ವೇದ ಕಾಲದಿಂದ ಬಂದಂತಹ ಶ್ರುತಿ ಮತ್ತು ಸ್ಮೃತಿ ಎಂಬ ಮಾತನ್ನು ಪೌರುಷೇಯ ಅಪೌರುಷೇಯ ಎಂಬ ಶಬ್ದಗಳನ್ನು ಮೊದಲು ಪರಿಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ವೇದ ದೃಷ್ಟಾರರಾದ ಋಷಿಗಳಿಗೆ ತಮ್ಮ ಧಾನ್ಯದಿಂದ, ತಪ್ಪಸ್ಸಿನಿಂದ ಕಂಡು ಬಂದಂತಹುದು, ಕೇಳಿ ಬಂದಂತಹುದು ಶ್ರುತಿ, ಅಪೌರುಷೇಯ ಇಂದು ಸುಜ್ಞಾನದ ಪರಕಾಷ್ಠತೆಯಿಂದ ಉದ್ಭವವಾದ, ಅತ್ಯುನ್ನತ ಭಾವನೆಗಳ ಪರಿಪಾಠ, ಪರಿಕಲ್ಪನೆಗಳು ಈ ಶ್ರುತಿಯಿಂದ ಜ್ಞಾನಾರ್ಜನೆಯ ದಾರಿಯಲ್ಲಿ ಸಾಗಿದ ಋಷಿಗಳು, ತಮ್ಮ ಶಿಷ್ಯಂದಿರಿಗೆ ಆ ವೇದಾಂತ ತತ್ತ್ವಗಳನ್ನು ಬಾಯಿಪಾಠ ಮಾಡಿಸುತ್ತಿದ್ದರು. ಕಿವಿಯಿಂದ ಕೇಳಿ, ಮನಸ್ಸಿನಿಂದ ಗ್ರಹಿಸಿ, ಅರಿವಿನ ದಾರಿಯಲ್ಲಿ ನಡೆಯುವಂತೆ ಗುರು, ಶಿಷ್ಯನನ್ನು ಕೈಹಿಡಿದು ನಡೆಸುತ್ತಿದ್ದರು, ಪ್ರಚೋದಿಸುತ್ತಿದ್ದರು. ಇಂತಹ ಕೇಳ್ಮೆಯ ಮೇಲಿನ ಕಲಿಕೆ, ನಮ್ಮ ಹಿಂದು ಸಂಸ್ಕೃತಿಯ ಒಂದು ವಿಶೇಷ ಎಷ್ಟೋ ಯುಗಗಳ ನಂತರ ಬಂದದ್ದು ಬರವಣಿಗೆ, ಮತ್ತುಷ್ಟು ಕಾಲಗಳ ನಂತರ ಮುದ್ರಣ, ಈಗ ಧ್ವನಿ ಮುದ್ರಣ, ಚಿತ್ರಣ ಇನ್ನೂ ಅನೇಕ ರೀತಿಯ ಸಾಧ್ಯತೆಗಳು ಬಂದಿವೆ.

ಹೀಗೆ ಗುರುವಿನಿಂದ ಜ್ಞಾನವನ್ನು ನೇರವಾಗಿ ಪಡೆಯುತ್ತಿದ್ದರಿಂದಲೇ ನಮ್ಮ ವೇದ, ಉಪನಿಷತ್ತುಗಳು ಗುರುವಿಗೆ ಬಹಳ ಹೆಚ್ಚಿನ ಸ್ಥಾನಮಾನ ಮರ್ಯಾದೆಯನ್ನು ಕಲ್ಪಿಸಿವೆ. ತೈತ್ತರೇಯ ಉಪನಿಷತ್‌” ಮಾತೃದೇವೇಭವ, ಪಿತೃ ದೇವೋಭವ, ಆಚಾರ್ಯ ದೇವೋಭವ ” ಎಂಬ ಗುರುವಿನ ಸ್ಥಾನವನ್ನು ಪರಿಗಣಿಸಿದೆ. ಈ ಭಾವನೆಯಿಂದಲೇ ಹುಟ್ಟಿದಂತಹ ಮಂತ್ರ ” ಗುರು ಬ್ರಹ್ಮಾ, ಗುರುವಿಷ್ಣು, ಗುರುದೇವೋ ಮಹೇಶ್ವರಃ “, ಗುರು ಸಾಕ್ಷಾತ್‌ಪರಬ್ರಹ್ಮ, ತಸ್ಮೈ ಶ್ರೀ ಗುರುವೇ ನಮಃ.

ಜ್ಞಾನದ ಹಾದಿಯಲ್ಲಿ ನಡೆಸಿ, ಜೀವನಾರ್ಜನೆಗೂ, ಒಳ್ಳೆಯ ಮಾನವನಾಗಿ, ಧರ್ಮದಿಂದ ನಡೆದು, ಉತ್ತಮ ಪೌರನಾಗಿ ಜೀವನ ಸಾಗಿಸಲು ಒಬ್ಬ ಮನುಷ್ಯನಿಗೆ ಬೇಕಾದುದು, ಒಬ್ಬ ಒಳ್ಳೆಯ ಗುರುವಿನ ಮಾರ್ಗದರ್ಶನ ಆದ್ದರಿಂದಲೇ ಗುರು – ಶಿಷ್ಯರ ಸಂಬಂಧ ಅತ್ಯುನ್ನತವಾದ ಭಾವಭಕ್ತಿಗಳಿಂದ ಕೂಡಿದೆ. ಗುರು ಶಿಷ್ಯನನ್ನು ಹೊಟ್ಟೆಯಲ್ಲಿ ಹುಟ್ಟಿದ ಮಗುನಿನಂತೆ ಆಧರಿಸಿ ಸರಿಯಾದ ಮಾರ್ಗದಲ್ಲಿ ನಡೆಯುವಂತೆ ಪ್ರೇರೇಪಿಸುತ್ತಾನೆ.

ಈ ರೀತಿಯ ಗುರು ಶಿಷ್ಯ ಪರಂಪರೆ, ವೇದಕಾಲದಿಂದ ವಿದ್ಯಾರ್ಜನೆಗಾಗಿ ಬಂದಾಗ್ಯೂ, ಮುಂದೆ ನಮ್ಮ ಎಲ್ಲಾ ವಿಧವಾಗ ಕಲಿಕೆಗಳಲ್ಲೂ ಹಾಸು ಹೊಕ್ಕಾಗಿದೆ. ಇಂದಿನ ವಿದ್ಯಾಮಂದಿರಗಳಲ್ಲಿ, ಹಿಂದಿನ ಈ ಆಳವಾದ ಭಾವನೆ ವ್ಯಕ್ತವಾಗದಿದ್ದರೂ, ಶಾಲೆ, ವಿಶ್ವವಿದ್ಯಾನಿಲಯಗಳಲ್ಲಿಯೂ ಸಹ, ಅನೇಕ ಶ್ರೇಷ್ಠ ಗುರುವರೇಣ್ಯರು ಹೆಸರು ವಾಸಿಯಾಗಿದ್ದಾರೆ. ನಾವೂ ಸಹ ಅನೇಕರನ್ನು ಜ್ಞಾಪಿಸಿಕೊಂಡು ಅವರಿಂದ ಕಲಿತ ವಿದ್ಯೆಗಾಗಿ ಕೃತಜ್ಞರಾಗಿರುತ್ತೇವೆ.

ಸಂಗೀತ ನೃತ್ಯ ಪ್ರಪಂಚದಲ್ಲಂತೂ ಗುರುವಿಗೆ ಬಹಳ ಮಹತ್ತರವಾದ ಸ್ಥಾನ ಇಂದೂ ಇದೆ. ಈ ಪ್ರದರ್ಶನ ಕಲೆಗಳು ಕೇಳ್ಮೆಯಿಂದ, ನೋಟದಿಂದ, ಅನೇಕ ಸ್ಮೂಕ್ಷ ವಿಚಾರಗಳನ್ನು ಗುರುವಿನ ಪದತಲದಲ್ಲಿ ಪರಿಗ್ರಹಿಸುವುದರಿಂದ, ಬರುವಂತಹ ವಿದ್ಯೆಗಳು, ಈಗಿನ ತಂತ್ರಜ್ಞಾನದಿಂದ, ಚಿತ್ರಣ ನೋಡಿ ಕಲಿಯುವೆ, ಧ್ವನಿ ಮುದ್ರಣ ಕೇಳಿ ಗ್ರಹಿಸುವೆ, ಎಂದು ಎಷ್ಟೇ ಬಯಸಿದರೂ ಗುರು ಮುಖೇನ ಕಲಿತ ವಿದ್ಯೆಗೆ ಅದು ಸಮನಾಗಲಾರದು ಅದು ಏಕೆ ಹೀಗೆ? ಎಂಬುದಕ್ಕೆ ಸರಿಯಾದ ಉತ್ತರ ವಿಲ್ಲ. ಆದ್ದರಿಂದಲೇ ಒಂದು ಹೆಸರಾಂತ ಗುರುವಿನ ಬಳಿ ಸಂಪ್ರದಾಯ ಬದ್ಧರಾಗಿ ಕಲಿತವರಿಗೇ ಹೆಚ್ಚಿನ ಪ್ರಾಶಸ್ತ್ಯ ತ್ಯಾಗರಾಜರ ಪರಂಪರೆ. ಮುತ್ತುಸ್ವಾಮಿ ದೀಕ್ಷಿತರ ಪರಂಪರೆ, ತಂಜಾವೂರು ಸಹೋದರರ, ಜಟ್ಟಿತಾಯಮ್ಮ ನವರ ಪರಂಪರೆ ಎಂದೊಡನೆ ಜನಗಳಿಗೆ ಈ ಕಲಾವಿದರು ಉತ್ಕೃಷ್ಟವಾದ ಕಲೆಯನ್ನು ಅಭ್ಯಾಸ ಮಾಡಿದ್ದಾರೆ ಎಂಬ ತಿಳಿವಳಿಕೆ ಸಹಜವಾಗಿ ಬರುತ್ತದೆ.

ಕ್ರಿ.ಪೂ. ೨ನೇ ಶತಮಾನದೆನಿಸಿದ, ನಾಟ್ಯ ಶಾಸ್ತ್ರವನ್ನು ಓದುವಾಗಲೇ, ಗುರುಶಿಷ್ಯ ಪರಂಪರೆಯ ಆರಂಭದ ಅರಿವಾಗುತ್ತದೆ. ಬ್ರಹ್ಮದೇವ, ನಾಲ್ಕು ವೇದಗಳಿಂದ, ಸಾಹಿತ್ಯ ಸಂಗೀತಾಭಿನಯ, ರಸವನ್ನು ಕ್ರೋಢೀಕರಿಸಿ, ಐದನೆಯ ವೇದದಿಂದ ನಾಟ್ಯವೇದನ್ನು ಸೃಜಿಸಿದನು. ಇದನ್ನು ಭರತಮುನಿಗೆ ಕೊಟ್ಟನು. ಭರತಮುನಿ ಇದನ್ನು ಶಾಸ್ತ್ರ ರೂಪದಲ್ಲಿ ರಚಿಸಿ, ತನ್ನ ನೂರು ಜನ ಮಕ್ಕಳಿಗೆ ಹೇಳಿಕೊಟ್ಟನು. ಶಿವನ ಆದೇಶದ ಮೇಲೆ ತಂಡುವು ತಾಂಡವನ್ನೂ ಪಾರ್ವತಿಯ ಲಾಸ್ಯವನ್ನು ಇವರಿಗೆ ಧಾರೆ ಎರೆದರು. ಅದು ಮುಂದೆ ನಾಟ್ಯ ವೇದವೆಂದು ಪ್ರಚಲಿತವಾಗಿ, ಪ್ರಪಂಚದಲ್ಲಿ ಹರಡಿತು ಎಂಬ ಪ್ರತೀತಿ ಇದೆ.

ಹೀಗೆ ಒಬ್ಬರಿಂದ ಇನ್ನೊಬ್ಬರಿಗೆ ಮಾತಿನ ಉಪದೇಶದಿಂದ, ಮನಸ್ಸಿನಿಂದ, ಕ್ರಿಯೆಯಿಂದ ಕೊಡಲ್ಪಡುವ ವಿದ್ಯೆ, ಗುರು ಶಿಷ್ಯ ಪರಂಪರೆಯನ್ನು ಉಂಟುಮಾಡಿದೆ. ವಿದ್ಯೆಯನ್ನು ಬೇಡಿ ಬರುವ ಅಭ್ಯರ್ಥಿ ಗುರುವಿನ ಕಾಲಿಗೆ ಎರಗುವುದು ನಮ್ಮ ದೇಶದ ಸಂಪ್ರದಾಯ. ವಿದ್ಯಾರ್ಥಿಗಿಂತ ಗುರು ಹಿರಿಯವ ಆದ್ದರಿಂದ ಈ ಮಾರ್ಯಾದೆ ಸರಿ. ಅದೆಷ್ಟೇ ಅಲ್ಲದೆ, ಅವರಿಬ್ಬರನ್ನು ಒಟ್ಟುಗೂಡಿಸಿ ಅವರಿಬ್ಬರ ಮಧ್ಯೆ ಪ್ರಜ್ವಲಿಸುವ ವಿದ್ಯೆಯ ಕೊಡಕೊಳ್ಳುವಿಕೆಗೆ ಸಲ್ಲುವ ಮರ್ಯಾದೆ ಇದು. ಜ್ಞಾನಾರ್ಜನೆಗಾಗಿ ಬಂದಿರುವ ಶಿಷ್ಯ, ತನ್ನಲ್ಲಿರುವ ಜ್ಞಾನವನ್ನು ನಿರ್ವಂಚನೆಯಿಂದ ಅವನಿಗೆ ದಯಪಾಲಿಸುವ ಗುರು, ಇವರ ಮಧ್ಯೆ ಬೆಳೆಯುವ ಬಾಂಧವ್ಯದ ಮೊದಲ ಪರಿಗಣನೆ ಈ ನಮಸ್ಕಾರ ಸಲ್ಲಿಸುವ ಪದ್ಧತಿ. ಈ ಕೊಡಕೊಳ್ಳುವಿಕೆಯಿಂದ ಗುರು ಶಿಷ್ಯರಿಬ್ಬರೂ ಸಾರ್ಥಕತೆಯೆಡೆಗೆ ನಡೆಯಬೇಕು, ಶ್ರಮಿಸಬೇಕು, ಇಹದಿಂದ ಪರದ ಕಡೆಗೆ ಉನ್ಮುಖರಾಗಬೇಕು.

ನಮ್ಮ ಶಾಸ್ತ್ರೀಯ ಪ್ರದರ್ಶನ ಕಲೆಗಳಲ್ಲಿಯ ಅಭ್ಯಾಸಕ್ರಮ ಬಹಳ ಕಟ್ಟುನಿಟ್ಟು ಶಾಸ್ತ್ರೀಯವೆಂದ ಮೇಲೆ ಅದರ ಸಂಪ್ರದಾಯಶೀಲತೆ, ಅದರ ಚೌಕಟ್ಟು ನಿಯಮಗಳು ಅನಿವಾರ್ಯ. ಇಲ್ಲಿ ಗುರು – ಹೆಜ್ಜೆ ಹೆಜ್ಜೆಗೂ ಶಿಷ್ಯನನ್ನು ನಿಯಂತ್ರಿಸಿ ಅವನ ಮನಸ್ಸಿಗೆ ಏಕಾಗ್ರತೆಯ ಕಡಿವಾಣ ಹಾಕಿ, ಅವನ ಮನಸ್ಸಿನ ಭಾವನೆಗಳು ಏಕಮುಖವಾಗಿ ಪ್ರವಹಿಸಲು ಸಹಕರಿಸಿ, ಅವನನ್ನು ಸದಭಿರುಚಿಯ ಸಾಧನೆಯೆಡೆಗೆ ಕೊಂಡೊಯ್ಯುವ ಅಪರೂಪದ ಶಕ್ತಿ. ಭಾವ ತೀಕ್ಷ್ಣತೆಗಳನ್ನು ಅರಿತು, ಅವನನ್ನು ಹುರಿದುಂಬಿಸಿ ಮುನ್ನಡೆಯುವಂತೆ ಮಾಡುವ ಪ್ರೇರಕ ಶಕ್ತಿ ಗುರುವಿನಲ್ಲಿರಬೇಕು.

ನಮ್ಮ ಕಲೆಗಳೆಲ್ಲಾ ದೈವೀಕ, ಮೋಕ್ಷದಾಯಕ, ಪರಮಾರ್ಥದ ಕಡೆಗೆ ಸಾಗುವ ಸಾಧನೆ ಎಂದೆನಿಸಿಕೊಂಡಿರುವಾಗ, ಈ ಶಾಸ್ತ್ರ ನಿಬದ್ದವಾದ ಜ್ಞಾನವನ್ನು ಜೋಪಾನವಾಗಿ ಕಾದಿರಿಸಿ, ಶಿಷ್ಯನಿಗೆ ಉಣಬಡಿಸಬೇಕಾದದ್ದು ಗುರುವಿನ ಆದ್ಯ ಕರ್ತವ್ಯ. ಇದನ್ನು ಯಾವ ತಾಂತ್ರಿಕ ಸಾಧನೆಗಳೂ ಮಾಡುವುದು ಸುಸ್ಸಾಧ್ಯ. ಮಾನವೀಯತೆಯ, ಹೃದಯ ವೈಶಾಲ್ಯತೆಯ ಮಾರ್ದವತೆಯಿಂದ ಮಾತ್ರ ಇದು ಸಾಧ್ಯ. ಆದ್ದರಿಂದಲೆ ನಮ್ಮ ಗುರು ಶಿಷ್ಯಪರಂಪರೆಗೆ ಇಷ್ಟೊಂದು ಮಹತ್ವ.

ಗುರು ಪರಂಪರೆ ಎಂದ ತಕ್ಷಣ ನಮ್ಮ ನೆನಪಿಗೆ ಬರುವುದು ಅನೇಕ ಹೆಸರುಗಳ ಪಟ್ಟಿ. ಸಂಗೀತ, ನೃತ್ಯದಲ್ಲಿ ಶೈಲಿಗಳ ನಿರ್ಮಾಣವಾಗಿರುವುದೇ ಈ ಗುರು ಶಿಷ್ಯ ಪರಂಪರೆ ಇಂದ. ಭರತನಾಟ್ಯದಲ್ಲಿ ತಂಜಾವೂರು ಶೈಲಿ, ಪಂದನಲ್ಲೂರು ಶೈಲಿ, ಮೈಸೂರು ಶೈಲಿ ಮುಂದಾದವು ಶ್ರೇಷ್ಠ ಗುರುವರೇಣ್ಯರಿಂದ ಶಿಷ್ಯರು ಪಡೆದ ಬಳುವಳಿ. ಹಾಗೇ ಸಂಗೀತದಲ್ಲೂ ತ್ಯಾಗರಾಜರ ಪರಂಪರೆ, ವೀಣೆ ಶೇಷಣ್ಣನವರ ಪರಂಪರೆ, ಹಿಂದೂಸ್ಥಾನಿ ಗಾಯನದಲ್ಲಿಯ ಗ್ವಾಲಿಯಾರ, ಕಿರಾನ, ಬನಾರಸಿ ಇನ್ನಿತರ ಘರಾನೆಗಳು, ಕಥಕ್‌ನೃತ್ಯದಲ್ಲಿ ಜೈಪುರ್ ಮತ್ತು ಲಕ್ನೋ ಘರಾವೆಗಳು, ಅದನ್ನು ಸಾಧಿಸಿ ಬೆಳೆಸಿದ ಶ್ರೇಷ್ಠ ಗುರುಗಳಿಂದ ಮುಂದುವರೆದಂತವು ಹೀಗೆ ಎಲ್ಲಾ ಪದ್ಧತಿಯಲ್ಲೂ ಅನೇಕ ಪರಂಪರೆಗಳಿವೆ.

ಈ ಪರಂಪರೆ ಪ್ರವಹಿಸಲು, ನಿರರ್ಗಳವಾಗಿ ಹರಿಯಲು, ಹೆಸರುವಾಸಿಯಾಗಲು, ಅನೇಕರನ್ನು ತನ್ನೆಡೆಗೆ ಆಕರ್ಷಿಸಲು, ಗುರು ಶಿಷ್ಯರಿಬ್ಬರ ಶ್ರಮವೂ ಅತ್ಯಗತ್ಯ. ತನ್ನ ಗುರುವಿನಿಂದ ಕಲಿತ ವಿದ್ಯೆಯನ್ನು ತನ್ನ ಸೃಜನಾತ್ಮಕತೆಯಿಂದ ಪರಿಪಕ್ವಗೊಳಿಸಿ, ಶಿಷ್ಯನಿಗೆ ಧಾರೆಯೆರೆಯುವವನೇ ಪರಮ ಶ್ರೇಷ್ಠಗುರು. ಸಂಪ್ರದಾಯ ನಿಂತ ನೀರಲ್ಲ. ಪ್ರವಹಿಸುವ ಮಹಾಪೂರ, ಗುರು ಶಿಷ್ಯರಿಬ್ಬರೂ ಒಂದರ ಮುಂದೊಂದು ಹಿಡಿದ ಕನ್ನಡಿಗಳಂತೆ. ಒಂದರೊಳಗೊಂದು ಕಾಣುವ ಪ್ರತಿಬಿಂಬದಂತೆ, ಗುರುವಿನಿಂದ ಶಿಷ್ಯ ಹೇಗೆ ಕಲಿಯುತ್ತಾನೋ, ಗುರುವೂ ಶಿಷ್ಯನಿಗೆ ಪಾಠಹೇಳುತ್ತಾ ಅನೇಕ ವಿಚಾರಗಳನ್ನು ಅರಿತು, ಓರೆಕೋರೆಗಳನ್ನು ತಿದ್ದಿ ತೀಡಿ ಮುಂದುವರೆಯುತ್ತಾನೆ. ಶಿಷ್ಯ ಪ್ರವರ್ಧಮಾನನಾಗುತ್ತ ಗುರುವಿನ ಹೆಗ್ಗಳಿಕೆಯೂ ವೃದ್ಧಿಸುತ್ತಾ ಹೋಗುತ್ತದೆ. ಇದೇ ಗುರುಶಿಷ್ಯ ಪರಂಪರೆಯ ಅಂತಿಮ ಧ್ಯೇಯ, ಆದರ್ಶ, ಇಂತಹ ಗುರುಶಿಷ್ಯ ಪರಂಪರೆಯ ಸಂಪ್ರದಾಯ ನಮ್ಮ ನಾಡಿನಲ್ಲಿ ಅಜರಾಮರವಾಗಲಿ ಎಂದು ಆಶಿಸೋಣ.