ಗುರುವೇಗತಿಯೆನ್ನು ಮನವೇ ತತ್ವಗುರುವಿನ ಪದಕಿಂತ ಪೆರತೊಂದು ಘನವೇ | ಮರವೆಯಿಂ ಮರುಳನಾಗಿರುವೆ | ಮೂಳೆ | ನರ ಮಾಂಸತನುವ ನಾನೆಂಬುದ ತರವೇ || ಪ || ಅರಿಯದೇ ಹಿಂದೆ ನೊಂದಿರುವೆ | ಮುಂದೆ ಕೊರತೆಯಿಲ್ಲದೆ ನಿಜಾನಂದದೊಳಿರುವೇ | ಧನಧಾನ್ಯಬಂದು ಭಾಗ್ಯಗಳು ನಿನ್ನ ಘನವನೀನರಿಯದೆ ಮಾಯಾ ಕಾರ್ಯಗಳು | ಕೊಣೆಗಾಣದಿರುವ ದುಃಖಗಳು ಅಲ್ಲಿಮನವಿಟ್ಟ ನರನಿಗೆ ಬಿಡದು ಕೋಳಗಳು || ೧ || ತನ್ನ ತಾ ತಿಳಿವಸಾಹಸವ ಬಿಟ್ಟು ನೀನೆಂದು ದೃಶ್ಯವಾಗುವ ಬೀದಿಕಸವ | ಧ್ಯಾನಿಸುತ್ತಿರುವ ಮಾನಸವ | ಬಿಟ್ಟು ನೀನೆಯಾದರೆ ಸೇವಿಸುವೆ ಸಿದ್ಧರಸವ || ೨ || ಕುರುಹಿಲ್ಲವದು ಶೂನ್ಯವಲ್ಲ | ನಿತ್ಯ | ನಿರತಿಶಯಾನಂದ ನುಡಿ ಯೊಳಗಿಲ್ಲ | ಪರವಾದಿ ಇದನೇನಬಲ್ಲ | ಅಲ್ಲಿ ಗುರುಶಂಕರನ ಬಿಟ್ಟು ಪರತೆಂಬುದಿಲ್ಲ || ೩ ||