ಬೇಲೂರು ಮಠ 
ಗುರುವಾರ, ಫೆಬ್ರವರಿ ೧೯, ೧೯೩೧

ಶ್ರೀ ಶ್ರೀಠಾಕೂರರ ಶುಭಜನ್ಮ ತಿಥಿ. ಇಡಿಯ ದಿನ ಪೂಜೆ ಪಠನ ಭಜನೆ ಕೀರ್ತನೆ ನೈವೇದ್ಯಾರ್ಪಣೆ ಮತ್ತು ಪ್ರಸಾದ ವಿತರಣಾದಿಗಳಿಂದ ಸಮಗ್ರ ಮಠವೂ ಆನಂದಮುಖರಿತವಾಗಿತ್ತು. ಸಹಸ್ರ ಸಹಸ್ರ ನರನಾರಿ ಭಕ್ತರು ನೆರೆದು ಆ ಆನಂದ ಸಾಗರದಲ್ಲಿ ತೇಲಿ ಮುಳುಗಿದರು.

ಮಹಾಪುರುಷಜಿ ಬೆಳಗಿನಿಂದಲೂ ತಮ್ಮಷ್ಟಕ್ಕೆ ತಾವೆ ಎಂಬಂತೆ “ಜಯ ರಾಮಕೃಷ್ಣ! ಜಯ ಪ್ರಭೂ ! ಜಯ ಭಗವಾನ್ ! ಇದು ಮಹಾಶುಭದಿನ ! ಭಗವಂತ ತಾನೆ ಸ್ವಯಂ ಅಹೈತುಕೀ ಕೃಪೆಯಿಂದ ಈ ಧರಾಧಾಮಕ್ಕೆ ಇಳಿದು ಬಂದ ಮಂಗಲ ದಿನ ! ಇದಕ್ಕೆ ಎಣೆ ಇನ್ನೊಂದಿದೆಯೆ ? ಸಮಸ್ತ ಪೃಥಿವಿಯೆ ಆತನ ದಯೆಯಿಂದ ಬದುಕಿಹೋಗಿದೆ ! ಇಲ್ಲ, ಇದಕ್ಕೆ ಸಮನಾದುದು ಮತ್ತೆಲ್ಲಿಯೂ ಇಲ್ಲ!” ಇತ್ಯಾದಿ ಭಾವೋಕ್ತಿಗಳನ್ನು ನಾನಾ ಪ್ರಕಾರವಾಗಿ ಹೇಳಿಕೊಳ್ಳುತ್ತಿದ್ದರು. ಸ್ತ್ರೀಪುರುಷರಾದಿಯಾಗಿ ಅಸಂಖ್ಯಾತ ಭಕ್ತರು ಅವರಿಗೆ ಪ್ರಣಾಮ ಮಾಡಲು ಬಂದರು. ಅವರೂ ಒಂದಿನಿಂತೂ ದಣಿವು ತೋರದೆ ಭಾವಸ್ಥರಾಗಿ ಸಕಲರಿಗೂ ದಯೆತೋರಿ ಆಶೀರ್ವಾದ ಮಾಡಿದರು. ಮತ್ತೆ ಮತ್ತೆ ಅವರ ನಾಲಗೆಯ ಮೇಲೆ ನರ್ತಿಸುತ್ತಿದ್ದ  ಪ್ರಾರ್ಥನೆ: “ಯಾರು ಎಲ್ಲಿಯೆ ಇರಲಿ, ಸಕಲರಿಗೂ ಕಲ್ಯಾಣವಾಗಲಿ. ಪ್ರಭೂ, ಸರ್ವರಿಗೂ ಮಂಗಳಕರನಾಗು; ಸಂಘಕ್ಕೆ ಶುಭವಾಗಲಿ; ಸಮಗ್ರ ಜೀವ ಜಗತ್ತಿನ ಕಲ್ಯಾಣವಾಗಲಿ.” ಅನೇಕ ದೀಕ್ಷಾರ್ಥಿಗಳಿಗೂ ಅವರು ಮಂತ್ರದೀಕ್ಷೆ ಕೊಟ್ಟು ಕೃಪೆದೋರಿದರು.

ಮಧ್ಯಾಹ್ನ ಊಟದ ಸಮಯ ಅನುಚರನು ಶ್ರೀಗುರುಮಹಾರಾಜರಿಗೆ ನೈವೇದ್ಯ ಮಾಡಿದ ಪ್ರಸಾದ ತೆಗೆದುಕೊಂಡು ಬಂದನು. ಆದರೆ ಮಹಾಪುರುಷಜಿಗೆ ಊಟ ಮಾಡುವ ಮನಸ್ಸೆ ಇದ್ದಂತೆ ತೋರಲಿಲ್ಲ. ‘ಜಯ್ ಗುರುದೇವ್ ! ಜಯ್ ಪ್ರಭೂ!’ ಎಂದು ಎಲ್ಲಿಯೊ ಒಂದಿನಿತೆ ಪ್ರಸಾದವನ್ನು ಬೆರಳತುದಿಯಿಂದ ತೆಗೆದು ಹಣೆಗೆ ಮುಟ್ಟಿಸಿ, ಬಾಯಿಗೆ ಹಾಕಿಕೊಂಡು ಹೇಳಿದರು: “ತಗೊಂಡು ತೆಗೆದು ಹಣೆಗೆ ಮುಟ್ಟಿಸಿ, ಬಾಯಿಗೆ ಹಾಕಿಕೊಂಡು ಹೇಳಿದರು: “ತಗೊಂಡು ಹೋಗು; ಹೋಗು; ಇದನ್ನೆಲ್ಲ ತೆಗೆದುಬಿಡು. ಇವೊತ್ತು ಮತ್ತೆ ಊಟಮಾಡೋದೇನು ಬಂತು? ಇವೊತ್ತು ಇದನ್ನೆಲ್ಲ ತಿನ್ನುವುದರಿಂದ ಏನೂ ಪ್ರಯೊಜನವಿಲ್ಲ. ಇವೊತ್ತು ಠಾಕೂರರು ಅವತರಿಸಿದ ದಿನ. ಈ ದಿನ ಎಂತಹ ದಿನ ಎಂದು ಭಾವಿಸತೊಡಗಿದರೆ ನನಗೆ ಮಾತೇ ಕಟ್ಟಿ ಹೋಗುತ್ತದೆ. ಈವೊತ್ತೇನು ಅಂಥಿಂಥ ದಿನವೇ? ಸಮಸ್ತ ಜೀವಜಗತ್ತಿನ, ಅಗಣಿತ ಬ್ರಹ್ಮಾಂಡಗಳ ಅಧೀಶ್ವರನೆ ಆಗಮಿಸಿದ ದಿನ. ಇದೇನು ಯಕ್ಕಚ್ಚಿತ್ತವೇ? ಯಾರು ಹಿಂದೊಮ್ಮೆ  ಶ್ರೀಕೃಷ್ಣ, ಬುದ್ಧ, ಗೌರಾಂಗ ರೂಪದಿಂದ ಬಂದಿದ್ದನೋ ಆತನೇ ಮತ್ತೆ ಶತಶತ ಸಂವತ್ಸರ ತರುವಾಯ ರಾಮಕೃಷ್ಣ ರೂಪದಿಂದ ಅವತೀರ್ಣನಾಗಿದ್ದಾನೆ. ಓಃ ! ನಾನು ಭಾವಿಸಲೂ ಆರೆ; ಧ್ಯಾನಿಸಲೂ ಆರೆ; ಧ್ಯಾನಿಸಲೂ ಸಾಧ್ಯವಿಲ್ಲ; ಇವೊತ್ತು ಎಂತಹ ದೊಡ್ಡ ದಿನ! ಆಹಾ ಠಾಕೂರರ ಜನ್ಮ ತಿಥಿ ದಿನದಲ್ಲಿ ಅವರ ಕಥೆಯನ್ನೇ ಹೇಳುತ್ತಾ ಹೇಳುತ್ತಾ ನನ್ನ ವಾಕ್ಕಾಯ ಮನಗಳೆಲ್ಲ ಪವಿತ್ರವಾಗಿ ಹೋಗುತ್ತವೆ. ಇವತ್ತೆ ಈ ಒಡಲು ಬಿದ್ದು ಹೋಗುವುದಾದರೆ ಅದೆಂತಹ ಆನಂದದ ಘಟನೆಯಾಗುತ್ತಿತ್ತು ! ಠಾಕೂರರ ಈ ಪವಿತ್ರ ಸ್ಥಾನದಲ್ಲಿ, ಇಷ್ಟೊಂದು ಸಾಧುಭಕ್ತರ ನಡುವೆ, ಅವರ ವಿಷಯವಾಗಿಯೆ ಮಾತನಾಡುತ್ತಾ ಆಡುತ್ತಾ ಅವರ ತಿಥಿ ಪೂಜೆಯ ದಿನದಲ್ಲಿ ದೇಹತ್ಯಾಗ ಮಾಡುವುದೂ ಒಂದು ಮಹಾಸೌಭಾಗ್ಯವೆ.”

ಅಪರಾಹ್ನವೂ ಭಕ್ತರ ಆಗಮನ ಎಡೆಬಿಡದೆ ಇತ್ತು. ಭಕ್ತರು ಪ್ರಣಾಮ ಸಲ್ಲಿಸಲು ಮಹಾಪುರುಷಜಿಯ ಭವ್ಯಸಾನ್ನಿಧ್ಯಕ್ಕೆ ಬಂದೊಡನೆಯೆ ಅವರ ಭಾವ ವಿಹ್ವಲತೆಗೆ ಬೆರಗಾಗಿ, ಮುಗ್ಧನೇತ್ರಗಳಿಂದ ಅವರನ್ನೆ ನೋಡುತ್ತಾ ನಿಂತುಬಿಡುತ್ತಿದ್ದರು. ಅಲ್ಲದೆ ಅವರ ಪೂತ ಆಶೀರ್ವಾಣಿಯಿಂದ ಪ್ರಾಣದಲ್ಲಿ ಒಂದು ಅಭಿನವ ಆನಂದವನ್ನೂ ಒಂದು ಆಧ್ಯಾತ್ಮಿಕ ಪ್ರೇರಣೆಯನ್ನೂ ಅನುಭವಿಸಿ ಪರಿಪೂರ್ಣ ಹೃದಯರಾಗಿ ಹಿಂತಿರುಗುತ್ತಿದ್ದರು. ರಾಣಿಯೂ ಪ್ರಣಾಮ ಮಾಡಿ, ಆಶೀರ್ವಾದ ಪಡೆದು ಹೊರಟು ಹೋದ ತರುವಾಯ ಮಹಾಪುರುಷಜಿ ಹೇಳಿದರು: “ಯಾರು ರಾಜನೊ ಯಾರು ರಾಣಿಯೊ ಅದನ್ನೆಲ್ಲ ನಾನು ಗಮನಿಸಲಿಲ್ಲ. ನಾರಾಯಣನೊಬ್ಬನೆ ಸತ್ಯ; ಇರುವುದೂ ಅವನೊಬ್ಬನೆ. ಠಾಕೂರರೆ ಸರ್ವವೂ. ಜೀವ ಜಗತ್ತುಗಳ ಕಲ್ಯಾಣಾರ್ಥವಾಗಿ ಅವರು ಬಂದರು. ಆ ಸುವಾರ್ತೆಯ ಪ್ರಚಾರಕ್ಕಾಗಿ ಅಲ್ಲವೆ ಈ ದೇಹ ಇನ್ನೂ ಉಳಿದಿರುವುದು. ಇಲ್ಲದಿದ್ದರೆ ಹೇಗೆ ಉಳಿಯುತ್ತಿತ್ತು? ನನಗೆ ಏನೂ ಕಾಮನೆಯಾಗಲಿ ವಾಸನೆಯಾಗಲಿ ಇಲ್ಲ. ಎಲ್ಲಿಯ ತನಕ ಈ ದೇಹವಿರುವುದೊ ಅಲ್ಲಿಯವರೆಗೆ ಅವರ ವಾಣಿಯನ್ನು  ಪ್ರಚಾರ ಮಾಡುವುದೊಂದೆ ಈ ಜೀವನದ ಏಕಮಾತ್ರ ವ್ರತ. ಎಲ್ಲಿಯವರೆಗೆ ಅವರ ಖೇಲನ ಇರುತ್ತದೆಯೊ ಅಲ್ಲಿಯವರೆಗೆ ಈ ದೇಹ ಇರುತ್ತದೆ.”

ಇಬ್ಬರು ಅಮೆರಿಕಾದ ಮಹಿಳಾ ಭಕ್ತೆಯರು ಅವರ ದರ್ಶನಾರ್ಥಿಗಳಾಗಿ ಬಂದು ಕುಶಲಪ್ರಶ್ನೆ ಕೇಳಿದರು. ಅದಕ್ಕೆ ಉತ್ತರವಾಗಿ ಮಹಾಪುರುಷಜಿ ಇಂಗ್ಲೀಷಿನಲ್ಲಿ ಹೇಳಿದರು : “ನಾನಿಂದು ಉತ್ತಮ ಮನಃಸ್ಥಿತಿಯಲ್ಲಿದ್ದೇನೆ. ಆಹ! ಸಮಸ್ತ ಪೃಥಿವಿಯೂ ಇಂದು ಆನಂದಮಗ್ನ. ಈ ದಿನದಂದೆ ಪ್ರಭು ಜಗತ್ತಿಗೆ ಅವತೀರ್ಣನಾದದ್ದು. ನನ್ನ ಹೃದಯದಲ್ಲಿ ಎಂತಹ ಅನುಭೂತಿಯಾಗುತ್ತಿದೆ ಎಂಬುದನ್ನು ನಾನು ಹೇಗೆತಾನೆ ನಿಮಗೆ ಪ್ರಕಾಶಪಡಿಸಲಿ! ಎಂತಹ ಶುಭದಿನ ಇಂದು! ಇಂತಹ ದೊಡ್ಡ ವಿರಾಟ್ ಆಧ್ಯಾತ್ಮಿಕ ಶಕ್ತಿ ಹಿಂದೆಂದೂ ಪೃಥಿವಿಗೆ ಇಳಿದಿಲ್ಲ. ಸಮಸ್ತ ಪೃಥಿವಿಯ ಉದ್ಧಾರವಾಗುತ್ತದೆ. ಶ್ರೀ ಗುರುಮಹಾರಾಜರು ಯಾರು? ಅವರು ಜಗತ್ತಿಗೆ ಏನು ಕೊಟ್ಟು ಹೋಗಿದ್ದಾರೆ? ಎಂಬುದನ್ನು ಅರಿತುಕೊಳ್ಳುವುದಕ್ಕೆ ಶತಮಾನಗಳು ಬೇಕಾಗುತ್ತವೆ.”

ರಾತ್ರಿ ತಾಯಿ ಮಹಾಕಾಳಿಯ ಪೂಜೆ. ಪೂಜೆಯನ್ನು ಪ್ರಾರಂಭಿಸುವ ಮೊದಲು ಪೂಜಾರಿ ಮಹಾಪುರುಷಜಿಗೆ ಪ್ರಣಾಮಮಾಡಿ, ಅವರ ಅನುಮತಿ ಮತ್ತು ಆಶೀರ್ವಾದಗಳಿಗಾಗಿ ಪ್ರಾರ್ಥಿಸಲು ಅವರು ಹೇಳಿದರು: “ಭೇಷ್, ತುಂಬ ಭಕ್ತಿಯಿಂದ ತಾಯಿಯ ಪೂಜೆ ಮಾಡಬೇಕಯ್ಯಾ. ಇವತ್ತು ತಾಯಿಯ ವಿಶೇಷ ಆವಿರ್ಭಾವ. ಆ ತಾಯಿಯ ಶಕ್ತಿಇಂದಲೆ ಎಲ್ಲವೂ ನಡೆಯುತ್ತವೆ. ಈ ಯುಗದಲ್ಲಿ ಠಾಕೂರರ ಮುಖಾಂತರ ಆಕೆಯ ಶಕ್ತಿ ಖೇಲನ ಮಾಡುತ್ತದೆ. ಠಾಕೂರರು ಕೂಡ ಬೇರೆ ಯಾರೂ ಅಲ್ಲ; ಆ ತಾಯಿ ಕಾಳಿಯೆ ಠಾಕೂರರ ರೂಪದಲ್ಲಿ ಇಳಿದಿದ್ದಾಳೆ. ಆ ವಿಚಾರ ನೆನೆದಾಗಲೆಲ್ಲ ನನಗೆ ಒಮ್ಮೊಮ್ಮೆ, ಅಯ್ಯಾ, ನಾವಿದ್ದದ್ದು ಯಾರ ಜೊತೆಯಲ್ಲಿ ಎಂಬ ಅದ್ಭುತದಿಂದ ನನ್ನ ಮನಸ್ಸು ಏನೇನೊ ಆಗುತ್ತದೆ. ಸ್ವಯಂ ಭಗವಾನ್ ಸಾಕ್ಷಾತ್ ಜಗಜ್ಜನನಿ! ನಮ್ಮ ಜೀವನವೆಲ್ಲ ಧನ್ಯವಾಗಿ ಹೋಗಿದೆ. ಯಾರು ಠಾಕೂರರನ್ನು ನೋಡಲಾಗಲಿಲ್ಲವೊ ಆದರೆ ನಮ್ಮನ್ನು ನೋಡುತ್ತಿದ್ದಾರೆಯೊ ಅವರಿಗೂ ಕಲ್ಯಾಣವಾಗುತ್ತದೆ. ನಾವೂನೂ ಠಾಕೂರರದೇ ಅಂಶ.”

* * *