ಬೇಲೂರು ಮಠ
ಮಾರ್ಚಿ , ೧೯೩೨

ಮಹಾಪುರುಷಜಿಗೆ ಶರೀರಾರೋಗ್ಯ ಸರಿಯಾಗಿರಲಿಲ್ಲವಾದ್ದರಿಂದ ಎಲ್ಲಾ ಸಮಯದಲ್ಲಿಯೂ ಅವರೇ ಸ್ವತಃ ಕಾಗದಪತ್ರಗಳನ್ನು ನೋಡಲು ಆಗುತ್ತಿರಲಿಲ್ಲ. ಅಪರಾಹ್ನ ವೇಳೆಯಲ್ಲಿ ಅನುಚರನೊಬ್ಬನು ಅವರಿಗೆ ಕಾಗದಗಳನ್ನು ಓದಿ ಕೇಳಿಸುತ್ತಿದ್ದನು; ಅವರೂ ಚೆನ್ನಾಗಿ ಮನಸ್ಸಿಟ್ಟು ಆಲಿಸುತ್ತಿದ್ದರು. ಭಕ್ತನೊಬ್ಬನು ಅತ್ಯಂತ ಕಾತರನಾಗಿ ತನ್ನ ಪ್ರಾಣದ ವೇದನೆಯನ್ನು ತಿಳಿಸಿ ಬರೆದಿದ್ದನು: “ಹೃದಯದಲ್ಲಿ ಮಹಾ ಅಶಾಂತಿ. ಸಾಧ್ಯವಾದಷ್ಟೂ ಸಾಧನೆ ಭಜನೆ ಮಾಡುತ್ತಾ ಹೋಗುತ್ತಿದ್ದೇನೆ. ಆದರೆ ಅದರಲ್ಲಿ ಶಾಂತಿ ಎಂಬುದು ಏನೂ ದೊರೆಯುತ್ತಿಲ್ಲ. ಏನು ಮಾಡಿದರೆ ಶಾಂತಿ ಉಂಟಾಗುತ್ತದೆ? ಏನು ಮಾಡಿದರೆ ಆತನ ಕೃಪೆ ಲಭಿಸುತ್ತದೆ? ಆತನ ದರ್ಶನ ದೊರೆಯುತ್ತದೆ; ದಯೆತೋರಿ ತಿಳಿಸಬೇಕಾಗಿ ಪ್ರಾರ್ಥಿಸುತ್ತೇನೆ. ನನಗೆ ದೃಢವಿಶ್ವಾಸವಿದೆ, ತಮ್ಮ ಕೃಪೆಯಾದರೆ ಭಗವತ್ ಕೃಪೆ ದೊರೆಯುತ್ತದೆ ಎಂದು; ನನ್ನ ಈ ಮಾನವ ಜೀವನವೂ ಧನ್ಯವಾಗುತ್ತದೆ ಎಂದು.” ಇತ್ಯಾದಿ. ಅದನ್ನೆಲ್ಲ ಕೇಳಿ ಮಹಾರಪುರುಷಜಿ ಹೇಳಿದರು : ಆಹಾ! ಇವರು ನಿಜವಾಗಿಯೂ ಆರ್ತರು. ಇವರು ಧನ್ಯರಾಗಿಯೇ ಆಗುತ್ತಾರೆ. ಒಂದೇ ಒಂದು ಉಪಾಯವಿದೆ – ವಿಶ್ವಾಸ! ಶ್ರೀ ಶ್ರೀ ಠಾಕೂರರು ಯುಗಾವತಾರರೆಂದೂ ಸ್ವಯಂ ಭಗವಂತನೆ ಎಂದೂ, ಅಲ್ಲದೆ ಆತನವನೆಯೆ ಆದ ಆತನ ಒಬ್ಬ ಸಂತಾನನಾದ ನಾನು ಕೃಪೆ ಮಾಡಿದ್ದೇನೆಂದೂ ಪೂರ್ಣವಾಗಿ ವಿಶ್ವಾಸ ಉಂಟಾದರೆ ಕಲವಳಕ್ಕೇನೂ ಕಾರಣವಿರುವುದಿಲ್ಲ; ಎಲ್ಲವೂ ಕೈಗೂಡಿದಂತೆಯೆ; ಬದುಕಿನ ಗುರಿ ಮುಟ್ಟಿದಂತೆಯೆ. ಶ್ರೀ ಗುರುಮಹಾರಾಜರ ಅವತಾರತ್ವದಲ್ಲಿ ಪೂರ್ಣ ವಿಶ್ವಾಸವಿರಬೇಕು. ಆತನೆಯೆ ಗುರು ರೂಪದಲ್ಲಿ ನನ್ನ ಹೃದಯದಲ್ಲಿ ಕುಳಿತು ಭಕ್ತರಿಗೆ ಕೃಪೆ ಮಾಡುತ್ತಾನೆ. ಹೀಗೆಂದು ಬರೆ ಆತನಿಗೆ : ‘ಚೆನ್ನಾಗಿ ಅಳಬೇಕಯ್ಯಾ, ಅಳು. ಅಳುವುದೊಂದನ್ನುಳಿದು ನನಗೆ ಬೇರೆ ಉಪಾಯ ತಿಳಿಯದು. ಪ್ರಭೂ, ನನಗೆ ಕೃಪೆದೋರು, ಮೈದೋರು, ದರ್ಶನ ನೀಉಡ, ಎಂದು ಅಳುತ್ತಾ ಪ್ರಾರ್ಥಿಸು, ಪ್ರಾರ್ಥಿಸು, ಅಳು; ಅಳು, ಪ್ರಾರ್ಥಿಸು; ಇನ್ನೂ ಅಳು, ಇನ್ನೂ ಪ್ರಾರ್ಥಿಸು. ಅವನಿಗಾಗಿ ಎಷ್ಟು ಅಳುತ್ತೀಯೆ ಅಷ್ಟೂ ನಿನ್ನ ಹೃದಯದಲ್ಲಿ ಮೈದೋರುತ್ತಾನೆ ಅವನು. ಅತ್ಯಂತ ಪ್ರೇಮಸಹಿತ ಅಳು; ವ್ಯಾಕುಲನಾಗಿ ಅಳು.’ – ಗುರುಮಹಾರಾಜರು ಹಾಡುತ್ತಿದ್ದರು ಈ ಹಾಡನ್ನು:

ಓ ಹರಿ,
ಹಗಲು ಹೋಯಿತು, ಸಂಜೆಯಾಯಿತು,
ಪಾರಗಾಣಿಸೊ ನನ್ನನು;
ಕೇಳಿ ಬಲ್ಲೆನು ದಡವ ಮುಟ್ಟಿಸುವಾತ ನೀನೆಂದು;
ಕರೆದು ಕೂಗುತ್ತಿರುವೆ ನಿನ್ನನು ಅದಕೆ ನಾನಿಂದು.
ದೋಣಿಗಾಣಿಕೆ ಕೊಡಲು ಕೈಯಲಿ ಕಾಸು ಇಲ್ಲದ ಜನರನೂ
ಆಚೆ ಪಾರಕೆ ನೀನು ದಾಟಿಪೆ ಎಂದು ಕೇಳಿಹೆ, ಓ ಹರಿ!
ನಾನು ದೀನನೊ. ಬರಿ ಭಿಕಾರಿಯೊ,
ಒಂದು ಕಾಸೂ ಇಲ್ಲವೊ;
ಅದಕೆ ಮೊರೆಯಿಟ್ಟೊರಲುತಿರುವೆನೊ
ಬಂದು ಕಾಯೊ, ಶ್ರೀಹರಿ | – ಇತ್ಯಾದಿ

“ಅವನೆ ದಡಮುಟ್ಟಿಸುವನು. ಅವನು ಕೃಪೆಮಾಡಿ ಈ ಭವಸಿಂಧುವನ್ನು ದಾಟಿಸದಿದ್ದರೆ ಜೀವರುಗಳಿಗೆ ಸಾಧ್ಯವಾಗುತ್ತಿತ್ತೆ ಅದನ್ನು ದಾಟುವುದಕ್ಕೆ? ಶ್ರೀಗುರೂ, ನೀವು ಅನಂತ; ನಿಮ್ಮ ಆಳ ಯಾರು ತಾನೆ ತಿಳಿಯಲು ಸಾಧ್ಯ? ನಿಮ್ಮ ಇತಿ ಅರಿಯಲು ಯಾರು ತಾನೆ ಸಮರ್ಥರು? ನೀವು ದಯೆ ತೋರಬೇಕು. ದಯೆ ತೋರಿ, ನಿಮ್ಮ ಸ್ವರೂಪವನ್ನು ಒಂದಿಷ್ಟು ತಿಳಿಸಿಕೊಡಬೇಕು. ಹಾಗಾದರೇನೇ ಜೀವನದ ಈ ಭವಬಂಧನ ಶಾಶ್ವತವಾಗಿ ಹರಿದುಹೋಗಲು ಸಾಧ್ಯ.”

ಮತ್ತೊಬ್ಬ ಭಕ್ತನು ಷಟ್‌ಚಕ್ರಭೇದ ಸಂಬಂಧವಾಗಿ ತಿಳಿವಳಿಕೆ ಕೇಳಿದ್ದನು. ಮಹಾಪುರುಷಜಿ ಹೇಳಿದರು : ಆತನಿಗೆ ಬರೆ, ಅದನ್ನೆಲ್ಲ ತಿಳಿದುಕೊಳ್ಳುವ ಅಗತ್ಯವೇನಿಲ್ಲ. ಬರಿಯ ಅಳು; ಚೆನ್ನಾಗಿ ಅಳುವುದೊಂದೆ ದಾರಿ. ಅರಿಯದ ಬಾಲಕನಂತೆ ಕಾತರಭಾವದಿಂದ ಅಳಲಿ; ಮತ್ತು ಹೀಗೆ ಪ್ರಾರ್ಥನೆ ಮಾಡಲಿ: ‘ಸ್ವಾಮೀ, ನನಗೆ ಭಕ್ತಿ ವಿಶ್ವಾಸಗಳನ್ನು ನೀಡು; ತಾಯೀ, ನನ್ನನ್ನು ಕಾಪಾಡು; ನಿನ್ನ ಈ ಮಾಯಾಪಾಶದಿಂದ ನನ್ನನ್ನು ಮುಕ್ತನನ್ನಾಗಿ ಮಾಡು’ ಎಂದು. ನನಗೆ, ಅಯ್ಯಾ, ಅಷ್ಟು ಮಾತ್ರವೆ ಗೊತ್ತು. ಅಮ್ಮಾ ಅಮ್ಮಾ ಎಂದು ಕರೆದೊರಲಿ ಅಳಯ್ಯಾ, ಅಳು. ಸರಳ ವಿಶ್ವಾಸದಿಂದ ತಾಯಿಗೆ ಶರಣಾಗತನಾಗಿ ಆಕೆಯ ಪಾದಾರವಿಂದದೆಡೆ ಬಿದ್ದುಕೊಂಡಿರು; ಅತ್ತು ಕರೆ; ಆಕೆ ದಯೆತೋರಿಯೆ ತೋರುತ್ತಾಳೆ. ನಾನೂ ಹೃತ್ಪೂರ್ವಕವಾಗಿ ಪ್ರಾರ್ಥಿಸುತ್ತೇನೆ. ಒಳ್ಳೆಯದಾಗುವಂತೆ; ಧರ್ಮಕಮ್ಗಳಲ್ಲಿ ಮುಂಬರಿವಂತೆ.’ ಆಮೇಲೆ ಅನುಚರನ ಕಡೆ ನೋಡುತ್ತಾ ಹೇಳಿದರು : “ನೀನೇನೊ ಹೇಳಿದೆಯಲ್ಲವೆ, ಅವನಲ್ಲಿ ಕೆಟ್ಟ ಚಾಳಿಗಳಿವೆ ಎಂದು? ಅದೆಲ್ಲ ನನಗೆ ಬೇಕಿಲ್ಲ; ನಡೆದುಹೋದ ಜೀವನದಲ್ಲಿ ಯಾರು ಏನು ಮಾಡಿದರು ಏನು ಮಾಡಲಿಲ್ಲ, ಅದೆಲ್ಲ ನನಗೆ ತಿಳಿಯಬೇಕಾಗಿಲ್ಲ. ಆಗಿಯೆಹೋದದ್ದು ಆಗಿಹೋಯಿತು. ಈಗ ಅವನು ಇಲ್ಲಿಗೆ ಬಂದು ಬಿದ್ದಿದ್ದಾನೆ; ಠಾಕೂರರಿಗೆ ಶರಣಾಗತನಾಗಿದ್ದಾನೆ; ಎಲ್ಲ ತೊಳೆದುಹೋಗುತ್ತದೆ, ಅವನು ಬದುಕುತ್ತಾನೆ. ಠಾಕೂರರು ಕಪಾಲಮೋಚನರು, ಏನನ್ನೂ ತೊಡೆದುಹಾಕುವ ಶಕ್ತಿ ಅವರಿಗಿದೆ. ಯುಗಾವತಾರನಲ್ಲಿ ಶರಣಾಗತನಾಗಿದ್ದಾನೆ – ಅದೇನು ಕಡಿಮೆ ಸಂಗತಿಯೆ? ಬಹುಸುಕೃತಿ ಇರದಿದ್ದರೆ ಇದು ಸಾಧ್ಯವಾಗುತ್ತಿರಲಿಲ್ಲ. ಗುರುಮಹಾರಾಜ್ ಆತನನ್ನು ಉದ್ಧಾರ ಮಾಡಿಯೆ ಮಾಡುತ್ತಾರೆ.”

ಸ್ವಲ್ಪ ಹೊತ್ತಾದ ಮೇಲೆ ಒಬ್ಬ ಭಕ್ತರು ಸೇವಾರ್ಥವಾಗಿ ತುಸು ಹಣವನ್ನು ಕಾಣಿಕೆಯಿಟ್ಟು ಪ್ರಣಾಮ ಮಾಡಿದರು. ಮಹಾಪುರುಷಜಿ ಆ ಭಕ್ತರಿಗೆ ಹೇಳಿದರು : “ದುಡ್ಡು ಕೊಟ್ಟೇಕೆ ಪ್ರಣಾಮ ಮಾಡಬೇಕಿತ್ತು ನೀನು? ನನಗೆ ಹಣದ ಅವಶ್ಯಕತೆ ಏನೂ ಇಲ್ಲ; ಎಷ್ಟೆಂದರೂ, ಅಯ್ಯಾ, ನಾವು ಸಾಧುಗಳಲ್ಲವೆ? ಹಣ ತೆಗೆದುಕೊಂಡು ಏನು ಮಾಡಬೇಕು? ಠಾಕೂರರ ಕೃಪೆಯಿಂದ ನನಗೆ ಏನೂ ಅಭಾವವಿಲ್ಲ. ನಾನು, ಪ್ರಭುವಿನ ದಾಸ. ಆತ ದಯೆತೋರಿ  ‘ಎರಡು ತುತ್ತು’ ಕೊಡುತ್ತಾನೆ. ಹೀಗೆ ಹೇಳಿ ಹಾಡತೊಡಗಿದರು:

‘ನಾ ನಿನ್ನ ದಾಸ, ನಾ ನಿನ್ನ ದಾಸ, ನಾ ನಿನ್ನ ದಾಸ, ಪ್ರಭುವೆ.
ನೀ ಎನ್ನ ಈಶ, ನೀ ಎನ್ನ ಈಶ, ನೀ ಎನ್ನ ಈಶ, ವಿಭುವೆ.
ಎರಡು ರೊಟ್ಟಿ ಒಂದು ಲಂಗೋಟಿ ನೀನೆನಗೆ ಕೊಟ್ಟೆ;
ಭಕ್ತಿಯನು ನೀಡು, ನಾಮ ಕೀರ್ತನೆ ಮಾಡುವಂತೆನಗೆ ಕೃಪೆಮಾಡು;
ನಾ ನಿನ್ನ ದಾಸ, ಓ ಪ್ರಭುವೆ |’

ಅವನು ದಯೆತೋರಿ ‘ಎರಡು ರೊಟ್ಟಿ’ ಕೊಟ್ಟಿದ್ದಾನೆ; ಇನ್ನು ಹಣಗಿಣ ಕಟ್ಟಿಕೊಂಡು ಆಗಬೇಕಾದ್ದೇನು? ಅಯ್ಯಾ, ಆ ಹಣ ತೆಗೆದುಕೊಂಡುಬಿಡು. ನೀನು ಗೃಹಸ್ಥ, ನಿನಗೆ ಬೇಕಾದ್ದು ಹಣ.” ಆದರೆ ಆ ಭಕ್ತ ಮತ್ತೆ ಮತ್ತೆ ಅತ್ಯಂತ ದೈನ್ಯದಿಂದ ಪ್ರಾರ್ಥಿಸಲು, ಗುರುಮಹಾರಾಜರ ಸೇವೆಗಾಗಿ ಉಪಯೋಗಿಸುವಂತೆ ಹಣವನ್ನು ಕೊಟ್ಟು ಬಿಡಲು ಬಳಿಯಿದ್ದ ಅನುಚರನಿಗೆ ಹೇಳಿದರು.

ಮತ್ತೆ ಅನುಚರನು ಕಾಗದಗಳನ್ನು ಓದಿ ಹೇಳತೊಡಗಿದನು. ಮಹಾಪುರುಷಜಿಯಿಂದ ದೀಕ್ಷೆ ತೆಗೆದುಕೊಂಡಿದ್ದ ಒಬ್ಬ ಭಕ್ತ, ದೀಕ್ಷೆ ಪಡೆಯುವುದಕ್ಕೆ ಮೊದಲು ತನ್ನ ಜೀವನದಲ್ಲಿ ಅನೇಕ ಕೆಟ್ಟ ಕೆಲಸಗಳನ್ನೆಲ್ಲ ಮಾಡಿದ್ದನು. ಆದಕಾರಣ ಅತ್ಯಂತ ಅನುತಪ್ತನಾಗಿ ತನ್ನ  ಕೊಳಕು ಬದುಕಿನ ಅನೇಕ ವಿಷಯಗಳನ್ನು ತಿಳಿಸಿ ಕಾತರಭಾವದಿಂದ ಕ್ಷಮಾಭಿಕ್ಷೆ ಯಾಚಿಸಿ ಬರೆದಿದ್ದನು. ಕಾಗದಗಳನ್ನೆಲ್ಲಾ ಆಲಿಸಿ ಮಹಾಪುರುಷಜಿ ಸ್ವಲ್ಪಕಾಲ ಗಂಭೀರರಾಗಿ ಕುಳಿತಿದ್ದರು. ಆಮೇಲೆ ಹೇಳಿದರು : “ಈತನ ಹೃದಯದಲ್ಲಿ ನಿಜವಾಗಿಯೂ ಅನುತಾಪವಿದೆ. ಅನುತಪ್ತ! ಅಂಥವರೆ ಜಯಶೀಲರಾಗುತ್ತಾರೆ. ಹೀಗೆಂದು ಬರೆ: ಭಯವಿಲ್ಲ, ಠಾಕೂರ್‌ ನಿನ್ನನ್ನು ಉದ್ಧಾರ ಮಾಡುತ್ತಾರೆ. ಅವರ ಹತ್ತಿರ ಎಂತಹ ಪಾಪವೂ ಅಂತಹ ದೊಡಡದೇನೂ ಅಲ್ಲ. ನಿನ್ನಂತವರನ್ನು ರಕ್ಷಿಸಲೆಂದೇ ಅಲ್ಲವೆ ಅವರು ಬಂದದ್ದು. ಅವರು ಅಂತರ್ಯಾಮಿ; ನಿನ್ನ ಭೂತ, ಭವಿಷ್ಯತ್ತು, ವರ್ತಮಾನ ಎಲ್ಲವನ್ನೂ ತಿಳಿದೇ ಅವರು ನಿನಗೆ ಕೃಪೆದೋರಿದ್ದಾರೆ. ಮನೋವಾಕ್ಕಾಯಗಳಿಂದ ಅವರಿಗೆ ಸಂಪೂರ್ಣ ಶರಣಾಗತನಾಗಿ ಅಡ್ಡಬಿದ್ದುಕೊಂಡಿರು. ಇಂದಿನಿಂದ ಆತನೆ ನಿನ್ನನ್ನು ಕೈಹಿಡಿದು ಕೊಂಡಿದ್ದಾನೆ; ಇನ್ನೆಂದಿಗೂ ಆತನು ನೀನು ಕಾಲುಜಾರಿ ಬೀಳುವುದಕ್ಕೆ ಅವಕಾಶ ಕೊಡುವುದಿಲ್ಲ. ಏನೂ ಭಯವಿಲ್ಲವಯ್ಯಾ. ವ್ಯಾಕುಲಭಾವದಿಂದ ಆತನನ್ನು ಕರೆಯುತ್ತಾ ಹೋಗು; ಆತನು ನಿನ್ನ ಉದ್ಧಾರ ಮಾಡುತ್ತಾನೆ. ಅಲ್ಲದೆ, ಯಾವಾಗ ನೀನು ನನ್ನ ಬಳಿ ನಿನ್ನೆಲ್ಲ ದುಷ್ಕೃತಿ ನಿವೇದನ ಮಾಡಿದೆಯೋ ಅವಾಗಲೇ ನಿನ್ನೆಲ್ಲ ಪಾಪಕ್ಷಯವೂ ಆಗಿ ಹೋಯಿತೆಂದು ತಿಳಿ. ಈಗಿನಿಂದ ನೀನು ನಿಷ್ಪಾಪನಾಗಿದ್ದೀಯೆ; ಪ್ರಭುವಿನ ಭಕ್ತನಾಗಿದ್ದೀಯೆ. ಇನ್ನು ನೀನು ಆತನ ಆಶ್ರಿತ ಮತ್ತು ಶರಣಾಗತ. ಪವಿತ್ರತೆ, ಭಕ್ತಿ, ಪ್ರೇಮ ಇವುಗಳಿಗಾಗಿ ಆತನ ಹತ್ತಿರ ಬೇಡಿಕೊ.”

ಆಮೇಲೆ ಭಕ್ತರ ಮತ್ತು ಅವರ ಭಕ್ತಿಯ ವಿಚಾರವಾಗಿ ಮಾತನಾಡುತ್ತಾ ಮಹಾಪುರುಷಜಿ ಇಂತೆಂದರು. ಠಾಕೂರ್ ಹೇಳುತ್ತಿದ್ದರು: ಭಕ್ತಿ ಒಂದು ಅಮೂಲ್ಯವೂ ಅಪೂರ್ವವೂ ಆಗಿರುವ ದುರ್ಲಭ ವಸ್ತು. ಶುದ್ಧಾಭಕ್ತಿಯಂತೂ ಜೀವಕೋಟಿಗಳಿಗೆ ಲಭಸಿವುದೇ ಅತ್ಯಂತ ಅಪೂರ್ವ. ತುಂಬ ಭಾವಸಹಿತವಾಗಿ ಠಾಕೂರ್ ಹಾಡುತ್ತಿದ್ದರು:

ಮುಕ್ತಿ ಕೊಡುವ ವಿಚಾರದಲ್ಲಿ ನನಗೇನೂ ಕಳವಳವಿಲ್ಲ; ಶುದ್ಧಾಭಕ್ತಿ ಕೊಡುವುದರಲ್ಲಿಯೆ ಕಳವಳ ನನಗೆ.

ನನ್ನಲ್ಲಿ ಭಕ್ತಿಯುಳ್ಳವನು ಸರ್ವರ ಪೂಜೆಗೂ ಭಾಜನನಾಗುತ್ತಾನೆ; ತ್ರಿಲೋಕವಿಜಯಿಯೂ ಆಗುತ್ತಾನೆ. ಆಲಿಸು, ಚಂದ್ರಾವಳಿ, ಭಕ್ತಿಯನ್ನು ಕುರಿತು ಹೇಳುತ್ತಾನೆ. ಶುದ್ಧಾಭಕ್ತಿಯೊಂದಿರುವುದರಲ್ಲಿ ಬೃಂದಾನವದಲ್ಲಿ, ಎಲ್ಲಿ ಗೋಪ ಗೋಪಿಯರು ವಿನಾ ಉಳಿದವರು ಅದನ್ನು ಅರಿಯಲಾರನೊ ಅಲ್ಲಿ.

ಭಕ್ತಿ ಕಾರಣವಾಗಿಯೆ ನಂದನ ಮನೆಯಲ್ಲಿ, ಆತನೆ ನನ್ನ ನಿಜ ತಂದೆ ಎಂದು ತಿಳಿದು, ಆತನ ಹೊರೆಯನ್ನೆಲ್ಲ ಹೊರುತ್ತಿದ್ದೇನೆ.

“ಆಹಾ ! ಶ್ರೀಗುರುಮಹಾರಾಜರು ಎಂತಹ ಲೋಕೋತ್ತರಭಾವದಿಂದ ಈ ಹಾಡನ್ನು ಹಾಡುತ್ತಿದ್ದರು!” ಹಾಗೆ ಹೇಳುತ್ತಾ  ಆ ಹಾಡನ್ನು ತಾವೆ ಹಾಡತೊಡಗಿದರು.

ಮತ್ತೆ ಸುಮ್ಮನಿದ್ದು ಸ್ವಲ್ಪ ಹೊತ್ತಾದ ಮೇಲೆ ತಮ್ಮಲ್ಲಿ ತಾವೆ ಹೇಳಿಕೊಳ್ಳುವಂತೆ ಮುಂದುವರಿದರು; “ಶ್ರೀ ಗುರುಮಹಾರಾಜರು ಪಾಪಿ ತಾಪಿಗಳನ್ನು ಉದ್ಧಾರ ಮಾಡಲಲ್ಲವೆ ಅವತಾರ ಮಾಡಿದ್ದು? ಆಂತರಿಕ ಭಾವದಿಂದ ಅವರಲ್ಲಿ ಶರಣಾಗತರಾದರೆ ಅವರು ತಮ್ಮ ಕೃಪಾಹಸ್ತದಿಂದ ಒರಸಿ ಎಲ್ಲ ಪಾಪಗಳನ್ನೂ ತೊಡೆದುಹಾಕುತ್ತಾರೆ. ಅವರ ದಿವ್ಯ ಸ್ಪರ್ಶದಿಂದ ಮನುಷ್ಯ ತತ್‌ಕ್ಷಣವೆ ನಿಷ್ಪಾಪನಾಗಿ ಹೋಗುತ್ತಾನೆ. ಅವಶ್ಯಕವೆಂದರೆ ಅವರ ಮೇಲಣ ಭಕ್ತಿ ಮತ್ತು ಅವರಲ್ಲಿ ಸಂಪೂರ್ಣ ಶರಣಾಗತಿ. ಮನಸ್ಸು ಅವರತ್ತ ಸೆಳೆಯಬೇಕು. ಅವರ ಪಾದಪದ್ಮಗಳಲ್ಲಿ ಆತ್ಮನಿವೇದನ ಮಾಡಿಕೊಳ್ಳಬೇಕು. ಗಿರೀಶಬಾಬು ಏನನ್ನೆಲ್ಲ ಮಾಡಿಬಿಟ್ಟಿದ್ದರು; ಆದರೂ ಅವರ ಭಕ್ತಿಯನ್ನು ನೋಡಿ ಠಾಕೂರರು ಕೃಪೆ ಮಾಡಿದರು; ಅವರನ್ನು ತೊಡೆಯ ಮೇಲೆ ಎತ್ತಿಕೊಂಡರು. ಅದಕ್ಕಾಗಿಯೆ ತರುವಾಯದ ಜೀವನದಲ್ಲಿ ಗೀರೀಶಬಾಬು ಹೇಳುತ್ತಿದ್ದದ್ದು: ‘ನಮ್ಮ ಪಾಪಗಳನ್ನೆಲ್ಲ ಬಿಸಾಡುವುದಕ್ಕೆ ಅಂತಹ ದೊಡ್ಡ ಹೊಂಡ ಇದೆ ಎಂದು ಮೊದಲೇ ಗೊತ್ತಾಗಿದ್ದರೆ ಅಂತಹ ಪಾಪ ಇನ್ನೆಷ್ಟು ಮಾಡುತ್ತಾ ಇದ್ದೆನೋ!’ ಎಂದು. ಶ್ರೀಗುರು ಕೃಪಾಮಯ, ಕೃಪಾಸಿಂಧು.”

ಒಬ್ಬಾಕೆ ಸ್ತ್ರೀ ಭಕ್ತೆ ಆಗತಾನೆ ಸಂಭವಿಸಿದ ತನ್ನ ಗಂಡನ ಸಾವಿನಿಂದ ಶೋಕಾತುರೆಯಾಗಿ ಹುಚ್ಚಳಂತೆ ಪ್ರಲಾಪಿಸುತ್ತಾ ಏನೇನೋ ಕಾಗದ ಬರೆದಿದ್ದಳು. ಸ್ತಬ್ಧರಾಗಿ ಕುಳಿತು ಆ ಕಾಗದವನ್ನು ಕೇಳುತ್ತಾ ಕೇಳುತ್ತಾ ಮಧ್ಯೆ ಮಧ್ಯೆ “ಅಯ್ಯೋ ನನ್ನಿಂದ ಇನ್ನು ಕೇಳುವುದಕ್ಕೆ ಆಗುವುದಿಲ್ಲ” ಎಂದು ಉದ್ಗಾರ ಮಾಡತೊಡಗಿದರು. ಕಾಗದ ಓದುವುದು ಮುಗಿದ ಮೇಲೆ ಅವರು ತುಸು ಹೊತ್ತು ಕಣ್ಣುಮುಚ್ಚಿ ಕುಳಿತಿದ್ದು, ಆಮೇಲೆ ಹೇಳಿದರು: “ಮಹಾಮಾಯೆ ಆಟವಾಡುತ್ತಾಳೆ; ಇತ್ತ ಮನುಷ್ಯರು ಶೋಕತಾಪಗಳಿಂದ ಕಷ್ಟಪಡುತ್ತಾರೆ. ಈ ವ್ಯಾಪಾರವನ್ನೆಲ್ಲ ಯಾರಿಗೆ ತಾನೆ ತಿಳಿದುಕೊಳ್ಳಲಾಗುತ್ತದೆ? ಮನುಷ್ಯರು ಇದನ್ನೆಲ್ಲ ಭಾವಿಸಿ, ಸಂಸಾರದ ಅನಿತ್ಯತೆಯನ್ನು ಕುರಿತು ಚಿಂತನೆ ಮಾಡಿದರೆ, ಆಗ ಬಚಾವಾಗುತ್ತಾರೆ. ಅವರೊ ಹಗಲಿರುಳು ಮಾಯೆಯಲ್ಲಿ ಮುಳುಗುತ್ತಾರೆ. ಮಧ್ಯೆ ಮಧ್ಯೆ ಸ್ವಲ್ಪ ಮೃತ್ಯುಚಿಂತನೆ ಮಾಡುವುದು ಒಳ್ಳೆಯದು. ಎಷ್ಟೊಂದು ರೀತಿಯಲ್ಲಿ ಈ ಜಗತ್ತಿನ ನಶ್ವರತೆ ಕಣ್ಣು ಮುಂದೆಯೆ ಹಾದುಹೋಗುತ್ತದೆ ಎಂಬುದರ ಲೆಕ್ಕವೆ ಇಲ್ಲ. ಆದರೂ ಜೀವರಿಗೆ ಎಚ್ಚರವೆ ಉಂಟಾಗುವುದಿಲ್ಲ. ಹಾಗಾಗುತ್ತಿರುವುದಕ್ಕೇ  ‘ಮಾಯೆ’ ಎಂದು ಹೆಸರು. ಅದನ್ನೆ ಮಾಯೆ ಎಂದು ಕರೆಯುತ್ತೇವೆ. ಠಾಕೂರರು ಭಕ್ತರ ಮುಂದೆ ಈ ಹಾಡನ್ನು ವಿಶೇಷವಾಗಿ ಹಾಡುತ್ತಿದ್ದರು” – ಹೀಗೆಂದು ತುಂಬ ಕಂಪಿತ ಕಂಠದಿಂದಲೆಂಬಂತೆ ಶೋಕದಿಂದ ಮುಹ್ಯಮಾನರಾಗಿ ಹಾಡತೊಡಗಿದರು, ಈ ಅರ್ಥದ ಗೀತೆಯನ್ನು:

“ಇಂತಿರುವುದಲ್ತೆ ಮಹಾಮಾಯೆಯಾ ಮಾಯೆ;
ಎಂಥ ಭ್ರಮೆಯ ಬಲೆಯ ಬೀಸಿಹಳೊ ತಾಯಿ?
ಬ್ರಹ್ಮ ವಿಷ್ಣುಗಳೆ ‘ಅಚೈತನ್ಯ ‘ರಾಗಿರಲು
ಜೀವರಿಗೆ ತಿಳಿವಿನೆಚ್ಚರವಪ್ಪುದೆಂತು
ಬೆಸ್ತನೊಡ್ಡುವಾ ಕೂಣಿಯಲಿ ಹೊಕ್ಕು ಸಿಲುಕುವುದು ಮೀನು;
ಒಳ ಹೊರಗೆ ಹೋಗಿ ಬರುವಂತೆ ದಾರಿಯಿರುವುದಾದರೂ
ವಿಮೋಚನೆಯ ಕಾಣದಿವೆ ಪ್ರಾಣಿಕೋಟಿ.
ತನ್ನ ಕೋಶವ ತಾನೆ ನೆಯ್ದುಕೊಳ್ಳುವುದು ರೇಶಿಮೆಯ ಚಿಟ್ಟೆ;
ತನಗೆ ಸೆರೆಯಾಗುವುದು ತಾನಿಷ್ಟ ಮೊಟ್ಟೆ.
ಇಚ್ಛೆ ಬಂದರೆ ಅದಕೆ ಕೋಶದಿಂದ ಪಾರಾಗಬಹುದು;
ಆದರೂ ತನ್ನ ಮನೆಯಲಿ ತಾನೆ ಸಾಯುವುದು
ಮಹಾಮಾಯೆಯಾ ಜಾಲದಲಿ ಸಿಕ್ಕಿ.”

ಮನುಷ್ಯ ನಿಜವಾಗಿಯೂ ರೇಶ್ಮೆ ಹುಳುವಿನಂತೆಯೆ. ತಾನೆ ಮಾಯಾ ಸಂಸಾರ ರಚನೆ ಮಾಡಿಕೊಂಡು ಅದರಲ್ಲಿ ಬದ್ಧನಾಗಿ ಶೋಕತಾಪಗಳಲ್ಲಿ ಬಿದ್ದು ಬೆಂದು ಸಾಯುತ್ತಾನೆ. ಯಾರನ್ನು  ‘ನಮ್ಮವರು’ ಎನ್ನುತ್ತೇವೆಯೊ ಅವರಾರೂ ನಮ್ಮವರಲ್ಲ ಎಂಬುದು ಗೊತ್ತಿಲ್ಲ. ಈ ದೇಹಧಾರಣೆ ಮಾಡುವುದೇ ಒಂದು ಕಷ್ಟದ ವ್ಯಾಪಾರ; ಅದರ ಮೇಲೆ ಮತ್ತೆ ಈ ಮಾಯೆಯ ಸೃಷ್ಟಿ; ನನ್ನದು, ನಮ್ಮವರು ಎಂದೆಲ್ಲ! ಮನುಷ್ಯರಾದರೂ, ಪಾಪ ! ಏನು ಮಾಡಿಯಾರು? ಮಹಾ ಮಾಯೆಯ ಆವರಣೇ ಶಕ್ತಿಯಿಂದ ಮುಗ್ಧರಾಗಿ ಸಂಕಟಪಟ್ಟು ಸಾಯುತ್ತಾರೆ. ಮಹಾಮಾಯೆಯ ವ್ಯಾಪಾರವನ್ನು ಒಂದಿನಿತೂ ಅರಿಯುವವರಿಲ್ಲ. ಆಕೆಯ ನಾಶಿನೀ ಶಕ್ತಿಯ ಖೇಲನ! ಅದಕ್ಕಾಗಿಯೆ ಠಾಕೂರ್ ಹೇಳುತ್ತಿದ್ದುದು: ‘ಅಮ್ಮಾ, ನಿನ್ನ ಲೀಲೆ ಯಾರಿಗೆ ತಾನೆ ತಿಳಿಯುತ್ತದೆ? ನನಗೇನೂ ಅದು ತಿಳಿಯಬೇಕಾಗಿಯೂ ಇಲ್ಲ. ಕೃಪೆಮಾಡಿ ನಿನ್ನ ಶ್ರೀಚರಣದಲ್ಲಿ ಶುದ್ಧಾಭಕ್ತಿ ಶುದ್ಧಜ್ಞಾನಗಳನ್ನು ಕೊಡು – ಇದೇ ಪ್ರಾರ್ಥನೆ.’ ಇದನ್ನು ಅವರು ಅನೇಕಸಾರಿ ಹೇಳುತ್ತಿದ್ದರು. ನಾವಾದರೊ ಅವರು ಹೇಳಿದ್ದನ್ನೇ ಹೇಳುತ್ತೇನೆ. ಎಡವಿಬಿದ್ದು ಕೈ ಮುರಿದುಕೊಂಡಾಗ ಅವರು ಒಬ್ಬ ಸಣ್ಣ ಬಾಲಕನೋಪಾದಿಯಲ್ಲಿ ವರ್ತಿಸುತ್ತಿದ್ದರು. ಒಂದು ದಿನ ಒಬ್ಬ ಪುಟ್ಟ ಮಗುವಿನಂತೆ ಮೆಲ್ಲಮೆಲ್ಲಗೆ ತಿಪ್ಪಗಾಲು ಹಾಕುತ್ತಾ ಬಂದು ತಾಯಿಯ ಎದುರು ನಿಂತು ದೂರು ಹೇಳಿದರು ಹೀಗೆಂದು : ‘ಅಮ್ಮಾ, ನಿನಗೆಂದೂ ದೇಹಧಾರಣೆ ಮಾಡುವ ಪ್ರಮೇಯ ಬಂದಿಲ್ಲ !ಹೇಗೆತಾನೆ ಗೊತ್ತಾಗಬೇಕು ನಿನಗೆ, ದೇಹಧಾರಣೆ ಮಾಡಿರುವವರ ಕಷಟ?’

ಮಹಾಪುರುಷಜಿ ತುಸು ಹೊತ್ತು ಮೌನವಾಗಿ ಕುಳಿತಿದ್ದು, ಮತ್ತೆ “ಆಹಾ ಆಹಾ! ವೈಧವ್ಯದ ಸದ್ಯಃಶೋಕ ! ಅಯ್ಯೋ!” ಎಂದು ಹೇಳುತ್ತಾ ಹೇಳುತ್ತಾ ಬಿಕ್ಕಿ ಬಿಕ್ಕಿ ಅಳುತ್ತಾ ಕಣ್ಣೀರು ಕರೆಯಲಾರಂಭಿಸಿದರು. ಆಮೇಲೆ ಕಣ್ಣು ಮುಚ್ಚಿಕೊಂಡು ಧ್ಯಾನಸ್ಥರಾಗಿ ಕುಳಿತುಬಿಟ್ಟರು.

* * *