ಬೇಲೂರು ಮಠ
ಡಿಸೆಂಬರ್ ,೧೯೨೯

ಹಿರಿಯ ಸಂನ್ಯಾಸಿಯೊಬ್ಬರು ಪ್ರಣಾಮ ಮಾಡಿ ಕುಶಲ ಪ್ರಶ್ನೆ ಕೇಳಿದರು ಮಹಾಪುರುಷ ಮಹಾರಾಜ್ ನಗುನಗುತ್ತ ಪಕ್ಕದಲ್ಲಿದ್ದ ಸೇವಕ ಸಾಧುವಿನ ಕಡೆ ಕೈ ತೋರಿಸಿ ‘ಶರೀರ ಹೇಗಿದೆ ಎಂಬುದರ ವಿಚಾರ ಬೇಕಾದರೆ ಈತನನ್ನು ಕೇಳುವುದು ಮೇಲು. ಆ ವಿಚಾರದಲ್ಲಿ ನನಗೇನೂ ಆಸಕ್ತಿ ಇಲ್ಲ. ಎಷ್ಟೊ ಸಾರಿ ನನಗೊಂದು ದೇಹವಿದೆ ಎಂಬ ಪ್ರಜ್ಞೆಯೇ ನನಗಿರುವುದಿಲ್ಲ. ನಿಜಾಂಶ ಅದು. ಆದರೆ ಜನ ಬಂದು ಯೋಗಕ್ಷೇಮ ವಿಚಾರಿಸುತ್ತಾರೆ; ಆ ಸಮಯಕ್ಕೆ ಏನು ಮನಸ್ಸಿಗೆ ಬರುತ್ತದೆಯೋ ಹಾಗೆ ಹೇಳಿಬಿಡುತ್ತೇನೆ. ನನಗೆ ಗೊತ್ತಿರುವುದೇನೆಂದರೆ, ನನ್ನ ದೇಹ ಮನಸ್ಸು ಪ್ರಾಣ ಎಲ್ಲವೂ ಆತನ ಚರಣಕ್ಕೆ ಅರ್ಪಿತವಾಗಿ ಹೋಗಿವೆ-ಎಲ್ಲ ಅವನದೆ. ಈಗ ಅವನಿಗೆ ಹೇಗೆ ಇಚ್ಛೆ ಬರುತ್ತದೆಯೋ ಹಾಗೆ ಮಾಡುತ್ತಾನೆ. ಈ ಶರೀರ ಇರುವುದರಿಂದ ಏನಾದರೂ ಪ್ರಯೋಜನವಿರುವುದೆಂದು ಅವನಿಗೆ ತೋರಿದರೆ ಇರಿಸುತ್ತಾನೆ. ಇಲ್ಲದಿದ್ದರೆ, ನಾನೇನೊ ಅವನ ಮೊದಲ ಕರೆಗೇ ಹೊರಡಲು ಸಿದ್ಧನಾಗಿದ್ದೇನೆ.  ಹಾಗೆಂದ ಮಾತ್ರಕ್ಕೆ ನಾನೇನು ಈ ಶರೀರದ ಆರೋಗ್ಯದ ಬಗ್ಗೆ ಅಲಕ್ಷ್ಯ ಮಾಡುತ್ತಿಲ್ಲ. ಡಾಕ್ಟರುಗಳೂ ನೀವೂ ಎಲ್ಲ ಏನು ಮಾಡುತ್ತೀರೊ ಅದರಂತೆ ವರ್ತಿಸಲು ಪ್ರಯತ್ನ ಮಾಡುತ್ತಲೆ ಇದ್ದೇನೆ. ಈ ಶರೀರಕ್ಕೋಸ್ಕರ (ಸೇವಕ ಸಾಧುವಿನ ಕಡೆಗೆ ತಿರುಗಿ ನೋಡಿ) ಇವರಿಗೆಲ್ಲ ಎಷ್ಟು ಕಷ್ಟ ಕೊಡುತ್ತಿದ್ದೇನೆ! ಯಾಕೆ ಹಾಗೆ ಮಾಡುತ್ತೇನೆಂದು ನಿನಗೆ ಗೊತ್ತೆ? ಈ ದೇಹವಾದರೊ ಸಾಧಾರಣ ದೇಹದಂತೆ ಅಲ್ಲ. ಇದಕ್ಕೆ ಒಂದು  ವಿಶೇಷತ್ವ ಇದೆ. ಈ ಶರೀರದ ಮುಖಾಂತರ ಭಗವತ್ ಉಪಲಬ್ಧಿ ಆಗಿದೆ; ಈ ಶರೀರ ಭಗವಂತನ ಸ್ಪರ್ಶ ಮಾಡಿದೆ; ಆತನೊಡನೆ ವಾಸ ಮಾಡಿದೆ; ಆತನ ಸೇವೆ ಮಾಡಿದೆ, ಈ ಶರೀರವನ್ನು ಆತನು ಯುಗಧರ್ಮ ಪ್ರಚಾರದ ಯಂತ್ರಸ್ವರೂಪವನ್ನಾಗಿ ಮಾಡಿದ್ದಾನೆ, ಅದಕ್ಕೇ. ಹಾಗಲ್ಲದಿದ್ದರೆ ಈ ಬರೀ ದೇಹ ಎಂದರೆ ಏನು, ರಕ್ತ ಮಾಂಸದ ಮುದ್ದೆಯಲ್ಲವೆ? ತಮ್ಮ ಸೇವೆ ಮಾಡಲು ಠಾಕೂರರು ನನಗೆ ಸುಲಭಕ್ಕೆ ಸಮ್ಮತಿ ಕೊಡುತ್ತಿರಲಿಲ್ಲ. ಆದ್ದರಿಂದ ನನ್ನ  ಮನಸ್ಸಿಗೆ ಎಷ್ಟೋ ಸಾರಿ ನೋವಾಗುತ್ತಿತ್ತು. ಅವರು ಯಾಕೆ ಹಾಗೆ ಮಾಡುತ್ತಾರೆ ಎಂಬುದು ಆಮೇಲೆ ಒಂದು ದಿನ ನಡೆದ ಘಟನೆಯಿಂದ ನನಗೆ ಗೊತ್ತಾಯಿತು. ಅವರ ಮನಸ್ಸು ಯಾರಿಗೆ ತಿಳಿಯುತ್ತದೆ? ಒಂದು ದಿನ ನಾನು ಇತರ ಅನೇಕ ಭಕ್ತರೊಡನೆ ದಕ್ಷಿಣೇಶ್ವರದಲ್ಲಿ ಇದ್ದೆ.  ಅವರು ತಮ್ಮ ಕೊಠಡಿಯಲ್ಲಿ ಕುಳಿತು ಅನೇಕ ಧರ್ಮ ಪ್ರಸಂಗ ಮಾಡಿದ ತರುವಾಯ ಶೌಚಕ್ಕೆಂದು ಮರದ ತೋಪಿನ ಕಡೆಗೆ ಹೋದರು. ಸಾಧಾರಣವಾಗಿ ಅವರು ಶೌಚಕ್ಕೆ ಹೋಗುವುದನ್ನು ನೋಡಿದಾಗ ಅಲ್ಲಿದ್ದ ಭಕ್ತರಲ್ಲಿ ಯಾರಾದರೊಬ್ಬರು ಅವರ ತಂಬಿಗೆ ತೆಗೆದುಕೊಂಡು ಹಿಂದೆಯೇ ಹೋಗಿ, ಶೌಚಾನಂತರ ಅವರ ಕೈಗೆ ನೀರು ಹಾಕುತ್ತಿದ್ದುದು ರೂಢಿ. ಎಷ್ಟೊ ಸಾರಿ ಅವರಿಗೆ ಲೋಹದ ವಸ್ತುಗಳನ್ನು ಮುಟ್ಟಲಾಗುತ್ತಿರಲಿಲ್ಲ. ಅದು ಹೇಗಾದರಾಗಲಿ, ಆ ದಿನ ಅವರು ಶೌಚಕ್ಕೆ ಹೋಗುತ್ತಿರುವುದನ್ನು ನೋಡಿ ನಾನೆ ತಂಬಿಗೆ ಹಿಡಿದುಕೊಂಡು ಗಾಳಿ ಮರಗಳ ಕಡೆ ಹೋದೆ. ಅವರು ಶೌಚಾನಂತರ ನಾನು ತಂಬಿಗೆ ಹಿಡಿದುಕೊಂಡು ನಿಂತುದನ್ನು ನೋಡಿ ಹೇಳಿದರು; ‘ನೋಡಿದೆಯಾ, ನೀನೇಕೆ ತಂದೆ ನೀರಿನ ತಂಬಿಗತೇನ? ಆ ನೀರನ್ನು ನಾನು ಹೇಗೆ ತೆಗೆದುಕೊಳ್ಳಲಿ? ನಿನ್ನ ಕೈಯಿಂದ ನಾನು ಹೇಗೆ ತೆಗೆದುಕೊಳ್ಳಲಿ? ನಿನ್ನ ಕೈಯಿಂದ ನಾನು ಹೇಗೆ ಸೇವೆ ಮಾಡಿಸಿಕೊಳ್ಳಲಿ? ನಿನ್ನ ತಂದೇನ ನಾನು ಗುರುವಿನಂತೆ ಗೌರವಿಸುತ್ತೇನಲ್ಲ ‘! ಎಂದು. ಅವರು ಹೇಳಿದ್ದನ್ನು ಕೇಳಿ ನಾನು ಅವಾಕ್ಕಾದೆ! ಆವಾಗ ನಗನೆ ಗೊತ್ತಾಯಿತು, ಅವರು ಏಕೆ ನನ್ನ ಕೈಯಿಂದ ಎಲ್ಲ ತರಹದ ಸೇವೆ ಮಾಡಿಸಿಕೊಳ್ಳುತ್ತಿರಲಿಲ್ಲ ಎಂದು. ಅನಂತ ಭಾವಮಮಯರು ಅವರು: ಅವರ ಭಾವವನ್ನು ಯಾರು ಅರಿಯುತ್ತಾರೆ? ಆತನು ದಯೆ ತೋರಿ ಎಷ್ಟನ್ನು ತಿಳಿದುಕೊಳ್ಳುವಂತೆ ಮಾಡುತ್ತಾನೊ ಅಷ್ಟನ್ನು ಮಾತ್ರ ಮನುಷ್ಯ ತಿಳಿದುಕೊಳ್ಳಲು ಸಾಧ್ಯ.

ಆಮೇಲೆ ದೀಕ್ಷೆ ಕೊಡುವ ಪ್ರಸ್ತಾಪ ಬಂತು ಆ ವಿಚಾರವಾಗಿ ಮಹಾಪುರುಷಜಿ ಹೇಳಿದರು-“ಇಲ್ಲ, ದೀಕ್ಷೆ ಕೊಡುವಾಗ ನನಗೆ ಏನು ಕಷ್ಟವಾಗುವುದಿಲ್ಲ; ಬದಲಾಗಿ ಅತ್ಯಂತ ಆನಂದವೇ ಆಗುತ್ತದೆ. ಭಕ್ತರು ಬರುತ್ತಾರೆ. ಠಾಕೂರರ ಹೆಸರು ಕೊಡುತ್ತೇನೆ, ಅವರ ಜೊತೆ ಠಾಕೂರರ ವಿಚಾರವಾಗಿ ಮಾತುಕತೆ ನಡೆಸುತ್ತೇನೆ. ನಮ್ಮ ದೀಕ್ಷಾ ಪ್ರದಾನದಲ್ಲಿ ಯಾವ ಭಟ್ಟಾಚಾರ್ಜಿಗಿರಿಯೂ ಇರುವುದಿಲ್ಲ. ಅಲ್ಲದೆ ಅಂಥಾ ಅಂತ್ರ ಮಂತ್ರ ಯಾವುದೂ ವಿಶೇಷವಾಗಿ ನನಗೆ ಗೊತ್ತೂ ಇಲ್ಲ; ಅವನ್ನು ತಿಳಿದುಕೊಳ್ಳುವುದರಿಂದ ಪ್ರಯೋಜನವೂ ಇದೆ ಎಂದು ನಾನು ಭಾವಿಸಿಯೂ ಇಲ್ಲ. ನನಗೆ ಗೊತ್ತಿರುವುದು ಠಾಕೂರರು-ಅವರೇ ಸರ್ವಸ್ವ. ಅವರದೇ ನಾಮ, ಅವರದೇ ಶಕ್ತಿ. ಅವರ ಇಚ್ಛೆಯ ಮೇರೆಗೆ ಅವರದೆ ಹೆಸರನ್ನು ಎಲ್ಲರಿಗೂ ಕೊಡುತ್ತೇನೆ. ಮತ್ತೆ ಪ್ರಾರ್ಥನೆ ಮಾಡುತ್ತೇನೆ,-ಠಾಕೂರ್‌, ತಾವು ಇವರನ್ನು ಕೃಪೆಯಿಟ್ಟು ಸ್ವೀಕರಿಸಿ; ಇವರಿಗೆ ಭಕ್ತಿ ವಿಶ್ವಾಸಗಳನ್ನು ದಯಪಾಲಿಸಿ ದಯೆ ತೋರಿ’ ಎಂದು. ಅವರೂ ಎಲ್ಲರ ಹೃದಯಗಳಲ್ಲಿಯೂ ಭಕ್ತಿ ವಿಶ್ವಾಸಗಳು ಮೂಡುವಂತೆ ಮಾಡಿಯೆ ಮಾಡುತ್ತಲೂ ಇದ್ದಾರೆ. ನಮಗೆ ಠಾಕೂರರೆ ಸರ್ವವೂ;

ತ್ವಮೇವ ಮಾತಾ ಚ ಪಿತಾ ತ್ವಮೇವ
ತ್ವಮೇವ ಬಂಧುತ್ವ ಸಖಾ ತ್ವಮೇವ,
ತ್ವಮೇವ ವಿದ್ಯಾ ದ್ರವಿಣಂ ತ್ವಮೇವ,
ತ್ವಮೇವ ಸರ್ವಂ ಮಮ ದೇವದೇವ ||*

ಯಾರು ಏನನ್ನು ಪ್ರಾರ್ಥಿಸುತ್ತಾರೊ ಅದರಂತೆಯೆ ಅವರವರಿಗೆ ಧರ್ಮ, ಅರ್ಥ, ಕಾಮ, ಮೋಕ್ಷಾದಿ ಚತುರ್ವರ್ಗ ಫಲಗಳನ್ನು ಕೊಡುತ್ತಾನೆ. ಇವರಲ್ಲಿಯೇ ಇರುವುದು ಶ್ರೀ ಗುರುಮಹಾರಾಜರ ಮಹಾತ್ಮ್ಯ; ಅವರ ನಾಮ ಸ್ವೀಕಾರದಿಂದ ಶಾಂತಿ, ಅವರ ಚಿಂತನ ಮಾಡುವುದರಿಂದ ಶಾಂತಿ. ಅವರು ಯುಗಾವತಾರ ರಾಗಿರುವುದರಿಂದ ಇದೆಲ್ಲವೂ ನಿಜವಾಗುತ್ತದೆ-ಎಲ್ಲವೂ ಆಗಿಯೇ ಆಗುತ್ತದೆ. ಜೊತೆಗೆ ಅವರ ಆಕರ್ಷಣೀಯ ಶಕ್ತಿ ಎಂಥಾದ್ದೆಂದರೆ, ತಮಗೆ ತಾವೆ ಜನ ಆಕೃಷ್ಟರಾಗಿರುತ್ತಾರೆ-ಅವರು ಯಾವ ಸಂಪ್ರದಾಯಕ್ಕೆ ಸೇರಿರಲಿ ಬಿಡಲಿ.

* * ** ಹೇ ದೇವ, ನೀನೆ ನನ್ನ ತಾಯಿ, ನೀನೆ ತಂದೆ, ನೀನೆ ಬಂಧು, ನೀನೆ ಸಖ, ನೀನೆ ವಿದ್ಯೆ, ನೀನೆ ಐಶ್ವರ್ಯ, ನೀನೆ ನನ್ನ ಸರ್ವವೂ ಆಗಿದ್ದೀಯೆ.