ಬೇಲೂರು ಮಠ
ಶುಕ್ರವಾರಮೇ ೧೧, ೧೯೩೦

ರಾತ್ರಿವೇಳೆಯಲ್ಲಿ ದಕ್ಷಿಣದೇಶಿಯ ಸಂನ್ಯಾಸಿಯೊಬ್ಬರು ಮಹಾಪುರುಷ ಮಹಾರಾಜರಿಗೆ ಪ್ರಣಾಮ ಮಾಡಿ ತಮ್ಮ ಹೃದಯದ ಆರ್ತಿಯನ್ನು ಈ ರೀತಿ ಹೇಳಿಕೊಂಡರು: “ಮಹಾರಾಜ್, ಭಗವಂತನನ್ನು ಸರ್ವಭೂತಗಳಲ್ಲಿಯೂ ದರ್ಶನಮಾಡುವ ಹಂಬಲ ನನಗಿದೆ. ಏನು ಮಾಡಿದರೆ ಅದು ಸಾಧ್ಯವಾಗುತ್ತದೆ? ತಾವು ದಯೆತೋರಿ ನನಗೆ ತಿಳಿಯಹೇಳಬೇಕಾಗಿ ಬೇಡುತ್ತೇನೆ.”

ಮಹಾಪುರುಷಜಿ: “ಅಯ್ಯಾ, ದೇವರನ್ನು ಮೊದಲು ನಿನ್ನ ಹೃದಯದಲ್ಲಿ ದರ್ಶನ ಮಾಡಬೇಕು. ಅಂತರ್ಯದಲ್ಲಿ ಆತನ ದರ್ಶನವಾಗದಿದ್ದರೆ ಬಾಹಿರದಲ್ಲಿ ಸರ್ವಭೂತಗಳಲ್ಲಿರುವ ಆತನನ್ನು ನೋಡಲು ಹೇಗಾಗುತ್ತದೆ? ಆತ್ಮಾನುಭೂತಿಯಲ್ಲಿ ಚೆನ್ನಾಗಿ ದೃಢಭಾವದಿಂದ ಪ್ರತಿಷ್ಠಿತವಾದರೆ ಆಮೇಲೆ ಒಳಗೆ ಹೊರಗೆ ಎಲ್ಲೆಲ್ಲಿಯೂ ಆತನ ದರ್ಶನವಾಗುತ್ತದೆ. ತರುವಾಯವೆ ‘ಸರ್ವಂ ಬ್ರಹ್ಮಮಯಂ ಜಗತ್’ ಎಂಬ ಅವಸ್ಥೆ ಲಭಿಸುತ್ತದೆ.”

ಸಂನ್ಯಾಸಿ: “ಸತ್ಯವಚನ, ಸರ್ವಭೂತದಯೆ ಮತ್ತು ಪ್ರೇಮ, ನಿರ್ವಿಕಾರ ಚಿತ್ತದಿಂದ ಸರ್ವದುಃಖ ಸಹನೆ ಇತ್ಯಾದಿ ನೈತಿಕ ಗುಣಗಳ ಉತ್ಕರ್ಷ ಮತ್ತು ಪರಿಪೂರ್ಣತೆಯಿಂದ ಆ ಅವಸ್ಥೆಯನ್ನು ಪಡೆಯಬಹುದೇನು?”

ಮಹಾಪುರುಷಜಿ: “ಹೌದು, ನೈತಿಕ ಚಾರಿತ್ರದಿಂದ ಚಿತ್ತ ಶುದ್ಧವಾಗುತ್ತದೆ. ಆಗ ಆ ಶುದ್ಧಮನದಲ್ಲಿ ಕ್ರಮೇಣ ಭಗವದ್‌ಭಾವ ಸ್ಫುರಣವಾಗುತ್ತದೆ. ಆದರೆ ಕೇವಲ ನೈತಿಕಚಾರಿತ್ರದ ಉತ್ಕರ್ಷಸಾಧನೆ ಮಾಡಿದ ಮಾತ್ರಕ್ಕೆ ಭಗವದ್ದರ್ಶನ ವಾಗುತ್ತದೆ ಎಂದು ನನಗನಿಸುವುದಿಲ್ಲ. ನಿರಂತರವಾಗಿ ಆತನ ಧ್ಯಾನ ಮಾಡುತ್ತಾ ಮಾಡುತ್ತಾ ಆತನೆ ಕೃಪೆ ಮಾಡಿ ಭಕ್ತನ ಹೃದಯದಲ್ಲಿ ಮೈದೋರುತ್ತಾನೆ. ಬೇಕಾದುದು ಆತನ ಧ್ಯಾನ-ಸರ್ವದಾ ಆತನ ಸ್ಮರಣ ಮನನ. ಸತ್ಯ ಸ್ವರೂಪ, ವಿಭು, ಪ್ರೇಮಮಯ, ಸರ್ವಶಕ್ತಿಮಾನ್, ಚೈತನ್ಯಸ್ವರೂಪ ಸಚ್ಚಿದಾನಂದನನ್ನು ಭಾವಿಸುತ್ತಾಭಾವಿಸುತ್ತಾ ಮನುಷ್ಯನಿಗೆ ಕ್ರಮೇಣ ಸಚ್ಚಿದಾನಂದಸ್ವರೂಪ ಪ್ರಾಪ್ತವಾಗುತ್ತದೆ. ಹೇಗಾದರೂ ಮಾಡಿ ಒಮ್ಮೆ ಭಗವಂತನನ್ನು ಹೃದಯದಲ್ಲಿ ಪ್ರತಿಷ್ಠಿಸಲು ಸಮರ್ಥರಾದರೆ ಎಲ್ಲವೂ ದೊರೆತುಬಿಡುತ್ತದೆ. ಆಮೇಲೆ ಪ್ರತ್ಯೇಕವಾಗಿ ನೈತಿಕಚಾರಿತ್ರ ಸಾಧನೆ ಮಾಡಬೇಕಾಗಿ ಬರುವುದಿಲ್ಲ. ಸತ್ಯ, ದಯೆ, ಪ್ರೇಮ ಮೊದಲಾದ ಎಲ್ಲ ಸದ್‌ವೃತ್ತಿಗಳೂ ತಮಗೆ ತಾವೆ ಸಿದ್ಧವಾಗುತ್ತವೆ. ಠಾಕೂರ್‌ ಹೇಳುತ್ತಿದ್ದರಂತೆ, ‘ಯಾವ ಮಗುವಿನ ಕೈಯನ್ನು ತಂದೆಯೆ ಹಿಡಿದುಕೊಂಡು ನಡೆಸುತ್ತಾನೆಯೊ ಆ ಮಗುವಿಗೆ ಬೀಳುವ ಭಯ ಇರುವುದಿಲ್ಲ.’ ಅಯ್ಯಾ, ಗುಟ್ಟು ಏನು ಗೊತ್ತೆ? ಕೃಪೆ, ಕೃಪೆ. ಅವನು ಕೃಪೆ ಮಾಡಿ ದರ್ಶನ ಕೊಟ್ಟರೇನೆ ಮನುಷ್ಯ ಅವನ ದರ್ಶನ ಪಡೆಯಲು ಸಮರ್ಥನಾಗುತ್ತಾನೆ. ಈ ಸಾಧನೆ ಭಜನೆ ಎಲ್ಲವೂ ಮನಸ್ಸನ್ನು ಭಗವನ್ಮುಖಿಯನ್ನಾಗಿ ಮಾಡುವ ಉಪಾಯ ಮಾತ್ರ.

ಹಾಗೆಂದು ಮಹಾಪುರುಷಜಿ ಮಧುಕಂಠದಿಂದ ಹಾಡತೊಡಗಿದರು:

‘ನೀನೆ ದರ್ಶನವೀಯದಿದ್ದರೆ
ಕಾಣಬಲ್ಲವರಾರು ನಿನ್ನ?
ನೀನೆ ಕರೆದೆಳೆಯದಿದ್ದರೆ, ನಿನ್ನೆಡೆಗೆ
ಏರಬಲ್ಲವರಾರು?
ನೀ ಪೂರ್ಣ ಪರಾತ್ ಪರ;
ನೀ ಅಗಮ್ಯ ಅಪಾರ;
ಹೇ ಸ್ವಾಮೀ, ಧ್ಯಾನದಲ್ಲಿ ನಿನ್ನ ಹಿಡಿದವರು
ಅದಾರು?
ಮನಕೆ ಬೋಧಿಪೆನೊಮ್ಮೆ ನೀ ಮನೋತೀತನೆಂದು;
ಅದರೀ ಹೃದಯ ಹಾತೊರೆಯುತಿದೆ ನಿನ್ನ
ದರ್ಶನಕೆ:
ದೀನನಿಗೆ ದರುಶನವನಿತ್ತು ದುಃಖವಿಮೋಚನಕನಾಗು
ಹೇ ದೇವ;
ಪರಿಹರಿಸಿ ಲಜ್ಜೆಯನು, ತಣ್ಪನೆರೆ ಹೃದಯಕ್ಕೆ,
ಓ ಸ್ವಾಮಿ.’

ಅತ್ಯಂತ ಉನ್ಮಯರಾಗಿ ಹಾಡನ್ನು ಹಾಡಿದ ಮೇಲೆ ಧೀರ ಗಂಭೀರ ಭಾವದಿಂದ ಮೆಲ್ಲಗೆ ಹೇಳಿದರು: ‘ಕೃಪೆಯ ಗಾಳಿ ಬೀಸುತ್ತಿದೆ, ನಿರಂತರವೂ ಬೀಸುತ್ತಿದೆ; ನಿನ್ನ ನಾವೆಯ ವಸ್ತ್ರಪಟವನ್ನೇಕೆ ಬಿಚ್ಚದಿರುವೆ?’ ಎಂದು ಠಾಕೂರರು ಮತ್ತೆ ಮತ್ತೆ ಹೇಳುತ್ತಿದ್ದರು. ಈ ಪಟ ಬಿಚ್ಚುವುದೆಂದರೆ ನಮ್ಮವೈಯಕ್ತಿಕ ಸಾಧನೆಯ ಪ್ರಯತ್ನ, ಸಾಧನೆ ಭಜನೆ ಇತ್ಯಾದಿ ಪುರುಷಕಾರ. ಭಗವಂತನ ಕೃಪೆಯನ್ನು ಪಡೆಯುವುದಕ್ಕಾಗಿ ಬೇಕಾಗುವ ಅರ್ಹತೆಯನ್ನು ಸಂಪಾದಿಸಲು ಸಾಧನೆ ಭಜನೆ ಮುಂತಾದವು ನೆರವಾಗುತ್ತವೆ. ಬಾಕಿ ಎಲ್ಲ ಕೃಪೆ. ನಿರಂತರ ಆತನ ಸ್ಮರಣ ಮನನ. ಆತನ ಧ್ಯಾನ ಮಾಡುತ್ತಾ ಮನಸ್ಸು ಪ್ರಾಣ ಪರಿಶುದ್ಧವಾಗುತ್ತವೆ. ಅನಮತರ ಆ ಶುದ್ಧ ಮನಸ್ಸಿನಲ್ಲಿ ತಾನಾಗಿಯೆ ಭಗವದ್‌ಭಾವದ ಸ್ಫುರಣವಾಗುತ್ತದೆ. ಅದೂ ಅಲ್ಲದೆ ನೀವು ಸಾಧುಗಳಾಗಿದ್ದೀರಿ, ಎಲ್ಲವನ್ನೂ ತೆಗೆದು ಬಿಸುಟು ಆತನ ಆಶ್ರಯಕ್ಕೆ ಬಂದಿದ್ದೀರಿ; ಭಗವತ್‌ಸಾಕ್ಷಾತ್ಕಾರವೊಂದೇ ನಿಮ್ಮ ಜೀವಿತದ ಏಕಮಾತ್ರ ಲಕ್ಷ್ಯ. ಸರ್ವಕ್ಷಣವೂ ನೀವು ಆತನ ನೆನಹಿನಲ್ಲಿಯೆ ಬಾಳುತ್ತಿರಬೇಕು. ಠಾಕೂರರ ವಚನದಲ್ಲಿ ಇಲ್ಲವೆ: ‘ದುಂಬಿ ಹೂವಿನ ಮೇಲೆಯೇ ಕೂರುತ್ತದೆ; ಮಧುವನ್ನೇ ಹೀರುತ್ತದೆ.’ ಅದರಂತೆಯೆ ನೀವೂ ಕೂಡ ನಿದ್ದೆಯಲ್ಲಿ, ಕನಸಿನಲ್ಲಿ, ಎಚ್ಚರದಲ್ಲಿ, ಸರ್ವಾವಸ್ಥೆಯಲ್ಲಿಯೂ ಭಗವಂತನೊಡನೆ ವಿಲಾಸಮಾಡುವುದೆ ನಿಮ್ಮ ಸರ್ವಸುಖವಾಗಿರಬೇಕು. ಆತನ ಧ್ಯಾನ, ಆತನ ನಾಮಜಪ, ಆತನ ವಿಷಯಸ್ಮರಣ, ಆತನ ವಿಷಯ ಪಠನ, ಆಲೋಚನ, ಆತನನ್ನು ಕುರಿತು ಪ್ರಾರ್ಥನೆ-ನಿಮ್ಮ ಸರ್ವಸಮಯವೂ ಇವುಗಳಲ್ಲಿಯೆ ವಿನಿಯೋಗವಾಗಬೇಕು. ಹಾಗೆ ಮಾಡಿದರೆಯೆ ನಿಮಗೆ ಜೀವನದಲ್ಲಿ ನಿಜವಾದ ಆನಂದ ಮತ್ತು ಶಾಂತಿ ಸಾಧ್ಯವಾಗುತ್ತದೆ; ಮತ್ತು ಆತನ ಆಶ್ರಯಕ್ಕೆ ಬಂದದ್ದೂ ಸಾರ್ಥಕವಾಗುತ್ತದೆ. ದೇವರು ಅಂತರ್ಯಾಮಿ; ಎಲ್ಲಿ ಅಂತರಿಕ ವ್ಯಾಕುಲತೆಯೋ ಅಲ್ಲಿ ಆತನ ಕೃಪೆ ಚರಿಸುತ್ತದೆ. ಆತನ ರಾಜ್ಯದಲ್ಲಿ ಅವಿಚಾರ ಇಲ್ಲ.

* * *