ಬೇಲೂರು ಮಠ
ಶನಿವಾರ, ಡಿಸೆಂಬರ್ ೨೧, ೧೯೩೦

ನಾಳೆ ಶ್ರೀ ಶ್ರೀಮಾತೆಯ ಶುಭ ಜನ್ಮತಿಥಿ. ಮಠದ ಕೆಲವು ಜನ ತ್ಯಾಗೀ ಯುವಕರಿಗೆ ಬ್ರಹ್ಮಚರ್ಯ ದೀಕ್ಷೆಕೊಡುವ ಸಮಾರಂಭ ನಡೆಯಲಿದೆ. ಆ ಸಂಬಂಧದಲ್ಲಿ ಮಾತನಾಡುತ್ತಾ ಮಹಾಪುರುಷ ಮಹಾರಾಜ್ ಹೇಳಿದರು: “ಸ್ವಾಧ್ಯಾಯ ಬಹಳ ಒಳ್ಳೆಯದು, ಶಾಸ್ತ್ರಾದಿ ಅಧ್ಯಯನವೂ ಸಾಧನೆಯ ಒಂದು ಅಂಗವೆ. ಮೊದಲನೆಯದಾಗಿ ಬ್ರಹ್ಮಚಾರಿಗಳು ಗೀತೆಯನ್ನು ಚೆನ್ನಾಗಿ ಅಧ್ಯಯನ ಮಾಡಬೇಕು. ಗೀತೆಯಂತಹ ಮತ್ತೊಂದು ಗ್ರಂಥ ಯಾವುದಿದೆ? ಅನುಪಮ, ಅದ್ಭುತ! ಅಲ್ಲಿ ಸರ್ವಭಾವಗಳೂ ಪ್ರತಿಪಾದಿತವಾಗಿವೆ, -ಜ್ಞಾನ, ಭಕ್ತಿ, ಕರ್ಮ, ಯೋಗ ಎಲ್ಲ. ನನಗೆ ಅದರಲ್ಲೆಲ್ಲ ಹೆಚ್ಚಾಗಿ ಮನಸ್ಸಿಗೆ ಹಿಡಿಸಿರುವುದೆಂದರೆ, ಸ್ವಯಂ ಭಗವಾನ್ ತನ್ನ ಭಕ್ತನಿಗೆ ಆಶ್ವಾಸ ಕೊಡುತ್ತಾ ಹೇಳುತ್ತಾನೆ: ‘ಕೌಂತೇಯ ಪ್ರತಿ ಜಾನೀಹಿ ನ ಮೇ ಭಕ್ತಃ ಪ್ರಣಶ್ಯತಿ ‘-‘ಕೇಳು, ಕುಂತಿಯ ಪುತ್ರನೇ, ನನ್ನ ಭಕ್ತನಾದವನು ಎಂದಿಗೂ ಗುರಿಗೆಟ್ಟು ನಾಶ ಹೊಂದುವುದಿಲ್ಲ.’ ಆಹಾ! ಎಂಥ ಆಶ್ವಾಸನೆಯ ಮಾತು! ಆತನು ಮಹಾ ಆಶ್ರಿತವತ್ಸವಲ. ಯಾರು ಮನೋವಾಕ್ಕಾಯದಿಂದಲೂ ಆತನ ಚರಣತಲದಲ್ಲಿ ಆಶ್ರಯ ಪಡೆಯುತ್ತಾರೊ ಅವರಿಗೆ ಇನ್ನು ಯಾವ ಶಂಕೆಯೂ ಇಲ್ಲ; ಸರ್ವತೋ ಭಾವದಿಂದಲೂ ಭಕ್ತನ ರಕ್ಷೆಯನ್ನು ಆತನೆ ವಹಿಸಿಕೊಳ್ಳುತ್ತಾನೆ. ಆಹ! ಎಂತಹ ಕೃಪೆ! ಆದರೆ ಏನು ಮಹಾಮಾಯೆಯ ಮಾಯೆಯೋ, ಮನುಷ್ಯ ಆತನ ಈ ಅಸದೃಶ ಕೃಪೆಯನ್ನು ಅರಿಯಲಾರ. ಎಂತಹ ದೊಡ್ಡ ವಿದ್ವಾನ್ ಆಗಲಿ, ಎಷ್ಟೇ ಮಹಾ ಬುದ್ಧಿಮಾನ್ ಆಗಲಿ, ಆತನ ಕೃಪಾಕಟಾಕ್ಷವಿಲ್ಲದೆ ಈ ಮಾಯೆಯ ಕೈಯಿಂದ ರಕ್ಷೆ ಪಡೆಯುವುದು ಅಸಂಭವ. ಆತನೆ ದಯೆತೋರಿ ಮಾಯೆಯ ಆವರಣವನ್ನು ಒಂದಿನಿತು ಸರಿಸಿ ಕೊಟ್ಟಾಗಲೆ ಜೀವ ಆತನ ಕೃಪೆಯನ್ನು ಅರಿಯಲು ಸಮರ್ಥವಾಗುತ್ತದೆ.”

ನಾಯಮಾತ್ಮಾ ಪ್ರವಚನೇನ ಲಭ್ಯೋ
ನ ಮೇಧಯಾ ನ ಬಹುನಾ ಶ್ರುತೇನ |
ಯಮೇವೈಷ ವೃಣುತೇ ತೇನ ಲಭ್ಯಃ
ತಸ್ಯೈಷ ಆತ್ಮಾ ವಿವೃಣುತೇ ತನೂಂ ಸ್ವಾಮ್ ||*

ಅಲೆಗ್ಸಾಂಡರ್, ನೆಪೋಲಿಯನ್, ಕೈಸರ್ ಅವರೆಲ್ಲ ಎಂಥ ದೊಡ್ಡ ವೀರರೆಂದೆನಿಸಿಕೊಂಡಿದ್ದರು. ಜಗತ್ತನ್ನೆ ಪುಡಿಮಾಡಿಬಿಡುವಂತಹ ಶಕ್ತಿ ಅವರಿಗಿದ್ದಂತೆ ತೋರುತ್ತಿತ್ತು. ಲೌಕಿಕ ದೃಷ್ಟಿಯಿಂದೇನೊ ಅವರು ವೀರರೆ ನಿಜ; ಶಕ್ತಿಮಾನ್ ಪುರುಷರೆ. ಆದರೆ ಯಾವ ಈ ಸೃಷ್ಟಿಪ್ರವಾಹ ಅನಾದಿಕಾಲದಿಂದಲೂ ಹರಿಯುತ್ತಿದೆಯೊ ಅದರಲ್ಲಿ ಅವರೆಲ್ಲರೂ ಒಂದು ಸಾಮಾನ್ಯ ಬುದ್ಬುದಮಾತ್ರು. ಅವರ ಆ ಶಕ್ತಿ ಎಷ್ಟು ದೊಡ್ಡ ಪ್ರಮಾಣದ್ದೆ ಆಗಿರಲಿ ಈ ಮಹಾಮಾಯೆಯ ಬಲೆಯನ್ನು ಕತ್ತರಿಸಲು ಅವರಿಂದಲಾಗಲಿಲ್ಲ. ಅದು ಆಗದವರೆಗೆ ಉಳಿದುದೆಲ್ಲವೂ ವೃಥಾ, ಮಾನವ ಜನ್ಮವೆ ವ್ಯರ್ಥ. ಅದಕ್ಕೆ ಬೇಕು ಭಗವತ್‌ಕೃಪೆ. ಆ ಭಗವತ್ ಕೃಪೆಯನ್ನು ಪಡೆಯುವ ಗುಹ್ಯ ಉಪಾಯವನ್ನೂ ಸ್ವಯಂ ಭಗವಂತನೆ ಹೇಳಿ ಕೊಟ್ಟಿದ್ದಾನೆ:

ಮನ್ಮನಾ ಭವ ಮದ್ಭಕ್ತೋ ಮದ್ಯಾಜೀ ಮಾಂ ನಮಸ್ಕುರು |
ಮಾಮೇವೈಷ್ಯಸಿ ಯುಕ್ತ್ವೈ ವಮಾತ್ಮಾನಂ ಮತ್ಪರಾಯಣಃ ||
ಸರ್ವಧರ್ಮಾನ್ ಪರಿತ್ಯಜ್ಯ ಮಾಮೇಕಂ ಶರಣಂ ವ್ರಜ |
ಅಹಂ ತ್ವಾ ಸರ್ವಪಾಪೇಭ್ಯೋ ಮೋಕ್ಷಯಿಷ್ಯಾಮಿ ಮಾ ಶುಚಃ ||

‘ಮದ್ಗತ ಚಿತ್ತನಾಗು; ನನ್ನ ಭಕ್ತನೂ ಪೂಜನಶೀಲನೂ ಆಗು; ನನ್ನನ್ನೆ ನಮಸ್ಕರಿಸು; ಹಾಗೆ ಮಾಡಿದರೆ ನನ್ನ ಪ್ರಸಾದದಿಂದ ಲಬ್ದವಾದ ಜ್ಞಾನದ ಮುಖಾಂತರ ನನ್ನಲ್ಲಿಯೆ ಒಂದಾಗುವೆ. ಎಲ್ಲ ಧರ್ಮಾಧರ್ಮಗಳನ್ನು ಪರಿತ್ಯಜಿಸಿ ಏಕಮಾತ್ರ ನನ್ನನ್ನೆ ಶರಣುಹೋಗು. ನಾನುನಿನ್ನನ್ನು ಎಲ್ಲ ಪಾಪಗಳಿಂದಲೂ ಮುಕ್ತನನ್ನಾಗಿ ಮಾಡುತ್ತೇನೆ, ಶೋಕಿಸಬೇಡ.’

ಭಕ್ತನೊಬ್ಬನು ದೀಕ್ಷೆಗಾಗಿ ಪ್ರಾರ್ಥಿಸಲು ಅವರು ಹೇಳಿದರು: “ನನ್ನ ದೀಕ್ಷಾವಿಧಾನದಲ್ಲಿ ಮುಚ್ಚುಮರೆ ರಹಸ್ಯ ಏನೂ ಇಲ್ಲ. ನಾನು ತಿಳಿದಿರುವುದೆಂದರೆ, ಯುಗಾವತಾರ ಭಗವಾನ್ ಶ್ರೀರಾಮಕೃಷ್ಣರ ನಾಮಗ್ರಹಣದಿಂದಲೆ ಮುಕ್ತಿ. ಯಾರು ಅವರಿಗೆ ಶಣಾಗತರಾಗುತ್ತಾರೊ ಅವರ ಉದ್ಧಾರ ನಿಶ್ಚಯ. ಇದೇ ಯುಗಧರ್ಮ. ಠಾಕೂರರು ಹೇಳುತ್ತಿದ್ದಂತೆ, ಬಾದಷಾಹಿ ಆಳ್ವಿಕೆಯ ನಾಣ್ಯ ಈ ಯುಗದಲ್ಲಿ ಚಲಾವಣೆಯಾಗುವುದಿಲ್ಲ. ಶ್ರೀರಾಮಕೃಷ್ಣರ ನಾಮವೇ ಈ ಯುಗದ ಮಂತ್ರ. ದೀಕ್ಷೆ ಎಂದರೆ ಮತ್ತೇನು? ಠಾಕೂರರೇ ದೀಕ್ಷೆ. ನನಗೆ, ಅಯ್ಯಾ, ತಾಂತ್ರಿಕ ದೀಕ್ಷೆಯಾಗಲಿ, ಭಟ್ಟಾಚಾರ್ಯರ ದೀಕ್ಷೆಯಾಗಲಿ ಗೊತ್ತಿಲ್ಲ. ಅವರ ನಾಮಜಪ ಮಾಡಿನೋಡು! ಜೊತೆಗೆ ಎದೆಮುಟ್ಟಿ ಪ್ರಾರ್ಥನೆ ಮಾಡು-‘ಹೇ ಪ್ರಭೂ, ನನ್ ಮೇಲೆ ದಯೆ ತೋರು.’ ಹೃತ್ಪೂರ್ವಕವಾದ ಪ್ರಾರ್ಥನೆಗೆ ಅವನು ಕಿವಿ ಕೊಟ್ಟೆಕೊಡುತ್ತಾನೆ. ಠಾಕೂರರು ತಾವೆ ಹೇಳಿದ್ದಾರೆ-‘ಯಾರು ರಾಮನೊ ಯಾರು ಕೃಷ್ಣನೊ ಅವನೆ ಇಂದು (ತಮ್ಮ ಶರೀರದ ಕಡೆ ಕೈ ತೋರುತ್ತಾ) ಈ ರೂಪದಲ್ಲಿದ್ದಾನೆ.’ ಇದು ಸ್ವಯಂ ಭಗವಂತನ ಮಾತು ಕಣಯ್ಯಾ, ಯುಗಾವತಾರನ ವಾಣಿ. ನಾವೂ ಹೇಳುತ್ತೇವೆ ಅದನ್ನೆ. ಈ ಯುಗದಲ್ಲಿ ಠಾಕೂರರ ಹೆಸರಿನಿಂದಲೆ ಮುಕ್ತಿ. ಈ ಅಂಧವಿಶ್ವಾಸವನ್ನೆ ಹಿಡಿದು ಬದಕಲು ಸಮರ್ಥನಾಗಿದ್ದರೆ ಬಾ;- ನನಗೆ ತಿಳಿದಿರುವುದನ್ನು ಹೃದಯ ತೆರೆದು ಹೇಳಿ ಕೊಡುತ್ತೇನೆ. ಇಲ್ಲದಿದ್ದರೆ ಹೊರಡು, ಯುಕ್ತಿ ತರ್ಕ ಮಾಡಿಕೊ; ಆಮೇಲೆ ಸಮಯ ಬಂದಾಗ ಬರುವೆಯಂತೆ. ಇದೇನು ಮತಭ್ರಾಂತಿಯಲ್ಲ. ಇದು ಪ್ರತ್ಯಕ್ಷ ಸತ್ಯ. ನಾವು ತಿಳಿದಿರುವಂತೆ, ಠಾಕೂರರೆ ಸ್ವಯಂ ಸನಾತನ ಪರಬ್ರಹ್ಮ. ಇಂಥ ವಿಶ್ವಾಸ ಬೇಕು. ನೀನು ಒಳ್ಳೆಯ ಹುಡುಗ; ವಿದ್ವಾನ್, ಬುದ್ಧಿಮಾನ್; ಯಥೇಷ್ಟ ಉತ್ಸಾಹವಿದೆ, ತುಂಬ ಓದಿ ಕೇಳಿ ಮಾಡಿದ್ದೀಯೆ; ಇನ್ನೂ ಅಷ್ಟು ಮಾಡು; ಆದರೆ ಅದರ ಜೊತೆಗೆ ಮನಸ್ಸನ್ನು ಸ್ಥಿರಗೊಳಿಸಕೊ; ಹೃದಯದಲ್ಲಿ ಅನುರಾಗ ಹುಟ್ಟಲಿ; ಪ್ರಾಣ ವ್ಯಾಕುಲತೆಯಿಂದ ತುಡಿಯಲಿ; ಪ್ರಾಣಭರದಿಂದ ಅವನ್ನು ಕೂಗಿ ಕರೆ, ನಿನಗೆ ಗೊತ್ತಾಗುತ್ತದೆ. ತಕ್ಕ ಸಮಯದಲ್ಲಿ ಎಲ್ಲ ಕೈಗೂಡುತ್ತದೆ. ಮನಸ್ಸನ್ನು ಸಿದ್ಧಗೊಳಿಸು. ಅವರು ಹೇಳುತ್ತಿದ್ದರು: ‘ಹೂವು ಅರಳಿದರೆ ದುಂಬಿ ತಮಗೆ ತಾವೆ ಹಾರಿಬರುತ್ತವೆ.’ ಅದನ್ನೆ ಹೇಳುತ್ತೇನೆ, ಮೊದಲು ಹೃದಯಪದ್ಮ ವಿಕಸಿತವಾಗುವಂತೆ ಪ್ರಯತ್ನಿಸು; ಆಗ ಗುರುಕೃಪೆ ತನ್ನಷ್ಟಕ್ಕೆ ತಾನೆ ಒದಗುತ್ತದೆ. ಆತನು ಅಂತರ್ಯಾಮಿಯಲ್ಲವೆ? ನಿನ್ನ ಹೃದಯದಲ್ಲಿಯೆ ಆತ ಇದ್ದಾನೆ, ನಿನ್ನ ಅಂತರಾತ್ಮ ರೂಪದಲ್ಲಿ. ಕಾಲ ಬಂದಾಗ ಆತನೆ ಎಲ್ಲವನ್ನೂ ತಿಳಿಸಿಕೊಡುತ್ತಾನೆ.”

“ಲೌಕಿಕ ಮಹತ್ವಾಕಾಂಕ್ಷೆ ಇರಬೇಕಾದ್ದೇನೊ ಒಳ್ಳೆಯದೆ. ಇಷ್ಟು ದಿನ ಅದನ್ನೆಲ್ಲ ಮಾಡಿದ್ದಾಗಿದೆ. ಇನ್ನು ಆತ್ಮಜ್ಞಾನ ಪಡೆಯಲು ಪ್ರಯತ್ನ ಮಾಡುವುದರ ಕಡೆ ಕಣ್ಣು ತಿರುಗಿಸು. ಬದುಕಿನ ಅತ್ಯಂತ ಮಹೋನ್ನತ ಮಹಾಕಾಂಕ್ಷೆ ಎಂದರೆ ದೇವರನ್ನು ತಿಳಿಯುವುದು. ಎದ್ದುನಿಂತು ಸೊಂಟಕಟ್ಟು; ತೇಜಃಪೂರ್ಣ ಮನಸ್ಸಿನಿಂದ ನಿನ್ನ ಸಮಸ್ತ ಶಕ್ತಿಯನ್ನೂ ಆ ದಿಕ್ಕಿಗೆ ತಿರುಗಿಸು-ಶಾಶ್ವತ ಸತ್ಯ ಜೀವನ ಲಾಭಕ್ಕಾಗಿ.”

ಭಕ್ತನು ಅತ್ಯಂತ ಆಗ್ರಹಾನ್ವಿತನಾಗಿ ಪ್ರಾರ್ಥಿಸಿದುದರಿಂದ ಮಹಾಪರುಷಜಿ ಆತನಿಗೆ ದೀಕ್ಷಾದಾನ ಮಾಡಲು ಸಮ್ಮತಿಯಿತ್ತರು.

ಅಲ್ಪ ಸಂಖ್ಯೆಯಾದರೇನು?
ಮಹಾ ಸಂಖ್ಯೆಯಾದರೇನು?
ಅನಂತದಿಂದ ಗುಣಿಸಲು
ಅನಂತವಾಗುವಂತೆ, ನೀನು

ನೆನೆಯಲಾ ಅನಂತನ
ಆಗುವೆ ‘ಅನಂತ ನಾ!’  – ಮಂತ್ರಾಕ್ಷತೆ

* * ** ಈ ಆತ್ಮವು ಪ್ರವಚನದಿಂದ ಲಭಿಸುವುದಿಲ್ಲ; ಮೇಧಾಶಕ್ತಿಗೂ ದೊರೆಯುವುದಿಲ್ಲ; ಬಹುಶ್ರುತಿಯಿಂದಲೂ ಸಾಧ್ಯವಲ್ಲ. ಯಾರನ್ನು ಅದು ಆರಿಸುತ್ತದೆಯೊ, ಎಂದರೆ ಯಾರನ್ನು ಅದು ಅನುಗ್ರಹಿಸುತ್ತದೆಯೊ ಅವರಿಗೆ ಅದು ಲಭ್ಯವಾಗುತ್ತದೆ. ಅಂತಹವರಿಗೇ ಈ ಆತ್ಮವು ತನ್ನ ಸ್ವರೂಪವನ್ನು ಪ್ರಕಟಿಸುತ್ತದೆ. – ಕಠೋಪನಿಷತ್ತು.