ಬೇಲೂರು ಮಠ
೧೯೩೧

ಮಹಾಪುರುಷ ಮಹಾರಾಜ್ ಒಂದು ದಿನ ಸಂನ್ಯಾಸಿಯ ಕರ್ತವ್ಯ ಸಂಬಂಧವಾಗಿ ಹೇಳಿದರು: “ಸಾಧುವಾದವನು ಬೆಳಗಿನ ಜಾವದಲ್ಲಿಯೆ ಬಹು ಮುಂಚಿತವಾಗಿ ಹಾಸಿಗೆ ಬಿಟ್ಟೇಳಬೇಕು. ರಾತ್ರಿ ಮೂರು ಗಂಟೆ ಅಥವಾ ನಾಲ್ಕು ಗಂಟೆ ಮೇಲೆ ಮಲಗಿರಬಾರದು. ಸಾಧುವಾದವನು ಆಮೇಲೆ ಏತಕ್ಕೆ ತಾನೆ ಮಲಗಬೇಕು? ಠಾಕೂರರನ್ನು ನೋಡಿದ್ದೇವಲ್ಲಾ, ಅವರು ಮೂರು ನಾಲ್ಕು ಗಂಟೆ ಮೇಲೆ ಎಂದೂ ನಿದ್ದೆ ಮಾಡುತ್ತಿರಲಿಲ್ಲ. ದೇವರನಾಮ ಹೇಳುತ್ತಿದ್ದರು. ಸಂನ್ಯಾಸಿ ಬೆಳಗ್ಗೆ ಮುಂಚೆ ಸ್ನಾನ ಮಾಡಬೇಕು. ಸ್ನಾನದ ತರುವಾಯ ಧ್ಯಾನ ಧಾರಣಾದಿಗಳಲ್ಲಿ ತೊಡಗಬೇಕು. ಅವನು ಸ್ನಾನ ಮಾಡಿದೊಡನೆಯೆ ಊಟಕ್ಕೆ ಕುಳಿತುಬಿಡಬಾರದು. ಸ್ನಾನ ಮಾಡಿದೊಡನೆಯೆ ಊಟಕ್ಕೆ ಕೂರುವುದು ಸಾಮಾನ್ಯರ ಪದ್ಧತಿ. ಸಂನ್ಯಾಸಿಯೂ ಏಕೆ ಹಾಗೆ ಮಾಡಬೇಕು? ಸಾಧುವಿನ ಚಹರೆ ಮಾತುಕತೆ ಎಲ್ಲವೂ ಬೇರೆ ರೀತಿಯಾಗಿರಬೇಕು-ಸರಳ, ಸುಂದರ, ದೇವೋಪಮ. ಸಂನ್ಯಾಸಿ ಹತ್ತಿರ ಹಣ ಏಕಿರಬೇಕು? ಸಾಧು ಒಮ್ಮಿಂದೊಮ್ಮೆಗೆ ನಿರ್ಭರ ಶೀಲನಾಗಿ ಬಿಡಬೇಕು – ಠಾಕೂರರು ಇದ್ದಾರೆ, ಅವರೆ ಕೊಡುತ್ತಾರೆ. ಸಾಧುವಿನ ಸುತ್ತಮುತ್ತ ಪರಿಷ್ಕಾರವಾಗಿರಬೇಕು. ಚೊಕ್ಕಟವಾಗಿರಬೇಕು. ಆದರೆ ಹಾಗೆಂದುಕೊಂಡು ವಿಲಾಸದ ಕಡೆ ವಾಲುವುದು ಒಳ್ಳೆಯದಲ್ಲ. ತ್ಯಾಗದ ದಾರಿಯನ್ನು ಯಾರು ಆರಿಸುತ್ತಾರೊ ಅವರಿಗೆ ವಿಲಾಸಪ್ರಿಯತೆ ಶ್ರೇಯಸ್ಕರವಲ್ಲ. ಸಾಧು ರಾತ್ರಿ ಹೆಚ್ಚಾಗಿ ಊಟ ಮಾಡಬಾರದು. ಠಾಕೂರರು ಹೇಳುತ್ತಿದ್ದರು: ‘ರಾತ್ರಿಯ ಊಟ ನೀರು ಕುಡಿದಷ್ಟು ಹಗುರವಾಗಬೇಕು’ ಎಂದು. ಸಾಧು ಮೂರ್ಖನಾಗಿರಬಾರದು; ಶಾಸ್ತ್ರ ಅಧ್ಯಯನ ಮಾಡಬೇಕು; ವಿದ್ಯಾವಂತನಾಗಬೇಕು. ಸಾಧುವಿನ ಸ್ವಾಸ್ಥ್ಯವೂ ಚೆನ್ನಾಗಿರಬೇಕು. ಸಾಧು ಮಿತಭಾಷಿಯಾಗಿ, ಧೀರಸ್ಥನಾಗಿ, ಭದ್ರವ್ಯವಹಾರಿಯಾಗಿರಬೇಕು. ಸಾಧು ಸರ್ವದಾ ಕಾಮಿನಿ ಕಾಂಚನದಿಂದ ದೂರವಿರಬೇಕು. ಕಾಮಿನಿ ಕಾಂಚನದ ಯಾವ ವಿಧವಾದ ಸಂಸರ್ಗವೂ ಇರಬಾರದು.”

* * *