ಬೇಲೂರು ಮಠ  
ಡಿಸೆಂಬರ್ ೧೮, ೧೯೨೯

ಮಾತು ದಕ್ಷಿಣಭಾರತ ಮತ್ತು ಸಿಂಹಳದ ವಿಚಾರವಾಗಿ ನಡೆದಿತ್ತು ಮಹಾಪುರುಷಜಿ ಹೇಳಿದರು “ಹೌದು, ಸಿಲೋನಿಗೆ ಹೋಗಿದ್ದೆ. ಸ್ವಾಮೀಜಿ ಭಾರತವರ್ಷಕ್ಕೆ ಹಿಂತಿರುಗಿ ಬಂದು ಕೆಲವು ತಿಂಗಳಾದ ಮೇಲೆ ನನ್ನನ್ನು ವೇದಾಂತ ಪ್ರಚಾರಕ್ಕಾಗಿ ಅಲ್ಲಿಗೆ ಕಳುಹಿಸಿದರು. ನಾನು ಕೊಲಂಬೋದಲ್ಲಿ ಏಳೆಂಟ ತಿಂಗಳಿದ್ದೆ, ಒಂದು ಸತ್ರದಲ್ಲಿ. ಗೊತ್ತುಮಾಡಿದಂತೆ ಕ್ರಮವಾಗಿ ಗೀತಾ ತರಗತಿಗಳನ್ನು ಮತ್ತು ಧರ್ಮ ಪ್ರಸಂಗಾದಿಗಳನ್ನುಇಟ್ಟುಕೊಂಡಿದ್ದೆ; ಅನೇಕ ಜನರು ಬರುತ್ತಿದ್ದರು. ಚೆನ್ನಾಗಿತ್ತು. ಅಲ್ಲಿಯ ಪ್ರಸಿದ್ಧ ದೇವಾಲಯಗಳನ್ನು ಹೋಗಿ ನೋಡಿದೆ. ಅಲ್ಲಿ ಬುದ್ಧ ದೇವನ ಒಂದು ದಂತ ಮಂದಿರವಿದೆ; ಅಲ್ಲಿ ಆತನ ಹಲ್ಲೊಂದನ್ನು ಇಟ್ಟಿದ್ದಾರೆಂದು ಪ್ರತೀತಿ. ಎಂತಹ ವಿರಾಟ್ ಪ್ರಮಾಣದ ಭವ್ಯರಚನೆ ಅದು! ಆ ಮಂದಿರದ ಮಹತ್ತನ್ನು ನೋಡಿಯೇ ಜನ ವಿಸ್ಮಯದಿಂದ ಸ್ತಂಭೀಭೂತರಾಗುತ್ತಾರೆ! ಸ್ವಾಮೀಜಿ ಅಮೇರಿಕಾದಿಂದ ಹಿಂದಕ್ಕೆ ಮದ್ರಾಸಿಗೆ ಬರುವಾಗ ಅವರನ್ನು ಕೂಡಿಕೊಳ್ಳುವುದಕ್ಕಾಗಿ ಮೊದಲೇ ನಾನು ಆ ನಗರಕ್ಕೆ ಹೋಗಿದ್ದೆ.  ಅದಕ್ಕಿಂತಲೂ ಮೊದಲು ಒಮ್ಮೆ ನಾನು ಆ ನಗರಕ್ಕೆ ಹೋಗಿದ್ದೆ; ರಾಮೇಶ್ವರಕ್ಕೂ ಹೋಗಿದ್ದೆ; ಸ್ವಲ್ಪ ಹೆಚ್ಚು ಕಡಿಮೆ ದಕ್ಷಿಣ ಭಾರತದ ಎಲ್ಲ ತೀರ್ಥಸ್ಥಾನಗಳನ್ನೂ ದರ್ಶನ ಮಾಡಿ ಬಂದಿದ್ದೆ. ಆ ಬೃಹತ್ ದೇವಾಲಯಗಳ ವಿರಾಟ್ ಪ್ರಮಾಣಗಳನ್ನು ನೋಡಿಯೇ ಯಾರಿಗಾದರೂ ಗೊತ್ತಾಗುತ್ತದೆ-ಭಾರತವಾಸಿಗಳು ಎಷ್ಟು ಧರ್ಮಪ್ರಾಣರಾಗಿದ್ದಾರೆ ಎಂದು. ಅವರ ಸಕಲಕರ್ಮಗಳ ಕೇಂದ್ರವೇ ಭಗವಂತನಾಗಿದ್ದಾನೆ; ಆತನನ್ನೆ ಅವರು ನಾನಾ ಭಾವಗಳಲ್ಲಿ ಸೇವಿಸಬೇಕೆಂಬುದೇ ಭಕ್ತರ ಆಸೆ; ಅದರಲ್ಲಿಯೆ ಅವರಿಗೆ ಆನಂದ ಮತ್ತು ತೃಪ್ತಿ.”

ಒಬ್ಬ ಸಂನ್ಯಾಸಿ: “ಸಿಲೋನ್ ಹೇಗೆ ಹಿಡಿಸಿತು ತಮಗೆ, ಮಹಾರಾಜ್?”

ಮಹಾರಾಜ್: “ನನಗೆ ಎಲ್ಲ ಸ್ಥಳಗಳೂ ಹಿಡಿಸುತ್ತವೆ. ಎಲ್ಲಿಯಾಗಲಿ ಯಾವಾಗಲಾಗಲಿ ಯಾವ ಸ್ಥಳದಲ್ಲಿಯೂ ಅತೃಪ್ತಿಬೋಧೆಯಾಗುವುದಿಲ್ಲ ನನಗೆ. ಎಲ್ಲಿಯೇ ಇರಲಿ ಆನಂದದಿಂದಿರುತ್ತೇನೆ. ಭಗವಂತ ಬಳಸಿದಿದ್ದರೆ ಎಲ್ಲ ಸ್ಥಳಗಳಲ್ಲಿಯೂ ಆನಂದವೆ. ಹೌದು, ಸಿಲೋನು ಮತ್ತು ದಕ್ಷಿಣಭಾರತ ಎರಡೂ ನನಗೆ ತುಂಬಾ ಮೆಚ್ಚಿಗೆಯಾಗಿವೆ.”

ಸಂನ್ಯಾಸಿ: “ಮಹಾರಾಜ್, ತಮ್ಮ ಚಿಕ್ಕಂದಿನ ಹೆಸರು ತಾರಕನಾಥ ಎಂದಿದ್ದುದಕ್ಕೆ ಏನಾದರೂ ವಿಶೇಷ ಕಾರಣವಿತ್ತೇ?”

ಮಹಾಪುರುಷಜಿ: “ಹ್ಞೂ, ಕೇಳಿದ್ದೆ. ಬಹಳಕಾಲ ಮಕ್ಕಳುಗಿಕ್ಕಳು ಆಗದಿದ್ದ ಪ್ರಯುಕ್ತ ನನ್ನ ಅಮ್ಮ ಅಪ್ಪ ಶ್ರೀ ತಾರಕೇಶ್ವರನಿಗೆ (ಕಲ್ಕತ್ತೆಗೆ ವಾಯವ್ಯ ದಿಕ್ಕಿನಲ್ಲಿ ಮೂವತ್ತು ಮೈಲಿ ದೂರದಲ್ಲಿರುವ ತಾರಕೇಶ್ವರ ದೇವಾಲಯದ ಶಿವನಿಗೆ) ಹೇಳಿಕೊಂಡು, ವ್ರತಾಚರಣೆ ಮಾಡಿ, ಒಂದು ಮಗುವಾಗಲಿ ಎಂದು ಪ್ರಾರ್ಥನೆ ಮಾಡಿದ್ದರಂತೆ. ಶ್ರೀತಾರಕನಾಥ ನನ್ನ ಅಮ್ಮನಿಗೆ ಸ್ವಪ್ನದಲ್ಲಿ ಕಾಣಿಸಿಕೊಂಡು ‘ನಿನಗೊಬ್ಬ ಸುಪುತ್ರನಾಗುತ್ತಾನೆ’ ಎಂದು ಹೇಳಿದನಂತೆ. ಆದಾದ ತರುವಾಯ ನಾನು ಹುಟ್ಟಿದುದರಿಂದ ನನಗೆ ತಾರಕನಾಥ ಎಂದೆ ಹೆಸರಿಟ್ಟರು. ನನ್ನನ್ನು ಹೆತ್ತಮ್ಮ-ಅವರ ಹೆಸರು ವಾಮಸುಂದರಿ ಎಂದು-ಅವರು ಧರ್ಮ ಪ್ರಾಣರಾಗಿದ್ದರು; ಮತ್ತು ಲಕ್ಷ್ಮಿ ಭಾವನೆಗಳನ್ನೆಲ್ಲಾ ನಾನು ಅವರಿಂದಲೆ ಪಡೆದದ್ದು. ನನ್ನ ತಂದೆಯೂ ತುಂಬ ಧಾರ್ಮಿಕರಾಗಿದ್ದರು.ಅ ಅವರ ಆದಾಯವೂ ಯಥೇಚ್ಛವಾಗಿತ್ತು. ಅವರು ಸುಮಾರು ಇಪ್ಪತ್ತೈದು ಮೂವತ್ತು ಜನ ಹುಡುಗರನ್ನು ಮನೆಯಲ್ಲಿಯೆ ಇಟ್ಟುಕೊಂಡು ಅನ್ನ ಬಟ್ಟೆ ಕೊಟ್ಟು ಓದಿಸುತ್ತಿದ್ದರು. ಅವರೆಲ್ಲ ಬರಾಸತ್ ಸ್ಕೂಲಿಗೆ ಹೋಗುತ್ತಿದ್ದರು. ನಾನೂ ಅವರ ಜೊತೆಯಲ್ಲಿಯೇ ಇರುತ್ತಿದ್ದರು. ನನ್ನ ತಂದೆ ಒಬ್ಬ ಅಡುಗೆಯವನನ್ನು ಇಟ್ಟುಕೊಳ್ಳಬೇಕೆಂದಿದ್ದರೂ ನನ್ನಮ್ಮ ಒಪ್ಪುತ್ತಿರಲಿಲ್ಲ. ಅವರು ಹೇಳುತ್ತಿದ್ದರು; ‘ಇದೊಂದು ನಮ್ಮ ಭಾಗ್ಯವಲ್ಲವೆ, ಇಷ್ಟೊಂದು ಮಕ್ಕಳಿಗೆ ಅಡಿಗೆಮಾಡಿ ಉಣಿಸೋದು?’ ನನಗೆ ನನ್ನ ತಾಯಿಯ ಹತ್ತಿರ ಅಂತಹ ಹೆಚ್ಚಿನ ಅದರ ಸ್ನೇಹ ಏನೂ ದೊರೆಯುತ್ತಿರಲಿಲ್ಲ. ಅವರ ಕಾಲವೆಲ್ಲ ಕೆಲಸ ಭಕ್ತಿಯಲ್ಲಿಯೇ ಕಳೆದು ಹೋಗುತ್ತಿತ್ತು. ಆ ಇಪ್ಪತ್ತೈದು ಮೂವತ್ತು ಹುಡುಗರ ನಡುವೆ ನಾನೂ ಒಬ್ಬನಾಗಿದ್ದೆ. ನನಗಾಗಿ ಅಲಾಯಿದ ಊಟ ತಿಂಡಿ ಏನೂ ಕೊಡುತ್ತಿರಲಿಲ್ಲ; ಎಲ್ಲರ ಜೊತೆಯಲ್ಲಿಯೇ ತಿನ್ನುತ್ತಿದ್ದೆ. ಕೆಲವರೇನೂ ಹೇಳುತ್ತಿದ್ದರು ‘ತನ್ನ ಮಗನಿಗೇ ಏನೂ ಅಕ್ಕರೆ ತೋರಿಸುವುದಿಲ್ಲ’ ಎಂದು. ಅದಕ್ಕೆ ಅಮ್ಮ ಹೇಳುತ್ತಿದ್ದರು ‘ಅವನ (ಅಂದರೆ ತಾರಕನಾಥನ) ಮಗು, ನನ್ನದೇನಲ್ಲ, ಅವನು ಕೃಪೆ ಮಾಡಿ ಕೊಟ್ಟಿದ್ದಾನೆ, ಅವನೇ ನೋಡಿಕೊಳ್ಳುತ್ತಾನೆ.’ ನನ್ನಮ್ಮ ತೀರಿಕೊಂಡಾಗ ನನಗೆ ಸುಮಾರು ಒಂಬತ್ತು ವರ್ಷ. ಅದರಿಂದಲೆ ನನಗೆ ಅವರ ವಿಷಯವಾಗಿ ಹೆಚ್ಚಿನ ನೆನಪು ಇಲ್ಲ. ತಂದೆ ಕನೈಘೋಷಾಲರು ತುಂಬ ಧಾರ್ಮಿಕರೂ ಗುಣಿಗಳೂ ಆಗಿದ್ದರು. ರಾತ್ರಿಯ ಹೊತ್ತು. ‘ತಾಯಿ, ಏಕೆ ಹೀಗೆ ಮಾಡುತ್ತೀಯ? ನನಗೆ ಇನ್ನಾದರೂ ಕೃಪೆಮಾಡದೆ ಇದ್ದೀಯಲ್ಲಾ?’ ಎಂದು ಅವರು ದೇವಿಯ ದರ್ಶನಕ್ಕಾಗಿ ಬಿಕ್ಕಿ ಬಿಕ್ಕಿ ಅಳುತ್ತಿದ್ದರು.

“ನನ್ನ ಅಮ್ಮನೂ ಲಕ್ಷ್ಮಿಯೆ ಆಗಿದ್ದರು. ಅವರು ತೀರಿಕೊಂಡಮೇಲೆ ನನ್ನ ತಂದೆಯವರ ಆದಾಯವೂ ಕಡಿಮೆಯಾಗುತ್ತಾ ಹೋಯಿತು. ಅವರಿಗೆ ಅನೇಕ ಧನ ಧಾನ್ಯ ಇತ್ತು. ಆದರೆ ಆದಾಯ ಕಡಿಮೆಯಾದ ಮೇಲೆ ಮೊದಲಿನಂತೆ ದಾನ ಧರ್ಮ ಮಾಡಲು ಸಾಧ್ಯವಾಗುತ್ತಿರಲಿಲ್ಲ. ನಾನಂತೂ ತುಂಬಾ ಭಾಗ್ಯಶಾಲಿಯೆ. ಏಕೆಂದರೆ ಅಂತಹ ತಾಯಿ ತಂದೆಯರ ಹೊಟ್ಟೆಯಲ್ಲಿ ಹುಟ್ಟಿದ್ದೆ. ಅಪ್ಪ ಅಮ್ಮ ಒಳ್ಳೆಯವರಾಗಿದ್ದರೆ ಮಕ್ಕಳೂ ಒಳ್ಳೆಯವರಾಗಿರಲೂ ಸಾಧ್ಯ. ನನ್ನ ತಂದೆ ಯಥೇಷ್ಟ ತ್ಯಾಗಮಾಡಿದ್ದರು. ಆದರೆ ತಾವು ವಾಸಮಾಡುವುದಕ್ಕೆ ಒಂದು ಒಳ್ಳೆಯ ಮನೆಯನ್ನು ಕಟ್ಟಿಸಿಕೊಳ್ಳಲಿಲ್ಲ. ಹಣವನ್ನೆಲ್ಲ ಬಡವರು ದುಃಖಿಗಳ ಸೇವಾರ್ಥವಾಗಿ ಖರ್ಚು ಮಾಡಿಬಿಡುತ್ತಿದ್ದರು. ನನ್ನ ತಂದೆ ತಾಂತ್ರಿಕ ಸಾಧಕರಾಗಿದ್ದರು. ಅವರ ಹತ್ತಿರಕ್ಕೆ ಕಾಮಾಖ್ಯದಿಂದ ಒಬ್ಬ ಸಾಧಕ ಭಟ್ಟಾಚಾರ್ಯ ಬಂದಿದ್ದರು. ಒಳ್ಳೆ ತೇಜಸ್ವಿ, ಕುಳ್ಳಗಿದ್ದರು; ಒಳ್ಳೆ ಮೈಬಣ್ಣ; ಸ್ವಲ್ಪ ಹೆಚ್ಚು ಕಡಮೆ ಕೆಂಪು ಎಂದೆ ಹೇಳಬಹುದು. ಅವರಿಬ್ಬರೂ ಇಡೀ ರಾತ್ರಿ ಪೂಜಾದಿಗಳಲ್ಲಿ ತೊಡಗಿರುತ್ತಿದ್ದರು. ಮನೆಯಲ್ಲಿಯೆ ಒಂದು ಪಂಚಮುಂಡಿ ಆಸನ (ಐದು ತಲೆಬುರುಡೆಗಳಿಂದ ಕೂಡಿದ ಪೀಠ) ರಚಿಸಿದ್ದರು. ಒಂದು ಸಾರಿ ಪೂಜಾ ಸಮಯದಲ್ಲಿ ಘಟಸ್ಥಾಪನೆಮಾಡಿ ಅದರಲ್ಲಿ ಒಂದು ಹಸಿರು ತೆಂಗಿನ ಕಾಯಿ ಇಟ್ಟಿದ್ದರಂತೆ. ಆ ತೆಂಗಿನಕಾಯಿಯಿಂದ ಒಂದು ದೊಡ್ಡ ಮರ ಮಹಡಿಯ ಮುಟ್ಟಾ ಬೆಳೆದುಬಿಟ್ಟಿತ್ತಂತೆ.”

* * *