ಬೇಲೂರು ಮಠ  
ಜನವರಿಮಾರ್ಚಿ, ೧೯೩೦

ಒಬ್ಬ ಭಕ್ತ ಆಶ್ರಮಕ್ಕೆ ಸೇರುವ ಅಭಿಲಾಷೆಯಿಂದ ತನ್ನ ಕರ್ಮಸ್ಥಾನದಿಂದ ಬಂದು ಕೆಲವು ದಿನದಿಂದ ಮಠದಲ್ಲಿ ಇರುತ್ತಿದ್ದನು. ಮಹಾಪುರುಷಜಿ ಅವನನ್ನು ಕೇಳಿದರು: “ಅವರಿಗೆಲ್ಲ (ಎಂದರೆ, ಬಂಧು ಬಾಂಧವರು ಆತ್ಮೀಯ ಸ್ವಜನರು) ಗೊತ್ತಗಿದೆಯಷ್ಟೆ ನೀನು ಹಿಂದಕ್ಕೆ ಬರುವುದಿಲ್ಲ ಎಂದು?”

ಭಕ್ತ: “ಹೌದು, ಮಹಾರಾಜ್.”

ಮಹಾಪುರುಷಜಿ: “ಒಳ್ಳೆಯದಾಯ್ತು! ಅವರಿಗೆಲ್ಲ ಭೋಗವಾಸನೆ ಇದೆ, ಚೆನ್ನಾಗಿ ಭೋಗಾನುಭವ ಮಾಡಲಿ. ನಿನಗೆ ಗುರುಮಹಾರಾಜರ ಕೃಪೆಯಿಂದ ಭೋಗವಾಸನೆ ಕಡಿದುಹೋಗಿದೆ, ನೀನಿನ್ನು ಇಲ್ಲಿಯೆ ಇರು, ಅವರ ಹಾಗಲಕಾಯಿ ಬಾಳನ್ನು ಅವರೆಲ್ಲ ಬೇಕಾದಷ್ಟು ಕಾಲ ಸವಿಯಲಿ, ಯಥೇಚ್ಛ.”

* * *

ಶ್ರೀರಾಮಕೃಷ್ಣ ಪರಮಹಂಸರ ಜನ್ಮದಿನದ ಸಾರ್ವಜನಿಕೋತ್ಸವದ ಸಂದರ್ಭ. ಆಕಾಶ ಮೇಘಾಚ್ಛನ್ನ, ಸ್ವಲ್ಪ ಮಳೆಯೂ ಹೊಯ್ದಿದೆ. ಉತ್ಸವಕ್ಕೆ ಭವ್ಯ ಪ್ರಮಾಣದ ಸಿದ್ಧತೆಯಾಗಿದೆ. ಒಬ್ಬ ಅನುಚರ ಬಂದು ಹೇಳಿದನು: “ಮಹಾರಾಜ್, ತಮ್ಮನ್ನು ಒಂದು ಕುರ್ಚಿಯಲ್ಲಿ ಕೆಳಕ್ಕೆ ಕರೆದುಕೊಂಡು ಹೋಗುತ್ತೇವೆ, ಉತ್ಸವಕ್ಕೆ ಮಾಡಿರುವ ಏರ್ಪಾಡುಗಳನ್ನೆಲ್ಲಾ ತಾವು ಪರಾಂಬರಿಸಬೇಕು.”

ಮಹಾಪುರುಷಜಿ; “ಬೇಡ, I don’t like to to create a scene (ತಮಾಷೆ ನೋಡುವಂತೆ ನೂಕುನುಗ್ಗಲು ಮಾಡಲು ನನಗೆ ಇಚ್ಛೆ ಇಲ್ಲ.) ಸರ್ವರಿಗೂ ಆನಂದ, ಪ್ರೀತಿ, ಭಕ್ತಿ, ಶಾಂತಿ ಯಥೇಚ್ಛವಾಗಿ ಲಭಿಸಲಿ. ಠಾಕೂರರು ಸರ್ವರಿಗೂ ಮಂಗಲ ಉಂಟುಮಾಡುತ್ತಾರೆ;-ಆದರಿಲ್ಲಿಯೆ ನನಗೆ ಆನಂದ. ಠಾಕೂರರ ಇಚ್ಛೆಯಿಂದ ಮೋಡ ಕವಿದು, ಮಳೆಯೂ ಬಿದ್ದು, ಹವಾ ತಂಪಾಗಿದೆ; ಇಲ್ಲದಿದ್ದರೆ ಜನಕ್ಕೆ ತುಂಬಾ ಕಷ್ಟವಾಗುತ್ತಿತ್ತು. ಅವರ ಉತ್ಸವ ಅವರೇ ಚೆನ್ನಾಗಿ ನಡೆಯುವಂತೆ ನೋಡಿಕೊಳ್ಳುತ್ತಾರೆ.”

ಅಪರಾಹ್ನ. ಮಠದ ದನಕರುಗಳ ವಿಚಾರ ಪ್ರಸ್ತಾಪಿಸಿ “ಪಾಪ, ಇವತ್ತು ಅವು ಹೊರಗೆ ಬಂದು ಮೇಯುವುದಕ್ಕೆ ಆಗುವುದಿಲ್ಲ ಎಂದು ತೋರುತ್ತದೆ. ಅವಕ್ಕೆ ತುಂಬಾ ತೊಂದರೆ” ಎಂದರು.

ಪುನಃ ಸಾಯಂಕಾಲವೂ ಹಸುಗಳ ವಿಚಾರ ಕೇಳಿ, ಅವುಗಳಿಗೆ ಮೇವು ಕೊಟ್ಟಿದೆಯೊ ಇಲ್ಲವೊ ಎಂದು ವಿಚಾರಿಸಿದರು. ಅನುಚರನು ಕೆಳಕ್ಕೆ ಹೋಗಿ ನೋಡಿ ಬಂದು “ಹೌದು, ಮೇವು ಕೊಟ್ಟಿದೆ” ಎಂದು ತಿಳಿಸಿದನು. ಅದನ್ನು ಕೇಳಿ ಮಹಾಪುರುಷಜಿ ತುಂಬ ಆನಂದ ಪ್ರಕಾಶ ಮಾಡಿದರು.

* * *

ಪೂರ್ವವಂಗದೇಶದ ಒಬ್ಬ ಮಹಿಳಾಸಾಧ್ವಿಕೆಯ ಪ್ರಸ್ತಾಪ ಬಂತು. ಆ ಮಹಿಳೆ ಬಹಳ ಸಾಧನೆ ಭಜನೆ ಮಾಡಿ ತುಂಬ ಆಧ್ಯಾತ್ಮಿಕ ಅವಸ್ಥೆಗೆ ಏರಿದ್ದರು. ಮಹಾಪುರುಷಜಿ ಹೇಳಿದರು: “ಇದೆಲ್ಲ ಅವನ ಕೃಪೆ. ದೇವಿಸೂಕ್ತದಲ್ಲಿದೆ: ‘ಯಂ ಕಾಮಯೇ ತಮುಗ್ರಂ ಕೃಣೋಮಿ | ತಂ ಬ್ರಹ್ಮಾಣಂ ತಮೃಷಿಂ ತಂ ಸುಮೇಧಾಮ್‌ ||’ (ನನಗೆ ಯಾರ ಮೇಲೆ ಇಚ್ಛೆಯಾದರೆ ಅವರನ್ನು ಸರ್ವ ಶ್ರೇಷ್ಠವನ್ನಾಗಿ ಮಾಡುತ್ತೇನೆ, ಪ್ರಜ್ಞಾಶಾಲಿನಿಯನ್ನಾಗಿಯೂ ಮಾಡುತ್ತೇನೆ.) ಮುಖ್ಯ ಅವನ ಕೃಪೆ-ಅದು ಪುರುಷ ಶರೀರದಲ್ಲಾಗಬಹುದು, ಅಥವಾ ಸ್ತ್ರೀ ಶರೀರದಲ್ಲಿಯೂ ಆಗಬಹುದು.”

* * *