ಗುರುಲಘು ದೋಷಗಳು

ಮಣಿಭೂಷಣವೃತ್ತಂ || ಆರುಮೀ ಗುರು-ಲಘೂದಿತ-ದೋಷ-ವಿಶೇಷಮಂ

ಧೀರಸತ್ವರಱದುಂ ಕುಱಗೊಂಡು ವಿಭಾಗಿಸರ್ |

ಕಾರಣಾಂತರಮನಂತ[1] ದರೊಳ್ ತಱಸಂದು ನಿ-

ರ್ಧಾರಿತ-ಕ್ರಮದೆ ಪೇೞ್ವೆನುದಾಹರಣಂಗಳಂ ||೧೨೬||

ಮಣಿಭೂಷಣವೃತ್ತಂ || ಆಗುಳುಂ ಗುರುಗಳಲ್ಲದ ತಾಣದೊಳಂ ಗುರೂ-

ದ್ಯೋಗದಿಂ ಬಗೆಗೆ ಗೌರವದೋಷಮಿಂದೆಂಬುದಂ |

ಬೇಗಮಾ ಲಘುಗಳಲ್ಲದ ತಾಣದೊಳಂ ಲಘೂ-

ಪಾಗಮಕ್ರಮದೆ ನಂಬುಗೆ ಲಾಘವ-ದೋಷಮಂ ||೧೨೭||*

೧೨೬. ಯಾವ ಲಕ್ಷಣಕಾರರೂ ಈ ಗುರು-ಲಘು-ದೋಷಗಳನ್ನು ಬೇರೆ ಬೇರೆಯಾಗಿ ನಿರ್ದಿಷ್ಟಪಡಿಸಿ ವಿಂಗಡಿಸರು. ಇದ್ದುದರಲ್ಲಿಯೇ ಕಾರಣಾಂತರಗಳನ್ನು ನಿಶ್ಚಯಿಸಿ, ನಿರ್ಣೀತವಾದ ಒಂದು ಕ್ರಮದಿಂದ ಇಲ್ಲಿ ಉದಾಹರಣೆಗಳನ್ನು ಹೇಳುವೆನು-

೧೨೭. ಯಾವಾಗಲೂ ಗುರುವಲ್ಲದ ವರ್ಣಗಳ ಸ್ಥಾನದಲ್ಲಿ ಗುರುವಿನ ಪ್ರಯೋಗವನ್ನೇ ‘ಗುರು’-ದೋಷ (=ಗೌರವದೋಷ’) ಎಂದೂ ತಿಳಿಯಬಹುದು. ಹಾಗೆಯೇ ಲಘುವಲ್ಲದ ವರ್ಣಗಳ ಸ್ಥಾನದಲ್ಲಿ ಲಘುವಿನ ಪ್ರಯೋಗವನ್ನೇ ‘ಲಘು’ ದೋಷ ಎಂದೂ ಭಾವಿಸಬಹುದು.

* ಇದೇ ವೃತ್ತದ ಕಾವ್ಯಾವಲೋಕನ ಪ್ರಯೋಗಕ್ಕೆ, ಹೋಲಿಸಿ-

ನೇಸಱಂ ಪೆಱಗುಮಾಡಿ ಜಯಾವಹಮೆಂಬಿನಂ

ಬೀಸೆ ಬೆಂಬೞ*ಯನೊಯ್ಯನೆ ಗಾಳಿ ರಣಾಜಿರೋ- |

ದ್ಛಾಸಿ ಫಲ್ಗುಣನ ಚೋದಿಸೆ ಭೋಂಕೆನೆ ನೂಱನೂ.

ರ್ಛಾಸಿರಂಗಳವೊಲಾಯ್ತು ರಥಂ ಕಡುವೇಗದಿಂ || ಪದ್ಯಸಂಖ್ಯೆ-೨೭: ಶಬ್ದ ಸ್ಮ*ತಿ.

ಇದೇ ವೃತ್ತ ಅಲ್ಲಿಯೇ ಪದ್ಯ ೨೨೧, ೩೪೧ ಮುಂತಾದೆಡೆ ಕಾಣಬರುತ್ತದೆ.

ಮಂಗಳವೃತ್ತಂ || ನೆರೆದು ಬಂದಪರವರ್ ಸಾ*ಸ?*[2]ಯಲಾ ಬಲಮೆಲ್ಲಮೆ-

ೞ್ತ[3]ರದೆ ಕೊಂದಪನಿವಂದಿರನೀಗಳೆ ನಿಕ್ಕುವಂ |

ಪರಿದು ಬೀೞ್ವವೊಲಿವಂದಿರ ಪಾಡೞ*ವಂದಮಂ

ತಿ[4]ರವೇ*ವೆ?*ೞೊಡ್ಡೞೆಯದಂತಿರೆ ನಮ್ಮವರೆಲ್ಲರಂ ||೧೨೮||

ಮಣಿಭೂಷಣವೃತ್ತಂ || ಇಂತು ಪೇೞ್ದೊಡಿದು ಗೌರವದೋಷದ ಮಾೞ್ಕೆನಿ

ಶ್ಚಿಂತಮೀ ತೆಱದವಂ ಕಳೆಗಾ ಕೃತಿಯತ್ತಣಿಂ |

ಮುಂತೆ ಪೇೞ್ವ ಕುಱಪಂ ಕುಱಗೊಂಡು ಕವೀಶರಾ |

ರ್ಪಂತು ಪಿಂಗಿಸುಗೆ ಕಾವ್ಯದಿನಾ ಲಘುದೋಷಮಂ ||೧೨೯||

೧೨೮. ಅವರು ನೆರೆದು ಬರುತ್ತಿರುವರು ! ಆ ಸೈನ್ಯವೆಲ್ಲ ಸಾಯಲಿ ! ಇವರನ್ನೆಲ್ಲ ಹರಿದು ಬೀಳುವಂತೆ ಈಗಲೇ ದಂಡೆತ್ತಿಬಾರದಿದ್ದರೂ ಕೊಲ್ಲುವನೆಂಬುದೇ ದಿಟ! ಇವರು ಪಾಡಳಿದು ಬೀಳುವವರೆಗೂ ನಮ್ಮವರೆಲ್ಲರ ಸಂಘಟನೆ ಮುರಿಯದೆ ಹಾಗೆಯೇ ಇರಲು ಹೇಳು ! *ಇಲ್ಲಿಯ ಮಂಗಳವೃತ್ತದಲ್ಲಿ ಅಗತ್ಯವಾದ ಗುರುಲಘು ಪ್ರಸಾರ ಹೀಗೆದೆ-

ನ ಭ ಜ ಜ ಗುರು

* * *  * * *  * * *  * * *  *

ಮೊದಲನೆಯ ಮತ್ತು ನಾಲ್ಕನೆಯ ಪಾದಗಳಲ್ಲಿ ಇಲ್ಲಿ ಪರಿಷ್ಕೃತವಾದ ಪಾಠದಂತೆ ಛಂದೋಲಕ್ಷಣದ ಪ್ರಕಾರ ಗುರುವಿರಬಾರದಾಗಿದ್ದ ಕಡೆಗಳಲ್ಲಿ ಗುರು ಬಂದು ದೋಷವಾಗಿದೆ-

*

I- *ನೆ*ರೆ*ದು *ಬಂ*ದ*ಪ *ರ*ವರ್ *ಸಾ*ಯಲಾ….

*

Iಗಿ- *ತಿ*ಱ*ವೇ *ೞೊ*ಡ್ಡ*ಱ *ಯ*ದಂ*ತಿ*ರೆ….

ಮೇಲೆ ‘ಸಾ’ ಮತ್ತು ‘ವೇ’ ಎಂಬ ಗುರುಗಳ ಬದಲು ಲಘು ಬಂದಿದ್ದರೆ ‘ಗುರುದೋಷ’ ತಪ್ಪುತ್ತಿತ್ತು.**

೧೨೯. ಹೀಗೆ ಹೇಳಿದರೆ ಅದು ಗುರುದೋಷವಾಗುತ್ತದೆ. ಸಂಶಯಮಾಡದೆ ಅದನ್ನು ಕೃತಿಯಿಂದ ಪರಿಹರಿಸಬೇಕು. ಇನ್ನು ಮುಂದೆ ತೋರಿಸಿರುವ ಲಕ್ಷಣವನ್ನು ಅನುಲಕ್ಷಿಸಿ ಕವಿಶ್ರೇಷ್ಠರು ಲಘುದೋಷವನ್ನು ಕಾವ್ಯದಿಂದ ತೊಲಗಿಸಬೇಕು.

ಮಣಿಭೂಷಣವೃತ್ತಂ || ಸಾದುಗೆತ್ತು ಬಗೆಯ(ಯಾ?)ದವನಾನೊ[5]ಡನಟ್ಟಿದೇ-

ನಾದಮಾನುಮೞ*ಮಾನಸನಾಗದೆ ಮಾಳದೊಳ್ |

ಮೋದದಾನುಡುವ ಸೀರೆಗಮೆನ್ನನದಿರ್ಪಿ ಬಾ[6]

ರ*ರಾ*ದೆಪೋದೆಡೆಯೊಳೇ ತಡೆದ*ದಾ?*ನ[7]ವನೆಂದಪೆಂ ||೧೩೦||

ಸಮುಚ್ಚಯ ದೋಷ

ಮಣಿಭೂಷಣವೃತ್ತಂ || ಬೇಱೆವೇಱರೆ ವಿಕಲ್ಪ-ಸಮುಚ್ಚಯ-ಯುಗ್ಮದೊಳ್

ತೋಱುವೆಂ ಕ್ರಮವಿಕಲ್ಪನೆಯಂ ಗುಣದೋಷಮಂ |

ಕೀಱಕೊಂಡು ಗುಣಮಂ ಕಳೆಗಲ್ಲಿಯ ದೋಷಮಂ

ತೂ[8]ಱ ಪಿಂಗಿಸುವವೋಲ್ ಪೊಸ ನೆಲ್ಲಿರೆ ಪೊಳ್ಗಳಂ ||೧೩೧||

೧೩೦. ಸಾಧುವೆಂದು ತಿಳಿದುಕೊಂಡು, ಅರಿಯದೆ ಅವನನ್ನು ಜೊತೆಗೆ ಕರೆಯಿಸಿದೆನಲ್ಲ ! ನಾನು ಕೂಡ ಕೆಟ್ಟ ಮನುಷ್ಯನಾಗೆನೆ? ದಿಣ್ಣೆಯ ಮೇಲೆ ನಾನುಟ್ಟ ಬಟ್ಟೆಗಾಗಿ ನನ್ನನ್ನು ಹೆದರಿಸಿ, ನನ್ನೊಡನೆ ಬಾರದೆ, ನಾನು ಹೋದಲ್ಲಿ ಅವನು ತಡೆದೇ ಬಿಡುವನು ಎನ್ನುತ್ತೇನೆ ! *ಇಲ್ಲಿ ವೃತ್ತ ಮಣಿಭೂಷಣವೆಂಬುದು. ಅದರ ಗುರು-ಲಘು ಪ್ರಸ್ತಾರ ಹೀಗಿದೆ-

ರ ನ ಭ ಭ ರ

* * *  * * * * * *  * * * * * *

ಇಲ್ಲಿಯೂ ಮೊದಲನೆಯ ಮತ್ತು ನಾಲ್ಕನೆಯ ಪಾದಗಳಲ್ಲಿ ಲಘುವಿರಬಾರದಾಗಿದ್ದ ಕಡೆಗಳಲ್ಲಿ ಲಘು ಬಂದು ದೋಷವಾಗಿದೆ, ಕೆಳಗೆ ಕಾಣಿಸಿದಂತೆ ಮೂರೆಡೆಗಳಲ್ಲಿ-

x

I- *ಸಾ*ದು*ಗೆತ್ತು *ಬ*ಗೆ ಯ*ದ*ವ*ನಾ….

x

Iಗಿ- *ರ*ದೆ*ಪೋ ದೆ*ಡೆ*ಯೊ*ಳೇ *ತ*ಡೆ *ದ*ನ *ವ*ನೆಂ*ದ*ಪೆಂ

೧೩೧. ಸಮುಚ್ಚಯಗಳ (ಪ್ರಯೋಗದ) ಜೋಡಿಯನ್ನು ದಾಹರಿಸಿ ಬೇರೆ ಬೇರೆಯಾಗಿ ಯಾವಾಗ ಗುಣ, ಯಾವಾಗ ದೋಷ ಎಂಬುದನ್ನು ವಿಂಗಡಿಸಿ ತೋರಿಸುತ್ತೇನೆ. ಅಲ್ಲಿ ಗುಣವಾದುದನ್ನು ಸ್ವೀಕರಿಸಿ, ದೋಷವಾದುದನ್ನು ತೊರೆಯಬೇಕು; ಹೊಸ ಹೊಸ ಬತ್ತವನ್ನು ತೂರಿಕೊಂಡು ಜೊಳ್ಳುಗಳನ್ನು ದೂರಮಾಡುವ ಹಾಗೆ !

ಮಣಿಭೂಷಣವೃತ್ತಂ || ದೇವರುಂ ಗೊರವರುಂ ಗುಣ-ವೃದ್ಧರನಾರತಂ

ಕಾವರಕ್ಕರಸನಂ ಪ್ರಜೆಯಂ ಪರಿವಾರಮಂ |

ಏವಮಂ ಬಗೆಯದಂತಿರೆ ಪೇೞ್ದ ಸಮುಚ್ಚಯೋ-

ದ್ಭಾ[9]ವಕ-ಕ್ರಮ-ವಿಚಾರದೆ ದೋಷಮಿದಗ್ಗಳಂ ||೧೩೨||

ಮಂಗಳವೃತ್ತಂ || ನೃಪನುಮಂ ಪ್ರಜೆಯುಮಂ ಪರಿವಾರಮುಮುಂ ಮಹಾ-

ಕೃಪೆಯಿನಾ ಗೊರವರುಂ ಸುರರುಂ ಗುಣವೃದ್ಧರುಂ |

ವಿಪುಳ-ರಾಗ-ಪರರಾಗಿಸುಗೆಂದು ಸಮುಚ್ಚಯ-

ಕ್ಕುಪಚಿತೋರು-ಗುಣಮಂ ಮಿಗೆ ಪೇೞ್ಗೆ ಕವೀಶ್ವರರ್ ||೧೩೩||

೧೩೨. ‘ದೇವರೂ ಗೊರವರೂ ಗುಣವೃದ್ಧರು ಯಾವಾಗಲೂ ಅರಸನನ್ನು ಪ್ರಜೆಯನ್ನು, ಪರಿವಾರವನ್ನು ಕಾಪಾಡಲಿ’- ಹೀಗೆ ತಪ್ಪನ್ನು ಅರಿಯದೆ ಮಾಡುವ ಸಮುಚ್ಚಯಗಳ ಪ್ರಯೋಗದ ಕ್ರಮವನ್ನು ವಿಮರ್ಶಿಸಿದಾಗ, ದೊಡ್ಡ ದೋಷವಾಗುತ್ತದೆ. *ಇಲ್ಲಿ ‘ಊ’ ಎಂಬ ಸಮುಚ್ಚಯ ಮೂರು ಕರ್ತೃಗಳಿಗೂ ಸಮಾನವಾಗಿ ಬರಬೇಕಾಗಿತ್ತು; ಹಾಗೆ ಬಾರದೆ ಕಡೆಯದು ಸಮುಚ್ಚಯ-ಹೀನವಾಗಿರುವುದು ಒಂದು ದೋಷ; ಕರ್ಮಗಳ ಪೈಕಿ ಮೂರರಲ್ಲಿ ಒಂದಕ್ಕೂ ಸಮುಚ್ಚಯವೇ ಇಲ್ಲದ್ದು ಎರಡನೆಯ ದೋಷ; ‘ಗೊರವರು ಅರಸನನ್ನು’, ‘ದೇವರು ಪ್ರಜೆಯನ್ನು’ ಎಂಬ ವಿವಕ್ಷೆಯಿದ್ದುದಾದರೆ ‘ಚ್ಯುತಯಾಥಾಸಮಖ್ಯ’ ದೋಷಕ್ಕೂ ಇಲ್ಲಿ ಎಡೆಯಾಗಿದೆಯೆನ್ನಬಹುದು.*

೧೩೩. ‘ನೃಪನನ್ನೂ, ಪ್ರಜೆಯನ್ನೂ ಪರಿವಾರವನ್ನೂ ತುಂಬಾ ಕೃಪೆಯಿಂದ ಗೊರವರೂ ದೇವರೂ ಗುಣವೃದ್ಧರೂ ರಾಗಪರರನ್ನಾಗಿಸಲಿ’ (ಎಂದು ತಿದ್ದಿದಾಗ) ಇಲ್ಲಿ ಗುಣಾತಿಶಯವೇ ಸಮುಚ್ಚಯಪ್ರಯೋಗದಲ್ಲಿದೆಯೆಂಬುದನ್ನು ಕವೀಶ್ವರರು ಹೇಳಿಯಾರು. *ಇಲ್ಲೆಲ್ಲ ‘ಗೊರವ’ ಶಬ್ದಕ್ಕೆ ಗುರುಗಳೆಂಬ ಪೂಜ್ಯಾರ್ಥವೇ ಪ್ರಸಕ್ತವಿದೆ.*

ಮಣಿಭೂಷಣವೃತ್ತಂ || ಬೇಱೆವೇಱೆ ನಿಲೆ ಕಾರಕದೊಳ್ ಕ್ರಿಯೆ ತಳ್ತು ಮುಂ-

ತೋ[10]ಱೆಪೇೞ್ದವಗುಣಂ ಗುಣರೂಪದೆ ಪೊರ್ದುಗುಂ |

ಸಾಱುಗಾನೆಯವರೆಲ್ಲರುಮಂ ನೃ[11]ಪ ತಾನೆ ಮ-[12]

ತ್ತೇಱುವಂ ಪ[13]ಣಿದೊಡಾನೆಯನೆಂ[14]ಬುದ ದೂಷಿತಂ ||೧೩೪||

ಮಂಗಳವೃತ್ತಂ || ಒ[15]ಸೆಗೆ ಮೇಣ್ ಮುನಿಗೆ ಮೇಣವರೆಲ್ಲರುವಂತೆ ಬ-

ಗ್ಗಿಸುಗೆ ಮತ್ತು ೞಯಲಾಗದು ನೆಟ್ಟನೆ ಪೊಣ್ದುದಂ |

ಪುಸಿವರಾಗಿರದ*ದೆಂ?*ಮಾ[16]ನಸರೆಂಬುದನಿಂತೆ ಶಂ-[17]

ಕಿಸದೆ ನಂಬುವುದು ಮಿಕ್ಕ ವಿ[18]ಕಲ್ಪದ ದೋಷಮಂ ||೧೩೫||

೧೩೪. *ಇನ್ನೊಂದು ರೀತಿಯಲ್ಲಿಯೂ ಸಮುಚ್ಚಯ ದೋಷವನ್ನು ಪರಿಹರಿಸಬಹುದು* ಪ್ರತ್ಯೇಕವಾಗಿ ಒಂದೊಂದು ಕಾರಕಕ್ಕೂ ಬೇರೆ ಬೇರೆ ಕ್ರಿಯಾಪದವೇ ಅನ್ವಯಿಸುವಂತೆ ಉಕ್ತವಾದರೂ, ಇಲ್ಲಿಯ ದೋಷ ಹೋಗಿ ಅದು ಗುಣಸ್ವರೂಪವನ್ನೇ ತಳೆಯುತ್ತದೆ. ಉದಾಹರಣೆ-‘ಆನೆಯವರೆಲ್ಲರಿಗೂ ಸಾರಿ ಹೇಳಲಿ; ಆನೆಯನ್ನು ಸಜ್ಜುಮಾಡಿದರೆ ಅರಸನು ಮತ್ತೆ ತಾನೇ ಏರುವನು’. *ಇಲ್ಲಿ ಸಮುಚ್ಚಯ ಒಮ್ಮೆ ಮಾತ್ರ ಬಂದಿದೆ-‘ಆನೆಯವರೆಲ್ಲರುಮಂ’ ಎಂದಿದೆ; ಆದರೂ ಒಂದೊಂದು ಕಾರಕಕ್ಕೂ ಒಂದೊಂದು ಕ್ರಿಯೆ ಅನ್ವಯಿಸುವಂತೆ ಉಕ್ತವಾಗಿದೆ. ‘ಸಾರಿಹೇಳಲಿ’ ಎಂಬ ಕ್ರಿಯೆ ‘ಆನೆಯವರೆಲ್ಲರಿಗೂ’ ಎಂಬ ಕಾರಕಕ್ಕೂ, ‘ಏರುವನು’ ಎಂಬ ಕ್ರಿಯೆ ‘ಆನೆಯನ್ನು’ ಎಂಬ ಕಾರಕಕ್ಕೂ ನೇರವಾಗಿ ಅನ್ವಯಿಸುವುದರಿಂದ ಏಕವಾಕ್ಯತೆ ಬಂದು ಸಮುಚ್ಚಯದೋಷ ತಪ್ಪುತ್ತದೆ.*

೧೩೫. ಎರಡು ಪರ್ಯಾಯ (alternative )ಗಳನ್ನು ಹೇಳಲು ಉಪಯೋಗಿಸುವ ಅವ್ಯಯದಲ್ಲಿ (ರೂಪಭೇದದ ಪ್ರಯುಕ್ತ) ‘ವಿಕಲ್ಪ-ದೋಷ’ ಬರುವುದಕ್ಕಿದು ಉದಾಹರಣೆ-

‘ಅವರೆಲ್ಲರೂ ಬೇಕಾದರೆ ಒಲಿಯಲಿ, ಬೇಕಾದರೆ ಕೋಪಿಸಲಿ, ಹಾಗೆಯೇ ಮತ್ತೆ ಗದರಿಸಲಿ; ಸ್ಪಷ್ಟವಾಗಿ ಪ್ರತೊಜ್ಞೆ ಮಾಡಿದ್ದನ್ನು ಸತ್ಯವಂತರಾದ ಮನುಜರು ಬಿಡಬಾರದು’. *ಇಲ್ಲಿ ಮೊದಲೆರಡು ಸಲ ‘ಬೇಕಾದರೆ’ ಎಂಬ ವಿಕಲ್ಪಾರ್ಥಕ ಶಬ್ದವನ್ನು ಪ್ರಯೋಗಿಸಿ, ಮುಂದೆ ಅದೇ ಅರ್ಥಪರವಾದ ಅದೇ ಪದಪ್ರಯೋಗದ ಬದಲು ‘ಮತ್ತೆ’ ಎಂಬ ಪ್ರಯೋಗ ವಿಕಲ್ಪ-ದೋಷಕ್ಕೆ ಲಕ್ಷ್ಯ.*

ಮಂಗಳವೃತ್ತಂ || ಪೞಗೆ ಮೇಣ್ ಪೊಗೞ್ಗೆ ಮೇಣ್ ನೆವಮಿಲ್ಲದೊಡಿಂತು ಕೈ

ಗೞಯೆ ಬಗ್ಗಿಸುಗೆ ಮೇಣವರೆಲ್ಲರುಮಂತುಮಾ- |

ನುೞವನಲ್ಲೆನಿತಾದೊಡಮೆಂಬುದು ಚೆಲ್ವ ಪಾಂ -[19]

ಗೞಯದಂತಿದನೆಯಿಂತಿರೆ ಪೇೞ್ಗೆ ವಿಕಲ್ಪಮಂ ||೧೩೬||

ಗೀತಿಕೆ ||  ಕುಱತು ಸಮುಚ್ಚಯದಾ ಬೞ* ವಿಕಲ್ಪದಾ

ತೆಱದೊಳೆ ದೋಷಮುಮನಂತೆ ಗುಣಮುಮಂ |

ಕಿಱದಱೊಳಱೆಯೆ ಪೇೞ್ದೆನಿಂತೆ ಪೆಱವುಮನೀ

ಕುಱಪನೆ ಕುಱಮಾಡಿ ಪೇೞ್ಗೆ ಕಬ್ಬಮಂ ||೧೩೭||

೧೩೬. *ಅದನ್ನೇ ಹೀಗೆ ತಿದ್ದಬಹುದು-* ‘ಅವರೆಲ್ಲರೂ ಬೇಕಾದರೆ ದೂರಲಿ, ಬೇಕಾದರೆ ಹೊಗಳಲಿ, ಬೇಕಾದರೆ ನಿಷ್ಕಾರನವಾಗಿ ಹೀಗೆ ಮಿತಿಮೀರಿ ಗದರಿಸಲಿ; ಹೇಗೂ ನಾನು ಮಾತ್ರ ಏನೇ ಆದರೂ ಬಿಡುವವನಲ್ಲ’ ಎಂದರೆ, ಅಲ್ಲಿ ಗುಣದ ಚೆಲುವಿಗೆ ಕೊರತೆಯಿಲ್ಲ. ವಿಕಲ್ಪಾರ್ಥಕ ಶಬ್ದಗಳನ್ನು ಹೀಗೆಯೇ ಹೇಳಬೇಕು. *ಈ ತಿದ್ದಿದ ಉದಾಹರಣೆಯಲ್ಲಿ ಮೂರನೆಯ ಸಲವೂ ಹಿಂದೆ ಪ್ರಯುಕ್ತವಾದ ವಿಕಲ್ಪಾರ್ಥಕಶಬ್ದವನ್ನೇ ಮತ್ತೆಯೂ ಉಚ್ಚರಿಸಲಾಗಿರುವುದರಿಂದ ದೋಷ ಪರಿಹೃತವಾಗಿದೆ.*

೧೩೭. ಸಮುಚ್ಚಯದ ಪ್ರಯೋಗಗಳ ಬಗೆಗೆ, ಆಮೇಲೆ ವಿಕಲ್ಪಗಳ ಪ್ರಯೋಗಗಳ ಬಗೆಗೆ-ದೋಷವನ್ನೂ, ಗುಣವನ್ನೂ ಸಂಕ್ಷೇಪವಾಗಿ ತಿಳಿಯುವಂತೆ ಹೇಳಿದ್ದಾನೆ. ಇದರಂತೆ ಸ್ವರೂಪವನ್ನು ಹೊಂದಿರುವ ಮಿಕ್ಕವನ್ನೂ ಸರಿಯಾಗಿ ಅನುಲಕ್ಷಿಸಿ ಅರಿತು ಕಾವ್ಯವನ್ನು ಹೇಳಬೇಕು. *ಸಂಸ್ಕೃತ ಶಾಸ್ತ್ರಕಾರರು ‘ಏವಮನ್ಯ ದಪಿ ಸ್ವಯಮೇವೋಹ್ಯಮ್’ ಎಂದು ಪ್ರಕರಣವನ್ನು ಸಮಾಪ್ತಿಗೊಳಿಸುವುದು ವಾಡಿಕೆ. ಅದನ್ನೇ ಈ ಗ್ರಂಥಕಾರನೂ ಅನುಸರಿಸಿದ್ದಾನೆ. ಇಲ್ಲಿ ದಿಕ್ಪ್ರದರ್ಶನ ಮಾತ್ರ ಮಾಡಿದೆ; ಇದೇ ಲಕ್ಷಣದ ಮಾದರಿಯಲ್ಲಿ ಮಿಕ್ಕವನ್ನು ಸ್ವಪ್ರತಿಭೆಯಿಂದ ವಾಚಕರು ಊಹಿಸಿಕೊಳ್ಳಬೇಕೆಂದು ತಾತ್ಪರ್ಯ.*


[1] ತವರೊಳ್ ‘ಪಾ’

[2] ಸಯಲೋ ‘ಪಾ’ ಸರೆಯಲಾ ‘ಅ’.

[3] ೞ್ತ ರಲೇ ‘ಪಾ’.

[4] ತಿರವೆಳೊಡ್ಡೞೆಯದಂತಿರೆ ‘ಮ’, ತಿರವೆಲೊಡ್ಡಳಿಯದಿಂತಿರೆ ‘ಬ’

* ಈ ೧೨೮ ಮತ್ತು ೧೩೦ ಲಕ್ಷ್ಯಗಳು ಉಪಲಬ್ಧ ಹಸ್ತಪ್ರತಿಗಳಲ್ಲೆಲ್ಲ ಹಿಂದುಮುಂದಾಗಿದೆ. ಲಕ್ಷ್ಯ-ಲಕ್ಷಣ ಸಮನ್ವಯಕ್ಕಾಗಿ ‘ಸೀ’ ಸೂಚನೆಯನ್ನು ಅಂಗೀಕರಿಸಿ ಇಲ್ಲಿ ಸರಿಪಡಿಸಿದೆ. ಲಿಪಿದೋಷಗಳಾದ ಹ್ರಸ್ವ-ದೀರ್ಘಗಳನ್ನೂ ಯಥೋಚಿತವಾಗಿ ಇಲ್ಲಿ ಪರಿಷ್ಕರಿಸಿದೆ.

[5] ನೋಡಲಟ್ಟಿದೇ ‘ಪಾ’ ನೋಡನಟ್ಟಿದೆ ‘ಮ’, ನೋಡಲ್ಪಟ್ಟಿವೆ-‘ಸೀ’, ಇವೆಲ್ಲ ಪಾದಾಂತ್ಯ ಲಘುವಿದ್ದಾಗ ಛಂದೋಭಂಗ ಸ್ಪಷ್ಟ.

[6] ಬಾರದೆ ಪೋದೆ (ನಾಯೆ)ಡೆಯೊಳ(ಂ) ‘ಮ’; ಬಾರದೆ ‘ಸೀ’.

[7] ನವನಂದಮಂ- ‘ಮ’, ನವನೆಂದನಂ ‘ಪಾ’ ಛಂದಸು ಸರಿಯಾಗಲೆಂದು ಇಲ್ಲಿ ಪರಿಷ್ಕೃತಪಾಠ ಬಿ.ಎಂ.ಶ್ರೀ. ಅವರಿಂದಲೂ ಸೂಚಿತ. ‘ತಡೆದಾನ್’ ಎಂಬುದು ನಮ್ಮ ಪರಿಷ್ಕರಣ; ಉತ್ತನೆಯ ಅಕ್ಷರ ಛಂದೋನಿಯಮದಂತೆ ಗುರುವಾಗಬೇಕಾದ್ದರಿಂದ ಸಮರ್ಥಿತ.

[8] ತೋಱ ‘ಪಾ,ಮ, ಸೀ’. ಅರ್ಥಾನುಗುಣ್ಯಕ್ಕಾಗಿ ಇಲ್ಲಿ ಪಾಠ ಪರಿಷ್ಕೃತ.

[9] ದ್ಭಾವಿತ ‘ಬ’

[10] ತೋಱು ‘ಪಾ’.

[11] ನೃಪನಾನೆ ‘ಪಾ’.

[12] ಮತ್ತೇಱುವೆಂ ‘ಪಾ, ಮ’.

[13] ಪರಿಣಿದೊಡಾನೆ ‘ಅ’.

[14] ನೆಂಬುದು ದೂಸಿತಂ ‘ಪಾ,ಮ’ ಪರಿಷ್ಕೃತಪಾಠ ಮುಳಿಯ ತಿಮ್ಮಪ್ಪಯ್ಯನವರಿಂದ ಸೂಚಿತ.

[15] ಒಸಗೆ ‘ಪಾ’.

[16] ಮಾನಿಸ ‘ಕ’.

[17] ಸಂಕಿಸದೆ ‘ಅ’.

[18] ವಿಕಲ್ಪದೋಷಮಂ ‘ಮ’.

[19] ಪಾಂಗೞೆಯದಿಂತಿದೆ… ‘ಪಾ’. ಪಾಂಗೞೆಯದಿಂತಿ(ಳಿ)ದ ನಿಂತಿರೆ ‘ಮ’. ಪಾಂಗಱೆಯೆ ದಂತಿದನಿಂತಿರೆ ‘ಸೀ’. ‘ಸೀ’ ಪಾಠದಲ್ಲಿ ಲಘ್ವಕ್ಷರದ ಲೋಪದಿಂದ ವೃತ್ತಭಂಗವಾಗುತ್ತದೆ. ಆದ್ದರಿಂದ ಛಂದೋಭಂಗವಾಗದಂತೆ ಇಲ್ಲಿ ಪಾಠವನ್ನು ಪರಿಷ್ಕರಿಸಲಾಗಿದೆ.