ಬೇಲೂರು ಮಠ
೧೯೩೧

ಮಹಾಪುರುಷಜಿ ಮಹಾರಾಜರ ಶರೀರ ಎಷ್ಟು ದುರ್ಬಲವಾಗಿತ್ತೆಂದರೆ, ಇನ್ನೊಬ್ಬರ ಸಹಾಯವಿಲ್ಲದೆ ತಮ್ಮ ಮಂಚದ ಮೇಲಿಂದ ಕೆಳಗೆ ಇಳಿಯಲೂ ಕಷ್ಟವಾಗಿತ್ತು. ರಾತ್ರಿಯೆಲ್ಲ ಸ್ವಲ್ಪ ಹೆಚ್ಚು ಕಡಿಮೆ  ನಿದ್ದೆಯೆ ಇರಲಿಲ್ಲ. ಆದ್ದರಿಂದ ರಾತ್ರಿಯೆಲ್ಲ ಸೇವಕರಲ್ಲಿ ಒಬ್ಬರಲ್ಲ ಒಬ್ಬರು ಸರ್ವಕ್ಷಣವೂ ಅವರೆಡೆ ಇರುತ್ತಿದ್ದರು. ಇಡೀ ಇರುಳೆಲ್ಲ ಭಗವದ್‌ಭಾವದಲ್ಲಿ ಮಗ್ನರಾಗಿರುತ್ತಿದ್ದರು; ಕೆಲವು ಸಾರಿ ಹತ್ತಿರವಿದ್ದ ಸೇವಕನಿಗೆ ಕಥಾಮೃತ, ಗೀತೆ, ಉಪನಿಷತ್ತು ಅಥವಾ ಭಾಗವತ ಮುಂತಾದ ಗ್ರಂಥಗಳಿಂದ ಯಾವುದಾದರೂ ನಿರ್ದಿಷ್ಟ ಅಂಶಗಳನ್ನು ಓದಿ ಹೇಳಲು ಹೇಳಿ, ತನ್ಮಯರಾಗಿ ಆಲಿಸುತ್ತಿದ್ದರು. ಮತ್ತೆ ಒಮ್ಮೊಮ್ಮೆ ಸುಮ್ಮನೆಯೆ ಧ್ಯಾನಸ್ಥರಾಗಿರುತ್ತಿದ್ದರು; ಇಲ್ಲವೆ ಶ್ರೀ ಶ್ರೀಠಾಕೂರರ ಹತ್ತಿರ ಕೈಜೋಡಿಸಿ ಕಾತರ ಭಾವದಿಂದ ಪ್ರಾರ್ಥನೆ ಮಾಡುತ್ತಿದ್ದರು, ಸಮಗ್ರ ಜಗತ್ತಿನ ಕಲ್ಯಾಣಕ್ಕಾಗಿ. ಆಹಾ! ಆಗ ಎಂತಹ ಆವೇಶಪೂರ್ಣವಾದ ಭಾಷೆ ಹೊರಹೊಮ್ಮುತ್ತಿತ್ತು ಅವರ ಬಾಯಿಂದ! ಕೆಲವು ಸಾರಿ ದೇವ ದೇವಿಯರ ಭಾವಚಿತ್ರಗಳನ್ನು ಎದೆಗೊತ್ತಿ ಕೊಂಡು ಮಲಗಿರುತ್ತಿದ್ದರು. ಅಂತೂ ಸರ್ವದಾ ಯಾವುದಾದರೊಂದು ದಿವ್ಯ ಭಾವದಲ್ಲಿರುತ್ತಿದ್ದರು. ಯಾವಾಗಲಾದರೂ ಒಮ್ಮೆ ಸೇವಕನು “ಮಹಾರಾಜ್, ಸ್ವಲ್ಪ ಮಲಗುವುದಿಲ್ಲವೆ?” ಎಂದು ಕೇಳಿದರೆ “ಅಯ್ಯಾ, ನನಗಿನ್ನೆಲ್ಲಿ ನಿದ್ದೆ?” ಎಂದು ಹೇಳಿ ಹೀಗೆಂದು ಹಾಡತೊಡಗುತ್ತಿದ್ದರು, ಸ್ವರ ಸಹಿತ ರಾಗವಾಗಿ:

ನಿದ್ದೆ ಬಿರಿಯಿತು : ಇನ್ನೆಲ್ಲಿ ನಿದ್ದೆ ನನಗೆ?
ಯೋಗದಲ್ಲಿ ಸರ್ವದಾ ಜಾಗ್ರತನು ನಾನು.
ಯೋಗನಿದ್ರೆಯನೆ ನಿನಗರ್ಪಿಸಿಹೆ, ತಾಯಿ,
ನಿದ್ದೆಗೆಯ್ಸಿಹೆ ನಿದ್ದೆಯನೆ ನಾನು.
ಲಭಿಸಿರುವುದೆನಗೊಂದು ದಿವ್ಯ ಭಾವ,
ಅನುಭಾವಿಯೊಬ್ಬನಿಂದದನು ಕಲಿತೆ.
ಎಲ್ಲಿ ಇರುಳಿಲ್ಲವೋ ಆ ದೇಶದವನೊಬ್ಬನನು ಕಂಡೆನಮ್ಮಾ;
ನನಗೆರಡು ಒಂದೇ ಆ ದಿವಾ ಸಂಧ್ಯೆ:
ಇನ್ನೆನಗೆ ಇಹುದೆ ಸಂಧ್ಯಾವಂದನೆ?

ಒಮ್ಮೆ ನಿದ್ದೆಯ ವಿಚಾರವಾಗಿ ಮಾತಾಡುತ್ತಾ ಇಂತೆಂದರು: “ಚಂಡಿಯಲ್ಲಿ ಹೇಳಿದೆ: ನಿದ್ದೆ ಬೇರೆ ಏನೂ ಅಲ್ಲ; ತಾಯಿಯೆ ನಿದ್ರಾರೂಪಿಣಿ ಎಂದು. ‘ಯಾ ದೇವಿ ಸರ್ವಭೂತೇಷು ನಿದ್ರಾರೂಪೇಣ ಸಂಸ್ಥಿತಾ.’ ತಾಯಿ ಎಲ್ಲದರ ಅಧಿಷ್ಠಾನ ರೂಪಿಣೀ, ಚರಾಚರ ಎಲ್ಲವನ್ನೂ ತುಂಬಿದ್ದಾಳೆ. ಅವಳು ಅಲ್ಲದುದು ಯಾವುದೂ ಇಲ್ಲ. ‘ಆಧಾರ ಭೂತಾ ಜಗತಸ್ತಮೇಕಾ.’ ಆ ತಾಯಿಯೆ ವಿಶ್ವ ಬ್ರಹ್ಮಾಂಡದ ಏಕಮಾತ್ರ ಆಧಾರ. ತಾಯಿ ನಮ್ಮ ಹೃದಯಕಂದರವನ್ನು ಆಲೋಕಿತವನ್ನಾಗಿ ಮಾಡುತ್ತಾ ಸರ್ವಕ್ಷಣವೂ ವಿರಾಜಮಾನಳಾಗಿದ್ದಾಳೆ. ಆಕೆಯ ದರ್ಶನಮಾತ್ರದಿಂದಲೆ ಸರ್ವ ಶ್ರಾಂತಿಯೂ ದೂರವಾಗಿ ಹೋಗುತ್ತದೆ; ಆಮೇಲೆ ನಿದ್ದೆಯ ಅವಶ್ಯಕತೆಯ ಬೋಧವೂ ತೋರುವುದಿಲ್ಲ. ಯಾವಾಗಲಾದರೂ ಒಂದಿಷ್ಟು ಶ್ರಾಂತಿ ಬೋಧಧವಾದೊಡನೆ ಒಂದು ಕ್ಷಣ ತಾಯಿಯ ಸಕೃದ್ದರ್ಶನ ಪಡೆಯಲು ಪ್ರಯತ್ನಿಸುತ್ತೇನೆ. ಸರಿ, ಚೇತನದಲ್ಲೆಲ್ಲ ಆನಂದಪ್ರವಾಹ! ಶ್ರಾಂತಿಯೆಲ್ಲ ಸಾವಿರ ಮೈಲಿ ಆಚೆ ಓಡುತ್ತದೆ.

ರಾತ್ರಿ ಪ್ರಾಯಶಃ ಮೂರು ಗಂಟೆ. ನಾಲ್ಕೂ ದಿಕ್ಕೂ ನಿಸ್ತಬ್ಧ. ಸಮಸ್ತ ಜಗತ್ತು ನಿದ್ರತಿ ಶಿಶುವಿನಂತೆ ಸುಷುಪ್ತಿಯ ಮಡಿಲಲ್ಲಿ ವಿಶ್ರಾಂತಿ ಪಡೆದಿತ್ತು. ಸಮಗ್ರ ಮಠವೂ ಗಂಭೀರ ಧ್ಯಾನಮಗ್ನವಾದಂತಿತ್ತು. ಮಹಾಪುರುಷಜಿಯ ಕೊಠಡಿಯಲ್ಲಿ ಒಂದು ಸಣ್ಣ ವಿದ್ಯುದ್ದೀಪ ಮಂದಕಾಂತಿ ಬೀರುತ್ತಿತ್ತು. ಅವರು ಪಕ್ಕದಲ್ಲಿದ್ದ ಸೇವಕ ಸಾಧುವನ್ನು ಕುರಿತು ಹೇಳಿದರು: “ನೋಡುವ ಗಂಭೀರ ರಾತ್ರಿಯಲ್ಲಿ ಚೆನ್ನಾಗಿ ಜಪಮಾಡಬೇಕು, ಇದೀಗ ಅತ್ಯಂತ ಸುಸಮಯ ಜಪ ಧ್ಯಾನಗಳಿಗೆ. ಜಪ ಮಾಡಲು ಕುಳಿತುಕೊಂಡರೆ ನಿದ್ದೆ ಬರುವ ಹಾಗೆ ಆಗುತ್ತದೆ; ಆದರೆ ಅದಕ್ಕೆ ಸೋಲದೆ ಜಪ ಮಾಡುತ್ತಾ ಹೋಗಬೇಕು. ಸ್ವಲ್ಪಕಾಲದ ಮೇಲೆ ನಿನಗೆ ಗೊತ್ತಾಗುತ್ತದೆ, ಜಪ ಮಾಡುತ್ತಾ ಮಾಡುತ್ತಾ ನಿದ್ದೆ ಬಂದಹಾಗೆ ಆದರೂ ಒಳಗೊಳಗೇ ಜಪ ನಿಲ್ಲದೆ ಚೆನ್ನಾಗಿ ನಡೆಯುತ್ತಿರುತ್ತದೆ. ತೂಕಡಿಕೆ ಬಂದರೂ ಕುಳಿತುಕೊಂಡೇ ಇರುವಂತೆ ಆಸನ ಸಿದ್ಧಪಡಿಸಿಕೊಳ್ಳಬೇಕು. ಯಾವಾಗಲಾದರೂ ತುಂಬ ನಿದ್ದೆ ಬಂದರೆ ಆಸನ ಬಿಟ್ಟೆದ್ದು, ನಿಂತುಕೊಂಡೋ ಅಥವಾ ನಡೆದಾಡುತ್ತಲೋ ಜಪ ಮುಂದುವರಿಸಬೇಕು. ‘ಕೈಯಲ್ಲಿ ಬಾಯಲ್ಲಿ ಹರಿನಾಮ ‘. ಅಂದರೆ, ನಡೆಯುತ್ತಿರಲಿ, ಕೆಲಸ ಮಾಡುತ್ತಿರಲಿ ಎಲ್ಲ ಸಮಯಗಳಲ್ಲಿಯೂ ಮನಸ್ಸಿನಲ್ಲಿಯೆ ಜಪ ಮಾಡುತ್ತಿರಬೇಕು. ಈ ರೀತಿ ಕೆಲಕಾಲ ಜಪಮಾಡುತ್ತಾ ಇರು; ಆಮೇಲೆ ಗೊತ್ತಾಗುತ್ತದೆ, ಮನಸ್ಸಿನ ಒಂದು ಅಂತಹ ಅಂಶ ಸರ್ವಕ್ಷಣವೂ ಜಪ ಮಾಡುತ್ತಲೇ ಇರುತ್ತದೆ – ಒಂದು ಅಂತಃಪ್ರವಾಹಿಯಾದ ಸ್ರೋತದಂತೆ ಸರ್ವಾವಸ್ಥೆಗಳಲ್ಲಿಯೂ ಜಪ ಮುಂದುವರಿಯುತ್ತಿರುತ್ತದೆ. ಹೀಗೆ ಮನಸ್ಸಿಟ್ಟು ಪಟ್ಟುಹಿಡಿದು ಎರಡು ಮೂರು ವರ್ಷ ಬಿಡದೆ ಹಗಲಿರುಳೂ ಜಪಮಾಡಲು ಸಮರ್ಥನಾದರೆ ಆಮೇಲೆ ನಿನಗೆ ಗೊತ್ತಾಗುತ್ತದೆ, ಸಮಸ್ತವೂ ನಿನ್ನ ಅಧೀನಕ್ಕೆ ಬರುತ್ತಿರುವಂತೆ. ಚಂಡಿಯಲ್ಲಿ ‘ಮಹಾರಾತ್ರಿ ‘ಯ ವಿಷಯವಿರುವುದು ನಿನಗೆ ಗೊತ್ತಷ್ಟೆ? ಆ ‘ಮಹಾರಾತ್ರಿ ‘ಯೆ ಸಾಧನೆ ಭಜನೆಗಳಿಗೆ ಪ್ರಶಸ್ತಿ ಸಮಯ. ಆಗ ಒಂದು ಆಧ್ಯಾತ್ಮಿಕ ಧಾರೆಯ ಅನುಭವವಾಗುತ್ತದೆ. ಸಾಧುವಿಗೇಕೆ ರಾತ್ರಿ ಅಷ್ಟೊಂದು ನಿದ್ರೆ? ಒಂದೊ ಎರಡೊ ಗಂಟೆ ನಿದ್ದೆ ಮಾಡಿದರೆ ಯಥೇಷ್ಟವಾಯಿತು. ರಾತ್ರಿಯನ್ನೆಲ್ಲ ನಿದ್ದೆಯಲ್ಲಿ ಕಳೆದರೆ ಅವನು ಧ್ಯಾನ ಜಪ ಮಾಡುವುದು ಯಾವಾಗ? ಮಹಾನಿಶೆಯಲ್ಲಿ ಸಮಗ್ರ ಪ್ರಕೃತಿಯೂ ಶಾಂತ ಭಾವಧಾರಣೆ ಮಾಡುತ್ತದೆ. ಆಗ ಸ್ವಲ್ಪ ಪ್ರಯತ್ನಿಸಿದರೆ ಸಾಕು ಮನಸ್ಸು ಸ್ಥಿರವಾಗುತ್ತದೆ. ಹೃದಯದಲ್ಲಿ ಉಚ್ಚಭಾವ, ಉಚ್ಚ ಚಿಂತಾ, ತಮಗೆ ತಾವೆ ಉಂಟಾಗುತ್ತವೆ.

ಸೇವಕ ಸಾಧು ಹೆದರಿ ಹೆದರಿ ಹೇಳತೊಡಗಿದನು: “ನನಗೂ ಜಪ ಧ್ಯಾನಗಳಲ್ಲಿ ಬಹಳಕಾಲ ಮನಸ್ಸು ನಿಲ್ಲಿಸಲು ಸಾಧ್ಯವಾಗುತ್ತಿಲ್ಲ. ಜಪಕ್ಕೆ ಕುಳಿತೊಡನೆಯೆ ಏನೇನೊ ಆಲೋಚನೆಗಳು ಮನವನ್ನೆಲ್ಲ ಆಕ್ರಮಿಸಿ ಬಗ್ಗಡ ಮಾಡಿಬಿಡುತ್ತವೆ. ಆದರೆ ತಮ್ಮ ಸೇವೆಯಲ್ಲಿ ತೊಡಗಿರುವಾಗ ಮತ್ತು ತಮಗಾಗಿ ಇತರ ಕರ್ತವ್ಯ ಮಾಡುತ್ತಿರುವಾಗ ಭಗವಂತನ ಸ್ಮರಣೆ ಹೆಚ್ಚಾಗಿ ಮನಸ್ಸಿಗೆ ಬರುತ್ತಿರುತ್ತದೆ. ಆಗ ಮನಸ್ಸು ಶಾಂತಭಾವ ಧಾರಣ ಮಾಡುತ್ತದೆ. ಆನಂದವೂ ಉಂಟಾಗುತ್ತದೆ. ಆದರೆ ಯಾವಾಗ ಜಪಧ್ಯಾನಕ್ಕೆ ಕುಳಿತುಕೊಳ್ಳುತ್ತೇನೆಯೊ ಆಗ ಒಡನೆಯೆ ಮನಸ್ಸು ಒಮ್ಮಿಂದೊಮ್ಮೆ ವಿದ್ರೋಹಿಯಾದಂತಾಗುತ್ತದೆ. ಆ ಸ್ಥಿತಿಯಲ್ಲಿ ಮನಸ್ಸಿನೊಡನೆ ಹೋರಾಡಿ ಹೋರಾಡಿ ಒಂದು ಮಹಾ ಅಶಾಂತಿ ಅನುಭವವಾಗುತ್ತದೆ; ದಣಿದು ಸಾಕಾಗಿ ಆಸನ ಬಿಟ್ಟು ಎದ್ದುಬಿಡುತ್ತೇನೆ. ಮೊದಲು ನನಗೆ ಹೀಗೆ ಆಗುತ್ತಿರಲಿಲ್ಲ; ಈ ತೊಂದರೆ ಇತ್ತೀಚೆಗೆ ಷುರುವಾಗಿದೆ. ಅದರಲ್ಲಿಯೂ ವಿಶೇಷವಾಗಿ ಯಾವತ್ತಿನಿಂದ ತಮ್ಮ ಸೇವೆಗೆ ಮೊದಲು ಮಾಡಿದೆನೊ ಅವೊತ್ತಿನಿಂದ ಮನಸ್ಸಿನ ಈ ಅವಸ್ಥೆ ಎದ್ದು ಕಾಣುತ್ತಿದೆ.

ಸೇವಕನ ಮನಸ್ಸಿನ ಅಶಾಂತ ಅವಸ್ಥೆಯ ವಿಚಾರವಾಗಿ ಕೇಳಿ ಮಹಾಪುರುಷಜಿ ಅನೇಕ ಕ್ಷಣ ಸುಮ್ಮನೆ ಕುಳಿತಿದ್ದರು. ಆಮೇಲೆ ಮೆಲ್ಲಗೆ ಹೇಳತೊಡಗಿದರು: “ಹೌದು, ಕೆಲಕೆಲವು ಮನಸ್ಸು ಈ ಬಗೆಯ ವಿದ್ರೋಹ ಭಾವದಲ್ಲಿರುತ್ತವೆ. ಆ ತರಹದ ಅಶಾಂತ ಮನಸ್ಸನ್ನೂ ಕ್ರಮೇಣ ಶಾಂತಗೊಳಿಸಿ ಧ್ಯೇಯ ವಸ್ತುವಿನಲ್ಲಿ ಏಕಾಗ್ರ ಮಾಡಲು ಸಾಧ್ಯವಾಗುತ್ತದೆ. ಧ್ಯಾನ ಜಪ ಮಾಡುವುದಕ್ಕಾಗಿ ಆಸನದ ಮೇಲೆ ಕುಳಿತೊಡನೆಯೆ ಜಪವನ್ನಾಗಲಿ ಧ್ಯಾನವನ್ನಾಗಲಿ ಷುರು ಮಾಡಬೇಡ. ಮೊದಲು ಧೀರಭಾವದಲ್ಲಿ ಕುಳಿತು ಠಾಕೂರರ ಹತ್ತಿರ ಕಾತರನಾಗಿ ಪ್ರಾರ್ಥನೆ ಮಾಡಬೇಕು. ಠಾಕೂರರು ಜೀವಂತ ಸಮಾಧಿ ಸ್ವರೂಪರಾಗಿದ್ದಾರೆ. ಅವರಲ್ಲಿ ಹೃತ್ಪೂರ್ವಕ ಪ್ರಾರ್ಥನೆ ಮಾಡಿ, ಅವರನ್ನೆ ಕುರಿತು ನೆನೆದರೆ, ಮನಸ್ಸು ಸಮಾಹಿತವಾಗುತ್ತದೆ. ಹೀಗೆ ಪ್ರಾರ್ಥನೆ ಮಾಡು; ‘ಪ್ರಭೂ, ನನ್ನ ಮನಸ್ಸನ್ನು ಸ್ಥಿರಗೊಳಿಸು; ನನ್ನ ಮನಸ್ಸನ್ನು ಶಾಂತವನ್ನಾಗಿ ಮಾಡು.’ ಹೀಗೆ ಸ್ವಲ್ಪ ಹೊತ್ತು ಪ್ರಾರ್ಥನೆ ಮಾಡಿದ ಮೇಲೆ ಠಾಕೂರರ ಸಮಾಧಿ ಸ್ಥಿತಿಯನ್ನು ಪರಿಭಾವಿಸು. ನೀನು ನೋಡುತ್ತಿರುವ ಅವರ ಭಾವಚಿತ್ರ ಉಚ್ಚ ಸಮಾಧಿಸ್ಥಿತಿಯದು. ಸಾಧಾರಣರು ಈ ಚಿತ್ರದಿಂದ ಯಾವ ತಾತ್ಪರ್ಯವನ್ನೂ ಗ್ರಹಿಸಲು ಸಮರ್ಥರಾಗುವುದಿಲ್ಲ. ಆಮೇಲೆ ಸುಮ್ಮನೆ ಕುಳಿತು ಮನಸ್ಸು ಎತ್ತ ಎತ್ತಕಡೆ ಅಲೆಯುತ್ತದೆ ಎಂಬವುದನ್ನು ಲಕ್ಷಿಸಬೇಕು. ನೀನೂ ಮನಸನ್ನು ಹಿಂಬಾಲಿಸು. ಮನಸ್ಸು ನಿನ್ನದೆ ಆಗಿದೆ; ನೀನು ಮನಸ್ಸಿನಿಂದ ಬೇರೆ, ಸ್ವತಂತ್ರ; ನೀನು ಆತ್ಮಸ್ವರೂಪ ಧೀರಭಾವದಿಂದ ಪ್ರೇಕ್ಷಕ ದ್ರಷ್ಟಾರನಂತೆ ಕುಳಿತು ಮನಸ್ಸಿನ ಗತಿ ವಿಧಿಗಳನ್ನು ಲಕ್ಷಿಸುತ್ತಾ ಹೋಗಬೇಕು. ಸ್ವಲ್ಪಕಾಲ ಅಲೆದೂ ಅಲೆದೂ ಮನಸ್ಸು ತನಗೆ ತಾನೆ ದಣಿದು ಹೋಗುತ್ತದೆ. ಆಗ ಮನಸ್ಸನ್ನು ಹಿಡಿದುತಂದು ಠಾಕೂರರ ಧ್ಯಾನದ ನೊಗವನ್ನು ಅದರ ಹೆಗಲ ಮೇಲೆ ಹೇರು. ಮನಸ್ಸು ಎಷ್ಟು ಸಾರಿ ಬೇರೆ ಕಡೆಗೆ ಪಲಾಯನ ಮಾಡುತ್ತದೆಯೋ ಅಷ್ಟು ಸಾರಿಯೂ ಅದನ್ನು ಹಿಡಿದು ತಂದು ನೊಗಕ್ಕೆ ಹೂಡು. ಹೀಗೆ ಮಾಡುತ್ತಾ ಮಾಡುತ್ತಾ ಮನಸ್ಸು ಕ್ರಮೇಣ ಶಾಂತವಾಗುವುದು ಅನುಭವಕ್ಕೆ ಬರುತ್ತದೆ. ಆಗ ಧ್ಯಾನ ಸಾಧ್ಯವಾಗುತ್ತದೆ. ಕೆಲವು ದಿನ ನಾನು ಹೇಳಿದಂತೆ ಮಾಡಿ ನೋಡು; ಮನಸ್ಸು ನಿನ್ನ ವಶಕ್ಕೆ ಬರುತ್ತದೆ. ಆದರೆ ಅತ್ಯಂತ ನಿಷ್ಠೆಯಿಂದ ನಿಯಮಿತ ಭಾವದಲ್ಲಿ ಅದನ್ನು ಮಾಡಬೇಕಾಗುತ್ತದೆ.

ಸೇವಕ ಸಾಧು: “ನನ್ನ ಮನಸ್ಸಿನ ಈ ಅವಸ್ಥೆಯನ್ನು ನೋಡಿದರೆ ಅದರಿಂದ ಸಾಧನೆ ಭಜನೆ ಏನೇನೂ ಸಾಧ್ಯವಾಗುವಂತೆ ತೋರುವುದಿಲ್ಲ. ತಮ್ಮ ಆಶೀರ್ವಾದವೊಂದೇ ನನಗಿರುವ ಭರವಸೆ.”

ಮಹಾಪುರುಷಜಿ ತುಂಬ ಅಕ್ಕರೆಯಿಂದ: “ಅಯ್ಯಾ, ಆಶೀರ್ವಾದ ಯಥೇಚ್ಛವಾಗಿದೆ. ನೀನು ಸರ್ವಸ್ವವನ್ನೂ ತ್ಯಜಿಸಿ ಠಾಕೂರರನ್ನೇ ಜೀವನ ಸರ್ವಸ್ವವನ್ನಾಗಿ ಮಾಡಿಕೊಂಡಿದ್ದೀಯೆ; ನಿನಗೆ ಆಶೀರ್ವಾದ ಮಾಡದಿದ್ದರೆ ಇನ್ನಾರಿಗೆ ತಾನೆ ಮಾಡಲು ಸಾಧ್ಯವಾಗುತ್ತದೆ. ಆದರೂ ನೀನೂ ಕೂಡ  ಸ್ವಲ್ಪ ಕೆಲಸ ಮಾಡಬೇಕು. ಗುರುಮಹಾರಾಜ್ ಹೇಳಿದ್ದಾರೆ  ‘ಕೃಪೆಯ ಗಾಳಿಯೇನೊ ಸದಾ ಬೀಸುತ್ತಿರುತ್ತದೆ; ನೀನು ಮಾತ್ರ ನಿನ್ನ ಪಟವನ್ನು ಬಿಚ್ಚಬೇಕು.’ ಪಟ ಬಿಚ್ಚುವುದೆಂದರೆ ನಿನ್ನ ಸ್ವಂತ ಪ್ರಯತ್ನ. ಏಕಾಂತಿಕ ಅಧ್ಯವಸಾಯ, ಪುರುಷಕಾರ ಬೇಕು-ವಿಶೇಷವಾಗಿ ಸತ್ ಕಾರ್ಯದಲ್ಲಿ, ಸಾಧನೆ ಭಜನೆಯಲ್ಲಿ – ಆತ್ಮಜ್ಞಾನ ಪಡೆಯುವುದಕ್ಕಾಗಿ ಸಿಂಹವಿಕ್ರಮ ಪ್ರಕಾಶಗೊಳಿಸಬೇಕು. ಉದ್ಯಮವಿಲ್ಲದೆ, ಪುರುಷಕಾರವಿಲ್ಲದೆ ಏನೂ ಆಗುವುದಿಲ್ಲ. ಒಮ್ಮೆ ಪಟ ಬಿಚ್ಚಿದೆಯೆಂದರೆ ಕೃಪೆಯ ಗಾಳಿ ತಾನಾಗಿಯೆ ಬೀಸಿಯೆ ಬೀಸುತ್ತದೆ. ಎಲ್ಲಿಯವರೆಗೆ ಮನುಷ್ಯನಿಗೆ ಅಹಂಬುದ್ಧಿ ಇರುವುದೊ ಅಲ್ಲಿಯವರೆಗೆ ಅಧ್ಯವಸಾಯ ಇರಬೇಕಾಗುತ್ತದೆ. ನೀನು ಸಾಧು ಆಗಿದ್ದೀಯೆ; ಅಪ್ಪ ಅಮ್ಮ ಮನೆ ಎಲ್ಲ ಬಿಟ್ಟು ಬಂದಿದ್ದೀಯೆ. ಅದೆಲ್ಲ ಏಕೆ? ಭಗವಂತನನ್ನು ಸಾಕ್ಷಾತ್ಕರಿಸಬೇಕು ಎಂದಲ್ಲವೆ? ನಿನ್ನ ಪೂರ್ವಜನ್ಮಾರ್ಜಿತ ಬಹುಸುಕೃತಿಯ ಪರಿಣಾಮವಾಗಿ ಭಗವತ್‌ಕೃಪೆಯಿಂದ ಗುರುಮಹಾರಾಜರ ಆಶ್ರಯಕ್ಕೆ ಬಂದು ಬಿದ್ದಿದ್ದೀಯೆ; ಅವರ ಪವಿತ್ರ ಸಂಘದಲ್ಲಿ ಸ್ಥಾನ ಪಡೆದಿದ್ದೀಯೆ; ವಿಶೇಷತಃ ನಮ್ಮ ಬಳಿ ಸರ್ವಕ್ಷಣವೂ ಇರುವ ಸುಯೋಗವೂ ಠಾಕುರರ ದಯೆಯಿಂದ ನಿನಗೆ ಒದಗಿದೆ. ಇಂಥ ಎಲ್ಲ ಸಂಯೋಗಗಳನ್ನು ಪಡೆದೂ ಜೀವನದ ಲಕ್ಷ್ಯದಿಂದ ಭ್ರಷ್ಟನಾಗಿ ಹೋಗುವುದೆಂದರೆ ಅದಕ್ಕಿಂತಲೂ ಪರಿತಾಪದ ವಿಷಯ ಮತ್ತೊಂದಿರಲು ಸಾಧ್ಯವೆ? ಮನಸ್ಸನ್ನು ಗಟ್ಟಿಮಾಡಿಕೊ. ಆತನ ಪತಿತಪಾವನ ನಾಮವನ್ನು ಹಿಡಿದುಕೊಂಡು ಈ ಭಾವಸಾಗರವನ್ನು ದಾಟಲು ಹೊರಟಿದ್ದೀಯೆ. ಏನೋ ಒಂದೆರಡು ದೊಡ್ಡ ಅಲೆಗಳೆದ್ದು ಬರುತ್ತಿರುವುದನ್ನು ನೋಡಿದ ಮಾತ್ರಕ್ಕೆ ಹೆದರಿ, ಗಾಬರಿಯಾಗಿ, ಗಡಿಬಿಡಿಯಿಂದ ಹುಟ್ಟನ್ನು ಕೆಳಗೆ ಹಾಕುವುದೇ? ಇದೆಲ್ಲ ಬರಿಯ ಮಹಾಮಾಯೆ ಬಿಭೀಷಿಕೆ. ಇದನ್ನೆಲ್ಲ ತೋರಿಸಿ ಆಕೆ ಸಾಧಕನ ಪರೀಕ್ಷೆ ಮಾಡುತ್ತಾಳೆ. ಅದು ಯಾವುದರಿಂದಲೂ ಸಾಧಕನ ಮನಸ್ಸು ವಿಚಲಿತವಾಗದಿದ್ದರೆ, ಸಾಧಕ ಯಾವಾಗ ದೃಢ ಪ್ರತಿಜ್ಞನಾಗಿ ಸುಮೇರುವಿನಂತೆ ಅಚಲವೂ ಆಗುತ್ತಾನೊ, ಆಗ ಮಹಾಮಾಯೆ ಪ್ರಸನ್ನಳಾಗಿ ಮುಕ್ತಿಯ ಬಾಗಿಲನ್ನು ತೆರೆಯುತ್ತಾಳೆ. ಆಕೆ ಪ್ರಸನ್ನಳಾದರೆ ಸರ್ವವೂ ಸಿದ್ಧಿಸುತ್ತದೆ. ಚಂಡಿಯಲ್ಲಿ; ‘ಸೈಷಾ ಪ್ರಸನ್ನಾ ವರದಾ ನೃಣಾಂ ಭವತಿ ಮುಕ್ತಯೇ!’ ಬುದ್ಧದೇವನ ಜೀವನ ಚರಿತ್ರೆಯಲ್ಲಿ ಓದಿಲ್ಲವೆ? ಸ್ವಯಂ ಬುದ್ಧದೇವನಿಗೂ ಮಹಾಮಾಯೆ ಮಾರನ ರೂಪ ಧರಿಸಿ ಎಂತೆಂತಹ ಬಿಭೀಷಿಕೆಗಳನ್ನು (ಬೆಚ್ಚಲು ಭೂತಗಳನ್ನು) ತೋರಿಸಿದ್ದಾಳೆ. ಆದರೆ ಆತನು ಏಕಾಂತ ದೃಢಪ್ರತಿಜ್ಞನಾಗಿ ಕುಳಿತು ಸಂಕಲ್ಪ ಮಾಡುತ್ತಾನೆ:

‘ಇತಿಹಾಸವೇ  ಶುಷ್ಯತು ಮೇ ಶರೀರಂ
ತ್ವಗಸ್ಥಿ ಮಾಂಸಂ ಪ್ರಲಯಂ ಚ ಯಾತು |
ಅಪ್ರಾಪ್ಯ ಬೋಧಿಂ ಬಹುಕಲ್ಪ ದುರ್ಲಭಂ
ನೈವಾಸನಾತ್ ಕಾಯಮತಶ್ಚಲಿಷ್ಯತೇ ||’

ಅರ್ಥಾತ್‌ ‘ಈ ಆಸನದಲ್ಲಿಯೆ ನನ್ನ ಶರೀರ ಒಣಗಿ ಮುದುಡಿ ಹೋಗಲಿ: ತೊಗಲು ಎಲುಬು ಮಾಂಸ ಎಲ್ಲ ಧ್ವಂಸವಾಗಲಿ; ಆದರೆ ಬಹುಕಲ್ಪ ದುರ್ಲಭವಾದ ತತ್ತ್ವಜ್ಞಾನ ಉಂಟಾಗದಿದ್ದರೆ ಈ ಆಸನದಿಂದ ನನ್ನ ಶರೀರ ವಿಚಲಿತವಾಗುವುದಿಲ್ಲ.’ ಎಂತಹ ದೃಢಸಂಕಲ್ಪ! ತರುವಾಯ ತಾಯಿ ಪ್ರಸನ್ನೆಯಾಗಿ ನಿರ್ವಾಣದ ದ್ವಾರವನ್ನು ಉನ್ಮೋಚನ ಮಾಡಿಕೊಟ್ಟಳು; ಅಲ್ಲದೆ ಬುದ್ಧತ್ವವನ್ನು ಪಡೆದು ಬುದ್ಧದೇವ ಧನ್ಯನಾದನು. ಠಾಕೂರರ ಜೀವನದಲ್ಲಿಯೂ ಹಾಗೇ ಆಯಿತು. ಅಯ್ಯಾ, ಅದಕ್ಕೆ ನಾನು ಹೇಳುತ್ತಿರುವುದು ನಿನಗೆ, ದೃಢಪ್ರತಿಜ್ಞನಾಗಿ ಸಾಧನೆ ಭಜನೆಯಲ್ಲಿ ತೊಡಗು ಎಂದು. ಮನಸ್ಸು ನಿಲ್ಲುವುದಿಲ್ಲ ಎಂದು ಜಪಧ್ಯಾನ ಬಿಟ್ಟುಬಿಡಲು ಆಗುತ್ತದೆಯೆ? ಕಾಣುವುದಿಲ್ಲವೆ ನಿನಗೆ, ನಮ್ಮ ಜೀವನ? ಠಾಕೂರರ ಶಿಷ್ಯರಲ್ಲಿ ಒಬ್ಬೊಬ್ಬರ ಜೀವನವೂ ಕಠೋರ ಸಾಧನೆಯೆ ಜೀವಂತ ಸ್ವರೂಪ. ಮಹಾರಾಜ್, ಹರಿ ಮಹಾರಾಜ್, ಜೋಗಿನ್ ಮಹಾರಾಜ್ ಇವರೆಲ್ಲರೂ ಎಂತಹ ಕಠೋರ ತಪಸ್ಯೆ ಕೈಕೊಂಡಿರಲಿಲ್ಲ! ಆದರೂ ಸಾಕ್ಷಾತ್ ಯುಗಾವತಾರ ಠಾಕೂರರ ಅಜಸ್ರವಾದ ಕೃಪಾಲಾಭ ಉಂಟಾಗಿತ್ತು ಅವರಿಗೆ. ಶ್ರೀಗುರುಮಹಾರಾಜರಾದರೋ ತಮ್ಮ ಇಚ್ಛಾಮಾತ್ರದಿಂದಲೆ ಸಕಲರಿಗೂ ಬ್ರಹ್ಮಜ್ಞಾನ ನೀಡಲು ಸಮರ್ಥರಾಗಿದ್ದರು. ಸ್ಪರ್ಶಮಾತ್ರದಿಂದಲೆ ಸಮಾಧಿಸ್ಥರನ್ನಾಗಿ ಮಾಡುತ್ತಿದ್ದರೂ ಅವರು ನಮ್ಮನ್ನೆಲ್ಲ ಎಂತಹ ಕಠೋರಸಧನೆಗಳಲ್ಲಿ ತೊಡಗುವಂತೆ ಮಾಡುತ್ತಿದ್ದರು! ಭಗವಂತನ ಕೃಪೆ ಉಂಟಾಯಿತೆಂದರೆ ಸಾಧನೆಯ ಪಥವೂ ಸುಗಮವಾಗಿ ಬಿಡುತ್ತದೆ; ಬಾಧೆ ವಿಘ್ನಗಳೆಲ್ಲ ದೂರವಾಗಿ ಹೋಗುತ್ತವೆ. ಭಗವಂತ ಹೃದಯ ನೋಡುತ್ತಾನೆ; ಅವನು ನೋಡುವುದು ಅಂತರಿಕತೆಯನ್ನು. ವ್ಯಾಕುಲರಾಗಿ ಅಳುತ್ತಳುತ್ತಾ ಆತನನ್ನು ಕರೆದರೆ ಮೈದೋರಿಯೆ ತೋರುತ್ತಾನೆ. ಆತ ದಯೆ ತೋರಿ ಕಾಣಿಸಿಕೊಳ್ಳುತ್ತಾನಲ್ಲಾ ಅದೇನೇ ಆತನ ಕೃಪೆ. ಅವನಾದರೊ ಸ್ವಾಧೀನ, ಸ್ವತಂತ್ರ. ಯಾರ ಸಾಧನೆ ಭಜನೆಗೂ ಅವನು ವಶನಾಗಬೇಕೆಂದೇನಿಲ್ಲ; ಇಷ್ಟು, ಜಪ ಮಾಡಿದರೆ ಧ್ಯಾನ ಮಾಡಿದರೆ, ಇಷ್ಟು ಕಠೋರತೆಯನ್ನು ಅಭ್ಯಾಸ ಮಾಡಿದರೆ ಲೆಕ್ಕಾಚಾರವಾಗಿ ಅವರಿಗೆ ದರ್ಶನಕೊಟ್ಟು, ಬಿಡಬೇಕೇನು? ಹಾಗೇನಿಲ್ಲ. ಏಕಮಾತ್ರ ಆತನೆಯೆ ಬೇಕು ಎಂಬುದೆ ಸಾಧನೆಯ ಅರ್ಥ. ಜಗತ್ ಸಂಸಾರವನ್ನು ಬಿಸುಟು ಮಾನ ಯಶಸ್ಸು ದೇಹಸುಖ ಎಲ್ಲವನ್ನೂ ತ್ಯಜಿಸಿ, ಕೊನೆಗೆ ತನ್ನ ಅಸ್ತಿತ್ವವನ್ನೂ ಮರೆತು, ಇಹಕಾಲ ಪರಕಾಲವೆಲ್ಲವನ್ನೂ ತೊರೆದು, ಎಕಮಾತ್ರ ಅವನೊಬ್ಬನೆಯೆ ಬೇಕು ಎಂಬುದೇ ಸಾಧನೆಯ ಅರ್ಥ. ಯಾರು ಇಂತಹ ಭಾವದಿಂದ ಭಗವಂತನನ್ನು ಬಯಸುತ್ತಾರೊ ಅಂತಹವರಿಗೆ ಆತ ಕೃಪೆ ತೋರಿ ದರ್ಶನ ಕೊಡುತ್ತಾನೆ. ಅವನು ವಿಶೇಷ ಕೃಪೆ ತೋರಿ ದರ್ಶನ ಕೊಡುತ್ತಾನೆ ಎಂಬುದರಿಂದಲೆ ಜೀವಕ್ಕೆ ಆತನ ದರ್ಶನ ಸಾಧ್ಯ; ಅದೇ ಅವನ ಕೃಪೆ. ಆತನು ದಯೆತೋರಿ ದರ್ಶನ ಕೊಡದೆ ಇದ್ದರೆ ಜೀವಕ್ಕೆ ಹೇಗೆ ಸಾಧ್ಯವಾಗುತ್ತಿತ್ತು ಎಂದಾದರೂ ಆತನ ದರ್ಶನ ಪಡೆಯಲು? ಆತನು ಹೇಗೆ ಭಕ್ತವತ್ಸಲನೊ ಹಾಗೆಯೆ ಕೃಪಾಸಿಂಧುವೂ ಆಗಿದ್ದಾನೆ.

ಸೇವಕಸಾಧು: “ನಮ್ಮ ಏಕಮಾತ್ರ ಭರವಸೆ ಎಂದರೆ ತಾವು ಆಶ್ರಯ ದಯಪಾಲಿಸಿದ್ದೀರಿ ಎಂಬುದು. ಏನೇನಾದರೋ ನಮಗೆ ಶ್ರೇಯಸ್ಕರವೋ ಅದನ್ನು ತಾವು ಮಾಡಿಯೆ ಮಾಡುತ್ತೀರಿ. ಒಮ್ಮೆ ಆಶ್ರಯ ಕೊಟ್ಟಮೇಲೆ ತಾವು ನಮ್ಮನ್ನು ಕೈಬಿಡುವುದಿಲ್ಲ.”

ಮಹಾಪುರುಷಜಿ : “ಠಾಕೂರರು ಮಹಾ ಆಶ್ರಿತವತ್ಸಲರು; ಅವರು ಶರಣಾಗತ ಪಾಲಕರು. ಅವರು ಒಮ್ಮೆ ಯಾರ ಕೈ ಹಿಡಿಯುತ್ತಾರೊ ಅವರಿಗೆ ಈ ಭವಸಮುದ್ರದಲ್ಲಿ ಮುಳುಗಿಹೋಗುವ ಯಾವ ಭಯವೂ ಇಲ್ಲ. ಚಂಡಿಯಲ್ಲಿ ಇದೆ:  ‘ತ್ವಾಮಾಶ್ರಿತಾನಾಂ ನ ವಿಪನ್ನರಾಣಾಂ ತ್ವಾಮಾಶ್ರಿತಾ ಹ್ಯಾಶ್ರಯತಾಂ ಪ್ರಯಾನ್ತಿ’ ಅರ್ಥಾತ್,  ‘ನಿನಗೆ ಆಶ್ರಿತರಾದ ಮಾನವರಿಗೆ ವಿಪತ್ತು ಇಲ್ಲ; ಯಾರು ನಿನ್ನ ಆಶ್ರಯ ಪಡೆಯುತ್ತಾರೊ ಅವರು ಎಲ್ಲರಿಗೂ ಆಶ್ರಯಸ್ವರೂಪರಾಗತ್ತಾರೆ.’ ಮನೋವಾಕ್ಕಾಯಗಳಿಂದ ಠಾಕೂರರನ್ನು ಬಿಗಿಯಾಗಿ ಹಿಡಿದುಕೋ; ಅವರು ಭವಬಂಧನದಿಂದ ನಿನ್ನನ್ನು ಮುಕ್ತನನ್ನಾಗಿ ಮಾಡುತ್ತಾರೆ. ಠಾಕೂರರ ಪಾದಪದ್ಮದಲ್ಲಿ ಯಾರು ಅನನ್ಯ ಶರಣರಾಗಿರುತ್ತಾರೊ, ಯಾರಿಗೆ ನಾವು ಆಶ್ರಯ ಇತ್ತಿರುವೆವೊ, ಅವರು ತಮ್ಮ ಮುಕ್ತಿಯ ವಿಷಯದಲ್ಲಿ ಶಂಕೆಪಡುವ ಆವಶ್ಯಕತೆ ಏನೂ ಇಲ್ಲ. ಮುಕ್ತಿ ಅವರಿಗೆ ದೊರತೇ ದೊರೆಯುತ್ತದೆ. ಭಾ ಭಾರ ನಮ್ಮ ಮೇಲಿನದು – ಅದು ನೆರವೇರುವಂತೆ ನಾವು ನೋಡಿಕೊಳ್ಳುತ್ತೇವೆ. ಕೊನೆಹೊತ್ತಿನಲ್ಲಿ ಠಾಕೂರರು ಎಲ್ಲರನ್ನೂ ಕೈಹಿಡಿದು ಕರೆದೊಯ್ಯುತ್ತಾರೆ ಎಂಬುದೂ ನಿಶ್ಚಯ. ಆದರೆ ಬರಿಯ ಮುಕ್ತಿಲಾಭಕ್ಕಾಗಿ ಮಾತ್ರವೆ ಅಲ್ಲ ಸಾಧನೆ ಭಜೆನಗಳಲ್ಲಿ ನಿರತರಾಗುವುದು; ಸಾಧನೆ ಭಜನೆ ಮಾಡಿ ಈ ದೇಹದಲ್ಲಿರುವಾಗಲೆ ಭಗವತಂನನ್ನು ಪಡೆದು ಜೀವನ್ಮುಕ್ತರಾಗಿರುವುದಕ್ಕೆ. ಮನಃಪೂರ್ವಕ ಅವನನ್ನು ಕರೆ, ಪ್ರಾಣಭರನಾಗಿ ಅವನ ಹೆಸರು ಹೇಳು, ಅವನ ಭಾವದಲ್ಲಿ ಮುಳುಗಿಹೋಗು, ಜೀವನ್ಮುಕ್ತಿಯ ಆನಂದವನ್ನು ಅನುಭವಿಸುತ್ತೀಯೆ. ಅದೂ ಅಲ್ಲದೆ ಸ್ವಾಮೀಜಿ ಯಾವ ಸಂಘವನ್ನು ಕಟ್ಟಿದ್ದಾರೆಯೊ ಅದಕ್ಕೂ ಒಂದು ವಿಶೇಷ ಉದ್ದೇಶ ಇದೆ. ಯಾರು ಠಾಕೂರರ ಈ ಸಂಘದಲ್ಲಿ ಸ್ಥಾನಪಡೆಯುತ್ತಾರೊ ಅವರಲ್ಲಿ ಪ್ರತ್ಯೇಕವಾಗಿ ಒಬ್ಬೊಬ್ಬರ ಮೇಲೆಯೂ ಸ್ವಾಮೀ ಒಂದು ವಿರಾಟ್ ಜವಾಬ್ದಾರಿಯನ್ನು ಹೊರಿಸಿ ಹೋಗಿದ್ದಾರೆ. ಒಬ್ಬೊಬ್ಬ ಸಂನ್ಯಾಸಿಯ ಮತ್ತು ಒಬ್ಬೊಬ್ಬ ಬ್ರಹ್ಮಚಾರಿಯ ತ್ಯಾಗ ಮತ್ತು ತಪಸ್ಯಾಮಯವಾದ ಆದರ್ಶಜೀವನ ಹೇಗಿರಬೇಕೆಂದರೆ, ಆ ಒಬ್ಬೊಬ್ಬರ ಜೀವನವೂ ಠಾಕೂರರ ಪವಿತ್ರ ಸಾತ್ವಿಕಭಾವ ಪ್ರಚಾರಕ್ಕಾಗಿ ಉಪಯೋಗಿಯಾಗುವ ಯಂತ್ರಸ್ವರೂಪವಾಗಬೇಕ; ಸಮಗ್ರ ಜಗತ್ತು ಆತನ ಪವಿತ್ರ ಸಂಘವನ್ನು ನೋಡಿ, ಆ ಸಂಘದ ಪ್ರತಿಯೊಂದು ಅಂಗದ ಮುಖಾಂತರವೂ ಶ್ರೀಗುರುಮಹಾರಾಜರನ್ನು ಗುರುತಿಸುವಂತಿರಬೇಕು. ಸ್ವಾಮೀಜಿ ಹೇಳಿದ್ದಾರೆ: ‘ಆತ್ಮನೋ ಮೋಕ್ಷಾರ್ಥಂ ಜಗದ್ಧಿತಾಯ ಚ ‘. ಎಂದು ಸಮಗ್ರ ಜಗತ್ತಿನಲ್ಲಿಯೂ ಶ್ರೀಠಾಕೂರರ ಉದಾರ ಸಾರ್ವಭೌಮ ಭಾವದ ಪ್ರಚಾರವಾಗುತ್ತದೆಯೊ ಅಂದೇ ನಿಜವಾಗಿಯೂ ಜಗತ್ತಿನ ಹಿತಸಾಧನೆಯಾಗುತ್ತದೆ. ಆ ಮಹಾಕಾರ್ಯದ ಭಾರವನ್ನೆ ಅವರು ಹೊರಿಸಿಹೋಗಿದ್ದಾರೆ ಸಮಗ್ರ ಸಂಘದ ಮೇಲೆ.

* * *