ಬೇಲೂರು ಮಠ 
ಫೆಬ್ರವರಿ ೨೦, ೧೯೩೧

ನಿನ್ನೆ ಶ್ರೀ ಶ್ರೀಠಾಕೂರರ ತಿಥಿ ಪೂಜೆ ಮತ್ತು ಉತ್ಸವಾದಿಗಳು ಬಹಳ ವಿಜೃಂಭಣೆಯಿಂದ ನಡೆದು ಸಾಂಗವಾಗಿ ನೆರವೇರಿದವು. ನಿನ್ನೆ ಇಡಿಯ ಹಗಲಿರುಗಳೂ ಯಾವ ಭಗವದ್‌ಭಾವದ ಅತಿಶಯತೆ ಮಹಾಪುರುಷ ಮಹಾರಾಜರಲ್ಲಿ ಕಂಡು ಬಂದಿತ್ತೋ ಅದು ಇಂದೂ ಬಹುಮಟ್ಟಿಗೆ ಮುಂದುವರಿಯುತ್ತಲೇ ಇದೆ. ಮಹಾಮಾಯೆಯ ಪೂಜೆ, ಅರ್ಚನೆ, ಪಠನೆ ಮತ್ತು ಭಜನಾದಿಗಳಿಂದ ಇರುಳೆಲ್ಲವೂ ಮಠದ ಮನೋವಾಯುಮಂಡಲ ಮುಖರಿತವಾಗಿತ್ತು. ರಾತ್ರಿಯ ಕೊನೆಯಲ್ಲಿ ಪೂಜೆ ಮುಗಿದ ತರುವಾಯ ಹೋಮಕಾರ್ಯ ನಡೆದಿತ್ತು. ಆ ಹೋಮಾಗ್ನಿಯಲ್ಲಿಯೆ ಆಮೇಲೆ ವಿರಜಾಹೋಮವೂ ಬ್ರಹ್ಮಚರ್ಯಹೋಮವೂ ನಡೆದಿದ್ದುವು. ಮಹಾಪುರುಷಜಿ ಏಳು ಜನ ಬ್ರಹ್ಮಚಾರಿಗಳಿಗೆ ಸಂನ್ಯಾಸವ್ರತ ದೀಕ್ಷೆಯನ್ನೂ ಮೂವರಿಗೆ ಬ್ರಹ್ಮಚರ್ಯ ಶ್ರಮಕ್ಕೀಡಾಗಿದ್ದರೂ ಅವರು ಸ್ವಲ್ಪವೂ ಆಯಾಸ ವ್ಯಕ್ತಗೊಳಿಸಲಿಲ್ಲ. ಅವರ ಹೃದಯದಲ್ಲಿ ಒಂದು ದಿವ್ಯ ಆನಂದವುಂಟಾಗಿ ಮುಖ ಮಂಡಲವೆಲ್ಲ ಪ್ರದೀಪ್ತವಾದಂತೆ ತೋರುತ್ತಿತ್ತು.

ಪ್ರಾತಃಕಾಲ. ಹಿಂದಿನ ರಾತ್ರಿ ಕಾಳಿಕಾಮಾತೆಗೆ ಅರ್ಪಿಸಿದ್ದ ನಾನಾ ನೈವೇದ್ಯಗಳನ್ನು ಅವರ ಬಳಿಗೆ ತಂದರು. ಅವರು ಅತ್ಯಂತ ಭಕ್ತಿ ಭರದಿಂದ ಕಣ್ಣು ಮುಚ್ಚಿ ಕೈಜೋಡಿಸಿ ಆ ಮಹಾಪ್ರಸಾದಕ್ಕೆ ಪ್ರಣಾಮಮಾಡಿ, ಆ ಪ್ರಸಾದಗಳನ್ನೆಲ್ಲ ಬೆರಳ ತುದಿಯಿಂದ ಮುಟ್ಟಿ ನಾಲಗೆಗೆ ಸೋಕಿಸಿದರು. ಜೊತೆಜೊತೆಗೆ ಕಾತರ ಭಾವದಿಂದ “ಅಮ್ಮಾ, ಕರುಣಾಮಾಯೀ, ಅಮ್ಮ, ಲೋಕಕ್ಕೆ ಕಲ್ಯಾಣ ಮಾಡಮ್ಮಾ!” ಎಂದು ಪ್ರಾರ್ಥಿಸತೊಡಗಿದರು. ಅವರ ಆ ಸಕರುಣ ಪ್ರಾರ್ಥನಾ ಧ್ವನಿ ಅಲ್ಲಿದ್ದ ಎಲ್ಲರ ಹೃದಯದ ಅಂತಃಸ್ಥಳಪರ್ಯಂತ ಪ್ರವೇಶಿಸಿತ್ತು.

ತರುವಾಯ ನವದೀಕ್ಷಿತ ಸಂನ್ಯಾಸಿ ಮತ್ತು ಬ್ರಹ್ಮಚಾರಿಗಳು ಪ್ರಣಾಮ ಮಾಡಲು ಬಂದರು. ಅವರೆಲ್ಲರನ್ನೂ ಯಾರಿಗೆ ಯಾವ ಹೆಸರು ಕೊಟ್ಟಿದ್ದಾರೆ ಎಂಬುದಾಗಿ ವಿಚಾರಿಸಿದರು. ಪ್ರತ್ಯೇಕವಾಗಿ ಒಬ್ಬೊಬ್ಬರ ಹೆಸರನ್ನೂ ಕೇಳಿ ತಮ್ಮ ಸಂತೋಷವನ್ನು ವ್ಯಕ್ತಪಡಿಸುತ್ತಾ ಇದ್ದಕ್ಕಿದ್ದಂತೆ ಗಂಭೀರ ಭಾವದಿಂದ ಹೇಳಿದರು: “ಈ ನಾಮರೂಫ ಎಲ್ಲ ಹೊರಗಿನದು; ಎಲ್ಲ ಅನಿತ್ಯ, ಎರಡು ದಿನದ್ದು, ಇವೆಲ್ಲ ಏನೂ ಕೆಲಸಕ್ಕೆ ಬರುವುದಿಲ್ಲ. ನಾಮರೂಪಗಳನ್ನು ದಾಟಿ ಹೋಗಬೇಕು. ಆಚೆ ಇರುವ ಆ ಪರಮಾನಂದವನ್ನು ಪಡೆಯಬೇಕು; ಆತ್ಮವಸ್ತುವನ್ನು ಪಡೆಯಬೇಕು. ಅದೇ ಅಲ್ಲವೆ ಸಂನ್ಯಾಸದ ಅರ್ಥ. ಬರಿಯ ವಿರಜಾಹೋಮ ಮಾಡಿ, ಜುಟ್ಟು ಜನಿವಾರ ತೆಗೆದುಹಾಕಿ, ಕಾವಿಬಟ್ಟೆ ಉಟ್ಟುಕೊಂಡು ‘ನಾನೂ ಸಂನ್ಯಾಸಿಯಾದೆ’ ಎನ್ನುವುದು ಸುಲಭ. ಅಂಥವನು ಬರಿಯ ಪ್ರವರ್ತಕ ಸಂನ್ಯಾಸಿ ಮಾತ್ರ; ಆದರೆ ನಿಜವಾದ ಸಂನ್ಯಾಸಿಯಾಗುವುದು ತುಂಬ ಕಷ್ಟ. ಉಪನಿಷತ್ತಿನ ಮಹಾವಾಕ್ಯಗಳನ್ನು ನಿತ್ಯವೂ ಧ್ಯಾನ ಮಾಡಬೇಕು. ಇನ್ನು ಹೋಗಿ, ವತ್ಸರಿರಾ, ಧ್ಯಾನಮಗ್ನರಾಗಿ, ಆತ್ಮವಸ್ತುವನ್ನು ಅನುಭವಕ್ಕೆ ತಂದುಕೊಳ್ಳಿ. ಆಗಲೀಗ ನೀವು ಠಾಕೂರರ ಮಹಾಸಂಘಕ್ಕೆ ಸೇರಿದುದೂ, ಸಂನ್ಯಾಸ ಸ್ವೀಕಾರ ಮಾಡಿದುದೂ ಎಲ್ಲ ಸಾರ್ಥಕವಾಗುತ್ತದೆ. ನನ್ನ ಮಾತಿಗೆ ಕಿವಿಗೊಡುವುದಾದರೆ ನಾನು ಹೇಳುವುದಿಷ್ಟೆ.”

ನವದೀಕ್ಷಿತ ಸಂನ್ಯಾಸಿಗಳು ಆಶೀರ್ವಾದ ಭಿಕ್ಷೆ ಬೇಡಲು, ಅವರು ಪ್ರಾಣಪೂರ್ವಕ ಆಶೀರ್ವಾದ ಮಾಡಿ ಹೇಳಿದರು : “ನೀವು ತ್ಯಾಗೀಶ್ವರ ಠಾಕೂರರ ಆಶ್ರಯ ಪಡೆದಿದ್ದೀರಿ, -ದೇಹ, ಮನಸ್ಸು, ಪ್ರಾಣ ಎಲ್ಲವನ್ನೂ ಅವರ ಚರಣತಲದಲ್ಲಿ ಅರ್ಪಿಸಿದ್ದೀರಿ. ನೀವು ನಮಗೆ ಪರಮಪ್ರಿಯರು. ನಾನು ಹೃತ್ಪೂರ್ವಕ ಪ್ರಾರ್ಥನೆ ಮಾಡುತ್ತೇನೆ, ಭಕ್ತಿ ವಿಶ್ವಾಸಗಳು ನಿರಂತರವೂ ಅಚಲವಾಗಿರುವಂತೆ. ಪ್ರಭುವಿನ ಹೆಸರಿನಲ್ಲಿ ಯಾವ ಗೈರಿಕ ವಸನ ಧಾರಣ ಮಾಡಿದ್ದೀರೋ ಆ ಗೈರಿಕದ ಮರ‍್ಯಾದೆ ನಿಮ್ಮ ಜೀವನದ ಕೊನೆಯ ದಿವಸದ ಪರ್ಯಂತವೂ ಅಕ್ಷುಣ್ಣವಾಗಿರುವಂತೆ ಪ್ರಭುಸೇವೆ ಮಾಡುತ್ತಾ ಹೋಗಿ. ಆತನು ಕಲ್ಪತರು; ಆತನ ಹತ್ತಿರ ದೃಢವಾದ ಪ್ರೇಮಕ್ಕಾಗಿ ಭಕ್ತಿಗಾಗಿ ಬೇಡಿಕೊಳ್ಳಿ; ಬ್ರಹ್ಮವಿದ್ಯೆಗಾಗಿ ಬೇಡಿಕೊಳ್ಳಿ. ಆತ ಎಲ್ಲವನ್ನೂ ಕೊಡುತ್ತಾನೆ; ಪರಿಪೂರ್ಣವಾಗಿಯೆ ದಯಪಾಲಿಸುತ್ತಾನೆ. ನಿಮಗೆ ಕೊಡದಿರುವುದೇನೂ ಆತನಲ್ಲಿಲ್ಲ. ದೇವೀಸೂಕ್ತದಲ್ಲಿದೆ:

ಅಹಮೇವ ಸ್ವಯಮಿದಂ ವದಾಮಿ ಜುಷ್ಟಂ
ದೇವೇಭಿರುತ ಮಾನುಷೇಭಿ:
ಯಂ ಕಾಮಯೇ ತಂ ತಮಗ್ರಂ ಕೃಣೋಮಿ
ತಂ ಬ್ರಹ್ಮಾಣಂ ತಮೃಷಿಂ ತಂ ಸುಮೇಧಾಮ್ ||*

“ದೇವತೆಗಳೂ ಮನುಷ್ಯರೂ ಪ್ರಾರ್ಥನೆ ಮಾಡಿರುವುದಕ್ಕಾಗಿ ಈ ಬ್ರಹ್ಮ ತತ್ತ್ವವನ್ನು ತಾನೆಯೆ ಕೃಪಾಪೂರ್ವಕವಾಗಿ ಉಪದೇಶ ಮಾಡಿದ್ದಾಳೆ. ಅವಳ ಇಚ್ಛೆ ಬಂದರೆ ಯಾರ ಮೇಲೆ ಅವರ ಕೃಪಾಕಟಾಕ್ಷ ಎರಗುತ್ತದೆಯೊ ಆತನು ಬ್ರಹ್ಮಪದವಿಗೇರುತ್ತಾನೆ. ಇನ್ನೊಬ್ಬನು ಋಷಿಯಾಗುತ್ತಾನೆ. ಆಕೆ ಆ ಕೃಪೆಯನ್ನು ದಯಪಾಲಿಸುವುದಕ್ಕಾಗಿ ಕೈನೀಡಿ ನಿಂತಿದ್ದಾಳೆ ತಾಯಿ; ಕೇಳಿದರೆ ಸಾಕು, ಕೊಡುತ್ತಾಳೆ.”

ತರುವಾಯ ಅವರು ಈ ಕೆಳಗಣ ಶ್ಲೋಕವನ್ನು ಮತ್ತೆ ಮತ್ತೆ ಹೇಳತೊಡಗಿದರು:

ನ ಧನಂ ಜನಂ ಸುಂದರೀಂ ಕವಿತಾಂ ವಾ ಜಗದೀಶ ಕಾಮಯೇ
ಮಮ ಜನ್ಮನಿ ಜನ್ಮನೀಶ್ವರೇ ಭವತಾದ್ಭಕ್ತಿರಹೈತುಕೀ ತ್ವಯಿ||

‘ಹೇ ಜಗದೀಶ, ನಾನು ಧನ, ಜನ, ಚೆಲುವೆ, ಕಡೆಗೆ ಸರ್ವಜ್ಞತ್ವವನ್ನೂ ಕೂಡ ಬಯಸುವುದಿಲ್ಲ. ನನ್ನ ಏಕಮಾತ್ರ ಪ್ರಾರ್ಥನೆ ಎಂದರೆ, ಜನ್ಮ ಜನ್ಮಗಳಲ್ಲಿಯೂ ನಿನ್ನ ಮೇಲೆ ನನಗೆ ಅಹೈತುಕೀ ಭಕ್ತಿಯುಂಟಾಗುವಂತೆ ಕರುಣಿಸು.’

ಆಮೇಲೆ ನವದೀಕ್ಷಿತ ಸಂನ್ಯಾಸಿಗಳು ಮಾಧುಕರೀ ಭಿಕ್ಷೆಗಾಗಿ ಹೋಗಬೇಕಾದ ಸ್ಥಳ ಇತ್ಯಾದಿ ನಾಲ್ಕು ಮಾತು ಹೇಳಿ ಹೀಗೆಂದು : “ಕಾಷಾಯ ವಸ್ತ್ರ ಧರಿಸಿದರೆ ನೋಡುವುದಕ್ಕೇನೊ ತುಂಬಾ ಚೆನ್ನಾಗಿರತ್ತದೆ. ಆದರೆ ಹೊರಗೆ ಉಟ್ಟುಕೊಳ್ಳುವ ಕಾವಿಯೆ ಸರ್ವಸ್ವವಲ್ಲ. ಒಳಗಣ ಮನಸ್ಸು ಕಾವಿಯ ಬಣ್ಣಕ್ಕೆ ತಿರುಗಿದರೆ ಮಾತ್ರ ಸಾರ್ಥಕ.”

ಬೆಳಿಗ್ಗೆ ಸುಮಾರು ೧೧ ಗಂಟೆಯ ಸಮಯದಲ್ಲಿ ಸೇವಕನಿಗೆ ಹೇಳಿದರು : “ಓಃ! ನಿನ್ನೆ ಎಂತಹ ದಿವ್ಯದಿನ? ಬೃಂದಾವನದಲ್ಲಿ ಶ್ರೀಕೃಷ್ಣನೆಂತೊ ಅಂತೆ, ಕಪಿಲವಸ್ತುವಿನಲ್ಲಿ ಬುದ್ಧ ದೇವನೆಂತೊ ಅಂತೆ, ನದಿಯಾದಲ್ಲಿ ಶ್ರೀಗೌರಾಂಗನೆಂತೂ ಅಂತೆ, ಈ ಯುಗದಲ್ಲಿ ಠಾಕೂರರು ಬಂದಿದ್ದಾರೆ. ಅಂತಹ ಆಗಮನದ ಮಹಾ ಮುಹೂರ್ತಗಳ ಮಾಹಾತ್ಮ್ಯವನ್ನು ನಾವು ಒಪ್ಪಿಕೊಳ್ಳಲೇಬೇಕಾಗುತ್ತದೆ. ಆಹಾ ಭಾಗವತದಲ್ಲಿ ಶ್ರೀಕೃಷ್ಣನ ಜನ್ಮದ ವರ್ಣನೆ ಎಷ್ಟು ಸೊಗಸಾಗಿದೆ. ಸರ್ವವೂ ಮಧುಮಯ, ಆನಂದಮಯ. ಎಲ್ಲ ದಿಕ್ಕುಗಳು, ಆಕಾಶ, ಪುರ, ಗ್ರಾಮ, ಗೋಷ್ಠಿ, ವೃಕ್ಷಲತಾಗುಲ್ಮ ಎಲ್ಲವೂ ಮಂಗಳಮಯ. ನಾಲ್ಕು ದಿಕ್ಕೂ ಶಾಂತ. ಎಂತಹ ಸುಂದರ ವರ್ಣನೆ!” ಹೀಗೆ ಹೇಳುತ್ತಾ ಹೇಳುತ್ತಾ ಭಾಗವತದಿಂದ ಶ್ರೀಕೃಷ್ಣ ಜನ್ಮ ವೃತ್ತಾಂತ ಭಾಗವನ್ನು ಓದುವಂತೆ ಆದೇಶವಿತ್ತರು.

ದೇವರ ಮನೆಯಲ್ಲಿ!

ಇಲ್ಲೆ ಗಂಗಾತೀರ; ಇಲ್ಲೆ ಹಿಮಗಿರಿ ಪಾರ;
ಇಲ್ಲಿಯೆ ಕಣಾ ಆ ಹರಿದ್ವಾರ!
ಇಲ್ಲೆ ವಾರಣಾಸಿ; ಇಲ್ಲಿಯೆ ಹೃಷಿಕೇಶ;
ಇಲ್ಲೆ ಇದೆ ಮುಕ್ತಿ ಮಹಾ ದ್ವಾರ!
ದಕ್ಷಿಣೇಶ್ವರವಿಲ್ಲಿ; ರಾಮೇಶ್ವರವು ಇಲ್ಲಿ;
ಎಲ್ಲ ತೀರ್ಥಗಳಿಲ್ಲಿ, ಪುಣ್ಯಕ್ಷೇತ್ರಗಳಿಲ್ಲಿ:
ಇಲ್ಲಿ ಹನು ಸರ್ವ ದೇವಾವತಾರ!
ಅಲ್ಲಿಗಿಲ್ಲಿಗೆ ಏಕೆ ಸುಮ್ಮ ನಲೆಉವೆ ದೂರ ದೂರ?
ಇಲ್ಲಿ ಓಂ ಪೂರ್ಣಮಿವೆ: ಓ ಮನವೆ ಓ ಬಾರ ಬಾರ |  -‘ಮಂತ್ರಾಕ್ಷತೆ’ ಯಿಂದ

* * *
* ದೇವಗಣ ಮತ್ತು ಮನುಷ್ಯಗಣ ಪ್ರಾರ್ಥಿತಳಾಗ ಈ ಬ್ರಹ್ಮತತ್ವನ್ನು ನಾನೆ ಸ್ವಯಂ ಅವರಿಗೆ ತಿಳಿಸುತ್ತೇನೆ. ಯಾರು ಯಾರನ್ನು ನಾನು ರಕ್ಷಿಸಲು ಇಚ್ಛಿಸುತ್ತೇನೆಯೋ ಅಂತಹವರನ್ನು ನಾನು ಉಗ್ರ ಎಂದರೆ ಸರ್ವೋಚ್ಚರನ್ನಾಗಿ ಮಾಡುತ್ತೇನೆ. ಕೆಲವರನ್ನು ಬ್ರಹ್ಮರನ್ನಾಗಿಯೂ ಮಾಡುತ್ತೇನೆ; ಕೆಲವರನ್ನು ಋಷಿಗಳನ್ನಾಗಿಯೂ ಮಾಡುತ್ತೇನೆ; ಕೆಲವರನ್ನು ಪ್ರಾಜ್ಞರನ್ನಾಗಿಯೂ ಮತ್ತೆ ಕೆಲವರನ್ನು ಮೇಧಾವಿಗಳನ್ನಾಗಿಯೂ ಮಾಡುತ್ತೇನೆ.