ಬೇಲೂರು ಮಠ  
ಏಪ್ರಿಲ್ಸೆಪ್ಟಂಬರ್, ೧೯೩೦

ರಾಮನವಮಿ. ತುಲಸೀದಾಸರ ವಿಚಾರವಾಗಿ ಮಾತುಕತೆ ನಡೆಯುತ್ತಿದೆ. ಮಹಾಪುರುಷಜಿ ಹೇಳಿದರು: “ತುಲಸೀದಾಸರು ಬಹಳವಾಗಿ ನಾಮಪ್ರಚಾರ ಮಾಡಿದರು. ನಾಮ ನಾಮೀ ಎರಡು ಒಂದೇ. ಹರಿನಾಮ-ರಾಮನಾಮ. ತುಲಸೀದಾಸರು ಎಂತಹ ಮಹಾಭಕ್ತರಾಗಿದ್ದರು! ಇವತ್ತು ನೀವೆಲ್ಲರೂ ಹೃದಯಕ್ಕೆ ತೃಪ್ತಿಯಾಗುವಂತೆ ರಾಮನಾಮ ಭಜನೆ ಮಾಡಿ. ‘ರಾಮ ರಾಮ ಸೀತಾರಾಮ’!”

* * *

ಸಂನ್ಯಾಸಿಯೊಬ್ಬರು ತಮ್ಮ ಕೊರಳ ರುದ್ರಾಕ್ಷಿ ಸರದಲ್ಲಿ ಶ್ರೀ ಶ್ರೀ ಠಾಕೂರರ ಪಾದಧೂಳಿಯನ್ನು ತಾಯಿತಿಗೊಳಿಸಿ ಧರಿಸಿದ್ದರು. ಮಹಾಪುರುಷಜಿ ಮಹಾರಾಜ್ ಅವರಿಗೆ ಹೇಳಿದರು: “ಕೊಡು, ನನಗೆ ಕೊಡು. ಕೊರಳಲ್ಲಿ ಧರಿಸಬೇಕಾದರೆ ಅಂಥಾದ್ದನ್ನೆ ಧರಿಸಬೇಕು. ಬಾ, ಅದನ್ನು ನನ್ನ ತಲೆಯ ಮೇಲಿಡು.”

* * *

ಮಾತು ಅವರ ದೇಹಾರೋಗ್ಯದ ಕಡೆಗೆ ತಿರುಗಿತು. ಹೇಳಿದರು: “ಶರೀರ ಈಗ ಕೆಟ್ಟುಬಿಟ್ಟಿದೆ. ಅದರೊಳಗೆ ಏನೂ ಇಲ್ಲ. ಠಾಕೂರರು ತಮ್ಮ ಇಚ್ಛೆಯಂತೆ ಅದನ್ನು ನಡೆಸುತ್ತಾ ಇದ್ದಾರೆ; ಅವರ ಇಚ್ಛೆ ಇರುವವರೆಗೆ ನಡಕೊಂಡು ಹೋಗುತ್ತೆ. ಈ ಶರೀರವೇನೊ ಇದ್ದರೆ ಪಾವನವಾದ ಅವರ ಕಾರ್ಯಗಳಿಗೆಲ್ಲ ಒಂದಿಷ್ಟು ಪ್ರಚಾರ ದೊರೆಯುತ್ತದೆ. ಅಷ್ಟೆತಾನೆ! ಅಷ್ಟೆತಾನೆ! ಇನ್ನೇನಿದೆ ಅದಕ್ಕೆ ಪ್ರಯೋಜನ?”

* * *

ಒಬ್ಬರು ಸಾಧು ತಮ್ಮ ಪೂರ್ವಾಶ್ರಮದ ಊರಿಗೆ ಹೋಗಿ ತಂದೆ ತಾಯಿ ಮೊದಲಾದವರನ್ನು ನೋಡಿಕೊಂಡು ಹಿಂದಿರುಗಿದರು. ಆ ಊರಿನಲ್ಲಿ ಸುಮಾರು ಸಾವಿರ ಜನಕ್ಕೂ ಹೆಚ್ಚಾಗಿ ಅವರನ್ನು ನೋಡಲು ನೆರೆದಿದ್ದರು. ಆ ಸಂಬಂಧವಾಗಿ ಮಹಾಪುರುಷಜಿ ಹೇಳಿದರು: “ಭೇಷ್‌! ಅವರೆಲ್ಲ ಒಬ್ಬ ಸಂನ್ಯಾಸಿಯನ್ನು ನೋಡುವ ಅದೃಷ್ಟಕ್ಕೆ ಭಾಜನರಾದರು. ಅದರಿಂದ ಅವರಿಗೆ ಮಂಗಲವಾಗುತ್ತದೆ. ನಿಜವಾದ ಸಂನ್ಯಾಸಿಯಾಗುವುದು ತುಂಬ ಕಠಿನ.” ಹಾಗೆ ಹೇಳಿ ಆ ಸಾಧುವನ್ನು ಇಂತು ಆಶೀರ್ವದಿಸಿದರು: “ಶುದ್ಧ ಭಕ್ತಿ ಉಂಟಾಗಲಿ; ಶುದ್ಧಜ್ಞಾನ ಉಂಟಾಗಲಿ; ಅವೆರಡೂ ಬೇರೆ ಬೇರೆ ಅಲ್ಲ.”

* * *

ಒಬ್ಬಳು ಸ್ತ್ರೀ ಭಕ್ತೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಮಹಾಪುರುಷಜಿ ಹೇಳಿದರು: “ಅಫೀಮು ತಿಂದು ಸತ್ತರು ಎಂದು ಕೇಳಿದೆ. ರೋಗಯಾತನೆ ಸಹಿಸಲಾರದೆ ಹಾಗೆ ಮಾಡಿಕೊಂಡಳು. ಹೇಗಾದರೂ ಆಖೆಯ ಆತ್ಮ ಠಾಕೂರರ ಬಳಿಗೇ ಹೋಗುತ್ತದೆ. ಆಕೆ ಠಾಕೂರರ ಭಕ್ತೆಯಾಗಿದ್ದರು. ಆಕೆಗೆ ಮಠದ ಮೇಲೆ, ಸಾಧುಗಳ ಮೇಲೆ, ನಮ್ಮ ಮೇಲೆಯೂ ತುಂಬಾ ವಿಶ್ವಾಸ, ಗೌರವ. ಪ್ರಾರಬ್ಧವಿತ್ತು; ಹಾಗೆ ಮಾಡಿಕೊಂಡರು. ಸದ್ಗತಿಯೇನೋ ನಿಶ್ಚಯ; ಆದರೆ ಸ್ವಲ್ಪಕಾಲ ಅಂಧಕಾರದಂತಹ ಆವರಣದಲ್ಲಿ ಇರಬೇಕಾಗುತ್ತದೆ.”

* * *

ಒಬ್ಬ ಪಾರ್ಸಿ ಭಕ್ತನ ಕಾಗದ ಬಂದಿತು. ಅನುಚರ ಸಾಧುವಿಗೆ ಮಹಾಪುರುಷಜಿ ಹೇಳಿದರು: “ಆತನು ಏನು ಮಾಡುತ್ತಿದ್ದಾನೆಯೊ ಅದು ಸಂಪೂರ್ಣ ಸರಿಯಾಗಿದೆ ಎಂದು ಅತ್ಯಂತ ಅಭಿವ್ಯಕ್ತಿಯ ಮಾತುಗಳಲ್ಲಿ ಭಾವಮಯವಾಗಿ ಬರಿ. ಜರತೂಷ್ಪ್ರರೂಪದಲ್ಲಿ ಬಂದಾತನೂ ಶ್ರೀ ಗುರುಮಹಾರಾಜರೆ. ಮತ್ತೆ ಈ ಸಾರಿ ಶ್ರೀ ಗುರುಮಹಾರಾಜರ ರೂಪದಲ್ಲಿ ಬಂದಾತನೂ ಜರತೂಷ್ಟ್ರನೆ.” ಆಮೇಲೆ ಒಬ್ಬರು ಪ್ರಷ್ಯಾದ ಯೆಹೂದ್ಯ ಮಹಾಶಯನ ವಿಚಾರವಾಗಿ ಮಾತಾಡುತ್ತಾ ಎಂದರು: “ಆತ ವೈಜ್ಞಾನಿಕ ಯುದ್ಧದ ಸಮಯದಲ್ಲಿ ಬೇಯಿಸದೆ ಉಪಯೋಗಿಸುವ ಒಂದು ಆಹಾರ ಕಂಡುಹಿಡಿದ. ಆತ ಹೇಳಿದ ‘ಮನಸ್ಸು ಮಾಡಿದ್ದರೆ ನಾನುಕೋಟಿ ಕೋಟಿ ರೂಪಾಯಿ ಸಂಪಾದಿಸಬಹುದಿತ್ತು’ ಎಂದು. ಆತ ಬಲುಒಳ್ಳೆಯ ಮನುಷ್ಯ. ಮೊದಲು ಆತ ಮದರಾಸಿನ ಆಡ್ಯಾರದ ಥಿಯಾಸೋಫಿಕಲ್ ಸೊಸೈಟಿಯಲ್ಲಿದ್ದ. ಯೆಹೂದೀ ಧರ್ಮ ಆತನಿಗೆ ಹಿಡಿಸಲಿಲ್ಲ, ಥಿಯೊಸೋಫಿಯೂ ಆತನ ಮನಸ್ಸಿಗೆ ಒಪ್ಪಲಿಲ್ಲ. ತರುವಾಯ ಮದರಾಸಿನ ಶ್ರೀ ರಾಮಕೃಷ್ಣ ವಿದ್ಯಾರ್ಥಿನಿಲಯಕ್ಕೆ ಬಂದ. ಕೊನೆಗೆ ನನ್ನನ್ನು ನೋಡಲು ಇಲ್ಲಿಗೆ ಬಂದ. ಆತ ಪ್ಯಾಲಿಸ್ತೀನ್, ಜೆರುಸಲೇಮ್ ಮುಂತಾದ ಸ್ಥಳಗಳಿಗೆ ಹೋಗಿದ್ದ. ಅವು ಯಾವುವೂ ಹಿಡಿಸಲಿಲ್ಲ. ಆತ ಹೇಳಿದ ‘ಅಲ್ಲೆಲ್ಲಿಯೂ ಆಧ್ಯಾತ್ಮಿಕ ಧರ್ಮ ಭಾವ ಇಲ್ಲ’ ಎಂದು. ಈಗ ಆತ ಅಮೆರಿಕಾದಲ್ಲಿದ್ದಾನೆ.”

ಅಮೆರಿಕಾಕ್ಕೆ ಕೆಲವು ಕಾಗದ ಬರೆಯಬೇಕಿತ್ತು. ಮಾತು ಆ ವಿಷಯಕ್ಕೆ ತಿರುಗಿತು, ಹೇಳಿದರು; “ಈ ರೀತಿ ಪತ್ರವಿನಿಮಯದಿಂದ ಒಂದು ಅಲ್ಪಸ್ವಲ್ಪ ಪ್ರೀತಿಯ ಭಾವ ಪ್ರಕಾಶವಾಗುತ್ತದೆ. ಆದರೆ ಅಂತರ್‌ದೃಷ್ಟಿ ತೆರೆದಾಗ ಸರ್ವವೂ ಬ್ರಹ್ಮವಾಗಿ ತೋರುತ್ತದೆ. ‘ಏಕತ್ವಮನುಷ್ಯತಃ ಕೇನ ಕಂ ವಿಜಾನೀಯಾತ್?’ (ಯಾರು ಏಕತ್ವವನ್ನು ಕಾಣುತ್ತಾರೊ ಅವರು ಪ್ರತ್ಯೇಕವಾಗಿ ಮತ್ತೆ ಯಾರಿಂದ ಯಾರನ್ನು ಅರಿಯುತ್ತಾರೆ?) ಆದ್ದರಿಂದ ಬಾಹಿರವಾಗಿ ಈ ನಾನಾಬುದ್ಧಿ ಪ್ರಸೂತವಾದ ಏಕತ್ವಭಾವದಿಂದ ಆದಾನ ಪ್ರದಾನಾದಿ ವ್ಯವಹಾರಗಳಲ್ಲಿ ತೊಡಗುವುದು ಅವಶ್ಯಕವಾಗುತ್ತದೆ.”

* * *

ಡಾಕಾದಲ್ಲಿ ನಡೆದ ಕೋಮುವಾರು ಗಲಭೆಯ ಪ್ರಸ್ತಾಪ ಬಂದಾಗ ಮಹಾಪುರುಷಜಿ ಹೇಳಿದರು: “ತಾಯಿ ಏಕೆ ಹೀಗೆ ಮಾಡಿದಳು? ಠಾಕೂರರೆ ನಮಗೆ ಸರ್ವ ಭರವಸೆ; ಅವರೇ ರಕ್ಷೆ ನೀಡುತ್ತಾರೆ. ಡಾಕಾದಲ್ಲಿ ಹಿಂದೆ ಯಾವಾಗಲೂ ಈ ಪ್ರಮಾಣದಲ್ಲಿ ಅನಾಹುತವಾಗಿರಲಿಲ್ಲ. ತಾಯಿಯ ಧ್ವಂಸಲೀಲೆ ಸಾಗುತ್ತಿದೆ. `Out of evil cometh good.’ (ಕೇಡಿನಿಂದಲೂ ಕೇಸು ಮೂಡುತ್ತದೆ) ಇದರಿಂದಲೂ ಏನೊ ಕಲ್ಯಾಣ ಸಂಭವಿಸುತ್ತದೆ. ಆತನು ದಯೆ ತೋರಲಿ; ಎಲ್ಲರಿಗೂ ಶಾಂತಿ ದಯಪಾಲಿಸಲಿ. ಯಾರಿಗೂ ಅನಿಷ್ಟವಾಗದಿರಲಿ ಎಂಬುದೆ ನಮ್ಮ ಹಾರೈಕೆ.”

* * *

ಒಬ್ಬರು ಸಾಧು ಸುಮಾರು ಒಂದು ತಿಂಗಳು ಕಾಯಿಲೆ ಬಿದ್ದಿದ್ದು, ಈಗ ತಾನೆ ಗುಣಮುಖರಾಗಿ ಹಾಸಿಗೆ ಬಿಟ್ಟೆದ್ದು, ಮಹಾಪುರುಷಜಿಗೆ ಪ್ರಣಾಮ ಸಲ್ಲಿಸಲು ಬಂದರು. ಮಹಾಪುರುಷಜಿ ಅವರನ್ನು ನೋಡಿದೊಡನೆ ತುಂಬ ಆನಂದದಿಂದ ‘ಬಾ, ಬಾ!’ ಎಂದು ಸ್ವಾಗತಿಸಿ, ಅಚ್ಚರಿಯಿಂದಲೊ ಎಂಬಂತೆ ಗಟ್ಟಿಯಾಗಿ ‘ಅರೆ! ನ -ಮೇಲಕ್ಕೆ ಹತ್ತಿಬಂದು ಬಿಟ್ಟಿದ್ದಾನೆ! ಭೇಷ್,  ಬಾಬಾ! ಠಾಕೂರರ ಕೃಪೆ ದೊಡ್ಡದು! ಜಯ್ ಗುರುಮಹಾರಾಜ್! ಏನೂ ಚಿಂತೆ ಬೇಡ. ಠಾಕೂರರು ಎಲ್ಲ ನೋಡಿಕೊಳ್ಳುತ್ತಾರೆ. ನಿಮ್ಮ ದೇಹ ಮನಸ್ಸು ಎಲ್ಲವನ್ನೂ ಠಾಕೂರರಿಗೆ ಅರ್ಪಣಮಾಡಿಬಿಟ್ಟಿದ್ದೀರಿ. ಅವರ ಆಶ್ರಯಕ್ಕೆ ಬಂದಿದ್ದೀರಿ. ಅವರೆ ನಿಮ್ಮೆಲ್ಲರ ರಕ್ಷೆ ಮಾಡುತ್ತಾರೆ. ಸ್ವಾಸ್ಥ್ಯಲಾಭ, ಜ್ಞಾನ, ಭಕ್ತಿ, ಮುಕ್ತಿ, ಎಲ್ಲವನ್ನೂ ಠಾಕೂರರೆ  ನೋಡಿಕೊಳ್ಳುತ್ತಾರೆ. ಸರಿ, ಈಗ ಹೋಗಪ್ಪಾ, ಮಲಗಿಕೊ. ನಿಂತೇ ಇರುವುದರಿಂದ ನಿನಗೆ ಕಷ್ಟವಾಗುತ್ತದೆ. ಛೇ! ಎಷ್ಟು ಕೃಶವಾಗಿ ಹೋಗಿದ್ದೀಯೆ. ಸರಿಯಾದ ಆಹಾರವಿಹಾರದಿಂದ ಮತ್ತೆ ಎಲ್ಲ ಸರಿಹೋಗುತ್ತದೆ. ಜಯ್ ಗುರು ಮಹಾರಾಜ್! ಅವರೇ ಬದುಕಿಸಿಕೊಟ್ಟಿದ್ದಾರೆ. ನಿಶ್ಚಯ.”

* * *

ಮತ್ತೊಂದು ದಿನ ಭಕ್ತರೊಬ್ಬರ ಪತ್ರ ಬಂದಾಗ ಓದಿ ನೋಡಿ ಮಹಾ ಪುರುಷಜಿ ಹೇಳಿದರು: “ಠಾಕೂರರ ನಾಮು ಯಥಾಸಾಧ್ಯ ಜಪಿಸುತ್ತಿದ್ದಾನೆ; ಹೃತ್ಪೂರ್ವಕ ಪ್ರಾರ್ಥನೆ ಮಾಡುತ್ತಿದ್ದಾನೆ. ಅದರಲ್ಲಿ ತುಸು ಆನಂದ ಉಂಟಾಯಿತು ಎಂದರೆ ಆದ್ಯಾತ್ಮಿಕ  ಪಥದಲ್ಲಿ ದೃಢವಾಗಿ ಕಾಲೂರುತ್ತಾನೆ. ಭಗವಂತನ ಹೆಸರಿನಲ್ಲಿ ಪ್ರೀತಿ ಹುಟ್ಟಿತು ಎಂದರೆ ಆಮೇಲೆ ಚಿಂತಿಸಬೇಕಾದುದೇನೂ ಇಲ್ಲ. ಕಷ್ಟಗಳಿಗೇನು ರಾಶಿ ಇವೆ; ಅವು ಯಾವಾಗಲೂ ಇದ್ದೆ ಇರುತ್ತವೆ. ಚೆನ್ನಾಗಿ ಶ್ರೀ ಗುರುಮಹಾರಾಜರ ನಾಮಜಪಮಾಡಲಿ; ಕಲ್ಯಾಣವಾಗಿಯೇ ಆಗುತ್ತದೆ. ಜನ್ಮಾಷ್ಟಮಿಯ ದಿನ ರಾತ್ರಿ ಮೂರು ಗಂಟೆಯವರೆಗೂ ಪೂಜೆ ನಡೆಸಿದನಂತೇನು? ಭೇಷ್, ಅಬ್ಬಾ ಅಬ್ಬಾ!”

* * *

ಮಹಾಪುರುಷಜಿ ಮಹಾರಾಜರು ಹಾಸಿಗೆಯ ಮೇಲೆ ಮಲಗಿದ್ದಾರೆ. ಕೆಲವು ದೇವ ದೇವಿಯರ ನಾಮಾವಳಿಯನ್ನೂ ವೇದಾಂತದ ವಾಕ್ಯಗಳನ್ನೂ ಮತ್ತು ದೇವೀಸೂಕ್ತವನ್ನೂ ಹಾಸಿಗೆಯ ಮೇಲೆ ಒರಗಿಕೊಂಡೇ ಹೇಳಿಕೊಂಡರು. ತರುವಾಯ ಎದ್ದು ಕುಳಿತರು. ಹೇಳಿದರು: “ಆಶ್ಚರ್ಯ! ಅದ್ಭುತ! ನನ್ನ ಮನಸ್ಸಿನಲ್ಲಿ ಎಂತಹ ಸೊಗಸಾದ ಚಿಂತಾಪ್ರವಾಹ ಹರಿದಿತ್ತು! ಅಲ್ಲಿ ಶಿವ ಸ್ಥಿರಸ್ಥಿತಿಯಲ್ಲಿದ್ದನು; ತಾಯಿ ಅವನ ಮೇಲೆ ಕುಣಿಯುತ್ತಿದ್ದಳು. ಶಿವನೋ ಚಿರಕಾಲವೂ ಸ್ಥಿರ; ತಾಯಿಯ ನಾಟ್ಯವೋ ಚಿರಕಾಲವೂ ಚಲಿತ. ಒಳಗೆ ಸಂಪೂರ್ಣ ಸ್ಥಿರ; ಹೊರಗೆ ಈ ಲೀಲಾಮಯಿ: ಲೀಲೆ.

* * *

ಒಬ್ಬ ಬ್ರಹ್ಮಚಾರಿ ಒಂದು ದಿನ ಪ್ರಶ್ನೆ ಕೇಳಿದನು: “ಜ್ಞಾನ ಮಾರ್ಗದ ಕಡೆಗೆ ಮನಸ್ಸು ಜೋರಾಗಿ ಒಲಿಯುವ ಪಕ್ಷದಲ್ಲಿ ಸಾಧಕನಾದವನು ತನ್ನ ಇಷ್ಟ ದೇವತಾ ಮಂತ್ರ ಜಪಮಾಡದೆ ಓಂಕಾರ ಮಾತ್ರ ಜಪ ಮಾಡಬಹುದೇ?”

“ಮಾಡಬಹುದು: ಅದರಲ್ಲೇನು ತಪ್ಪಿಲ್ಲ” ಎಂದು ಮಹಾಪುರುಷಜಿ ಮುಂದುವರಿದು “ಏಕೆಂದರೆ ಓಂಕಾರವೂ ಭಗವಂತನೆಯೆ. ಠಾಕೂರರನ್ನೂ ಓಂಕಾರವೆಂದೇ ಜಪ ಮಾಡಬಹುದು. ಅದರಲ್ಲೇನು ತಪ್ಪಿಲ್ಲ.”

* * *

ಕೆಲದಿನಗಳ ಅನಂತರ ಅದೇ ಬ್ರಹ್ಮಚಾರಿಯನ್ನು ಕುರಿತು ಪ್ರಶ್ನೆ ಹಾಕಿದರು ಮಹಾಪುರುಷಜಿ “ಏನು ಒಂಕಾರ ಜಪಮಾಡುತ್ತಿದ್ದೀಯಾ?” ಅದಕ್ಕೆ ಆ ಬ್ರಹ್ಮಚಾರಿ ‘ಹೌದು’ ಎನ್ನಲು, ಆತನಿಗೆ ಪ್ರೋತ್ಸಾಹಕರವಾಗಿ ‘ಭೇಷ್!ಭೇಷ್!ಭೇಷ್!’ ಎಂದು ಶ್ಲಾಘಿಸಿದರು. ಆಗ ಆ ಬ್ರಹ್ಮಚಾರಿ ಹೇಳಿದನು: ‘ಆದರೆ, ಮಹಾರಾಜ್, ಓಂಕಾರ ಜಪ ಮಾಡುತ್ತಾ ಮಾಡುತ್ತಾ ದೇಹವೆಲ್ಲ ಮರನಿಮಿರಿದಂತಾಗಿ ಸ್ವಲ್ಪ ಹೆದರಿಕೆಯಾಗುತ್ತದೆ.’ ನಿನಗೆ ಹಾಗೆ ಅನುಭವವಾದಾಗ ಶ್ರೀ ಗುರುಮಹಾರಾಜರಿಗೆ ಪ್ರಾರ್ಥನೆ ಮಾಡು ‘ಹೇ ಠಾಕೂರ್‌, ನೀವೆಯೆ ಓಂಕಾರಸ್ವರೂಪರು. ಸರಿಯಾದ ದಾರಿಯಲ್ಲಿ ನಾನು ಮುಂಬರಿಯುವಂತೆ ಅನುಗ್ರಹಿಸಬೇಕು. ಯಾವುದು ಸತ್ಯವಸ್ತುವೋ-ಅದು ಜ್ಞಾನವೆ ಆಗಿರಲಿ. ಭಕ್ತಿಯೆ ಆಗಿರಲಿ, (ಅವೆರಡೂ ಒಂದೇ ವಸ್ತು) ಅದನ್ನು ನಾನು ಪಡೆಯಲು ಸಮರ್ಥವಾಗುವಂತೆ ಕೃಪೆಮಾಡಬೇಕು’ ಎಂದು ಹೃತ್ಪೂರ್ವಕವಾಗಿ ಬೇಡಿಕೊ.

* * *

ಸಾಧುವೊಬ್ಬರಿಗೆ ತುಂಬ ಅಸ್ವಸ್ಥತೆಯಾಗಿತ್ತು. ತಮ್ಮ ಸೇವಕರೊಬ್ಬರಿಗೆ ಮಹಾಪುರುಷಜಿ ಹೇಳಿದರು: “ನನಗೆ ತುಂಬ ಇಚ್ಛೆಯಾಗಿದೆ, ಒಮ್ಮೆ ಆತನನ್ನು ನೋಡಬೇಕೆಂದು. ಕುರ್ಚಿಯಲ್ಲಿ ಕೂರಿಸಿ ನನ್ನನ್ನು ಇಬ್ಬರು ಕೆಳಕ್ಕೆ ಹೊತ್ತುಕೊಂಡು ಹೋಗುತ್ತೀರಾ? ರೋಗಿಯ ಹತ್ತಿರ ಹೋದರೆ ತುಂಬ ಉಪಕಾರವಾಗುತ್ತದೆ. ಸಹಾನುಭೂತಿ ತೋರಿದರೆ ರೋಗವು ಗುಣವಾಗಬಲ್ಲದು.”

* * *

ಮಹಾಪುರುಷಜಿಯ ಸೇವಕರಲ್ಲಿ ಒಬ್ಬರು ಕಾಯಿಲೆ ಬಿದ್ದುದರಿಂದ ಇನ್ನೊಬ್ಬರು ಕಳೆದ ರಾತ್ರಿಗಳಿಂದ ಎರಡೆರೆಡು ಗಂಟೆಯ ಹೊತ್ತು ಎಡೆಬಿಡದೆ ಮಹಾಪುರುಷಜಿಗೆ ಗಾಳಿ ಬೀಸುತ್ತಿದ್ದರು. (ಆಗ ಬೇಲೂರು ಮಠದಲ್ಲಿ ವಿದ್ಯುತ್ ಬೀಸಣಿಗೆಗಳಿರಲಿಲ್ಲ.) ಮೂರನೆಯ ದಿನ ಮಹಾಪುರುಷಜಿ ಅವರಿಗೆ ಹೇಳಿದರು “ನಿನಗೆ ತುಂಬ ಕಷ್ಟವಾಗುತ್ತದೆ, ಸ್ವಲ್ಪ ವಿಶ್ರಾಂತಿ ತೆಗೆದುಕೊ; ನನಗೀಗೇನು ಗಾಳಿ ಬೇಕಾಗಿಲ್ಲ. ಆಗ ಆ ಸಾಧು ಹೇಳಿದರು “ಇಲ್ಲ, ಇಲ್ಲ, ಮಹಾರಾಜ್; ಏನೂ ಕಷ್ಟವಾಗುತ್ತಿಲ್ಲ. ತಮ್ಮ ಸೇವೆ ಮಾಡದೆ ಇದ್ದರೆ ನಮಗೆ ಕಲ್ಯಾಣವಾಗುವುದು ಹೇಗೆ?”

ಮಹಾಪುರುಷಜಿ: ‘ಅದೂ ನಿಜವೆ. ನಾವು ವೃದ್ಧ ಸಾಧುಗಳು, ಅಲ್ಲದೆ ಠಾಕೂರರ ದಾಸರು; ನಮ್ಮ ಸೇವೆ ಮಾಡಿದರೆ ಕಲ್ಯಾಣವಾಗುತ್ತದೆ, ಅದರಲ್ಲಿ ಸಂದೇಹವಿಲ್ಲ.”

* * *

ಒಮ್ಮೆ ಮಠದ ಸಂನ್ಯಾಸಿಯೊಬ್ಬರು ಅತ್ಯಂತ ವ್ಯಾಕುಲತೆಯಿಂದ ಮಹಾಪುರುಷ ಮಹಾರಾಜರನ್ನು ಕೇಳಿಕೊಂಡರು: “ಮಹಾರಾಜ್, ಚಿತ್ರದಲ್ಲಿ ಶ್ರೀ ಗುರುಮಹಾರಾಜರನ್ನು ನೋಡುವುದೇ ಸಾರಸರ್ವಸ್ವವೇ? ನನ್ನ ಭಾಗಕ್ಕೆ ಅದಕ್ಕಿಂತಲೂ ಬೇರೇನೂ ಲಭ್ಯವಿಲ್ಲವೆ?”

ಮಹಾಪುರುಷಜಿ ತತ್‌ಕ್ಷಣವೆ ಅತ್ಯಂತ ಆಶ್ವಾಸಪೂರ್ಣವಾಗಿ ಅವರಿಗೆ ಹೇಳಿದರು: “ಇಲ್ಲ, ಇಲ್ಲ; ಪಠದಲ್ಲಿ ಮಾತ್ರವೆ ಏಕೆ?” ಎಂದು ತಮ್ಮ ಹೃದಯದ ಕಡೆಗೆ ಬೆರಳುಮಾಡಿ ತೋರಿಸುತ್ತಾ ಮುಂದುವರಿದರು, “ಈ ಸ್ಥಾನದಲ್ಲಿಯೆ ಸಾಕ್ಷಾತ್ ಜೀವಂತ ಮೂರ್ತಿಯ ಉಪಲಬ್ಧಿಯಾಗುತ್ತದೆ.”

* * *

ಇಂದು ಜನ್ಮಾಷ್ಟಮಿ. ಒಬ್ಬರು ಸಂನ್ಯಾಸಿ ಮಹಾಪುರುಷಜಿಗೆ ಪ್ರಶ್ನೆ ಹಾಕಿದರು: “ಜನ್ಮಾಷ್ಟಮಿಯ ದಿನದಲ್ಲಿ ಠಾಕೂರರಿಗೆ ಏನಾದರೂ ವಿಶೇಷ ಭಾವಗೀವ ಉಂಟಾಗುತ್ತಿತ್ತೆ?”

ಮಹಾಪುರುಷಜಿ: “ಅಷ್ಟೆಲ್ಲ ಎಲ್ಲಿ ನೆನಪಿರುತ್ತದೆ? ಆದರೆ ವಿಷಯ ಇಷ್ಟು: ಏನಾದರೂ ಒಂದಿನಿತು ಆಲಂಬನ ಒದಗಿದರೂ ತೀರಿತು, ಭಾವಸಮಾಧಿಯಲ್ಲಿ ಮಗ್ನರಾಗಿಬಿಡುತ್ತಿದ್ದರು. ‘ಕಥಾಮೃತ’ (ಶ್ರೀರಾಮಕೃಷ್ಣ ವನದವೇದ) ದಲ್ಲಿ ಅದರ ಒಂದಿಷ್ಟು ಛಾಯೆ ದೊರೆಯುತ್ತದೆ. ಅದು ಕೂಡ ಅಸಂಪೂರ್ಣ. ಮಾಸ್ಟರ್‌ ಮಹಾಶಯ ಪ್ರತಿದಿನವೂ ಠಾಕೂರರನ್ನು ಸಂದರ್ಶಿಸುತ್ತಿರಲಿಲ್ಲ; ಅಲ್ಲದೆ ತಾನು ಕಂಡು ಕೇಳಿದ್ದೆಲ್ಲವನ್ನೂ ಬರೆದಿಡಲೂ ಸಾಧ್ಯವೆ? ನಿಜವಾಗಿಯೂ ಆತನ ಸ್ಮೃತಿಶಕ್ತಿ ಅತ್ಯದ್ಭುತವಾಗಿತ್ತು. ಹಾಗಿದ್ದರೂ ಕೂಡ ಯಾರಾದರಾಗಲಿ ಎಷ್ಟನ್ನು ತಾನೆ ಬರಿಯ ನೆನಪಿನಿಂದಲೆ ಬರೆಯಲು ಸಾಧ್ಯ?”

ಸಂನ್ಯಾಸಿ: “ಸ್ವಾಮೀಜಿ (ಸ್ವಾಮಿ ವಿವೇಕಾನಂದರು) ಗೆ ಒಂದು ಆಶೆ ಇತ್ತು; ಗುರುಮಹಾರಾಜರು ತಮ್ಮ ಶಿಷ್ಯರಿಗೆ ಪ್ರತ್ಯೇಕಪ್ರತ್ಯೇಕವಾಗಿ ಏನೇನು ವಿಶೇಷ ಉಪದೇಶ ಮಾಡಿದ್ದಾರೋ ಅದನ್ನೆಲ್ಲ ಅವರವರಿಂದ ಸಂಗ್ರಹಿಸಬೇಕು ಎಂದು.”

ಮಹಾಪುರುಷಜಿ: “ಅದೆಲ್ಲ ಈಗ ಸಿಗುವುದು ತಾನೆ ಹೇಗೆ? ಅವರಲ್ಲಿ ಅನೇಕರು ಈಗ ಅತೀತರಾಗಿಬಿಟ್ಟಿದ್ದಾರೆ.”

* * *

ಸಂಜೆ ಒಬ್ಬ ಭಕ್ತನಿಗೆ ಮಹಾಪುರುಷಜಿ ಹೇಳಿದರು: “ಹೋಗು, ಮಹಾಮಂಗಳಾರತಿ ದರ್ಶನ ಮಾಡು. ಬೇಲೂರು ಮಠದಲ್ಲಿ ಠಾಕೂರರು ಸಾಕ್ಷಾತ್ತಾಗಿ ವಿರಾಜಮಾನರಾಗಿದ್ದಾರೆ: ಸ್ವಾಮೀಜಿಯೆ ಅವರನ್ನು ಇಲ್ಲಿ ಕೂರಿಸಿ ಹೋಗಿದ್ದಾರೆ; ಸತ್ಯವೆಂದು ತಿಳಿ.

ಶ್ರೀ ಶ್ರೀಠಾಕೂರರ ಪೂಜಾರಿ ಒಂದು ದಿನ ಪ್ರಾತಃಕಾಲ ಮಹಾಪುರುಷಜಿಗೆ ಪ್ರಣಾಮ ಮಾಡಿದಾಗ ಅವರು ಭಾವಸ್ಥರಾಗಿ ‘ಜಯ್‌ಗುರುಮಹಾರಾಜ್‌! ಜಯ್ ಗುರುಮಹಾರಾಜ್‌!’ ಎಂದು ಉದ್ಘೋಷಿಸಿದರು. ತುಸು ಅನಂತರ ಪೂಜಾರಿಯ ಕಡೆಗೆ ಸಸ್ನೇಹದಿಂದ ನೋಡಿ ಹೇಳಿದರು: “ಭೇಷ್, ನೀನು ಠಾಕೂರರ ಪೂಜೆ ಮಾಡುತ್ತಿದ್ದೀಯೆ. ನಿನಗೆ ಭಕ್ತಿ ವಿಶ್ವಾಸ ಯಥೇಚ್ಛ ಉಂಟಾಗಲಿ. ಪೂಜೆಯ ಅನಂತರ ಗುರುಮಹಾರಾಜರಿಗೆ ಪ್ರಾರ್ಥನೆ ಸಲ್ಲಿಸು, ‘ಸ್ವಾಮೀ ತಮ್ಮ ಪೂಜೆಯನ್ನು ತಮಗೆ ತೃಪ್ತಿಯಾಗುವಂತೆ ನಾನು ಮಾಡಲು ನನಗೆ ಕೃಪೆದೋರಬೇಕು, ನಾನೇನು ಬಲ್ಲೆ, ತಮಗೆ ಹೇಗೆ ಪೂಜೆ ಸಲ್ಲಿಸಬೇಕು ಎಂಬುದನ್ನು?’ ಎಂದು. ಈ ಸ್ಥಾನದಲ್ಲಿ ಯಾರು ಯಾರು ಠಾಕೂರರ ಸೇವಾಕಾರ್ಯದಲ್ಲಿ ತೊಡಗಿದ್ದಾರೆಯೊ ಅವರೆಲ್ಲರಿಗೂ ಮಹಾಕಲ್ಯಾಣವಾಗುತ್ತದೆ. ಅನೇಕರು ಹೇಳುತ್ತಾರೆ ‘ಠಾಕೂರರು ಎಲ್ಲ ಕಡೆಯಲ್ಲಿಯೂ ಇದ್ದಾರೆ’ ಎಂದು. ಅದೂ ಸತ್ಯ. ಆದರೆ ಇಲ್ಲಿ ಅವರ ವಿಶೇಷ ಪ್ರಕಾಶ. ಸ್ವಾಮೀಜಿಯೆ ಅವರನ್ನಿಲ್ಲಿ ಪ್ರತಿಷ್ಠಿಸಿದ್ದಾರೆ-ಆ ‘ಆತ್ಮರಾಮ’ ಕಲಶ ನಿನಗೆ ಗೊತ್ತಿಲ್ಲವೆ? (ಶ್ರೀ ರಾಮಕೃಷ್ಣರ ಭಸ್ಮಾವಶೇಷವನ್ನು ಒಳಗೊಂಡು ಬೇಲೂರು ಮಠದಲ್ಲಿ ಪ್ರತಿಷ್ಠಾಪನವಾಗಿರುವ ದಿವ್ಯಕರಂಡ).

* * *

ಮತ್ತೊಂದು ದಿನ ಅದೇ ಪೂಜಾರಿ ಸಾಧುವನ್ನು ಕುರಿತು “ಸಾಯಂಕಾಲ ದೇವಸ್ಥಾನದ ಬಾಗಿಲು ತೆರೆದವನು ಒಂದಿಷ್ಟು ಜಪಗಿಪ ಮಾಡುತ್ತೀಯಾ ತಾನೆ?” ಎಂದು ಮಹಾಪುರುಷಜಿ ಕೇಳಿದರು.

ಪೂಜಾರಿ: “ಹೌದು, ಮಹಾರಾಜ್.”

ಮಹಾಪುರಷಜಿ: “ಹ್ಞಾ, ಸರ್ವದಾ ಒಂದು ಭಾವಧಾರೆ ಆ ಸ್ಥಾನದಲ್ಲಿ ಪ್ರವಹಿಸುತ್ತಿರುವಂತೆ ಮಾಡಬೇಕು. ಯಾರಾದರೂ ದೇವರಮನೆಗೆ ಪ್ರವೇಶಿಸಿದೊಡನೆ ಅವರಿಗೆ ಸಾಕ್ಷಾತ್ ಭಗವಂತನ ಸಾನ್ನಿಧ್ಯದಲ್ಲಿರುವಂತೆ ಮನಸ್ಸಿಗೆ ಮುಟ್ಟಬೇಕು. ಆತನಿಗೆ ಭಕ್ತಿ ಭಕ್ತ ಎಂದರೆ ಅತ್ಯಂತ ಪ್ರೀತಿ. ಹಾಗಲ್ಲದಿದ್ದರೆ ಸಗುಣ ಈರ್ಶವರ ಏಕೆ? ಒಂದಿಷ್ಟು ಧ್ಯಾನಮಾಡಿಬಿಟ್ಟರೆ ಏನಾದಹಾಗಾಯಿತು? ಭಕ್ತಿ ಬೇಕು, ಎರಡೂ ಬೇಕು.”

* * *

ಪ್ರಾತಃಕಾಲ. ಅನೇಕ ಸಾಧುಗಳು ಮಹಾಪುರುಷಜಿಯ ಕೊಠಡಿಯಲ್ಲಿ ನೆರೆದಿದ್ದರು. ಮಾಲೆ ಜಪ ಇವುಗಳ ವಿಷಯವಾಗಿ ಮಾತು ಬಂದಿತು. ಮಹಾಪುರುಷಜಿ ಹೇಳಿದರು: “ಕುಬ್ಜಬುದ್ಧಿ ಯಾರಿಗಿದೆಯೊ ಅವರು ಹೇಳುತ್ತಾರೆ,

ಎಷ್ಟು ಹೆಚ್ಚು ಸಂಖ್ಯೆ ಜಪ ಮಾಡಿದರೆ ಅಷ್ಟು ಹೆಚ್ಚುಪ್ರೀತನಾಗುತ್ತಾನೆ ಅವನು ಎಂದು: ಆದರೆ ಅವನೇನು ಸಂಕ್ಯೆ ನೋಡುತ್ತಾನೆಯೇ? ಹೃದಯ ಎತ್ತ ಕಡೆ ಇದೆಯೊ ಆ ದಿಕ್ಕಿನ ಕಡೆಗಿರುತ್ತದೆ ಅವನ ಕಣ್ಣು. ಭಾವವೊಂದು ಉಂಟಾಯಿತು ಎಂದರೆ ಲೆಕ್ಕ ಇಟ್ಟುಕೊಂಡರೇನು ಬಿಟ್ಟರೇನು?”

ಒಬ್ಬರು ಸಾಧು: “ಹ್ಞಾ ಮಹಾರಾಜ್, ಒಮ್ಮೊಮ್ಮೆ ಜಪಮಣಿ ಎಣಿಸುವುದೇ ಭಾವಕ್ಕೆ ಅಡಚಣೆಯಾಗುತ್ತದೆ?”

ಮಹಾಪುರುಷಜಿ: “ಹ್ಞಾ, ಹಾಗಲ್ಲದೆ ಮತ್ತೇನು? ನಾನು ಮಾಲೆ ಗೀಲೆ ಜಪ ಮಾಡುವುದೆ ಇಲ್ಲ. ತುಲಸೀದಾಸ*  ಹೇಳುತ್ತಾನೆ ‘ಮಾಲಾ ಜಪೇ ಶಾಲಾ’ ‘ಮಾಲೆ ಎಣಿಸಿ ಜಪಮಾಡುವವನು ಮೂರ್ಖ’ ಎಂದು. ಆದರೆ ಒಂದು ಇಟ್ಟುಕೊಳ್ಳಲೆಬೇಕಲ್ಲ, ನಾನು ಸಾಧು ಎಂದು ತೋರಿಸುವುದಕ್ಕೆ” ಎಂದು ನಗುತ್ತಾ “ನಾನೂ ಓ ಅಲ್ಲಿ (ಗೋಡೆಯಮೇಲಿದ್ದ ತಮ್ಮ ಭಾವಚಿತ್ರಕ್ಕೆ ತಗುಲಿಹಾಕಿದ್ದ ಒಂದು ಜಪಮಣಿಸರದ ಕಡೆ ಕೈ ತೋರಿಸುತ್ತಾ) ಒಂದನ್ನು ಇಟ್ಟಿದ್ದೇನೆ. ನಾನೇನೂ ಜಪಗಿಪ ಮಾಡುವುದಿಲ್ಲ ಎಲ್ಲವನ್ನೂ ಅದೇ (ನಗುತ್ತಾ ಮತ್ತೊಮ್ಮೆ ಫೋಟೋದ ಕಡೆ ಕೈತೋರುತ್ತಾ) ಮಾಡುತ್ತದೆ. ಠಾಕೂರ್‌ ಹೇಳುತ್ತಿದ್ದರು-ಜಪ, ಆಮೇಲಾಮೇಲೆ ಧ್ಯಾನ, ಆದಾದ ಮೇಲೆ ಭಾವ, ಸಮಾಧೀ ಇತ್ಯಾದಿ.”

ಸಾಯಂಕಾಲ ಮಹಾಪುರುಷ ಮಹಾರಾಜ್ ಉಪ್ಪರಿಗೆಯಲ್ಲಿ ಗಂಗೆಯ ದಿಕ್ಕಿನಲ್ಲಿ ವರಾಂಡದಲ್ಲಿ ಕಾಲಾಡಲು ತಿರುಗಾಡುತ್ತಿದ್ದರು. ವರಾಂಡದ ಒಂದು ಪಾರ್ಶðದಲ್ಲಿ ಪೂಜನೀಯ ಖೋಕಾ ಮಹಾರಾಜ್ (ಸ್ವಾಮಿ ಸುಬೋಧಾನಂದರು) ಆರಾಮ ಕುರ್ಚಿಯಲ್ಲಿ ಕುಳಿತು ಭಾಗವತ ಓದುತ್ತಿದ್ದರು. ಬಳಿಯಿದ್ದ ಒಬ್ಬರು ಸಾಧು ಸೇವಕರಿಗೆ ಮಹಾಪುರುಷಜಿ ಹೇಳಿದರು: ಖೋಕಾ ಮಹಾರಾಜ್ ಭಾಗವತದಲ್ಲಿ ಮಗ್ನರಾಗಿಬಿಟ್ಟಿದ್ದಾರೆ.

ಸೇವಕ ಸಾಧು: “ಹ್ಞಾ, ಇನ್ನೂ ಅನೇಕ ಪುರಾಣಗಳನ್ನೆಲ್ಲ ಓದಿಬಿಟ್ಟಿದ್ದಾರೆ. ಶಿವಪುರಾಣವನ್ನೂ ಓದಿದ್ದಾರೆ.”

ಖೋಕಾ ಮಹಾರಾಜ್: “ಹ್ಞಾ, ಏನಾದರೂ ಮಾಡುತ್ತಾ ಇರಬೇಕಲ್ಲ ಮತ್ತೆ!”

ಮಹಾಪುರುಷಜಿ: “ಏನಾದರೂ ಮಾಡ್ತಾ ಇರೋದೇನು ಅದು? ಭಾಗವತ ಏನು ಸಾಧಾರಣವೆ? ಭಾಗವತ ಮೊದಲಾದ ಪುರಾಣಗಳು ನಮಗೆ ಹೇಳುವುದು ಸತ್ಯದ ಕಥೆಯನ್ನೆ ತಾನೆ?”

ಬೈಗಾದ ಮೇಲೆ ಆ ವರಾಂಡದಿಂದಲೆ ಹುಣ್ಣಿಮೆಯ ಬೆಳ್ದಿಂಗಗಳಲ್ಲಿ ತಳ ತಳಿಸುತ್ತಿದ್ದ ವಾರಿಯ ಗಂಗಾನದಿಯನ್ನು ನೋಡುತ್ತಾ ಕೈ ಜೋಡಿಸಿ ಹೇಳಿದರು ಮಹಾಪುರುಷಜಿ: “ಜಯ ಮಾತೆ, ಜಯ ಮಾತೆ! ಭಕ್ತಿಯನ್ನು ದಯಪಾಲಿಸು ತಾಯಿ ಗಂಗೆ!”

ಅವರ ರಕ್ತದ ಒತ್ತಡ ಜಾಸ್ತಿಯಾಗಿದ್ದುದರಿಂದ ಡಾಕ್ಟರು ಹೆಚ್ಚಾಗಿ ಮಾತುಕತೆ ಆಡುವುದನ್ನು ನಿಷೇಧಿಸಿದ್ದರು. ಸೇವಕನು ಮಹಾಪುರುಷಜಿಗೆ ಅದರ ನೆನಪುಮಾಡಿಕೊಟ್ಟನು. ಅವರು ಹೇಳಿದರು: “ನಾನು ಶ್ರೀರಾಮಕೃಷ್ಣರ ಶಿಷ್ಯ. ಗಂಟಲಿನ ಕ್ಯಾನ್ಸರ್‌ ರೋಗದಂತಹ ಯಾತನಾಕ್ಲಿಷ್ಟವಾದ ಮತ್ತು ಅಪಾಯಕರ ವ್ಯಾಧಿಯಿಂದ ನರಳುತ್ತಿದ್ದರೂ ಅವರು ತಮ್ಮಲ್ಲಿಗೆ ಬಂದವರಿಗೋಸ್ಕರವಾಗಿ ಕರಗಿ ಮರಗಿ ಎಷ್ಟು ಭಾವಮಯರಾಗುತ್ತಿದ್ದರು! ಎಷ್ಟು ಮಾತುಕತೆ ಆಡುತ್ತಿದ್ದರು! ನಾನು ಮಾತ್ರ ಬಾಯಿಮುಚ್ಚಿಕೊಂಡು ಕುಳಿತುಕೊಳ್ಳಬೇಕೇನು? ಶರೀರವೇನೊ ಕೆಟ್ಟುಹೋಗಿದೆ. ಹೋದರೇನಂತೆ? ನೀನೇ ಆದರೂ, ಸದ್ದಿಲ್ಲದೆ ಬಂದು ನನಗೆ ನಮಸ್ಕಾರಮಾಡಿ ಮಾತಿಲ್ಲದೆ ಹೋದರೆ, ಅದು ಚೆನ್ನಾಗಿರುತ್ತದೆಯೆ? ಏನು ತಿಳಿದುಕೊಳ್ತೀಯ? ‘ಓಹೊ ಇಷ್ಟೇನೆ ಶ್ರೀರಾಮಕೃಷ್ಣರ ಶಿಷ್ಯರು?’ ಎಂದುಕೊಳ್ಳುವುದಿಲ್ಲವೆ?”

* * ** ಕೆಲವರು ಹೇಳುತ್ತಾರೆ ‘ಮಾಲಾ ಜಪೇ ಶಾಲಾ’ ಇತ್ಯಾದಿ ಹೇಳಿದವನು ಕಬೀರದಾಸ ಎಂದು.