ಬೇಲೂರು ಮಠ
ಗುರುವಾರ, ಏಪ್ರಿಲ್ ೨೮, ೧೯೩೨

ಸಂನ್ಯಾಸಿಯೊಬ್ಬರು ಹಿಮಾಲಯದ ದೂರ ಮೂಲೆಯಲ್ಲಿದ್ದ ಉತ್ತರ ಕಾಶಿಗೆ ತಪಸ್ಸು ಮಾಡಲು ಹೋಗಿ ತುಂಬ ಕಾಯಿಲೆ ಬಿದ್ದು, ಅಲ್ಲಿರುವ ನಾನಾ ವಿಧವಾದ ಕಷ್ಟ ಮತ್ತು ಅನಾನುಕೂಲಗಳ ವಿಚಾರವಾಗಿ ತಿಳಿಸಿ ಕಾಗದ ಬರೆದಿದ್ದರು. ಮಹಾಪುರುಷಜಿ ಉತ್ತರ  ರೂಪವಾಗಿ ಹೀಗೆ ಬರೆಯಲು ಹೇಳಿದರು : “ಅಲ್ಲಿ ಹಾಗೆ ಕಷ್ಟಪಡುತ್ತಾ ತೊಂದರೆಗೊಳಗಾಗಿರುವುದಕ್ಕೆ ಬದಲಗಿ ಬೇಗನೆ ಹಿಂತಿರುಗಿ ಬಂದುಬಿಡು. ಏನು ಉತ್ತರಕಾಶಿಯಲ್ಲಿಯೆ ಮುಕ್ತಿಲಾಭ ಎಂದು ಯಾರಾದರೂ ಗೊತ್ತು ಮಾಡಿದ್ದಾರೆಯೆ? ಮುಕ್ತಿಲಾಭ ಸಮಾಧಿಲಾಭ ಯಾವ ಜಾಗದಲ್ಲಿ ಬೇಕಾದರೂ ಆಗಬಹುದು; ಅವನ ಇಚ್ಛೆ ಹಾಗಿದ್ದರೆ, ಅವನ ಕೃಪೆ ದೊರೆತರೆ. ಇಷ್ಟು ದಿನ ಆ ಸ್ಥಾನದಲ್ಲಿದ್ದು ಅದನ್ನೆಲ್ಲ ನೋಡಿಮಾಡಿ ನಿನಗಾಗಲೇ ಗೊತ್ತಾಗಿರಬೇಕು, ಈಗ ಅಲ್ಲಿಂದ ಹೊರಟುಬಾ ಇಲ್ಲಿಗೆ. ಸಾಧನೆ ಭಜನೆಯನ್ನೆಲ್ಲ ಹಿಂದೆ ಏನೇನು ಮಾಡಿಕೊಂಡಿದ್ದೆಯೊ ಅದನ್ನೆಲ್ಲ ಇಲ್ಲಿಯೇ ಮುಂದುವರಿಸು. ಮುಖ್ಯವಾಗಿ ಬೇಕಾದ್ದರಿಂದ ಆತನ ಶ್ರೀಪಾದಪದ್ಮದಲ್ಲಿ ಭಕ್ತಿ ಪಡೆಯುವುದು; ಅದನ್ನು ಇಲ್ಲಿಯೂ ಪಡೆಯಬಹುದು. ಅನೇಕ ಸಾಧುಗಳಿಗೆ ಅಲ್ಲಿಯ ಹವಾ ಹಿಡಿಸುವುದಿಲ್ಲ; ಕಾಯಿಲೆ ಬಿದ್ದು ಅಕಾಲಮರಣಕ್ಕೆ ತುತ್ತಾಗುತ್ತಾರೆ; ಇಲ್ಲ, ತುಂಬಾ ಕಠೋರತೆಯನ್ನು ಅಭ್ಯಾಸ ಮಾಡಲು ಹೋಗಿ ತಲೆ ಕೆಡಿಸಿಕೊಂಡು ಬಿಡುತ್ತಾರೆ. ಅಯ್ಯಾ, ಎಲ್ಲವೂ ಆತನ ಇಚ್ಛೆ. ಆತನಿಗೆ ಶರಣಾಗತನಾಗಿ ಬಿದ್ದುಕೊಂಡಿರಬೇಕು. ಎಡಬಿಡದೆ ಆತನನ್ನು ಕರೆ, ಪ್ರಾರ್ಥನೆ ಮಾಡು, ಕ್ರಮೇಣ ಆತನ ಕೃಪೆ ಹೃದಯದಲ್ಲಿ ಸಂಚಾರವಾಗುತ್ತದೆ. ಸಮಾಧಿ ದೊರೆಯದೆ ತತ್ತ್ವಜ್ಞಾನ ಲಾಭವಾಗುವುದಿಲ್ಲ; ಮತ್ತೆ ಆ ಸಮಾಧಿ ಕೂಡ ಆತನ ಕೃಪೆಯಿಲ್ಲದೆ ಲಭಿಸುವ ಸಂಭವವಿಲ್ಲ. ಜೀವನದ ಉದ್ದೇಶವೆ ಭಗವಲ್ಲಾಭ. ಅದು ಯಾವ ಸ್ಥಾನ ವಿಶೇಷವನ್ನೂ ಅಪೇಕ್ಷಿಸುವುದಿಲ್ಲ. ಸ್ವಯಂ ಶ್ರೀ ಠಾಕೂರರ ಜೀವನವನ್ನು ನೀನು ಗಮನಿಸಿಲ್ಲವೆ? ಅವರೇನು ತಪಸ್ಸು ಮಾಡಲು ಉತ್ತರ ಕಾಶಿಗೆ ಹೋಗಿದ್ದರೋ? ಅಥವಾ ಹಿಮಾಲಯಗಳಲ್ಲಿ ತಿರ‍್ರನೆ ಅಲೆದಾಡಿದ್ದರೇನು? ಅವರ ಜೀವನವನ್ನು ಆದರ್ಶವಾಗಿಟ್ಟುಕೊಂಡು ಸಾಧನೆ ಮಾಡು. ಅವರ ಜೀವನದ ಒಂದೊಂದು ಕಾರ್ಯವೂ ಈ ಯುಗಕ್ಕೆ ಆದರ್ಶವಾಗಿದೆ. ನಾವು ನಂಬಿ ನಡೆಯಬಹುದಾದ ಆದರ್ಶ; ಅದಕ್ಕಿಂತಲೂ ಉತ್ತಮತರವಾದದ್ದು ಬೇರೊಂದಿಲ್ಲ.’’

ಒಬ್ಬ ಬ್ರಹ್ಮಚಾರಿ ವೈರಾಗ್ಯಾತಿಶಯದಿಂದ ಒಮ್ಮೆಗೆ ಹಿಮಾಲಯಕ್ಕೆ ಹೋಗಿದ್ದನು, ತಪಸ್ಯೆಗಾಗಿ. ಆ ಸಂಬಂಧವಾಗಿ ಮಹಾಪುರುಷಜಿ ಹೇಳಿದರು : “ಅಯ್ಯಾ ಅಷ್ಟೊಂದು ಘೋರಾಘೋರಿ (ಅಲ್ಲಿಂದಿಲ್ಲಿಗೆ ಇಲ್ಲಿಂದಲ್ಲಿಗೆ ಸುಮ್ಮನೆ ಅಲೆಯುವುದು) ಒಳ್ಳೆಯದಲ್ಲ. ಅದರಿಂದ ಏನೂ ಆಗುವುದಿಲ್ಲ. ಏನೇನೂ ಪ್ರಯೋಜನವೇ ಇಲ್ಲ ಎಂದೇನೂ ಅಲ್ಲ; ಏನೋ ಒಂದಿಷ್ಟು ಆಗಬಹುದು. ಆದರೆ ಅದೆಲ್ಲ ತಾತ್ಕಾಲಿಕ; ಅದರ ಫಲ ಹೆಚ್ಚಾಗಿ ದೀರ್ಘಕಾಲ ಸ್ಥಾಯಿಯಾಗಿ ಇರುವುದಿಲ್ಲ. ನಿಜವಾಗಿ ಹೇಳುತ್ತೇನೆ. ಏನಾದರೂ ಸ್ಥಾಯಿಯಾದುದನ್ನು ಪಡೆಯಬೇಕಾದರೆ ನಮ್ಮ ಈ ಠಾಕೂರರ ಮತ್ತು ಸ್ವಾಮೀಜಿಯ ಮಠದಲ್ಲಿಯೆ ಇದ್ದುಕೊಂಡು ಸಾಧನೆ ಭಜನೆ ಮಾಡಬೇಕು. ಅದಕ್ಕಾಗಿಯೆ ಅಲ್ಲವೆ ಸ್ವಾಮೀಜಿ ತಮ್ಮ ಹೃದಯದ ರಕ್ತವನ್ನೆ ಯಜ್ಞಗೈದು ಈ ಮಠ ಸ್ಥಾಪಿಸಿದ್ದು? ಅಲ್ಲದೆ, ಅದೆಂತಹ ಸಾಧುಸಂಗ ಇಲ್ಲಿ ದೊರೆಯುತ್ತದೆ! ಅಂತಹ ಸಾಧುಗಳು ಮತ್ತೆಲ್ಲಿ ಕಾಣಸಿಗುತ್ತಾರೆ? ಇಂತಹ ಪವಿತ್ರರೂ ವೈರಾಗ್ಯಶಾಲಿಗಳೂ ವಿದ್ವಾಂಸರೂ ಮುಮುಕ್ಷುಗಳೂ ಆಗಿರುವ ಸಾಧುಸಂಗ ಮತ್ತು ಮೇಲನ ದುರ್ಲಭವಲ್ಲವೇ? ಅದೂ ಅದೆಲ್ಲ ಇಲ್ಲಿ ಜ್ಞಾನ, ಕರ್ಮ, ಭಕ್ತಿ ಯೋಗ ಎಲ್ಲವೂ ಇವೆ. ಸಾಧನೆ ಭಜನೆಗೆ ಇಂತಹ ಅನುಕೂಲ ಸ್ಥಾನ ಮತ್ತೆಲ್ಲಿಯೂ ಇಲ್ಲ. ಯಾರಲ್ಲಿ ತೀವ್ರವಾಗಿ ವೈರಾಗ್ಯ ಉಂಟಾಗಿದೆಯೋ ಅವರು ಜಾಗ ಹುಡುಕುತ್ತಾ ತಿರುಗುವುದರಲ್ಲಿ ಕಾಲಹರಣ ಮಾಡಲು ಸಾಧ್ಯವೆ? ಯಾವುದೋ ಒಂದು ಜಾಗದಲ್ಲಿ ಸದ್ದಿಲ್ಲದೆ ಕೂತುಬಿಡುತ್ತಾರೆ. ಹಿಮಾಲಯಗಳಲ್ಲಿ ಇಲ್ಲೊಮ್ಮೆ ಅಲ್ಲೊಮ್ಮೆ ಎಲ್ಲಿಯೋ ಒಬ್ಬಿರಿಬ್ಬರು ವೈರಾಗ್ಯವಂತರಾದ ತಪಸ್ವೀ ಸಾಧುಗಳೂ ಕಾಣಸಿಗುತ್ತಾರೆ. ಅಂಥವರು ಅತ್ಯಂತ ನಿಭೃತ ಸ್ಥಾನಗಳಲ್ಲಿ ವಾಸಿಸುತ್ತಾರೆ. ಉಳಿದವರೆಲ್ಲ ಬಹುಪಾಲು ಹಾಗೂ ಹೀಗೂ ಹೇಗೋ ದಿನಕಳೆಯುತ್ತಾರೆ. ಅದಕ್ಕಾಗಿಯೆ ಹರಿ ಮಹಾರಾಜ್(ಸ್ವಾಮಿ ತುರೀಯಾನಂದರು) ಹೇಳುತ್ತಿದ್ದುದು  ‘ನಾವೂ ಕಳ್ಳರೇ. ಸರ್ವಕ್ಷಣವೂ ಏನು ಸಾಧನೆ ಭಜನೆ ಮಾಡುತ್ತಿರುವುದು ಸಾಧ್ಯವೇ? ಎಷ್ಟೋ ಹೊತ್ತು ಸುಮ್ಮನೆ ಕೆಲಸವಿಲ್ಲದೆ ನಷ್ಟವಾಗುತ್ತದೆ. ಅದಕ್ಕಾಗಿಯೆ ಅಲ್ಪಸ್ವಲ್ಪ ಸೇವಾಕಾರ್ಯ ಮಾಡುತ್ತಾ, ಅದರ ಜೊತೆಗೇ ಸಾಧನೆ ಭಜನೆಯನ್ನೂ ಮಾಡುತ್ತಿರುವುದು ಲೇಸು.’ ಈ ತಿರುಗುತನ ಈ ಕಠೋರತೆ ಇವುಗಳಲ್ಲೆಲ್ಲ ನಮ್ಮ ಅನುಭವಗಳೇನು ಕಡಿಮೆಯಾಗಿದೆ ಎಂದುಕೊಂಡೆಯೇನು? ಜೀವನದಲ್ಲಿ ಅಂಥವುಗಳನ್ನೆಲ್ಲ ಸಾಕಷ್ಟು ಅನುಭವಿಸಿಯಾಗಿದೆ. ಹಿಮಾಲಯಗಳಲ್ಲಿ ನಾನು ಹೋದೆಡೆಯಲ್ಲ, ಕಾಡಿನಲ್ಲಿ, ಬೆಟ್ಟದಲ್ಲಿ, ತುಂಬ ಜಪ ಧ್ಯಾನ ಮಾಡಿದ್ದೇನೆ. ಕಂಡಿದ್ದೇನೆ, ಪ್ರಕೃತಿ ಸೌಂದರ‍್ಯಾದಿ ಜ್ಞಾನ ಎಷ್ಟು ಹೊತ್ತು ಇರುತ್ತದೆ ಎಂಬುದನ್ನೂ. ಅಷ್ಟೇನೂ ಹೆಚ್ಚು ಹೊತ್ತಿನದಲ್ಲ. ಮನಸ್ಸು ಯಾವಾಗ ನಿರ್ವಿಷಯವಾಗಿ ಧ್ಯೇಯವಸ್ತುವಿನಲ್ಲಿ ಮಗ್ನವಾಗುತ್ತದೆಯೊ ಆಗ ಸುತ್ತಮುತ್ತಣ ಸನ್ನಿವೇಶದ ಬೋಧೆಯೆ ಇರುವುದಿಲ್ಲ. ದೇಶ ಕಾಲಗಳ ಜ್ಞಾನ ಯಾವಾಗ ಲುಪ್ತವಾಗುತ್ತದೆಯೊ ಆಗ ಉಳಿಯುವುದೆಂದರೆ ಆನಂದವೊಂದೇ – ಸಚ್ಚಿದಾನಂದ. ಒಳಗೆ, ಎಲ್ಲ ಜಾಗಗಳೂ ಒಂದೇ ತರಹ; ಹೊರಗೆ ಇನ್ನೇನು ಸೌಂದರ್ಯ ಇದ್ದೀತು? ಏನೂ ಇಲ್ಲ. ಎಲ್ಲ ಸೌಂದರ್ಯದ ಖನಿಯೂ ಒಳಗೆಯೆ. ಹೊರಗಡೆ ಏನು ವ್ಯಕ್ತವಾದರೂ ಅದೆಲ್ಲ ಸಸೀಮ; ಅದರ ಇತಿಮಿತಿಯನ್ನು ಗುರುತು ಹಾಕಬಹುದು. ಆದರೆ ಯಾವುದು ಅವ್ಯಕ್ತವೋ ಅದು ಅಸೀಮ. ಮನಸ್ಸು ಎಷ್ಟು ಆ ಅಂತರತಮ ಪ್ರದೇಶವನ್ನು ಪ್ರವೇಶಿಸುತ್ತದೆಯೊ ಅಷ್ಟೂ ಇದರಲ್ಲಿ ಮಗ್ನವಾಗಿ ಹೋಗುತ್ತದೆ. ‘ಪಾದೋsಸ್ಯ ವಿಶ್ವಭೂತಾನಿ ತ್ರಿಪಾದಸ್ಯಾಮೃತಂ ದಿವಿ.’ (ಪರಮ ಪುರುಷನ ಒಂದು ಪಾದದಲ್ಲಿ ಸಮಸ್ತ ಜಗತ್ ಸಂಸಾರವೂ ಅಭಿವ್ಯಕ್ತವಾಗಿದೆ. ಅವ್ಯಕ್ತವಾಗಿರುವ ಮೂರು ಪಾದದಷ್ಟು ಸೃಷ್ಟಿಯ ಊರ್ಧ್ವದಲ್ಲಿ ಅಮೃತ ಸ್ವರೂಪದಲ್ಲಿ ವಿದ್ಯಮಾನವಾಗಿದೆ.) ಅವನು ಎಂತಹ ವಿರಾಟ್! ಮನಸ್ಸು ಒಮ್ಮೆ ಅವನಲ್ಲಿ ಲೀನವಾಯಿತೆಂದೆ ಮುಗಿಯಿತು. ಆಮೇಲೆ ಅದಕ್ಕೆ ಬಾಹ್ಯಿಕವಾದ ಯಾವುದರಿಂದಲೂ ಒಂದಿನಿತೂ ಆನಂದ ಉಂಟಾಗದು. ಸರ್ವಶಾಂತಿಯ ಆಕರವೇ ತಾನೆ ಅವನು? ಅವನ ದರ್ಶನ ಪಡೆಯಲು ಅಸಮರ್ಥವಾದರೆ ಮಾನವ ಜೀವನವೇ ವ್ಯರ್ಥ. ಭಗವದ್ ದರ್ಶನವಾಗದೆ ಏನೂ ಆಗುವುದಿಲ್ಲ.”

* * *