ಬೇಲೂರು ಮಠ  
ಬುಧವಾರ, ಡಿಸಂಬರ್ ೨೫, ೧೯೨೯

ಕಳೆದ ರಾತ್ರಿ ‘ಕ್ರಿಸ್‌ಮಸ್ ಈವ್’ ಉತ್ಸವ ತುಂಬ ಆನಂದದಿಂದ ಸಂಭ್ರಮಪೂರ್ಣವಾಗಿ ನಡೆದಿತ್ತು. ಮಹಡಿಯ ಕೆಳಗಣ ಸಂದರ್ಶನದ ಕೊಠಡಿಯಲ್ಲಿ ‘ಶಿಶು ಯೇಸುವಿನೊಡನೆ ಮೇರಿತಾಯಿ’ ಇರುವ ವರ್ಣಚಿತ್ರವನ್ನು ಪತ್ರ, ಪುಷ್ಟ ಮತ್ತು ಮಾಲ್ಯಾದಿಗಳಿಂದ ಅತಿ ರಮಣೀಯವಾಗಿ ಸಜ್ಜಿತಗೊಳಿಸಿ, ನಾನಾ ವಿಧವಾದ ಪಳ ಮೃಷ್ಟಾನ್ನ ಮತ್ತು ಕೇಕ್ ಮೊದಲಾದ ಭೋಗ ನೈವೇದ್ಯವನ್ನು ಅರ್ಪಿಸಲಾಗಿತ್ತು. ಮಠದ ಸಾಧು ಬ್ರಹ್ಮಚಾರಿಗಳು ಮಾತ್ರವಲ್ಲದೆ ಅನೇಕ ಭಕ್ತರೂ ಆ ಉತ್ಸವದಲ್ಲಿ ಭಾಗಿಗಳಾಗಿದ್ದರು. ಬೈಬಲ್ಲಿನಿಂದ ಜೇಸುವಿನ ಜನ್ಮ ಮತ್ತು ಉಪದೇಶಗಳನ್ನು ಓದಿದಮೇಲೆ ಹಿರಿಯ ಸಂನ್ಯಾಸಿಗಳು ಕೆಲವರು ಜೇಸುವಿನ ಜೀವನ ಮತ್ತು ಉಪದೇಶಸಂಬಂಧವಾಗಿ ಮನೋಜ್ಞ ಭಾಷಣ ಮಾಡಿದರು. ಮಹಾರಾಜರು ತಾವೆ ಕೆಳಕ್ಕಿಳಿದು ಹೋಗಿ ಆ ಉತ್ಸವದಲ್ಲಿ ಭಾಗವಹಿಸಲು ಸಮರ್ಥರಾಗಿರಲಿಲ್ಲ. ಆದರೂ ಉತ್ಸವದ ಎಲ್ಲ ವಿವರಗಳನ್ನೂ ಪುಂಖಾನುಪುಂಖವಾಗಿ ತರಿಸಿಕೊಂಡು ಅತೀವ ಆನಂದ ಪ್ರಕಾಶ ಮಾಡಿದರು.

ಪ್ರಾತಃಕಾಲ ಮಠದ ಸಾಧುಬ್ರಹ್ಮಚಾರಿಗಳು ಮಹಾಪುರುಷಜಿಯ ಕೊಠಡಿಯಲ್ಲಿ ಸಮಾವೇಶಗೊಂಡಾಗ ಅವರು ನಗುಮೊಗದಿಂದ ಒಬ್ಬೊಬ್ಬರಿಗೂ ‘ಹ್ಯಾಪಿ ಕ್ರಿಸ್‌ಮಸ್’ ಎಂದರೆ ಕ್ರಿಸ್ತಜನ್ಮ ಶುಭಾಶಯ ಕೋರಿದರು; ಹಾಗೆಯೆ ಕಳೆದ ರಾತ್ರಿ ನಡೆದ ‘ಕ್ರಿಸ್‌ಮಸ್ ಈವ್’ ಪ್ರಸ್ತಾಪವೆತ್ತಿ, ಪ್ರಾಸಂಗಿಕವಾಗಿ ಹೇಳಿದರು: “ಈ ಉತ್ಸವವನ್ನು ನಾವು ಮೊದಲು ಮಾಡಿದ್ದು ಆ ವರಾಹನಗರದ ಮಠದಲ್ಲಿದ್ದಾಗ. ಠಾಕೂರರ ದೇಹತ್ಯಾಗವಾದ ಕೆಲವು ತಿಂಗಳ ಮೇಲೆ ಬಾಬುರಾಂ ಮಹಾರಾಜರು (ಸ್ವಾಮಿ ಪ್ರೇಮಾನಂದರ) ಅವರ ಊರಾದ ಆಂಟಪುರಕ್ಕೆ ನಮ್ಮನ್ನು ಆಹ್ವಾನಿಸಿದರು, ಕೆಲವು ದಿನಗಳನ್ನು ನಾವೆಲ್ಲ ಅಲ್ಲಿದ್ದುಕೊಂಡು ಕಳೆಯಲೆಂದು. ಸ್ವಾಮೀಜಿ ನಮ್ಮೆಲ್ಲರನ್ನು ಕರೆದುಕೊಂಡು ಹೋದರು. ಆ ಸಮಯ ನಮ್ಮೆಲ್ಲರ ಹೃದಯದಲ್ಲಿಯೂ ವೈರಾಗ್ಯ ತೀವ್ರವಾಗಿತ್ತು. ಠಾಕೂರರ ವಿಯೋಗದಿಂದ ನಮ್ಮೆಲ್ಲರ ಮನಃಪ್ರಾಣಗಳೂ ವಿಹ್ವಲಗೊಂಡಿದ್ದುವು. ನಾವೆಲ್ಲರೂ ಕಠೋರವಾದ ಸಾಧನೆ ಭಜನೆಯಲ್ಲಿ ನಿರತರಾಗಿದ್ದೆವು. ಹಗಲು ರಾತ್ರಿ ಸರ್ವಕಾಲವೂ ನಮಗಿದ್ದ ಏಕಮಾತ್ರ ಚಿಂತೆ ಎಂದರೆ-ಏನು ಮಾಡಿದರೆ ಭಗವತ್ ಸಾಕ್ಷಾತ್ಕಾರವಾಗುತ್ತದೆ, ಏನು ಮಾಡಿದರೆ ಹೃದಯಕ್ಕೆ ಶಾಂತಿ ಲಭಿಸುತ್ತದೆ ಎಂಬುದೆ. ಆಂಟಪುರಕ್ಕೆ ಹೋದಮೇಲೆ ಇನ್ನೂ ಹೆಚ್ಚಿನ ಸಾಧನೆ ಭಜನೆಗಳಲ್ಲಿ ಮಗ್ನರಾದೆವು. ಧುನಿ ಹೊತ್ತಿಸಿ ಇರುಳೆಲ್ಲ ಧುನಿಯ ಪಕ್ಕದಲ್ಲಿ ಕುಳಿತು ಜಪಧ್ಯಾನಗಳಲ್ಲಿ ಕಳೆಯುತ್ತಿದ್ದೆವು. ಸ್ವಾಮೀಜಿ ನಮ್ಮ ಸಂಗಡ ತ್ಯಾಗ ವೈರಾಗ್ಯಗಳನ್ನು ಕುರಿತು ಒತ್ತಿ ಹೇಳುತ್ತಿದ್ದರು. ಒಮ್ಮೆ ಉಪನಿಷತ್ತು, ಒಮ್ಮೆ ಗೀತೆ, ಒಮ್ಮೆ ಭಾಗವತ ಇವುಗಳನ್ನು ಓದಿ ಆಲೋಚನಾದಿಗಳಲ್ಲಿ ತೊಡಗುತ್ತಿದ್ದೆವು. ಈ ರೀತಿ ಕೆಲದಿನ ಕಳೆದವು.”

ಒಂದು ರಾತ್ರಿ ನಾವೆಲ್ಲ ಧುನಿಯ ಪಕ್ಕದಲ್ಲಿ ಕುಳಿತು ಧ್ಯಾನಮಾಡುತ್ತಿದ್ದೆವು. ಬಹಳ ಹೊತ್ತು ಧ್ಯಾನ ಮಾಡಿದಮೇಲೆ ಹಠಾತ್ತಾಗಿ ಸ್ವಾಮೀಜಿ ಭಾವಾವಿಷ್ಟರಾದಂತೆ ಯೇಸುಕ್ರಿಸ್ತನ ಜೀವನ ಸಂಬಂಧವಾಗಿ ತದ್‌ಗತ ಚಿತ್ತದಿಂದ ಮಾತಾಡಲು ಪ್ರಾರಂಭಮಾಡಿದರು. ಯೇಸುವಿನ ಕಠೋರ ಸಾಧನೆ, ಜ್ವಲಂತ ತ್ಯಾಗ ವೈರಾಗ್ಯ, ಆತನ ಉಪದೇಶ-ಎಲ್ಲಕ್ಕಿಂತಲೂ ಹೆಚ್ಚಾಗಿ ಭಗವಂತನೊಡನೆ ಆತನ ಏಕತ್ವಾನುಭೂತಿ ಇತ್ಯಾದಿಗಳನ್ನು ಎಂತಹ ತೇಜೋಮಯ ಪರಿಷ್ಕಾರ ಭಾವದಿಂದ ವರ್ಣಿಸತೊಡಗಿದರು. ಎಂದರೆ ನಾವೆಲ್ಲರೂ ಸ್ತಂಭೀಭೂತರಾಗಿ ಹೋದೆವು. ಆಗ ನಮಗನ್ನಿಸಿತು, ಸ್ವಯಂ ಯೇಸುವೆ ಸ್ವಾಮೀಜಿ ಮುಖಾಂತರ ತನ್ನ ಅಲೌಕಿಕ ಜೀವನ ವೃತ್ತಾಂತವನ್ನು ನಮಗೆ ತಿಳಿಸುತ್ತಿದ್ದಾನೆಯೊ ಎಂಬಂತೆ. ಅದನ್ನೆಲ್ಲ ಆಲಿಸುತ್ತಾ ಆಲಿಸುತ್ತಾ ನಮ್ಮ ಹೃದಯದಲ್ಲಿ ಒಂದು ಅನಿರ್ವಚನೀಯ ಆನಂದದ ಸ್ರೋತವೆ ಪ್ರವಹಿಸುತ್ತಿತ್ತು. ಅಲ್ಲದೆ ನಮ್ಮ ಮನಸ್ಸಿನಲ್ಲಿ ಆಗ ಒಂದೇ ಒಂದು ಚಿಂತೆ ಅಗ್ರವಾಗಿತ್ತು: ಈಶ್ವರ ಸಾಕ್ಷಾತ್ಕಾರ ಮಾಡುವುದು ಹೇಗೆ? ಅವನೊಡನೆ ಐಕ್ಯವಾಗುವುದೆಂತು? ಉಳಿದದ್ದು ಏನಿದ್ದರೂ ಅದೆಲ್ಲ ಗೌಣ, ಅಲ್ಪ. ಸ್ವಾಮೀಜಿ ಯಾವಾಗ ಏನು ವಿಷಯ ತೆಗೆದುಕೊಂಡರೂ ಅದೇ ಚೂಡಾಂತ ಸರ್ವಸ್ವ ಎಂಬಂತೆ ಹೇಳುತ್ತಿದ್ದರು. ಆಮೇಲೆ ಗೊತ್ತಾಯಿತು ಆ ದಿನವೇ ‘ಕ್ರಿಸ್‌ಮಸ್ ಈವ್’ ಎಂದು. ಅದಕ್ಕೆ ಮೊದಲು ಯಾರಿಗೂ ಅದು ತಿಳಿಸಿದಿರಲಿಲ್ಲ. ನಮಗೆ ಅನ್ನಿಸಿತು, ಯೇಸುವೆ ಸ್ವಾಮೀಜಿಯಲ್ಲಿ ಆವಿರ್ಭೂತನಾಗಿ ನಮ್ಮಲ್ಲಿ ತ್ಯಾಗ ವೈರಾಗ್ಯಭಾವವನ್ನು, ಭಗವತ್ ಸಾಕ್ಷಾತ್ಕಾರದ ಅಭೀಪ್ಸೆಯನ್ನು ಇನ್ನಷ್ಟು ತೀವ್ರಗೊಳಿಸುವ ಸಲುವಾಗಿ ತನ್ನ ಆ ಮಹಿಮಾಯಯ ಜೀವನ ಮತ್ತು ಉಪದೇಶಗಳನ್ನು ನಮಗೆ ಬೋಧಿಸಿದ ಎಂದು. ಆಂಟಪುರದಲ್ಲಿ ಇದ್ದ ಕಾಲದಲ್ಲಿಯೆ ನಮ್ಮೆಲ್ಲರಲ್ಲಿಯೂ ಸಂನ್ಯಾಸಿಗಳಾಗಿ ಸಂಘ ಬದ್ಧರಾಗುವ ಸಂಕಲ್ಪ ದೃಢರೂಪ ತಾಳಿದ್ದು. ವಾಸ್ತವಾಂಶ: ಠಾಕೂರರ ನಮ್ಮನ್ನು ಸಂನ್ಯಾಸಿಗಳಾಗಿ ಮಾಡಿದ್ದರು. ಆ ಭಾವ  ಇನ್ನಷ್ಟು ಪಕ್ವವಾದದ್ದು ಆಂಟಪುರದಲ್ಲಿ.

“ಯೇಸು, ಸಂನ್ಯಾಸಿಗಳಲ್ಲಿ ಸರ್ವೋತ್ತಮ ಸಂನ್ಯಾಸಿ, ತ್ಯಾಗದ ಜ್ವಲಂತ ಮೂರ್ತಿ. ಆದರ್ಶ ಸಂನ್ಯಾಸಿ ಅಲ್ಲದವನಿಗೆ ಆತನ ಅತ್ಯಾಶ್ಚರ್ಯಕರ ಲೋಕಾತೀತ ಜೀವನವನ್ನಾಗಲಿ, ಆತನ ಅನುಪಮ ಉಪದೇಶವನ್ನಾಗಲಿ ಅರ್ಥಮಾಡಿ ಕೊಳ್ಳುವುದೂ ಬಹಳ ಕಠೀನವಾಗುತ್ತದೆ. ನಮಗೆ ಠಾಕೂರರನ್ನು ನೋಡುವ ಪುಣ್ಯ ಲಭಿಸಿತ್ತು; ಅವರ ಸಂಗ ಲಾಭದ ಕೃಪೆಯೂ ಒದಗಿತ್ತು. ಆದ್ದರಿಂದ ಅವರನ್ನು ಸ್ವಲ್ಪ ಸ್ವಲ್ಪವಾದರೂ ತಿಳಿಯಲು ಸಮರ್ಥರಾದೆವು. ಆದರೆ ಸಾಧಾರಣ ಮಾನವ ಅವರನ್ನು ಹೇಗೆತಾನೆ ಅರ್ಥಮಾಡಿಕೊಳ್ಳಬಲ್ಲ? ಯೇಸುಕ್ರಿಸ್ತನ ಹತ್ತಿರದ ಗುಂಪಿನವರೂ ಆತನನ್ನು ಯಥಾರ್ಥರೂಪದಲ್ಲಿ ಅರಿಯಲಾಗಲಿಲ್ಲ. ಇಂದಿನ ಕ್ರೈಸ್ತಪಾದ್ರಿಗಳಿಗಂತೂ ಆತನು ಅರ್ಥವಾಗಲು ಸಾಧ್ಯವೆ ಇಲ್ಲ; ಆತನ ಜೀವನದ ಪ್ರಕೃತ ವೈಶಿಷ್ಟ್ಯ ಎಲ್ಲಿದೆ ಎಂಬುದೆ ಅವರಿಗೆ ಹೊಲೆಯುವಂತಿಲ್ಲ. ಏಕೆಂದರೆ ಈಗಿನ ಕಾಲದ ಕ್ರಿಸ್ತಧರ್ಮಪ್ರಚಾರಕರಲ್ಲಿ ಅನೇಕರಿಗೆ ಅಂತಹ ತ್ಯಾಗ, ತಪಸ್ಯೆ, ವಿವೇಕ, ವೈರಾಗ್ಯ ಮತ್ತು ಮುಮುಕ್ಷುತ್ವ ಯಾವುದೂಇಲ್ಲ. ಭಾರತೀಯರಿಗೆ ಧರ್ಮ ಅಂದರೆ ಏನು ಎಂಬುದು ಗೊತ್ತು. ಧರ್ಮ ಜೀವನ ನಡೆಸುವುದು ಹೇಗೆ ಎಂಬುದನ್ನು ಅವರು ಬಲ್ಲರು. ಆದ್ದರಿಂದಲೇ, ಕಾಣುವುದಿಲ್ಲವೆ, ಕಳೆದ ಒಂದೂವರೆ ಶತಮಾನದಲ್ಲಿ ಕ್ರೈಸ್ತಮತ ಪ್ರಚಾರದ ಫಲ ಏನಾಗಿದೆ ಎಂದು? ಏನೂ ಇಲ್ಲ ಎನ್ನುವಷ್ಟರ ಮಟ್ಟಿಗೆ ಕ್ರೈಸ್ತಮತ ಪ್ರಚಾರದ ಫಲವಾಗಿ ಎಷ್ಟು ಜನಕ್ಕೆ ಧರ್ಮ ಜೀವನ ಲಭಿಸಿದೆ? ತ್ಯಾಗ, ವೈರಾಗ್ಯ, ಪಾವಿತ್ಯ್ರ-ಇವೇ ಅಲ್ಲವೆ ಧರ್ಮಜೀವನದ ಭಿತ್ತಿ? ಸ್ವಯಂ ಯೇಸುವೆ ಹೇಳಿದ್ದಾನೆ: `Blessed are the pure in herat, for they shall see God’ (ಪವಿತ್ರಾತ್ಮರೆಯೆ ಧನ್ಯ, ಏಕೆಂದರೆ ಅವರಿಗೆ ಭಗವದ್ಧರ್ಶನವಾಗುತ್ತದೆ.) ಈ Seeing God, ಎಂದರೆ ಭಗವತ್  ಸಾಕ್ಷಾತ್ಕಾರ ಇದೆಯಲ್ಲಾ ಅದೇ ಧರ್ಮ ಜೀವನದ ಲಕ್ಷ್ಯ. ಅದಿಲ್ಲದೆ ಹೋದರೆ, ಬರಿದೆ ಒಂದು ದೊಡ್ಡ ಸಂಘ ನಿರ್ಮಾಣ ಮಾಡುವುದು, ದಳಕಟ್ಟಿ ಕೋಟಿ ಕೋಟಿ ಸಂಖ್ಯೆಯಲ್ಲಿ ಪಟ್ಟಿಗೆ ಜನರ ಹೆಸರನ್ನು ದಾಖಲೆಮಾಡುವುದು, ಇವೆಲ್ಲ ಧರ್ಮ ಜಗತ್ತಿನಲ್ಲಿ ದೊಡ್ಡ ಕೆಲಸ ಎನಿಸಿಕೊಳ್ಳುವುದಿಲ್ಲ. ರಾಜಕೀಯ ಕ್ಷೇತ್ರದಲ್ಲಿ ಅಂಥದಕ್ಕೆಲ್ಲ ಮೌಲ್ಯಇರಬಹುದು, ಆದರೆ ಧರ್ಮರಾಜ್ಯದಲ್ಲಿ ಅದಕ್ಕೆ ಬೆಲೆಯಿಲ್ಲ. ಸ್ವಾಮೀಜಿ ಹೇಳುತ್ತಿದ್ದರು: ‘ಕಡೆಯ ಪಕ್ಷ ಹತ್ತು ಜನಕ್ಕಾದರೂ ಆಧ್ಯಾತ್ಮಿಕ ಜಾಗೃತಿ ಉಂಟಾಗುವಂತೆ ಮಾಡಲು ಸಮರ್ಥನಾದರೆ ನಾನು ಕೆಲಸ ಮಾಡಿದ್ದಕ್ಕೆ ಸಾರ್ಥಕವಾಯಿತು ಎಂದುಕೊಳ್ಳುತ್ತೇನೆ.’ ಅವರು ಹೇಳಿದ ಈ ಮಾತಿನ ಯಥಾರ್ಥ ತಾತ್ಪರ್ಯವೆಂದರೆ, ಧರ್ಮಜೀವನ ನಡೆಸುವುದು ಅತಿ ಕಠಿನ ವ್ಯಾಪಾರ. ಭಗತ್ ಸಾಕ್ಷಾತ್ಕಾರ ಅಥವಾ ಬ್ರಹ್ಮಾನಭೂತಿಯೆ ಧರ್ಮಜೀವನ-  Religion is Realisation (ಪ್ರತ್ಯಾಕ್ಷಾನುಭೂತಿಯೆ ಧರ್ಮ). ಕ್ರೈಸ್ತ ಪಾದ್ರಿಗಳಲ್ಲಿ ತುಂಬ ದೊಡ್ಡ ಮೇಧಾವಿಗಳಿದ್ದಾರೆ; ಚೆನ್ನಾಗಿ ಓದಿ ಬಹುಶ್ರುತರಾಗಿಯೂ ಇದ್ದಾರೆ; ವಿಶೇಷ ಪಾಂಡಿತ್ಯವೂ ಇದೆ; ಆದರೆ ಅದರ ಜೊತೆ ಜೊತೆಗೆ ಯೇಸುವಿನಿಂದ ಉಪದಿಷ್ಟವಾದ ತ್ಯಾಗ ತಪಸ್ಯೆಗಳೂ ಇದ್ದಿದ್ದರೆ ಅದರ ರೀತಿಯೆ ಬೇರೆಯಾಗುತ್ತಿತ್ತು.

“ನೀವು ಠಾಕೂರರ ಈ ಪವಿತ್ರಸಂಘಕ್ಕೆ ಬಂದಿದ್ದೀರಿ; ತ್ಯಾಗೀಶ್ವರ ಠಾಕೂರರನ್ನು ನಿಮ್ಮ ಜೀವನದ ಆದರ್ಶವಾಗಿ ಮಾಡಿಕೊಂಡಿದ್ದೀರಿ; ಅಲ್ಲದೆ ಆ ಆದರ್ಶವನ್ನೆ ನಿಮ್ಮ ಜೀವನದಲ್ಲಿ ಸಾಕ್ಷಾತ್ಕರಿಸಲು ದೀಕ್ಷಿತರಾಗಿದ್ದೀರಿ. ನಿಮಗೆ ಕಲ್ಯಾಣವಾಗುತ್ತದೆ; ನೀವು ಆ ಬ್ರಹ್ಮಾನಂದಕ್ಕೆ ಅಧಿಕಾರಿಗಳಾಗುತ್ತೀರಿ; ಅದರಲ್ಲಿ ಬಿಂದುಮಾತ್ರವೂ ಸಂದೇಹವಿಲ್ಲ. ಈ ಸಂಘ ಎಲ್ಲಿಯವರೆಗೆ ತ್ಯಾಗ, ವೈರಾಗ್ಯ ಮತ್ತು ತಪಸ್ಯಾದಿಗಳ ಮುಖಾಂತರ ಏಕಮಾತ್ರ ಭಗವತ್ ಸಾಕ್ಷಾತ್ಕಾರವನ್ನೆ ಬದುಕಿನ ಮುಖ್ಯ ಉದ್ದೇಶವನ್ನಾಗಿ ತಿಳಿದುಕೊಂಡು, ಆ ಕಡೆಗೆ ಲಕ್ಷ್ಯವಿಟ್ಟು ಸರ್ವಭಾವಮಯರಾದ ಶ್ರೀ ಠಾಕೂರರನ್ನೆ ಆದರ್ಶವನ್ನಾಗಿ ಮಾಡಿಕೊಂಡು ಮುಂದುವರಯುತ್ತದೆಯೊ, ಅಲ್ಲಿಯವರೆಗೆ ಈ ಸಂಘದ ಆಧ್ಯಾತ್ಮಿಕ ಶಕ್ತಿ ಅವ್ಯಾಹತವಾಗಿರುವುದು ನಿಶ್ಚಯ. ಕೆಲಸಕಾರ್ಯಗಳನ್ನು ವಿಸ್ತರಿಸಿ, ಸಂಸ್ಥೆಗಳನ್ನು ಕಟ್ಟಿ, ಹೆಸರು ಪಡೆಯುವುದೇನೊ ಅತಿ ಸುಲಭ; ಆದರೆ ಏಕಮಾತ್ರ ಭಗವಂತನನ್ನೆ ಸಾಕ್ಷಾತ್ಕರರಿಸುವ ಸಲುವಾಗಿ ತಪೋನಿಷ್ಠರಾಗಿ ಸಮಗ್ರ ಜೀವನವನ್ನೂ ಒಮ್ಮನದಿಂದ ಸಮರ್ಪಿಸುವುದು ತುಂಬ ಕಠೀನವಾದ ಕೆಲಸ. ಸ್ವಾಮೀಜಿ ಹೇಳಿದರು: ‘ಆತ್ಮನೋ ಮೋಕ್ಷಾರ್ಥಂ ಜಗದ್ಧಿತಾಯಚ’ ಎಂಬುದೆ ನಮ್ಮ ಬದುಕಿನ ಧ್ಯೇಯ. ಮೊದಲು ಆತ್ಮಜ್ಞಾನ ಲಾಭ, ಆಮೇಲೆ ಜಗತ್ತಿನ ಹಿತ. ಠಾಕೂರರೂ ತಮ್ಮ ಜೀವನದಲ್ಲಿ ಅದನ್ನೆ ಮಾಡಿ ತೋರಿಸಿದ್ದಾರೆ; ಮತ್ತು ಸ್ವಾಮೀಜಿ ಮೊದಲಾದ ಎಲ್ಲ ಅಂತರಂಗ ಶಿಷ್ಯರಿಗೂ ಅದನ್ನೆ ಬೋಧಿಸಿದ್ದಾರೆ. ಸ್ವಾಮೀಜಿ ಈ ಸಂಘದಲ್ಲಿ ಪ್ರವರ್ತನಗೊಳಿಸಿದ ಸೇವೆ ಮತ್ತು ಕಾರ್ಯಕ್ರಮಗಳು ಏನಿದ್ದರೂ ಅವೆಲ್ಲ ದೈನಂದಿನ ಸಾಧನೆ ಭಜನೆಯೆಯ ಜೊತೆ ಜೊತೆಗೇ ನಡೆಯಬೇಕು. ಅದರ ಅಂಗ ಮಾತ್ರವೆಂಬ ತಿಳುವಳಿಕೆಯಿಂದಲೆ, ಹಾಗೆ ಮಾಡುವುದರಿಂದಲೆ, ಕೈಗೊಂಡ ಕೆಲಸಕಾರ್ಯಗಳೂ ಅಚ್ಚುಕಟ್ಟಾಗಿ ನಡೆಯುತ್ತವೆ. ಹಾಗಲ್ಲದೆ ಬರಿಯ ಸಾಮಾಜಿಕ ಸೇವೆಯ ಕರ್ಮ ಸ್ರೋತದಲ್ಲಿ ತೇಲಿಹೋಗಿಬಿಟ್ಟರೆ ಕೊನೆಯವರೆಗೆ ತೂಕತಪ್ಪದೆ ನಡೆಯುವುದು ಕಷ್ಟವಾಗುತ್ತದೆ. ಅನೇಕವೇಳೆ ನಾವು ಕೈಕೊಳ್ಳುವ ಕೆಲಸಕಾರ್ಯಗಳು ಸಂಪೂರ್ಣವಾಗಿ ಸಪಲವಾಗುವುದನ್ನು ನೋಡಿ ಒಂದು ವಿಧವಾದ ಉನ್ಮೇಷನೋತ್ಸಾಹ ಉಂಟಾಗುತ್ತದೆ. ಆದರೆ ಅದು ಒಳ್ಳೆಯದಲ್ಲ; ಅದರಿಂದ ಕೊನೆಯವರೆಗೂ ಜೀವನದ ಮುಖ್ಯ ಉದ್ದೇಶವೆ ಕಣ್ಣು ತಪ್ಪಿ ಹೋದಂತಾಗಿ ದಿಕ್ಕುಗೆಡುತ್ತೇವೆ. ಠಾಕೂರರ ಹತ್ತಿರ ನಾವು ಭಗವತ್ ಪ್ರಸಂಗವನ್ನಲ್ಲದೆ ಅನ್ಯ ಪ್ರಸಂಗ ಯಾವುದನ್ನೂ ಕೇಳಲಿಲ್ಲ. ಅವರದು ಇದೊಂದೇ ಮಾತು, ಇದೊಂದೇ  ಉಪದೇಶ-‘ಹೇಗಾದರೂ ಮಾಡಿ ಮೊದಲು ಭಗವಂತನನ್ನು ಪಡೆದುಕೊ!’

ಒಬ್ಬ ಸಂನ್ಯಾಸಿ: “ಮಹಾರಾಜ್, ಶ್ರೀ ಗುರುಮಹಾರಾಜರು, ಸಿದ್ಧಿಗಳು ಆಧ್ಯಾತ್ಮಿಕ ಉನ್ನತಿಗೆ ಅಂತರಾಯಗಳೆಂದು ಹೇಳಿದ್ದಾರೆ. ಆದರೆ ಯೇಸುವಿನ ಜೀವನದಲ್ಲಿ ನಾವು ನೋಡುತ್ತೇವೆ, ಅಲೌಕಿಕ ಘಟನೆಗಳು ತುಂಬಿಹೋಗಿರುವುದನ್ನು. ಆತನು ಮೃತವ್ಯಕ್ತಿಯನ್ನು ಪುನರ್ಜೀವಿತವಾಗಿ ಮಾಡಿದ್ದಾನೆ; ರೋಗಿಗಳನ್ನು ಗುಣಪಡಿಸಿದ್ದಾನೆ; ಅಲ್ಲದೆ ಇನ್ನೂ ಅನೇಕ ತರಹದ ಪವಾಡಗಳನ್ನು ಅಲ್ಲಿ ನಾವು ಸಂದರ್ಶಿಸುತ್ತೇವೆ. ಆತನು ತನ್ನ ಹನ್ನೆರಡು ಜನ ಶಿಷ್ಯರಲ್ಲಿಯೂ ಆ ಶಕ್ತಿ ಸಂಚಾರಮಾಡಿ, ಅವರಿಗೂ ಆ ಎಲ್ಲ ಪವಾಡಗಳನ್ನು ಮಾಡುವಂತೆ ಅನುಜ್ಞೆಯಿತ್ತಿದ್ದಾನೆ. ಇದೆಲ್ಲದರ ಅರ್ಥ ನಮಗೆ ಸರಿಯಾಗಿ ಹೊಳೆಯುತ್ತಿಲ್ಲ.”

ಮಹಾಪುರುಷಜಿ: “ಹೌದು, ಠಾಕೂರರೂ ಸರಿಯಾಗಿಯೆ ಹೇಳಿದ್ದಾರೆ. ಸಾಧಕರಾದವರು ಸಿದ್ಧಿಗಳ ಕಡೆಗೆ ಮನಸ್ಸು ಕೊಟ್ಟರೆ ಭಗವಂತನ ಕಡೆಗೆ ಹೋಗುವ ದಾರಿಯಲ್ಲಿ ಮುಂದುವರಿಯದಿರಬಹುದು; ದಾರಿಯಲ್ಲಿ ಮುಂದುವರಿಯದಿರಬಹುದು; ದಾರಿ ತಪ್ಪಿಯೂ ಹೋಗಬಹುದು, ಕೆಲಕಾಲಕ್ಕಾದರೂ. ಜಗನ್ಮಾತೆ ಶ್ರೀ ಗುರುಮಹಾರಾಜರಿಗೆ ತೋರಿಯೂ ಇದ್ದಳು, ಸಿದ್ಧಿಗಳು ಅಮೇಧ್ಯಸಮಾನ ಎಂದು. ಆದರೆ ಯೇಸುವಿನ ಜೀವನದಲ್ಲಿ ಯಾವೆಲ್ಲ ಘಟನೆಗಳ ಉಲ್ಲೇಖನವಿದೆಯೊ ಅವೆಲ್ಲವನ್ನೂ ಆತನ ಸಿದ್ಧಗಳ ಪ್ರದರ್ಶನಕ್ಕಾಗಿ ಮಾಡಲಿಲ್ಲ. ಜೀವದುಃಖದಲ್ಲಿ ಕಾತರನಾಗಿ ಜೀವರ ದುಃಖ ವಿಮೋಚನ ಮಾಡಲೆಂದು ಮಾತ್ರ ಅವುಗಳನ್ನು ಮಾಡಿದ್ದಾನೆ. ಬೈಬಲ್ಲಿನಲ್ಲಿ ಇರುವಂತ ಎಆತನು ಕುರುಡರಿಗೆ ಕಣ್ಣು ಬರಿಸಿದ್ದಾನೆ: ಕುಷ್ಟರೋಗಗ್ರಸ್ತರನ್ನು ಸ್ಪರ್ಶಮಾತ್ರದಿಂದ ರೋಗಮುಕ್ತರನ್ನಾಗಿ ಮಾಡಿದ್ದಾಣೆ: ಆದರೆ ಹಾಗೆ ಪವಾಡ ಮಾಡಿದಾಗಲೆಲ್ಲ ‘ಈ ನಡೆದಾವುದನ್ನೂ ಬಹಿರಂಗಪಡಿಸಬೇಡಿ’ ಎಂದು ಕೇಳಿಕೊಂಡಿದ್ದಾನೆ. ಪ್ರತಿಷ್ಠೆಗಾಗಿ ಅಥವಾ ಲೋಕಮಾನ್ಯತೆ ಪಡೆಯುವ ಸಲುವಾಗಿ ಅವನು ಎಂದೂ ಆ ಪವಾಡಗಳನ್ನು ಮಾಡಲಿಲ್ಲ. ಶಾಸ್ತ್ರದಲ್ಲಿಯೂ ಹೇಳಿದೆ, ಆತ್ಮಜ್ಞಾನ ಪಡೆದ ತರುವಾಯ ಬ್ರಹ್ಮಜ್ಞಪುರುಷರು ಏಕಮಾತ್ರ ದಯಾವೃತ್ತಿಯನ್ನು ಅವಲಂಬನ ಮಾಡಿಕೊಂಡು ಲೋಕದಲ್ಲಿ ಇರುತ್ತಾರೆ. ಅವರಿಗೆ ಬೇರೆ ಯಾವ ಕಾಮನೆಯಾಗಲಿ ವಾಸನೆಯಾಗಲಿ ಇರುವುದಿಲ್ಲ. ಅದಲ್ಲದೆ ಯೇಸು ಇತರರಂತೆ ಸಾಧಾರಣ ಸಾಧಕನಾಗಿದ್ದನೇನು? ಅವನು ಅವತಾರ. ಜಗತ್‌ಪಿತೃ ಪರಮೇಶ್ವರನಲ್ಲಿ ಆತನ ಸತ್ತೆ ಏಕವಾಗಿಹೋಗಿತ್ತು. ಆದ್ದರಿಂದ ಆತನು ಹಾಗೆಲ್ಲ ಮಾಡಿದುದರಲ್ಲಿ ಒಂದಿನಿತಾದರೂ ಅಸ್ವಾಭಾವಿಕತೆ ಇಲ್ಲ; ಅದು ದೋಷನೀಯವೂ ಅಲ್ಲ. ಸಾಧಾರಣ ಮಾನವ ಯಾವೆಲ್ಲ ಕಾರ್ಯಗಳನ್ನು ಅತ್ಯಾಶ್ಚರ್ಯ ಮತ್ತು ಅಸಂಭವ ವ್ಯಾಪಾರಗಳಂದು ಭಾವಿಸುತ್ತಾನೆಯೊ ಅವೆಲ್ಲ ಅವತಾರಪುರುಷರಾದವರಿಗೆ ಶ್ವಾಸೋಚ್ಛ್ವಾಸದಂತೆ ಅತಿ ಸಹಜ ಕಾರ್ಯಗಳಾಗುತ್ತವೆ. ಅದನ್ನೆಲ್ಲ ಮಾಡುವುದಕ್ಕೆ ಅವರು ಯಾವ ಪ್ರಯತ್ನವನ್ನೂ ಮಾಡಬೇಕಾಗುವುದಿಲ್ಲ. ಅವರ ಸಾಮಾನ್ಯ ಇಚ್ಛೆಯ ಮಾತ್ರದಿಂದಲೆ ಅಘಟನ ಘಟನವಾಗುತ್ತದೆ. ಕೆಲವು ಸಮಯದಲ್ಲಿ ನಾಸ್ತಿಕ ಮನಸ್ಸಿನಲ್ಲಿ ಭಗವಂತನ ಅಸ್ತಿತ್ವದಲ್ಲಿ ವಿಶ್ವಾಸ ಹುಟ್ಟುವಂತೆ ಮಾಡುವುದಕ್ಕೂ ಯೇಸು ಆ ತರಹ ಪವಾಡಗಳನ್ನು ಮಾಡಿ ತೋರಿಸಿದ್ದಾನೆ. ಅವರು ಮಾಡುವ ಕಾರ್ಯಗಳಲ್ಲಿರುವ ಗೂಢರಹಸ್ಯ ಅನೇಕ ಸಲ ನಮಗೆ ಹೊಳೆಯುವುದು ಕಷ್ಟ ವಾಗುತ್ತದೆ.”

“ಸ್ಪರ್ಶಮಾತ್ರದಿಂದ ಶಾರೀರಿಕ ವ್ಯಾಧಿಯನ್ನು ದೂರ ಮಾಡುವುದು-ಅದೇನು ಅಂತಹ ಅದ್ಭುತ ಅಲೌಕಿಕವಲ್ಲ. ಅದೆಲ್ಲ ಸಹಜ ವ್ಯಾಪಾರ. ಶ್ರೀಠಾಕೂರರು ಎಲ್ಲಕ್ಕಿಂತಲೂ ದೊಡ್ಡ ಪವಾಡ ಮಾಡಿ ತೋರಿಸಿದ್ದಾರೆ-ಸ್ಪರ್ಶಮಾತ್ರದಿಂದ ಮನುಷ್ಯಮಾತ್ರನಿಗೆ ಭಗವದ್ಧರ್ಶನವಾಗುವಂತೆ ಮಾಡಿದ್ದಾರೆ; ಸಮಾಧಿಸ್ಥನನ್ನಾಗಿ ಮಾಡಿದ್ದಾರೆ. ಜನ್ಮಜನ್ಮಾಂತರದ ಸಂಸ್ಕಾರ ರಾಶಿ ಒಂದು ಕ್ಷಣದಲ್ಲಿ ಕ್ಷೀಣವಾಗುವಂತೆ ಮಾಡಿ. ಮನುಷ್ಯನ ಸಮಗ್ರ ಮನಸ್ಸಿನ ಗತಿಯು ಭಗವನ್ಮುಖಿಯಾಗುವಂತೆ ಪರಿವರ್ತಿಸಿದ್ದಾರೆ;-ಅದು ನಿಜವಾಗಿಯೂ ಎಲ್ಲಕ್ಕಿಂತ ಹೆಚ್ಚಿನ ಪವಾಡ. ಅಂತಹ ಪವಾಡ ಮತ್ತಾವ ಅವತಾರದಿಂದಲೂ ಸಾಧ್ಯವಾಗಿಲ್ಲ. ಉಃ! ಠಾಕೂರರು ಎಂತೆಂತಹ ಅದ್ಭುತ ಕಾರ್ಯಮಾಡುವುದನ್ನು ನಾವು ನೋಡಿಲ್ಲ! ಅದನ್ನು ನೆನೆದರೂ ಸಾಕು ನಮಗೆ ರೋಮಾಂಚನವಾಗುತ್ತದೆ. ಮನುಷ್ಯರ ಮನಸ್ಸನ್ನು ತೆಗೆದುಕೊಂಡು ಎರೆಮಣ್ಣಿನೊಡನೆ ಆಟವಾಡುವಂತೆ ಆಡುತ್ತಿದ್ದರು; ಅಂಕು ಡೊಂಕುಗಳನ್ನೆಲ್ಲ ಇಚ್ಛಾಮಾತ್ರದಿಂದ ತಿದ್ದಿ ನೆಟ್ಟಗೆ ಮಾಡುತ್ತಿದ್ದರು. ಅವರ ಸ್ಪರ್ಶಮಾತ್ರದಿಂದ ಮನಸ್ಸಿನ ಎಲ್ಲಾ ವ್ಯಾಧಿಯೂ ಶಮನವಾಗುತ್ತಿತ್ತು. ಎಂತಹ ವಿರಾಟ್ ಆಧ್ಯಾತ್ಮಿಕ ಶಕ್ತಿಯ ಆಗರವಾಗಿದ್ದರು ಶ್ರೀ ಠಾಕೂರ್‌!. ಹೊರಗಿನಿಂದ ನೋಡುವುದಕ್ಕೆ ಸಾಧಾರಣ ಮನುಷ್ಯರಂತೆ ಕಾಣುತ್ತಿದ್ದರು. ಆದರೆ ಅವರ ದೇಹವನ್ನು ಆಶ್ರಯಿಸಿ ಲೀಲೆಯಲ್ಲಿ ತೊಡಗಿದ್ದವನು, ಸರ್ವಶಕ್ತಿ ಮಾನ್ ಜಗದೀಶ್ವರನೆ!”

ತತ್ಸಮಯದಲ್ಲಿ ಮಠಕ್ಕೆ ಆಗಮಿಸಿದ್ದ ಒಬ್ಬ ಜರ್ಮನ್ ಮಹಿಳಾ ಭಕ್ತೆ ಮಹಾಪುರುಷಜಿಗೆ ಭಕ್ತಿ ಭರದಿಂದ ನಮಸ್ಕಾರ ಮಾಡಿದಳು. ಮಹಾಪುರುಷಜಿ ಆಕೆಯನ್ನು ನಗುಮೊಗರಾಗಿ ಅಭಿವಂದಿಸಿ ಕೇಳಿದರು: “ನಿನ್ನೆ ನಡೆದ ಕ್ರಿಸ್‌ಮಸ್‌ಈವ್ ಹೇಗಿತ್ತು!”

ಮಹಿಳಾ ಭಕ್ತೆ: “ಓ! ನಾನು ತುಂಬ ಆನಂದಮಗ್ನಳಾಗಿದ್ದೆ. ಕ್ರಿಸ್‌ಮಸ್ ಸಮಾರಂಭದಲ್ಲಿ ಇಷ್ಟು ಆನಂದ ನನಗಿನ್ನೆಲ್ಲಿಯೂ ಆಗಿಲ್ಲ. ನಮ್ಮ ಪಾಶ್ಚಾತ್ಯ ದೇಶಗಳಲ್ಲಿ ಕ್ರಿಸ್‌ಮಸ್ ಉತ್ಸವ ಎಂದರೆ ಆಮೋದ ಪ್ರಮೋದ, ತಿನ್ನೋದು, ಕೊಡೋದು, ಕುಣಿಯೋದು, ಕುಡಿಯೋದು, ಹಾಡೋದು ಇವೇ ಹುಚ್ಚು; ಅದರಲ್ಲಿಯೆ ದೇಶವೆಲ್ಲ ಮುಳುಗಿಹೋಗುತ್ತದೆ. ಚರ್ಚುಗಳಲ್ಲಿ ಬೈಬಲ್ ಪಠನ ಮೊದಲಾದವು ಬರಿಯ ಆಚಾರ ಮಾತ್ರವಾಗಿ ನಡೆಯುತ್ತವೆ. ಆದರೆ ಅದರಲ್ಲಿ ಭಾವ ಭಕ್ತಿ ಇರುವುದಿಲ್ಲ. ಆಮೋದ ಆಹ್ಲಾದಗಳಿಗಾಗಿ ಕೋಟಿಗಟ್ಟಲೆ ದುಡ್ಡು ಖರ್ಚಾಗುತ್ತದೆ. ಆದರೆ ಆ ಹೊರಗಣ ಅಟ್ಟಹಾಸದಿಂದ ಆಂತರಿಕ ಹೃದಯತೃಪ್ತವಾಗುವುದಿಲ್ಲ. ಅದಕ್ಕಾಗಿಯೆ ಹೋದ ವರುಷ ಕ್ರಿಸ್‌ಮಸ್ ಹಬ್ಬದಲ್ಲಿ ನಾನು ಅರ್ಧರಾತ್ರಿಯಲ್ಲಿ ಯೇಸುವಿಗೆ ಎದೆ ತುಂಬಿ ಪ್ರಾರ್ಥನೆ ಸಲ್ಲಿಸಿದೆ, ‘ಸ್ವಾಮಿ, ಒಂದು ಸಾರಿಯಾದರೂ ಕ್ರಿಸ್‌ಮಸ್ ಹಬ್ಬದಲ್ಲಿ ಶುದ್ಧ ಆಧ್ಯಾತ್ಮಿಕ ಆನಂದವನ್ನು ಅನುಭವಿಸುವ ಸುಯೋಗ ನನಗೆ ಒದಗಲಿ’ ಎಂದು, ನನ್ನ ಪ್ರಾರ್ಥನೆಗೆ ಆತನು ತಥಾಸ್ತು ಎಂದಿರಬೇಕು. ಈ ವರ್ಷ ಇಲ್ಲಿ ಕ್ರಿಸ್‌ಮಸ್ ಹಬ್ಬದ ನಿಜವಾದ ಆನಂದವನ್ನು ಯಥೇಚ್ಛವಾಗಿ ಅನುಭವಿಸಿದ್ದೇನೆ; ನನ್ನ ಪ್ರಾಣ ಪರಿಪೂರ್ಣವಾಗಿದೆ.”

ಮಹಾಪುರುಷಜಿ: “ನಮ್ಮದೆಲ್ಲ ಭಕ್ತಿಯ ಪೂಜೆ. ಇಲ್ಲಿಯ ಕ್ರಿಸ್‌ಮಸ್ ಹಬ್ಬ ಸಾತ್ವಿಕ ಉತ್ಸವ. ಪ್ರೇಮ, ಭಕ್ತಿ, ವಿಶ್ವಾಸ ಮತ್ತು ಆಂತರಿಕ ಪ್ರಾರ್ಥನೆ-ಇವೆ ಈ ಉತ್ಸವದ ಪ್ರಧಾನ ಅಂಗ.”

ಮಹಿಳಾ ಭಕ್ತೆ: “ಯೇಸುಸ್ವಾಮಿ ಯೆಹೂದ್ಯನಾಗಿದ್ದನೆ?”

ಮಹಾಪುರುಷಜಿ: “ಯೆಹೂದ್ಯನೂ ಆಗಿರಲಿಲ್ಲ. ಜೆಂಟಾಯಿಲನೂ ಆಗಿರಲಿಲ್ಲ. ಆತನು ಈ ಎಲ್ಲವನ್ನೂ ಮೀರಿದ ಮೇಲಿನ ಸ್ತರಕ್ಕೆ ಸೇರಿದ್ದನು-ಆತನು ಭಗವಂತನ ಶಕ್ತಿಯ ಅವತಾರ. ಜೀವರ ಉದ್ಧಾರಕ್ಕಾಗಿ ನರದೇಹದಿಂದ ಜಗತ್ತಿಗೆ ಅವತರಿಸಿದ್ದನು.”

* * *