ಬೇಲೂರು ಮಠ
ಮಾರ್ಚಿ ೧೮, ೧೯೩೨

ಅಪರಾಹ್ನ. ಸೇವಾಕಾರ್ಯದಲ್ಲಿ ಸಂನ್ಯಾಸಿಯೊಬ್ಬರು ಕಾಗದ ಪತ್ರಗಳನ್ನು ಓದಿ ಕೇಳಿಸುತ್ತಿದ್ದರು. ಒಂದು ಕಾಗದದಲ್ಲಿ ಶ್ರೀ ಶ್ರೀ ಮಹಾರಾಜ್ (ಸ್ವಾಮಿ ಬ್ರಹ್ಮಾನಂದರ) ಕೃಪೆಗೆ ಪಾತ್ರರಾಗಿ ಅವರಿಂದ ದೀಕ್ಷೆ ಪಡೆದಿದ್ದ ಹರಿಮಹಾಂತಿಯವರ ದೇಹತ್ಯಾಗದ ವಾರ್ತೆ ಬಂದಿತ್ತು. ಅದೊಂದು ಅದ್ಭುತ ಮೃತ್ಯುವಾಗಿತ್ತು! ಶರೀರ ತ್ಯಾಗಕ್ಕೆ ಮುಂಚೆ ಮಹಾಂತಿಯವರಿಗೆ, ಸ್ವಾಮಿ ಬ್ರಹ್ಮಾನಂದ ಮಹಾರಾಜರು ಕೈಯಲ್ಲಿ ಒಂದು ಸುಂದರ ಪುಷ್ಪಟವನ್ನು ಹಿಡಿದು, ತಮಗೆ ಕೊಡಲು ಬಂದಿರುವಂತೆ ಕಾಣಿಸಿತು. ಮಹಾರಾಜ್‌ಜಿಯವರನ್ನು ನೋಡಿ ಮಹಾಂತಿಯವರು ಆನಂದೋತ್ಫುಲ್ಲರಾಗಿ ಅವರಿಗೆ ಪ್ರಣಾಮಮಾಡಲು ಮೇಲೇಳುವ ಯತ್ನ ಮಾಡಿದರು. ಆದರೆ ಶಾರೀರಿಕ ಸಾಮರ್ಥ್ಯಹೀನತೆಯ ದೆಸೆಯಿಂದ ಏಳಲಾರದೆಹೋದರು. ಆಗ ಪಕ್ಕದಲ್ಲಿದ್ದ ಒಬ್ಬರಿಗೆ ಮಹಾಂತಿ ಹೇಳಿದರು – ‘ಮಹಾರಾಜ್‌ಜಿಯವರ ಕೈಯಿಂದ ಆ ಹೂವನ್ನು ಈಸಿಕೊಂಡು ನನಗೆ ಕೊಡು.’ ಆದರೆ ಅಲ್ಲಿದ್ದ ಬೇರೆ ಯಾರಿಗೂ ಸ್ವಾಮಿಗಳು ಕಾಣಿಸಲಿಲ್ಲ. ಆಗ ಮಹಾಂತಿ ಹೇಳಿದರು! ‘ಏನಿದು? ಮಹಾರಾಜ್ ಇಲ್ಲಿಯೇ ನಿಂತಿದ್ದಾರೆ, ಕೈಯಲ್ಲಿ ಹೂ ಹಿಡಿದು! ಆದರೂ ನಿಮಗೆ ಕಾಣುವುದಿಲ್ಲ?’ ಹೀಗೆಂದು ಅನೇಕ ಮಾತುಕತೆ ಆಡತೊಡಗಿದರು. ಅಲ್ಲದೆ ಕೊನೆಯ ಗಳಿಗೆಯವರೆಗೂ ಕೈಜೋಡಿಸಿಕೊಂಡೇ ಸ್ವಾಮಿ ಬ್ರಹ್ಮಾನಂದರ ದರ್ಶನಮಾಡುತ್ತಾ ಮಾಡುತ್ತಾ ಪ್ರಾಣತ್ಯಾಗ ಮಾಡಿದರು. ಈ ಕಾಗದ ಕೇಳಿ ಮಹಾಪುರುಷಜಿ ಅಶ್ರುಪೂರ್ಣ ಲೋಚನರಾಗಿ ಹೇಳಿದರು: “ಆಹಾ! ಆಹಾ! ಹರಿಮಹಾಂತಿಗೆ ಮಹಾರಾಜ್ ಅವರನ್ನು ಕಂಡರೆ ಎಷ್ಟು ಭಕ್ತಿ, ಎಷ್ಟು ಪ್ರೇಮ! ತುಂಬಾದ ದೊಡ್ಡ ಜೀವ; ಮಹಾ ಭಕ್ತಿಮಾನ್ ವ್ಯಕ್ತಿ. ಮಹಾರಾಜ್ ಅವರಿಗೆ ಕೃಪೆದೋರಿದ್ದಾರೆ. ಆದ್ದರಿಂದಲೆ ಕೊನೆಯ ಸಮಯದಲ್ಲಿ ತಮ್ಮ ದರ್ಶನವನ್ನು ದಯಪಾಲಿಸಿ, ಮುಕ್ತಿಯಿತ್ತು, ಅವರನ್ನು ತಮ್ಮ ಜೊತೆಯಲ್ಲಿಯೆ ಕರೆದುಕೊಂಡುಹೋದದ್ದು. ಮಹಾರಾಜ್ ಅವರ ಕೃಪೆ ಎಂದರೆ ಗುರುಮಹಾರಾಜ್ ಕೃಪೆಯಿಂದ ಬೇರೆಯಾದದ್ದೇನಲ್ಲ. ಠಾಕೂರರ ಕೃಪೆ ಯಾರಿಗೆ ದೊರೆಯುತ್ತದೆಯೊ ಅವರ ಮುಕ್ತ ಸ್ವತಃಸಿದ್ಧ ಎಂದು ಬೇರೆ ಹೇಳಬೇಕಾಗಿಲ್ಲ; ಅಷ್ಟೆ ಏಕೆ, ಅವರ ಸಂತಾನರೂ ಯಾರ ಮೇಲೆ ಕೃಪೆದೋರುತ್ತಾರೆಯೊ ಅವರ ಮುಕ್ತಿಯೂ ನಿಶ್ಚಯ. ಇನ್ನೇನಾಗದಿದ್ದರೂ ಕೊನೆಯ ಪ್ರಯಾಣ ಸಮಯದಲ್ಲಿಯಾದರೂ ಶ್ರೀ ಗುರುಮಹಾರಾಜರ ದರ್ಶನ ಲಭಿಸುತ್ತದೆ. ಠಾಕೂರರು ಕೈಹಿಡಿದೇ ಅವರನ್ನು ಕರೆದೊಯ್ಯುತ್ತಾರೆ. ಸ್ವಾಮೀಜಿ (ಸ್ವಾಮಿ ವಿವೇಕಾನಂದರು), ಮಹಾರಾಜ್ (ಸ್ವಾಮಿ ಬ್ರಹ್ಮಾನಂದರು) ಅಂಥವರೇನು ಸಾಮಾನ್ಯ ಮರ್ತ್ಯರೆ?”

“ಠಾಕೂರರ ಭಕ್ತರೆಲ್ಲರ ದೇಹತ್ಯಾಗವೂ ಒಂದು ಅದ್ಭುತ ರೀತಿಯದೆ. ಬಲರಾಮ ಬಾಬುವಿನ ದೇಹತ್ಯಾಗದ ಘಟನೆಯೂ ಒಂದು ಮಹಾ ಅದ್ಭುತ ರೀತಿಯಲ್ಲಿಯೆ ನಡೆಯಿತು. ಅವರ ಕಾಯಿಲೆ ತುಂಬ ವಿಷಮಸ್ಥಿತಿಗೆ ಏರಿತು; ಎಲ್ಲರಿಗೂ ಮಹಾಚಿಂತೆ. ಒಂದು ದಿನ ಅವರು ‘ಎಲ್ಲಿ ನನ್ನ ಸಹೋದರರು ಎಲ್ಲಿ?’ ಎಂದು ಮತ್ತೆ ಮತ್ತೆ ಹೇಳತೊಡಗಿದರು. ಆ ಸುದ್ಧಿ ನಮಗೆ ಮುಟ್ಟಲು, ನಾವೆಲ್ಲ ಬಾಗಬಜಾರಿನ ಅವರ ಮನೆಗೆ ಹೋದೆವು. ನಾವುಗಳೆ ಅವರ ಹತ್ತಿರ ಇದ್ದುಕೊಂಡು ಅವರ ಸೇವಾದಿಗಳಲ್ಲಿ ತೊಡಗಿದೆವು. ದೇಹತ್ಯಾಗಕ್ಕೆ ಒಂದೆರಡು ದಿನ ಮೊದಲಿನಿಂದ ಆತ್ಮೀಯ ಸ್ವಜನರು ಯಾರನ್ನೂಬಳಿಗೆ ಸೇರಿಸಲು ಒಪ್ಪದೆ ಹೋದರು; ನಾವೆ ಎಲ್ಲ ಅವರ ಸುತ್ತಮುತ್ತ ಇರಬೇಕೆಂಬುದು ಅವರ ಇಷ್ಟವಾಗಿತ್ತು. ಅವರು ಆಡುತ್ತಿದ್ದ ನಾಲ್ಕು ಮಾತೂ ಶ್ರೀ ಗುರುಮಹಾರಾಜರನ್ನೆ ಕುರಿತುವಾಗಿದ್ದವು. ದೇಹತ್ಯಾಗಕ್ಕೆ ಒಂದು ದಿನ ಮುಂಚೆ ಡಾಕ್ಟರು ಬಂದು ಪರೀಕ್ಷಿಸಿ ಇನ್ನು ಯಾವ ಆಶೆಯನ್ನೂ ಇಟ್ಟುಕೊಳ್ಳುವುದು ಪ್ರಯೋಜನವಿಲ್ಲ ಎಂದರು. ದೇಹತ್ಯಾಗದ ದಿನ ನಾವೆಲ್ಲ ಅವರ ಬಳಿಯೆ ಕುಳಿತಿದ್ದೆವು. ಬಲರಾಮ ಬಾಬುವಿನ ಸಹಧರ್ಮಿಣಿಗೆ ಅತ್ಯಂತ ಶೋಕತಾಡಿತೆಯಾಗಿ ಗೋಪಾಲ್ ಯೋಗಿನ್ ಮಾ ಮತ್ತು ಇತರರೊಡನೆ ಒಳಮನೆಯಲ್ಲಿದ್ದರು. ಆ ಸಮಯದಲ್ಲಿ ಬಲರಾಮ ಬಾಬು ಹೆಂಡತಿಯ ಕಣ್ಣಿಗೆ ಆಕಾಶದಲ್ಲಿ ಒಂದು ಖಂಡ ಕಾಳಮೇಘದೋಪಾದಿಯಲ್ಲಿ ಏನೋ ಕಾಣಿಸಿತು. ನೋಡುತ್ತಿದ್ದಂತೆ ಆ ಮೇಘ ಘನೀಭೂತವಾಗಿ ಕ್ರಮೇಣ ಕೆಳಗೆ ಇಳಿಯಲಾರಂಭಿಸಿತು. ಆಮೇಲೆ ಆ ಮೋಡ ಒಂದು ರಥದ ಆಕಾರ ಧರಿಸಿ ಬಲರಾಮನ ಮನೆಯ ತಾರಸಿಯ ಮೇಲೆ ಇಳಿಯಿತು. ಆ ರಥದ ಒಳಗಣಿಂದ ಠಾಕೂರರು ಇಳಿದು ಬಂದು ಬಲರಾಮ ಬಾಬು ಯಾವ ಕೊಠಡಿಯಲ್ಲಿ ಇದ್ದರೋ ಆ ದಿಕ್ಕಿಗೆ ಹೋದರು; ಮತ್ತೆ ಸ್ವಲ್ಪ ಹೊತ್ತಾದ ಮೇಲೆ ಬಲರಾಮ ಬಾಬುವಿನ ಕೈ ಹಿಡಿದು ಕರೆದುಕೊಂಡು ಬಂದು ರಥ ಪ್ರವೇಶ ಮಾಡಿದರು. ಆಮೇಲೆ ಆ ರಥ ಮೇಲಕ್ಕೆ ಏರಿ ಆಕಾಶದ ನೀಲ ಶೂನ್ಯದಲ್ಲಿ ವಿಲೀನವಾಗಿ ಹೋಯಿತು. ಆ ಅಲೌಕಿಕ ದೃಶ್ಯವನ್ನು ನೋಡುತ್ತಾ ನೋಡುತ್ತಾ ಬಲರಾಮ ಬಾಬುವಿನ ಹೆಂಡತಿಯ ಮನಸ್ಸು ಒಂದು ಉಚ್ಚ ಅವಸ್ಥೆಗೆ, ಎಲ್ಲಿ ಶೋಕ ತಾಪಗಳ ಸ್ಪರ್ಶ ಇನಿತೂ ಇಲ್ಲವೋ ಅಂತಹ ಊರ್ಧ್ವಭೂಮಿಕೆಗೆ ಏರಿದಂತಾಯಿತು. ಆ ತಾಯಿಯ ಮನಸ್ಸು ಲೌಕಿಕದ ಎಚ್ಚರಕ್ಕೆ ಇಳಿದ ತರುವಾಯ ತಾನು ಕಂಡದ್ದನ್ನು ಗೋಪಾಲ್ ಮಾಗೆ ತಿಳಿಸಿದಳು. ಗೋಪಾಲ್ ಮಾ ಬಂದು ನಮಗೆ ನಡೆದ ಘಟನೆಯನ್ನು ತಿಳಿಸಿದಳು. ಅವಳು ಹಾಗೆ ಬಂದು ಹೇಳುವುದಕ್ಕೆ ಕೆಲವು ಕ್ಷಣಗಳ ಪೂರ್ವದಲ್ಲಿಯೆ ಬಲರಾಮಬಾಬುವಿನ ದೇಹತ್ಯಾಗವಾಗಿತ್ತು. ಇವೆಲ್ಲ ಅಲೌಕಿಕ ವ್ಯಾಪಾರಗಳು! ಇಂತಹ ಅಲೌಕಿಕ ವ್ಯಾಪಾರಗಳು ನಡೆಯುತ್ತವೆ. ಈಗಲೂ ಕೂಡ ಅನೇಕ ಭಕ್ತರ ಅದ್ಭುತ ದೇಹತ್ಯಾಗದ ವಾರ್ತೆಗಳನ್ನು ಕೇಳುತ್ತಿರುತ್ತೇವೆ. ದೇಹತ್ಯಾಗದ ಸಮಯದಲ್ಲಿ ಎಷ್ಟೋ ಭಕ್ತರಿಗೆ ದಿವ್ಯದರ್ಶನ, ಅದ್ಭುತ ಅನುಭೂತಿಗಳಾಗುತ್ತವೆ. ಕೆಲವರು ಠಾಕೂರರ ನಾಮೋಚ್ಚಾರಣೆ ಮಾಡುತ್ತಾ ಮಾಡುತ್ತಾ ದೇಹ ಬಿಟ್ಟು ಠಾಕೂರರ ಹತ್ತಿರಕ್ಕೆ ಹೊರಟು ಹೋಗುತ್ತಾರೆ. ಠಾಕೂರರ ಎಲ್ಲ ಭಕ್ತರಿಗೂ ಉಚ್ಚಗತಿ ದೊರೆಯುವುದು ನಿಶ್ಚಯ….”

ಇದಾದ ಎರಡು ದಿನಗಳ ಮೇಲೆ, ಅಂದರೆ ೨೦ನೆಯ ಮಾರ್ಚಿ ಶನಿವಾರ ರಾತ್ರಿ ಶ್ರೀ ಶ್ರೀ ಠಾಕೂರರ ಪರಮಭಕ್ತ ರಾಮಕೃಷ್ಣಪುರದ ನವಗೋಪಾಲ ಘೋಷರ ಪತ್ನಿ ಠಾಕೂರರ ಚಿತ್ರವನ್ನು ಎದೆಗೆ ಅಪ್ಪಿಕೊಂಡು ಅವರ ಹೆಸರನ್ನು ಹೇಳುತ್ತಾ ಧ್ಯಾನಸ್ಥಳಾಗ ದೇಹತ್ಯಾಗ ಮಾಡಿದಳು. ಆಕೆಯೂ ಆಕೆಯ ಪತಿಯೂ ಇಬ್ಬರೂ ಶ್ರೀರಾಮಕೃಷ್ಣರನ್ನು ಅನೇಕಸಾರಿ ದರ್ಶನಮಾಡಿ ಅವರ ಕೃಪೆಗೆ ಪಾತ್ರರಾಗಿ ಧನ್ಯರಾಗಿದ್ದರು. ಆ ಸುದ್ದಿ ಕೇಳಿ ಮಹಾಪುರುಷಜಿ ಬಹಳ ಹೊತ್ತು ಗಂಭೀರವಾಗಿ ಮೌನವಾಗಿ ಕುಳಿತಿದ್ದು ಆಮೇಲೆ ಹೇಳಿದರು: “ಇವರೆಲ್ಲ ಅಸಾಧಾರಣ ವ್ಯಕ್ತಿಗಳು, ಠಾಕೂರರ ಲೀಲಾ ಸಹಚರರು; ಯುಗಯುಗದಲ್ಲಿಯೂ ಅವತಾರನ ಲೀಲೆಯನ್ನು ಪುಷ್ಟಿಗೊಳಿಸುವುದಕ್ಕಾಗಿ ಆತನ ಜೊತೆಗೆ ದೇಹಧಾರಣ ಮಾಡುತ್ತಾರೆ. ಶ್ರೀಮಾತೆ ಬೃಂದಾವನದಲ್ಲಿದ್ದಾಗ (೧೮೮೬-೮೭) ಒಂದು ದಿನ ರಾಧಾಕಾಂತನ ಗುಡಿಗೆ ಆರತಿ ದರ್ಶನಕ್ಕಾಗಿ ಹೋದಾಗ ನೀರದನ ತಾಯಿ (ಅಂದರೆ ನವಗೋಪಾಲ ಬಾಬುವಿನ ಹೆಂಡತಿ) ರಾಧಾಕಾಂತ ದೇವರಿಗೆ ಚವರಿ ಬೀಸುತ್ತಾ ಇದ್ದುದನ್ನು ಕಂಡರಂತೆ. ಮೇಲೆ ತಮ್ಮ ಸಂಗಡವಿದ್ದ ಮಹಿಳಾಭಕ್ತೆಯರಿಗೆ ಅವರು  ‘ಆರತಿ ಸಮಯದಲ್ಲಿ ನೋಡಿದೆ, ನವಗೋಪಾಲಬಾಬು ಹೆಂಡತಿ ಠಾಕೂರರಿಗೆ ಚಾಮರ ಬೀಸುತ್ತಿದ್ದಳು’ ಎಂದು ತಿಳಿಸಿದರಂತೆ. ಆಹಾ ಅವರದು ಎಂತಹ ಭಕ್ತಿ, ಎಂತಹ ಪ್ರೇಮವಿತ್ತು ಠಾಕೂರರ ಮೇಲೆ ! ಅದೇ ಗೋಪಿಯರ ಭಾವ! ಒಮ್ಮೆ ಆಕೆಯ ಮಕ್ಕಳು  ‘ಅಮ್ಮಾ ನೀನೇನೊ’ ಮೂರು ಹೊತ್ತು ಠಾಕೂರ್ ಠಾಕೂರ್ ಎಂದು ಹೇಳುತ್ತಿದ್ದೀಯ. ಈಗ ನೋಡು ನಿನ್ನ ಠಾಕೂರ್  ನಮ್ಮನ್ನು ಯಾವ ದೈನ್ಯದಶೆಗೆ ತಂದುಬಿಟ್ಟಿದ್ದಾರೆ! ಇನ್ನೂ ಠಾಕೂರ್ ಠಾಕುರ್‌ ಅಂತ ಹೇಳೋದು ಸಾಕು, ನಿಲ್ಲಿಸಿಬಿಡು’ ಎಂದು ತಾಯಿಯನ್ನು ಮೂದಲಿಸಿದರಂತೆ. ಆ ಮಕ್ಕಳಿಗೆ ನೀರದನ ತಾಯಿ ಹೇಳಿದರಂತೆ: ‘ಏನು ಮತು ನೀವು ಆಡುತ್ತಿರೋದು! ನನಗೆ ಅವರ ಮೇಲೆ ಅಷ್ಟೊಂದು ಅಕ್ಕರೆ; ಅವರಿಗಾಗಿ ಪ್ರಾಣಕೊಡಲು ನಾನು ಸಿದ್ಧ. ಅಂಥಾ ಮಾತು ಆಡಬೇಡಿ ಮತ್ತೆ!’ ಎಂದು ಭರ್ತ್ಸನೆ ಮಾಡಿದಳಂತೆ. ಮಹಾಪುರುಷಜಿ ತುಂಬ ಆವೇಗಭರದಿಂದ ಅದನ್ನು ಮತ್ತೆಮತ್ತೆ ಹೇಳತೊಡಗಿದರು. ಜೊತೆಗೆ  ‘ಆಹಾ ! ಆಹಾ !’ ಎಂದು ಉದ್ಗಾರ ತೆಗೆಯತೊಡಗಿದರು. ಆಮೇಲೆ ರುದ್ಧಕಂಠರಾದರೊ ಎಂಬಂತೆ ಭಾಗವತದ ಮಾತುಗಳನ್ನು ಉದ್ಧರಿಸಿ ಹೇಳಿದರು : “ಆ ತಾಯಿ  ‘ಅಶುಲ್ಕದಾಸಿಕಾ’ – ಅವರ ವಿಶ್ವಾಸಕ್ಕೆ ಎಣೆ ಬೆಲೆ ಇದೆಯೆ? ಶ್ರೀಗುರುಚರಣಗಳಿಗೆ ತಮ್ಮನ್ನು ತಾವು ಮಾರಿಕೊಂಡುಬಿಟ್ಟಿದ್ದರು. ಆಹಾ ! ಠಾಕೂರರ ಮೇಲೆ ಅವರಿಗಿದ್ದ ಪ್ರೀತಿಯನ್ನು ನೆನೆದಾಗಲೆಲ್ಲಾ ನನಗೆ ಮನದಲ್ಲಿ ಏನೋ ಉದ್ದೀಪನವಾಗುತ್ತೆ; ಹೃದಯದೊಳಗೆ ಏನೊ ಡವಡವ ಅನ್ನತೊಡಗುತ್ತದೆ. ಆತ್ಮ ಪ್ರೀತಿಯೆ ಕಾಮ – ಕೃಷ್ಣ ಪ್ರೀತಿಯೆ ಪ್ರೇಮ ! ನೀರದನ ತಾಯಿ ಒಬ್ಬರ ಹತ್ತಿರ ಹೇಳಿದರಂತೆ – ನೀನು ಭಜನೆ ಸಾಧನೆ ಬೇಕಾದಷ್ಟು ಮಾಡಬಹುದು; ಆದರೆ ನಿನ್ನ ನಿಜವಾದ ಜಯ ಗೊತ್ತಾಗುವುದು  ‘ಸಾಯುವುದು ಹೇಗೆ’ ಎಂದು ತಿಳಿದಾಗಲೆ! ನಿಜ,  ನಿಜ: ಆ ತಾಯಿ ದಿವ್ಯವಾಗಿಯೆ ಸತ್ತಿದ್ದಾರೆ! ಠಾಕೂರರ ಚಿತ್ರವನ್ನು ಎದೆಗೊತ್ತಿಕೊಂಡು, ಅವರ ಹೆಸರನ್ನು ಹೇಳುತ್ತಾ ಹೇಳುತ್ತಾ ಅವರ ಹತ್ತಿರಕ್ಕೆ ಹೋಗಿದ್ದಾರೆ!”

* * *