ಬೇಲೂರು ಮಠ
ಡಿಸೆಂಬರ್ ೨೨, ೧೯೩೦

ಇಂದು ಶ್ರೀ ಶ್ರೀಮಾತೆಯ ಶುಭ ಜನ್ಮತಿಥಿ. ಬೆಳಗಿನಿಂದಲೂ ಮಹಾಪುರುಷಜಿಯ ಬಾಯಲ್ಲಿ ಒಂದೇ ಶಬ್ಧ: ‘ಅಮ್ಮಾ, ಅಮ್ಮಾ ಅಮ್ಮಾ!’ ಮಾತೃಗತಪ್ರಾಣವಾದ ಒಂದು ಶಿಶುವಿನಂತೆ! ಕೈ ಜೋಡಿಸಿ ಕಣ್ಣುಮುಚ್ಚಿಕೊಂಡು ಪ್ರಾರ್ಥನೆ ಮಾಡುತ್ತಿದ್ದಾರೆ: ‘ತಾಯೆ, ತಾಯೆ, ಮಹಾಮಾಯೆ, ಜಯ್ ಮಾ! ಜಯ್ ಮಾ! ಅಮ್ಮಾ, ನಮಗೆ ಭಕ್ತಿ, ವಿಶ್ವಾಸ, ಪೂರ್ಣವಿಶ್ವಾಸ, ಜ್ಞಾನ, ವೈರಾಗ್ಯ, ಅನುರಾಗ, ಧ್ಯಾನ-ಸಮಾಧಿಗಳನ್ನು ದಯಪಾಲಿಸು. ಠಾಕೂರರ ಈ ಮಹಾಸಂಘಕ್ಕೆ ಕಲ್ಯಾಣವುಂಟಾಗುವಂತೆ ಮಾಡು; ಲೋಕಕ್ಕೆ ಶಾಂತಿ ದೊರೆಯುವಂತೆ ಕೃಪೆ ಮಾಡು.’ ಆಮೇಲೆ ಸ್ವಲ್ಪ ಹೊತ್ತು ಸುಮ್ಮನಿದ್ದು ಮತ್ತೆ ಹೇಳತೊಡಗಿದರು: “ನಮಗೆ ಭಕ್ತಿಯಿಲ್ಲ, ಆದ್ದರಿಂದಲೆ ಇಂತಹ ಮಹಾದಿನಗಳ ಮಹಾತ್ಮೆಯನ್ನು ಸರಿಯಾಗಿ ಅರಿಯಲಾರೆವು. ಇದೇನು ಅಂಥಾ ಇಂಥಾ ದಿನವೆ? ಮಹಾಮಾಯೆಯ ಜನ್ಮ ದಿನ. ಜೀವರ ಮತ್ತು ಜಗತ್ತಿನ ಕಲ್ಯಾಣಾರ್ಥವಾಗಿ ಸ್ವಯಂ ಮಹಾಮಾಯೆಯೆ ಈ ದಿನದಂದು ಜನ್ಮ ಗ್ರಹಣ ಮಾಡಿದ್ದಾಳೆ. ಮಾನುಷಲೀಲೆಯನ್ನು ಅರಿಯುವುದು ತುಂಬಾ ಕಠಿನ. ಭಗವಂತ ಹೇಗೆ ನರಶರೀರಧಾರಣೆ ಮಾಡಿ ಆಟವಾಡುತ್ತಾನೆ ಎಂಬುದನ್ನು ಅರಿಯುವುದು ಅತಿಕಷ್ಟ. ಆತನೆ ಕೃಪೆಮಾಡಿ ತಿಳಿಸಿಕೊಡದಿದ್ದರೆ ಯಾರು ತಾನೆ ತಿಳಿಯಲು ಸಮರ್ಥರಾಗುತ್ತಾರೆ? ಶ್ರೀ ಶ್ರೀಮಾತೆ ಅದೆಂತಹ ಸಾಧಾರಣ ಭಾವದಲ್ಲಿ ಜೀವನ ನಡೆಸಿದರು? ಅವಿತಿದ್ದರೊ ಎಂಬಂತೆ! ಎಲೆಮರೆಯ ಹೂವಾಗಿ ಛದ್ಮವೇಷದಲ್ಲಿಯೊ ಎಂಬಂತೆ! ನಾವು ಅವರನ್ನು ಅರಿಯುವುದೆಂತು? ಅವರನ್ನು ಚೆನ್ನಾಗಿ ತಿಳಿದಿದ್ದವರೆಂದರೆ ಠಾಕೂರರೊಬ್ಬರೆ. ಅವರು ಒಮ್ಮೆ ನನಗೆ ಹೇಳಿದರು: ‘ಈ ಮಂದಿರದಲ್ಲಿ ಇರುವ ತಾಯಿ, ಆ ನಹಬತ್ತಿನಲ್ಲಿ ವಾಸಿಸುವ ತಾಯಿ-ಇಬ್ಬರೂ ಒಂದೆ; ಅಭೇದ!’ ಹಾಗೆ ತಿಳಿದ ಇನ್ನೊಬ್ಬರೆಂದರೆ ಸ್ವಾಮೀ. ಆಹಾ! ಶ್ರೀಮಾತೆಯ ಮೇಲೆ ಎಂತಹ ಗಂಭೀರ ಭಕ್ತಿ ಇತ್ತು ಅವರಿಗೆ! ಅವರು ಏನು ಹೇಳುತ್ತಿದ್ದರು ಗೊತ್ತೆ? ‘ತಾಯಿಯ ಆಶೀರ್ವಾದ ಪಡೆದುದರಿಂದಲೆ ಸಮುದ್ರದಾಚೆಗೆ ಹೋಗಿ ಜಗಜ್ಜಯಿಯಾಗಿ ಹಿಂತಿರುಗಿದೆ’ ಎಂದು.

ಸಾಧುಗಳೂ ಭಕ್ತರೂ ಪ್ರಣಾಮ ಸಲ್ಲಿಸಲು ಬಂದಹಾಗೆಲ್ಲ ಅವರಲ್ಲಿ ಅನೇಕರನ್ನು ಕೇಳುತ್ತಿದ್ದರು ‘ತಾಯಿಯ ದರ್ಶನವಾಯಿತೆ? ಎಂದು. ಭಾನುವಾರ ವಾದ್ದರಿಂದ ಭಕ್ತರ ಸಂಖ್ಯೆ ಸ್ವಲ್ಪ ಹೆಚ್ಚಾಗಿಯೆ ಇತ್ತು. ಮಧ್ಯಾಹ್ನ ಸುಮಾರು ಮೂರು ಸಾವಿರಕ್ಕೂ ಅಧಿಕವಾಗಿ ಭಕ್ತ ನರನಾರಿಯರು ಪರಿತೋಷಕಪೂರ್ವಕವಾಗಿ ಪ್ರಸಾದ ಸ್ವೀಕಾರ ಮಾಡಿದರು. ಬೆಳಗಿನ ಹೊತ್ತು ತುಂಬ ಮೋಡ ಮುಚ್ಚಿಕೊಂಡಿದ್ದರಿಂದ ಎಲ್ಲರಿಗೂ ಭಯವಾಗಿತ್ತು, ಎಲ್ಲಿ ಮಳೆ ಬಂದು ತಾಯಿಯ ಉತ್ಸವದ ಆನಂದಕ್ಕೆ ವ್ಯಾಘಾತ ಉಂಟಾಗುತ್ತದೆಯೋ ಎಂದು. ವಯಸ್ಸಾದ ಒಬ್ಬರು ಹಿರಿಯ ಸಂನ್ಯಾಸಿ ಮೋಡ ಮುಚ್ಚಿದುದಕ್ಕಾಗಿ ಸ್ವಲ್ಪ ಕಳವಳ ವ್ಯಕ್ತಪಡಿಸಿದಾಗ ಮಹಾಪುರುಷಜಿ ತುಸುಹೊತ್ತು ಸುಮ್ಮನಿದ್ದು ಹೇಳಿದರು: “ಇಲ್ಲ. ಏನೂ ಭಯ ಇಲ್ಲ. ತಾಯಿಯ ಕೃಪೆಯಿಂದ ಇವತ್ತಿನ ಉತ್ಸವ ಚೆನ್ನಾಗಿಯೆ ನಡೆಯುತ್ತದೆ. ಆಕೆ ಮಂಗಳಮಯೀ; ಎಲ್ಲರಿಗೂ ಮಂಗಳವನ್ನೆ ಮಾಡುತ್ತಾಳೆ.”

ಸಾಯಂಕಾಲ ಪೂಜನೀಯ ಗಂಗಾಧರ ಮಹಾರಾಜರು (ಸ್ವಾಮಿ ಅಖಂಡಾನಂದರು) ಶ್ರೀಮಾತೆಯ ಉತ್ಸವ ದರ್ಶನಾರ್ಥಿಯಾಗಿ ಆಗಮಿಸಿದರು. ಅದನ್ನು ಕಂಡು ಮಹಾಪುರುಷಜಿಗೆ ಭಾರಿ ಖುಷಿಯಾಯ್ತು. ಶ್ರೀ ಶ್ರೀಮಾತಾ ಮಂದಿರದಲ್ಲಿ ಚಂಡೀ ಕೀರ್ತನೆ ನಡೆಯುತ್ತಿತ್ತು. ಮಠದಲ್ಲಿ ಚಂಡೀ ಕೀರ್ತನೆ ನಡೆಯುತ್ತಿತ್ತು. ಮಠದಲ್ಲಿ ಚಂಡೀ ಕೀರ್ತನೆ ನಡೆಯುತ್ತಿದ್ದುದು ಅದೇ ಮೊದಲನೆಯ ಸಾರಿ. ಮಹಾಪುರುಷಜಿ ಮತ್ತೆ ಮತ್ತೆ ಚಂಡೀ ಕೀರ್ತನೆ ಹೇಗೆ ನಡೆಯುತ್ತಿದೆ ಎಂಬುದನ್ನು ವಿಚಾರಿಸಿಕೊಳ್ಳುತ್ತಿದ್ದರು. ತರುವಾಯ ಅವರು ಹೇಳಿದರು: “ನಮ್ಮ ತಾಯಿಯ ಹೆಸರು ಶಾರದಾ. ಈ ತಾಯಿಯೆ ಸ್ವಯಂ ಸರಸ್ವತೀ. ಆಕೆಯೆ ಕೃಪೆತೋರಿ ಜ್ಞಾನಕೊಡುವವಳು; ಜ್ಞಾನ ಎಂದರೆ ಭಗವಂತನ ಅರಿವು. ಈ ಜ್ಞಾನ ಉಂಟಾದಾಗಲೆ ಸರಿಯಾದ ಭಕ್ತಿ ಉಂಟಾಗುವ ಸಂಭವ. ಜ್ಞಾನ ಉಂಟಾಗದಿದ್ದರೆ ಭಕ್ತಿ ಉಂಟಾಗುವುದಿಲ್ಲ. ಶುದ್ಧಜ್ಞಾನವೂ ಶುದ್ಧಾಭಕ್ತಿಯೂ ಎರಡೂ ಒಂದೇ ವಸ್ತು. ತಾಯಿಯ ಕೃಪೆಯಿದ್ದರೇ ಅದೆಲ್ಲ ಉಂಟಾಗುವ ಸಂಬವ. ಜ್ಞಾನ ಕೊಡುವ ದಾತೃವೂ ತಾಯಿಯೇ.”

* * *