ಬೇಲೂರು ಮಠ
ಭಾನುವಾರ, ಏಪ್ರಿಲ್ ೨೪, ೧೯೩೨

ಭಾನುವಾರವಾದ್ದರಿಂದ ಇವೊತ್ತು ಇಡಿಯ ದಿನ ಬೆಳಿಗ್ಗೆಯಿಂದ ಹಿಡಿದು ಭಕ್ತರ ಪ್ರವಾಹವೆ ಬರುತ್ತಿತ್ತು, ನಿರಂತರವಾಗಿ. ಮಹಾಪುರುಷಜಿಗೆ ಒಂದಿನಿತೂ ವಿಶ್ರಾಮ ತೆಗೆದುಕೊಳ್ಳುವುದಕ್ಕೆ ಸಾಧ್ಯವಾಗಲಿಲ್ಲ. ಆದರೂ ಅಕ್ಲಾಂತ ಭಾವದಿಂದ ಎಲ್ಲರಡೊನೆಯೂ ಹರ್ಷಚಿತ್ರಾಗಿ ಭಗವಂತನ ವಿಚಾರವಾಗಿ ಮಾತನಾಡುತ್ತಿದ್ದರು. ಸರ್ವರೂ ಪರಿತೃಪ್ತಪ್ರಾಣರಾಗಿ ಹಿಂತಿರುಗಿದರು.

ಅಪರಾಹ್ನ ಸುಮಾರು ಮೂರು ಗಂಟೆ ಸಮಯ. ಒಬ್ಬರು ಸಂನ್ಯಾಸಿ ಕಲ್ಕತ್ತೆಯ ಒಬ್ಬ ಭಕ್ತರನ್ನು ಕರೆದುಕೊಂಡು ಬಂದರು: ೧೯೩೬ ರಲ್ಲಿ ನಡೆಯುವ ಶ್ರೀರಾಮಕೃಷ್ಣ ಶತಮಾನೋತ್ಸವ ಸಂಬಂಧವಾಗಿ ಮಾತುಕತೆ ಪ್ರಾರಂಭವಾಯಿತು. ಆ ಶತಮಾನೋತ್ಸವ ಒಂದು ಸ್ಥೂಲ ಪರಿಕಲ್ಪನೆ ಕೊಡುವ ಸಲುವಾಗಿ ಆ ಸಂನ್ಯಾಸಿ ಸಾಮಾನ್ಯ ರೀತಿಯಲ್ಲಿ ಹೇಳಿದರು : “ಉತ್ಸವ ಅನೇಕ ದಿನಗಳು ನಡೆಯುತ್ತದೆ. ನಾನಾ ರೀತಿಗಳಲ್ಲಿ ಸಮಗ್ರ ಭಾರತ ವರ್ಷದಲ್ಲಿ, ಸಾವಿರಾರು ಕಡೆಗಳಲ್ಲಿ. ಭಾರತೇತರ ದೇಶಗಳಲ್ಲಿಯೂ – ಅಂದರೆ ಯೂರೋಪು, ಅಮೆರಿಕಾದ ಮೊದಲಾದ ಸ್ಥಳಗಳಲ್ಲಿಯೂ ಈ ಉತ್ಸವ ನಡೆಯುವ ಏರ್ಪಾಡಾಗುತ್ತದೆ. ದೇಶವಿದೇಶಗಳಲ್ಲಿ ಶ್ರೀ ಶ್ರೀ ಠಾಕೂರರ ಭಾವಪ್ರಚಾರ ಮಾಡುವುದೆ ಈ ಉತ್ಸವದ ಪ್ರಧಾನ ಉದ್ದೇಶ. ಜೊತೆಜೊತೆಯಲ್ಲಿ ಭಾರತದ ಸಂಸ್ಕೃತಿ ಕಲಾವಿದ್ಯಾ ಇತ್ಯಾದಿಗಳ ಪ್ರದರ್ಶನಕ್ಕೂ ವ್ಯವಸ್ಥೆ ಮಾಡಬೇಕೆಂಬ ಮನಸ್ಸಿದೆ. ದೇಶ ದೇಶಾಂತರಗಳಿಂದ ಎಲ್ಲ ಮತಗಳ ಪ್ರತಿನಿಧಿಗಳನ್ನು ಆಮಂತ್ರಿಸಿ ಸರ್ವಧರ್ಮ ಸಮ್ಮೇಳನಾದಿಗಳನ್ನು ನಡೆಸುವ ಆಲೋಚನೆಯಿದೆ. ಅಲ್ಲದೆ ಭಾರತದ ವಿವಿದ ಪ್ರದೇಶಗಳ ಒಂದುನೂರಕ್ಕೂ ಹೆಚ್ಚುವ ಸಂಖ್ಯೆಯ ಹೆಸರುವಾಸಿಯಾದ ಪಂಡಿತರುಗಳಿಂದ ಲೇಖನಗಳನ್ನು ಬರೆಯಿಸಿ ಒಟ್ಟು ಹಾಕಿ, ಶತಮಾನ ಸ್ಮೃತಿ ಗ್ರಂಥವೊಂದನ್ನು ಅಚ್ಚುಹಾಕಿಸುವ ಯೋಜನೆಯೂ ಇದೆ. ಸ್ವಲ್ಪ ಹೆಚ್ಚು ಕಡಿಮೆ ಹೀಗೆ ಕೆಲಸ ಪ್ರಾರಂಭ ಮಾಡಿ, ಕ್ರಮೇಣ ಸಾರ್ವಜನಿಕರ ಸಹಕಾರದ ಪರಿಮಾಣಕ್ಕೆ ಅನುಗುಣವಾಗಿ ಅದನ್ನು ವಿಸ್ತರಿಸಿ, ತಮ್ಮಂತಹ ಹಿರಿಯರ ಪರಾಮರ್ಶೆಯ ಅಂಕೆಯಲ್ಲಿ ಮುಂದುವರಿಸಬೇಕೆಂದು ಯೋಚನೆ ಮಾಡಿದೆ.”

ಮಹಾಪುರುಷಜಿ ಶತಮಾನೋತ್ಸವದ ಸ್ಥೂಲಪರಿಕಲ್ಪನೆಯನ್ನು ಕೇಳಿ ತುಂಬ ಖುಷಿಯಿಂದಲೆ ಹೇಳಿದರು : “ಇದು ನಿಜವಾಗಿಯೂ ಒಂದು ಶುಭಸಂಕಲ್ಪ; ದಿವ್ಯವಾಗಿ ನಡೆಯುವುದರಲ್ಲಿ ಸಂದೇಹವೆ ಇಲ್ಲ. ನಾನಾ ದೇಶಗಳಲ್ಲಿ ಯುಗಾವತಾರನ ಭಾವಪ್ರಚಾರವಾಗುವುದರಿಂದ ಬಹುಜನರ ಕಲ್ಯಾಣವಾಗುತ್ತದೆ. ಈಗ, ಠಾಕೂರರ ಸ್ಮರಣೆಮಾಡಿ ಪೂರ್ಣಮನಸ್ಸಿನಿಂದ ಕೆಲಸಕ್ಕೆ ಧುಮುಕಿ ಹೋಗಿ.”

ಸಂನ್ಯಾಸಿ : “ಬಹಳ ಹಣ ಬೇಕಾಗುತ್ತದೆ. ಹಣದ್ದೇ ಎಲ್ಲರಿಗೂ ದೊಡ್ಡ ಯೋಚನೆಯಾಗಿದೆ. ಅಷ್ಟೊಂದು ಹಣ ಎಲ್ಲಿಂದ ಬರುತ್ತದೆಯೊ ನನಗೆ ತೋರದಾಗಿದೆ.”

ಮಹಾಪುರುಷಜಿ : “ತ್ಚು! ಹಣಗಿಣ ಎಲ್ಲ ಅದಕ್ಕದೇ ಬರುತ್ತದೆ. ಅದಕ್ಕಾಗಿ ನೀವು ಯೋಚನೆ ಹಚ್ಚಿಕೊಳ್ಳುವುದು ಬೇಡ. ಇದು ಸ್ವಯಂ ಶ್ರೀಭಗವಂತನ ಕೆಲಸ ಅಲ್ಲವೆ? ಅವನ ಕೆಲಸಕ್ಕೇನು ಅಡ್ಡಿ ಅಭಾವ ಆಗುತ್ತಿದೆಯೆ? ಆ ವಿಚಾರವಾಗಿ ಪೂರ್ಣ ವಿಶ್ವಾಸ ಇಟ್ಟುಕೊಳ್ಳಿ – ಅಚಲ ವಿಶ್ವಾಸ. ಅವನ ಕೆಲಸ ಅವನೇ ಮಾಡುತ್ತಾನೆ; ನಾವು ನಿಮಿತ್ತ ಮಾತ್ರರು. ನೋಡುತ್ತಿರಿ, ಅನಿರೀಕ್ಷಿತ ದಿಕ್ಕುಗಳಿಂದ ಎಲ್ಲ ತನಗೆ ತಾನೆ ಒದಗಿಹೋಗುತ್ತದೆ.”

ಆಮೇಲೆ ಆ ಸಂನ್ಯಾಸಿ ಅತ್ಯಂತ ಕಾತರಭಾವದಿಂದ ಹೇಳಿದರು : “ಮಹಾರಾಜ್, ತಾವು ಸ್ವಲ್ಪ ಆಶೀರ್ವಾದ ಮಾಡಬೇಕು, ಈ ವಿರಾಟ್ ಪರಿಕಲ್ಪನೆಯ ಕಾರ್ಯ ನೆರವೇರುವಂತೆ.”

ಮಹಾಪುರುಷಜಿ ಅತ್ಯಂತ ಉತ್ತೇಜಿತರಾದಂತಾಗಿ ಆವೇಗಭರದಿಂದ ಹೇಳಿದರು : “ಏನೆಂದೆ? ಆಶೀರ್ವಾದವೆ? ಅದು ನನ್ನ ಹೆತ್ತಯ್ಯನ ಕಾರ್ಯ. ಅದಕ್ಕೆ ನನ್ನ ಆಶೀರ್ವಾದವೆ? ನಾನೋ ಆತನ ಚಾಕರ; ಆತನ ದಾಸ. ನಾನು ಹೇಳ್ತೇನೆ ಕೇಳು, ನಿಶ್ಚಯವಾಗಿ ಎಲ್ಲವೂ ಶ್ಲಾಘ್ಯವಾಗಿ ನೆರವೇರುತ್ತೆ, ಎಲ್ಲ ಸಫಲವಾಗುತ್ತೆ, ಸಂದೇಹ ಬೇಡ.” ಇಷ್ಟನ್ನು ಮಾತ್ರ ಹೇಳಿ ಅವರು ಗಂಭೀರರಾಗಿ ಸುಮ್ಮನೆ ಕುಳಿತರು. ಅವರ ಮನಸ್ಸು ಯಾವುದೋ ಅನ್ಯಲೋಕಕ್ಕೆ ಹೋಗಿಬಿಟ್ಟಿತ್ತು. ಅಲ್ಲಿದ್ದ ಎಲ್ಲರೂ ಅವರ ದೃಢ ಆಶ್ವಾಸವಾಣಿಯನ್ನು ಆಲಿಸಿ ಸ್ತಂಭಿತರಾಗಿ ಹೋದರು. ಬಹಳ ಹೊತ್ತು ಆ ಸ್ತಬ್ಧತೆಯ ಮಧ್ಯೆ ಇದ್ದು ಆಮೇಲೆ ಆ ಸಂನ್ಯಾಸಿ ಮತ್ತು ಭಕ್ತ ಇಬ್ಬರೂ ಮಹಾಪುರುಷಜಿಗೆ ಪ್ರಣಾಮ ಮಾಡಿ ಬೀಳ್ಕೊಡಲು ಉದ್ಯುಕ್ತರಾದಾಗ ಅವರು ಧೀರಭಾವಪೂರ್ವಕವಾಗಿ ಮತ್ತೆ ಹೇಳಿದರು : “ಶತಮಾನೋತ್ಸವದ ನಿಧಿಗೆ ನನ್ನಿಂದ ಬೋಣಿಗೆಯಾಗಿ ಒಂದು ಸ್ವಲ್ಪ ಹಣ ತೆಗೆದುಕೊಂಡು ಹೋಗಿ.” ಹೀಗೆಂದು ಪಕ್ಕದಲ್ಲಿದ್ದ ಸೇವಕ ಸಾಧುವಿಗೆ ಹತ್ತು ರೂಪಾಯಿ ತರಲು ಹೇಳಿದರು. ಅದನ್ನು ಅವರು ತಮ್ಮ ಕೈಗೇ ತೆಗೆದುಕೊಂಡು ಕೊಡುತ್ತಾ “ಹೋಗಿ, ಏನು ಆಳುಕು ಬೇಡ. ಆತನ ಕೃಪೆಯಿಂದ ದುಡ್ಡುಗಿಡ್ಡು ಯಾವುದರ ಅಭಾವವೂ ಆಗುವುದಿಲ್ಲ. ಎಲ್ಲ ಶುಭವಾಗುತ್ತದೆ” ಎಂದರು.

ಎಲ್ಲರೂ ಹೊರಟುಹೋದ ಮೇಲೆ ಮಹಾಪುರುಷಜಿ ತಮ್ಮ ಭಾವದಲ್ಲಿ ತಾವೆ ಮಗ್ನರಾಗಿ ಸುಮ್ಮನೆ ಕುಳಿತರು. ಸಂಜೆಗೆ ತುಸು ಮುನ್ನ ಸೇವಕ ಸಾಧುವಿನ ಕಡೆಗೆ ತಿರುಗಿ. ತಮಗೆ ತಾವೆ ಹೇಳಿಕೊಳ್ಳುವಂತೆ  “ಠಾಕೂರರ ಶತಮಾನೋತ್ಸವ ಒಂದು ಮಹಾ ವಿರಾಟ್ ವ್ಯಾಪಾರವಾಗುತ್ತದೆ. ಅವರು ಊಹಿಸಿಕೊಂಡಿರುವುದಕ್ಕಿಂತಲೂ ಭವ್ಯತರವಾಗಿ ನಡೆಯುತ್ತದೆ. ಚೆನ್ನಾಗಿ ಆಲೋಚಿಸಿ ನೋಡಿದ್ದೇನೆ – ಸಮಗ್ರ ದೇಶವೇ ಶ್ರೀ ಗುರುಮಹಾರಾಜರ ಭಾವದಿಂದ ಉದ್ದೀಪ್ತವಾಗಿ ಜಾಗರತಿವಾಗುತ್ತದೆ. ಈ ಶರೀರ ಅಲ್ಲಿಯವರೆಗೆ ಇರುವುದಿಲ್ಲ. ಆದರೆ ನೀವು ನೋಡುತ್ತೀರಿ, ಎಂತಹ ವಿರಾಟ್ ಕಾಂಡವಾಗುತ್ತದೆ ಎಂದು ! ಅವರ ಇಚ್ಛೆಯಿಂದಲೆ ಇದೆಲ್ಲ ಆಗುತ್ತಿದೆ.”

ರಾತ್ರಿ ಸುಮಾರು ಎಂಟೂವರೆ ಗಂಟೆಗೆ ಮಠದ ಒಬ್ಬರು ಪ್ರವೀಣ ಸಂನ್ಯಾಸಿ ಮಹಾಪುರುಷಜಿಯ ಕೊಠಡಿಗೆ ಬಂದು ಪ್ರಣಾಮದ ನಂತರ ಹೇಳಿದರು : “ಇವತ್ತು ಬಹಳ ಜನ ದರ್ಶನಕ್ಕಾಗಿ ಕಿಕ್ಕಿರಿದ್ದರು. ನಾನೂ ಮಧ್ಯಾಹ್ನ ಎರಡು ಮೂರು ಸಾರಿ ಬಂದು ನೋಡಲು ಪ್ರಯತ್ನಪಟ್ಟೆ. ಆದರೆ ಆ ಜನದ ಕಿಕ್ಕಿರಿ ನೋಡಿದ ಮೇಲೆ ಮತ್ತೆ ಬರಲಿಲ್ಲ. ತಮಗೆ ತುಂಬ ಆಯಾಸವಾಗಿರಬೇಕು. ಹೇಗಿದೆ ತಮ್ಮ ಶರೀರಾರೋಗ್ಯ?”

ಮಹಾಪುರುಷಜಿ : “ಶರೀರದ ಕಥೆ ಕೇಳ್ತೀರಾ? ಸತ್ಯ ಹೇಳುವುದಾದರೆ ಅನೇಕ ಸಮಯ ಶರೀರ ಇದೆಯೊ ಇಲ್ಲವೊ ಎಂಬ ಬೋಧೆಯೆ ನನಗಿರುವುದಿಲ್ಲ. ಆದರೆ ನೀವು ಬಂದು ಕುಶಲಪ್ರಶ್ನೆ ಕೇಳಿದಾಗ ಏನಾದರೂ ಹೇಳಬೇಕಲ್ಲಾ ಎಂದು ಹೇಳುತ್ತೇನೆ. ಅದೂ ಅಲ್ಲದೆ ಯಾರು ಅದನ್ನೆಲ್ಲ ಲಕ್ಷಿಸುತ್ತಾರೆ? ನೀವು ಬರ‍್ತೀರಿ, ಭಕ್ತರು ಬರ‍್ತಾರೆ, ಠಾಕೂರರ ವಿಷಯ ಮಾತನಾಡುತ್ತೇನೆ; ಇನ್ನುಳಿದ ಸಮಯ ಆತನ ದಯೆ ಕುರಿತು ಭಾವಿಸುತ್ತೇನೆ – ಅದೇನೇ ಆನಂದ ! ನಾನು ಕೂಡ ಆತನ ಬಳಿಗೆ ಹೊರಡುವುದಕ್ಕಾಗಿ ಗಂಟುಮೂಟೆ ಕಟ್ಟುತ್ತಿದ್ದೇನೆ. ಆದರೆ ಆತ ಏಕೋ ಏನೋ ಇದುವರೆಗೂ ಕರೆಸಿಕೊಳ್ಳಲಿಲ್ಲ; ಕಾರಣ ಅವನಿಗೇ ಗೊತ್ತು. ಒಮ್ಮೊಮ್ಮೆ ಭಾವಿಸುತ್ತೇನೆ, ಏನಿದು ಆತನ ಅದ್ಭುತಲೀಲೆ ಎಂದು ! ಈಗ ನೋಡು, ಸ್ವಾಮೀಜಿ (ಸ್ವಾಮಿ ವಿವೇಕಾನಂದರು) ಎಂತಹ ಪ್ರತಿಭಾನ್ವಿತ ಮಹಾನ್ ವ್ಯಕ್ತಿ. ಅವರನ್ನು ಎಷ್ಟು ಅಲ್ಲ ವಯಸ್ಸಿನಲ್ಲಿಯೆ ಹಿಂದಕ್ಕೆ ಕರೆಸಿಕೊಂಡುಬಿಟ್ಟರು! ಅವರೇನಾದರೂ ಇದ್ದಿದ್ದರೆ ಅವರಿಂದ ಎಂತಹ ಮಹತ್ತಾದ ಜಗತ್‌ಕಲ್ಯಾಣವಾಗುತ್ತಿತ್ತು! ಆಮೇಲೆ ಮಹಾರಾಜ್ (ಸ್ವಾಮಿ ಬ್ರಹ್ಮಾನಂದರು) ಇದ್ದರು. ಅವರನ್ನೂ ಕರೆದುಕೊಂಡುಬಿಟ್ಟರು. ಆದರೆ ನನ್ನನ್ನು ಮಾತ್ರ ತಮ್ಮ ಕೆಲಸ ಮಾಡುವುದಕ್ಕಾಗಿ ಇನ್ನೂ ಇಲ್ಲಿಯೆ ಬಿಟ್ಟಿದ್ದಾರೆ. ನಾನೋ ಅವರ ಮುಂದೆ ಏನೂ ಇಲ್ಲ. ಅವರೇ ಬಲ್ಲರು, ಅವರ ಇಚ್ಛೆ ಏನೂ ಎಂದು. ನನ್ನನ್ನು ಒಂಟಿಯಾಗಿ ಮಾಡಿಬಿಟ್ಟಿದ್ದಾರೆ; ನನ್ನೊಬ್ಬರ ಹೆಗಲೆ ಎಲ್ಲ ಹೊರೆ ಹೊರಬೇಕಾಗಿದೆ. ಠಾಕೂರರ ಅಂತರಂಗಶಿಷ್ಯರು ಒಬ್ಬರಾದ ಮೇಲೊಬ್ಬರು ಹೋಗುತ್ತಿದ್ದಾರೆ. ನನಗೋ ಒಂದೊಂದೇ ನನ್ನ ಪಕ್ಕೆಲುಬು ಕಳಚಿ ಬಿದ್ದ ಹಾಗೆ ಆಗುತ್ತಿದೆ. ಆದರೆ ಎಲ್ಲವನ್ನೂ ಸಹಿಸಲೇಬೇಕು. ನನ್ನ ಕಷ್ಟವನ್ನು ಯಾರೊಡನೆ ಹೇಳಲಿ? ಹೇಳಿಕೊಳ್ಳುವುದಕ್ಕಾದರೂ ಯಾರಿದ್ದಾರೆ?”

ಸಂನ್ಯಾಸಿ : “ಮಹಾರಾಜ್, ತಾವು ಎಷ್ಟು ದಿನ ಇದ್ದರೆ ಅಷ್ಟೂ ನಮಗೆ ಮಂಗಳ. ಎಷ್ಟು ಜನ ಭಕ್ತರು ಸಾವಿರಗಟ್ಟಲೆ ಬರುತ್ತಾರೆ ಶಾಂತಿ ಪಡೆಯುವುದಕ್ಕಾಗಿ ! ನಾವೂ ಕೂಡ ತಾವು ಇದ್ದೀರಿ ಎಂದು ನಿಶ್ಚಿಂತರಾಗಿದ್ದೇವೆ. ಠಾಕೂರರ ಸಂಘ ಶಕ್ತಿ ಈಗ ತಮ್ಮನ್ನೆ ಕೇಂದ್ರವನ್ನಾಗಿ ಮಾಡಿಕೊಂಡು ಕೆಲಸ ಮಾಡುತ್ತಿದೆ. ಠಾಕೂರರ ಸಂತಾನರಲ್ಲಿ ಅನೇಕರು ಈಗಾಗಲೆ ಹೋಗಿಬಿಟ್ಟಿದ್ದಾರೆ. ನಮ್ಮನ್ನು ನಡೆಸುವುದಕ್ಕಾಗಿಯೆ ತಮ್ಮನು ಇನ್ನೂ ಉಳಿಸಿಕೊಟ್ಟಿದ್ದಾರೆ.”

* * *