ಬೇಲೂರು ಮಠ
ಮಂಗಳವಾರ, ಜುಲೈ ೧೫, ೧೯೩೦

ಇವತ್ತು ಬೆಳಿಗ್ಗೆಯಿಂದ ಮಠದಲ್ಲಿ ಅನೇಕ ಸಾಧುಗಳೂ ಮತ್ತು ಭಕ್ತರೂ ನೆರೆಯತೊಡಗಿದ್ದಾರೆ, ಯಾವುದಾದರೂ ಒಂದು ಉತ್ಸವಕ್ಕೆ ಕಿಕ್ಕಿರಿಯುವಂತೆ. ಮಹಾಪುರುಷಜಿಯ ಬಳಿ ದರ್ಶನಾಕಾಂಕ್ಷಿಗಳೂ ದೀಕ್ಷಾರ್ಥಿಗಳು ತುಂಬಿ ಹೋಗಿದ್ದಾರೆ. ಅವರೂ ಆಕ್ಲಾಂತಭಾವದಿಂದ ಉಪದೇಶಾದಿಗಳನ್ನು ನೀಡಿ ಸಕಲರನ್ನೂ ಪರಿತೃಪ್ತರನ್ನಾಗಿಮಾಡುತ್ತಿದ್ದಾರೆ. ಅಪರಾಹ್ನ, ಸುಮಾರು ಮೂರುವರೆ ಗಂಟೆ ಇರಬಹುದು. ಸೇವಕ ಸಾಧು ಒಬ್ಬರು ಮಹಾಪುರುಷಜಿಗೆ ತಿಳಿಸಿದರು: “ಮಹಾರಾಜ್, ಯ-ತಮ್ಮ ದರ್ಶನ ತೆಗೆದುಕೊಳ್ಳಲು ಅಪ್ಪಣೆಯಾಗಬೇಕೆಂದು ಕೇಳುತ್ತಿದ್ದಾರೆ. ತುಂಬ ಕಾತರರಾಗಿದ್ದಾರೆ, ತಮ್ಮ ದರ್ಶನಕ್ಕಾಗಿ, ಮನಸ್ಸಿಗೆ ಮಹಾ ಅಶಾಂತಿಯಂತೆ. ತಮ್ಮ ಅನುಮತಿ ಬೇಡಿ, ಅಪ್ಪಣೆಗಾಗಿ ಫೋನ್ ಮಾಡಿದ್ದಾರೆ.”

ಮಹಾಪುರುಷಜಿ: “ಅವರು ಆ ದಿನವೂ ಬಂದಿದ್ದರು; ಅನೇಕವಾಗಿ ಮಾತುಕತೆ ನಡೆಯಿತು. ಈ ನಡುವೆ ಮತ್ತೇನೊ ಹೊಸ ಅಶಾಂತಿ ಉಂಟಾಗಿದೆಯೆಂತೆ ಮನಸ್ಸಿಗೆ? ಬರಿಯ ಬುಟ್ಟಿಬುಟ್ಟಿಗಟ್ಲೆ ಉಪದೇಶ ಪಡೆದ ಮಾತ್ರದಿಂದ ಉಂಟಾಗುತ್ತದೆ? ಅದನ್ನೆಲ್ಲ ಕುರಿತು ಅನುಷ್ಠಾನ ಮಾಡಬೇಕು. ಉಪದೇಶದಂತೆ ಕೆಲಸ ಮಾಡಬೇಕು. ಹಾಗೆ ಮಾಡದಿದ್ದರೆ, ಅಯ್ಯಾ, ಏನೂ ಆಗುವುದಿಲ್ಲ. ಸುಮ್ಮನೆ ಹೇಳುತ್ತಾರೆ: ‘ಮನಸ್ಸಿಗೆ ಭಾರಿ ಅಶಾಂತಿ!’ ಆದರೂ, ಹೇಳಿದಂತೆ ಮಾತ್ರ ಮಾಡುವುದಿಲ್ಲ. ಹೀಗೆ ಮಾಡಿದರೆ ಅಶಾಂತಿ ಹೋಗುವುದು ಹೇಗೆ? ಶಾಸ್ತ್ರಗಳಲ್ಲಿಯೂ ಹೊರೆ ಹೊರೆ ಉಪದೇಶ ಇವೆ. ಸುಮ್ಮನೆ ಶಾಸ್ತ್ರ ಓದಿದ ಮಾತ್ರಕ್ಕೆ ಏನು ಬರುತ್ತದೆ? ಶಾಸ್ತ್ರದ ಉಪದೇಶ ತನ್ನ ಜೀವನದಲ್ಲಿ ಪ್ರತಿಫಲಿತವಾಗುವಂತೆ ಮಾಡಬೇಕು. ಅದಕ್ಕೇ ಠಾಕೂರ್‌ ಹೇಳುತ್ತಿದ್ದರು: ‘ಪಂಚಾಗದಲ್ಲಿ ಇಪ್ಪತ್ತು ಕೊಳಗ ಮಳೆ ಆಗುತ್ತದೆ ಎಂದು ಹೇಳಿರುತ್ತದೆ. ಆದರೆ ಪಂಚಾಂಗ ಹಿಂಡಿದರೆ ಒಂದು ಹನಿಯಾದರೂ ನೀರು ಬರುತ್ತದೆಯೆ?’ ಹಾಗೆಯೇ, ಸಾಧು ಸಂಗವನ್ನಾದರೂ ಮಾಡು, ಶಾಸ್ತ್ರವನ್ನಾದರೂ ಓದು; ಸಾಧನೆ ಮಾಡದಿದ್ದರೆ ಏನೂ ದೊರೆಯಲಾರದು. ಅಲ್ಲದೆ ಅಷ್ಟು ಹತ್ತಿರ ಕುಳಿತು ಮಾತನಾಡುವುದೂ ನನಗೆ ಹಿಡಿಸುವುದಿಲ್ಲ; ಅವರ ನಿಃಶ್ವಾಸ ಸಹಿಸಲಾಗುವುದಿಲ್ಲ ನನ್ನಿಂದ. ಎಷ್ಟೋ ಸಾರಿ ಇನ್ನೇನು ಮಾಡುವುದು ಎಂದು ಕಷ್ಟಪಟ್ಟು ಕುಳಿತುಕೊಳ್ಳುತ್ತೇನೆ. ಅದಕ್ಕಾಗಿಯೆ ಬಹಳ ಅಸಹ್ಯವಾದಾಗ ನಾನು ಒಂದೊಂದು ಸಮಯದಲ್ಲಿ ಎದ್ದು ನಿಂತುಕೊಂಡುಬಿಡುತ್ತೇನೆ. ಅದೂ ಅಲ್ಲದೆ ಕೊನೆಯಿಲ್ಲದೆ ಸುಮ್ಮನೆ ಮಾತನಾಡುತ್ತಾ ಹೋಗುವುದಕ್ಕೆ ಆಗುತ್ತೇನಯ್ಯಾ? ನನ್ನ ಮನಸ್ಸಿನ ಅವಸ್ಥೆಯೂ ಆ ತರಹದ್ದಲ್ಲ. ಏನೋ ಮಾತಾಡುತ್ತೇನೆ, ಮಾತಾಡಬೇಕಲ್ಲಾ ಎಂದು. ಅವರಿಗೆ ಗೊತ್ತಾಗುವುದಿಲ್ಲ. ಇದರಿಂದ ನನಗೆ ಎಷ್ಟು ಮಾನಸಿಕ ಕ್ರಾಂತಿಆಗುತ್ತದೆ ಎಂದು. ಮಾತಿಲ್ಲದೆ ಮೌನವಾಗಿ ಕುಳಿತುಕೊಳ್ಳುವುದೆ ನನಗೆ ಸುಖ, ಆನಂದ, ಹಾಗಿದ್ದರೂ ನಾನು ಯಾರಿಗಾದರೂ ಬರುವುದು ಬೇಡ ಎನ್ನುತ್ತೇನೆಯೆ? ಎಂದೂ ಇಲ್ಲ. ನಾನು ಬಲ್ಲೆ, ಅವರೆಲ್ಲ ಹೃದಯವಂತರು, ಭಕ್ತರು ಎಂದು. ಏನೋ ಸ್ವಲ್ಪ ಭಾವಾತಿರೇಕವಿದೆ ಅಷ್ಟೆ. ಅವರ ಮನಸ್ಸಿನಲ್ಲಿ ಇದೆಲ್ಲ ಬಹಳ ಸುಲಭ ಎಂದು ಭಾವಿಸಿದ್ದಾರೆ. ಅಷ್ಟೇನು ಸುಲಭವೆ? ಅದಕ್ಕಾಗಿ ಎಷ್ಟು ದೀರ್ಘಕಾಲ ಶ್ರಮ ಪಡಬೇಕಾಗುತ್ತದೆ? ಬರಿಯ ಬಾಯಿಮಾತಿನಿಂದಲೆ ಆಗುತ್ತದೆಯೆ? ಅದಕ್ಕಾಗಿ ಎಷ್ಟು ಸಾಧನೆ ಭಜನೆ ಮಾಡಬೇಕು; ಎಷ್ಟು ಸಂಯಮ ಬೇಕು! ತಮ್ಮ ಭಾವದಲ್ಲಿ ದೃಢತೆಯಿಲ್ಲದೆ ಹೋದರೆ, ಭಾವಪಕ್ವತೆ ಇಲ್ಲದಿದ್ದರೆ, ಅಲ್ಲಿಗಿಲ್ಲಿಗೆ ಸುಮ್ಮನೆ ಓಡಾಡುತ್ತಾರೆ. ಅಸಲು ವಿಷಯ ಏನು ಗೊತ್ತೆ? ಅವರಿಗೆ ನಿಜವಾದ ಅಭೀಪ್ಸೆಯಾಗಲಿ ಭಗವತ್‌ಪ್ರೇಮವಾಗಲಿ ಇಲ್ಲ. ನಿಜವಾದ ಬಾಯಾರಿಕೆ ಇದ್ದರೆ ಯಾರೆ ಆಗಲಿ ಜೀವನವೆಲ್ಲ ಒಳ್ಳೆಯ ನೀರನ್ನೆ ಹುಡುಕುತ್ತಾ ಅಲೆಯುತ್ತಾರೆಯೆ? ಅವರು ಠಾಕೂರರಲ್ಲಿಗೆ ಬಂದದ್ದಾಗಿದೆ; ಅವರ ಆಶ್ರಯ ಪಡೆದದ್ದಾಗಿದೆ. ಅಷ್ಟು ಸಾಲದಂತೆ; ಇನ್ನೂ ಏನೋ ಬೇಕಂತೆ! ಅನುರಾಗವೂ ಇಲ್ಲ; ನಿಷ್ಠೆಯೂ ಇಲ್ಲ. ಠಾಕೂರರನ್ನೆ ಬಲವಾಗಿ ಹಿಡಿದು ತನ್ನ ದಾರಿಯಲ್ಲಿಯೆ ತಾನು ಮುಂದುವರಿದರೆ ಕಾಲಕ್ರಮೇಣ ಎಲ್ಲವೂ ದೊರೆಯುತ್ತದೆ. ಅದಕ್ಕಾಗಿಯೆ ಠಾಕೂರರು ಅಡಿಗಡಿಗೆ ಈ ಹಾಡು ಹಾಡುತ್ತಿದ್ದುದ:

“ನಿನ್ನಲ್ಲಿಯೆ ನೀನಿರು, ಓ ಮನವೆ
ಏಕಿಂತಲೆಯುವೆ ಅಲ್ಲಲ್ಲಿ?
ಕಾಣೊಳಗೆಯೆ ಎದೆಯಂತಃಪುರದಲ್ಲಿ
ಸಕಲಾಶೆಯ ಸುರತರುವಿಹುದಲ್ಲಿ.
ಅವನಿಹನಲ್ಲಿಯೆ ಆ ದಿವ್ಯನು ಸ್ಪರ್ಶಮಣಿ
ನಿನ್ನಭಿಲಾಷೆಯ ಸರ್ವಾಪೇಕ್ಷೆಯ ರತ್ನಖನಿ.
ನೀನರಿಯೈ, ಓ ಮನವೆ,

ಚಿಂತಾಮಣಿಯಾತಕ ಮಂದಿರದಾ ಬಾಗಿಲುಮೂಲೆಯಲಿ
ಸಕಲೇಷ್ಟಗಳಷ್ಟೈಶ್ವರ್ಯವೆ ಸೂಸಿದೆ ಬಿದ್ದಿದೆ ಕೆದರಿದೆ ಚೆಲ್ಲಿ |”

ಅಂತಹ ದೃಢಶ್ರದ್ದೆಗೆ ಅಂಟಿಕೊಂಡಿರಬೇಕು. ಆತ್ಮಾರಾಮನಾಗಿರುವ ಅವನು ಎಲ್ಲರೊಳಗೂ ಇದ್ದಾನೆ. ಒಳಗೆ ಕುಳಿತಿರುವ ಆತನೆ ಎಲ್ಲವನ್ನೂ ತಿಳಿಸಿಕೊಡುತ್ತಾನೆ. ವ್ಯಾಕುಲತೆಯಿಂದ ಬೇಡಿದರೆ ಆತ ಇಷ್ಟಾರ್ಥಗಳನ್ನೆಲ್ಲ ಪೂರ್ಣಮಾಡಿ ಕೊಡುತ್ತಾನೆ. ಎಲ್ಲರ ಅಭೀಷ್ಟಗಳನ್ನೂ ದಯಪಾಲಿಸುವ ಮಾಂತ್ರಿಕನವನು. ಯಾರು ಏನನ್ನು ಬೇಡುತ್ತಾರೆ-ಧರ್ಮ, ಅರ್ಥ, ಕಾಮ, ಮೋಕ್ಷ ಈ ಚತುರ್ವರ್ಗಫಲಗಳನ್ನೂ ಕೊಡುತ್ತಾನೆ. ಸದ್ಗುರು ವಿರ್ದಿಷ್ಟವಾದ ಪಥದಲ್ಲಿ ಧೀರಭಾವದಿಂದ ಮುಂದುವರಿಯಬೇಕು. ಅಯ್ಯಾ, ಇದು ಬಹಳ ಕಠಿನ ಪಥ. ನಿಷ್ಠೆಬೇಕು, ಶ್ರದ್ಧೆ ಬೇಕು, ಮತ್ತೆ ಅದಮ್ಯ ಅಧ್ಯವಸಾಯವೂ ಬೇಕು. ಹೇಗೆ ಒಂದು ಜಾಗದಲ್ಲಿ ಅಗೆದು, ಜಲ ಬರಲಿಲ್ಲವೆಂದು ಇನ್ನೊಂದು ಜಾಗದಲ್ಲಿ ಅಗೆಯತೊಡಗಿ, ಅಲ್ಲಿಯೂ ಸ್ವಲ್ಪ ದೂರ ಅಗೆದು ಗಟ್ಟಿ ಕಲ್ಲುನೆಲ ಸಿಕ್ಕೊಡನೆ ಅಲ್ಲಿಯೂ ನೀರು ಬರಲಿಲ್ಲವೆಂದು ಮತ್ತೂ ಒಂದು ಕಡೆ ಅಗೆಯತೊಡಗಿದರೆ ಜೀವನವೆಲ್ಲ ನೀರು ದೊರೆಯದೆ ವ್ಯರ್ಥವಾಗುತ್ತದೆಯೊ ಹಾಗೆಯೆ ಚಂಚಲಚಿತ್ತದಿಂದ ಅಲೆಯ ತೊಡಗಿದರೆ ಏನುತಾನೆ ದೊರೆಯುತ್ತದೆ? ಎಲ್ಲಿಯೂ ನೀರು ಸಿಕ್ಕುವುದಿಲ್ಲ. ಅದರಂತೆ ಸಾಧಕನಾದವನು ಒಂದು ಸಾಧನ ಮಾರ್ಗದಲ್ಲಿ ಪಟ್ಟು ಹಿಡಿದು ನಡೆಯದಿದ್ದರೆ ಎಂದಿಗೂ ಭಗವಂತನ ಸಾಕ್ಷಾತ್ಕಾರ ಸಾಧ್ಯವಾಗುವುದಿಲ್ಲ. ಆತನ ವಿಚಾರ ತುಂಬ ಕೇಳಿದ್ದೇನೆ; ಅದಕ್ಕಾಗಿ ನನಗೆ ವ್ಯಥೆಯಾಗುತ್ತದೆ. ಎಂತಹ ಅವ್ಯವಸ್ಥಿತ ಚಿತ್ತ! ಆಳವಿಲ್ಲ; ಎಲ್ಲದರಲ್ಲಿಯೂ ತೇಲು ತೇಲು. ತನ್ನ ಭಾವದಲ್ಲಿಯೆ ದೃಢತ್ವ ಇಲ್ಲದಿದ್ದರೆ ಏನು ಪ್ರಯೋಜನ? ಸಿಕ್ಕಿಸಿಕ್ಕಿದ ಕಡೆಗೆಲ್ಲ ಹೋಗುವುದು, ಸಿಕ್ಕಿಸಿಕ್ಕಿದವರೊಡನೆ ಸೇರುವುದು. ಹಾಗೆ ಮಾಡಿದರೆ ತನ್ನ ನಿಜವಾದ ಭಾವಕ್ಕೆ ನಷ್ಟ ಒದಗುತ್ತದೆ. ‘ಆಗಲಿ, ಸ್ವಾಮಿ; ಆಗಲಿ ಸ್ವಾಮಿ, ಎನ್ನಬೇಕು; ತನ್ನ ಧಾಮದಲ್ಲಿ ಬಲವಾಗಿ ಕೂರಬೇಕು.’ (ಮಹಾಪುರುಷಜಿ ಅದನ್ನು ಅನೇಕ ಸಾರಿ ಪುನರುಚ್ಚರಿಸಿದರು.) “‘ತನ್ನ ಧಾಮ’ ಎಂದರೆ ಶ್ರೀ ಗುರುಮಹಾರಾಜ್ ಹೇಳುತ್ತಿದ್ದರಲ್ಲ ಅದು,-‘ತನ್ನ ಭಾವ!’ ತನ್ನ ಭಾವದಲ್ಲಿ ನೆಲೆಸಬೇಕು. ತನ್ನ ಭಾವವನ್ನು ಸುದೃಢಗೊಳಿಸಬೇಕು, ಆದರೂ ಎಲ್ಲರೊಡನೆ ಸಮನ್ವಯದಿಂದಿರಬೇಕು.” ಹಾಗೆಂದವರೆ, ತಾವು ಯಾವ ಭಕ್ತನ ವಿಚಾರವಾಗಿ ಮಾಡತನಾಡುತ್ತಿದ್ದರೊ ಆ ಭಕ್ತನನ್ನೆ ಸಂಬೋಧಿಸುವಂತೆ ಹೇಳುತೊಡಗಿದರು: “ಅಲ್ಲವಯ್ಯಾ ಶ್ರೀಗುರುಮಹಾರಾಜರ ನಾಮದಲ್ಲಿಯೆ ನಿನಗೆ ಪರಮೋತ್ತಮ ಆನಂದವಿರುತ್ತದೆ; ಅವರ ಹೆಸರಿನಲ್ಲಿ ಸರ್ವವೂ ಸಾಧ್ಯವಾಗುತ್ತದೆ-ಭಾವ ಸಮಾಧಿ ಎಲ್ಲ. ಆದರೆ ಎಲ್ಲವೂ ಸಮಯ ಸಾಪೇಕ್ಷ. ಜೊತೆಗೆ ನೀನು ಗೃಹಸ್ಥ ಮನುಷ್ಯ-ನಿನಗೆ ಕರ್ತವ್ಯ ಕರ್ಮಗಳು ಬೇರೆ ಇವೆ. ಹ್ಞಾ, ಆಗೊಮ್ಮೆ ಈಗೊಮ್ಮೆ ನೀನು ಏಕಾಂತ ವಾಸಕ್ಕೆ ಹೋಗುವುದೂ ನನಗೆ ಅರ್ಥವಾಗುತ್ತದೆ. ನಿರ್ಜನ ಪ್ರದೇಶದಲ್ಲಿ ಸ್ವಲ್ಪ ಕಾಲ ಇರುವುದೂ ಒಳ್ಳೆಯದೆ; ಹಾಗೆಂದು ಠಾಕೂರರು ಹೇಳುತ್ತಿದ್ದರು. ಅಂದ ಮಾತ್ರಕ್ಕೆ ಹಾಗೆ ಏಕಾಂತವಾಸ ಸಾಧ್ಯವಾಗದಿದ್ದರೆ ಯಾವ ವಿಧವಾದ ಆಧ್ಯಾತ್ಮಿಕ ಉನ್ನತಿಯೂ ಆಗುವುದೇ ಇಲ್ಲ ಎಂದು ಅರ್ಥವೇ? ಯಾರಾದರೂ ಒಬ್ಬರ ಮಾತನ್ನು ಕಾಯಮನೋವಾಕ್ಯಗಳಿಂದ ಪಾಲನೆ ಮಾಡಬೇಕು. ಅದಕ್ಕಾಗಿಯೆ ಶಾಸ್ತ್ರಗಳಲ್ಲಿ ಗುರುಮುಖೇನ ಉಪದೇಶ ಎಂದು ಹೇಳಿದ್ದಾರೆ. ಸದ್ಗುರು ದಾರಿ ತೋರಿಸಿಕೊಡುತ್ತಾನೆ; ಸರಿಯಾದ ರಸ್ತೆಯಲ್ಲಿ ನಡೆಸುತ್ತಾನೆ.”

ಮತ್ತೆ ಮುಂದುವರಿದರು: “ಅಧ್ಯಾತ್ಮ ಅವರಿಗೇನು ಗೊತ್ತು? ಇಂಥಾ ಅನೇಕ ಭಾವಸಮಾಧಿಗಳನ್ನು ನಾವು ಕಂಡಿದ್ದೇವೆ? ಅವೆಲ್ಲ ಠಾಕೂರರ ಭಾವಗಳಲ್ಲ. ಅವೆಲ್ಲ ನಾಲ್ಕು ಜನರ ಕಣ್ಣಿಗೆ ಬೀಳುವ ಪ್ರಯತ್ನದ ಕುಹಕೋಪಾಯಗಳಷ್ಟೆ. ಅಂಥವುಗಳಿಂದ ತುಂಬ ಅನಿಷ್ಟ ಉಂಟಾಗುತ್ತೆ. ಠಾಕೂರರು ಹೇಳುತ್ತಿದ್ದರು: ‘ಧ್ಯಾನ ಮಾಡಿದರೆ ಮನದಲ್ಲಿ ಮಾಡು, ಕೋಣೆಯೊಳಗೆ, ಇಲ್ಲ ಕಾಡಿನಲ್ಲಿ. ಯಾರು ಕೀಳುಮಟ್ಟದ ಅಧಿಕಾರಿಗಳೊ ಅವರೆ ತಮ್ಮ ಆಧ್ಯಾತ್ಮಿಕತೆಯನ್ನು ನಾಲ್ಕು ಜನರ ಮುಂದೆ ಪ್ರದರ್ಶಿಸಲು ಕಾತರರಾಗಿರುತ್ತಾರೆ. ಜನರ ಕಣ್ಣಿಗೆ ಬೀಳಬೇಕು, ಮೆರೆಯಬೇಕು ಎಂಬುದೆ ಅವರ ಆಶೆ. ಈ ತರಹದ ಬಾಹ್ಯಕವಾದ ಅಭಿವ್ಯಕ್ತಿ ಯಾತಕ್ಕೆ? ಯಾರಿಗೆ? ಏನು ಪ್ರಯೋಜನ? ಅದರಿಂದ ಏನು ಗೊತ್ತಾಗುತ್ತದೆ ಅಂದರೆ ಅಂತಹ ಮಂದಿಗೆ ತಮ್ಮ ಭಾವದಲ್ಲಿಯೆ ತಮಗೆ ದೃಢತೆಯಿಲ್ಲ ಎಂದು. ಸುಮ್ಮನೆ ಗಡಿಬಿಡಿ ಮಾಡಿದರೆ ಏನಾಗುತ್ತದೆ? ಸಾಧನೆ ಭಜನೆಯಲ್ಲಿ ಮುಳುಗಿಬಿಡಬೇಕು; ತಮ್ಮ ಹೃದಯದಲ್ಲಿಯೆ ತಮ್ಮ ಭಾವವನ್ನು ಬಲಿದು ಭದ್ರಪಡಿಸಬೇಕು; ಇನ್ನೊಬ್ಬರ ಭಾವ ಭಕ್ತಿಯನ್ನು ಕಂಡು ಕೆಲವರಿಗೆ ತಾತ್ಕಾಲಿಕವಾದ ಆಧ್ಯಾತ್ಮಿಕ ಉತ್ಸಾಹ ಉಕ್ಕಬಹುದು; ಆದರೆ ಅಂಥವರೆಲ್ಲ ಎಷ್ಟು ಕಷ್ಟಪಟ್ಟಿದ್ದಾರೆ; ಎಷ್ಟು ದೃಢಭಾವದಿಂದ ಸಾಧನೆ ಭಜನೆ ಮಾಡಿ ಭಗವಂತನ ಕೃಪತೆಗೆ ಪಾತ್ರರಾಗಿದ್ದಾರೆ ಎಂಬುದನ್ನು ಮರೆಯಬಾರದು. ಆಂತರಿಕವಾದ ಕರೆಗೆ ಆತನ ಕೃಪೆ ಓಗೊಟ್ಟೆಕೊಡುತ್ತದೆ. ಆತನ ರಾಜದಲ್ಲಿ ಅವಿಚಾರಕ್ಕೆ ಎಡೆಯಿಲ್ಲ. ಆತನು ಸಮದರ್ಶಿ. ಯಾರಿಗೆ ಬೇಕೊ ಅವರಿಗೆ ದೊರೆಯುತ್ತಾನೆ. ಭಗವಂತನ ದಯೆ ಸಕಲರ ಮೇಲೆಯೂ ಇರುತ್ತದೆ. ಅವನೂ ಕೂಡ ದಯೆ ತೋರುವುದಕ್ಕಾಗಿ ಕೈ ನೀಡಿಕೊಂಡೆ ಇರುತ್ತಾನೆ. ವ್ಯಾಕುಲತೆಯಿಂದ ಕರೆದರೆ ನಿನ್ನ ಮುಂದೆಯೇ ಇರುತ್ತಾನೆ. ಬೇಕಾಗಿಯೂ ಇಲ್ಲ. ಏನನ್ನು ಮಾಡುವುದೂ ಇಲ್ಲ, ಬರಿಯ ಖಾಲಿ ಕೂಗಾಟ, ಹಾಹಾಕಾರ, ಹತಾಶೆ: ‘ನನಗೇನೂ ದೊರೆಯಿಲಿಲ್ಲ. ನನಗೇನೂ ದೊರೆಯಿಲಿಲ್ಲ!’ ಎಂದು ಬಾಯಿ ಬೊಬ್ಬೆ. ಏನು ಒಂದೇ ದಿನಕ್ಕೆ ಎಲ್ಲ ಆಗಿಬಿಡುತ್ತದೆಯೆ? Introspection ಆತ್ಮಾವಲೋಕನ ಬೇಕು; ಮತ್ತೂ ಒಂದಿಷ್ಟು regular practice (ನಿಯಮಿತ ಅಭ್ಯಾಸ) ಬೇಕು. ಸಾಧನೆ ಭಜನೆ ಮಾಡುವವರಿಗೆ ಆಶಂಕೆಯೇಕೆ? ಅನುಮಾನವೇಕೆ? ಶಾಂತಿ ಸ್ವತಃ ಸಿದ್ಧವಾಗಿ ಬಂದೆ ಬರುತ್ತದೆ. ಶಾಂತಿ ಬರುತ್ತದೆಯೊ ಇಲ್ಲವೊ, ಒಂದು ಸ್ವಲ್ಪ ಮಾಡಿ ನೋಡಲಿ! ಆತನಿಗೆ ಹೇಳು, ಈಗ ನನ್ನನ್ನು ಕಾಣಲು ಬರುವ ಅವಶ್ಯಕತೆಯಿಲ್ಲ ಎಂದು. ಏನೇನು ಹೇಳಬೇಕ ಅದನ್ನೆಲ್ಲ ಅವೊತ್ತೆ ನಾನು ಹೇಳಿದ್ದೇನೆ. ಇನ್ನು ಶಾಂತಿ ಬೇಕಾದರೆ ಕೆಲಸ ಮಾಡಲಿ.

ಸೇವಕ ಸಾಧು ಇದನ್ನೆಲ್ಲ ಆಲಿಸಿ ತನ್ನ ಮನದಲ್ಲಿಯೆ ಹೇಳಿಕೊಂಡನು: “ಆಹ! ಒಬ್ಬೊಬ್ಬ ಪ್ರತ್ಯೇಕ ಭಕ್ತನ ವಿಚಾರದಲ್ಲಿಯೂ ಇವರಿಗೆಷ್ಟು ಕಾತರಭಾವವಿದೆ! ಎಂತಹ ಗಂಭೀರ ಹೃದಯದಲ್ಲಿ ಅವರ ವಿಚಾರವಾಗಿ ಚಿಂತಿಸುತ್ತಾರೆ!”

ನಿನ್ನ ನೆನೆವುದೆ ತಪಂ
ನಿನ್ನ ಕರೆವುದೆ ಜಪಂ
ನಿನ್ನ ಕೃಪೆಯವತರಣಕೆಮ್ಮ ಸಾಧನೆ ಬರಿ ನೆಪಂ | – ಮಂತ್ರಾಕ್ಷತೆ

* * *