ಬೇಲೂರು ಮಠ
ಮಂಗಳವಾರ, ಜೂನ್ ೨೪, ೧೯೩೦

ಮಹಾಪುರುಷಜಿ ಅತ್ಯಂತ ತನ್ಮಯ ಭಾವದಿಂದ ಈ ಹಾಡು ಹಾಡಿದರು:

“ಎಂತಹ ಗೊಂಬೆಯ ರಚಿಸಿರುವಳೊ ಶ್ಯಾಮೆ;
ಅಹಾ ಎಂತಹ ಗೊಂಬೆಯ ರಚಿಸಿರುವಳೋ ಶ್ಯಾಮೆ!
ನಾಳ್ಮೊಳದುದ್ದದ ಈ ಗೊಂಬೆಯಲಿ
ಏನದ್ಭುತವಾಡಿಸುತಿಹಳು?
ಯುತ್ರದೊಳಗೆ ತಾನೆಯೆ ಕದ್ದಡಗಿ
ಸೂತ್ರವ ಹಿಡಿದಾಡಿಸುತಿಹಳು;
ಗೊಂಬೆ ಹೇಳುವುದು, ತಾನೆಯೆ ತಿರುಗವೆನೆಂದು,
ಅರಿಯದೆ ತನ್ನನಾಡಿಸುವರಾರೆಂದು.” ಇತ್ಯಾದಿ

ಗೀತೆಯನ್ನು ಮತ್ತೆ ಮತ್ತೆ ಹಾಡಿ ಸುಮ್ಮನೆ ಕುಳಿತುಬಿಟ್ಟರು. ಆಮೇಲೆ ತಮಗೆ ತಾವೆ ಹೇಳಿಕೊಂಡರು: “ನಮಗೆ ತಿಳಿದಿರುವುದು-ತಾಯಿಯೊಬ್ಬಳೆ ಸತ್ಯ, ತಾಯಿ ದಯಾಮಯೀ; ಮತ್ತೇನನ್ನೂ ನಾವರಿಯೆವು, ತಿಳಿಯೆವು, ಅರಿಯುವ ಅವಶ್ಯಕತೆಯೂ ಇಲ್ಲ.”

ತುಸುಹೊತ್ತಿನ ಅನಂತರ ಬ್ರಹ್ಮಚಾರಿಯೊಬ್ಬರು ಬಂದು, ತಾನು ಸಾಧನೆ ಭಜನೆಯಲ್ಲಿ ಮುಂದುವರಿಯಲು ಆಗುತ್ತಿಲ್ಲವೆಂದು ಹೇಳಿ, ತನ್ನ ಮಾನಸಿಕ ಅವಸ್ಥೆ ಮತ್ತು ಅಶಾಂತಿಗಳ ವಿಚಾರವಾಗಿ ತಿಳಿಸಿ, ಮಹಾಪುರುಷಜಿಯ ಆಶೀರ್ವಾದವನ್ನು ಬೇಡಲು, ಅವರು ನಿತಾಂತ ಆವೇಗಭರದಿಂದ ಹೇಳಿದರು-“ತಾಯಿ ನಿನ್ನನ್ನು ಸಂಪೂರ್ಣವಾಗಿ ಆಶೀರ್ವದಿಸಲಿ; ನಿನ್ನ ಮನದ ಎಲ್ಲ ಅಶಾಂತಿಯನ್ನೂ ದೂರಮಾಡಲಿ. ಅಯ್ಯಾ, ಬಿದ್ದಿರು, ಆಕೆಯ ಬಾಗಿಲಬಳಿ; ಆಕೆ ಕ್ರಮೇಣ ಎಲ್ಲವನ್ನೂ ತುಂಗಿಕೊಡುತ್ತಾಳೆ. ಸ್ವಲ್ಪವೂ ಹತಾಶನಾಗಬೇಡ! ಅತ್ಯಂತ ಪ್ರಾಣಭರನಾಗಿ ಆಕೆಯ ನಾಮೋಚ್ಛಾರಣೆಯೊಡನೆ ಹೃತ್ಪೂರ್ವಕವಾಗಿ ಪ್ರಾರ್ಥನೆ ಮಾಡು, ಹೀಗೆ:‘ಶ್ರೀಗುರೂ, ನನ್ನ ಮೇಲೆ ದಯೆತೋರು. ನಾನು ಅತಿ ಅಬೋಧನಾಗಿದ್ದೇನೆ. ನಿನ್ನನ್ನು ಹೇಗೆ ಕರೆಯಬೇಕೆಂಬುದೂ ನನಗೆ ತಿಳಿಯದು. ನನಗೆ ಕೃಪೆ ಮಾಡು. ನಿನ್ನ ಶ್ರೀಪಾದಪದ್ಮಗಳಲ್ಲಿ ನನಗೆ ಪೂರ್ಣ ಭಕ್ತಿ, ಪೂರ್ಣ ವಿಶ್ವಾಸ, ಪೂರ್ಣ ಜ್ಞಾನಗಳನ್ನು ದಯಪಾಲಿಸು, ನಿನ್ನನ್ನುಳಿದು ನನಗೆ ಇನ್ನಾರು ಗತಿ? ದೇವ, ದಯೆತೋರು. ನನ್ನ ಹೃದಯದಲ್ಲಿ ಪ್ರಕಾಶಿತನಾಗು. ‘ನೀನು ನಿನ್ನ ಸಾಧನೆ ಭಜನೆಯ ಕಾರ್ಯಕ್ರಮಗಳಲ್ಲಿ ನಿರತನಾಗಿರು. ಇತರರು ಏನು ಮಾಡುತ್ತಾರೆ ಏನು ಮಾಡುವುದಿಲ್ಲ ಅದನ್ನು ಕಟ್ಟಿಕೊಂಡು ನಿನಗೇನಾಗಬೇಕಾಗಿದೆ. ಯಾರು ಶ್ರಮಿಸುತ್ತಾರೋ ಅವರಿಗೆ ದೊರೆಯುತ್ತದೆ; ಅವರಿಗೆ ಆನಂದಲಾಭ ಇದ್ದೇ ಇದೆ. ಭಗವಂತನ ಚಿಂತನ ಬದುಕಿಗೆ ಬಹುದೊಡ್ಡ ಸಹಾಯವಾಗುತ್ತದೆ. ಧ್ಯಾನ ಜಪ ಮಾಡಿದರೆ, ಭಗವಂತನ ನಾಮೋಚ್ಛಾರಣೆ ಮಾಡಿದರೆ, ಬುದ್ಧಿ ಶುದ್ಧಿಯೂ ಕೈಗೂಡತ್ತದೆ; ಅರಿಷಡ್ವರ್ಗದ ದಮನವೂ ಸಿದ್ಧಿಸುತ್ತದೆ. ಅತ್ಯಂತ ಅನುರಾಗದಿಂದ ಸ್ವಲ್ಪ ಹಾಗೆ ಮಾಡಿನೋಡು. ಮಾಡು, ಮಾಡಯ್ಯಾ, ಅತ್ಯಂತ ಅನುರಾಗಪೂರ್ವಕ ಆತನ ಹೆಸರು ಹಿಡಿದು ಕೂಗು, ಕರೆ. ಆತನ ನಾಮದಲ್ಲಿ ಸರ್ವಶಕ್ತಿಯೂ ಅಡಗಿದೆ.

ಅಲ್ಪ ನಾನು ಎಂದು ಕುಗ್ಗಿ
ಮುದುಡಬೇಡವೋಃ
ಓ ಅಲ್ಪವೆ,
ಅನಂತದಿಂದ ಗುಣಿಸಿಕೊ;
ನೀನ್ ಅನಂತವಾಗುವೆ | – ಮಂತ್ರಾಕ್ಷತೆ

* * *