುತ್ತಿರೋ ಅಷ್ಟೇ ಪ್ರಮಾಣದಲ್ಲಿ ನಿಮಗೆ ಅರಿವಾಗುತ್ತದೆ, ಆತನೇ ನಿಮ್ಮೊಳಗೆ ಇದ್ದುಕೊಂಡು ಸೂಕ್ಷ್ಮಭಾವದಿಂದ ನಿಮ್ಮನ್ನು ಕೈಹಿಡಿದು ನಡೆಸುತ್ತಾನೆ ಎಂದು. ನೀವು ಯಾರನ್ನು ಆಶ್ರಯಿಸಿದ್ದೀರೊ ಆತನು ಭಗವಂತನಲ್ಲದೆ ಬೇರೆ ಅಲ್. ಆತನು ಜ್ಞಾನ, ಭಕ್ತಿ, ಪ್ರೇಮ, ಪವಿತ್ರತೆ ಎಲ್ಲವನ್ನೂ ಕೊಡುತ್ತಾನೆ. ನಿಮ್ಮ ಜೀವನವನ್ನೆಲ್ಲಾ ಮಧುಮಯವನ್ನಾಗಿ ಮಾಡಿಕೊಡುತ್ತಾನೆ.”

ಆಮೇಲೆ ಶ್ರೀಠಾಕೂರರ ಅವತಾರತ್ವ ಮತ್ತು ಜೀವರ ದುಃಖಮೋಚನಾರ್ಥವಾಗಿ ದೇಹಧಾರಣ ಮಾಡಿದ ಸಂಬಂಧದಲ್ಲಿ ಮಾತು ನಡೆದಾಗ ಸಂನ್ಯಾಸಿ ಯೊಬ್ಬರು ಜಿಜ್ಞಾಸೆ ಮಾಡಿದರು: “ಮಹಾರಾಜ್, ಅವತಾರಪುರುಷನಿಗೆ ಪೂರ್ಣಜ್ಞಾನ ಯಾವಾಗಲೂ ಇದ್ದೇ ಇರುತ್ತದೆಯೆ?”

ಮಹಾಪುರುಷಜಿ: “ಇರದೆ ಮತ್ತೇನು! ಕಾಣುವುದಿಲ್ಲವೆ ಶ್ರೀಕೃಷ್ಣನ ಜೀವನದಲ್ಲಿ-ಹುಟ್ಟಿನಿಂದ ಹಿಡಿದು ತಾನು ಭಗವಂತನೆಂಬ ಜ್ಞಾನದ ಪರಿಚಯ ಮಾಡಿಕೊಡುತ್ತಲೆ ಇದ್ದ. ಆದರೆ ಎಲ್ಲ ಅವತಾರಗಳ, ಈ ಎಲ್ಲ ಭಾವಗಳ ಅಭಿವ್ಯಕ್ತಿ ಒಂದೇ ತರಹದಲ್ಲಿ ಮೈದೋರುವುದಿಲ್ಲ. ಅಂತೂ ಅವರಿಗೆ ಆ ವಿಷಯದಲ್ಲಿ ಜ್ಞಾನವೇನೊ ಪರಿಪೂರ್ಣವಾಗಿರುತ್ತದೆ. ಲೋಕಕ್ಕೆ ಆಧ್ಯಾತ್ಮಿಕ ಕಲ್ಯಾಣ ಉಂಟುಮಾಡುವುದಕ್ಕಾಗಿಯೆ ಭಗವಂತನ ಶಕ್ತಿಯ ಆವಿರ್ಭಾವ-ಅದೆಲ್ಲ ಆತನ ದಯೆಯ ವ್ಯಾಪಾರ. ಅವತಾರಪುರುಷನು ಇತರ ಸಾಧಾರಣ ಜೀವರಂತೆ ಕರ್ಮ ಫಲದಿಂದ ಜನ್ಮಗ್ರಹಣ ಮಾಡುವುದಿಲ್ಲ. ಹೀಗಿರುವಾಗ ಅಂತಹವನಿಗೆ ಅಜ್ಞಾನ ಎಲ್ಲಿಂದ? ಪೂರ್ಣ ಬ್ರಹ್ಮ ಸನಾತನ,  ಮಾಯಾಧೀಶ, ಮಾಯೆಯ ಆಶ್ರಯ ಮಾಡಿಕೊಂಡು ಲೋಕಕ್ಕೆ ಅವತೀರ್ಣನಾಗುತ್ತಾನೆ; ಮತ್ತು ಯುಗ ಪ್ರಯೋಜನ ಸಿದ್ಧವಾದ ಮೇಲ ಪುನಃ ಸ್ವರೂಪದಲ್ಲಿ ಲೀನವಾಗಿ ಹೋಗುತ್ತಾನೆ. ಆತನ ಕೈಕೊಳ್ಳುವ ಸಾಧನೆ ಭಜನೆ, ಕಠೋರತಪಶ್ಚರಣೆ-ಅವೆಲ್ಲವೂ ಲೋಕಶಿಕ್ಷಣಕ್ಕಾಗಿ ಮಾತ್ರ, ಜಗತ್ತಿನ ಮುಂದೆ ಒಂದು ಆದರ್ಶನವನ್ನು ಇಡುವುದಕ್ಕಾಗಿ. ಅವನಂತೂ ಈಶ್ವರ; ಅವನಂತೂ ಪೂರ್ಣ; ಇನ್ನು ಆತನಿಗೆ ಅಪೂರ್ಣತ್ವ ಎತ್ತಣಿಂದ? ಗೀತೆಯಲ್ಲಿ ಭಗವಾನ್ ಹೇಳಿದ್ದಾನೆ:

ನ ಮೇ ಪಾರ್ಥಾಸ್ತಿ ಕರ್ತವ್ಯಂ ತ್ರಿಷು ಲೋಕೇಷು ಕಿಂಚನ |
ನಾನವಾಪ್ತ ಮವಾಪ್ತವ್ಯಂ ವರ್ತ ಏವ ಚ ಕರ್ಮಣಿ ||

ಅವನಿಗೆ ಯಾವುದೂ ಅಪ್ರಾಪ್ತ ಎಂಬುದಿಲ್ಲ, ಏಕೆಂದರೆ ಅವನು ಪೂರ್ಣ; ಆದರೂ ಲೋಕಶಿಕ್ಷಣಾರ್ಥವಾಗಿ ಕರ್ಮದಲ್ಲಿ ಪ್ರವೃತ್ತನಾಗುತ್ತಾನೆ.

ನ ಮಾಂ ಕರ್ಮಾಣಿ ಲಿಂಪಂತಿ ನ ಮೇ ಕರ್ಮಫಲೇ ಸ್ಪೃಹಾ |
ಇತಿ ಮಾಂ ಯೋsಭಿಜಾನಾತಿ ಕರ್ಮಭಿರ್ನ ಸ ಬಧ್ಯತೇ ||

ಅವನಿಗೆ ಕರ್ಮಫಲದಲ್ಲಿ ಯಾವ ಸ್ಪೃಹೆ ಅಥವಾ ಕಾಮನೆಯೂ ಇಲ್ಲ; ಅಲ್ಲದೆ ಯಾವ ಕರ್ಮ ಸಮುದಯವೂ ಆತನನ್ನು ಲಿಪ್ತನನ್ನಾಗಿ ಮಾಡಲು ಸಮರ್ಥವಾಗುವುದಿಲ್ಲ. ಹಾಗಲ್ಲದೆ ಹೋದರೆ ಆತನ ಈಶ್ವರತ್ವ-ಅವತಾರತ್ವ ಎಲ್ಲಿಂದ? ಅವತಾರನು ಎಷ್ಟು ದಿನ ನರದೇಹವನ್ನು ಆಶ್ರಯಿಸಿಕೊಂಡು ಜಗತ್ತಿನಲ್ಲಿರುತ್ತಾನೆಯೋ ಅಷ್ಟು ದಿನವೂ ವ್ಯವಹಾರಗಳೆಲ್ಲ ಬಾಹ್ಯಿಕ ದೃಷ್ಟಿಗೆ ಸಾಧಾರಣ ಮಾನುಷವಾಗಿ ಕಾಣುತ್ತವೆ-ಸುಖದಲ್ಲಿ ಸುಖಿ, ದುಃಖದಲ್ಲಿ ದುಃಖ ಇದನ್ನೆಲ್ಲ ನೋಡಿ ಮನಸ್ಸಿಗೆ ಅನ್ನಿಸುತ್ತದೆ, ಆತನಿಗೆ ಪೂರ್ಣಜ್ಞಾನ ಎಲ್ಲ ಕಾಲದಲ್ಲಿಯೂ ಇರುವುದಿಲ್ಲ ಎಂದು. ಆದರೆ ಅದಲ್ಲ ನಿಜಾಂಶ. ಠಾಕೂರರ ಜೀವನದಲ್ಲಿ ನಾವು ವಿಶೇಷವಾಗಿ ಗಮನಿಸಿದ್ದೇವೆ, ಐಶ್ವರ್ಯದ ಪ್ರಕಾಶಕ್ಕೆ ಅಲ್ಲಿ ಆದ್ಯತೆ ಇರಲಿಲ್ಲ; ಅವರ ಜೀವನದ ಅಭಿವ್ಯಕ್ತಿ ಮಾನುಷತೆಯ ಭೂಮಿಕೆಯಲ್ಲಿಯೆ ಪ್ರಧಾನವಾಗಿತ್ತು. ಈ ಸಾರಿಯದು ಶುದ್ಧ ಸತ್ತ್ವಭಾವದ ಅವತಾರ. ಅದಕ್ಕಾಗಿಯೇ ಅವರು ಹೇಳುತ್ತಿದ್ದರು: ಇದು ಹೇಗೆಂದರೆ ದೊರೆಯು ಛದ್ಮವೇಷದಲ್ಲಿ ನಗರ ಪರಿಶೀಲನೆ ಮಾಡಲು ಹೋಗುವಂತೆ ಎಂದು. ಠಾಕೂರರ ಈ ಭಾವ ಅರಿಯಲು ಬಹು ಕಠಿಣ. ಕಾಣಲಿಲ್ಲವೆ, ಕೇಶವಬಾಬು ದೇಹತ್ಯಾಗ ಮಾಡಿದಾಗ ಠಾಕೂರರು ಎಷ್ಟೊಂದು ಅತ್ತರು. ‘ಅಯ್ಯೋ, ಕೇಶವ ದೇಹತ್ಯಾಗ ಮಾಡಿಬಿಟ್ಟ, ನನ್ನ ಒಂದು ಅಂಗವೇ ಕಳಚಿ ಬಿದ್ದುಹೋದಂತೆ ಆಗುತ್ತಿದೆ. ಈಗ ಕಲ್ಕತ್ತೆಗೆ ಹೋದಾಗ ಯಾರ ಅಂಗವೇ ಕಳಚಿ ಬಿದ್ದುಹೋದಂತೆ ಆಗುತ್ತಿದೆ. ಈಗ ಕಲ್ಕತ್ತೆಗೆ ಹೋದಾಗ ಯಾರ ಸಂಗಡ ಏನು ಮಾತಾಡಲಿ?’ ಎಂದು ಮೊದಲಾಗಿ, ಯಾರಾದರೂ ಆತ್ಮೀಯ ಸ್ವಜನರು ತೀರಿಕೊಂಡಾಗ ಹೇಗೆ ಶೋಕದಿಂದ ಗೋಳಾಡುತ್ತಾರೊ ಅದೇ ರೀತಿಯಲ್ಲಿ. ಅದನ್ನೆ ಲೀಲೆ ಎಂದು ಕರೆಯುತ್ತಾರೆ. ಅದನ್ನು ಗ್ರಹಿಸುವುದು ತುಂಬ ಕಷ್ಟದ ಕೆಲಸ. ಆಧ್ಯಾತ್ಮ ರಾಮಾಯಣದಲ್ಲಿ ಈ ವಿಚಾರವಾಗಿ ತುಂಬ ಚಮತ್ಕಾರದ ಒಂದು ಕಥೆ ಇದೆ. ಅಲ್ಲಿ ನಾವು ಜ್ಞಾನಭಕ್ತಿಗಳ ಸುಂದರವಾದ ಸಾಮಂಜಸ್ಯ ಕಾಣುತ್ತೇವೆ. ರಾಮಚಂದ್ರನು ಸ್ವಯಂ ಪರಬ್ರಹ್ಮ-ತ್ರಿಕಾಲಜ್ಞ. ರಾವಣನೊಡನೆ ಸಮಸ್ತ ರಾಕ್ಷಸ ಕುಲವನ್ನೂ ಧ್ವಂಸಮಾಡಲೆಂದೂ ಮತ್ತೆ ಧರ್ಮಸಂಸ್ಥಾನ ಮಾಡುವ ಸಲುವಾಗಿಯೂ ಆತನು ನರದೇಹಧಾರಣ ಮಾಡಿದ್ದನು. ರಾವಣನು ಸೀತಾಹರಣ ಮಾಡುತ್ತಾನೆ ಎಂಬುದು ಅವನಿಗೆ ಗೊತ್ತಿತ್ತು. ಆಧ್ಯಾತ್ಮರಾಮಾಣದಲ್ಲಿ ಹೇಳಿರುವ ಪ್ರಕಾರ, ರಾವಣನು ಭಿಕ್ಷುಕ ವೇಷದಿಂದ ಸೀತಾಹರಣ ಮಾಡಲು ಬರುವ ಮುನ್ನವೆ ರಾಮಚಂದ್ರನು ಸೀತೆಗೆ ಹೇಳುತ್ತಾನೆ ‘ಹೇ ಜಾನಕಿ, ರಾವಣನು ಸೀತಾಹರಣ ಮಾಡುತ್ತಾನೆ ಎಂಬುದು ಅವನಿಗೆ ಗೊತ್ತಿತ್ತು. ಆಧ್ಯಾತ್ಮರಾಮಾಯಣದಲ್ಲಿ ಹೇಳಿರುವ ಪ್ರಕಾರ, ರಾವಣನು ಭಿಕ್ಷುಕ ವೇಷದಿಂದ ಸೀತಾಹರಣ ಮಾಡಲು ಬರುವ ಮುನ್ನವೆ ರಾಮಚಂದ್ರನು ಸೀತೆಗೆ ಹೇಳುತ್ತಾನೆ ‘ಹೇ ಜಾನಕಿ, ರಾವಣನು ಭಿಕ್ಷುಕ ರೂಪದಿಂದ ನಿನ್ನನ್ನು ಹರಣಮಾಡಲು ಬರುತ್ತಾನೆ; ನೀನು, ನಿನ್ನ ಛಾಯಾಮೂರ್ತಿಯನ್ನು ಕುಟೀರದಲ್ಲಿ ನಿಲ್ಲಿಸಿ, ಅಗ್ನಿಪ್ರವೇಶಮಾಡು; ಆಮೇಲೆ ಅದೃಶ್ಯರೂಪದಿಂದ ಒಂದು ಸಂವತ್ಸರ ಕಾಲ ಇರು. ರಾವಣನ ವಧೆಯ ಅನಂತರ ಮತ್ತೆ ನನ್ನೊಡನೆ ಮಿಲನವಾಗುವೆ.’ ಹಾಗೆ ಹೇಳಿ ಸೀತೆಗೆ ಅಗ್ನಿಪ್ರವೇಶ ಮಾಡಿಸುತ್ತಾನೆ. ಆದರೂ ಸೀತಾಹರಣದ ಅನಂತರ ಎಂತಹ ಶೋಕಪ್ರಕಾಶನ! ಆಹಾರ ನಿದ್ರೆಗಳನ್ನು ಪರಿತ್ಯಾಗಮಾಡಿ ಹಗಲಿರುಳೂ ಅಳುತ್ತಾನೆ; ಅಲ್ಲದೆ ಸೀತೆಯನ್ನು ಹುಡುಕಿ ಹುಡುಕಿ ತೊಳಲುತ್ತಾನೆ. ವೃಕ್ಷಲತೆ ಪಶು ಪಕ್ಷಿ ಎಲ್ಲದರ ಮುಂದೆಯೂ ರೋದಿಸುತ್ತಾ ಸೀತೆಯ ಸುದ್ದಿಗಾಗಿ ಗೋಗರೆಯುತ್ತಾನೆ. ಹಾಯ್ ಹಾಯ್ ಎಂದು ಶೋಕಿಸುತ್ತಾ ಪರ್ವತಾರಣ್ಯಗಳಲ್ಲಿ ಅಲೆದಲೆದು ಹುಡುಕುತ್ತಾನೆ! ಇವೆಲ್ಲ ಅತಿವಿಚಿತ್ರವೆಂಬಂತೆ ತೋರುತ್ತವೆ! ಅದರ ನಿಜಾಂತಸ್ಥ ಅರಿಯುವುದೇನು ಸುಲಭವಲ್ಲ.

ಸಾಂಕುಶಾ ವಿಷಯೈಸ್ತೃಪ್ತಿರಿಯಂ ತೃಪ್ತಿರ್ನಿರಂಕುಶಾ |
ಕೃತಂ ಕೃತ್ಯಂ ಪ್ರಾಪಣೀಯಂ ಪ್ರಾಪ್ತಮಿತ್ಯೇವ ತೃಪ್ಯತಿ || -“ಪಂದಶೀ” ೭-೨೪೮

“ವಿಷಯಲಾಭದಿಂದ ಆಗುವ ತೃಪ್ತಿ ಸಾಂಕುಶ ಎನಿಸುತ್ತದೆ; ಇನ್ನೊಂದು ತೃಪ್ತಿ ನಿರಂಕುಶ ಎನಿಸುತ್ತದೆ. ಅದು ಹೇಗೆಂದರೆ: ಮಾಡಬೇಕಾದದ್ದು ಮಾಡಲ್ಪಟ್ಟಿದೆ; ಹೊಂದಬೇಕಾದದ್ದು ಹೊಂದಲ್ಪಟ್ಟಿದೆ ಎಂದು ತೃಪ್ತನಾಗುತ್ತಾನೆ.”

* * *