ದಾನಚಿಂತಾಮಣಿ ಎನ್ನಿಸಿದ್ದ ಅತ್ತಿಮಬ್ಬೆಯಂತೆ ಅನೇಕ ಜೈನ ಮಹಿಳೆಯರು ದತ್ತಿದಾನಗಳಿಂದ ಖ್ಯಾತರಾಗಿದ್ದುದ್ದನ್ನು ಶಾಸನಗಳು ಹೊತ್ತಗೆಗಳು ದಾಖಲಿಸಿವೆ. ಹಾಗೆಯೆ ಹುಣಸಿ ಹಡಗಲಿಯ ಶಾಸನದಲ್ಲಿ ಉಕ್ತಳಾಗಿರುವ ಮಲ್ಲಿಕಬ್ಬೆ (ಮಲ್ಲಿಯಕ್ಕ) ಆಕೆಯ ಗಂಡ ಶಾಂತಿವರ್ಮ (ಶಾಂತ) ಇವನ ತಂದೆ – ತಾಯಿಗಳಾದ ರಕ್ಕಸಯ್ಯ – ಅಕ್ಕಣಬ್ಬೆ ಇವರು ಪರಮ ಜಿನ ಭಕ್ತರಲ್ಲದೆ ಆಹಾರ, ಔಷಧ, ಅಭಯ, ಶಾಸ್ತ್ರದಾನಗಳಲ್ಲಿ ಅನನ್ಯತೆಯನ್ನು ಮೆರೆದವರು ರಕ್ಕಸಯ್ಯ ಹಡಂಗಿಲೆ (ಹುಣಸಿಹಡಗಲಿ) ಹಿರಿಯ ಮೇಳಕುಂದೆ ಕಿರಿಯ ಮೇಳಕುಂದೆ, ಮಣಲಿ (ಮಳ್ಳಿ) ಕೋಳನೂರು (ಕೋಳ್ಕೂರು) ಬೆಳಗುಪ್ಪಿ, ಮೂಲವಳ್ಳಿ ಇವುಗಳ ಪ್ರಭುವಾಗಿದ್ದವನು. ಇಂಥ ಸದ್‌ವೃತಿಕರ ಸೊಸೆಯಾದ[1] ಮಲ್ಲಿಕಬ್ಬೆ ಮತ್ತು ಶಾಂತಿವರ್ಮರು.

ಅಂದದಕ್ಕರಗಳಿಗೆ ಖ್ಯಾತನಾಗಿದ್ದ ಉದಯಾದಿತ್ಯನೆಂಬ ಲಿಪಿಕಾರನಿಂದ ‘ಸತ್ಕರ್ಮ ಪಂಚಿ'(ಮಹಾಧವಲಾ) ಪ್ರಾಕೃತ ಗ್ರಂಥವನ್ನು ಕನ್ನಡ ಲಿಪಿಯಲ್ಲಿ ಪ್ರತಿಮಾಡಿಸಿ ಶಾಸ್ತ್ರದಾನ ಮಾಡಿದ್ದು ಜೈನ ಸಾಹಿತ್ಯಕ್ಕೆ ದೊಡ್ಡ ಕೊಡುಗೆ ಎನಿಸಿತು. ಈಗ ಮೂಡುಬಿದರೆಯ ಮಠದಲ್ಲಿ ಉಳಿದುರುವವೇ ಈ ಧವಲಾ ಜಯಧವಲಾ ಪ್ರತಿಗಳು. ಇವು ಸಮಗ್ರ ಜೈನ ವಾಙ್ಮಯದ (ಷಟ್ ಖಂಡಾಗಮದ) ಕೀಲಿಕೈಗಳು. ಜಗತ್ತಿಗೆ ಜೈನಧರ್ಮದ ತಿರುಳನ್ನು ತಿಳಿಸಿರುವ ಈ ಕೃತಿಗಳ ಪೈಕಿ ಒಂದು ಕೃತಿಯನ್ನು ನೀಡಿದವಳು ಕಲಬುರ್ಗಿ ಪ್ರದೇಶದ ಸ್ತ್ರೀರತ್ನ ಮಲ್ಲಿಕಬ್ಬೆ ಎಂಬುದು ಹೆಮ್ಮೆಪಡುವ ಸಂಗತಿ.

ಕ್ರಿ.ಶ. ೬ – ೭ನೇ ಶತಮಾನದ ಜೈನಾಚಾರ್ಯರು ಜೈನ ಕವಿಗಳ ಅಲ್ಲಲ್ಲಿ ಉಲ್ಲೇಖವಿದ್ದರೂ ಆ ಕಾಲದ ಕೃತಿಗಳು ಲಭ್ಯವಿಲ್ಲದುದು ಸಾಹಿತ್ಯ ಕ್ಷೇತ್ರಕ್ಕಾದ ಮಹಾಹಾನಿ. ಕವಿರಾಜಮಾರ್ಗದಲ್ಲಿ ಉಲ್ಲೇಖಿಸಲಾದ ಬಹಳಷ್ಟು ಕವಿಗಳ ಕಾಲ ಮತ್ತು ಕೃತಿಗಳ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ನಂತರ ಕ್ರಿ.ಶ. ೪ನೇ ಶತಮಾನದ ಲಿಖಿತ ಹೊತ್ತಿಗೆಗಳ ಉಪಲಬ್ಧಿಯಿಂದ ಕರ್ನಾಟಕದ ಜೈನ ಸಾಹಿತ್ಯದ ಹಿಲಾಲು, ಕಲಬುರ್ಗಿ ಪ್ರದೇಶದ ತೈಲದಿಂದ ಎಂಬಂಶ ಜಗಜ್ಜಾಹಿರಾದದ್ದು ಅಂಕಳಂಕಾಚಾರ್ಯದಿಂದ ಎಂಬುದು ಹೆಮ್ಮೆಯ ಸಂಗತಿ. ರಾಷ್ಟ್ರಕೂಟ ದೊರೆ ಸಾಹಸ ತುಂಗ (ಕ್ರಿ.ಶ. ೭೪೫ – ೭೫೯)ಬಿರುದಾಂಕಿತ ದಂತಿದುರ್ಗನ ಪ್ರಧಾನಮಂತ್ರಿಯಾಗಿದ್ದ ಪುರುಷೋತ್ತಮ ಪದ್ಮಾವತಿಯರ ಪುತ್ರರಾದ ನಿಷ್ಕಲಂಕ, ಅಕಲಂಕರು ಜಿನಧರ್ಮ ದೀಪಿಕೆಗೆ ತಮ್ಮ ಪಾಂಡಿತ್ಯ ಪರಿಶ್ರಮಗಳ ಎಣ್ಣೆ ಎರೆದು ಉದ್ದೀಪನಗೊಳಿಸುವಲ್ಲಿ ಮಹತ್ವದ ಪಾತ್ರವಹಿಸಿದರು. ಇದೇ ಕಾಲದಲ್ಲಿ ಪ್ರಖ್ಯಾತ ನಾಲಂದಾ ವಿಶ್ವವಿದ್ಯಾಲಯದ ಮುಖ್ಯಸ್ಥರಾಗಿದ್ದ ಧರ್ಮಪಾಲರ ಅವಧಿಯ ಬೌದ್ಧಧರ್ಮದ ಉಚ್ಛ್ರಾಯಕಾಲ. ಇಂಥ ಸಮಯದಲ್ಲಿ ಅಕಲಂಕರು ಬೌದ್ಧಧರ್ಮದ ಪ್ರಖ್ಯಾತ ಪಂಡಿತರನ್ನು ಅನೇಕ ವಾದಗಳಲ್ಲಿ ಸೋಲಿಸಿ ಜೈನಧರ್ಮದ ಪಾರಮ್ಯವನ್ನು ಮೆರೆದರು (ಈ ಸಂದರ್ಭದಲ್ಲೆ ನಿಷ್ಕಳಂಕರ ಬಲಿದಾನವೂ ಆಯಿತು). ಅಕಲಂಕರ ಕರ್ಮಭೂಮಿ ಕಲಬುರ್ಗಿ ಪ್ರದೇಶದ ಮಾನ್ಯಖೇಟವೆಂಬುದು ಹೆಮ್ಮೆಯ ವಿಷಯ. ನ್ಯಾಯ, ತರ್ಕ, ಸಿದ್ಧಾಂತಗಳಲ್ಲಿ ಪ್ರಕಾಂಡ ಪಾಂಡಿತ್ಯ ಹೊಂದಿದ್ದ, ತಾರ್ಕಿಕ ಚೂಡಾಮಣಿ, ಜಿನಶಾಸನ ದೀಪಕ ಎಂದು ಕೀರ್ತಿತರಾದ ಇವರ ಅಗಾಧ ವಿದ್ವತ್ತಿನ ಮಹಿಮೆಯನ್ನು ಶ್ರವಣಬೆಳಗೊಳದ ಶಾಸನಗಳು ಕೊಂಡಾಡಿವೆ. ಹೀಗಾಗಿ ಜೈನನ್ಯಾಯಶಾಸ್ತ್ರ ಪ್ರತಿಷ್ಠಾಪಕರೆನಿಸಿಕೊಂಡಿದ್ದ ಇವರು ಉಮಾಸ್ವಾಮಿಯವರ ತತ್ವಾರ್ಥ ಸೂತ್ರಕ್ಕೆ ತತ್ವಾರ್ಥ ರಾಜವಾರ್ತೆಕೆ ಎಂಬಟೀಕಾ ಗ್ರಂಥವನ್ನು ಅಷ್ಟಶತಿ, ನ್ಯಾಯ ವಿನಿಶ್ಚಯ, ಪ್ರಮಾಣ ಸಂಗ್ರಹ, ಲಘೀಯಸ್ತ್ರಯ, ಸಿದ್ಧಿ ವಿನಿಶ್ಚಯ ಎಂಬ ಗ್ರಂಥಗಳನ್ನು ರಚಿಸಿ ಜೈನ ಸಿದ್ಧಾಂತದ ಸಾರವನ್ನು ಭವ್ಯ ಜನರಿಗೆ ತಿಳಿಸಿ ಮುಂದಿನವರಿಗೆ ಕೈದೀವಿಗೆಯಾದರು.

ನಂತರ ಮಾನ್ಯಖೇಟ ಹಾಗೂ ಅದರ ಸುತ್ತಲ ಪ್ರದೇಶದಿಂದ ಇಲ್ಲಿನ ಅರಸರಿಂದ ಅವರ ಸಾಮಂತರಿಂದ ಆಶ್ರಯ ಪಡೆದು ಜಿನಮುನಿಗಳ ಮಾರ್ಗದರ್ಶನದಲ್ಲಿ ಸಾಲುಸಾಲು ಪ್ರಜ್ವಲಿಸುವ ಪಳವಿಗೆಗಳಂತೆ ಪ್ರಾಕೃತ, ಸಂಸ್ಕೃತ, ಅಪಭ್ರಂಶ, ಕನ್ನಡ ಭಾಷೆಗಳಲ್ಲಿ ಸಾಲು ಸಾಲು ಕೃತಿರತ್ನಗಳು ಮೂಡಿ ಬಂದು ನಾಡಚರಿತ್ರೆಗೆ ನಾವಿನ್ಯದ ಹೊಳಹು ನೀಡಿದವು. ಸಂಸ್ಕೃತ ಹಾಗೂ ಪ್ರಾಕೃತದಲ್ಲಿ ಹೇಗೋ, ಹಾಗೆಯೇ ದೇಸಿ ಭಾಷೆ ಕನ್ನಡ ಭಾಷೆಯಲ್ಲೂ ಕೃತಿ ರಚನೆ ಸಾಧ್ಯವೆಂಬುದನ್ನು ಮೊದಲು ತೋರಿಸಿಕೊಟ್ಟ ಶ್ರೇಯಸ್ಸು ಈ ಭಾಗದ ಜೈನ ಕವಿಗಳಿಗೆ ಸಲ್ಲುತ್ತದೆ. ಇದರಿಂದಾಗಿ ಮುಂದೆ ಕನ್ನಡದಲ್ಲಿ ಮಹಾಕಾವ್ಯಗಳ ಪರಂಪರೆಯ ಹೊನಲೇ ಹರಿಯಿತು.

ಭ್ರಾಜಿಷ್ಣವಿನ ಆರಾಧನಾ ಕರ್ಣಾಟ ಟೀಕಾ (ವಡ್ಡಾರಾಧನೆ ಕ್ರಿ.ಶ.೮೦೦) ಶ್ರೀವಿಜಯನ ಕವಿರಾಜಮಾರ್ಗ ಕ್ರಿ.ಶ.೮೫೦) ಜಿನಸೇನಾಚಾರ್ಯರ ‘ಪಾರ್ಶ್ವಾಭ್ಯುದಯ’ (ಸಂಸ್ಕೃತ ೮೫೦), ‘ಆದಿಪುರಾಣ’ (ಪೂರ್ವ ಮಹಾಪುರಾಣ ಸಂಸ್ಕೃತ ಕ್ರಿ.ಶ. ೮೫೦) ಜಯಧವಲಾ ಟೀಕು (ಪ್ರಾಕೃತ ಕ್ರಿ.ಶ. ೯ನೇ ಶತಮಾನ) ನೃಪತುಂಗ (ಅಮೋಘವರ್ಷ)ನ (ಕ್ರಿ.ಶ. ೮೧೫ – ೮೭೮)ಸಂಸ್ಕೃತ ಪ್ರಶ್ನೋತ್ತರ ರತ್ನಮಾಲಾ ಗುಣಭದ್ರಾಚಾರ್ಯರ ಉತ್ತರ ಪುರಾಣ (ಸಂಸ್ಕೃತ ಕ್ರಿ.ಶ. ೮೯೮), ಇಲ್ಲೊಂದು ಸೃಷ್ಟೀಕರಣ ಜಿನಸೇನರ ಗುರುಗಳಾದ ವೀರಸೇನಾಚಾರ್ಯರು ಮಳಖೇಡದಲ್ಲಿದ್ದಿರಬಹುದಾದರೂ ಅಲ್ಲಿ ಕೃತಿ ರಚಿಸಿರುವುದು ಪ್ರಶ್ನಾರ್ಹ ಆದರೂ ರಚಿಸಿರುವ ಸಾಧ್ಯತೆ ಉಂಟೆಂಬ ಕಾರಣಕ್ಕೆ ಆ ಕುರಿತು ಇಲ್ಲಿ ದಾಖಲಿಸಿದ್ದೇನೆ. ಕ್ರಿ.ಶ. ೯ನೇ (ಕ್ರಿ.ಶ. ೮೧೪) ಶತಮಾನದಲ್ಲಿ ವೀರಸೇನರು ಪ್ರಖ್ಯಾತ ಪಂಡಿತರು. ಜೈನ ಕಾವ್ಯ, ಪುರಾಣ, ತತ್ವಶಾಸ್ತ್ರಗಳನ್ನು ಸಮ್ಮಿಳಿತಗೊಂಡ ಸಂಸ್ಕೃತದ ಮಹಾನ್ ಕೃತಿಯಾದ ಮಹಾಪುರಾಣ ರಚಿಸಿದ ಮೇಲೆ ಉಲ್ಲೇಖಿಸಲ್ಪಟ್ಟ ಜಿನಸೇನಾಚಾರ್ಯರು ವೀರಸೇನಾಚಾರ್ಯರ ಪರಮಶಿಷ್ಯರಾಗಿದ್ದರು. ಸಂಸ್ಕೃತ ಪ್ರಾಕೃತಗಳ ಮಿಶ್ರಿತರೂಪವಾದ ಮಣಿ ಪ್ರವಾಳಂ ಶೈಲಿ (ಹವಳ ರತ್ನಗಳ ಕೋದ ಸಮ್ಮಿಶ್ರಹಾರದಂತೆ)ಯಲ್ಲಿ ರಚಿಸಲ್ಪಟ್ಟಿದ್ದ ೭೨ ಸಾವಿರ ಶ್ಲೋಕಗಳ ಧವಲಾ ವೀರಸೇನಾಚಾರ್ಯರ ಕೃತಿ ಇವರ ಅತಿ ಪ್ರಸಿದ್ಧವಾದ ಕೃತಿ. ಇವರಿಗಿಂತ ಹಿಂದಿನ ಜೈನಾಗಮಜ್ಞಾನಿಗಳಾಗಿದ್ದ ಭೂತಬಲಿ ಮತ್ತು ಪುಷ್ಪದಂತರು ಧರಸೇನಾಚಾರ್ಯರಿಂದ ಜೈನಾಗಮಗಳ ಸಾರವನ್ನು ಕೇಳಿ (ಶ್ರುತಿ) ಅದನ್ನು ಲಿಪಿ ಬದ್ಧಗೊಳಿಸಿದ್ದ ಷಟಂಡಾಗಮ ಕೃತಿಯ ಟೀಕಾಗ್ರಂಥವೇ ಧವಲ. ಆ ಕಾಲದ ರಾಷ್ಟ್ರಕೂಟರ ಮಾನ್ಯಖೇಟರ ಪ್ರಖ್ಯಾತದೊರೆ ನೃಪತುಂಗನಿಗೆ ಅತಿಶಯ ಧವಳ ಎಂಬ ಬಿರುದಿತ್ತು. ನೃಪತುಂಗನ ಪಾಂಡಿತ್ಯ ಸಾಹಸ, ಗುರುಭಕ್ತಿ, ಧರ್ಮಶ್ರದ್ಧೆ ಗಮನಿಸಿ ವೀರಸೇನರು ತಮ್ಮ ಕೃತಿಗೆ ಅರಸನ ಬಿರುದನ್ನು ತಮ್ಮ ಕೃತಿಗೆ ಅಳವಡಿಸಿಕೊಂಡಿದ್ದಿರಬಹುದು. ಹಿಂದಿನ ಅನೇಕ ವಿದ್ಯಾಕೇಂದ್ರಗಳಲ್ಲಿ ಗಣಿತದ ಪಠ್ಯವಾಗಿದ್ದ 10ಮಹಾವೀರಾ ಚಾರ್ಯ (ಕ್ರಿ.ಶ.೮೭೦)ನ ಗಣಿತಸಾರಸಂಗ್ರಹ ಎಂಬ ೧೧೦೦ ಶ್ಲೋಕಗಳುಳ್ಳ ಸಂಸ್ಕೃತದ ಗ್ರಂಥ ಅವರ ಪಾಂಡಿತ್ಯ ಪ್ರತಿಭೆಗೆ ಸಾಕ್ಷಿಯಾಗಿದೆ. ಮಾಲಾ ರೂಪದ ಸಂಖ್ಯೆಗಳು, ಎಡದಿಂದ ಬಲಕ್ಕಾಗಲಿ ಬಲದಿಂದ ಎಡಕ್ಕಾಗಲಿ ಓದಿದಾಗ ಒಂದೇಸಂಖ್ಯೆ ಬರುವ ವಿಶೇಷ ಗುಣಾಕಾರಗಳು ಇದರಲ್ಲಿವೆ. ಲೌಕಿಕ ವೈದಿಕ ಸಾಮಾಯಿಕ, ವ್ಯಾಪಾರ ಮೊದಲಾದ ಕಡೆ ಸಂಖ್ಯೆಗಳನ್ನೆ ಬಳಸಬೇಕಾಗುತ್ತದೆ. ಹಾಗೆಯೇ ಕಾಮತಂತ್ರ, ಅರ್ಥಶಾಸ್ತ್ರ ಇತರೆಲ್ಲವುಗಳಲ್ಲಿ ಗಣಿತ ಬೇಕೇ ಬೇಕು. ಹೆಚ್ಚಿಗೆ ಹೇಳುವುದೇನು? ಮೂರು ಲೋಕಗಳ ಸಚರಾಚರಾವಸ್ತು ಗಳಿಗೆಲ್ಲ ಗಣಿತ ಬೇಕೆ ಬೇಕೆಂಬುದನ್ನು ಈ ಗ್ರಂಥದ ಶ್ಲೋಕವೊಂದರಲ್ಲಿ ಸ್ಪಷ್ಟಪಡಿಸಿದ್ದಾನೆ. ಷಟ್ ತ್ರಿಂಶಿಕ, ಜ್ಯೋತಿಷ್ಯ ಪಟಲ, ಕ್ಷೇತ್ರಗಣಿತ ಚತ್ತೀಸ ಪೂರ್ವ, ಉತ್ತರ ಪತಿಸಹ ಇವುಗಳು ಮಹಾವೀರಾಚಾರ್ಯರ ಇತರ ಕೃತಿಗಳು. ‘ಗಣಿತ ಸಾರಸಂಗ್ರಹ’ದಿಂದ ಅಮೋಘವರ್ಷ ನೃಪತುಂಗನು ಜೈನನಾಗಿದ್ದನೆಂಬುದಕ್ಕೆ ಬಲವಾದ ಸಾಕ್ಷಿಯನ್ನು ನೀಡುತ್ತದೆ. ಇದೇ ಕಾಲದ ಉಗ್ರಾದಿತ್ಯ ಕಲ್ಯಾಣಕಾರಕವೆಂಬ ಸಂಸ್ಕೃತದ ವೈದ್ಯಗ್ರಂಥವು ೪ ಪಾದಗಳ ಶ್ಲೋಕಗಳನ್ನೊಳಗೊಂಡ ೨೫ ಪರಿಚ್ಛೇದಗಳನ್ನು ಹೊಂದಿದೆ. ಕೊನೆಯಲ್ಲಿ ವಿಸ್ತೃತವಾದ ಪರಿಶಿಷ್ಟದಲ್ಲಿ ವಿವಿಧ ವಯೋ ಧರ್ಮಗಳ ಜೀವಿಗಳ ಮರಣ ಚಿಹ್ನೆಗಳನ್ನು ತಿಳಿಸಿದೆಯಲ್ಲದೆ ಉಳಿದ ಪರಿಚ್ಛೇದಗಳಲ್ಲಿ ಗರ್ಭೋತ್ಪತ್ತಿ, ಮಾಂಸ, ದಂತಗಳ ಲಕ್ಷಣಗಳು, ರೋಗಗಳು, ಋತುಗಳು, ಧಾನ್ಯಗಳು, ನೀರಿನ ಗುಣಧರ್ಮ, ಮೂತ್ರದ ವಿವರಣೆ, ದಿನಚರಿ ಚಿಕಿತ್ಸಾಕ್ರಮ ಇತ್ಯಾದಿ ಆರೋಗ್ಯಕ್ಕೆ ಸಂಬಂಧಪಟ್ಟ ಅನೇಕ ವಿವರಗಳುಳ್ಳ ಈ ಕೃತಿ ಆಗಿನ ಕಾಲದ ಜೈನರು ವೈದ್ಯ ಕ್ಷೇತ್ರದಲ್ಲಿದ್ದ ಪರಿಣಿತೆಯನ್ನು ತೋರಿಸುತ್ತದೆ. ಈಗಲೂ ಅನೇಕ ಜೈನ ಅರ್ಚಕ (ಉಪಾಧ್ಯಾಯ, ಪಂಡಿತರು) ಪೂಜೆ ಪಾಠದ ಜೊತೆ ಜ್ಯೋತಿಷ್ಯ (ಆಯುರ್ವೇದ ಔಷಧ), ವೈದ್ಯವೃತ್ತಿಯಲ್ಲಿದ್ದಾರೆ. ಇದು ಪ್ರಾಚೀನ ಜೈನ ವಿದ್ವಾಂಸರ ಬಳುವಳಿ ಎಂಬುದರಲ್ಲಿ ಸಂದೇಹವಿಲ್ಲ. ಇದೇ ಶತಮಾನದ ಖ್ಯಾತ ವ್ಯಾಕರಣ ತಜ್ಞನಾಗಿದ್ದ ಪಾಲ್ಯಕೀರ್ತಿಯ ಪಾಂಡಿತ್ಯದಿಂದ ಹಿಂದಿನ ವ್ಯಾಕರಣಕಾರನಾದ ಶಾಕಚಾಯನನೊಂದಿಗೆ ಸಮೀಕರಿಸಿ ಇವನನ್ನು ಶಾಕಟಾಯನನೆಂದೇ ಗುರುತಿಸುತ್ತಾ ಬರಲಾಗಿದೆ. ಯಾಪನೀಯ ಪಂಥಕ್ಕೆ ಪಂಥವನಾಗಿದ್ದ ನೃಪತುಂಗನ ಆಸ್ಥಾನ ವಿದ್ವಾಂಸರಲೊಬ್ಬನಾಗಿದ್ದ ಶಬ್ದಾನುಶಾಸನ ಇವನ ಮಹತ್ವಪೂರ್ಣ ಸಂಸ್ಕೃತದ ವ್ಯಾಕರಣಗ್ರಂಥ, ಸೂತ್ರಪಾಠ, ಧಾತುಪಾಠ, ಲಿಂಗಾನುಶಾಸನ, ಉಣಾದಿ ಸೂತ್ರಪಾಠ ಐದು ಭಾಗಗಳ ೨೨೩೦ ಸೂತ್ರಗಳನ್ನು ಹೊಂದಿದೆ. ‘ಅಮೋಘವೃತ್ತಿ’ (ಸಂಸ್ಕೃತ) ಶಾಕಟಾಯನ ನ ಇನ್ನೊಂದು ಗ್ರಂಥವಿತ್ತೆಂದು ತಿಳಿದುಬರುತ್ತದೆ. ಇದು ತನ್ನ ಶಬ್ದಾನು ಶಾಸನ ಕೃತಿಗೆ ತಾನೆ ಬರೆದಿರಬಹುದಾದ ಟೀಕಾಗ್ರಂಥ. ಶಬ್ದಾನುಶಾಸನ ಕುರಿತು ಅನೇಕ ಟೀಕಾ ಗ್ರಂಥಗಳು ಬಂದಿವೆ. ಪ್ರಭಾಚಂದ್ರಾಚಾರ್ಯನ ‘ಶಾಕಟಾಯನ ನ್ಯಾಸ್’ ಭಾವಸೇನ ತ್ರೈವಿದ್ಯನ ‘ಶಾಕಟಾಯನಟೀಕಾ’ ಮುನಿ ಧನಪಾಲನ ‘ರೂಪಿಸಿದ್ದಿ’, ಸಂಸ್ಕೃತದ ಈ ಹೊತ್ತಗೆಗಳು ಪ್ರಮುಖವಾದವುಗಳು.ಶ್ರೀವಿಜಯದ ‘ಕವಿರಾಜಮಾರ್ಗ’, ಕನ್ನಡ ಸಾಹಿತ್ಯದ ಕೈಮರ, ಅಲಂಕಾರ ಗ್ರಂಥವಾದರೂ ಅನೇಕ ವಿಷಯಗಳ ಆಗರ. ಮೊಟ್ಟಮೊದಲ ಕನ್ನಡದ ಲಕ್ಷಣ ಗ್ರಂಥವಾದರೂ ಮೊದಲ ಕಾವ್ಯವೆಂಬ ಹೆಗ್ಗಳಿಕೆ ಪಡೆದ ಕೃತಿ. ತನ್ನ ಕಾಲದ ಭಾಷಿಕ, ಭೌಗೋಳಿಕ, ಸಾಮಾಜಿಕ, ಸಾಂಸ್ಕೃತಿಕ, ವೈವಿದ್ಯತೆಗಳನ್ನು ಪರಿಚಯಿಸಿ ಕರ್ನಾಟಕದ ವ್ಯಾಪ್ತಿ ವಿಶೇಷತೆಗಳನ್ನು ತೋರಿಸುವ ಮಹತ್ವದ ಕೃತಿ. ಅಂತೆಯೇ ಸಾವಿರ ವರ್ಷಗಳಿಂದಲೂ ಅದು ತನ್ನ ಜನಮನ್ನಣೆ ಹಾಗೂ ಜನಪ್ರಿಯತೆಗಳನ್ನು ಉಳಿಸಿಕೊಂಡು ಬಂದಿದೆ. ಛಂದಸ್ಸು, ವ್ಯಾಕರಣ, ಅಲಂಕಾರ ಹಾಗೂ ಕಾವ್ಯತತ್ವಗಳು ಈ ಕೃತಿಯ ಜೀವಾಳ.

ಇಂದ್ರ ನಂದಿ

ಕ್ರಿ.ಶ. ೯೩೦ ಪ್ರಾಕೃತ ಸಂಸ್ಕೃತ ಭಾಷೆಗಳಲ್ಲಿ ಬಲ್ಲಿದರಾಗಿದ್ದ ಇವರು ರಾಷ್ಟ್ರಕೂಟ ದೊರೆ ಮೂರನೇ ಅಮೋಘವರ್ಷ ಮತ್ತು ೩ನೇ ಕೃಷ್ಣನ ಕಾಲದಲ್ಲಿ ಮಾನ್ಯಖೇಟದಲ್ಲಿದ್ದರು. ಕವಿಪೊನ್ನನ ಗುರುಗಳು. ಕವಿಪೊನ್ನನು ಕುರುಳ್ಗಳ್ ಸವಣ ತಾನೆಂದು ಹೇಳಿಕೊಂಡು ಪೊನ್ನನು ಮುನಿ ಎಂದು ಸೂಚಿಸಿದ್ದಾನೆ. ಇಂದ್ರನಂದಿ ಮುನಿಗಳಿಂದ ದೀಕ್ಷೆ ಪಡೆದಿರಬೇಕು. ಇಂದ್ರನಂದಿಯವರು ಗುಣನಂದಿಯ ಶಿಷ್ಯರು. ಸಮಯ ಭೂಷಣ, ಶ್ರುತವತಾರ, ನೀತಿಸಾರ, ಶ್ರುತ ಪಂಚಮಿ ಮತ್ತು ಜ್ವಾಲಾಮಾಲಿನಿ ಕಲ್ಪ ಎಂಬ ಐದು ಕೃತಿಗಳನ್ನು ರಚಿಸಿದವರು. ಜ್ವಾಲಾಮಾಲಿನಿಕಲ್ಪ ತುಂಬಾ ಹೆಸರು ಮಾಡಿದ ಹೊತ್ತಿಗೆ ಇದು. ಕ್ರಿ.ಶ. ೭೧೧ರಲ್ಲಿ ವೀರಸೇನರ ಗುರುಗಳಾಗಿದ್ದ ಏಲಾಚಾರ್ಯರೂ ಜ್ವಾಲಾಮಾಲಿನಿಕಲ್ಪ ಕೃತಿ ರಚನೆಯಿಂದ ಇಂದ್ರನಂದಿಯು ಜ್ವಾಲಾಮಾಲಿನಿಕಲ್ಪ ರಚಿಸಿರಬಹುದು. ಇದರಿಂದ ಕ್ರಿ.ಶ. ೭೧೧ರಿಂದಲೇ ಜ್ವಾಲಾಮಾಲಿನಿಕಲ್ಪ ತುಂಬಾ ಹೆಸರು ಮಾಡಿದ ಹೊತ್ತಿಗೆ ಇದು. ಕ್ರಿ.ಶ. ೭೧೧ರಲ್ಲಿ ವೀರಸೇನರ ಗುರುಗಳಾಗಿದ್ದ ಏಲಾಚಾರ್ಯರೂ ಜ್ವಾಲಾಮಾಲಿನಿಕಲ್ಪ ಕೃತಿ ರಚನೆಯಿಂದ ಇಂದ್ರನಂದಿಯು ಜ್ವಾಲಾಮಾಲಿನಿಕಲ್ಪ ರಚಿಸಿರಬಹುದು. ಇದರಿಂದ ಕ್ರಿ.ಶ. ೭೧೧ರಿಂದಲೇ ಜ್ವಾಲಾಮಾಲಿನಿ ಪದ್ಮಾವತಿ ಯಕ್ಷಿಯರ ಆರಾಧನಾ ಪದ್ಧತಿ ರೂಢಿಯಲ್ಲಿ ಇದ್ದಿತ್ತೆಂದೆನಿಸುತ್ತದೆ. ಯಾಪನೀಯ ಗುರುಗಳು ತಾಂತ್ರಿಕ ವಿದ್ಯೆಯನ್ನು ಬಲ್ಲವರಾಗಿ, ಜನಸಮೂಹವನ್ನು ಬೇನೆ ಬೇಸರಿಕೆಗಳಿಂದ, ಇತರೆ ಕಾಡಾಟಗಳಿಂದ ಮುಕ್ತಗೊಳಿಸುವವರಾಗಿದ್ದರು. ಪೊನ್ನನ (ಕ್ರಿ.ಶ. ೯೬೦ – ೯೬೭) ಭುವನೈಕ ರಾಮಾಭ್ಯುದಯ, ಶಾಂತಿಪುರಾಣಂ, ಜಿನಾಕ್ಷರ ಮಾಲೆ ಈ ಕನ್ನಡ ಗ್ರಂಥಗಳು ಅಲ್ಲದೆ, ಆತಕೂರಿನ ಕನ್ನಡ ಶಾಸನದ ಕರ್ತೃ ಈತನಿರ ಬೇಕೆಂದು ವಿದ್ವಾಂಸರು ಸಂದೇಹ ಪಟ್ಟಿದ್ದಾರೆ. ಇದೇ ಶತಮಾನದಲ್ಲಿ ಮಾನ್ಯಖೇಟದಲ್ಲಿದ್ದ ಪುಷ್ಪದಂತ ಕವಿ ತಿಸಠ್ಠಿ ಮಹಾಪುರಿಸ ಗುಣಾಲಂಕಾರು, ಜಸಹರಚರಿಉ, ಣಾಯಕುಮಾರ ಚರಿಉ, ಅಪಭ್ರಂಶ ಹಾಗೂ ಪ್ರಾಕೃತದಲ್ಲಿನ ಕೃತಿಗಳು. ರಾಷ್ಟ್ರಕೂಟ ದೊರೆ ೩ನೇ ಕೃಷ್ಣನ ಮಂತ್ರಿ ಹಾಗೂ ದಂಡಾಧಿಪತಿ ಭರತ ಹಾಗೂ ಅವನ ಮಗನನ್ನ, ಪುಷ್ಪದಂತನ ಆಶ್ರಯದಾತರೂ ಕೂಡಾ. ಮಾನ್ಯಖೇಟದ ವೈಭವವನ್ನು ಸುಟ್ಟು ಸೀಕರಿಯಾಗಿ ಹಾಳಾದುದನ್ನು ಕಣ್ಣಾರೆಕಂಡವನು ಪುಷ್ಪದಂತ ಕವಿ. ಭರತ ಮತ್ತು ನನ್ನರು ನೀಡಿ ಪ್ರದೇಶದ ಅನೇಕ ವಿದ್ಯಾಸಂಸ್ಥೆಗಳಿಗೆ ದತ್ತಿದಾನ ನೀಡಿ ವಿದ್ವಾಂಸರುಗಳಿಗೆ ಆಶ್ರಯ ನೀಡಿ ಆ ಕಾಲದಲ್ಲಿ ಶಿ‌ಕ್ಷಣ ಪ್ರಸಾರಕ್ಕೆ ಅಮೂಲ್ಯ ಕೊಡುಗೆ ನೀಡಿದ ತಂದೆ ಮಕ್ಕಳಿವರು.

ಆದಿಕವಿ ಪಂಪ ರಾಷ್ಟ್ರಕೂಟರ ಸಾಮಂತ ವೇಮುಲವಾಡದ ಅರಿಕೇಸರಿಯ ಆಶ್ರಯದಲ್ಲಿದ್ದವ. ಅನೇಕ ಸಲ ರಾಜಧಾನಿ ಮಾನ್ಯಖೆಟಕ್ಕೆ ಬಂದು ಹೋಗಿರಬಹುದು. ಮಾನ್ಯಖೇಟದಲ್ಲಿದ್ದ ಜೈನಾಚಾರ್ಯರ ವಿದ್ವಾಂಸರ ಸಂಪರ್ಕ ಸಲಹೆ ಸೂಚನೆ ಮಾರ್ಗದರ್ಶನ ಪಡೆದುಕೊಂಡಿರಬಹುದು. ಈ ಕೊಡುಕೊಳ್ಳುವಿಕೆಯ ಫಲವಾಗಿ ಕವಿತಾ ಗುಣಾರ್ಣಾವ ಪಂಪನಿಂದ ‘ಆದಿಪುರಾಣ’ ‘ವಿಕ್ರಮಾರ್ಜುನ ವಿಜಯ’ ಕೃತಿಗಳಿಂದಾಗಿ ಆದಿಕವಿ ಪಟ್ಟ ಪಡೆದು ಕೊಳ್ಳುವಂತಾಯಿತು.

ರನ್ನ (೯೯೩ – ೧೦೦೭) ಚಾಲುಕ್ಯರ ಆಶ್ರಯದಲ್ಲಿದ್ದವ. ಚಾಲುಕ್ಯರು ಮೊದಲು ಕೆಲವರುಷ ಮಾನ್ಯಖೇಟದಿಂದಲೆ ರಾಜ್ಯಭಾರ ಮಾಡಿದವರು. ಹೀಗಾಗಿ ರನ್ನ ಈ ಪ್ರದೇಶದ ಬೆಳಸು ಎಂಬ ಭಾವನೆಯಿಂದ ದಾಖಲಿಸಿದ್ದೇನೆ. ರನ್ನ ಕನ್ನಡದ ಅಜಿತ ಪುರಾಣ, ರನ್ನಕಂದ (ನಿಘಂಟು) ಪರಶುರಾಮ ಚರಿತೆ, ಸಾಹಸ ಭೀಮವಿಜಯ, ಲಕ್ಕುಂಡಿಯ ಶಾಸನ ಇವುಗಳ ರಚಯಿತ. ವತ್ಸರಾಜ ಚರಿತೆಯ (ಕನ್ನಡ) ನಾಗವರ್ಮ (ಸು. ೧೦೦೦) ಕ್ರಿ.ಶ. ೧೦೪೨ರ ವರ್ಧಮಾನ ಪುರಾಣ, ವಸ್ತುಕೋಶ, ಕಾವ್ಯಾವಲೋಕನ, ಕರ್ನಾಟಕ ಭಾಷಾ ಭೂಷಣ (ಸಂಸ್ಕೃತ)ಗ್ರಂಥಕರ್ತ ಇಮ್ಮಡಿ ನಾಗವರ್ಮ. ಕನ್ನಡದಲ್ಲಿ ‘ಜಾತತಿಲಕಂ’ ಬರೆದ ಶ್ರೀಧರಾಚಾರ್ಯ (೧೦೪೯), ಗೋವೈದ್ಯದಕರ್ತೃ ಕೀರ್ತಿವರ್ಮ (೧೦೮೦) ಇವರುಗಳು ಕಲಬುರ್ಗಿ ಪ್ರದೇಶದ ಗಂಧಗಾಳಿಯಿಂದ ಪ್ರೇರಿತರಾದವರು. ಈ ಜಿಲ್ಲೆಯ ಜೇವರ್ಗಿ ತಾಲೂಕಿನ ಭತ್ತಗ್ರಾಮ ಕುಣಿಲಂಗೆರೆ (ಈಗಿನ ಕುಳಗೇರಿ) ಯವನಾದ ಅಭಿನವ ಪಂಪ ನಾಗಚಂದ್ರ (೧೦೪೫ – ೧೧೦೦) ಮಲ್ಲಿನಾಥ ಪುರಾಣಂ, ರಾಮಚಂದ್ರಚರಿತ ಪುರಾಣಂ, ಜಿನಮುನಿತನಯ ಎಂಬ ಗ್ರಂಥಗಳನ್ನು ಅನೇಕ ಶಾಸನಗಳನ್ನು ಬರೆದವ. ಈ ಪ್ರತಿಭೆ ಕಲಬುರ್ಗಿ ಜಿಲ್ಲೆಯದೆಂಬುದು ಹೆಮ್ಮೆಯ ಸಂಗತಿ. ಅಫಜಲ್ಪೂರ ತಾಲೂಕಿನ ಮಾಸಿವಾಳ ಮಾಶ್ಯಾಳದ ನಾಗರಾಜ ಸೇಡಮ್‌ದಲ್ಲಿ ನೆಲೆನಿಂತವ. ಈತನ ಕಾಲ ಕ್ರಿ.ಶ.೧೪ನೇ ಶತಮಾನ. ಈತ ಶಹಾಪುರ ತಾಲೂಕಿನ ಸಾಗರ ಗ್ರಾಮದ ಜೈನವರ್ತಕರ ಕೋರಿಕೆಯ ಮೇರೆಗೆ ‘ಪುಣ್ಯಾಸ್ರವ’ ಎಂಬ ಕನ್ನಡ ಚಂಪೂಕಾವ್ಯವನ್ನು ರಚಿಸಿದುದಾಗಿ ಹೇಳಿದ್ದಾನೆ. ಚಂದ್ರಪ್ರಭ ಪುರಾಣದ (ಕನ್ನಡ) ಅಗ್ಗಳ ದೇವ (ಕ್ರಿ.ಶ. ೧೧೮೦), ಇವರೆಲ್ಲಾ ಆ ಕಾಲದ ವಿದ್ಯಾಕ್ಷೇತ್ರಕ್ಕೆ ಸಾಹಿತ್ಯಿಕ, ಸಾಂಸ್ಕೃತಿಕ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅನುಪಮವಾದುದು. ಹೈದರಾಬಾದ ಕರ್ನಾಟಕ ಎಂದು ಕರೆಸಿಕೊಂಡ ಪ್ರದೇಶದಲ್ಲಿ ಜೈನ ಧರ್ಮ ಸಾಂಸ್ಕೃತಿಕವಾಗಿ ರಾಜಕೀಯವಾಗಿ ಸಾಹಿತ್ಯಿಕ ವಾಗಿ ಧಾರ್ಮಿಕವಾಗಿ ಮಾಡಿದ ಸಾಧನೆಯ ಸಿಂಹ ಪಾಲು ಕಲಬುರ್ಗಿ ಪರಿಸರದೆಂಬುದರಲ್ಲಿ ಎರಡು ಮಾತಿಲ್ಲ. ಕ್ರಿ.ಶ. ೧೩ನೇ ಶತಮಾನದಿಂದ ಜೈನಧರ್ಮ ಇಳಿಮುಖ ಕಂಡರೂ ಅದು ತನ್ನ ಕೊಡುಗೆಯನ್ನು ಈವರೆಗೂ ನೀಡುತ್ತಲೆ ಬಂದಿದೆ.

ಜೈನ ಶಿಲ್ಪ ವಾಸ್ತುಶಿಲ್ಪ

ಕ್ರಿ.ಪೂ. ೩ನೇ ಶತಮಾನದ ಅಶೋಕ ಚಕ್ರವರ್ತಿ ಕಾಲದಿಂದ ಬೆಟ್ಟಗುಡ್ಡಗಳನ್ನು ಕೊರೆದು ವಸತಿ (ಬಸದಿ) ವಿಹಾರಗಳನ್ನು ಮಾಡುವ ಪರಿಪಾಠ ಪ್ರಾರಂಭವಾಯಿತೆಂಬ ಹೇಳಿಕೆಗಳಿದ್ದರೂ ಜೈನ ಗುರುಗಳು ಅದಕ್ಕೂ ಮೊದಲೆ ನೈಸರ್ಗಿಕ ಬೆಟ್ಟಗುಡ್ಡಗಳಲ್ಲಿ ನೆಲೆಕಂಡುಕೊಂಡಿದ್ದರು. ಕ್ಷಣ ಕ್ಷಣಕ್ಕೂ ಚಂಚಲ ಚಪಲಗಳತ್ತ ಆಕರ್ಷಿತವಾಗಿ ಅಕಾರ್ಯಗಳಿಗೆ ಕಾರಣವಾಗುವ ಮನವನ್ನು ತಹಬಂದಿಗೆ ತರುವುದು ಅಂದುಕೊಂಡಷ್ಟು, ಸರಳವಲ್ಲ. ಅದಕ್ಕೆ ದೀರ್ಘಕಾಲದ ಸಾಧನೆಬೇಕು. ಮೊದಲು ಕೋಪ, ಸ್ವಾರ್ಥ, ಮೋಹಗಳನ್ನು ತ್ಯಜಿಸಿ ಆದರ್ಶ ಪುರುಷರ ನಡೆಯನ್ನನುಸರಿಸಿ, ದಯೆ, ತಾಳ್ಮೆ, ಕ್ಷಮೆ, ರಾಗದ್ವೇಷಗಳ ಬಿಡುವಿಕೆ, ಮೌನವೃತಾಚರಣೆ ಇಂದ್ರಿಯ ನಿಗ್ರಹ ಇವುಗಳ ಪಾಲನೆಗೆ ಹಿಂದಿನ ದಾರ್ಶನಿಕರ ಸ್ಮರಣೆ ಸ್ಫೂರ್ತಿ ಕೊಡುತ್ತಾದರೂ ಚಿತ್ತ ಶುದ್ಧಿಗೆ ತಕ್ಕವಾತಾವರಣವೂ, ಆಶ್ರಮ ಜೀವನವೂ ಅತ್ಯಗತ್ಯ. ಈ ಕಾರಣಕ್ಕಾಗಿ ಜೈನಸಾಧಕರು ಜನರ ಗೌಜು ಗದ್ದಲಗಳಿಂದ ದೂರವಾದ ಪ್ರಶಾಂತ ತಾಣಗಳಾದ ಎತ್ತರದ ಜಾಗಗಳನ್ನು ಬೆಟ್ಟಗುಡ್ಡಗಳನ್ನು ಗುಹೆ, ವಿಶಾಲ ಕಲ್ಲಾಸರೆಯ ಸ್ಥಳಗಳನ್ನು ಆಯ್ದುಕೊಂಡು ಸಾಧನೆ ಮಾಡುತ್ತಾ ಸಿದ್ಧಿಯನ್ನು ಪ್ರಾಪ್ತಿ ಮಾಡಿಕೊಳ್ಳುತ್ತಿದ್ದರು. ಇದು ಸಾವಿರಾರು ವರುಷಗಳ ಹಿಂದಿನಿಂದಲೂ ಜೈನತೀರ್ಥಂಕರರು ಇನ್ನಿತರ ಜಿನಮುನಿಗಳು ಆಯ್ಕೆ ಮಾಡಿಕೊಳ್ಳುತ್ತಿದ್ದುದು ಮುಂದಿನವರಿಗೂ ಮಾರ್ಗವಾಯಿತು. ನೀರಿನ ಅನುಕೂಲ ಇರುವ ಫಲಭರಿತ ಮರಗಳಿರುವ ನಿಸರ್ಗ ರಮಣೀಯತೆಯ ಚೇತೋಹಾರಿ ತಾಣಗಳು ಏಕಾಂತತೆಯ ಜೊತೆ ಪ್ರಾಕೃತಿಕ ಚೆಲುವು ಸೇರಿ ಏಕಾಗ್ರತೆಗೆ ಅನುಕೂಲಕಲ್ಪಿಸುತ್ತಿತ್ತು. ಇಂಥ ನೈಸರ್ಗಿಕ ಗವಿಯುಳ್ಳ ಗುಡ್ಡ ಈ ಜಿಲ್ಲೆಯಲ್ಲಿ ಅನೇಕ ಇವೆ. ತಂತಾನೆ ಆದ ಗವಿಗಳಲ್ಲಿ ಮುನಿಗಳು ವಾಸಿಸುವ ತಾಣಗಳಿಗೆ ಆಕೃತ್ರಿಮ ವಸತಿ (ಬಸದಿ) ಅಥವಾ ಜಿನಾಲಯಗಳೆಂದರು. ಈ ಕೃತ್ರಿಮ – ಆಕೃತಿಮ ವಸತಿ (ಬಸದಿ)ಗಳೇ ಮೊಟ್ಟಮೊದಲ ಜೈನ ಶಿಲ್ಪವಾಸ್ತುಶಿಲ್ಪಗಳಿಗೆ ಶ್ರೀಕಾರ ಹಾಕಿದವು. ಇಲ್ಲಿರುವ ಮುನಿಗಳ ದರ್ಶನ ಪೂಜೆಗೆಂದು ಜಿನ ಮೂರ್ತಿಗಳನ್ನು ಕೆತ್ತಿ ಮೂರ್ತಿಶಿಲ್ಪಕಲೆಗೆ ನಾಂದಿಹಾಡಿದವು. ಇದರ ಜೊತೆ ಸಾಧಕರು ಬೆಟ್ಟಗಳನ್ನು ಏರಿಳಿಯುವಾಗಿನ ಶ್ರಮ, ಯಾತನೆ ತೊಂದರೆಗಳನ್ನು ತಡೆದುಕೊಳ್ಳುವ ಶಕ್ತಿ ನೀಡಿ ದೇಹದಂಡನೆಯಿಂದಾಗಿ ಕಾಯಕದ ಮೇಲಿನ ಮಮಕಾರ ಕ್ರಮೇಣ ಕರಗಿ ಹೋಗಿ ನಿರ್ಲಿಪ್ತತೆ ನೆಲೆಗೊಂಡು ಸಾಧನೆಗೆ ತುಂಬಾ ಸಹಕಾರವಾಗುವ ಇಂಥ ಬೆಟ್ಟಗಳೇ ಈಗ ಜೈನರ ಪವಿತ್ರ ಯಾತ್ರಾ ಸ್ಥಳಗಳಾಗಿವೆ. ಪ್ರಥಮ ತೀರ್ಥಕಂರ ಆದಿನಾಥರ ಕೈಲಾಸಗಿರಿ (ಅಷ್ಟಾಪದ) ೨೦ಜನ ತೀರ್ಥಂಕರು ಮೋಕ್ಷ ಹೊಂದಿದ ಸಮ್ಮೇದಗಿರಿ ಪರ್ವತ (ಝಾರ್ಖಂಡ ರಾಜ್ಯ), ೨೨ನೇ ತೀರ್ಥಂಕರ ನೇಮಿನಾಥರು ಮುಕ್ತಿ ಪಡೆದ ಊರ್ಜಯಂತಗಿರಿ ಅಂದರೆ ಗಿರಿನಾರ ಪರ್ವತ (ಗುಜರಾತ ರಾಜ್ಯ), ಶತ್ರುಂಜಯ ಶ್ರವಣಬೆಳಗೊಳ, ಕನಕಗಿರಿ (ಮಲೆಯೂರು), ಕುಂದಾದ್ರಿ ಕೊಪಣಾಚಲ ( ಕೊಪ್ಪಳದ ಗುಡ್ಡ)ಗಳಂತೆ ಗುಲಬರ್ಗಾ ಜಿಲ್ಲೆ ಈಗ ಯಾದಗಿರಿ ಜಿಲ್ಲೆಯ ಯಾದಗಿರಿ ಬೆಟ್ಟಗಳಲ್ಲಿನ ಗುಹೆಗಳು ಅಲ್ಲಿನ ಜೈನ ಶಿಲ್ಪಗಳು, ಗೋಗಿ ಹತ್ತಿರದ ಬೆಟ್ಟಗಳಲ್ಲಿನ ಗುಹೆ ಮತ್ತು ಅಲ್ಲಿನ ಶಿಲ್ಪಗಳು ಶಿಲ್ಪ ವಾಸ್ತುಶಿಲ್ಪಗಳ ಅಂಕುರಾರ್ಪಣೆ ಮಾಡಿದ ತಾಣಗಳು. ಹೀಗಾಗಿ ಜೈನಕಲೆ, ವಾಸ್ತುಶಿಲ್ಪ ನಿರ್ಮಾಣದಲ್ಲಿ ಕಲಬುರ್ಗಿ, (ನೂತನ ಯಾದಗಿರಿ) ಜಿಲ್ಲೆಯ ಕೊಡುಗೆ ಗಮನೀಯವಾದುದು. ಗಂಗ, ಕದಂಬರ ಶೈಲಿಗಳಿಂದ ಪ್ರಭಾವಿತರಾದ ಚಾಲುಕ್ಯರು ಬಾದಾಮಿ ಚಾಲುಕ್ಯರ ಪ್ರಭಾದಿಂದ ಪ್ರಚೋದನೆಗೊಂಡ ರಾಷ್ಟ್ರಕೂಟರ ಕಾಲದ ಸ್ಥಪತಿ, ಶಿಲ್ಪಿಗಳು ಆಪ್ರಭಾವದಿಂದ ಬಿಡಿಸಿಕೊಂಡು ತಮ್ಮ ರಚನಾ ವಿಧಾನದಲ್ಲಿ ಕೆಲ ಮಾರ್ಪಾಡು ಗಳನ್ನು ಮಾಡಿಕೊಂಡು ಹೊಸ ಶೈಲಿಯ ಹರಿಕಾರರಾದರು. ಈ ಅವಧಿಯಲ್ಲಿ ರಾಷ್ಟ್ರಕೂಟರ ಆಡಳಿತ ವ್ಯಾಪ್ತಿಯ ಪ್ರದೇಶಗಳಲ್ಲಿಯಂತೆ ಈ ಜಿಲ್ಲೆಯಲ್ಲೂ ಜಿನಾಲಯಗಳು ಕೋಟೆ ಕೊತ್ತಲಗಳು ಪ್ರಾಂಗಣ ಪ್ರಾಕಾರಗಳು ಮೈದಾಳಿದವು. ರಾಷ್ಟ್ರಕೂಟರ ನಂತರದ ಕಲ್ಯಾಣ ಚಾಲುಕ್ಯ, ಕಳಚೂರಿ, ಹೈಹಯ, ಯಾದವ (ಸೇವುಣ) ವಿಜಯನಗರ, ಸುರಪುರ ರಾಜವಂಶಗಳ ಆಯಾ ಕಾಲಘಟ್ಟದಲ್ಲಿ, ರಾಜ – ರಾಣಿಯರಿಂದ, ಸಾಮಂತ ಸೇನಾಪತಿ, ದಂಡನಾಯಕ, ಸೆಟ್ಟಿ ಸಾಹುಕಾರದಿಂದ ಗಾವುಂಡ ಗ್ರಾಮಸ್ಥರಿಂದ ಬಸದಿ, ಮಠ, ವಿದ್ಯಾಕೇಂದ್ರ, ಅಗ್ರಹಾರ, ಘಟಿಕಾಸ್ಥಾನ, ಪಟ್ಟಸಾಲೆ, ಸರಸ್ವತಿ ಮಂಟಪಗಳ ನಿರ್ಮಾಣವಾದವು. ಶಿಲ್ಪವಾಸ್ತುಗಳ ರಚನೆಯಲ್ಲಿ ಬದಲಾವಣೆ ವಿವಿಧತೆ ಮೂಡಿಬಂತು. ಶಿಲಾಪ್ರತಿಮೆಗಳ ಭಾವಬಿಂಬಿಸುವಲ್ಲಿ ಪ್ರಮಾಣಬದ್ಧ ಅಂಗಾಂಗಳ ರಚನೆಯಲ್ಲಿ ಪ್ರಾಣಿ ಪಕ್ಷಿಗಳ ಹೂಬಳ್ಳಿಗಳು ಹಣ್ಣಿಕಾಯಿಗಳ ರಚನೆಯಲ್ಲಿ ನೈಜತೆ ಹಾಗೂ ಭಾವ ಪ್ರಚೋದಕತೆಯನ್ನು ತುಂಬಿದ ಅಂದಿನ ಸ್ಥಪತಿ ರೂವಾರಿಗಳು ತಮ್ಮ ಜಾಣ್ಮೆಯನ್ನು ಜಗಜ್ಜಾಹೀರುಗೊಳಿಸಿದರು. ವಿಶೇಷವಾಗಿ ರಾಷ್ಟ್ರಕೂಟರು ಕಲ್ಲುಬೆಟ್ಟಗಳನ್ನು ಕೊರೆದ ರಚನೆಗಳು ಹೊಸ ಕಲಾ ಸಂಪ್ರದಾಯಕ್ಕೆ ನಾಂದಿಹಾಡಿತು. ಅತ್ಯಂತ ಶ್ರೇಷ್ಠ ಮಟ್ಟದ ಪ್ರಬುದ್ಧತೆಯನ್ನು ಮೆರೆಯಿತು. ಕಲ್ಪನಾಶಕ್ತಿ ಸೃಜನಶೀಲತೆ ಕಲಾಪ್ರೌಢಿಮೆಯಿಂದಾದ ಎಲ್ಲೋರಾ ಎಲೆಫೆಂಟಾ, ಗುಹಾಮಂದಿರಗಳು ವಿಶ್ವಚರಿತ್ರೆಯಲ್ಲಿ ಅಚ್ಚರಿಯ ಹಾಗೂ ಶ್ರೇಷ್ಠಮಟ್ಟದ ದಾಖಲೆಗಳಾಗಿ ಮುಂದಿನವರಿಗೆ ಮಹಾಮಾರ್ಗವನ್ನು ತೆರೆದವು. ಇವು ಮಾನ್ಯಖೇಟದ ರಾಷ್ಟ್ರಕೂಟರ ವಿಶೇಷವಾಗಿ ಕಲಬುರ್ಗಿ ಪ್ರದೇಶದ ಕೊಡುಗೆಗಳೆಂಬುದು ಅಭಿಮಾನದ ಸಂಗತಿ. ರಾಷ್ಟ್ರಕೂಟರ ಕಲೆ, ಸಂಸ್ಕೃತಿಗಳ ವಾರಸುದಾರರಂತೆ ಕಲ್ಯಾಣದ ಚಾಲುಕ್ಯರು ಆ ಕಲಾ ಪರಂಪರೆಯನ್ನು ಮುಂದುವರಿಸಿಕೊಂಡು ಬಂದರೂ ಅವರೂ ಕೆಲ ಪ್ರಯೋಗ ಪರಿವರ್ತನೆಗಳಿಂದ ಕಲಾಪ್ರಕಾರಗಳಿಗೆ ಹೊಸ ಮೆರಗನ್ನು ತಂದರು. ಏಕಕೂಟ, ದ್ವಿಕೂಟ, ತ್ರಿಕೂಟ, ಚತುಷ್ಕೂಟ, ಪಂಚಕೂಟ ಜಿನಾಲಯಗಳು ಸಾಂದಾರ ಮತ್ತ ನಿರಾಂದಾರ (ಪ್ರದಕ್ಷಿಣಾ ಪಥಸಹಿತ ರಹಿತ) ಬಸದಿಗಳಲ್ಲಿ ಗರ್ಭಗೃಹ, ಅಂತರಾಳ, ನವರಂಗ, ಮುಖಪಂಟಪಗಳುಳ್ಳ ದೇಗುಲಗಳ ಅಕ್ಕಪಕ್ಕ ದೇವಕೋಷ್ಟಗಳನ್ನು, ಹೊರಭಿತ್ತಿ ಒಳಭಿತ್ತಿಗಳಲ್ಲಿ ಅರೆಗಂಭಗಳ ರಚನೆ (ಇವು ರಾಷ್ಟ್ರಕೂಟ ಕಾಲದಲ್ಲಿ ಇದ್ದವು. ಅವುಗಳ ಸುಧಾರಿತ ಭಾಗ ಮುಂದಿನವದವು). ಕೀರ್ತಿಮುಖ, ಕೂಡುಕೀರ್ತಿಮುಖಗಳ ರಚನೆ. ನವರಂಗದ ಕಂಬಗಳ ಪೀಠಗಳ ನಾಲ್ಕೂ ಕಡೆ ಚೌಕಗಳಲ್ಲಿ ಕುಸುರಿ ಕೆತ್ತನೆಗಳು, ದೇವತೆಗಳ, ಮಾನವರ ಚಿಕಣಿ ಶಿಲ್ಪಗಳ ಅಳವಡಿಕೆ, ಚೈತ್ಯಾಕಾರದ ಕಿರು ಕಮಾನುಗಳು, ಇಳಿಜಾರಾದ ಲೋವೆ, ತ್ರಿಶಾಕೆ, ಚತುಷ್ ಶಾಖೆ, ಪಂಚಶಾಖೆಗಳುಳ್ಳ ದ್ವಾರಬಂಧಗಳು ಉತ್ತರಾಂಗದ ಮೇಲೆ ಕಿರುಗೋಪುರಗಳ ವಾದ್ಯಗಾರರ, ಯಕ್ಷಗಂಧರ್ವರ ಕಿನ್ನರರ ಕಿರು ಉಬ್ಬುಶಿಲ್ಪಗಳು ಪ್ರಾಣಿ ದೇಹ ಪಕ್ಷಿ ಮುಖ, ಮಾನವ ಮುಖ ಪ್ರಾಣಿ ದೇಹಗಳ ಸಂಕರ ಶೈಲಿಯ ಆಕೃತಿಗಳ ರಚನೆ, ಹಾರುತ್ತಿರುವ ಗಂಧರ್ವರ, ಪುಷ್ಪವೃಷ್ಟಿ ಗೈಯುತ್ತಿರುವ ದೇವತೆಗಳ ಶಿಲ್ಪಗಳು ಮೂಡಿಬಂದವು. ದ್ವಾರಗಳ ಲಲಾಟ ಪಟ್ಟಿಕೆಗಳಲ್ಲಿ ಕುಳಿತ, ನಿಂತ ಕಿರುಜಿನ ಬಿಂಬಗಳನ್ನು ಕೆಲವೊಮ್ಮೆ ಗಜಲಕ್ಷ್ಮಿ ಬಿಂಬಿಗಳನ್ನು ಕೆಳಗಡೆ ಅಕ್ಕಪಕ್ಕದಲ್ಲಿ ಕಿರೀಟದ ಮೇಲೆ ಹೆಡೆಯ ನಾಲ್ಕು ಕೈಗಳುಳ್ಳ, ಪಾಶ, ಅಂಕುಶ, ಗಧಾ, ಪುಷ್ಪಧಾರಿಗಳಾದ ತ್ರಿಭಂಗಿ ದ್ವಾರಪಾಲಕರನ್ನು ಕೆಲವೆಡೆ ದ್ವಾರಪಾಲಕರ ಪಕ್ಕದಲ್ಲಿ ಚಾಮರಧಾರಣಿಯನ್ನು ದೇವಸ್ಥಾನ ನಿರ್ಮಿಸಿದದಾನಿಗಳ ಕಿರುಶಿಲ್ಪಗಳನ್ನು ಕೆತ್ತುವ ಪರಿಪಾಠ ಬೆಳೆದು ಬಂದಿತು. ನವರಂಗದ ಛಾವಣಿ (ಭುವನೇಶ್ವರ) ಯಲ್ಲಿ ಜೈನ ಸಂಪ್ರದಾಯದ ದಶ ದಿಕ್ಪಾಲಕರ (ಇಂದ್ರ, ಅಗ್ನಿ, ಯಮ, ನೈರುತ್ಯ, ವರುಣ, ಪವನ, ಕುಬೇರ, ಈಶಾನ್ಯ, ಧರಣೇಂದ್ರ, (ಸೋಮ) ಕೆತ್ತನೆಗಳು, ಯಕ್ಷ – ಯಕ್ಷಿಯ ಕುಳಿತು ನಿಂತ ದ್ವಿಭಂಗಿ, ತ್ರಿಭಂಗಿಗಳುಳ್ಳ ಪ್ರತಿಮೆಗಳಲ್ಲಿನ ಅಲಂಕರಣ, ಹಾವಭಾವ, ಸೇವಾಧನ್ಯತೆ ಬಿಂಬಿಸುವಲ್ಲಿಯೂ ಹಾಗೂ ತೀರ್ಥಂಕರರು ಶಿಲ್ಪಗಳ ಮುಖದಲ್ಲಿ ಹೊರಹೊಮ್ಮುವ ಮೃದುಮಂದಹಾಸ, ಪ್ರಸನ್ನ, ಶಾಂತ, ವಿರಕ್ತ ಭಾವ, ಧ್ಯಾನದಲ್ಲಿನ ಗಾಢತಲ್ಲೀನತೆ ಮುಂತಾದ ಭಾವನೆಗಳನ್ನು ಹೊರಹೊಮ್ಮಿಸುವಲ್ಲಿ ಕಲಬುರ್ಗಿ ಯಾದಗಿರ ಜಿಲ್ಲಾ ಪ್ರದೇಶದ ಅಂದಿನ ಕಲಾವಿದರು ಸಿದ್ಧ ಹಸ್ತರೆನಿಸಿದ್ದರು. ಕಲ್ಯಾಣ ಚಾಲುಕ್ಯ ಕಲಚೂರಿಗಳ ಸಂಪ್ರದಾಯ ಕಾಲದ ಕಲಾವಿದರು ಹಿಂದಿನ ಸಂಪ್ರದಾಯದ ಜೊತೆ ಹೊಸದಾಗಿ ಕೆಲವನ್ನು ಸೇರಿಸಿ, ಇದ್ದುದ್ದರಲ್ಲಿ ಕೆಲ ಬದಲಾವಣೆ ಮಾಡಿ ಹೊಸ ಪ್ರಯೋಗಗಳನ್ನು ತಂದರು. ನಕ್ಷತ್ರಾಕಾರದ ಜಗತಿಯ ಮೇಲೆ ಉಪಾನ, ತ್ರಿಪಟ್ಟಕುಮುದ, ಪಟ್ಟಿಕೆಗಳ ಅಧಿಷ್ಠಾನದ ಮೇಲೆ ನಿರ್ಮಾಣಗೊಂಡ ದೇಗುಲಗಳ ಹಿನ್ಸರಿತ, ಮುನ್ಸರಿತ ಹೊರಭಿತ್ತಿಗಳಲ್ಲಿ ಪುರಾಣ, ಇತಿಹಾಸ, ತೀರ್ಥಂಕರರ ಯಕ್ಷ – ಯಕ್ಷಿಯರ, ಶ್ರುತದೇವಿ, ಬ್ರಹ್ಮ, ಮುಂತಾದ ಪ್ರತಿಮೆಗಳನ್ನು ಅಳವಡಿಸಿದರು. ಅನ್ಯಧರ್ಮದೊಡನೆ ಸಾಮರಸ್ಯ ಸಾಧಿಸಲು ಅವರ ಸಹಕಾರದೊಂದಿಗೆ ಅನೇಕ ಕಡೆ ಜೈನ ದೇಗುಲಗಳನ್ನು ನಿರ್ಮಿಸಿದರು. ಆಗ ಬೇರೆ ಧರ್ಮದ ಬ್ರಹ್ಮ, ವಿಷ್ಣು ಶಿವನ ಶಿಲ್ಪಗಳು ಸೂರ್ಯ, ಗಣೇಶ, ಲಕ್ಷ್ಮೀ ಇನ್ನಿತರ ಶಿಲ್ಪಗಳನ್ನು ಜೈನ ದೇವಾಲಯಗಳಲ್ಲಿ ಕೆತ್ತಿಸಿದರು. ಮಳಖೇಡ ಬಸದಿಯಲ್ಲಿ ಸೂರ್ಯ, ವಿಷ್ಣು, ನೃತ್ಯ ಗಣೇಶ, ರಾವಣ ಕೈಲಾಸ ಪರ್ವತವನ್ನು ಎತ್ತುವ, ಇನ್ನಿತರ ಶೈವ, ವೈಷ್ಣವ ಶಿಲ್ಪಗಳು ಧಾರ್ಮಿಕ ಸಾಮರಸ್ಯಕ್ಕಾಗಿ ರಚಿಸಿದವುಗಳು. ಅವರ ಒಲವು ವಿಶ್ವಾಸಗಳಿಸಲು ಇಂಥ ಪ್ರಯೋಗ ಮಾಡಿರುವುದು ಈ ಭಾಗದ ಆಗಿನ ಜೈನ ಧರ್ಮೀಯರ ಹೃದಯ ವೈಶಾಲ್ಯತೆಗೆ ಸಾಕ್ಷಿಯಾಗಿದೆ.

ಇಲ್ಲೊಂದು ವಿಶೇಷತೆಯನ್ನು ಗಮನಿಸುವಂತಿದೆ. ಕ್ರಿ.ಶ.೯ಮೇ ಶತಮಾನದ ನೃಪತುಂಗ, ಆಚಾರ್ಯ ಜೀನಸೇನರ ಕಾಲದ್ದಾದ ಮಳಖೇಡ ಬಸದಿಯಲ್ಲಿರುವ ಕಂಬದ ಮೇಲೆ ಕೆತ್ತಿದ ರಾವಣ ಕೈಲಾಸ ಪರ್ವತವನ್ನು ಎತ್ತುವ ಕಿರುಶಿಲ್ಪ ಮುಂದೆ ೧೦ನೇ ಶತಮಾನದಲ್ಲಿ ಎಲ್ಲೋರಾದಲ್ಲಿ ರಚನೆಯಾದ ಕೈಲಾಸ ಮಂದಿರದಲ್ಲಿನ ಎರಡನೇ ಮಹಡಿಯ ಹೊರಗೋಡೆಯಲ್ಲಿ ಉತ್ತರಾಭಿಮುಖವಾಗಿ ಕೆತ್ತಿರುವ ರಾವಣ ಕೈಲಾಸ ಪರ್ವತ ಅಲುಗಿಸುವ ಬೃಹತ್‌ಗಾತ್ರದ ಸುಂದರ, ಶ್ರೇಷ್ಠ ಶಿಲ್ಪಕ್ಕೆ ಮಾನ್ಯಖೇಟರ ಬಸದಿಯಲ್ಲಿನ ಕಿರುಶಿಲ್ಪ ಪ್ರೇರಣೆಯಾದದ್ದು ಅಚ್ಚರಿ ಹಾಗೂ ಅಭಿಮಾನವೆನಿಸುತ್ತದೆ. ಕ್ರಿ.ಶ. ೧೧ – ೧೨ನೇ ಶತಮಾನದ ಬಸದಿಗಳಲ್ಲಿ ಯಕ್ಷ – ಯಕ್ಷಿ, ದ್ವಾರಪಾಲಕರ, ಚಾಮರಧಾರಿಗಳ, ಶ್ರುತದೇವಿ ಇನ್ನಿತರ ಪ್ರತಿಮೆಗಳಿಗೆ ಅಲಂಕಾರ ಬಾಗು ಬಳಕುಗಳು ಆ ಪ್ರತಿಮೆಗಳ ಲಾವಣ್ಯ ಹೆಚ್ಚಿಸಲು ಸಹಕಾರಿಯಾದವು. ದಂಪತಿಗಳು ಮದನಿಕಾ ವಿಗ್ರಗಳು, ಪ್ರಾಣಿಪಕ್ಷಿಗಳ ಸಾಲುಗಳು, ಎಲೆಬಳ್ಳಿ, ಹೂ ಹಣ್ಣುಗಳು, ಕುಸುರಿ ಅಲಂಕರಣಗಳು, ತೀರ್ಥಂಕರರು ಕುಳಿತ ಸಿಂಹ ಪೀಠಗಳು, ತೀರ್ಥಂಕರರ ಹಿಂದುಗಡೆ ಒರಗುದಿಂಬು ತಲೆಯ ಹಿಂದೆ ಪ್ರಭಾಮಂಡಲ, ಮೇಲೆ ಮುಕ್ಕೊಡೆ (ತೀರ್ಥಂಕರರು ಯಾವ ಮರದಡಿ ಕುಳಿತು ಧ್ಯಾನಗೈದು ಕೇವಲ ಜ್ಞಾನವನ್ನು ಪಡೆದರೂ ಆ ಮರದ) ಚೈತ್ಯವೃಕ್ಷ, ದೇವದುಂದುಭಿ ದೇವತೆಗಳಿಂದ ಚಾಮರಸೇವೆ ಹಾಗೂ ಹೂಮಳೆ, ರತ್ನಮಯ ಸಿಂಹಾಸನ ಮುಂತಾದ ಎಂಟು ಹೆಚ್ಚಿನ ವೈಭವ (ಅಷ್ಟಮಹಾ ಪ್ರಾತಿಹಾರ್ಯ)ಗಳನ್ನು ಶಿಲ್ಪದಲ್ಲಿ ಅಷ್ಟೇ ಕಲಾತ್ಮಕವಾಗಿ ಕೆತ್ತಿದರು. ಅಲ್ಲದೆ ಕೆಲ ಜಿನ ಬಿಂಬಗಳ ಹಿಂದೆ ಅಷ್ಟಮಹಾ ಪ್ರಾತಿಹಾರ್ಯಗಳ ಜೊತೆ ಮಕರತೋರಣ, ಅರೆಗಂಬಗಳು, ಕುಳಿತ (ಸಿಂಹ) ಪೀಠದ ಎಡಬಲದಲ್ಲಿ ಆನೆಯ ತಲೆಯ ಮೇಲೆ ಲಂಘಿಸಿನಿಂತ ಸಿಂಹಗಳ ಇನ್ನಿತರ ಶಿಲ್ಪಗಳನ್ನು ಕೆತ್ತಿ ಅಂದಚೆಂದ ಹೆಚ್ಚಿಸಿದರು.

ಉತ್ತರ ಭಾರತದ ಕುಳಿತ ಜೈನ ಪ್ರತಿಮೆಗಳು ಪದ್ಮಾಸನದಲ್ಲಿದ್ದರೆ ದಕ್ಷಿಣ ಭಾರತದ ವಿಶೇಷವಾಗಿ ಕಲಬುರ್ಗಿ ಪ್ರದೇಶದ ಕುಳಿತ ಜಿನಬಿಂಬಗಳು ಪಲ್ಯಂಕಾಸನದವುಗಳು. ಉತ್ತರ ಭಾರತದಲ್ಲಿ ಆದಿನಾಥ ತೀರ್ಥಂಕರರಿಗೆ ಕತ್ತಿನ ಸುತ್ತ ಭುಜದ ಮೇಲೆ ಗುಂಗುರ ಕೂದಲನ್ನು ಕೆತ್ತುವುದು ಸಾಮಾನ್ಯವಾಗಿದೆ. ಜಿನರು ತಪೋಮಗ್ನರಾಗಿದ್ದಾಗ ನೀಳಕೇಶ ಬೆಳೆಯುವುದು ಸಹಜ. ಹಾಗೆಯೇ ಕತ್ತಿನ ಸುತ್ತಲು ಕೇಶ ಹೊಂದಿರುವ ಪ್ರಾಣಿ ಸಿಂಹ (ಕೇಸರಿ). ಹೀಗಾಗಿ ಕತ್ತಿನ ಸುತ್ತ ಕೂದಲಿರುವ ಆದಿನಾಥರನ್ನು ಕೇಸರಿನಾಥ (ಸಿಂಹಸದೃಶ್ಯ ವ್ಯಕ್ತಿತ್ವದವರು) ಎಂದು ಕರೆಯುತ್ತಾರೆ. ಆದರೆ ಕಲಬುರ್ಗಿ ಪ್ರದೇಶದಲ್ಲೆ ಕ್ರಿ.ಶ.೨ನೇ ಶತಮಾನದಲ್ಲಿ ಹುಟ್ಟಿ ಕ್ರಿ.ಶ. ೧೨ನೇ ಶತಮಾನದವರೆಗೂ ಪ್ರವೃದ್ಧಮಾನವಾಗಿದ್ದ ಯಾಪನೀಯ ಪಂಥದವರು ತುಂಬಾ ಪ್ರಭಾವಶಾಲಿಯಾಗಿದ್ದರು. ಅವರ ಕಾಲದಲ್ಲಾದ ತೀರ್ಥಂಕರರ ಪ್ರತಿಮೆಗಳಿಗೆ ಆದಿನಾಥ ಹೊರತಾಗಿಯೂ, ಶಾಂತಿನಾಥ, ನೇಮಿನಾಥ, ಪಾರ್ಶ್ವನಾಥ, ಮಹಾವೀರ ಇನ್ನಿತರ ಪ್ರತಿಮೆಗಳ ಕತ್ತಿನ ಸುತ್ತ ಭುಜದ ಮೇಲೆ ಗುಂಗುರು ಕೂದಲುಗಳನ್ನು ಕೆತ್ತಿರುವುದುಂಟು. ಆನೆ, ಯಾಳಿಗಳುಳ್ಳ ಕೈಪಿಡಿಗಳುಳ್ಳ ಪಾವಟಿಗೆಗಳು. ನವರಂಗ ಮುಖಮಂಟಪಗಳಿಗೆ ಕಕ್ಷಾಸನಗಳ ರಚನೆ, ಕಕ್ಷಾಸನದ ಹಿಂಬದಿಗೆ ವಿವಿಧ ದೇವತೆಗಳ, ನಾನಾ ಮಾನವಭಂಗಿಗಳ, ಪ್ರಾಣಿಗಳ ಶ್ಲೇಷ ಶಿಲ್ಪಗಳ ಕೆತ್ತನೆ ರೂಢಿಯಲ್ಲಿ ಬಂದಿತು. ಬಸದಿಗಳ ಮುಂದೆ ಮಾನಸ್ತಂಬಗಳ ರಚನೆ (ಈ ಜಿಲ್ಲೆಯಲ್ಲಿ ಸೇಡಮ್ ಇನ್ನಿತರ ಕಡೆ ಮಾನಸ್ತಂಬ ಗಳಿವೆ). ಮಾಮೂಲವಾಗಿ ಬಿಟ್ಟಿತ್ತು. ಇಳಿಜಾರಾದ ಲೋವೆಯ ಬದಲಿಗೆ ಇಂಗ್ಲೀಷ್ ಎಸ್ (s) ಅಕ್ಷರ ಮಾದರಿಯ ಲೋವೆಗಳು ಜಾರಿಗೆ ಬಂದವು. ನಿಷಧಿ ಶಿಲ್ಪಗಳಲ್ಲಿ ಶಾಸನ ಶಿಲ್ಪಗಳಲ್ಲಿ ವೈವಿಧ್ಯತೆಯನ್ನು ತರಲಾಯಿತು. ಜೈನ ಸರಸ್ವತಿ (ಶ್ರುತದೇವಿಯ)ಪದ್ಮಾಸನದ ಪ್ರಮಾಣಬದ್ಧ ಆಕರ್ಷಕ ಪ್ರತಿಮೆಗಳನ್ನು ಜೈನಮಂದಿರಗಳಲ್ಲಿ (ಶ್ರುತಪಂಚಮಿ, ಸರಸ್ವತಿ ಆರಾಧನೆಗಾಗಿ) ಪ್ರತಿಷ್ಠಾಪಿಸಲಾಗುತ್ತಿತ್ತು. ಇಲ್ಲವೆ ದೇವಕೋಷ್ಠಗಳಲ್ಲಾಗಲಿ, ಕಂಬಗಳಲ್ಲಾಗಲಿ ಗೋಡೆಗಳಲ್ಲಾಗಲಿ ಕೆತ್ತಿರುತ್ತಿದ್ದರು. ಸರಸ್ವತಿಯನ್ನು ಜೈನಧರ್ಮಿಯರು ಕಲ್ಪಿಸಿರುವುದನ್ನು ಗ್ರಹಿಸಿರುವುದನ್ನು ತಮ್ಮ ಪ್ರತಿಮೆ ಹಾಗೂ ಚಿತ್ರಗಳಲ್ಲಿ ವ್ಯಕ್ತಪಡಿಸಿದ್ದಾರೆ. ಆದಿಕವಿ ಪಂಪ “ಪರಮ ಜಿನೇಂದ್ರವಾಣಿಯೇ ಸರಸ್ವತಿ” ಎಂದು ತೀರ್ಥಂಕರರ ದಿವ್ಯಧ್ವನಿಗೆ ಅವರ ಬೋಧನೆಗೆ ಹೋಲಿಸಿದ್ದಾನೆ.

ತೀರ್ಥಂಕರರ ಉಪದೇಶದ ಸಾರವನ್ನೆಲ್ಲ ಸರಸ್ವತಿ ವಿಗ್ರಹದಲ್ಲಿ ಎರಕ ಒಯ್ದಿದ್ದಾರೆ. ನಮ್ಮ ಜೈನ ದಾರ್ಶನಿಕರು ಜೈನ ಕವಿಗಳು ಸರಸ್ವತಿ ಶ್ರುತದೇವಿ (ಶ್ರುತ ಕಿವಿಯಿಂದ ಕೇಳಿ ಪಡೆದ ಜ್ಞಾನ) ಜ್ಞಾನದ ಪ್ರತೀಕ ಆಕೆಯ ಅಂಗ, ವಸ್ತ್ರಭೂಷಣ ಒಂದೊಂದು ಆಧ್ಯಾತ್ಮಿಕವನ್ನು ಸಂಕೇತಿಸುತ್ತದೆ. ಸರಸ್ವತಿಯ ನಿರ್ಮಲ ಶುಭ್ರಮುಖ ಜ್ಞಾನ ಸ್ವರೂಪದಾಗಿದ್ದು ಆಕೆಯ ಮುಖವು ಸೂರ್ಯಚಂದ್ರಕಾಂತಿ ಯುಕ್ತವಾಗಿದೆ. ಸೂರ್ಯ ಚಂದ್ರರು ಕತ್ತಲೆಯನ್ನು ದೂರಗೊಳಿಸವಂತೆ ಸರಸ್ವತಿ ಅಜ್ಞಾನ ಮೌಢ್ಯವೆಂಬ ಕತ್ತಲನ್ನು ದೂರಮಾಡಿ ಜ್ಞಾನದ ಬೆಳಕನ್ನು ನೀಡುವವಳು. ಆಕೆಯ ನಾಲ್ಕುಕೈಗಳು ಸಮಗ್ರ ಜೈನವಾಙ್ಮಯದ ಪ್ರಥಮಾ ಯೋಗ, ಕರಣಾನುಯೋಗ, ಚರಣಾನುಯೋಗ, ದ್ರವ್ಯಾನುಯೋಗ ಎಂಬ ನಾಲ್ಕು ಅನುಯೋಗಗಳ ಸಂಕೇತ. ಆಕೆಯ ಬಲ ಮೇಲುಗೈಯಲ್ಲಿ ಅಂಕುಶವಿದೆ. ಸಾಧನೆಗೆ ತೊಡಕಾದ ಚಿತ್ತಚಂಚಲತೆಯನ್ನು ತಡೆಯಲು ಅಂಕುಶದಿಂದ ಚುಚ್ಚಿ ಮನಸ್ಸೆಂಬ ಮದ್ದಾನೆಯನ್ನು ಸರಿದಾರಿಗೆ ತರುವುದರ ಸಂಕೇತ. ಅಂದರೆ ಸ್ವಚ್ಛಂದಾಚರಣೆಗೆ ತಡೆಯೊಡ್ಡಿ ಆತ್ಮಾನುಶಾಸನದ ಶಿಕ್ಷೆ (ಶಿಕ್ಷಣ) ಕೊಡುವವಳು. ಬಲದ ಕೆಳಗೈಯಲ್ಲಿರುವ ಅಕ್ಷಮಾಲಾ. ಅಕ್ಷ ಮಾಲೆಯಲ್ಲಿ ೧೦೮ ಮಣಿಗಳಿರುತ್ತವೆ. ದಿನನಿತ್ಯದಲ್ಲಾಗುವ ೧೦೮ ವಿಧದ ಪಾಪಕರ್ಮಗಳ ನಿವಾರಣೆಗಾಗಿ ೧೦೮ ಸಲ ಜಪ ಮಾಡಿ ಪರಿಶುದ್ಧವಾಗಲು ತಿಳಿಸಿಕೊಡುತ್ತದೆ. ಜಪ, ಜ – ಜನ್ಮ ನಾಶಕ, ಪ – ಪಾನಾಶಕವಾದುದು ಜಪ. ಇದರ ಸಂಕೇತ ಅಕ್ಷಮಾಲಾ. ಅಕ್ಷ ಎಂದರೆ ಆತ್ಮಕ್ಕೂ ಎನ್ನುತ್ತಾರೆ ಆತ್ಮಶುದ್ಧೀಕರಿಸುವ ಮಾಲೆ ಅಕ್ಷಮಾಲೆ. ಎಡ ಮೇಲುಗೈಯಲ್ಲಿ ಪಾಶವಿದೆ. ಭವಬಂಧನಕ್ಕೆ ಕಾರಣವಾಗುವ ರಾಗದ್ವೇಷ ಮೊದಲಾದ ಅರಿಷಡ್ವರ್ಗಗಳನ್ನು ಕಟ್ಟಿಹಾಕುವುದರ (ತಹಬಂದಿಯಲ್ಲಿಡುವುದರ) ಸಂಕೇತ ಪಾಶ. ಕೆಳ ಎಡಗೈಯಲ್ಲಿರುವ ಹೊತ್ತಗೆ (ಪುಸ್ತಕ)ವು ಜಿನರ ಬೋಧನೆಯ ಸಾರಸಂಗ್ರಹಿಸಿರುವ ಲಿಪಿಬದ್ಧಗೊಳಿಸಿರುವ ಸುಜ್ಞಾನದ ಪ್ರತೀಕ ಇದು ಭವ್ಯಜೀವಿಗಳ ಮನ ತಿಳಿಗೊಳಿಸಿ ಧಾರ್ಮಿಕ ಶ್ರದ್ಧೆ ಹೆಚ್ಚಿಸಿ ಪುಣ್ಯಪ್ರಾಪ್ತಿ ಪಾಪನಾಶಕ ಶಕ್ತಿ ಉಳ್ಳದೆಂದು ಪುಸಕ್ತ ಲಾಂಛನವಿದೆ. ಆಕೆಯ ವಾಹನ ಹಂಸ. ಹಂಸದ ಬಿಳಿ ಬಣ್ಣ ಪರಿಶುದ್ಧತೆಯ ಸಂಕೇತ ಹಾಗೆ ಅದು ನೀರು ಬೆರೆತ ಹಾಲನ್ನು ಸೇವಿಸುವಾಗ ಹಾಲನ್ನು ನೀರನ್ನು ಪ್ರತ್ಯೇಕಿಸು (ಕುಡಿಯುವದೆಂಬ ಪ್ರತೀತಿ) ವಂತೆ ಜಿನವಾಣಿ ಸ್ವರೂಪದ ಸರಸ್ವತಿ ಮಾತೆಯನ್ನು ಯಾವನು ಹಂಸದಂತೆ ಸೇವೆ ಗೈಯವನೋ ಅವನಿಗೆ ಹಂಸದಂತ ವಿವೇಚನಾಶಕ್ತಿ ಬಂದು ಭೇದ ವಿಜ್ಞಾನವನ್ನು ಬಲ್ಲವನಾಗುತ್ತಾನೆ. ಹಾಗೆಯೇ ನವಿಲು ಕೂಡಾ ಸರಸ್ವತಿಯ ವಾಹನವೆಂದು ಪರಿಗಣಿಸಲಾಗಿದೆ. ನವಿಲು ಸಮೀಪ ಬಂದಾಕ್ಷಣ ಸರ್ಪಗಳು ಹೆದರಿ ಓಡಿ ಹೋಗುವಂತೆ ಸರಸ್ವತಿಯ ಸಾಮಿಪ್ಯದಿಂದ ಕೆಟ್ಟಕರ್ಮಗಳೆಲ್ಲ ತಂತಾನೆ ಶಿಥಿಲಗೊಂಡು ಹೇಳಹೆಸರಿಲ್ಲದಂತಾಗುತ್ತವೆ. ಜಿನವಾಣಿಗೆ ಸರಸ್ವತಿ ರೂಪಕೊಟ್ಟ ಜೈನಾಚಾರ್ಯರು ಜನರಲ್ಲಿ ಧಾರ್ಮಿಕ ಶ್ರದ್ಧೆ ಹೆಚ್ಚಿಸಲು ಕಾರಣ ಕರ್ತರಾಗಿದ್ದಾರೆ.[2]

ಜೈನ ನಿಷಧಿ ಶಿಲ್ಪಗಳು

ಪ್ರಾಕೃತದ ‘ನಿಸೀಹಿಯಾ’ ಸಂಸ್ಕೃತದಲ್ಲಿ ‘ನಿಷೀದಿಕಾ’ ಎಂದಾಗಿದೆ. ಸನ್ಯಾಸನ ವಿಧಿಯಿಂದ ತೀರಿಕೊಂಡವರ ನೆನಪಿಗಾಗಿ ನಿಲ್ಲಿಸುವ ಕಲ್ಲುಗಳೇ ನಿಷಧಿ ಶಿಲ್ಪಗಳು ಜೈನಧರ್ಮೀಯರು ಹುಟ್ಟನ್ನು ಸಂಭ್ರಮದಿಂದ ಸ್ವಾಗತಿಸಿದಂತೆ ಸಾವನ್ನು ಉತ್ಸವದ ತೆರದಿ ಬರಮಾಡಿಕೊಳ್ಳುತ್ತಿದ್ದರು. ಅದಕ್ಕೆ ಸಲ್ಲೇಖನ ರೀತಿಯಿಂದ ಸಮಾಧಿ ಮರಣ ಹೊಂದುವುದಕ್ಕೆ ಮೃತ್ಯುಮಹೋತ್ಸವ ಎಂದರು. ಬಹುಪಾಲು ಜೈನರು ಮುನಿ, ಆರ್ಯಕೆ, (ಸನ್ಯಾಸಿನಿ) ಮಠಾಧೀಶ. ಶ್ರಾವಕರಾದಿಯಾಗಿ ಸಲ್ಲೇಖನ ಸ್ವೀಕರಿಸಿ ಸಮಾಧಿಮರಣ ಹೊಂದುವುದು ಪ್ರಾಚೀನ ಕಾಲದಿಂದ ಈವರೆಗೂ ನಡೆದುಕೊಂಡು ಬಂದಿದೆ. ಇದೊಂದು ಆದರ್ಶ ಮರಣ. ಸಮಾಧಿಮರಣ (ಸಲ್ಲೇಖನವನ್ನು) ತೆಗೆದುಕೊಳ್ಳಬೇಕಾದುದು ಯಾವಾಗ ಎಂಬುದಕ್ಕೆ ರತ್ನಕರಂಡಕ ಶ್ರಾವಕಾಚಾರರದಲ್ಲಿ ಹೀಗೆ ಹೇಳಲಾಗಿದೆ.

ಉಪಸರ್ಗ್ಗೇ ದುರ್ಭಿಕ್ಷೇ ಜರಸಿ ರುಜಾಯಾಂಚ ನಿಃ ಪತೀಕಾರೇ
ಧರ್ಮಾಯ ತನುವಿಮೋಚನಂ ಆಹುಃ ಸಲ್ಲೇಖನಾಮಾರ್ಯಾಃ

ಬರಗಾಲದಲ್ಲಿ ಮುಪ್ಪಿನಲ್ಲಿ ಗುಣವಾಗದ ರೋಗ ಬಂದಾಗ ಇವುಳಿಗೆ ಇನ್ನು ಪರಿಹಾರವಿಲ್ಲಂದು ಖಾತ್ರೆಯಾದಾಗ ಧಾರ್ಮಿಕ ವಿಧಿಗನುಸಾರ ದೇಹತ್ಯಜಿಸ ತಕ್ಕದ್ದೆಂದು ಹೇಳಿದೆ. ಸಲ್ಲೇಖನ ವೃತ ಧಾರಿಗಳು ಕ್ರಮೇಣ ಅನ್ನಪಾನಾದಿಗಳನ್ನು ತೊರೆಯುತ್ತ ಎಲ್ಲ ರೀತಿಯ ಸ್ನೇಹ ವೈರ ಸಂಗಗಳನ್ನು ತ್ಯಜಿಸಿ ಪಂಚಪರಮೇಷ್ಠಿಗಳನ್ನು ಧ್ಯಾನಿಸುತ್ತಾ ತನಗೆ ಸದ್ಗತಿ ಸಿಕ್ಕಲಿ ಎಂದು ಹಾರೈಸುತ್ತಾ ಪ್ರಾನತ್ಯಾಗ ಮಾಡಬೇಕು. ಇಂಥ ಸಮಾಧಿ ಮರಣ ಪಡೆದವರ ನಿಶಧಿ ಶಿಲ್ಪಗಳು ಕಲಬುರ್ಗಿ ಜಿಲ್ಲೆಯಲ್ಲಿ ಇವೆ. ಸಾಮಾನ್ಯವಾಗಿ ನಿಷದಿ ಶಿಲ್ಪಗಳಲ್ಲಿ ಬೋಧಿಸುತ್ತಿರುವ ಗುರು ಅವನು ಮುಂದೆ ಪುಸ್ತಕವಿರುವ ವ್ಯಾಸಪೀಠ, ವ್ಯಾಸಪೀಠದ ಇನ್ನೊಂದು ಕಡೆ ಜಿನಮುನಿಗಳ ಉಪದೇಶವನ್ನು ಕೇಳಿತ್ತಿರುವ ಕೈಮುಗಿದು ಕುಳಿತಿರುವ ವೃತಧಾರಿ, ಈ ಶಿಲ್ಪಗಳಲ್ಲಿ ಶಾಸನಗಳೂ ಇರುತ್ತವೆ. ಚರಣಚಿಹ್ನೆ ಕಮಂಡಲು ನವಿಲುಗರಿಯ ಪಿಂಛಿಗಳನ್ನು ಮುನಿಗಳು ಸಮಾಧಿ ಮರಣ ಹೊಂದಿದ ಕುರುಹಾಗಿ ಬೆಟ್ಟಗಳ ಬಂಡೆಗಳ ಮೇಲೆ, ಪ್ರತ್ಯೇಕ ದಪ್ಪ ಕಲ್ಲಿನ ಮೇಲೆ ಕೆತ್ತುವುದುಂಟು. ಎರಡು ವಿಧದ ನಿಷಧಿ ಶಿಲ್ಪಗಳು ಕಲಬುರ್ಗಿ ಯಾದಗಿರಿ ಜಿಲ್ಲಾ ಪರಿಸರದಲ್ಲಿವೆ. ಫಿರೋಜಾಬಾದದ ಹತ್ತಿರ ಇರುವ ಭೀಮಾನದಿಯ ಮಧ್ಯಭಾಗದಲ್ಲಿರುವ ನಿಷಧಿಶಿಲ್ಪ.

ಶ್ರೀಮೂಲ ಸಂಘದ ಸೂರಸ್ತಗಣದ ಸೋಮಸಿರಿಯವ್ವೆಯದ್ದು ಕ್ರಿ.ಶ. ೧೧ನೇ ಶತಮಾನದ ಕೊನೆಯ ಭಾಗದ ಶಿಲ್ಪವಿದೆಂದೆನಿಸುತ್ತದೆ. ೫ ಅಡಿಗೂ ಎತ್ತರದ ಒಂದುವರೆ ಅಡಿ ಅಗಲ ೩ ಇಂಚು ದಪ್ಪ ಇರುವ ಕಪ್ಪು ಶಿಲಾ ಫಲಕದ ಮೇಲ್ಭಾಗದಲ್ಲಿ ಕುಳಿತ ಜಿನ ಬಿಂಬದ ಕೆಳಗೆ ಪಿಂಛಿ ಕಮಂಡಲಗಳಿರುವ ಬೋಧಿಸುತ್ತಿರುವ ಜೈನ ಮುನಿಯ ಮುಂದೆ ಕೈಮುಗಿದು ಕುಳಿತ ಸೋಮಸಿರಿಯವ್ವೆಯ ಶಿಲ್ಪವಿದೆ. ಕೆಳಗೆ ಎರಡು ಸಾಲಿನ ಶಾಸನವಿದೆ. ಇನ್ನೆರಡು ನಿಶಧಿಗಳು ಅಫಜಲ್ಪೂರ ತಾಲೂಕಿನ ಅತ್ನೂರಿನಲ್ಲಿದೆ. ಇಲ್ಲಿನ ತ್ರಿಕೂಟಜಿನಮಂದಿರದ ಪ್ರವೇಶದ್ವಾರದ (ಬಾಗಿಲು ಇಲ್ಲ ಹಾಳಾದ ಗೋಡೆ ಇದೆ). ಹತ್ತಿರ ಒಂದು ನಿಶಧಿ ಇದೆ. ಇನ್ನೊಂದು ಊರಪಶ್ಚಿಮಕ್ಕೆ ೩ ಕಿ.ಮೀ. ದೂರದಲ್ಲಿ ಧಡೆಧೂಳಪ್ಪನ ಗುಡಿ (ವಾಸ್ತವವಾಗಿ ಅಲ್ಲಿರುವ ಕುದುರೆ ಮೇಲೆ ಕುಳಿತ ವಿಗ್ರಹ ೧೦ನೇ ತೀರ್ಥಂಕರ ಶೀತಲನಾಥರ ಯಕ್ಷಬ್ರಹ್ಮನ ಶಿಲ್ಪ)ಯ ಮುಂದೆ ನಿಂತಿರುವ ಜೈನ ಮುನಿಯ ನಿಷಿಧಿ ಇದೆ. ಶಹಾಪುರ ತಾಲೂಕಿನ ಗೋಗಿಗ್ರಾಮದಿಂದ ನೈರುತ್ಯಕ್ಕೆ ೪ ಕಿ.ಮೀ. ದೂರದಲ್ಲಿರುವ ಚಾರಣಗಿರಿಯಲ್ಲಿ ಇಬ್ಬರು ಜೈನ ಮುನಿಗಳ ಚರಣಚಿಹ್ನೆ ಪಿಂಛಿ ಕಮಂಡಲುಗಳುಳ್ಳ ಎರಡು ನಿಸಿಧಿ ಶಿಲ್ಪಗಳಿವೆ. ಯಾದಗಿರಿಯ ಜಿನಪ್ಪನ ಬೆಟ್ಟದಲ್ಲಿ ಒಂದು ನಿಸಿಧಿ ಇದೆ. ಅಲ್ಲಿ ಮುನಿಗಳ ಚರಣಚಿಹ್ನೆ ಪಿಂಛಿ ಕಮಂಡಲುಗಳನ್ನು ಮಾತ್ರ ಕೆತ್ತಿದ್ದಾರೆ. ಯಾದಗಿರಿಯಲ್ಲಿನ ಬಸದಿಯಲ್ಲಿ ಅನೇಕ ಮುನಿಗಳ ಚರಣಚಿಹ್ನೆಗಳ ಚೌಕಾಕಾರದ ಬಂಡೆಯಿದೆ. ಜೇವರ್ಗಿ ನಗರದಿಂದ ವಾಯವ್ಯಕ್ಕೆ ೧ ಕಿ.ಮೀ. ಅಂತರದಲ್ಲಿ ಜನವಾರ ಹಣಾದಿ ಎಂಬಲ್ಲಿರುವ ನಿಸಿಧಿ ಶಿಲೆಯಲ್ಲಿ ಚರಣಚಿಹ್ನೆ ಕಮಂಡಲು ಪಿಂಛಿಗಳಿವೆ. ಇದು ಅಂದಾಜು ೯ನೇ ಶತಮಾನದ್ದೆಂದು ತೋರುತ್ತದೆ. ಚಿಂಚೋಳಿ ತಾಲೂಕಿನ ದೇಗಲು ಮಡಿ, ಬಸದಿಯಲ್ಲಿ ಪಾದ ಕಮಂಡಲು ಪಿಂಛಿಗಳ ನಿಸಧಿಯೊಂದಿದೆ. ಮಳಖೇಡ ಬಸದಿಯಲ್ಲಿರುವ ಕ್ರಿ.ಶ. ೧೩೯೧ರ ಶಾಸನದಲ್ಲಿ ವಿದ್ಯಾನಂದಸ್ವಾಮಿಗಳ ನಿಷಿಧಿಗೆಯನ್ನು ನಿಲ್ಲಿಸಿದ ಬಗ್ಗೆ ಹೇಳುತ್ತದೆ. ಕುಳಗೇರಿಯಲ್ಲಿ (ಜೇವರ್ಗಿ ತಾಲೂಕು) ೩ ನಿಷಧಿ ಶಾಸನಗಳಿವೆ. ಬಸದಿಯಿದ್ದ ಸ್ಥಳಹಾಳಾಗಿ ಬಯಲಿನಲ್ಲಿ ಅಲ್ಲಲ್ಲಿ ಜೈನ ಅವಶೇಷಗಳು ಚದುರಿ ಬಿದ್ದಿವೆ. ಕ್ರಿ.ಶ. ೧೧೩೮ರ ಮತ್ತು ೧೧೫೬ರ ಶಾಸನಗಳಲ್ಲಿ ಕ್ರಮವಾಗಿ ನರೇಂದ್ರಕೀರ್ತಿ ಮುನೀಂದ್ರ ಇವರ ಶಿಷ್ಯಕನಕನಂದಿ ಮುನೀಂದ್ರ ಸಮಾಧಿ ಮರಣಗಳನ್ನು ದಾಖಲಿಸಿವೆ. ಇಲ್ಲಿ ಇನ್ನೊಂದು ಶಾಸನ ಕನಕ ಸಿರಿಯವ್ವೆಯ ಸಮಾಧಿ ಮರಣ ಕುರಿತದ್ದಾಗಿದೆ. ಈ ನಿಶಧಿ ಪ್ರತಿಮೆಯನ್ನು ಮಾಧವನೆಂಬವರು ಮಾಡಿಸಿದರೆಂದು ತಿಳಿಸುತ್ತದೆ. ಕಲಬುರ್ಗಿ ಯಾದಗಿರಿ ಜಿಲ್ಲೆಗಳ ಸಮಗ್ರ ಕ್ಷೇತ್ರ ಕಾರ್ಯ ಮಾಡಿದಲ್ಲಿ ಇನ್ನೂ ಹೆಚ್ಚಿನ ಮಾಹಿತಿಗಳು ಸಿಕ್ಕುಬಹುದು.

[1] ಅನನ್ಯ, ಪ್ರೊ. ಹಂಪನಾಗರಾಜಯ್ಯ

[2] ಮೂಲ ಹಿಂದಿ ಲೇಖನ, “ತೀರ್ಥಂವಂದನ (ಅಕ್ಟೋಬರ್ ೨೦೧೦) ಲೇ. ಡಾ. ರಮೇಶ್ಚಂದ್ರ ಜೈನ, ನಿರ್ದೇಶಕರು, ಜೈನವಿದ್ಯಾ ಅನುಸಂಧಾನ ಕೇಂದ್ರ, ವರ್ಧಮಾನ ಕಾಲೇಜು ಬಿಜನೌರ (ಉ.ಪ್ರ).