ಪುಸಿಯದುದು, ಪರಾಂಗನೆಗಾಟಿಸದುದು
ಕೊಲ್ಲದುದು, ಮೋಹಮಿಲ್ಲದುದು ಅರಿವಂ
ಪೊಸಯಿಸುವುದು ವೈರಾಗ್ಯದದೆಸೆಗೆರಪುದು
ಧರ್ಮಮ್, ಇದರ ತಡೆವುದು ಅಧರ್ಮಂ

ಸುಳ್ಳಾಡದಿರುವುದು, ಪರಸ್ತ್ರೀಯನ್ನಾಸಿಸದಿರುವುದು, ಕೊಲ್ಲದೆ ಇರುವುದು (ಹಿಂಸೆ ಮಾಡದಿರುವುದು), ವ್ಯಾಮೋಹವಿಲ್ಲದಿರುವುದು, ನಮ್ಮ ಅರಿವನ್ನು ಹೊಸದಾಗಿಸುವುದು, ವೈರಾಗ್ಯದೆಡೆಗೆ ಬಾಗಿಸುವುದು, ಯಾವುದೋ ಅದೇ ಧರ್ಮ. ಇದಕ್ಕೆ ಅಡ್ಡಿಪಡಿಸುವುದೋ ಅದು ಅಧರ್ಮವೆಂದು ಒಂದು ಸಾವಿರ ವರುಷಗಳ ಹಿಂದೆಯೇ ಆದಿಕವಿ ಪಂಪ ಧರ್ಮ ಅಧರ್ಮದ ಬಗ್ಗೆ ಸ್ಪಷ್ಟವಾಗಿ ಹೇಳಿದ್ದಾನೆ. ಪಂಪನ ಹೇಳಿಕೆಯ ಹಿಂದಿನ ಧ್ವನಿ ಜೈನಧರ್ಮದ್ದು. ಜೈನಾಚಾರ್ಯರು ತಮ್ಮ ಅನುಯಾಯಿಗಳಾದ ಗೃಹಸ್ಥರಿ (ಶ್ರಾವಕ)ರಿಗೆ ಐದು ಕಿರು (ಪಂಚಾಣು) ವೃತಗಳಾದ ಸತ್ಯ, ಅಹಿಂಸೆ, ಅಸ್ತೇಯ (ಕದಿಯದಿರುವುದು) ಬ್ರಹ್ಮಚರ್ಯ (ಶೀಲ) ಅಪರಿಗ್ರಹ (ಅಗತ್ಯಕ್ಕಿಂತ ಹೆಚ್ಚಿನ ಸಂಗ್ರಹ ಕೂಡದು) ಇವುಗಳನ್ನು ಪಾಲಿಸತಕ್ಕದ್ದೆಂದು ತಾಕೀತು ಮಾಡಿ, ಆಹಾರ, ಔಷಧಿ, ಅಭಯ ಶಾಸ್ತ್ರ (ಕಲಿಕೆಗೆ ಅನುಕೂಲ ಕಲ್ಪಿಸುವ) ಈ ನಾಲ್ಕುದಾನಗಳನ್ನು ಮಾಡಲೂ ತಿಳಿಸಿದ್ದಾರೆ.

ಜಿನರು ಬೋಧಿಸಿದ ಧರ್ಮ ಜೈನಧರ್ಮ, ಜಿನನ ಆರಾಧಕರೇ ಜೈನರು, ಜಿನ ಎಂದರೆ ಗೆದ್ದವ, ಏನನ್ನು ಗೆದ್ದವ? ತನ್ನ ಪಂಚೇಂದ್ರಿಯಗಳ ಮೇಲೆ ಕಾಮಕ್ರೋಧಾದಿ ವಿಕಾರಗಳ ಮೇಲೆ ವಿಜಯ ಸಾಧಿಸದವ, ಜಿತನಾದವನು (ಗೆದ್ದವನು) ಜಿನ. ಈ ಜಿನ ಸಹ ಒಂದು ಜೀವ. ಈ ಜೀವಾತ್ಮ ಪರಮಾತ್ಮನಾಗಲು ರಾಗ, ದ್ವೇಷ, ಮೋಹ, ಲೋಭಾದಿ ಕಲ್ಮಶಗಳೇ ಅಡ್ಡಿ. ಇದುವೇ ಕರ್ಮಬಂಧನ. ಈ ಕರ್ಮಬಂಧನದಿಂದ ಜೀವಾತ್ಮ ಬಿಡುಗಡೆ ಹೊಂದುವುದೇ ಮುಕ್ತಿ. ಮೂಲತಃ ಚೈತನ್ಯ ಸ್ವರೂಪಿ, ಅನಂತಜ್ಞಾನ, ಅನಂತದರ್ಶನ, ಅನಂತವೀರ್ಯ, ಅನಂತಸುಖಗಳಿಂದ ಕೂಡಿರುವ ಜೀವ(ಆತ್ಮ), ಅಜೀವ (ಜಡ)ದೊಂದಿಗೆ ಸೇರಿಕೊಂಡು ಶುಭ – ಅಶುಭ ಕೆಲಸಗಳನ್ನು ಮಾಡುತ್ತ ಪುಣ್ಯ – ಪಾಪಗಳ ಸಂಚಯಕ್ಕೊಳಗಾಗಿ ನಾರಕಿಯಾಗಿ, ತಿರ್ಯಕ್ ಪ್ರಾಣಿಯಾಗಿ, ಮನುಷ್ಯರಾಗಿ, ದೇವತೆಯಾಗಿ ನಾಲ್ಕು ಗತಿಗಳ ಸಂಸಾರ ಚಕ್ರಕ್ಕೆ ಸಿಲುಕಿ ಸುತ್ತುತ್ತಾ ಇರುತ್ತದೆ. ಜೀವದ ಅಥವಾ ಆತ್ಮದ ಉನ್ನತಿ ಅವನತಿಗಳಿಗೆ ಸುಖ – ದುಃಖಗಳಿಗೆ ಹೊರಗಿನದಾವುದೂ ಕಾರಣವಲ್ಲ. ಸ್ವತಃ ಜೀವತಾನು ಗೈದ ಕೆಲಸಗಳಿಗನುಸಾರ ಫಲಗಳನ್ನು ಭೋಗಿಸಬೇಕಾಗುತ್ತದೆ. ಒಳ್ಳೆಯ ಕೆಲಸಗಳಿಂದ ಸುಖ, ಶಾಂತಿ, ಮಾನ, ಸಮ್ಮಾನಗಳು, ಕೆಟ್ಟ ಕೆಲಸಗಳಿಂದ ಕಷ್ಟಕೋಟಲೆಗಳು. ಇದನ್ನೆ ನಮ್ಮ ಜನಪದರು “ಮಾಡಿದ್ದುಣ್ಣೋ ಮಾರಾಯ” ಎಂದು ಮಾರ್ಮಿಕವಾಗಿ ಹೇಳಿದ್ದಾರೆ. ಹೀಗೆ ಕರ್ಮಬಂಧನಕ್ಕೊಳಗಾದ ಜೀವಕ್ಕೆ ಕಾಲಲಬ್ದಿ (ಏಳಿಗೆಯ ಯೋಗ) ಕೂಡಿ ಬಂದಾಗ ಮನುಷ್ಯ ಭವಕ್ಕೆ ಬಂದ ಜೀವ ಸ್ವಪ್ರಯತ್ನದಿಂದ ಸದಾಚಾರ, ಸತ್‌ಚಿಂತನೆಗಳಿಂದ, ದಾನ, ಧ್ಯಾನ, ಪರೋಪಕಾರಗಳಂಥ ಕಾರ್ಯದಿಂದ ಬಂದೊಂದಾಗಿ ಕರ್ಮದ ಕಟ್ಟುಗಳನ್ನು ಕಳಚಿಕೊಳ್ಳುತ್ತಾ ಜೀವ ಜಿನನಾಗುತ್ತದೆ. ಪುರುಷ ಪ್ರಯತ್ನಕ್ಕೆ ಪ್ರಾಮುಖ್ಯತೆಯನ್ನು ನೀಡುವ ಸ್ವಯಂ ಸಾಧನೆಯಿಂದ ಜೀವತ್ಮ ಹಂತಹಂತವಾಗಿ ಅರ್ಹಂತನಾಗುವ ವಿಧಾನ, ವಿವರಣೆಗಳ ಬೋಧನೆಯೇ ಜೈನ ಧರ್ಮದ ತಿರುಳು. ಈ ತಿರುಳನ್ನು ತಿಳಿಸಿಕೊಟ್ಟವರು ತೀರ್ಥಂಕರರು. ಭವಸಾಗರ (ತೀರ್ಥ)ದಲ್ಲಿ ಸಿಲುಕಿ ತೊಳಲಾಡುತ್ತಿರುವ ಜೀವಾತ್ಮರನ್ನು ಪಾರುಗಾಣಿಸುವವರೇ ತೀರ್ಥಂಕರರು. ಈ ತೀರ್ಥಂಕರ (ಜಿನ)ರೆ ಜೈನರ ಆರಾಧ್ಯರು.[1] “ಕ್ರಿ.ಪೂರ್ವದ ದಿನಗಳಲ್ಲಿ ವೈದಿಕ ಅವೈದಿಕ ಸಾಂಸ್ಕೃತಿಕ ಪರಂಪರೆಗಳು ಚಾಲ್ತಿಯಲ್ಲಿದ್ದವು. ಅವೈದಿಕವಾದ ಮುನಿಪರಂಪರೆಗೆ ಕಾರಣವಾದುದು ಜೈನಧರ್ಮ ಮತ್ತು ಬೌದ್ಧಧರ್ಮಗಳು”. ಮೊದಲು ಜೈನಧರ್ಮ ಎಂಬುದು ಬಳಕೆಯಲ್ಲಿರಲಿಲ್ಲ. ಆಗ ನಿಗ್ಗಂಥ (ನಿರ್ಗ್ರಂಥ) ಅಂದರೆ ಗ್ರಂಥಿ (ಗಂಟು)ಗಳಿಲ್ಲದವರು. ಸವಣ, ವ್ರಾತ್ಯ ಯತಿ ಸಂಪ್ರದಾಯದವರೆಂದು ಆಗ ಕರೆಯಲಾಗುತ್ತಿತ್ತು. ಈ ಸವಣ, ಶ್ರವಣ ಧರ್ಮಕ್ಕೆ ಜೈನ ಧರ್ಮವೆಂದು ನಂತರದ ದಿನಮಾನಗಳಲ್ಲಿ ರೂಢಿಯಲ್ಲಿ ಬಂದಿತು.

ತೀರ್ಥಂಕರರ ಗುಣಗಳನ್ನು ಸಾಧನೆಗಳನ್ನು ಧ್ಯಾನಿಸಿ ಸ್ಮರಿಸಿ ಅವರ ಸದ್ಗುಣಗಳು ತಮಗೂ ಬರಲಿ ಎಂದು ಪ್ರಾರ್ಥಿಸುತ್ತಿದ್ದ ಸಮುದಾಯ ಕ್ರಮೇಣ ತೀರ್ಥಂಕರರ ಮೂರ್ತಿಪೂಜೆಯನ್ನಾರಂಭಿಸಿದರು. ಇದು ನಂತರ ದಿನಗಳಲ್ಲಿ ವ್ಯಾಪಕವಾಗಿ ಬಳಕೆಯಲ್ಲೂ ಬಂದಿತು. ಜೀವದಯೆಯನ್ನು ಜೀವಾಳವಾಗಿರಿಸಿಕೊಂಡ ಈ ಧರ್ಮ ‘ಅಹಿಂಸೆಯೇ ಅತಿ ಶ್ರೇಷ್ಠವಾದ ಧರ್ಮ’ಎಂದಿದೆ. ‘ನೀನೂ ಬದುಕು ಇತರ ಜೀವಿಗಳಿಗೂ ಬಾಳಲು ಅವಕಾಶ ನೀಡು’. ‘ಪರಸ್ಪರ ಜೀವಿಗಳಿಗೆ ಉಪಕಾರ ಗೈಯ್ಯಿರಿ’ ಎಂಬ ಘೋಷವಾಕ್ಯಗಳನ್ನು ನೀಡಿ ಸಕಲ ಜೀವಸಂಕುಲದ ಸುಖಶಾಂತಿಗೆ ಅದರ ಉನ್ನತಿಗೆ ಮುಕ್ತಿಗಾಗಿ ಹಂಬಲಿಸಿದೆ. ಅಂತೆಯೇ ಈ ಧರ್ಮೀಯರು ಪ್ರಾಚೀನ ಕಾಲದಿಂದ ಈ ವರೆಗೂ ಪ್ರಾರ್ಥಿಸಿದ್ದು ಹೀಗೆ “ಸರ್ಮಜನರೂ ಕ್ಷೇಮದಿಂದಿರಲಿ ಆಳುವ ಪ್ರಭುಗಳು ಧರ್ಮಿಷ್ಠರಾಗಿ ಬಲಯುತರಾಗಿರಲಿ, ಕಾಲಕಾಲಕ್ಕೆ ಮಳೆ ಸುರಿಯಲಿ, ರೋಗ ರುಜಿನಗಳು ಬಾಧಿಸದಿರಲಿ, ಮಾರಿ ಮಸಣಿ ಮುಂತಾದ ಪಿಡುಗುಗಳು ಭೂಜೀವ ಸಂಕುಲವನ್ನು ಪೀಡಿಸದಿರಲಿ, ಜಿನೇಂದ್ರ ಭಗವಾನರ ಧರ್ಮ ಬೋಧನೆಯಿಂದ ಸದಾ ಸೌಖ್ಯವಾಗಲಿ, ಕೆಟ್ಟಕರ್ಮಗಳು ನಾಶವಾಗಿ, ಜ್ಞಾನ ಸೂರ್ಯ ಬೆಳಗುತ್ತಿರಲಿ, ಜಿನೇಶ್ವರರಿಂದ ಲೋಕದಲ್ಲಿ ಸುಖಶಾಂತಿ ನೆಲೆಸಲಿ” (ಸಂಸ್ಕೃತದ ಕನ್ನಡಾನುವಾದ) ಈ ಪ್ರಾರ್ಥನೆ ಈಗಲೂ ಮನೆ ಮಂದಿರಗಳಲ್ಲಿ ದಿನಾಲು ಮೊಳಗುತ್ತಿರುತ್ತದೆ. ಇವರು ದೇವರಲ್ಲಿ ಬೇಡುವುದು, ಧನ ಕನಕವನ್ನಲ್ಲ ವ್ಯಕ್ತಿಗತ ಆಸೆ ಆಕಾಂಕ್ಷೆಗಳ ಪೂರೈಕೆಗಾಗಿಯೂ ಅಲ್ಲ. ಜಗದ ಸರ್ವಜೀವಿಗಳ ಕಲ್ಯಾಣವನ್ನು ಕುರಿತ ಉದಾತ್ತ ಭಾವನೆಯ ಪ್ರಾರ್ಥನೆ ಇದು. ಹಿಂಸಾರಹಿತ ಬದುಕೇ ಜಗತ್ತಿನಲ್ಲಿ ಸುಖಶಾಂತಿ ಸಮೃದ್ಧಿಯನ್ನು ತರಬಲ್ಲದು. ಹೀಗಾಗಿ ಭಾರತೀಯ ಸಂಸ್ಕೃತಿಗೆ ಜೈನ ಧರ್ಮದ ಕೊಡುಗೆ ಅಪಾರವಾದದ್ದು. ಉತ್ತರ ಭಾರತದಲ್ಲಿ ಉದಯಿಸಿ ದೇಶದ ನಾನಾ ಕಡೆ ತನ್ನ ರೆಂಬೆ ಕೊಂಬೆಗಳನ್ನು ಚಾಚಿ ನೆಮ್ಮದಿಯ ನೆರಳನ್ನು ನೀಡಿದ್ದ ಜಿನಧರ್ಮ ಕರ್ನಾಟಕದಲ್ಲೂ ಪಲ್ಲವಿಸಿದುದನ್ನು ಇತಿಹಾಸ ದಾಖಲಿಸಿದೆ. ಅದರಲ್ಲೂ ಉತ್ತರ ಕರ್ನಾಟಕದಲ್ಲಿ ವೈವಿಧ್ಯಮಯವಾಗಿ ಬೆಳೆದ ಈ ಧರ್ಮ ಕಲೆ, ಸಾಹಿತ್ಯ ಸ್ಥಾಪತ್ಯ, ಶಿಲ್ಪ – ವಾಸ್ತುಶಿಲ್ಪ ಸಂಗೀತ, ಗಣಿತ, ಜೋತಿಷ್ಯ, ಆಯುರ್ವೇದ, ಮುಂತಾದ ಕ್ಷೇತ್ರಗಳಲ್ಲಿ ಮಹತ್ತರವಾದ ಕಾಣಿಕೆ ಪ್ರೇರಣೆ ನೀಡಿ ಮುಂದಿನವರಿಗೂ ಮಹಾಮಾರ್ಗವನ್ನು ನಿರ್ಮಿಸಿತು.

ಜ್ಞಾನದ ನಂದಾದೀಪ ಹಚ್ಚಿದ ಜಿನಮುನಿಗಳು, ಕ್ಷಾತ್ರ ತೇಜಕ್ಕೆ ಭಾಷ್ಯ ಬರೆದ ಚಕ್ರವರ್ತಿ, ಸಾಮಂತ ದಂಡನಾಯಕರು, ದತ್ತಿದಾನಗಳಿಂದ ಖ್ಯಾತಿವೆತ್ತ ವಣಿಕ ಶ್ರೇಷ್ಠಿಗಳು, ನೇಮ ನಿತ್ಯಗಳಿಂದ ವೃತನೋಂಪಿಗಳಿಂದ ಸಹಿಷ್ಣುತೆ, ಸಹಬಾಳ್ವೆ ನಡೆಸಿದ ಶ್ರಾವಕ ಶ್ರಾವಿಕೆ (ಗೃಹಸ್ಥ – ಗೃಹಿಣಿ)ಯರು, ಚರಿತ್ರೆಯ ಭಿತ್ತಿಯಲ್ಲಿ ನಿತ್ಯ ತೊಳಗುವ ನಕ್ಷತ್ರಗಳಾಗಿ ದಾಖಲಾಗಿದ್ದಾರೆ.

ಕರ್ನಾಟಕದಲ್ಲಿ ಜೈನಧರ್ಮ

ಕ್ರಿ.ಪೂ. ೩೦೦ರಲ್ಲಿ ಅಂತಿಮ ಶ್ರುತ ಕೇವಲಿ ಭದ್ರಬಾಹು ಭಟಾರರು ತಮ್ಮ ಹನ್ನೆರಡು ಸಾವಿರ ಶಿಷ್ಯರೊಂದಿಗೆ ಮೌರ್ಯ ಸಾಮ್ರಾಟ ಚಂದ್ರಗುಪ್ತನೊಂದಿಗೆ ದಕ್ಷಿಣದತ್ತ ಹೊರಟು ಶ್ರವಣಬೆಳಗೊಳಕ್ಕೆ ಬಂದ ಕಾಲದಿಂದ ಕರ್ನಾಟಕದಲ್ಲಿ ಜೈನಧರ್ಮ ಪ್ರವೇಶವಾಯಿತೆಂಬ ಹಿಂದಿನ ಹೇಳಿಕೆಗಳನ್ನು ಪುನರ್ ಪರಿಶೀಲನೆಗೊಳಪಡಿಸಬೇಕಾಗಿದೆ. ಶಿವಕೋಟ್ಯಾಚಾರ್ಯನ ವಡ್ಡಾರಾಧನೆಯಲ್ಲಿನ ಭದ್ರಬಾಹು ಭಟಾರನ ಕಥೆಯಂತೆ “ದ್ವಾದಶಾಂಗ ಚತುರ್ದಶ ಪೂರ್ವಧಾರಿಗಳಾದ ಭದ್ರಬಾಹು ಭಟಾರರು ಮುನಿಸಂಘದೊಂದಿಗೆ ಉಜ್ಜಿಯನಿಯ ಮನೆಯೊಂದರಲ್ಲಿ ಆಹಾರಕ್ಕಾಗಿ ಹೋದಾಗ ಅಲ್ಲಿ ತೊಟ್ಟಿಲಲ್ಲಿದ್ದ ಚಿಕ್ಕ ಕೂಸು “ಬೋಳಹ ಬೋಳಹ ಭಟಾರಾ” (ಬೋಳಹ = ಹೋಗು, ಮುನಿಯೇ ಹೋಗು ಹೋಗು) ಎನ್ನುತ್ತದೆ. ಅವಧಿ ಕೇಳಿದಾಗ ‘ಹನ್ನೆರಡು ವರುಷ’ ಎಂದೆನ್ನುತ್ತದೆ. ಇದನ್ನು ಸೂಕ್ಷ್ಮವಾಗಿ ಗ್ರಹಿಸಿದ ಭದ್ರಬಾಹು ಮುಂದೆ ಈ ಪ್ರದೇಶವು ಅನಾವೃಷ್ಟಿಗೆ ತುತ್ತಾಗಿ ೧೨ ವರುಷಗಳ ಕಾಲ ಭೀಕರ ಬರಗಾಲ ಬರುವುದೆಂದರಿತು ದಕ್ಷಿಣದ ಪುನ್ನಾಟದತ್ತ ಮೌರ್ಯ ಸಾಮ್ರಾಟ ಚಂದ್ರಗುಪ್ತನ ಜೊತೆ ೧೨ ಸಾವಿರ ಶಿಷ್ಯರೊಂದಿಗೆ ದಕ್ಷಿಣದತ್ತ ಪಯಣಿಸಿ ಕೞ್ವಪ್ಪಿಗೆ (ಶ್ರವಣಬೆಳಗೊಳಕ್ಕೆ) ಬರುತ್ತಾರೆ. ಇದು ಶಾಸನ ಹಾಗೂ ಪ್ರಾಚೀನ ಸಾಹಿತ್ಯದಲ್ಲಿ ದಾಖಲಾಗಿದೆ. ಹಿಂದೆ ದಕ್ಷಿಣ ಭಾರತದ ಪ್ರದೇಶಕ್ಕೆ ಪುನ್ನಾಟ ದೇಶವೆಂದೆನ್ನುತ್ತಿದ್ದರು. ಕಾರಣ ಇದು ದಟ್ಟವಾಗಿ ಪುನ್ನಾಗ ಅಥವಾ ಕದಂಬವೃಕ್ಷ (ಸುರಹೊನ್ನೆ) ಮರಗಳಿದ್ದ ಪ್ರದೇಶ (ವಿಶೇಷವಾಗಿ ಕರ್ನಾಟಕದ ಪ್ರದೇಶಕ್ಕೆ ಪುನ್ನಾಟ ದೇಶ ಎನ್ನುತ್ತಿದ್ದರು.) ಹೀಗಾಗಿ ಕರ್ನಾಟಕದಲ್ಲಿ ಜೈನಧರ್ಮ ಕ್ರಿ.ಪೂ. ೩ನೇ ಶತಮಾನವೆಂದು ಭದ್ರಬಾಹು ಭಟ್ಟಾರಕರ ಕತೆಯೊಂದಿಗೆ ತಳಕು ಹಾಕಿ ಕಾಲಘಟ್ಟ ನಿರ್ಧರಿಸಿದ್ದು ಮರುಚಿಂತಿಸಬೇಕಾಗಿದೆ.

[2]“ಇಲ್ಲಿ ಗಮನಿಸಬೇಕಾದದ್ದು ೧೨ ಸಾವಿರ ಮುನಿಗಳೊಡನೆ ಯಾವ ಭರವಸೆಯೊಂದಿಗೆ ಭದ್ರಬಾಹು ಪುನ್ನಾಟದತ್ತ ಪಯಣಿಸಿರಬೇಕು? ಭದ್ರಬಾಹು ಗುರುಗಳು ಬುರುವುದಕ್ಕೆ ಮುಂಚೆಯೇ ಕರ್ನಾಟಕದಲ್ಲಿ ವಿಪುಲ ಪಾರ್ಶ್ವನಾಥ ಸಂಪ್ರದಾಯದ ಜೈನ ಸಮುದಾಯ ಇತ್ತು. ಏಕೆಂದರೆ ಮುನಿಧರ್ಮಕ್ಕೆ ಚ್ಯುತಿ ಬರದಂತೆ ಅವರ ಆಹಾರ – ವಿಹಾರಗಳಿರಬೇಕು. ಹೀಗಾಗಿ ಈ ಮುನಿ ಸಂಘವನ್ನು ಜೈನ ಸಂಪ್ರದಾಯದಂತೆ ಶಾಸ್ತ್ರೋಕ್ತವಾಗಿ ಸ್ವಾಗತಿಸಿ ಅವರ ಅನ್ನ ಪಾನಾದಿಗಳನ್ನು ಹಿಂದೆ ಅಲ್ಲಿದ್ದ ಅಪಾರ ಜೈನ ಕುಟುಂಬಗಳು ನಿರ್ವಹಿಸಿರುವ ಸಾಧ್ಯತೆಯಿಂದಾಗಿ ಕ್ರಿ.ಪೂ. ೩ನೇ ಶತಮಾನಕ್ಕಿಂತಲೂ ಮೊದಲೇ ಇಲ್ಲಿ ಜೈನಧರ್ಮ ಪ್ರಚುರಗೊಂಡಿತ್ತು. ಅಂದರೆ ಕ್ರಿ.ಪೂ. ೮ನೇ ಶತಮಾನದಲ್ಲಿ ೨೩ನೇ ತೀರ್ಥಂಕರರಾದ ಭಃ ಪಾರ್ಶ್ವನಾಥರು ಈ ಪ್ರದೇಶದಲ್ಲಿ ವಿಹರಿಸಿ ಜನರಿಗೆ ಬೋಧಿಸಿರಬೇಕು. ಕೇಳುವ, ಅನುಮಾನಗಳನ್ನು ಪರಿಹರಿಸಿಕೊಳ್ಳುವ ಧರ್ಮಸಭೆ (ಸಮವಸರಣ) ಯಿಂದಾಗಿ ಬಹುಪಾಲು ಜನ ಭಃ ಪಾರ್ಶ್ವನಾಥರ ಅನುಯಾಯಿಗಳಾಗಿರಬೇಕು. ಹೀಗಾಗಿ ಕರ್ನಾಟಕದಲ್ಲಿ ಪಾರ್ಶ್ವನಾಥರ ದಟ್ಟ ಪ್ರಭಾವ ಬೀರಿದ್ದರ ಕುರುಹಾಗಿ ಕರ್ನಾಟಕದಲ್ಲಿ ಇರುವ ಪುರಾತನ ಹಾಗೂ ಇತ್ತೀಚಿನ ಜೈನ ಮಂದಿರಗಳ ಪೈಕಿ ೮೦ ಪ್ರತಿ ಶತ ಬಸದಿಗಳು ಪಾರ್ಶ್ವನಾಥರದ್ದಾಗಿವೆ. ಕ್ರಿ.ಶ. ೯ನೇ ಶತಮಾನದಲ್ಲಿ ಭಗವಜ್ಜಿನಸೇನಾಚಾರ್ಯರು ಪಾರ್ಶ್ವಾಭ್ಯುದಯ ಎಂಬ ಸಂಸ್ಕೃತ ಗ್ರಂಥ ರಚಿಸಿರುವುದಲ್ಲದೆ ಪಾರ್ಶ್ವನಾಥರ ಕುರಿತಾದ ಅನೇಕ ಕೃತಿಗಳೂ ಬಂದಿವೆ. ಇದು ಪಾರ್ಶ್ವನಾಥ ಅವರ ಜನಪ್ರಿಯತೆಗೆ ಸಾಕ್ಷಿ. ಹೀಗಾಗಿ ಕರ್ನಾಟಕದಲ್ಲಿ ಚಾರಿತ್ರಿಕವಾಗಿ ಕ್ರಿ.ಪೂ. ೮ನೇ ಶತಮಾನದಿಂದಲೂ ಜೈನ ಸಮುದಾಯ ಇದ್ದಿತ್ತೆನ್ನುವುದರಲ್ಲಿ ಅನುಮಾನವಿಲ್ಲ. ನಂತರ ಕ್ರಿ.ಶ. ೬ನೇ ಶತಮಾನದ ೨೪ನೇ ತೀರ್ಥಂಕರ ವರ್ಧಮಾನ ಮಹಾವೀರರು ಈ ಕಡೆಗೆ ವಿಹಾರ ಗೈದು ಧರ್ಮಬೋಧನೆ ಮಾಡಿರಬಹುದು. ನಂತರದ ಕಾಲಘಟ್ಟದಲ್ಲಿ ಮೌರ್ಯರು ಸಾತವಾಹನರ ಆಳ್ವಿಕೆಯಲ್ಲಿ ಅನ್ಯಧರ್ಮಗಳಂತೆ ಜೈನಧರ್ಮವೂ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿತ್ತು. ನಂತರ ಕ್ರಿ.ಶ. ೧ನೇ ಶತಮಾನದ ಅಂದಾಜಿನಲ್ಲಿ ಮಳಖೇಡ (ಮಾನ್ಯಖೇಟ) ಮತ್ತು ಅದರ ಸುತ್ತಮುತ್ತ ಪ್ರದೇಶದಲ್ಲಿ ದಿಗಂಬರ ಸಂಪ್ರದಾಯದವರಂತೆ ಶ್ವೇತಾಂಬರರು ಇದ್ದುದನ್ನು ಹರಿಭದ್ರ ಸೂರಿಯು ತನ್ನ ‘ಸಮ್ಯುಕ್ತಸಪ್ತತಿ’ ಹೊತ್ತಗೆಯಲ್ಲಿ ದಾಖಲಿಸಿದ್ದಾನೆ. ಪಾದಲಿಪ್ತಾಚಾರ್ಯರೆಂಬ ಜೈನಯತಿಗಳು ಕುಂದ ಕುಂದಾಚಾರ್ಯರು, ಉಮಾಸ್ವಾಮಿಗಳು, ಸಮಂತಭದ್ರರು, ಪೂಜ್ಯಪಾದರು ಮುಂತಾದ ಜಿನಮುನಿಗಳು ಮಾನ್ಯಖೇಟ ಅದರ ಸನಿಹದಲ್ಲಿರುವ ಭಂಕೂರು ಮುಂತಾದ ಜೈನ ಕ್ಷೇತ್ರಗಳಿಗೆ ಭೇಟಿ ಕೊಟ್ಟಿರುವ ಸಾಧ್ಯತೆ ಉಂಟು.

ಕದಂಬ ಗಂಗರ ಅರಸರಂತೆ ಬಾದಾಮಿ ಚಾಲುಕ್ಯ, ರಾಷ್ಟ್ರಕೂಟ, ಕಲ್ಯಾಣ ಚಾಲುಕ್ಯ, ಕಳಚೂರಿ, ಸೇವುಣ, ಹೊಯ್ಸಳ ವಿಜಯನಗರ ಅರಸರುಗಳ ಕಾಲದಲ್ಲಿ ಜೈನಧರ್ಮ ಏರಿಳಿತವನ್ನು ಕಂಡಿದ್ದಿದೆ. ಕಲಬುರ್ಗಿ ಪ್ರದೇಶದಲ್ಲಿ ಕ್ರಿ.ಶ.೧ನೇ ಶತಮಾನದಿಂದ ಜೈನ ಧರ್ಮವಿದ್ದ ಪುರಾವೆಗಳು ಸಿಕ್ಕರೂ ಕ್ರಿ.ಪೂ.ದಿಂದಲೂ ಜೈನಧರ್ಮ ಇಲ್ಲಿ ಬೆಳೆದು ಬಂದುದರ ಕುರುಹಾಗಿ ನಿಸರ್ಗ ಇಲ್ಲಿ ಸುಳುಹನ್ನೀಯುತ್ತದೆ. ಯಾದಗಿರಿ ಶಹಾಪುರ ಸುರಪುರ ಸೇಡಮ್ ಚಿಂಚೋಳಿ ಚಿತ್ತಾಪೂರ ತಾಲೂಕುಗಳಲ್ಲಿರುವ ಬೆಟ್ಟ ಗುಡ್ಡಗಳಲ್ಲಿನ ನೈಸರ್ಗಿಕ ಗುಹೆಗಳು ಬಂಡೆಯಾಸರೆಗಳು ಕಣಿವೆ ಕೊಳ್ಳಗಳು ಜೈನ ಹೆಸರಿನಿಂದ ಈಗಲೂ ಕರೆಯಿಸಿಕೊಳ್ಳುತ್ತವೆ. ಶಹಪೂರ ತಾಲೂಕಿನ ಗೋಗಿಯಿಂದ ವಾಯುವ್ಯದ ಕಡೆ ೮ – ೧೦ ಕಿ.ಮೀ. ಫಾಸಲೆಯಲ್ಲಿ ಉಕ್ಕಿನಾಳ ಹಳ್ಳಿಯ ಕಿರುಗುಡ್ಡದೋರೆಯಲ್ಲಿ ‘ಭದ್ರಬಾಯಿ ಕೊಳ್ಳ’ ಎಂಬುದೊಂದಿದೆ. ಇದು ಭದ್ರಬಾಹುಕೊಳ್ಳದ ಅಪಭ್ರಂಶಗೊಂಡ ಪದ. ಉತ್ತರ ಭಾರತದಿಂದ ದಕ್ಷಿಣದ ಪುನ್ನಾಟದತ್ತ ಸಾಗುತ್ತಿದ್ದ (ಕ್ರಿ.ಪೂ. ೩ನೇ ಶತಮಾನ) ಭದ್ರಬಾಹು ಮುನಿ, ಚಂದ್ರಗುಪ್ತ ಸಾಮ್ರಾಟ ಇತರೆ ೧೨ ಸಾವಿರ ಶಿಷ್ಯ ಸಮೂಹ ಇಲ್ಲಿನ ಜೈನ ಸಮುದಾಯದ ಆದರಾತಿಥ್ಯದಲ್ಲಿ ಮೇಲೆ ಹೇಳಿದ ಸುಲಲಿತಕೊಳ್ಳದಲ್ಲಿ ಕೆಲಕಾಲ ತಂಗಿರುವ ಕಾರಣ ಜನ ಈ ಕೊಳ್ಳವನ್ನು ಭದ್ರಬಾಹುಕೊಳ್ಳ ಎಂದು ಕರೆದಿರಬಹುದು. ಅದು ಜನರಬಾಯಿಯಲ್ಲಿ ಭದ್ರಬಾಯಿಕೊಳ್ಳ ಎಂದಾಗಿರಬಹುದು. ಯಾದಗಿರಿಯ ಕೋಟೆಯಿರುವ ಬೆಟ್ಟದಲ್ಲಿ, ಊರಿಂದ ಈಶಾನ್ಯದತ್ತ ೫ ಕಿ.ಮೀ. ದೂರದಲ್ಲಿ ಜಿನ್ನಪ್ಪನ ಬೆಟ್ಟದಲ್ಲಿನ ನೈಸರ್ಗಿಕ ಗವಿಗಳು, ಕಲ್ಲಾಸರೆಗಳು ಲಕ್ಷಾವಧಿ ವರುಷಗಳ ಹಿಂದಿನವುಗಳು. ಈ ಪ್ರದೇಶದಲ್ಲಿ ಜಿನ ಮುನಿಗಳು ವಾಸವಾಗಿರುವ ಕುರುಹಾಗಿ ಇಲ್ಲಿನ ಜೈನ ಗುಹಾ ಶಿಲ್ಪಗಳು, ನಿಷಧಿ ಕಲ್ಲುಗಳು, ತೀರ್ಥಂಕರರ ಪ್ರತಿಮೆಗಳು ಕ್ರಿ.ಪೂ.೩ ರಿಂದ ಕ್ರಿ.ಶ. ೬ – ೭ನೇ ಶತಮಾನದಲ್ಲಿ ನಿರ್ಮಾಣವಾದವುಗಳಾಗಿವೆ. ಇವು ಮೌರ್ಯ, ಸಾತವಾಹನ, ಬಾದಾಮಿ ಚಾಲುಕ್ಯರ ಕಾಲದವುಗಳಾಗಿರಬಹುದು. ಉತ್ತರ ಭಾರತದಿಂದ ದಕ್ಷಿಣದ ತಮಿಳುನಾಡಿನತ್ತ ಪಯಣಿಸುವ ಜೈನಾಚಾರ್ಯರು ಅವರ ಅನುಚರರು ಕಲಬುರ್ಗಿ ಪ್ರದೇಶವನ್ನು ದಾಟಿಕೊಂಡೇ ಹೋಗಬೇಕು. ಇಲ್ಲಿನ ಗಿರಿ ತೊರೆಗಳು, ಗವಿ, ಬಂಡೆಯಾಸರೆಗಳು ಅವರ ತಪಕ್ಕೆ ಹೇಳಿ ಮಾಡಿಸಿದ ತಾಣಗಳು. ಗೌಜು, ಗದ್ದಲವಿಲ್ಲದ ಫಲಭರಿತ ಮರಗಳಿಂದ ತಿಳಿನೀರ ಹಳ್ಳ ಕೊಳ್ಳಗಳಿಂದ ನೈಸರ್ಗಿಕವಾಗಿ ಸಮೃದ್ಧವಾಗಿದ್ದ ಈ ಪ್ರದೇಶ ಅವರನ್ನಾಕರ್ಷಿಸಿ ತಪಸಾಧನೆಗೆ ತೊಡಗಿರಬರಹುದು. ಅಂಥ ಮುನಿ ಸಂಘದಲ್ಲಿನ ಕೆಲ ಮುನಿಗಳು ಸಲ್ಲೇಖನ ವಿಧಿಯಿಂದ (ಭದ್ರಬಾಹು ಭಟ್ಟಾರಕರು ಶ್ರವಣಬೆಳಗೊಳದಲ್ಲಿ ಸಮಾಧಿ ಮರಣ ಹೊಂದಿದಂತೆ) ಸಮಾಧಿ ಮರಣ ಹೊಂದಿರಬಹುದು. ನಿರ್ಜನ ಪ್ರದೇಶದಲ್ಲಿ ಬೀಡುಬಿಟ್ಟ ಮುನಿಸಂಘಗಳ ದರ್ಶನಕ್ಕೆ ಅರ್ಚನೆಗೆ ಅನುಕೂಲ ಕಲ್ಪಿಸಲು ಗವಿಗಳಲ್ಲಿ ಬಂಡೆಯ ಮೇಲೆ ತೀರ್ಥಂಕರರ ಯಕ್ಷಯಕ್ಷಿಯರ ಪ್ರತಿಮೆಗಳನ್ನು ಸಮಾಧಿ ಮರಣ ಹೊಂದಿದ ಮುನಿಗಳ ಚರಣ ಚಿಹ್ನೆ ಕಮಂಡಲು ಪಿಂಛಿಗಳುಳ್ಳ ನಿಷಧಿ ಶಿಲ್ಪಗಳನ್ನು ಆಯಾ ಕಾಲಘಟ್ಟದಲ್ಲಿ ಕೆತ್ತಿರಬಹುದು. ಶಹಾಪುರ ತಾಲೂಕಿನ ಗೋಗಿಯಿಂದ ನೈರುತ್ಯಕ್ಕೆ ೪ ಕಿ.ಮೀ. ದೂರದಲ್ಲಿ ಇರುವ ಕಿರುಬೆಟ್ಟದಲ್ಲಿ ಇಬ್ಬರು ಜೈನಮುನಿಗಳ ನಿಷಧಿ ಶಿಲ್ಪಗಳು ಹಾಗೂ ಕಡಿದಾದ ಬಂಡೆಯ ಮಧ್ಯಭಾಗದಲ್ಲಿ ೩೦ ಅಡಿ ಎತ್ತರದಲ್ಲಿ ಪಶ್ಚಿಮಕ್ಕೆ ಮುಖವಿರುವ ಭಃ ಪಾರ್ಶ್ವನಾಥರ ಪ್ರತಿಮೆಯನ್ನು ಕೆತ್ತಿದ್ದಾರೆ. ಬೆಟ್ಟದ ಬುಡದಲ್ಲಿ ನೈಸರ್ಗಿಕ ಗವಿ ಇದೆ. ಬೆಟ್ಟದ ಮೇಲ್ಬಾಗದಲ್ಲಿ ಬಂಡೆಯಾಸರೆಗಳು ನಿಶಧಿ ಶಿಲ್ಪಗಳಿವೆ. ಇಲ್ಲಿ ಸಮತಟ್ಟಾದ ದೊಡ್ಡ ಬಂಡೆ ಹಾಗೂ ಬಯಲು ಜಾಗ ಮುನಿಗಳ ಪ್ರವಚನಕ್ಕಾಗಿ ನಿರ್ಮಿಸಿದವುಗಳೆಂದೆನಿಸುತ್ತದೆ. ಈ ಬೆಟ್ಟಕ್ಕೆ ಚಾರಣ ಗಿರಿ ಎಂಬ ಹೆಸರು ಬಹುಕಾಲದಿಂದ ರೂಢಿಯಲ್ಲಿದೆ. ಈ ಬೆಟ್ಟದ ಸುತ್ತಮುತ್ತ ಅನೇಕ ಕಿರು ಬೆಟ್ಟಗಳ ಸಾಲು ಸಾಲೇ ಇದೆ. ಈ ಗಿರಿಗಳ ಹರಿವು ಶಹಾಪುರ, ವಿಭೂತಿಹಳ್ಳಿ, ದೋರನಹಳ್ಳಿ, ಗುರುಸಣಗಿ ಯಾದಗಿರಿಯಿಂದ ಹಾಗೆಯೇ ಆಂಧ್ರದತ್ತ ಸಾಗಿದೆ. ಈ ಎಲ್ಲ ಗುಡ್ಡಗಳನ್ನು ಜಾಲಾಡಿದಾಗ ಮೌರ್ಯ ಶಾತವಾಹನರ ಕಾಲದ ಬ್ರಾಹ್ಮಿ ಶಾಸನಗಳು ಜೈನ ಬೌದ್ಧಧರ್ಮ ಅವಶೇಷಗಳು ಸಿಕ್ಕಬಹುದು. ಯಾದಗಿರಿ ಬೆಟ್ಟಗಳೂ ‘ಚಾರಣ’[3] ಗಿರಿಗಳೆ. ಚಾರಣ ಎಂದರೆ ಸದಾ ಸಂಚಾರಶೀಲನಾಗಿ ಅಲ್ಲಲ್ಲಿ ಜಿನ ಧರ್ಮೋಪದೇಶ ಮಾಡುವ ಅವಧಿ ಜ್ಞಾನವುಳ್ಳ ಗಗನಗಾಮಿಯಾದ ಮುನಿ ಎಂದರ್ಥ. ಇಂಥ ಚಾರಣ ಋದ್ಧಿ ಪಡೆದ ಇಬ್ಬರು ಜೈನಯತಿಗಳು ಇಲ್ಲಿ ಇರುತ್ತಿದ್ದ ಕಾರಣ ಈ ಬೆಟ್ಟಕ್ಕೆ ‘ಚಾರಣ ಗಿರಿ’ ಎಂದು ಜನಕರೆದಿರುವರು. ಚಾರಣ ಋದ್ಧಿ ಎಂದರೆ ಜಿನಮುನಿಗಳು ತಮ್ಮ ತಪೋಬಲದಿಂದ ಸಾಧಿಸಿಕೊಳ್ಳುವ ಗಗನ ಸಂಚಾರ ಶಕ್ತಿ. ಕಟ್ಟಾ ಅಹಿಂಸಾ ವೃತಿಗಳಾಗಿರುತ್ತಿದ್ದ ಜೈನಯತಿಗಳು ತಾವು ನೆಲದ ಮೇಲೆ ನಡೆದಾಡುವಾಗ ಯಾವ ಸೂಕ್ಷ್ಮ ಜೀವಿಯೂ ಹಿಂಸೆಯನ್ನು ಅನುಭವಿಸಬಾರದೆಂದು ತಮ್ಮಯೋಗ ಶಕ್ತಿಯಿಂದ ಗಗನ ಸಂಚಾರ ಶಕ್ತಿಯನ್ನು ಹೊಂದಿರುತ್ತಿದ್ದರು. ಸಾಮಾನ್ಯವಾಗಿ ಚಾರಣರು ಯುಗಳರು. ಇಲ್ಲಿನ ಶಿಲ್ಪಕಲಾ ರಚನೆಯನ್ನು ಗಮನಿಸಿದಲ್ಲಿ ಕ್ರಿ.ಪೂ. ೧ ರಿಂದ ೪ನೇ ಶತಮಾನ ಕಾಲದ್ದೆಂದೆನಿಸುತ್ತದೆ. ಈ ಚಾರಣಗಿರಿ ಬೆಟ್ಟ ಇಲ್ಲಿರುವ ಮುನಿಗಳ ಪಾದ ಚಿಹ್ನೆಗಳು ಭಃ ಪಾರ್ಶ್ವನಾಥರ ಖಡ್ಗಾಸನದ ಪ್ರತಿಮೆ. ಇವು ತುಂಬಾ ಪ್ರಭಾವ ಶಾಲಿಯಾಗಿ ಜನಮನದಲ್ಲಿ ಗಾಢವಾಗಿ ಬೇರು ಬಿಟ್ಟಿದ್ದವೆಂಬುದಕ್ಕೆ ನನ್ನ ತಾಯಿ ಶ್ರೀಮತಿ ಶ್ರೀಕಾಂತಮ್ಮ ಅಕ್ಕಿಯವರು ಹಾಡುತ್ತಿದ್ದ ಕೆಳಗಿನ ತ್ರಿಪದಿ ಸಾಕ್ಷಿಯಾಗಿದೆ.

ಏಳೂತ ನೆನೆದೇನ ಏಳೂರ ದೇವರನ
ಚಾರಣಗೇರಿ ಚಲುವನ | ಪಾರಿಸನಾಥನ
ಏಳೂತ ಮೊದಲ ನೆನೆದೇನ ||

ಹೀಗೆ ಕ್ರಿ.ಶ.ಪೂರ್ವ ೩ – ೪ ಶತಮಾನದಿಂದ ಜೈನಧರ್ಮದ ಅವಶೇಷಗಳು ಕಲಬುರ್ಗಿ ಪ್ರದೇಶದಲ್ಲಿದ್ದುದು ಅದರ ಪ್ರಾಚೀನತೆ ಹಾಗೂ ಪ್ರಾಮುಖ್ಯತೆಗೆ ಸಾಕ್ಷಿಯಾಗಿದೆ. ಕಲಬುರ್ಗಿ ಪ್ರದೇಶದಲ್ಲಿ ಜೈನಧರ್ಮ ಇಲ್ಲಿನ ಬೆಟ್ಟ ಗುಡ್ಡಗಳ ಗವಿಕೊಳ್ಳಗಳ ಜೈನಾವಶೇಷಗಳಿಂದ ಈ ಧರ್ಮದ ಪ್ರಾಚೀನತೆ ಕ್ರಿ.ಪೂ. ೪ – ೩ ಶತಮಾನದ್ದೆಂದು ಊಹಿಸಬಹುದು. ಈ ಜಿಲ್ಲೆಯ ಮಳಖೇಡ (ಮಾನ್ಯಖೇಟ) ರಾಷ್ಟ್ರಕೂಟರಿಗೆ ರಾಜಧಾನಿಯಾಗುವುದಕ್ಕೂ ಮೊದಲು ಜೈನಧರ್ಮದ ಪ್ರಮುಖ ನೆಲೆಯಾಗಿತ್ತೆಂಬುದಕ್ಕೆ ಇತಿಹಾಸದಲ್ಲಿ ಪುರಾವೆಗಳಿವೆ.[4] ಕ್ರಿ.ಶ. ೧ನೇ ಶತಮಾನದಲ್ಲಿ ಉತ್ತರದ ಪ್ರಸಿದ್ಧ ಜೈನ ಯತಿ ಪಾದಲಿಪ್ತಾ ಚಾರ್ಯರು ದಕ್ಷಿಣದತ್ತ ಬಂದಾಗ ಮಳಖೇಡ ಸೇಡಮ್ ಸುತ್ತಮುತ್ತಲ ಪ್ರದೇಶದಲ್ಲಿ ಅನೇಕ ಜೈನಾಚಾರ್ಯರಿದ್ದುದನ್ನು ಕ್ರಿ.ಶ. ೭ನೇ ಶತಮಾನದ ಹರಿಭದ್ರಸೂರಿಯು ತನ್ನ ‘ಸಮ್ಯುಕ್ತ್ವ ಸಪ್ತತಿ’ ಎಂಬ ಗ್ರಂಥದಲ್ಲಿ ದಾಖಲಿಸಿದ್ದಾನೆ. ಆ ಕಾಲದ ಪ್ರಸಿದ್ಧ ಜೈನಾಚಾರ್ಯ ಸಮರ್ಥಗುರು ಕುಂದಕುಂದಾಚಾರ್ಯರು ನಂತರದ ಉಮಾಸ್ವಾಮಿಗಳು, ಸಮಂತ ಭದ್ರರು, ಪೂಜ್ಯಪಾದರು ಈ ಪ್ರದೇಶದಲ್ಲಿ ವಿಹರಿಸಿ ಜನಕ್ಕೆ ಸನ್ಮಾರ್ಗ ತೋರಿಸಿದ್ದಾರೆ. ಇವರು ಚಾರಣ ಋದ್ಧಿದಾರಿ ಮುನಿಗಳ ಅಂದರೆ ಗಗನಗಾಮಿ ವಿದ್ಯೆಯನ್ನು ಬಲ್ಲವರಾಗಿದ್ದರು. ಈಗಿನ ಮಹಾರಾಷ್ಟ್ರದ ನೀಲಂಗಾ ರಸ್ತೆಯಲ್ಲಿರುವ ರಾಮಲಿಂಗ ಮುದಗಡ ಗ್ರಾಮದ ಹಳ್ಳದಹತ್ತಿರ ದಿವಾಕರ ನಂದಿಯವರ ನಿಷಧಿ ಶಾಸನವಿದ್ದು ಅದರಲ್ಲಿ ಅಭಯನಂದಿ ಮುನಿಗಳ ಬಗ್ಗೆ ಉಲ್ಲೇಖವಿರುವುದನ್ನು ಖ್ಯಾತ ಶಾಸನತಜ್ಞರು ವಿದ್ವಾಂಸ ಸಂಶೋಧಕರಾದ ಶ್ರೀ ಸೀತಾರಾಮ ಜಾಗೀರದಾರ ಅವರು ತಿಳಿಸಿದ್ದಾರೆ. ಈ ನೀಲಂಗಾ ಗ್ರಾಮ ಕಲಬುರ್ಗಿಗೆ ಸನಿಹದಲ್ಲಿದೆ. ಮೇಲಿನ ಯತಿಗಳು ಈ ಪ್ರದೇಶದಲ್ಲಿ ಸಂಚರಿಸಿರಬಹುದು. ದಿಗಂಬರ ಶ್ವೇತಾಂಬರ ಸಂಪ್ರದಾಯಗಳಲ್ಲಿನ ಕೆಲ ಅಂಶಗಳನ್ನು ಸೇರಿಸಿಕೊಂಡು ಯಾಪನೀಯ ಸಂಘವೊಂದು ಮೈದಾಳಿತು.[5] ಕ್ರಿ.ಶ. ೯೩೪ರಲ್ಲಿ ದೇವಸೇನ ಸೂರಿಯು ದರ್ಶನ ಸಾರವೆಂಬ ಪ್ರಾಕೃತದ ಗ್ರಂಥದಲ್ಲಿ ಯಾಪನೀಯ ಸಂಘ ಉದಯಿಸಿದ ದಿನಾಂಕವನ್ನು ಈ ರೀತಿ ಉಲ್ಲೇಖಿಸಿದ್ದಾರೆ.

ಕಲ್ಲಾಣೇ ವರಣಯರೇ | ದುಣ್ಣಿಸ ಪಂಚ ಉತ್ತರೇ ಜಾದೇ
ಜಾವಣಿಯ ಸಂಘ ಭಾವೋ | ಸಿರಿ ಕಲಸಾದೋಹು ಸೇ ವಡದೋ ||

ವಿಕ್ರಮ ಸಂವತ್ಸರದ ೨೦೫(ಕ್ರಿ.ಶ. ೧೪೮)ರಲ್ಲಿ ಶ್ರೀ ಕಲಶನೆಂಬ ಶ್ವೇತಾಂಬರ ಯತಿ ‘ಜಾವಣಿಯ ಸಂಘ’ವನ್ನು ಸ್ಥಾಪನೆ ಮಾಡಿದನು. ಜಾಪುಲಿ ಸಂಘ (ಯಾಪನೀಯ ಸಂಘ)ದ ಕುರಿತಾಗಿ ವಡ್ಡಾರಾಧನೆಯು ಮೇಲಿನ ಉಲ್ಲೇಖನವನ್ನು ಸಮರ್ಥಿಸಿದೆ. ಉತ್ತರ ಭಾರತದ ಕಡೆಯಿಂದ ಅರ್ಧಪಾಲಕ (ಅರ್ಧಚೇಲಕ) ಅಥವಾ ಶ್ವೇತಪಟರ ಅಂದರೆ ಶ್ವೇತಾಂಬರ ಮುನಿಸಂಘವು ಕ್ರಿ.ಶ. ೨ನೇ ಶತಮಾನದ ಮಧ್ಯಭಾಗದಲ್ಲಿ ಕರ್ನಾಟಕಕ್ಕೆ ಬಂದ ಬಗ್ಗೆ ಕಲ್ಯಾಣನಗರವು ಚಾಲುಕ್ಯರ ರಾಜಧಾನಿಯಾಗುವುದಕ್ಕೆ ಮೊದಲೇ ಎಂಟುನೂರು ವರ್ಷಗಳ ಹಿಂದೆಯೇ ಯಾಪನೀಯರ ನೆಲೆಯಾತ್ತಲ್ಲದೆ ಕ್ರಿ.ಶ. ೨ನೇ ಶತಮಾನದಲ್ಲಿಯೇ ಅಲ್ಲೊಂದು ಯಾಪನೀಯರ ಬಸದಿ ಇದ್ದುದನ್ನು ದೇವಸೇನಸೂರಿ ತನ್ನ ‘ದರ್ಶನ ಸಾರ’ ಎಂಬ ಪ್ರಕೃತ ಗ್ರಂಥದಲ್ಲಿ ದಾಖಲಿಸಿದ್ದಾರೆ. ದಿಗಂಬರ ಸಂಪ್ರದಾಯದ ಕೆಲವು ಕಟ್ಟುಗಳನ್ನು ಸಡಲಿಸಿ ಸಾಮಾಜಿಕ ಸಮತೋಲನ ಶ್ರದ್ಧೆ, ಭಕ್ತಿಗಳಲ್ಲಿನ ವೃದ್ಧಿಗಾಗಿ ಧಾರ್ಮಿಕ ಸುಧಾರಣೆಯ ಅಗತ್ಯವನ್ನು ಕಂಡುಕೊಂಡ ಈ ಸಂಘ ಅನ್ಯಧರ್ಮದತ್ತ ವಾಲುತ್ತಿದ್ದ ಶ್ರಾವಕ ಸಮುದಾಯವನ್ನು ಹಿಡಿದಿಟ್ಟುಕೊಳ್ಳಲು ಕೆಲ ಬದಲಾವಣೆಗಳನ್ನು ತಂದು ಜೈನ ಹಾಗೂ ಜೈನೇತರ ಸಮಾಜದವರನ್ನು ತನ್ನತ್ತ ಸೆಳೆದುಕೊಂಡಿತು.

೧. ಪರಶಾಸನೇ ಮೋಕ್ಷಃ ಜೈನೇತರ ಪಂಗಡ, ಪಥದ ಅನುಯಾಯಿಗಳಿಗೂ ಮೋಕ್ಷ ಸಾಧ್ಯ.

೨. ಸಗ್ರಂಥಾನಾಂ ಮೋಕ್ಷಃ ವಸ್ತ್ರಧಾರಿ ಸಂಸಾರಸ್ಥರಿಗೂ ಮೋಕ್ಷವಿದೆ.

೩. ಸ್ತ್ರೀಣಾಂ ತದ್ಭವೇ ಮೋಕ್ಷಃ ಮಹಿಳೆಯರೂ ಈ ಜನ್ಮದಲ್ಲೆ ಮುಕ್ತಿ ಹೊಂದಬಹುದು.

ಈ ಮೂರು ಮುಖ್ಯ ಸೂತ್ರಗಳಿಂದಾಗಿ ಯಾಪನೀಯ ಪಂಥ ಜನಮಾನಸದಲ್ಲಿ ನೆಲೆಯೂರಿತು. ಅಳ್ಳೆದೆಯ ದುರ್ಬಲ ಮನದವರಿಗಾಗಿ ಯಕ್ಷ – ಯಕ್ಷಿಯರನ್ನು ಸೃಜಿಸಿ ಪೂಜಿಸಲು ತಿಳಿಸಿ ಬದುಕಿನಲ್ಲಿ ಭರವಸೆಯನ್ನು ಬಿತ್ತಿತು. ಹೀಗಾಗಿ ಹಂತಹಂತವಾಗಿ ಕ್ರಿ.ಶ. ೧೩ – ೧೪ನೇ ಶತಮಾನದವರೆಗೂ ಉಚ್ಛ್ರಾಯ ಸ್ಥಿತಿಯಲ್ಲಿದ್ದು ಅನೇಕ ಸಾಮಾಜಿಕ ಧಾರ್ಮಿಕ ಶೈಕ್ಷಣಿಕ ಸಾಂಸ್ಕೃತಿಕ ಬದಲಾವಣೆಗೆ ಕಾರಣವಾಯಿತು. ತಮ್ಮ ಬೋಧನೆಯ ಪ್ರಭಾವಕ್ಕೊಳಗಾಗಿ ಬಂದ ಅಂತ್ಯಜರಿಂದ ಮೊದಲು ಗೊಂಡು ಎಲ್ಲ ವರ್ಗದವರಿಗೂ ಧಾರ್ಮಿಕದ ಕದ ತೆರೆದ ಯಾಪನೀಯ ಯತಿಗಳು ಶ್ವೇತಾಂಬರ ಪಂಥ ಕೆಲವು ತತ್ವಗಳನ್ನು ಅಳವಡಿಸಿಕೊಂಡರೂ ಆಗಿನ ದಿಗಂಬರತ್ವವನ್ನೆ ಹೊಂದಿದ್ದರು. ದಿಗಂಬರರ ಅವಿಭಾಜ್ಯ ಅಂಗವಾಗಿರಲು ಆಶಿಸಿದರು.

ದಿಗಂಬರ ಸಂಪ್ರದಾಯದ ಖ್ಯಾತ ಸಮರ್ಥಗುರು ಅಕಲಂಕಾಚಾರ್ಯರ ಪ್ರಮಾಣ ಸಂಗ್ರಹದ

ಶ್ರೀ ಮದ್ಪರಮಗಂಭೀರ ಸ್ಯಾಧ್ವಾದಾಮೋಘಲಾಂಛನಂ
ಜೀಯಾತ ತ್ರೈಳೋಕ್ಯನಾಥಸ್ಯ ಶಾಸನಂ ಜಿನ ಶಾಸನಂ

ಎಂಬ ಪ್ರಾರ್ಥನಾ ಶ್ಲೋಕವನ್ನು ಯಾನೀಯರು ತಮ್ಮ ಶಾಸನಗಳಲ್ಲಿ ಬಳಸಿಕೊಂಡರು. ಆರಂಭದಲ್ಲಿ ಶ್ವೇತಾಂಬರ ಆಗಮಗಳಿಂದ ಪ್ರಭಾವಿತರಾಗಿ ಆ ಸಂಪ್ರದಾಯದೊಂದಿಗೆ ಗುರುತಿಸಿಕೊಂಡರೂ. ಕ್ರಮೇಣ ದಿಗಂಬರ ಸಂಪ್ರದಾಯದಲ್ಲಿ ಸಮ್ಮಿಳಿತರಾಗಿ ಹೋದರು. ಹೀಗಾಗಿ ಕಲಬುರ್ಗಿ ಪ್ರದೇಶದಲ್ಲಿನ ಬಹುಪಾಲು ಜೈನಾಚಾರ್ಯರು ಜೈನ ಮಂದರಿಗಳು ಜೈನಕವಿಗಳು ಅಧಿಕಾರವರ್ಗದವರು ಗೃಹಸ್ಥರು ಯಾಪನೀಯರ ಮೂಸೆಯಲ್ಲಿ ಮೈದಾಳಿದ ಚಿನ್ನದ ಪುತ್ಥಳಿಗಳು. ಆ ಕಾಂತಿ ಕಂದದ ಕುಂದದ ಕಾಂತಿ ಆ ಪ್ರಭೆ ಇಂದಿಗೂ ಜೈನ ಸಮುದಾಯವನ್ನು ಮುನ್ನಡೆಸಿದೆ.

ಜೈನ ವಿದ್ಯಾಕೇಂದ್ರಗಳು

ಓ ನಾಮಾಸಿಧಂ ಎಂದು ಹಿಂದೆ ಮಗು ಶಾಲೆಗೆ ಸೇರಿದಾಕ್ಷಣ ಅಲ್ಲಿನ ಮಾಸ್ತರರುಗಳು ಅಥವಾ ಓಜಯ್ಯನವರು (ಉವಝ್ಝಾಯ ಜೈನರ ಪ್ರಾಕೃತದ ಈ ಪದ ಉವಜ್ಝ > ಓಜ ಓಜಯ್ಯ ಎಂದಾಯಿತು. ಉವಝ್ಝಾಯ ಅಂದರೆ ಉಪಾಧ್ಯಾಯ, ಗುರು ಶಿಕಷಕ ಮಾಸ್ತರ ಪಾಟಿಯ ಮೇಲೆ ಇಲ್ಲವೆ ಸೂಸು ಉಸುಕಿನ ಮೇಲೆ ಬರೆದು ಮಕ್ಕಳಿಂದ ತೀಡಿಸುತ್ತ ಕಲಿಕೆಗೆ ಶ್ರೀಕಾರ ಹಾಕುತ್ತಿದ್ದರು. ಇದು ಜೈನರ ಮಂತ್ರ ಓನಮಃ ಸಿದ್ಧಂ ದ ರೂಪಾಂತರ ಗೊಂಡ ಸಾಲು ಸಾವಿರಾರು ವರುಷಗಳಿಂದ ಜೈನಗುರುಕುಲಗಳಲ್ಲಿ ಜೈನೇತರರ ವಿದ್ಯಾಕೇಂದ್ರಗಳಲ್ಲಿ ಮಠ, ಗುಡಿ, ಬಸದಿಗಳಲ್ಲಿ ನಿನಾದಿಸುತ್ತಿದ್ದ ಮಂಗಲಮಂತ್ರ ಓಂನಮಃ ಸಿದ್ಧಂ ಅಪಭ್ರಂಶ ಓನಾಮಾಸಿಧಂ ಇದು ೧೯೬೦ – ೬೫ರ ವರೆಗೂ ಸರ್ಕಾರಿ, ಖಾಸಗಿ ಪ್ರಾಥಮಿಕ ಶಾಲೆಗಳಲ್ಲಿ ಬಾಲ ಬೋಧೆ ತರಗತಿಗಳಲ್ಲಿ ಪಾಟಿಯ ಮೇಲೆ ಓನಾಮಾಸಿಧಂ ಎಂದೇ ಬರೆಸುತ್ತಿದ್ದರು. ನಾನು ಓನಾಮಾಸಿಧಂ ಬರೆದೆ ಶಿಕ್ಷಣ ಕಲಿತವನು. ಇದು ಜೈನ ಧರ್ಮ ಶಿಕ್ಷಣಕ್ಕೆ ಕೊಟ್ಟ ಪ್ರಾಮುಖ್ಯತೆಗೆ ಸಾಕ್ಷಿ. ಜೈನಧರ್ಮದ ಮಠಗಳು ಗುಡಿಗಳು, ಘಟಿಕಾಸ್ಥಾನಗಳು, ಅಗ್ರಹಾರಗಳು ಶಾಲೆಗಳು ಇದ್ದ ಬಗ್ಗೆ ಶಾಸನಗಳು ಗ್ರಂಥಗಳು ಸಾಕ್ಷಿಯನ್ನೊದಗಿಸುತ್ತವೆ. ಶ್ರವಣಬೆಳಗೊಳ, ಶಿವಮೊಗ್ಗ ಜಿಲ್ಲೆಯ ಹುಂಚ (ಹೊಂಬುಜ ಅಥವಾ ಪೊಂಬುಚ್ಚಪುರ) ಗುಲಬರ್ಗಾ ಜಿಲ್ಲೆಯ ಮಳಖೇಡ, ವಿಜಯನಗರ, ಮೂಡಬಿದರೆ, ಕಾರ್ಕಳ, ವರಂಗ (ದಕ್ಷಿಣ ಕನ್ನಡ ಜಿಲ್ಲೆ) ಮಹಾರಾಷ್ಟ್ರದಲ್ಲಿನ ಕೊಲ್ಹಾಪುರ, ಆಂಧ್ರದಲ್ಲಿನ ಪೆನುಗೊಂಡೆ, ತಮಿಳುನಾಡಿನ ಜಿನ ಕಂಚಿ (ಕುಂಚಿ) ಈ ಎಲ್ಲ ಮಠಗಳಿಗೆ ಸಾವಿರ ವರುಷಗಳ ಇತಿಹಾಸವಿದೆ. ಈ ಮಠಾಧೀಶರ ಪ್ರಶಸ್ತಿವಾಚನದಲ್ಲಿ ಜೈನ ಘಟಿಕಾಸ್ಥಾನಗಳಿದ್ದ ಬಗ್ಗೆ ಸ್ಪಷ್ಟವಾಗುತ್ತದೆ.

ಸ್ವಸ್ತಿಶ್ರೀ ಮದ್ರಾಯ ರಾಜಗುರು ಭೂಮಂಡಲಾಚಾರ್ಯವರ್ಮ
ಮಹಾವಾದ ವಾದೀಶ್ವರ ರಾಜವಾದಿ ಪಿತಾಮಹ ಸಕಲ ವಿದ್ವಜ್ಜನ
ಪರಿತ್ಯಕ್ತ ಸಕಲ ಪರಿಗ್ರಹ ವಿಕ್ರಮಾದಿತ್ಯಾನಾಂ | ಮಧ್ಯಾಹ್ನ
ಮಣಿಕಲ್ಪ ವೃಕ್ಷಾಣಾಂ ಪರಮನಿಶ್ಚಾಲಾನೂನ ಧ್ಯಾನಾಗ್ನಿದಗ್ಧ
ಸಕಲ ಕರ್ಮಾಣಾನಾಂ | ಭವ್ಯಜನತಾ ಶರಣ್ಯಾನಾಂ ಸರ್ವ
ಜೀವ ದಯಾಹಿತ ಕಾರುಣ್ಯನಾಂ | ಶ್ರೀಮತ್ಕುಂದ ಕುಂದಾನ್ವಯ
ಶಾರದಾ ಗಚ್ಛ ಪದ್ಮಾವತಿ ಲಬ್ದವರ ಪ್ರಸನ್ನರುಂ |
ಶ್ರೀ ಮನ್ನಿಜ ಘಟಿಕಸ್ಥಾನ ಡಿಳ್ಳಿ ಮಲಯಾದ್ರಿ (ಮಳಖೇಡ)
ವಿಜಯನಗರ ವರಂಗ ಪಟ್ಟ ಪೊಂಬುಚ್ಚ ಚತುಃಸಿದ್ಧ ಸಿಂಹಾಸ
ನಾಧೀಶ್ವರಾಣಾಂ ……….

ಇಲ್ಲಿ ಶ್ರೀಮನ್ನಿಜ ಘಟಿಕಾಸ್ಥಾನದ ಉಲ್ಲೇಖ ಜೈನ ಮಠಗಳು ಜೈನಘಟಿಕಾಸ್ಥಾನಗಳು ಇದ್ದವೆಂಬುದಕ್ಕೆ ದಾಖಲೆಗಳಲ್ಲದೆ ಜೈನಯತಿಗಳ ಮಠಮಾನ್ಯದ ಇತಿಹಾಸದಲ್ಲಿ ಅದಕ್ಕೊಂದು ವಿಶಿಷ್ಟ ಸ್ಥಾನ ಇತ್ತು. ಆಗಿನ ಮುನಿಗಳಿಗೆ ಅರಸರುಗಳಿಗಿದ್ದಂತೆ ರಾಯರಾಜ ಗುರು ಭೂಮಂಡಲಾಚಾರ್ಯ, ರಾಯವಾದಿ ಪಿತಾಮಹ ಸಕಲ ವಿದ್ವಜ್ಜನ ಚಕ್ರವರ್ತಿ, ಸಿದ್ದಾನ್ತಾಚಾರ್ಯ ಇತ್ಯಾದಿ ಬಿರುದುಗಳು ಅವರಿಗಿದ್ದವು ಎಂಬುದನ್ನು ಶ್ರೀ ಸೀತಾರಾಮ್ ಜಾಗೀರದಾರ ಸುರಪುರ ತಾಲೂಕಿನ ಕೆಂಭಾವಿಯಲ್ಲಿನ ಶಾಸನವನ್ನು ಉದ್ಧರಿಸಿ ಹೇಳಿದ್ದಾರಲ್ಲದೆ ಈಗಿನ ಮಹಾರಾಷ್ಟ್ರದಲ್ಲಿರುವ ‘ಕಾರಂಜ’ ಮಠವು ಮಾನ್ಯಖೇಟ (ಮಳಖೇಡ)ದ ಜೈನ ಶಾಖಾಮಠವೆಂದೂ ಹೇಳಿದ್ದಾರೆ. ಮಠಾದೀಶ್ವರ ಬಿರುದಾವಗಳಿಗಳಲ್ಲಿ ದಿಲ್ಲಿ ನಂತರ ಸ್ಥಾನ ಮಲಯಾದ್ರಿ (ಮಳಖೇಡ) ಹೆಸರು ಉಲ್ಲೇಖಗೊಂಡಿರುವುದು ಮಳಖೇಡ ಜೈನಮಠದ ಪ್ರಾಚೀನತೆ ಪ್ರಖ್ಯಾತಿಗೆ ಕನ್ನಡಿ ಹಿಡಿಯುತ್ತದೆ. ಹಿಂದೆ ದಿಗಂಬರ ಜೈನಾಚಾರ್ಯರೆ ಮಠಗಳ ನೇತೃತ್ವ ವಹಿಸಿಕೊಂಡು ಧಾರ್ಮಿಕ ಶಿಕ್ಷಣದ ಜೊತೆ ಲೌಕಿಕ ಶಿಕ್ಷಣವನ್ನು ಕಲಿಸಿಕೊಡುತ್ತಿದ್ದರು. ಆ ಪರಿಪಾಟ ಮುಂದುವರಿದುಕೊಂಡು ಬಂದಿತು. ಜೈನ ಮನೆ, ಮಂದಿರಗಳು, ಅಗ್ರಹಾರ, ಘಟಿಕಾಸ್ಥಾನಗಳು, ಪಾಠಶಾಲೆಗಳು ಧಾರ್ಮಿಕ ಶಿಕ್ಷಣದ ಜೊತೆ ಲೌಕಿಕ ಶಿಕ್ಷಣ ನೀಡುವ ವಿದ್ಯಾ ಕೇಂದ್ರಗಳೆನಿಸಿದವು. ಮೊದಮೊದಲು ದಿಗಂಬರ ಮುನಿಗಳು ಮುಖ್ಯಸ್ಥರಾಗಿರುತ್ತಿದ್ದರು. ಕ್ರಮೇಣ ಆ ಜಾಗದಲ್ಲಿ ಕಾವಿ ಧರಸಿದ ಬ್ರಹ್ಮಚಾರಿಗಳಾದ ಭಟ್ಟಾರಕರು ಉಸ್ತುವಾರಿ ನೋಡಿಕೊಳ್ಳಹತ್ತಿದರು. ಈ ಪರಂಪರೆ ಮೂಲಕ ಅರಿವಿನ ಹಣತೆ ಹಚ್ಚಿ ಬದುಕಿಗೆ ಭದ್ರತೆ ಒದಗಿಸಹತ್ತಿವೆ.

[6]ರಾಜಧಾನಿ ಮಾನ್ಯಖೇಟ ದೊಡ್ಡ ವಿದ್ಯಾಕೇಂದ್ರ ಹಾಗೂ ಘಟಿಕಾಸ್ಥಾನವಾಗಿತ್ತು. ಹಾಗೆಯೇ ಕಲಬುರ್ಗಿ ಜಿಲ್ಲೆಯ ಕಲಬುರ್ಗಿ ತಾಲೂಕಿನ [7]ಹುಣಸಿಹಡಗಲಿ ಒಂದು ಘಟಿಸ್ಥಾನದ ವಿದ್ಯಾಕೇಂದ್ರವಾಗಿತ್ತೆಂದು ಅಲ್ಲಿನ ಕ್ರಿ.ಶ. ೧೦೯೯ರ ಕಲ್ಯಾಣ ಚಾಲುಕ್ಯರ ಆರನೇ ವಿಕ್ರಮಾದಿತ್ಯನ ಶಾಸನ ವಿಶದಪಡಿಸುತ್ತದೆ. ಹುಣಸಿ ಹಡಗಲಿ, ಹುಣಸೆಗೆ ಸಂಸ್ಕೃತದಲ್ಲಿ ತಿಂಥ್ರಣಿ ಎನ್ನುತ್ತಾರೆ. ಸುರಪುರ ತಾಲ್ಲೂಕಿನ ತಿಂಥಣಿ ತಿಂಥ್ರಣಿಯಿಂದಾದದ್ದು, ವಿಫುಲವಾದ ಹುಣಸೆ ಮರಗಳಿರುವ ಪ್ರದೇಶಗಳಿಂದಾಗಿ ಅಲ್ಲಿ ನೆಲೆಗೊಂಡ ಜನವಸತಿ ಪ್ರದೇಶಕ್ಕೆ ತಿಂಥ್ರಣಿ, ಹುಣಸಗಿ, ಹುಣಸಿ ಹಡಗಿಲ ಎಂದು ಕರೆದರು.

ಹೀಗಾಗಿ ಹುಣಸಿ ಹಡಗಿಲೆಯ ಜೈನಯತಿಗಳಿಂದಾಗಿ ತಿಂಥ್ರಣಿಕ ಗಚ್ಛ ಎಂಬ ಯತಿ ಪರಂಪರೆ ಕರ್ನಾಟಕದ ತುಂಬಿ ಹರಡಿಕೊಂಡಿತು. ಹುಣಸಿಹಡಗಲಿಯಲ್ಲಿ ದೇವಾಲಯದ ಜೊತೆ ವಿದ್ಯಾಕೇಂದ್ರವಿತ್ತು ಎಂಬುದನ್ನು ಅಲ್ಲಿನ ಜಿನಮಂದಿರದ ಹೊರಗಡೆಯ ಮುಖಮಂಟಪದಲ್ಲಿನ ಶಾಸನ ಈ ರೀತಿ ದಾಖಲಿಸಿದೆ.

“ಹಡಂಗಿಲೆಯಲ್ತಾವು ಮಾಡಿಸಿದ ಕಲ್ವೆಸದ ಬಸದಿಯ ಪಾರ್ಶ್ವನಾಥ
ದೇವರ್ಗ್ಗವಲ್ಲಿಯ
ಕೆಲದ ಪಟ್ಟಸಾಲೆಯ ಶಾಂತಿನಾಥ ದೇವರ್ಗ್ಗಂ ಸಂತತಂ ಮಾಡುವ ಭಿಕ್ಷೆಕ್ಕಮಂ
ಅಷ್ಟ ವಿಧಾರ್ಚ್ಚನೆಗಂ ಜೀವದಯಾಷ್ಟಮಿ ಮೊದಲಾಗಿಯನೇಕ ಪರ್ವ
ಮಹಾಪೂಜೆಗಳ್ಗಂ ರಿಷಿಯರ್ಕ್ಕಳಾಹಾರ ದಾನಕ್ಕಂ ಆ
ಯೆರಡು ಬಸದಿಯ ಖಂಡಸ್ಫುಟಿತ ಜೀರ್ಣೋದ್ಧಾರದ ಬೆಸಕ್ಕಮಂ
…………….ಇತ್ಯಾದಿ”.

ಕಲ್ವಸದ ಬಸದಿಕಟ್ಟಿಸಿ ಅದರ ಪಾರ್ಶ್ವನಾಥ ಜಿನಬಿಂಬವನ್ನು ಪ್ರತಿಷ್ಠಾಪಿಸಿದವನು ಚೌಧರೆ ರಕ್ಕಸಯ್ಯ ಆ ಪ್ರದೇಶವನ್ನಾಳುತ್ತಿದ್ದ ಒಡತಿ, ೬ನೇ ವಿಕ್ರಮಾದಿತ್ಯನ ಮಹಾರಾಣಿ ಯಾದ ನೃತ್ಯವಿದ್ಯಾಧರಿ ಚಂದಲ ದೇವಿಯ ಶ್ರೇಯಕೋರಿ ಹೊಲ ತೋಟ ಗಾಣಗಳನ್ನು ತಾ ಕಟ್ಟಿಸಿದ ಜಿನ ಮಂದಿರಕ್ಕಾಗಿ ದಾನ ಕೊಟ್ಟಿದ್ದು ತ್ರಿಭುವನಮಲ್ಲನು ಪಟ್ಟಕಟ್ಟಿಕೊಂಡ ೨೩ನೇ ವರ್ಷದಲ್ಲಿ ಕ್ರಿ.ಶ. ೧೦೯೯ಕ್ಕೆ ಇದು ಸರಿಹೊಂದುತ್ತದೆ. ಇದೇ ಬಸದಿಯ ಸನಿಹದಲ್ಲೊಂದು ಹಾಳಾದ ತ್ರಿಕೂಟ ಬಸದಿ ಇದೆ. ಅಲ್ಲಿ ಯಾವ ತೀರ್ಥಂಕರರ ವಿಗ್ರಹಗಳಿಲ್ಲ. ಪಾರ್ಶ್ವನಾಥ ಕಲ್ಬಸದಿಯ ಪಕ್ಕದಲ್ಲಿ ಒಂದು ಪಟ್ಟಸಾಲೆ (ಪಾಠಶಾಲೆ) ಅದರಲ್ಲಿ ೧೬ನೇ ತೀರ್ಥಂಕರ ಭಃ ಶಾಂತಿನಾಥರ ಪ್ರತಿಮೆ ಆಗ ನಿತ್ಯ ಪೂಜೆಗೊಳ್ಳುತ್ತಿತ್ತು. ಇದರಿಂದಾಗಿ ಹುಣಸಿ ಹಡಗಲಿಯಲ್ಲಿ ಮೂರು ಬಸದಿಗಳಿದ್ದವೆಂದು ತಿಳಿಯುತ್ತದೆ. “ಸಾಮಾನ್ಯವಾಗಿ ಬಸದಿಯಲ್ಲಿ ಘಟಿಕಾಸ್ಥಾನ ಇರುವಲ್ಲಿ ಪಟ್ಟಸಾಲೆ ಇರುತ್ತಿತ್ತು. ಇಲ್ಲಿಯೇ ವಿದ್ಯಾರ್ಥಿಗಳಿಗೆ ಪಾಠ ಪ್ರವಚನ ನಡೆಯುತ್ತಿತ್ತು. ಇಂಥ ವಿದ್ಯಾಕೇಂದ್ರಗಳಿಗೆ ಉದಾರ ದತ್ತಿದಾನ ನೀಡಿ ಎಲ್ಲರೂ ಪೋಷಿಸಿಕೊಂಡು ಬರುತ್ತಿದ್ದರು. ಸುರಪುರ ತಾಲೂಕಿನ ಹಗರಟಗೆ, ಕೆಂಭಾವಿ, ಏವೂರು, ಸೇಡಮ್, ಹರಸೂರು, ಕುಳಗೇರಿ, ಆಳಂದ, ಪೇಠಶಿರೂರ, ಚಿತ್ತಾಪುರ, ಅಲ್ಲೂರು, ಗಂವ್ಹಾರ ಇನ್ನಿತರ ಕಡೆ ಜೈನ ಅಗ್ರಹಾರಗಳಿದ್ದುದನ್ನು ಅಲ್ಲಗಳೆಯುವಂತಿಲ್ಲ. ಇನ್ನು ಸರಸ್ವತಿ ಮಂಟಪ, ಸರಸ್ವತಿ ಮಂದಿರವೆಂದು ಕರೆಯಿಸಿಕೊಳ್ಳುವ ಸರಸ್ವತಿ ಪ್ರತಿಮೆಗಳಿರುವ ಸ್ಥಾನಗಳು. ಅವು ಜೈನವಿದ್ಯಾಕೇಂದ್ರಗಳೆಂಬುದಕ್ಕೆ ಸರಸ್ವತಿ ಪ್ರತಿಮೆಯ ಕಿರೀಟ ಮಧ್ಯ ಭಾಗದಲ್ಲಿರುವ ಕಿರು ಜಿನಬಿಂಬಗಳೇ ಸಾಕ್ಷಿ. ಇಂಥ ಸರಸ್ವತಿ ಮೂರ್ತಿಗಳು ಆಳಂದ ತಾಲೂಕಿನ ತಡಕಲ್ಲು ಚಿತ್ತಾಪೂರ ತಾಲೂಕಿನ ಚಿತ್ತಾಪುರ ಚಿಂಚೋಳಿ ತಾಲೂಕಿನ ಸುಲೇಪೇಟ (ಶಾಸನೋಕ್ತ ಹೆಸರು ಸುಲ್ಲಿಗ್ರಾಮ) ಇನ್ನಿತರ ಕಡೆಗಳಲ್ಲಿವೆ ತಡಕಲ್ಲ, ಚಿತ್ತಾಪೂರ, ಮಳಖೇಡ, ಗುಲಬರ್ಗಾ ಜೇವರ್ಗಿಗಳಲ್ಲಿನ ಸರಸ್ವತಿ ವಿಗ್ರಹಗಳು ಜೈನಮಂದಿರಗಳಲ್ಲಿದ್ದರೆ, ಸುಲೇಪೇಟ ದಲ್ಲಿ ವೀರಭದ್ರೇಶ್ವರ ದೇವಾಲಯದ ಒಳಗೋಡೆಯಲ್ಲಿದೆ. ಜೇವರ್ಗಿ ತಾಲೂಕಿನ ಗಂವ್ಹಾರದಲ್ಲಿ ಊರ ಮಧ್ಯದಲ್ಲಿ ಬಯಲು ಚಾವಡಿಯನ್ನು ಜನ ‘ಸರಸ್ವತಿಮಂಟಪ’ ಎಂದೆನ್ನುತ್ತಾರೆ. ಅಲ್ಲಿ ಧರಣೇಂದ್ರ ಯಕ್ಷ, ಪದ್ಮಾವತಿ ಯಕ್ಷಿಯ ಎರಡುವರೆ ಅಡಿ ಎತ್ತರದ ತ್ರಿಭಂಗಿಯ ನಿಂತ ಪ್ರತಿಮೆಗಳಿವೆ. ಈ ಪ್ರತಿಮೆ ಕಿರೀಟದ ಮಧ್ಯದಲ್ಲಿ ಕುಳಿತ ಕಿರು ಜಿನ ಬಿಂಬಗಳಿವೆ. ಇವು ಕ್ರಿ.ಶ. ೧೧ನೇ ಸತಮಾನದ ಕಲ್ಯಾಣ ಚಾಲುಕ್ಯರ ಕಾಲದವು ಗಳಂದೆನ್ನೆಸುತ್ತದೆ. ತಡಕಲ್ಲು, ಗುಲಬರ್ಗಾ, ಚಿತ್ತಾಪೂರ, ಮಳಖೇಡ ಬಸದಿಗಳಲ್ಲಿರುವ ಶಾರದಾಮೂರ್ತಿಗಳು ಕ್ರಿ.ಶ. ೧೦ – ೧೧ನೇ ಶತಮಾನದ ಕಾಲಘಟ್ಟದವುಗಳು. ಕಲ್ಯಾಣ ಚಾಲುಕ್ಯ ದೊರೆ ಜಗದೇಕಮಲ್ಲ ಇಮ್ಮಡಿ ಜಯಸಿಂಹನ ರಾಣಿ ಸೋಮಲ ದೇವಿಯು ಅಲಂದೆ ಸಾಸಿರವನ್ನಾಳುತ್ತಿದ್ದಾಗ ಆಕೆಯ ಮನೆವೆರ್ಗ್ಗಡೆ ದುರ್ಗಸಿಂಹನು ಚಿತ್ತಾಪುರ ತಾಲೂಕಿನ ನಿಪ್ಪಾಣಿ ಹಿಂದಿನ (ಸುಪ್ಪಾಣಿ, ಸು + ಪಾಣಿ, ಪಾಣಿ ಎಂದರೆ ನೀರು ಸುಪಾಣಿ ಎಂದರೆ ಸಮೃದ್ಧವಾದ ಶುದ್ಧವಾದ ಜಲಪ್ರದೇಶ)ಯಲ್ಲಿ ಸರಸ್ವತಿ ಮಂಟಪಕಟ್ಟಿಸಿ ೩೨ ಮತ್ತರು ಹೊಲವನ್ನು ೨ ಮತ್ತರು ತೋಟವನ್ನು ಪೂಜೆ ಹಾಗೂ ವಿದ್ಯಾರ್ಥಿಗಳ ಊಟ ವಸತಿಗಾಗಿ ದಾನ ನೀಡಿದುದನ್ನು ಅಲ್ಲಿನ ಕ್ರಿ.ಶ. ೦೬.೦೪.೧೦೫೩ರ ಶಾಸನ ದೃಢಪಡಿಸುತ್ತದೆ. ಅಲ್ಲಿ ಯಾವ ಜೈನಾವಶೇಷಗಳಾಗಲಿ ಸರಸ್ವತಿ ಪ್ರತಿಮೆಯಾಗಲಿ ಇಲ್ಲ. ಸರಸ್ವತಿ ಮಂಟಪ ಎಂದು ಕರೆದಿರುವುದರ ಮೇಲಿಂದ ಇದೊಂದು ಜೈನ ವಿದ್ಯಾಕೇಂದ್ರವಾಗಿರಬಹುದು. ಏಕೆಂದರೆ ಸೇಡಮಂದಲ್ಲಿ ಕೋಮಟಗಳಲ್ಲಿ (ವೈಶ್ಯರ ಓಣಿ) ಯಲ್ಲಿರುವ ಭಃ ಪಾರ್ಶ್ವನಾಥ ಜಿನಮಂದಿರದ ಪಶ್ಚಿಮಕ್ಕೆ ಸರಸ್ವತಿ ಮಂದರಿವೆಂದು ಕರೆಯುವ ಬಸದಿ ಇದೆ. ಇದು ಓದುವ ಪಟ್ಟಸಾಲೆಯೂ ಹೌದು. ಹೀಗಾಗಿ ನಿಪ್ಪಾಣಿಯ ಸರಸ್ವತಿ ಮಂಟಪ ಜೈನವಿದ್ಯಾಕೇಂದ್ರವಾಗಿರಬೇಕೆಂದು ತರ್ಕಿಸಲಾಗಿದೆಯೇ ವಿನಃ ಅಂತಿಮ ಸತ್ಯವಲ್ಲ.

ಚಿತ್ತಾಪೂರ ತಾಲೂಕಿ ಭಂಕೂರು ಪ್ರಸಿದ್ಧ ಜೈನಗುರುಗಳನ್ನು ಹೊಂದಿದ್ದ ಊರು. ಸಮರ್ಥಕ್ಕೆ ಜೈನಾಚಾರ್ಯರಾದ ಕುಂದಕುಂದಾಚಾರ್ಯ, ಉಮಾಸ್ವಾಮಿಗಳು ಅಲ್ಲಿಗೆ ಬಂದು ಕೆಲವ ದಿನವಿದ್ದು ಬೋಧನೆ ಮಾಡಿರಬಹುದೆಂದು ದಿ. ಡಾ. ಪಿ.ಬಿ. ದೇಸಾಯಿ ಅವರು ಭಂಕೂರಿನ ನಿಶಧಿ ತೆರನಾಗಿರುವ ಶಿಲ್ಪದಲ್ಲಿನ ಇಬ್ಬರೂ ಜಿನ ಮುನಿಗಳು ಕುಂದಕುಂದ ಮತ್ತು ಉಮಾಸ್ವಾಮಿಗಳದ್ದಾಗಿರಬಹುದೆಂದು ಊಹಿಸಿದ್ದಾರೆ.[8]

ಗುಲಬರ್ಗಾ ತಾಲೂಕಿನ ಪಂಚಕೂಟ ಜಿನಾಲಯವನ್ನು ಹೊಂದಿರುವ ಹರಸೂರು, ಶಾಸನಗಳಲ್ಲಿ ಶಾಲೆಯ ಸೀಮಳ, ಅಗ್ರಹಾರ ಶ್ರೀಕರಪುರವೆಂದೇ ದಾಖಲಾಗಿದೆ. ಸಾಮಾನ್ಯವಾಗಿ ಸಣ್ಣ ದೊಡ್ಡ ಊರುಗಳಲ್ಲಿರುವ ಬಸದಿಗಳು ವಿದ್ಯಾಕೇಂದ್ರಗಳಂತೆ ಕಾರ್ಯ ನಿರ್ವಹಿಸುತ್ತಿದ್ದವು. ಅಲ್ಲಿ ಧಾರ್ಮಿಕ ಶಿಕ್ಷಣಕ್ಕೆ ಆದ್ಯತೆ ನೀಡುವುದರ ಜೊತೆ ಜೊತೆ ಲೌಕಿಕ ಶಿಕ್ಷಣವನ್ನು ಕಡೆಗಣಿಸುತ್ತಿರಲಿಲ್ಲ. ಆಗಿನ ಜೈನ ಮನೆ ಮಂದಿರ ಮಠ, ಅಗ್ರಹಾರ, ಘಟಿಕಾ ಸ್ಥಾನ ಪಟ್ಟಸಾಲೆಗಳಲ್ಲಿ ಜೋತಿಷ್ಯ, ಗಣಿತ, ಹಸ್ತಸಾಮುದ್ರಿಕ, ಶಕುನ, ಆಯುರ್ವೇದ, ಪೂಜಾಮಂತ್ರ, ಸ್ತೋತ್ರ, ಶಿಲ್ಪ ವಾಸ್ತುಶಿಲ್ಪ ಸಂಗೀತ, ಶಸ್ತ್ರ, ಶಾಸ್ತ್ರ, ಗಜವಿದ್ಯೆ, ತರ್ಕ, ವ್ಯಾಕರಣ, ಅಶ್ವಶಾಸ್ತ್ರ, ಸೂಪಶಾಸ್ತ್ರ ನಾನಾ ವಿಷಯಗಳನ್ನು ಅಲ್ಲಿ ಕಲಿಸಲಾಗುತ್ತಿತ್ತು. ಅಲ್ಲಿ ಶಿಸ್ತು ಸನ್ನಡತೆಗೆ ಮೊದಲು ಪ್ರಾಶಸ್ತ್ಯವಿತ್ತು. ಹೀಗಾಗಿ ಇಹದ ಶಿಕ್ಷನ ವ್ಯಷ್ಠಿ ಮತ್ತು ಸಮಷ್ಠಿ ಉನ್ನತಿಯ ಜೊತೆ ಪರಕ್ಕೆ ಕದತೆರೆಯುತ್ತಿತ್ತು. ಆಗಿನ ಜೈನ ಗುರುಕುಲಗಳು ವಿದ್ಯಾಕೇಂದ್ರಗಳು ಸಶಕ್ತ ಸಚ್ಚರಿತ ಪರೋಪಕಾರಿ ಸಮಾಜವನ್ನು ನಿರ್ಮಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದವು.

ಜೈನ ಗುರುಗಳು

ಹುಣಸಿ ಹಡಗಲಿಯಲ್ಲಿನ ಬಸದಿಯಲ್ಲಿರುವ ಕ್ರಿ.ಶ. ೧೦೯೯ರ ಶಾಸನ ಅನೇಕ ಜೈನ ಆಚಾರ್ಯರ ಪಟ್ಟಿಯನ್ನು ನೀಡಿದೆ.[9]

೧. ಕೊಂಡಕುಂದ (ಕುಂದಕುಂದ) ೨. ಗೃದ್ಧಪಿಂಛಾಚಾರ್ಯ (ಉಮಾಸ್ವಾತಿ, ಇವರು ಹದ್ದಿನ ಗರಿಗಳ ಪಿಂಛಿಯನ್ನು ಹೊಂದಿದ್ದರು). ೩. ಬಲಾಕಪಿಂಛಾಚಾರ್ಯ (ಇವರು ಕೊಕ್ಕರೆ ಬೆಳ್ಳಕ್ಕಿ ಗರಿಗಳ ಪಿಂಛಿಯನ್ನು ಹೊಂದಿದವರು). ೪. ಗುಣನಂದಿ ೫. ದೇವೇಂದ್ರ ೬. ವಸುನಂದಿ ೭. ರವಿಚಂದ್ರ ೮. ಪೂರ್ಣಚಂದ್ರ ೯. ದಾಮನಂದಿ ೧೦. ಶ್ರೀಧರದೇವ ೧೧. ಮಲಧಾರಿ ದೇವ ೧೨. ಚಂದ್ರಕೀರ್ತಿ ೧೩. ನಯನಂದಿ ೧೪. ವರ್ಧಮಾನ ೧೫. ದಿವಾಕರಣಂದಿ (ಪಿರಿಯ) ೧೬. ಮಂತ್ರವಾದಿ ಜಿನಚಂದ್ರ ೧೭. ಸರ್ವನಂದಿ ೧೮. ಬಾಳಚಂದ್ರ ೧೯.ಮಲಧಾರಿ ದೇವರು ೨೦. ಕಲ್ಯಾಣಿಕೀರ್ತಿ ೨೧. ಅರ್ಹನಂದಿ ಬೆಟ್ಟದೇವ ಇದರಲ್ಲಿನ ಅನೇಕ ಮುನಿಗಳು ಶ್ರವಣಬೆಳಗೊಳ ಇನ್ನಿತರ ಶಾಸನಗಳಲ್ಲಿ ಕೀರ್ತಿತರಾದವರು. ಹುಣಸಿಹಡಗಲಿಯಲ್ಲಿ ಪಾರ್ಶ್ವನಾಥ ಬಸದಿಯನ್ನು ಕಟ್ಟಿಸಿದ ಚೌಧರೆ ರಕ್ಕಸಯ್ಯ ಅರ್ಹನಂದಿ ಬೆಟ್ಟದ ದೇವರ ಶಿಷ್ಯ.

ಇಲ್ಲಿ ಇನ್ನೊಂದು ಮಹತ್ವದ ವಿಷಯ ದಾಖಲಿಸಬೇಕು. ಹುಣಸಿ ಹಡಗಲಿಯ ಶಾಸನೋಕ್ತ ಜೈನಗುರು ಬಾಳಚಂದ್ರನು ಖ್ಯಾತ ಸತ್ಕವಿ ನಾಗಚಂದ್ರ (ಅಭಿನವ ಪಂಪ)ನ ಗುರುಗಳು.

[1] ಡಾ. ವಸಂತಕುಮಾರ ತಾಳ್ತಜೆ, ಜೈನ ಸಂಸ್ಕೃತಿ ಮತ್ತು ಸಿದ್ಧಾಂತಗಳು, ಸಂ. ಡಾ.ಪಿ.ಕೆ. ಖಂಡೋಬಾ, ಡಾ. ಸವದತ್ತಿಮಠ

[2] ಶ್ರೀ ಸೀತಾರಾಮ ಜಾಗೀರದಾರ್, ಕರ್ನಾಟಕ ಶಾಸನ ಸಂಶೋಧನೆ, ಸಂ. ಕೆ.ಜಿ. ಭಟ್‌ಸೂರಿ, ಪುಟ ೨೩

[3] ಜೈನ ಜನಪದ ಹಾಡುಗಳು, ಸಂ. ಡಿ.ಎನ್.ಅಕ್ಕಿ. ಸುಮಂಗಲಾ ಡಿ. ಅಕ್ಕಿ.

[4] ಬದ್ದವಣ, ಪ್ರೊ. ಕಮಲಾಹಂಪನ

[5] ಯಾಪನೀಯ ಸಂಘ, ‌ಪ್ರೊ. ಹಂಪ ನಾಗರಾಜಯ್ಯ

[6] ಡಾ. ಎಂ. ಚಿದಾನಂದಮೂರ್ತಿ, ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ, ಪು.೯

[7] ಡಾ. ಪಿ.ಬಿ. ದೇಸಾಯಿ, Jainism in south India and Some Jain Epigraphs, P.No. 195

[8] Jainsim in South India Some Jain Epigraphas page No. 184

[9] ಸೀತಾರಾಮ ಜಾಗೀರದಾರ್, ಜೈನ ಸಂಸ್ಕೃತಿ ಮತ್ತು ಸಿದ್ಧಾಂತಗಳು, ಸಂ. ಡಾ. ಪಿ.ಕೆ. ಖಂಡೋಬಾ, ಡಾ. ಸಂಗಮೇಶ ಸವದತ್ತಿಮಠ.