ಬೇಲೂರು ಮಠ
ಬುಧವಾರ, ಏಪ್ರಿಲ್ ೨೭, ೧೯೩೨

ಅಮೆರಿಕಾದಿಂದ ಪ್ರಕಾಶಿತವಾಗಿದ್ದ  ‘ಏಶಿಯಾ’ ಮಾಸಪತ್ರಿಕೆಯನ್ನು ಓದುತ್ತಾ ಓದುತ್ತಾ ಅಲ್ಲಿ ರಷ್ಯಾದೇಶವು ಕಾನೂನಿನಿಂದಲೆ ನಿರುದ್ಯೋಗವನ್ನು ನಿರ್ಮೂಲ ಮಾಡಿದೆ ಎಂಬ ಸುದ್ದಿಯನ್ನು ಕೇಳಿ ಮಹಾಪುರುಷಜಿಗೆ ಮಹದಾನಂದವಾಗಿ ಹೇಳಿದರು : “ಭೇಷ್! ಬಹಳ ಒಳ್ಳೇದ. ಅಂತಹ ಸುದ್ದಿ ಕೇಳಿದರೇ ಎಷ್ಟೋ ಆನಂದವಾಗುತ್ತದೆ. ಆಹಾ! ಭಾರತದೇಶದ ಕಾರ್ಮಿಕರದು ಎಂತಹ ದುರ್ದಶ! ಪರಾಧೀನ ದೇಶದಲ್ಲಿ ಗರೀಬರನ್ನು ಕೇಳುವವರಾರು? ಅವರಿಗೆ ಎಂದಾದರೂ ಸುದಿನ ಬಂದೀತೆ? ಠಾಕೂರ್, ಇವರಿಗೆ ಏನಾದರೂ ಗತಿ ಕಾಣಿಸುತ್ತೀರಾ? ನೀವೂ ದೀನ ಜನರಿಗಾಗಿಯೆ ಬಂದವರಲ್ಲವೆ?” ಹೀಗೆ ಹೇಳುತ್ತಾ ಹೇಳುತ್ತ ಆವೇಗಭರದಿಂದ ಸ್ವಲ್ಪ ಕಾಲ ಸುಮ್ಮನೆ ಕುಳಿತುಬಿಟ್ಟರು. ಮತ್ತೆ ಹೇಳಿದರು : “ಆಗುತ್ತದೆ; ಆಗಿಯೆ ಆಗುತ್ತದೆ. ಶೀಘ್ರದಲ್ಲಿಯೆ ಏನಾದರೂ ಒಂದು ದಾರಿ ದೊರೆಯುತ್ತದೆ. ಸ್ವಾಮೀಜಿ ಹೇಳಿದ್ದಾರೆ, ಈ ಸಾರಿ ಶೂದ್ರಶಕ್ತಿ ಜಾಗ್ರತವಾಗುತ್ತದೆ ಎಂದು. ಅವರ ಲಕ್ಷಣವೂ ಆಗಲೇ ಕಾಣಿಸಹತ್ತಿದೆ. ಪೃರ್ಥವಿಯ ಎಲ್ಲ ಭಾಗಗಳಲ್ಲಿಯೂ ಕಾರ್ಮಿಕರ ನವಜಾಗ್ರತಿಯ ಸೂಚನೆ ತೋರಹತ್ತಿದೆ. ಭರತವರ್ಷವೂ ಹಿಂದೆ ಬೀಳುವುದಿಲ್ಲ. ಯಾವ ಬಾಹ್ಯಶಕ್ತಿಯೂ ಈ ಅಭ್ಯುತ್ಥಾನವನ್ನು ನಿರೋಧಿಸಲು ಸಮರ್ಥವಾಗಲಾರದು; ಕಾರಣ, ಇದರ ಬೆಂಬಲವಾಗಿ ಐಶೀಶಕ್ತಿಯೆ ನಿಂತಿದೆ, – ಯುಗಾವತಾರನ ಸಾಧನೆ. ಠಾಕೂರರ ಶಕ್ತಿ ಎಷ್ಟು ಭಾವಗಳಲ್ಲಿ ಎಂತೆಂತಹ ದಿಕ್ಕುಗಳಲ್ಲಿ ಖೇಲನಮಾಡುತ್ತದೆ ಎಂಬುದನ್ನು ಅರಿತಿದ್ದವರೆಂದರೆ ಏಕಮಾತ್ರ ಸ್ವಾಮೀಜಿ. ಉಳಿದವರಿಗೂ ಅದು ಗೊತ್ತಾಗಲಿಲ್ಲ. ಠಾಕೂರರು ದೇಹ ತ್ಯಾಗಕ್ಕೆ ಮುನ್ನ ಅವರ ಸಮಸ್ತ ಆಧ್ಯಾತ್ಮಿಕ ಶಕ್ತಿಯನ್ನೂ ಸ್ವಾಮೀಜಿಯಲ್ಲಿ ಸಂಕ್ರಾಮಿತವನ್ನಾಗಿ ಮಾಡಿಕೊಟ್ಟು ಹೇಳಿದರು ‘ಇವತ್ತು ನಿನಗೆಲ್ಲವನ್ನೂ ಕೊಟ್ಟು, ನಾನು ಭಿಕಾರಿಯಾಗಿದ್ದೇನೆ’ ಎಂದು. ಜೊತೆಗೆ ಯುಗಧರ್ಮಪ್ರಚಾರ ಕಾರ್ಯದ ಭಾರವನ್ನೆಲ್ಲ ಸ್ವಾಮೀಜಿಯ ಮೇಲೆ ಹೊರಿಸಿಬಿಟ್ಟರು. ಸ್ವಾಮೀಜಿಯೂ ಅದೇ ಶಕ್ತಿಯಿಂದಲೆ ಶಕ್ತಿವಂತರಾಗಿ ಜಗತ್ತಿನ ಹಿತಕ್ಕಾಗಿ ಕೆಲಸ ಮಾಡಿದರು. ಅವರು ಜಗತ್ತಿನ ಹೃದಯದಲ್ಲಿ ಯಾವ ಭಾವಬೀಜಗಳನ್ನು ಬಿತ್ತಿಹೋದರೋ ಆ ಭಾವಗಳೆಲ್ಲ ವಿಭಿನ್ನ ದೇಶಗಳಲ್ಲಿ ವಿಭಿನ್ನ ಪ್ರಕಾರಗಳಲ್ಲಿ ನಾನಾ ಆಧಾರಗಳಲ್ಲಿ ಕ್ರಮೇಣ ಫಲಪ್ರಸೂಗಳಾಗುತ್ತವೆ? ಅಲ್ಲದೆ ಸಮಗ್ರ ಜಗತ್ತಿನ ಸರ್ವಾಂಗ ಸುಂದರ ಉನ್ನತ ಸಾಧನೆಗೆ ಕಾರಣವಾಗುವುದರಲ್ಲಿ ಸಂದೇಹವಿಲ್ಲ.”

ಒಬ್ಬ ದೀಕ್ಷಿತ ಬಾಲಭಕ್ತನು ಬಂದು ಪ್ರಣಾಮಮಾಡಲು ಅವರು ಅಕ್ಕರೆಯಿಂದ ಅವನನ್ನು ಹತ್ತಿರ ಕುಳ್ಳಿರಿಸಿಕೊಂಡು ಯೋಗಕ್ಷೇಮ ವಿಚಾರಮಾಡಿದ ಬಳಿಕ ಕೇಳಿದರು: “ಕ್ಷುಪ್ತವಾಗಿ ಜಪಾಭ್ಯಾಸ ಮಾಡುತ್ತಿದ್ದೀಯಾ? ಮನಸ್ಸಿಟ್ಟು ಮಾಡಬೇಕು. ಜಪವನ್ನು ಮಾತ್ರ ಎಂದಾದರೂ ಮರತೀಯಾ ತಿಳಿಯಿತೆ? ಠಾಕೂರರು ಯುಗಾವತಾರ; ಅವರ ಹೆಸರನ್ನು ಹೇಳುತ್ತಾ ಹೇಳುತ್ತಾ ನಿನ್ನ ಪ್ರಾಣದಲ್ಲಿ ಎಂತಹ ಆನಂದ ಪ್ರವಹಿಸುತ್ತದೆ! ಹೃದಯ ತುಂಬಿ ಪ್ರಾರ್ಥನೆ ಮಾಡಬೇಕು ಹೀಗೆಂದು: ‘ಪ್ರಭೂ, ನಾನು ಬಾಲಕ; ನನಗೇನೂ ತಿಳಿಯದು. ನನ್ನಲ್ಲಿ ದಯೆ ತೋರಿ ನೀನು ನನ್ನ ಹೃದಯದಲ್ಲಿ ಭಕ್ತಿ ವಿಶ್ವಾಸಗಳು ಪರಿಪೂರ್ಣವಾಗುವಂತೆ ಮಾಡು. ಅಲ್ಲದೆ ನಿನ್ನ ಸ್ವರೂಪ ಏನೆಂಬುದನ್ನೂ ನನಗೆ ತಿಳಿಸಿಕೊಡು.’ ಹಾಗೆ ಮಾಡಿದರೆ ಎಲ್ಲವೂ ಕೈಗೂಡುತ್ತೆ. ಕಾತರಪ್ರಾಣನಾಗಿ ಕೂಗಿ ಕರೆ. ನೀನು ಧ್ಯಾನ ಮಾಡುವಾಗ ಗುರು ನಿನ್ನ ಕಡೆ ಅಕ್ಕರೆಯಿಂದ ನೋಡುತ್ತಿದ್ದಾನೆ ಎಂದೂ ನೀನು ಆತನನ್ನು ಪ್ರೇಮಭರದಿಂದ ನೋಡುತ್ತಿದ್ದೇನೆ ಎಂದೂ ಭಾವಿಸಿಕೊ. ಒಂದೇ ದಿನಕ್ಕೆ ಎಲ್ಲ ಆಗಿಬಿಡುವುದಿಲ್ಲ. ಸರಳ ಹೃದಯದಿಂದ ಮುಂದುವರಿ; ಕ್ರಮೇಣ ಎಲ್ಲ ಆಗುತ್ತದೆ.” ತರುವಾಯ ಆ ಬಾಲಕನಿಗೆ ಫಲಮಿಷ್ಟಾನ್ನಾದಿ ಪ್ರಸಾದವನ್ನು ತಿನಲಿತ್ತು ಉಪಚರಿಸಿದರು. ಆ ಹಡುಗು ತಾರಸಿಗೆ ಕೈ ಬಾಯಿ ತೊಳೆದುಕೊಳ್ಳಲು ಹೋದಾರ ಮಹಾಪುರುಷಜಿ ಹೇಳಿದರು : “ಹುಡುಗನಿಗೆ ಒಳ್ಳೆಯ ಲಕ್ಷಣವಿದೆ. ಅವನಿಗೆ ಎಲ್ಲ ದೊರೆಯುತ್ತದೆ. ನಮಗೆ ಜನರನ್ನು ನೋಡಿಯೆ ಎಲ್ಲ ಗೊತ್ತಾಗಿಬಿಡುತ್ತದೆ. ಠಾಕೂರರು ನಮಗೆ ಇಂತಾದ್ದನ್ನೆಲ್ಲ ಅನೇಕ ಕಲಿಸಿಕೊಟ್ಟಿದ್ದಾರೆ. ಹೊರಗೆ ನೋಡುವುದಕ್ಕೆ ಕೇಳುವುದಕ್ಕೆ ಚೆನ್ನಾಗಿದ್ದ ಮಾತ್ರಕ್ಕೆ ಆಗಲಿಲ್ಲ; ಭಕ್ತರ ಲಕ್ಷಣವೆ ಬೇರೆ.”

ಭಕ್ತರೊಬ್ಬರು ಪ್ರಣಾಮ ಮಾಡಿ ಪ್ರಾರ್ಥನೆ ಸಲ್ಲಿಸಿದರು: “ಧ್ಯಾನ ಜಪಗಳನ್ನೇನೊ ಮಾಡುತ್ತಿದ್ದೇನೆ; ಆದರೆ ಅದರಲ್ಲಿ ಆನಂದ ಪಡೆಯುತ್ತಿಲ್ಲ. ಅಲ್ಲದೆ ಮನವನ್ನೂ ಸ್ಥಿರಗೊಳಿಸಲಾಗುತ್ತಿಲ್ಲ. ದಯೆತೋರಿ ಆಶೀರ್ವದಿಸಬೇಕು; ಅಲ್ಲದೆ ಏನು ಮಾಡಿದರೆ ಆನಂದವುಂಟಾಗುತ್ತದೆ ಆ ದಾರಿಯನ್ನು ಹೇಳಿಕೊಡಬೇಕು.”

ಮಹಾಪುರುಷಜಿ ಸಸ್ನೇಹವಾಣಿಯಿಂದ ಹೇಳಿದರು : “ಧ್ಯಾನಜಪಗಳಲ್ಲಿ ಆನಂದವುಂಟಾಗುವುದಕ್ಕೆ ಅದೇನು ಅಷ್ಟು ಸುಲಭದ ವಿಷಯವೆ? ಬಹುಕಾಲದ ಸಾಧನೆಯ ಅನಂತರವೆ ಅದು ಲಭಿಸುವುದು. ಗಟ್ಟಿ ಮನಸ್ಸು ಮಾಡಿ ಅಭ್ಯಾಸ ಮಾಡಬೇಕು. ಮನಸ್ಸು ಶುದ್ಧವಾಗಬೇಕು. ಭಗವಂತನ ಮೇಲೆ ನಿನ್ನ ಬೋಧನೆ ಯಾವ ಪ್ರಮಾಣದಲ್ಲಿ ಹೆಚ್ಚುತ್ತದೆಯೊ ಆತನ ಮೇಲೆ ನಿನ್ನ ಪ್ರೇಮಾಭಕ್ತಿ ಎಷ್ಟು ಗಾಢವಾಗುತ್ತದೆಯೊ ಅಷ್ಟರ ಮಟ್ಟಿಗೆ ನಿನಗೆ ಆತನ ನಾಮೋಚ್ಚಾರಣೆಯಲ್ಲಿ ಆನಂದ ಉಂಟಾಗುತ್ತದೆ. ನಾಮ ನಾಮೀ ಅಭೇದ. ಆತನು ಪ್ರೇಮಮಯ, ಆನಂದಮಯ; ಆತನನ್ನು ನೀನು ಎಷ್ಟು ಭಾವಿಸುತ್ತಿಯೋ ಅಷ್ಟೂ ಆನಂದ ಹೆಚ್ಚುತ್ತದೆ. ಮನಸ್ಸು ಸ್ಥಿರವಾಗದಿದ್ದರೆ ಏನೂ ಮಾಡಲು ಸಾಧ್ಯವಾಗುವುದಿಲ್ಲ. ಧ್ಯಾನ ಜಪ ಪ್ರಾರ್ಥನೆ ಎಲ್ಲವನ್ನೂ ಹೃತ್ಪೂರ್ವಕ ಮಾಡುತ್ತಾ ಹೋಗು. ಕ್ರಮೇಣ ಶರೀರ ಮನಸ್ಸುಗಳಲ್ಲಿ ಒಂದು ನೂತನ ಬಲ ಉಂಟಾಗುವುದೂ ನಿನಗೆ ಗೊತ್ತಾಗುತ್ತದೆ; ಕ್ರಮೇಣ ಆತನ ನಾಮದಲ್ಲಿ ಒಂದು ರುಚಿ ಹುಟ್ಟುತ್ತದೆ. ಮನಸ್ಸಾದರೂ ಸಾಧಾರಣತಃ ನಾನಾ ವಿಷಯಗಳಲ್ಲಿ ಹರಿದು ಹಂಚಿ ಹೋಗಿರುತ್ತದೆ. ಹರಿದ ಮನಸ್ಸನ್ನು ಒಟ್ಟುಮಾಡಿ ಹಿಡಿದು ತಂದು ಧ್ಯೇಯ ವಸ್ತುವಿನಲ್ಲಿ ಸೇರಿಸಬೇಕು. ಮನಃಪೂರ್ವಕ ಪ್ರಾರ್ಥನೆ ಮಾಡು. ಪ್ರಾರ್ಥನೆ ಅತ್ಯಂತ ಸಹಾಯಕವಾದ ವಸ್ತು. ಸರಿಯಾಗಿ ಜಪಧ್ಯಾನ ಮಾಡಲು ಆಗುವುದಿಲ್ಲ ಎಂದು ತೋರಿದೊಡನೆ ಅತ್ಯಂತ ಕಾತರ ಭಾವದಿಂದ ಪ್ರಾರ್ಥನೆ ಮಾಡು. ಅಲ್ಲದೆ ಆಗಾಗ ಇಲ್ಲಿಗೆ ಬಂದು ಸಾಧುಸಂಗದಲ್ಲಿರು; ಅದರಿಂದ ಮನಸ್ಸಿಗೆ ತುಂಬ ಬಲ ಬರುತ್ತದೆ. ಸಾಧುಗಳ ಬಳಿಗೆ ಬಂದಾಗ ಭಕ್ತಿಭರದಿಂದ ಭಗವತ್ ಪ್ರಸಂಗದಲ್ಲಿ ತೊಡಗಬೇಕು. ಅದು ಬಿಟ್ಟು ಇನ್ನೇನೇನೊ ಹರಟೆ ಹೊಡೆದರೆ ಅದರಿಂದ ನಿನಗೂ ಏನೂ ಪ್ರಯೋಜನವಾಗುವುದಿಲ್ಲ; ಸಾಧುಗಳಿಗೂ ಸಮಯ ನಷ್ಟವಾಗುತ್ತದೆ. ಮುಖ್ಯವಾಗಿ ಬೇಕಾದ್ದೆಂದರೆ ಧ್ಯಾನ ಜಪ ಪ್ರಾರ್ಥನೆ ಸ್ಮರಣ ಮನನ ಸದ್ ಗ್ರಂಥಾದಿ ಪಠನ ಭಗವತ್ ಪ್ರಸಂಗ – ಈ ಎಲ್ಲವುಗಳ ಮುಖಾಂತರ ನಾನಾ ಭಾವಗಳಿಂದ ಭಗವಂತನಲ್ಲಿ ಬಾಳುತ್ತಿರಬೇಕು. ಸರಿ, ಈಗೊಂದು ಕೆಲಸ ಮಾಡ್ತೀಯಾ? ಈ ಕೂಡಲೇ ದೇವರ ಮನೆಗೆ ಹೋಗಿ ಠಾಕೂರರ ಎದುರು ನಿಂತು ಹೃತ್ಪೂರ್ವಕ ಪ್ರಾರ್ಥನೆ ಮಾಡು. ಹೀಗೆ ಹೇಳು : ‘ಸ್ವಾಮೀ, ನನ್ನನ್ನು ಕಾಪಾಡು; ನಾನು ನಿರಾಶ್ರಯ, ನಾನು ಜ್ಞಾನಹೀನ; ಪ್ರಭೂ, ದಯೆ ತೋರು, ಕೃಪೆಮಾಡು. ನನಗೆ ಬಲ ದಯಪಾಲಿಸು. ನಿನ್ನ ಮಕ್ಕಳಲ್ಲಿ ಒಬ್ಬಾತನೆ ನನ್ನನ್ನು ನಿನ್ನೆಡೆಗೆ ಕಳುಹಿಸಿದ್ದಾನೆ. ಈ ರೀತಿ ಚೆನ್ನಾಗಿ ಪ್ರಾರ್ಥನೆ ಮಾಡು. ಆತನು ಕೃಪೆ ತೋರುತ್ತಾನೆ; ನಿನ್ನ ಪ್ರಾಣಕ್ಕೆ ಆನಂದ ದಯಪಾಲಿಸುತ್ತಾನೆ.’

ಸಾಯಂಪೂರ್ವ ವೇಳೆಯಲ್ಲಿ ಅವರಿಗೆ ಬರೆದ ಕಾಗದಗಳಲ್ಲಿ ಓದಿ ಹೇಳಲಾಗುತ್ತಿತ್ತು. ಭಕ್ತರೊಬ್ಬರ ಪತ್ರವನ್ನು ಕೇಳಿ ಹೇಳಿದರು : “ಅದೀಗ ಸರಿ. ಭಗವಂತನ ಪರವಾದ ಇಂಥಾ ವ್ಯಾಕುಲತೆ ಒಂದಿದ್ದರೆ ಇನ್ನೇನು ಹೆದರಿಕೆ? ಆತನಿಗೆ ಬರೆ; ಚೆನ್ನಾಗಿ ಅಳು; ಮನಸ್ಸು ತುಂಬಿ ಕರೆ; ಪ್ರಪಂಚದ ದುಃಖಧಾವತಿಗೆ ಸಾಧ್ಯವಾದಷ್ಟು ನಿನ್ನ ಹೃದಯ ತಳಮಳಿಸಲಿ; ಬೆಂಕಿ ಹೊತ್ತಿಕೊಂಡಂತೆ ಇರು; ಹಾಗಿದ್ದರೆ ಎಲ್ಲ ಆಗುತ್ತದೆ. ಠಾಕೂರರು ಹೇಳುತ್ತಿದ್ದಂತೆ ಜನ ಹೆಂಡತಿ ಮಕ್ಕಳು ಮನೆ ಮಾರುಗಳಿಗಾಗಿ ಕೊಡಗಟ್ಟಲೆ ಕಣ್ಣೀರು ಕರೆಯುತ್ತಾರೆ; ಆದರೆ ಭಗವಂತನಿಗಾಗಿ ಆಳೋರು ಯಾರು? ಭಗವಂತನ ದರ್ಶನವಾಗಲಿಲ್ಲವಲ್ಲಾ ಎಂದು ಯಾರು ಕಣ್ಣೀರು ಕರೆಯುತ್ತಾರೊ ಅವರ ಭಾಗ್ಯವಂತರು. ಅವರ ಮೇಲೆ ಭಗವಂತನ ಕೃಪೆ ಆಗೆಯೆ ಆಗುತ್ತದೆ, ನಿಶ್ಚಯ. ಶಾಂತಿ ಪಡೆಯುವುದೆಂದರೆ ಅದೇನು ಸುಲಭದ ಮಾತೇ? ತತ್ತ್ವಜ್ಞಾನ ಲಾಭವಾಗದಿದ್ದರೆ ಶಾಂತಿ ಎಲ್ಲಿಂದ ಬಂತು? ಯಾವಾಗ ಮನಸ್ಸು ಭಗವಂತನಲ್ಲಿ ಸಮಾಧಿಸ್ಥವಾಗುತ್ತದೆಯೊ ಆವಾಗಲೆ ಶಾಂತಿ ಸಿದ್ಧಿ; ಅದಕ್ಕೆ ಮೊದಲು ಇಲ್ಲ. ಶಾಂತಿ ಹಠಾತ್ತನೆ ದೊರೆತುಬಿಡುವ ದಿನಸಿ ಅಲ್ಲ. ಹಿಡಿದಿದ್ದನ್ನು ಬಿಡದೆ ಮಾಡುತ್ತಿರಬೇಕು. ಕುಲ ಕಸುಬುದಾರ ಒಕ್ಕಲಿಗ ಬೇಸಾಯ ಮಾಡುವಂತೆ.”

ಒಬ್ಬ ಭಕ್ತ ತನಗೆ ಈ ಜನ್ಮದಲ್ಲಿ ಠಾಕೂರರ ಶ್ರೀಪಾದಪದ್ಮದಲ್ಲಿ ಶುದ್ಧಾಭಕ್ತಿ ಉಂಟಾಗುವಂತೆ ಅನುಗ್ರಹಿಸಬೇಕೆಂದು ಪ್ರಾರ್ಥಿಸಿ ಕಾಗದ ಬರೆದಿದ್ದನು. ಅದಕ್ಕೆ ಉತ್ತರವಾಗಿ ಮಹಾಪುರುಷಜಿ ಹೇಳಿದರು : “ಆತನಿಗೆ ಬರ – ಅಯ್ಯಾ, ನಿನ್ನ ಮನಸ್ಸಿನಲ್ಲಿ ಶ್ರೀಗುರುಮಹಾರಾಜರ ಪಾದಪದ್ಮದಲ್ಲಿ ಭಕ್ತಿ ವಿಶ್ವಾಸಗಳು ಉಂಟಾಗಬೇಕೆಂಬ ಆಂತರಿಕ ಆಕಾಂಕ್ಷೆ ಇರುವುದೇ ನನಗೆ ಅತ್ಯಂತ ಆನಂದದ ವಿಷಯವಾಗಿದೆ. ಅವರಿಗೆ ತುಂಬ ಕಾತರಭಾವದಿಂದ ಪ್ರಾರ್ಥನೆಮಾಡು. ಅವರು ಅಂತರ‍್ಯಾಮಿ. ಅವರಿಗೆ ಗೊತ್ತು, ತನ್ನ ಭಕ್ತರಿಗೆ ಯಾವಾಗ ಏನು ಕೊಡಬೇಕು ಎಂದು. ಅವರ ಪಾದಪದ್ಮದಲ್ಲಿ ಶರಣಾಗತನಾಗಿ ಬಿದ್ದಿರು. ನಿಜವಾದ ಭಕ್ತ ಈ ಜನ್ಮ ಎಂದು ಆತಂಕಿಸುವುದಿಲ್ಲ. ಅದೆಲ್ಲ ಬಹಳ ಕೀಳುಮಟ್ಟದ ಭಾವನೆ. ಅದಕ್ಕೆ ಬದಲಾಗಿ ಪೂರ್ಣ ವಿಶ್ವಾಸ, ಭಕ್ತಿ ಪ್ರೇಮ ಉಂಟಾಗಲಿ ಎಂದು ಠಾಕೂರರಲ್ಲಿ ಮೊರೆಯಿಟ್ಟು ಪ್ರಾರ್ಥಿಸು. ಈ ಜನ್ಮದಲ್ಲಿ ಆ ಜನ್ಮದಲ್ಲಿ ಎಂದೆಲ್ಲ ಮಾತೆತ್ತ ಬೇಡ ಅವರ ಹತ್ತಿರ. ನಿನ್ನಲ್ಲಿ ವಿಶ್ವಾಸ ಭಕ್ತಿ ಪ್ರೇಮ ಇವೆಲ್ಲವೂಗಳೂ ಹೊನಲುವರಿದು ಉಕ್ಕಲಿ – ಎಂಬುದೇ ನನ್ನ ಹೃತ್ಪೂರ್ವಕ ಪ್ರಾರ್ಥನೆ. ಹೀಗಿರುತ್ತದೆ ನಿಜವಾದ ಭಕ್ತನ ಪ್ರಾರ್ಥನೆ :

ಏತತ್ ಪ್ರಾರ್ಥ್ಯಂ ಮಮ ಬಹುಮತಂ ಜನ್ಮ ಜನ್ಮಾಂತರೇಪಿ |
ತ್ವತ್ ಪಾದಾಂಭೋರುಹಯುಗಗತಾ ನಿಶ್ಚಲ ಭಕ್ತಿರಸ್ತು ||
ದಿವಿ ವಾ ಭುವಿ ವಾ ಮಮಾಸ್ತು ವಾಸೋ |
ನರಕೇ ವಾ ನರಕಾನ್ತಂ ಪ್ರಕಾಮಮ್ ||

ಅಂದರೆ ಇದೇ ನನ್ನ ಏಕಾಂತ ಪ್ರಾರ್ಥನೆ. ಸ್ವರ್ಗ, ಮರ್ತ್ಯ ಅಥವಾ ನರಕ ಎಲ್ಲಿಯೆ ನನ್ನ ವಾಸ ಇರಲಿ, ಹೇ ನರಕನಿವಾರಣಕಾರಿ, ಜನ್ಮ ಜನ್ಮಾಂತರಗಳಲ್ಲಿಯೂ ನಿನ್ನ ಪಾದಪದ್ಮಯುಗದಲ್ಲಿ ನನ್ನ ಭಕ್ತಿ ಅಚಲವಾಗಿರಲಿ. – ಆತನ ಶ್ರೀಪಾದಪದ್ಮದಲ್ಲಿ ಭಕ್ತಿ ಉಂಟಾಯಿತೆಂದರೆ ಒಡನೆಯೆ ಎಲ್ಲವೂ ಸ್ವರ್ಗ, ಎಲ್ಲವೂ ಆನಂದಮಯ. ನಿನಗೆ ಆ ಸನ್ಮಂಗಳ ಪ್ರಾಪ್ತವಾಗಲಿ ಆತನ ಕೃಪೆಯಿಂದ.”

ಆಮೇಲೆ ಇನ್ನೊಬ್ಬ ಭಕ್ತನ ಪತ್ರಕ್ಕೆ ಉತ್ತರವಾಗಿ ಹೀಗೆ ಬರೆಯಲು ಹೇಳಿದರು : “ಯಾರಿಗೆ ಬೇಕೊ ಅವರಿಗೆ ದೊರೆಯುತ್ತಾನೆ ಪ್ರಭು. ಆದರೆ ಅಭೀಪ್ಸೆ ತೀವ್ರವಾಗಿರಬೇಕು. ಕರೆಯುವಂತೆ ಕರೆದರೆ ಆತ ದರ್ಶನ ಕೊಟ್ಟೇ ಕೊಡುತ್ತಾನೆ. ಶ್ರೀಗುರುಮಹಾರಾಜ್ ಹೇಳುತ್ತಿದ್ದರು : ‘ಭಗವಂತ ಚಂದಮಾಮಾ ಇರುವಂತೆ, ಎಲ್ಲರಿಗೂ ಮಾಮಾ. ಕರೆದವರಿಗೆ ದೊರೆಯುತ್ತಾನೆ. ಯಾರಿಗೆ ಬೇಕೊ ಅವರಿಗೆ ಸಿಗುತ್ತಾನೆ.’ ಪ್ರಭುವಿನ ವಿರಹದಿಂದ ಹೇಗೆ ಶೋಕಿಸಬೇಕು ಎಂಬುದನ್ನು ಯಾರು ಯಾರಿಗೂ ಹೇಳಿ ಕಲಿಸಿಕೊಡಲು ಸಾಧ್ಯವಿಲ್ಲ. ಸಮಯ ಬಂದಾಗ ಅದು ತನಗೆ ತಾನೆ ಬರುತ್ತದೆ… ಅವನು ಬೇಕು ಎಂಬುದಾಗಿ ಹೃದಯದಲ್ಲಿ ಯಾವಾಗ ಆ ಅಭಾವದ ಅನುಭವ ತೀವ್ರವಾಗುತ್ತದೆಯೊ, ಭಗವಂತನ ಸಾಕ್ಷಾತ್ಕಾರವಾಗಲಿಲ್ಲವಲ್ಲ ಎಂದು ಹೃದಯ ಯಾವಾಗ ಚಡಪಡಿಸಲು ತೊಡಗುತ್ತದೆಯೊ, ಅವನ ವಿರಹದಿಂದ ಯಾವಾಗ ಜತ್ತೆ ಶೂನ್ಯವಾಗಿ ತೋರುತ್ತದೆಯೊ ಆವಾಗಲೆ ಎದೆ ಬಿರಿಯುವಂತಾಗಿ ಕಣ್ಣೀರಿನ ಬುಗ್ಗೆ ಚಿಮ್ಮುತ್ತದೆ. ಆ ಸೌಭಾಗ್ಯ ಯಾವಾಗ ಉಂಟಾಗುತ್ತದೆಯೊ ಅದನ್ನು ಯಾರೂ ಅರಿಯಲಾರರು. ಆತನ ಕೃಪೆ ಆದಾಗಲೆ ಆ ಅವಸ್ಥೆ ಉಂಟಾಗುತ್ತದೆ; ಅಲ್ಲದೆ ನಿನ್ನ ಹೃದಯದಲ್ಲಿಯೆ ಆ ಅನುಭವ ಮೈದೋರುತ್ತದೆ. ಅತ್ಯಂತ ವ್ಯಾಕುಲನಾಗಿ ಆತನನ್ನು ಕರೆ; ಹೃತ್ಪೂರ್ವಕ ಪ್ರಾರ್ಥನೆಮಾಡು – ಪ್ರಭೂ, ಕೃಪೆತೋರು ಎಂದು. ಆತನು ನಿನ್ನ ಪ್ರಾರ್ಥನೆಗೆ ಓಗೊಡುತ್ತಾನೆ; ನಾನೂ ಭರವಸೆ ನೀಡುತ್ತೇನೆ. ಅವನು ಭಕ್ತವಾಂಛಾ ಕಲ್ಪತರು; ಸಾಂತಃಕರಣ ಪ್ರಾರ್ಥನೆ ಮಾಡುತ್ತೇನೆ. ಪ್ರಭು ನಿನ್ನ ಮನೋವಾಂಛೆಯನ್ನು ಪೂರ್ಣಗೈಯಲಿ.”

* * *