ಸಾಯಂಕಾಲ ಸುಮಾರು ೮-೩೦ ಗಂಟೆ ಸಮಯ. ಜಮತರ ಆಶ್ರಮದ ಒಬ್ಬ ಬ್ರಹ್ಮಚಾರಿಗಳೊಡನೆ ಮಾತಾಡುತ್ತಾ ಮಹಾಪುರುಷಜಿ ತಮ್ಮ ಕೊಠಡಿಯಲ್ಲಿ ಒಂದು ಮಂಚದ ಮೇಲೆ ಕೂತ್ತಿದ್ದರು.

ಅವರು ಹೇಳಿದರು: “ಇವತ್ತು… ಅವರಿಂದ ಒಂದು ಕಾಗದ ಬಂದಿತು. ಕಾಗದದಲ್ಲಿ ವಿಶೇಷವಾಗಿ ಅವರು ತಮ್ಮ ವಿಚಾರವಾಗಿಯೆ ಬರೆದಿದ್ದರು. ಒಮ್ಮೆ ನಿಮ್ಮನ್ನು ಕಳುಹಿಸುವುದಕೋಸ್ಕರ ಅವರು ರೈಲ್ವೇ ಸ್ಟೇಷನ್ನಿಗೆ ಬಂದಿದ್ದರಂತೆ. ಆಶ್ರಮಕ್ಕೆ ಹಿಂತಿರುಗುವುದು ರಾತ್ರಿ ಹತ್ತುಗಂಟೆ ಆಗಿತ್ತಂತೆ. ಹೋದವರೆ ಊಟ ಮುಗಿಸಿ, ನಿತ್ಯನಿಯಮದಂತೆ ಜಪಮಾಡುವುದನ್ನು ಮರೆತು, ಮಲಗಿ ನಿದ್ರಿಸಿದರು. ರಾತ್ರಿ ಎಚ್ಚರವಾದಾಗ ತಮ್ಮ ತಪ್ಪು ನೆನಪಾಗಿ ಮನಸ್ಸಿಗೆ ಬಹಳ ಖೇದವಾಯಿತು. ತಾವು ಮಾಡಿದ ತಪ್ಪಿಗೆ ಪ್ರಾಯಶ್ಚಿತ್ತ ಏನು ಎಂಬುದಾಗಿ ಆಶ್ರಮದ ಸಾಧುಗಳನ್ನು ವಿಚಾರಿಸಿದರು. ಯಾರೂ ಸಮರ್ಪಕವಾಗಿ ಉತ್ತರ ಹೇಳಲು ಸಮರ್ಥರಾಗಲಿಲ್ಲ. ಕಡೆಗೆ ಅತ್ಯಂತ ಪಶ್ಚಾತ್ತಾಪದಿಂದ ಬುದ್ಧಿವಾದಕ್ಕಾಗಿ ನನಗೆ ಕಾಗದ ಬರೆದರು. ತಪ್ಪಿಗೇನಾದರೂ ಪರಿಹಾರವನ್ನು ಸೂಚಿಸಿ, ಪ್ರಾಯಶ್ಚಿತ್ತವನ್ನು ನಿಯಮಿಸಬೇಕೆಂದು. ಇವತ್ತು ನಾಳೆಯಲ್ಲಿ ಕಾಗದ ಬರೆಯುತ್ತೇನೆ.”

ಬ್ರಹ್ಮಚಾರಿ ಕೇಳಿದರು: “ಮಹಾರಾಜ್, ಏನು ಪ್ರಾಯಶ್ಚಿತ್ತ ನಿಯಮಿಸುತ್ತೀರಿ?”

ಸ್ವಾಮೀಜಿ: “ಅಂತಹ ಕಠಿನ ಪ್ರಾಯಶ್ಚಿತ್ತವೇನೂ ಅಲ್ಲ. ಒಂದು ದಿನ-ಇಪ್ಪತ್ತುನಾಲ್ಕು ಗಂಟೆ ಉಪವಾಸಮಾಡಿ, ಆ ಕಾಲದಲ್ಲಿ ಸಾಧ್ಯವಾದಷ್ಟು ಜಪ ಮಾಡುವುದು. ನೀರನ್ನೂ ಕುಡಿಯದಿರುವಂತಹ ಘೋರ ಉಪವಾಸ ವ್ರತವೂ ಅಲ್ಲ. ಮೂರುಕಾಸು ಆರುಕಾಸಿನ ಪುರಿ ತಿಂದರೂ ಪರವಾಗಿಲ್ಲ; ರಾತ್ರಿಯೂ ಕೂಡ ಸಾಧ್ಯವಾದಷ್ಟು ಮಟ್ಟಿಗೆ ಜಪ ಮಾಡಬೇಕು. ಹತ್ತು ಸಾವಿರಕ್ಕೆ ಕಡಿಮೆಯಿಲ್ಲದಂತೆ ಜಪಮಣಿ ಎಣಿಸಬೇಕು. ಸಾಧಕನಾದವನು ತಪಶ್ಚರ‍್ಯೆಯಲ್ಲಿ ಎಷ್ಟು ಕಠಿನ ವ್ರತಾಚಾರಿಯಾಗಿದ್ದರೆ ಅಷ್ಟೂ ಒಳ್ಳೆಯದು.”

ಅಲ್ಲಿದ್ದ ಸಂನ್ಯಾಸಿ ಒಬ್ಬರೆಂದರು: “ಸ್ವಾಮಿ ಬ್ರಹ್ಮಾನಂದರೂ ನನಗೂ ಒಮ್ಮೆ ಇದೇ ರೀತಿಯ ವ್ರತವನ್ನು ಆಜ್ಞೆಮಾಡಿದ್ದರು: ‘ದಿನಕ್ಕೆ ಹತ್ತು ಸಾವಿರ ಸಾರಿಯಾದರೂ ಮಂತ್ರ ಜಪ ಮಾಡು. ಅದರಿಂದ ಬಹಳ ಒಳ್ಳೆಯದಾಗುತ್ತದೆ. ಕಡೆಯಪಕ್ಷ ಒಂದು ವರುಷವಾದರೂ ಅಭ್ಯಾಸವನ್ನು ಮುಂದುವರಿಸು’ ಎಂದು. ಆದರೆ ಒಂದು ವರ್ಷ ನಿರಂತರವಾಗಿ ಅಭ್ಯಾಸ ಮಾಡಲು ನನ್ನಿಂದಾಗಲಿಲ್ಲ. ಈಗಂತೂ ದಿನವೆಲ್ಲ ಆಶ್ರಮದ ಕೆಲಸವೇ ಆಗುತ್ತದೆ; ತಪಸ್ಯೆಗೆ ಸಮಯವೆ ದೊರೆಯುವುದಿಲ್ಲ.”

ಸ್ವಾಮೀಜಿ: “ಒಮ್ಮೊಮ್ಮೆ ಕೆಲಸದ ಒತ್ತಡದಲ್ಲಿ ಧ್ಯಾನಾದಿಗಳ ಅನುಷ್ಠಾನಕ್ಕೆ ಅನುಕೂಲವೂ ಅವಕಾಶವೂ ದೊರೆಯದೆ ಹೋಗಬಹುದು. ಆದರೆ ಹಾಗೆಂದುಕೊಂಡು ಅದನ್ನು ಕೈಬಿಡುವಷ್ಟು ದೂರ ಮುಂಬರಿಯಬಾರದು. ನಿಶ್ಚಯ, ಆಶ್ರಮದಲ್ಲಿ ಮಾಡುವ ಕೆಲಸವೆಲ್ಲ ದೇವರ ಸೇವೆಯೆ; ಆ ಕೆಲಸವೆಲ್ಲ ಅವನ ನೆನಪನ್ನೆ ತಂದುಕೊಡುತ್ತಿರುತ್ತದೆ. ಆದರೆ ಆ ಕಾರಣ ಹೇಳಿಕೊಂಡು ಧ್ಯಾನ ಜಪಗಳ ಅಭ್ಯಾಸವನ್ನು ಪೂರ್ತಿಯಾಗಿ ಬಿಟ್ಟುಬಿಡಬಾರದು.”

“ಕೆಲಸ ಎಲ್ಲಿಯವರೆಗೆ? ಕೆಲಸ ಮಾಡುವುದಕ್ಕೆ ಆವಶ್ಯಕವಾದ ದೈಹಿಕ ಶಕ್ತಿಯೆ ಸಾಲದೆ ಹೋಗುವ ಕಾಲವೂ ಬಂದೆ ಬರುತ್ತದೆ. ಆಗ ಸಮಯ ಸಾಗುವುದು ಹೇಗೆ? ಅಲ್ಲದೆ, ಕರ್ಮ ಮಾಡುವುದಕ್ಕೆ ಅರ್ಥವೆ ಇರುವುದಿಲ್ಲ, ಅದು ಧ್ಯಾನ ಜಪ ಮೊದಲಾದ ಆಧ್ಯಾತ್ಮಿಕ ಸಾಧನೆಗಳಿಂದ ಒಡಗೂಡಿರದಿದ್ದರೆ. ಆಧ್ಯಾತ್ಮಿಕ ಸಾಧನೆಯ ಬೆಂಬಲವಿಲ್ಲದಿದ್ದರೆ ಕರ್ಮ ಭಗವಂತನದು, ತನ್ನದಲ್ಲ ಎಂಬ ನಿಷ್ಕಾಮ ಭಾವನೆಯೂ ಮನಸ್ಸಿಗೆ ಬರುವುದಿಲ್ಲ. ಅಥವಾ ಮರೆತು ಹೋಗುತ್ತದೆ. ಹಾಗೇನಾದರೂ ಕರ್ಮದಲ್ಲಿ ಭಗವದರ್ಪಣ ಭಾವ ತೊಲಗಿತೆಂದರೆ ಅಹಂಕಾರ, ದಂಭ ಬಲಿಯುತ್ತವೆ. ಅಂತಹ ಕರ್ಮ ನಮ್ಮನ್ನು ಪರಿಶುದ್ಧರನ್ನಾಗಿ ಮಾಡುವುದಕ್ಕೆ ಬದಲಾಗಿ ನಮ್ಮ ಹೃದಯವನ್ನು ಕಲುಷಿತವನ್ನಾಗಿ ಮಾಡುತ್ತದೆ. ಬದುಕಿನ ಗುರಿ ಕರ್ಮ ಮಾಡುತ್ತಲೆ ಇರುವುದಲ್ಲ, ಈಶ್ವರ ಸಾಕ್ಷಾತ್ಕಾರ. ಭಗವಂತನನ್ನು ಮರೆಯಿಸುವ ಮರ್ಕ ಅತ್ಯಂತ ಅಶ್ರೇಯಸ್ಕರವಾದದ್ದು. ಕೆಲಸ ಕರ್ಮ ಒಂದಲ್ಲ ನೂರಿರಲಿ, ಸಾಧಕನಾದವನು ಜಪಧ್ಯಾನಾದಿ ಧಾರ್ಮಿಕ ಅಭ್ಯಾಸಗಳನ್ನು ಎಂದೆಂದಿಗೂ ತ್ಯಜಿಸಬಾರದು. ಧ್ಯಾನಾದಿ ಆತ್ಮ ಸಾಧನೆಯಿಂದಲ್ಲದೆ ಮನಶ್ಯಾಂತಿ ಲಭಿಸದು. ಆತ್ಮ ಹಾನಿಕರವಲ್ಲದ ದೃಷ್ಟಿಯಿಂದ ಕರ್ಮಮಾಡಲು ಕಲಿಯಬೇಕಾದರೆ ಸಾಧಕನಿಗೆ ಬೇರೆ ಗತ್ಯಂತರವಿಲ್ಲ.”

* * *