ಜೈನ ಜನಪದ ಸಾಹಿತ್ಯ

[1]ಹಾದಿಗಿಹರಸೂರಚಂದ | ಬೀದಿಗಿ ಬೆಳಗೊಳಚಂದ
ರಾಜಂಗಳ ಚಂದ ಜೇವರಗಿ | ಬಸ್ತ್ಯಾನ
ಸರಸೋತಿ ತಾಯಿ ಬಲುಚಂದ||

ಎರಿಹೊಲದಾಗ ಎಳೆಯ ಸವತಿಯ ಕಾಯಿ
ಹರಿಯಂದರ ಹ್ಯಾಂಗ ಹರಿಯಲಿ | ಹರಸೂರ ಪದ್ಮಾನ
ಮರೆಯಂದರಹ್ಯಾಂಗ ಮರೆಯಲಿ ||

ಆಕಿಯ ಮೂಗುತಿ ಕಾಕಿಯ ಹಣ್ಣಂಗ
ಆಕಿ ಹರಸೂರ ಪದಮವ್ವ | ಮೂಗುತಿ
ಲೋಕಾಕ ಬೆಳಕ ನೀಡ್ಯಾವ ||

ಈ ಜಾನಪದ ತ್ರಿಪದಿಗಳು ಕಲಬುರ್ಗಿ ಜಿಲ್ಲೆಯ ಜೈನಪ್ರಭಾವದ ಹಾಸು ಬೀಸನ್ನು ಬಿತ್ತರಿಸುತ್ತವೆ. ಕಲಬುರ್ಗಿ ಜಿಲ್ಲೆ ಕಲಬುರ್ಗಿ ತಾಲೂಕಿನಲ್ಲಿರುವ ಹಸರೂರಿನ ಶಾಸನೋಕ್ತ ಹೆಸರು ಶಾಲೆಯ ಸೀಮಳ ಹಾಗೂ ಶ್ರೀಕರಪುರ ಎಂದು. ಕಲಬುರ್ಗಿಯಿಂದ ಇನ್ನೊಂದು ತುದಿಯ ದಕ್ಷಿಣಕ್ಕಿರುವ ಶ್ರವಣಬೆಳಗೊಳ, ಶಿವಮೊಗ್ಗ ಜಿಲ್ಲೆಯ ಹೊಂಬುಜ ಹಾಗೂ ಉತ್ತರ ಭಾರತದ ಜಾರ್ಖಂಡ ರಾಜ್ಯದಲ್ಲಿರುವ ಜೈನರ ಪ್ರಸಿದ್ಧಯಾತ್ರಾ ಸ್ಥಳ ಸಮೇದ ಶಿಖರಜಿ. ಇವೆಲ್ಲವೂ ನಮ್ಮ ಜನಪದರ ಭಾವಬೆಸುಗೆಯಲ್ಲಿ ಒಂದಾಗಿವೆ. ಹರಸೂರು ರಾಷ್ಟ್ರಕೂಟ, ಕಲ್ಯಾಣಚಾಲುಕ್ಯರ, ಕಾಲದ ಪ್ರಸಿದ್ಧ ವ್ಯಾಪಾರಿ ಹಾಗೂ ವಿದ್ಯಾಕೇಂದ್ರ (ಅಗ್ರಹಾರ). ಅಲ್ಲಿರುವ ಪಂಚಕೂಟ ಬಸದಿಯಲ್ಲಿನ ಭವ್ಯ ತೀರ್ಥಂಕರರುಗಳ ವಿಗ್ರಹ. ಧರಣೇಂದ್ರ ಪದ್ಮಾವತಿ ಯಕ್ಷ – ಯಕ್ಷಿಯ ಎತ್ತರದ ಪ್ರತಿಮೆಗಳು ಅರ್ಧಮಾನವ ದೇಹ, ಕೆಳಭಾಗ ಸರ್ಪದ ದೇಹ ಹೊಂದಿರುವ ಈ ಯಕ್ಷ ಪ್ರತಿಮೆಗಳು ತುಂಬಾ ಚಲುವಾಗಿವೆ. ಜನಪ್ರಿಯವೂ ಆಗಿವೆ.

ಹೀಗಾಗಿ ನಮ್ಮ ಗರತಿಯರ ತ್ರಿಪದಿಗಳಲ್ಲಿ ಅಣಿಮುತ್ತುಗಳಾಗಿ ಬೆಳಗುತ್ತಿದ್ದಾರೆ.

ಎದ್ದೊಮ್ಮೆ ನೆನೆದೇನ ಇದ್ದೂರ ದೇವರನ
ಕೊಬ್ಬರಿ ಬನದ ಒಡೆಯನ | ಬಾಹುಬಲಿಯ
ಎದ್ದಯಾಳದಲಿ ನೆನೆದೇನ||

ಹಿಂದೆ ತಿರುಗುವ ಬೀಸುವಕಲ್ಲಿನ ಗುರು ಗುರು ನಾದದ ಜೊತೆ ಏರುದನಿಯ ಗರತಿಯ ಹಾಡುಗಳು ಚುಮ್ ಚುಮ್‌ನಸುಕಿಗೆ ಚೇತೋಹಾರಿಯನ್ನು ತಂದಿತ್ತರೆ, ಸುಳಿದು ಸೂಸುವ ತಂಗಾಳಿಗೂ ಒಂದು ಉನ್ಮತ್ತತೆ. ತೂಗಿ ತೊನೆದಾಡುವ ಮರಬಳ್ಳಿಗಳಿಗೂ ಏನೋ ಒಂಥರಾ ಉಲ್ಲಾಸ ಉಮೇದು. ಉಷಾಃ ಕಾಲದ ಗರತಿಯರ ಗಾಯನದ ಮೋಡಿಗೆ ಇಂಚರದ ಹಕ್ಕಿ ಬಳಗವೂ ನಿಬ್ಬೆರಗಾಗುತ್ತಿತ್ತು. ಸತ್ವಭರಿತ ಜನಪದರ ಈ ಹಾಡುಗಳು ಗಂಧರ್ವಲೋಕಕ್ಕೂ ಗವಾಕ್ಷಿಯನ್ನು ತೆರೆಯುತ್ತಿತ್ತು. ಸಾಹಿತ್ಯಕಲಾ ಕ್ಷೇತ್ರಗಳಿಗೆ ತನ್ನದೆ ಆದ ಕೊಡುಗೆಯನ್ನು ನೀಡಿದ ಕಲಬುರ್ಗಿ ಪ್ರದೇಶದ ಜೈನಧರ್ಮೀಯರು ಜಾನಪದ ಕ್ಷೇತ್ರಕ್ಕೂ ತಮ್ಮ ಕೊಡುಗೆಯನ್ನು ನೀಡಿ ಮೇಲ್ಮೈಯನ್ನು ಬರೆದಿದ್ದಾರೆ. ಬಯಲು ಪ್ರದೇಶದ ಪರಿಸರದಲ್ಲಿ ಯಥೇಚ್ಛವಾದ ಉರಿಬಿಸಿಲು ಝಳದ ಜೊತೆ ಜೀವನ ಸಮೃದ್ಧಿಯನ್ನು ಸಾಧಿಸಿದ ಜೈನ ಸಮುದಾಯ ಭೂಮಿಗೆ ಬೆವರನ್ನು ಬಸಿಯುತ್ತಲೇ ಆತ್ಮೋನ್ನತಿಯ ದಾರಿಯನ್ನು ಅರಸಿ ಕೊಂಡವರೆಂಬುದಕ್ಕೆ ಕೆಳಗಿನ ತ್ರಿಪದಿ ಸಾಕ್ಷಿ ಎನಿಸಿದೆ.

ಕಡೆಯ ಬಾಗಿಲ ಕಂಡೇ ಕನ್ನಡಿ ಬಸ್ತಿಯ ಕಂಡೆ
ಮತ್ತೆ ಶಿಖರಜಿಯ ಬೆಟ್ಟಕಂಡೆ | ತೀರ್ಥಂಕರರ
ಪಾದವ ಕಂಡು ಪಾವನಳಾದೆ ||

ಝಾರ್‌ಖಂಡ ರಾಜ್ಯದಲ್ಲಿರುವ ಸಮ್ಮೇದ ಶಿಖರಜಿ. ಪರ್ವತದಲ್ಲಿ ೨೦ ಜನ ತೀರ್ಥಂಕರರು ಮುಕ್ತಿ ಹೊಂದಿದ ಸಿದ್ಧಕ್ಷೇತ್ರ. ಆದಿಕಾಲದಿಂದಲೂ ಜೈನರೂ ಶಿಖರಜಿ ಯಾತ್ರೆಯನ್ನು ಗೈಯುತ್ತಿದ್ದರು. ಈಗಲೂ ಪ್ರತಿ ವರುಷ ಲಕ್ಷಾವಧಿ ಜನರು ಅಲ್ಲಿಗೆ ಯಾತ್ರೆ ಕೈಗೊಳ್ಳುತ್ತಾರೆ. ಹೀಗಾಗಿ ಮೇಲಿನ ತ್ರಿಪದಿಯಲ್ಲಿ ಶಿಖರಜಿಯ ಉಲ್ಲೇಖವಿದ್ದುದು ಸಹಜ. ತಾನುನಂಬಿದ ದೇವರ ಬಗ್ಗೆ ಶ್ರದ್ಧಾ ಭಕ್ತಿಗಳಿದ್ದಂತೆ ತನ್ನ ನೆಚ್ಚಿನ ಭಗವಂತನ ಮೇಲೂ ಮಮತೆ ವಾತ್ಸಲ್ಯಗಳನ್ನೂ ಹರಿಸಿದ್ದಾಳೆ ನಮ್ಮ ಜೈನಗರತಿ.

ನಾಗರ ಪಂಚಮಿ ನಡುವಿನ ಮಳೆಗಾಲ
ಹ್ಯಾಂಗಿದ್ರಿ ಸ್ವಾಮಿ ಬಯಲಾಗ | ಬೆಳಗೊಳ
ಜಾಗೊಳ್ಳೆದೆಂದು ನೆನೆದೀರಾ ||

ಬಿಸಿಲುಗಾಳಿಗೆ ಮೈಯೊಡ್ಡಿದಂತೆ ಧಾರಾಕಾರ ಸುರಿವ ಮಳೆಯಲ್ಲೂ ಬಯಲಲ್ಲಿ ನಿಂತ ಬಾಹುಬಲಿ ಸ್ವಾಮಿಯನ್ನು ಕಂಡು ಆಕೆಯ ಹೆಂಗರಳು ಚುರ್ರ‍್ ಎಂದಿರಬೇಕು. ಜಾಗೊಳ್ಳೆದೆಂದು ಎಂಬ ಸಾಲು ಶ್ರವಣಬೆಳಗೊಳದ ಪಾವಿತ್ರತೆಯನ್ನು ಪ್ರಾಮುಖ್ಯತೆಯನ್ನು ಗಾಢವಾಗಿ ಧ್ವನಿಸುತ್ತದೆ. ದೂರದ ಕಲಬುರ್ಗಿನಾಡ ಗರತಿಗೆ ದೂರದ ಬೆಳಗೊಳದ ಸೆಳೆತ ಭಕ್ತಿ ಭಾವುಕತೆ ಅಚ್ಚರಿಯನ್ನು ತರಿಸುತ್ತದೆ. ಕಲಬುರ್ಗಿ ಪ್ರದೇಶ ಎನ್ನುವುದಕ್ಕಿಂತ ಉತ್ತರ ಕರ್ನಾಟಕದ ಬಹುತೇಕ ಪ್ರದೇಶಗಳಲ್ಲಿನ ಆಚರಣೆಗಳಲ್ಲಿ ಸಾಧ್ಯತೆ ಇದೆ. ಕಾರಣ ಇಲ್ಲಿನ ಹಾಡು ಹಸೆಗಳಲ್ಲಿ ಅಲ್ಪಸ್ವಲ್ಪ ಬದಲಾವಣೆಯೆನಿಸಿದರೂ ಅಂತಃ ಸ್ರೋತ ಮಾತ್ರ ಒಂದೇ. ಹೀಗಾಗಿ ಈ ಪ್ರದೇಶದದ ಜಾನಪದ ಹಾಡುಗಳಲ್ಲಿ ತಾವು ನಂಬಿದ್ದ ಪಂಚಪರಮೇಷ್ಠಿಗಳ ತೀರ್ಥಂಕರರ ಯಕ್ಷ – ಯಕ್ಷಿಯರ ಮುನಿ ಆರ್ಯಿಕೆಯರ ಭಟ್ಟಾರಕರ ಸ್ವಾಮಿಗಳ ಪವಿತ್ರ ಕ್ಷೇತ್ರಗಳ ಕುರಿತಾಗಿ ಬೀಸುವ ಕುಟ್ಟುವ ಹಾಡುಗಳಲ್ಲಿ ಭಜನೆ ಕೋಲಾಟ ಹಂತಿ ಪದಗಳಲ್ಲಿ ಒಗಟುಗಳಲ್ಲಿ ಕಥೆಗಳಲ್ಲಿ ಸಶಕ್ತವಾಗಿ ಬಿಂಬಿತವಾಗಿದೆ.

ಅರಹಂತರ ಬಸದಿಗೆ ಚರುವ ಒಯ್ದಕಿನ್ಯಾರ [2]
ಪರಮಶ್ರಾವಕರ ಮಗಳೇನ | ಸುಷ್ಮಾನ
ಸರಗಿ ಬಸದ್ಯಾಗ ಹೊಳದಾವ ||

ಸರಗಿ, ಚರುವ (ಆಭರಣ, ನೈವೇದ್ಯ) ಪ್ರಾಸಬದ್ಧ ಪದಗಳು ಗಕ್ಕನೆ ನಮ್ಮನ್ನು ಹಿಡಿದು ನಿಲ್ಲಿಸುತ್ತವೆ.

ಹೋಗುತ್ತ ಎಡಕ್ಹಾನ ಬರವೂತ ಬಲಕ್ಹಾನ
ನೀರತರುವಾಗ ಎದುರ್ಹಾನ | ಅರಹಂತಗ
ಕೊಡನಿಟ್ಟುಕೈಯ ಮುಗಿದೇನ ||

ದೈನಂದಿನ ಕೆಲಸ ಕಾರ್ಯಗಳಲ್ಲೂ ಭಗವಂತನನ್ನೆ ಕಂಡು ಎಲ್ಲ ಆಗುಹೋಗುಗಳಿಗೆ ಅವನೇ ಕಾರಣನೆಂದು ನಂಬಿದವರು. ಹೀಗಾಗಿ ಈ ಪ್ರದೇಶದಲ್ಲಿ ಮೈದಾಳಿದ ಜನಪದ ಸಾಹಿತ್ಯದಲ್ಲಿ ದೈವಿ ಸಮರ್ಪಣೆಗೆ ಅಗ್ರಸ್ಥಾನ. ಯಕ್ಷ – ಯಕ್ಷಿಯರ ಮೇಲಿನ ಭಯ ಭಕ್ತಿಗೌರವಗಳು ಅನನ್ಯವಾದವುಗಳು.

ತಾಲೂಕು ಕೇಂದ್ರವಾದ ಜೇವರ್ಗಿಯ ಜಿನಮಂದಿರ ಅಲ್ಲಿನ ಬ್ರಹ್ಮಯಕ್ಷ (ಬ್ರಹ್ಮ ರಾಯ, ಭರಮಪ್ಪ), ಸರಸ್ವತಿ ಪ್ರತಿಮೆ, ಮಳಖೇಡ, ಹುಣಸಿ ಹಡಗಲಿ, ಕಲ್ಯಾಣ ಚಾಲುಕ್ಯ ೬ನೇ ವಿಕ್ರಮಾದಿತ್ಯನ ಜೈನರಾಣಿ ಜಾಕಲದೇವಿಯ ಇಂಗಳಗಿ, ವ್ಯಾಪಾರಿಕೇಂದ್ರ ಗೋಗಿ, ವಿದ್ಯಾಕೇಂದ್ರ ಭಂಕೂರು ಬೆಳಗಾವಿ ಜಿಲ್ಲೆಯ ಸ್ತವನಿಧಿ ದೂರದ ಬೆಳಗೊಳ, ಹೊಂಬುಜ, ಮೂಡುಬಿದರೆ, ಸಮ್ಮೇದ ಶಿಖರಜಿ, ಮುದ್ದೆಬಿಹಾಳದ ಗುಡ್ಡದಲ್ಲಿರುವ ಪದ್ಮಾವತಿ ಇನ್ನಿತರ ಜಿನರು, ಭಟ್ಟಾರಕರು, ಮುನಿಗಳು, ಆರ್ಯಿಕೆಯರು ಈ ಭಾಗದ ಜಾನಪದ ಪ್ರಕಾರಗಳಲ್ಲಿ ಒಡಮೂಡಿಬಂದಿವೆ. ಎಲ್ಲೆಡೆ ದೊರಕುವಂತೆ ಪದ್ಮಾವತಿ ಯಕ್ಷಿಯ ಕುರಿತಾದ ಹಾಡುಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಅನೇಕ ತೀರ್ಥಕ್ಷೇತ್ರಗಳು ಚಾರಣಗಿರಿಗಳು ನಮ್ಮ ಜನಪದರ ಪ್ರತಿಭೆಯಲ್ಲಿ ಪುಟಕ್ಕಿಟ್ಟ ಚಿನ್ನವಾಗಿ ಸ್ಫುಟವಾಗಿ ಮೈದಾಳಿವೆ. ಈ ಭಾಗದ ಜನಪದ ಸಾಹಿತ್ಯ ಇಲ್ಲಿನ ನೆಲ, ಜಲ, ಬೆಳಸು ಭವಣೆ, ಊಟ, ಉಡುಗೆ ಸಂಪ್ರದಾಯ ಆಚರಣೆಗಳ ಪ್ರಭಾವಕ್ಕೆ ಪಕ್ಕಾಗಿ ನಾನಾಮಗ್ಗಲುಗಳಲ್ಲಿ ದಾಂಗುಡಿಯಿಡುತ್ತಾ ಸಶಕ್ತವಾಗಿ ಬೆಳೆದಿದೆ.

ಕುದುರಿ ಏರಿರಬೇಕಾ ಕೂಸುಮುಂದಿರಬೇಕ
ರೇಸಿಮಿ ಸೀರೆ ಉಡಬೇಕ | ಬೆಳಗೊಳ
ಗೊಮ್ಮಟೇಶನ ನೋಡಿ ಬರಬೇಕ ||

ಬೆನ್ನ ಹಿಂದಲ ತಮ್ಮಕಣ್ಣ ಮುಂದಿದ್ದರ
ಚಿನ್ನಿಸಕ್ಕರಿ ಮೆಲದ್ಹಾಂಗ | ಬೆಳಗೊಳ
ಬೆಟ್ಟದಾಮ್ಯಾಲ ಇಳದಂಗ ||

ಇಲ್ಲಿನ ತಮ್ಮ, ಚಿನ್ನಿಸಕ್ಕರೆಯ ಸವಿ. ಬೆಳಗೊಳದ ಬೆಟ್ಟ ಈ ಮೂರರಲ್ಲಿರುವ ಆಂತರಿಕ ಸೆಳೆತ ಒಲವು ವಾತ್ಸಲ್ಯಗಳು ಮೂರರಲ್ಲೂ ತಳಕು ಹಾಕಿಕೊಂಡಿವೆ.

ಕಕ್ಕುಲತೆಗೆ ಹೆಸರಾದದ್ದು ಈ ನೆಲ. ಸದಾ ಸರ್ವರ ಸುಖದ ಹಾರೈಕೆಯ ಹಿಂದಿರುವ ಬೆಳ್ಳಿಗೆರೆ ‘ನೀನೂ ಬದುಕು ಇತರರಿಗೂ ಬಾಳವಕಾಶ ಕೊಡು’ ಜೀಯೋಔರ್ ಜೀನೇ ದೋ ಎಂಬ ಘೋಷವಾಕ್ಯ. ಅದನ್ನೆ ಧ್ವನಿಸುತ್ತದೆ. ಈ ತ್ರಿಪದಿ

ಪಾರೀಸನಾಥಗ ಆರಿಸದಕ್ಕಿಯನೊಯ್ದೆ
ದಾಳಿಂಬರ್ಹಣ್ಣ ನಡುವಿಟ್ಟೆ | ಬೇಡಿಕೊಂಡೆ
ಸುತ್ತೇಳ ಬಳಗ ಸುಖನಿರಲಿ ||

ಶುಕ್ರವಾರದ ದಿನ ಸುರುಳಿ ಹೋಳಿಗೆ ಮಾಡಿ
ಅಕ್ಕಪದುಮವ್ವಗ ಚರು ಒಯ್ದೆ | ಬೇಡಿಕೊಂಡೆ
ಬಟ್ಟಕುಂಕುಮಕ ದಯವಿರಲಿ ||

ಬಳಗದ ಸೌಖ್ಯದಂತೆ ತನ್ನ ಮುತ್ತೈದೆ ಭಾಗ್ಯ ಸದಾ ಇರಲಿ ಎಂಬ ಬಯಕೆ ಆಕೆಯದು.

ಗೋಗಿಯ ಪದಮವ್ವನ ಗುಡಿಯಾರ ಕಟ್ಟಿಸ್ಯಾರ್
ಮುತ್ತ ಹಚ್ಚ್ಯಾರ ಪರಿಪರಿ | ಹೊಸಗೋಗಿ
ಮುತ್ತು ಮಾರಂಥ ಜೈನರ ||

ಪದ್ಮಾವತಿ ಯಕ್ಷಿಯಂತೆ ೧೦ನೇ ತೀರ್ಥಂಕರ ಶೀತಲನಾಥನ ಯಕ್ಷ, ಬ್ರಹ್ಮರಾಯ ಅಥವಾ ಬ್ರಹ್ಮಯಕ್ಷನೂ ನಮ್ಮವರಿಗೆ ಭರವಸೆಯ ಬೇಡಿದುದನ್ನು ಕರುಣಿಸುವ ದೇವರೆಂದು ತುಂಬಾ ನಂಬುಗೆ. ಹೀಗಾಗಿ ಬ್ರಹ್ಮ ಯಕ್ಷನನ್ನು ಅವನು ನೆಲೆಸಿರುವ ಜೇವರ್ಗಿ, ಸ್ತವನಿಧಿ ಕ್ಷೇತ್ರಗಳನ್ನು ಕೊಂಡಾಡಿದ್ದಾರೆ.

ಹಾಲ ಸ್ವಾರಿಯು ಜ್ವಾಕೀ ಬಾಲಾನ ತೊಟ್ಟಿಲು ಜ್ವಾಕಿ
ತಾಯವ್ವ ನನ್ನ ಮನಿಜ್ವಾಕಿ | ಜೇವರ್ಗಿಯ
ಭರಮಪ್ಪಗೆ ಹೋಗಿಬರತಿನಿ ||

ಈ ತ್ರಿಪದಿಯನ್ನು ಮಳ್ಳಿಯ ನಮ್ಮ ಸೋದರಮಾವ ದಿ.ಮೋಹನ ಚಂದ ಕಿರಣಗಿಯವರ ಪತ್ನಿ (ನನ್ನ ಅತ್ತೆ) ಶ್ರೀಮತಿ ಚಂಪಾವತಿ, ಮೊ.ಕಿರಣಗಿಯವರ ಹಾಡು ಹಾಗೆಯೇ ನನ್ನ ತಾಯಿಯ ಈ ಹಾಡುಗಳು ಮನನೀಯ.

ಚಿಂತಿಯ ಮಾಡೂತ ಮಂಚಕ ಮಲಗಿದರ
ಅಂತರಲಿ ಬಂದ ಮನೆಯೊಡೆಯ | ಜೇವರ್ಗಿರಾಯ
ಚಿಂತ್ಯಾಕವ್ವ ಮಗಳ ಸುಖಪಡಿಯ ||

ಜೊಂಪುಹತ್ತಿದಾಗಲೂ ದೇವರ ನೆನಕೆಯ ನಮ್ಮರದಾಗಿತ್ತು.

ಹಾಸುಗಲ್ಲಿನ ಮ್ಯಾಲ ಹಾದು ಹ್ವಾದವನ್ಯಾರ
ಪಾದಮೂಡ್ಯಾವ ಪರಿಪರಿ | ಜೇವರಗಿ ರಾಯ
ಹಾದು ಹೋಗ್ಯಾರ ಜಳಕಕ ||

ದೇವರು ದೈವಗಳಂತೆ ತನ ಬಂಧು – ಬಳಗವನ್ನು ಅಣ್ಣ ತಮ್ಮರನ್ನು ಮಕ್ಕಳು ಮೊಮ್ಮಕ್ಕಳನ್ನು ವೈಭವೀಕರಿಸಿ ಹಾಡುವುದರಲ್ಲಿ ನಮ್ಮ ಜನಪದರು ನಿಸ್ಸೀಮರು. ಹಿಂದಿನ ಕಾಲದಲ್ಲಿ ‌ಪ್ರತಿ ಊರಿಗೆ ಸುತ್ತುಕೋಟೆ ಇದ್ದು ರಾತ್ರಿವೇಳೆ ಅದರ ಅಗಸಿ ಬಾಗಿಲು ಮುಚ್ಚಿದರೆ ಆಯಿತು. ಸ್ವತಃ ಅರಸ ಬಂದರೂ ಬಾಗಿಲು ತೆರೆಯುತ್ತಿರಲಿಲ್ಲ. ಆದರೆ ಕೋಟೆ ಹೊರಗೆ ಇರುವ ಒಂದೇ ಒಂದು ಭಾವಿಯ ನೀರು ಊರಿಗೆ ಸರಬರಾಜಾಗುತ್ತಿರುತ್ತದೆ. ಅಂಥದರಲ್ಲಿ ಕೂಸು ಕಿರಿ ಕಿರಿ ಮಾಡುತ್ತದೆ. ಹಿತವಾದ ಬಿಸಿ ನೀರಿನಲ್ಲಿ ಮಗುವನ್ನು ಎರೆದು ಮಲಗಿಸಿದರೆ ರಾತ್ರಿಯಿಡಿ ಸುಖನಿದ್ರೆ ಅದಕ್ಕೆ ಇಲ್ಲಿನ ತ್ರಿಪದಿಯಲ್ಲಿ ತನ್ನ ತಮ್ಮನ ಮೇಲಿನ ಅಭಿಮಾನ ಹೇಗೆ ಆಡಿಸುತ್ತದೆ ನೋಡಿ.

ಕಿರಿ ಕಿರಿ ಕಂದಮ್ಮಗ ಬೆರಕಿಗೆ ನೀರಿಲ್ಲ
ಸರಕಾರದಗಸಿ ತೆರೆದಿಲ್ಲ | ಮೋನಣ್ಣ [3]
ದನಿಕೇಳಿ ಅಗಸಿ ತೆಗೆಸ್ಯಾನ ||

ಮುಂಜೀಯ ಮಗಚಂದ ಮುಂದ ಹಂದರ ಚಂದ
ಮುಂಜಾನೆ ಹರಿವ ನದಿ ಚಂದ | ಬಮ್ಮಣ್ಣ [4]
ದರುಶನ ಮಾಡಾಗ ದನಿಚಂದ ||

ಹೀಗೆ ಬೀಸುವ ಹಾಡುಗಳು ತುಂಬಾ ಪ್ರಭಾವಶಾಲಿಯಾದವುಗಳು. ಅವುಗಳ ದಾಟಿಯು ತುಂಬಾ ಲಯಬದ್ಧವಾದದ್ದು. ಬೀಸುವುದನ್ನು ಮುಗಿಸುವಾಗಲೇ ದೈವ ದೇವರನ್ನು ನೆನೆಪಿಸಿಯೇ ಕಲ್ಲು ನಿಲ್ಲಿಸುವುದು ಅವರ ಭಕ್ತಿಯ ಪಾರಮ್ಯವನ್ನು ತೋರಿಸುತ್ತದೆ.

ಆಗೂವ ಮುಕ್ಕಿಗೆ ಆದಿನಾಥರ ನೆನೆದೆ
ದ್ವಾರೇದ ಕೈಯ ಸರಸೋತಿ | ನಾನಿನ್ನ ಹಾಡಿ
ಝಾಡಿ ರಥವ ನಿಲುವೇನ ||

ಆಗೂವ ಮುಕ್ಕಿಗಿ ತೋಳಾಡಿ ತೊಡೆಯಾಡಿ
ಬಾದಾಮಿ ಸೆರಗ ಬಲಕಾಡಿ | ಗೋಗಿಯ
ಪದ್ಮಾವತಿ ಮ್ಯಾಲ ಚವರಾಡಿ ||

ಜನಪದ ಸಾಹಿತ್ಯಕ್ಕೆ ಜೀವ ಬರುವುದೇ ಅದರಲ್ಲಿನ ದನಿ ದಾಟಿಗಳಿಂದ ಸ್ವರ ಲಯಗಳಿಂದ. ಜನಪದ ಸಾಹಿತ್ಯ ಓದಿ ಸಂತಸಪಡುವುದಕ್ಕಿಂತ ಕೇಳಿ ಸಂತೋಷಪಡುವ ಬದುಕಿಗೆ ಉಮೇದು ಉಲ್ಲಾಸಗಳನ್ನು ತುಂಬಿಕೊಳ್ಳುವ ಕಲೆ. ಹೀಗಾಗಿ ವೈವಿಧ್ಯಮಯ ರಾಗಗಳ ಜನಪದ ಹಾಡುಗಳನ್ನು ಧ್ವನಿಮುದ್ರಿಸಿಕೊಳ್ಳುವ ಕಾರ್ಯಬೇಗ ಆಗಬೇಕಿದೆ. ಬೀಸುವ ಹಾಡುಗಳಂತೆ ಕುಟ್ಟುವ ಹಾಡುಗಳು ಅಷ್ಟೇ ಧ್ವನಿಪೂರ್ಣವಾಗಿವೆ.

ಕುಟ್ಟಿಕುಟ್ಟಿ ನನ್ನ ರಟ್ಟೆರಡು ಸೋತಾವ
ಕಟ್ಟಿಮ್ಯಾಲಿನ ಕಲ್ಲಸಡಲ್ಯಾವ | ಶೀತಲನ [5]
ಕೊಟ್ಟಿಗ್ಯಾನ ಎತ್ತಬೆದರ್ಯಾವ ||

ಬೀಸುವ ಕುಟ್ಟುವ ಇಂಪಾದ ಹಾಡುಗಳು, ಅಬ್ಬರದ ತಲೆಸಿಡಿಯುವಂಥ ಆಧುನಿಕ ಹಾಡುಗಳಲ್ಲಿ ಬದಲಾದ ಮನೋಭಾವದಲ್ಲಿ ಪರಕೀಯರ ಅಂಧಾನುಕರಣೆಯಲ್ಲಿ ಕೊಚ್ಚಿ ಹೋಗಿವೆ.

ಮದುವೆ ಸಂದರ್ಭದಲ್ಲಿ ಸುರಗಿಸುತ್ತಿ ಮದುಮಕ್ಕಳಿಗೆ ಅಲ್ಲಿ ಕೂಡಿಸಿ ಒಂದು ದಂಟಿಗೆ ವೀಳೆದೆಲೆಯನ್ನು ಸುತ್ತಿ ಒಂದು ಬಟ್ಟಲಲ್ಲಿ ಹಾಲುತುಪ್ಪ ಮಿಶ್ರಮಾಡಿಕೊಂಡು ನೆರೆದ ಮುತ್ತೈದೆರು ಎಣ್ಣೆ ಹಚ್ಚುವ ಹಾಡು ಅದರ ಸಾಹಿತ್ಯ ಮತ್ತು ಧಾಟಿ ತುಂಬಾ ಗ್ರಾಹ್ಯವಾಗಿದೆ.

[6]ದೇವ ದೇವರಿಗೆಣ್ಣೆ ದೇವs ಪಾರಿಸಗೆಣ್ಣೆ
ತಾಯಿ ಪದುಮವ್ವಗ ಮೊದಲೆಣ್ಣೆ | ಜಯದೇವ ಜಿನೇಂದ್ರ
ಬಾಲಾಗೆಣ್ಣಿ ಹಚ್ಚಟಗೆ ಬಾಗಲಿಗಿಬಿಸಿಲಬಂದ
ನಾಲೊತ್ತೊಂದು ತ್ವಾಟದ ಎಲಿಬಂದ | ಜಯದೇವ ಜೀನೇಂದ್ರ
ಕಂದಗೆಣ್ಣಿ ಹಚ್ಚಟಗೆ ಅಂಗಳಕ ಬಿಸಿಲಬಂದ
ಎಂಭತ್ತೊಂದು ತ್ವಾಟದ ಎಲಿಬಂದ | ಜಯದೇವ ಜಿನೇಂದ್ರ
ನೀರಿಲ್ಲದೋಣ್ಯಾಗ ನೀರ್ಯಾಕ ಹರದಾವ
ಊರಿಗಿ ದೊಡ್ಡವರ ಮಗಮಿಂದ | ಜಯದೇವ ಜಿನೇಂದ್ರ
ಊರಿಗಿ ದೊಡ್ಡವರ ಮಗ ಮಿಂದ ಧರಣೆಂದ್ರಗ
ಅರಸಿಣ ಹಚ್ಚದಕ ಬಲಬಂದ | ಜಯದೇವ ಜಿನೇಂದ್ರ
ನೀರಿಲ್ಲದಂಗಳಕ ನೀರ್ಯಾಕ ಆಗ್ಯಾವ
ಊರಿಗಿ ದೊಡ್ಡವರ ಮಗಳಮಿಂದ | ಜಯದೇವ ಜಿನೇಂದ್ರ
ಊರಿಗಿ ದೊಡ್ಡವರ ಮಗಳ ಮಿಂದ ಸುಸಮ್ಮಕ್ಕಗ
ಬಾಸಿಂಗ ಕಟ್ಟಿದಕ ಬಲಬಂದ | ಜಯದೇವ ಜಿನೇಂದ್ರ

ಇದೊಂದು ಧಾಟಿಯದ್ದಾದರೆ ಇನ್ನೊಂದು ಬಗೆಯ ಧಾಟಿಯ ಹಾಡು ಹೀಗಿದೆ.

[7]ಅರಹಂತ ಸಿದ್ಧರು ಪರಮ ತೀರ್ಥಂಕರರು
ಗೌತಮ ಗಣಧರರು ನೆರೆದೆ ಮುತ್ತೈದೇರು | ಎಣ್ಣಿ ಹಚ್ಚೋಣ ಬನ್ನಿರೇ
ಜ್ವಾಳದ ದಂಟಿಗೆ ವೀಳೆದ ಎಲೆ ಸುತ್ತಿ
ಜಾಣೆರೊಂದೈವರ | ಜಾಣೇರೊಂದೈವರ
ನೆರದ ಮುತ್ತೈದೇರು ಎಣ್ಣಿ ಹಚ್ಚೋಣ ಬನ್ನಿರೇ |
ಸಜ್ಜಿಯ ದಂಟಿಗೆ ವಜ್ರದ ಎಲೆ ಸುತ್ತಿ
ಗುಜ್ಜೇರೊಂದೈವರ | ಗುಜ್ಜೇರೊಂದೈವರ
ನೆರದ ಮುತ್ತೈದೇರು ಎಣ್ಣೆ ಹಚ್ಚೋಣ ಬನ್ನಿರೆ | ..

ಹೀಗೆ ನುಡಿಗಳ ಗಡಣವೇ ಇದೆ. ಮದುಮಕ್ಕಳನ್ನು ಮಿಯಿಸಿ ನಂತರ ತಾಳಿಕಟ್ಟಿ ಅಕ್ಷತೆಗಳನ್ನು ಹಾಕಿ ಎಲ್ಲ ವಿಧಿ ವಿಧಾನಗಳನ್ನು ಪೂರೈಸಿದ ನಂತರ ಮಗಳನ್ನು ಗಂಡಿನವರಿಗೆ ಒಪ್ಪಿಸುವಾಗಿನ ಹಾಡು ಕರುಳನ್ನು ಕಲಕುತ್ತದೆ ಕಣ್ಣೀರಿನ ಕೋಡಿ ಹರಸುತ್ತದೆ.

ಧರಣಿಗಾರುತಿ ಮಾಡಿ ಪರಿಪರಿಯಿಂದ ಬೇಡಿ
ಎರಡೈದು ತಿಂಗಳು ಹೊತ್ತು ಕೂಸು ರತ್ನಮ್ಮಳ ಹೆತ್ತು |
ಸಣ್ಣಕ್ಕಿ ಪಾಯಸ ಬೆಣ್ಣೆ ಕಾಸಿದ ತುಪ್ಪ
ನನ್ನೈದು ಬೆರಳ ಸಮಮಾಡಿ
ಉಣ್ಣಂತ ಉಣಿಸೇನ ತುತ್ತಮಾಡಿ |

ಅತ್ತಿಗಿನಾದನಿ | ಭಾವ ಮೈದುನ ಗಂಡ
ಮತ್ತೆ ನೆಗೆಣ್ಣಿ ಆಡಿದರ ಅತ್ತಿ ಕೇಳುತ ಬಾರ |
ಅಣ್ಣಯ್ಯ ಧನುಶೆಟ್ಟಿ ನೀ ಕೇಳೊ ಮನಮುಟ್ಟಿ
ನಮ್ಮ ಹೆಣ್ಣು ಮಗಳು ನಿಮ್ಮನಿ ಸೊಸಿ
ನಡೆಸಿಕೊಳ್ಳಿರಿ ಸಂತೋಸಿ (ಸಂಗ್ರಹ : ಹಡೆದವ್ವ ಹಾಡ್ಯಾಳ)

ಈ ಭಾಗದ ಜೈನರು ಗೌರಿ ಶೀಗಿ ಗಣೇಶ ಹಬ್ಬಗಳನ್ನೂ ಆಚರಿಸುತ್ತಾರೆ. ಬಹುಶಃ ವೈದಿಕ ಸಂಪ್ರದಾಯದ ಪ್ರಭಾವವೋ ಅಥವಾ ಯಕ್ಷ ಯಕ್ಷಿಯರ ಪ್ರಭಾವವೊ ಅಂತೂ ಈ ಹಬ್ಬಗಳು ಜೈನರಲ್ಲೂ ಆಚರಣೆಯಲ್ಲಿವೆ. ಆಗ ಹಾಡುವ ಹಾಡುಗಳ ಸಾಹಿತ್ಯ ಧಾಟಿ ಗಮನಾರ್ಹ.

[8]ಕೋಲು ಕೊರಳಾದ್ಹಕ್ಕಿ ನೀಲವರ್ಣದ ಪಕ್ಷಿ
ಹಾರೀತವ್ವ ಹಕ್ಕಿ ಗಗನs ಕೋಲ |
ರಾಯ ರಾಯರ ಗೌರಿ ರಾಯ ಮಾನ್ಯರ ಗೌರಿ
ರಾಯ ಶೀತಲನ ಮನಿ ಗೌರಿ ಕೋಲ
ರಾಯಾನೆ ಶೀತಲನ ಮನಿ ಗೌರಿ ಹೊಂಟಾಳ
ನಾಲತ್ತೊಂದತಾಸ ಅರಗಳಿಗೆ ಕೋಲ ||

ಶೆಟ್ಟಿ ಶೆಟ್ಟೆರ ಗೌರಿ ಶೆಟ್ಟಿಮಾನ್ಯರ ಗೌರಿ
ಶೆಟ್ಟಿ ಬಮ್ಮಾನ ಮನಿ ಗೌರಿ ಕೋಲ
ಶೆಟ್ಟಿ ಬಮ್ಮಾನ ಮನಿ ಗೌರಿ ಹೊಂಟಾಳ
ಇಪ್ಪತ್ತೊಂದತಾಸ ಅರಗಳಿಗೆ ಕೋಲ ||

ಕಂಚಿನ ಹೊರಕ್ವಾಟಿ ಕಂಚಿನ ಒಳಕ್ವಾಟಿ
ಕಂಚತುಂಬ್ಯಾವ ಹೊಸಗೋಗೆ ಕೋಲ
ಕಂಚಾನೆ ತುಂಬ್ಯಾವ ಹೊಸಗೋಗಿ ಅಗಸ್ಯಾಗ
ಕೆಂಚೇರು ಕೋಲ ಹೊಯದಾರ ಕೋಲ ||

ಕಳುವಿ ಬಂದೆವು ನಮ್ಮ ಕರುಳುಳ್ಳ ಗೌರಿನ
ಗಳಿಗ್ಯಾಗ ನೂರೆಲಿ ಮೆಲೆವಳ ಕೋಲ
ಗಳಿಗ್ಯಾಗ ನೂರೆಲಿಯ ಮೆಲೆವ ಗೌರಮ್ಮ ನಿನಗ
ಕಳವಿ ಬಂದೆವು ಶಿವನ ಅರಮನೆಗೆ ಕೋಲ ||

ಹಿತ್ತಲದಾನ ಹೂವ ಮತ್ತ್ಯಾಕ ಅರಳ್ಯಾವ
ಮತ್ತ ಮುಡಿವಂತ ಮಗಳ್ಹಾಳ ಕೋಲ
ಮತ್ತೆನ ಮುಡಿವಂತ ಮಗಳು ಶೀಗಮ್ಮ ನಿನಗ
ಮತ್ತೆ ಮಾನೌಮಿಗೆ ಕರಸೇವ ಕೋಲ ||

ಅಂಗಳದಾನ ಹೂವ ಇಂದ್ಯಾಕ ಅರಳ್ಯಾವ
ಇಂದ ಮುಡಿವಂತ ಮಗಳ್ಹಾಳ ಕೋಲ
ಇಂದ ಮುಡಿವಂತ ಮಗಳು ಗೌರಮ್ಮ ನಿನಗ
ಮುಂದ ದೀವಳಗಿಗೆ ಕರಸೇವ ಕೋಲ ||

ಇನ್ನೊಂದು ವಿಧದ ಹಾಡಿನ ಧಾಟಿಯು ಕೇಳುವಂತಿದೆ.

ಬೆಳಿಕಂಡೆ ಬೆಳಿಕಂಡೆ | ನಮ್ಮ ಹೊಲಾ ಬೆಳಿಕಂಡೆ
ಇಬ್ಬಂಗಿ ಕಾಟಾ ಕಡಲೀಯ | ಬೆಳಿಯೋ ಬಿಳಿಜ್ವಾಳವ

ಇಬ್ಬಂಗಿ ಕಾಟಾ ಕಡಲಿ ಗೋದಿಗಳು
ಇಬ್ಬರೊಂದಾಗಿ ಬೆಳೆದಾರ | ಬೆಳಿಯೋ ಬಿಳಿಜ್ವಾಳವ

ಕಂಚಗಾರ ಮನಿಗಿ ಹೋದಾನು ಶೀತಲ
ಕಂಚಿನ ಬಾಸಿಂಗ ತಗತಂದ ಬೆಳಿಯೊ ಬಿಳಿ ಜ್ವಾಳವ
ಕಂಚಿನ ಬಾಸಿಂಗ ತಗತಂದ | ಹೂಡ್ಯಾನ
ಕಂಚುಮಿಂಚೆಂಬ ಎರಡೆತ್ತ | ಬೆಳಿಯೊ ಬಿಳಿ ಜ್ವಾಳವ

ಹತ್ತಿಯ ಹೊಲದಾಗ ಹೋಗಿ ನಿಂತಕಿನ್ಯಾರ
ಹತ್ತು ಹೂವಿನ ಸಿರಿ ನಿಲಿಭಾಳ | ಬೆಳಿಯೊ ….
ಹತ್ತೂವಿನ ಸಿರಿ ನಿಲಿಭಾಳ ಶೀತಲನ
ಅಕ್ಕಬಂದಾಳ ಹೊಲ ನೋಡ | ಬೆಳಿಯೊ ಬಿಳಿ

ಹಂಡೆತ್ತ ಬಮ್ಮಣ್ಣ ಪುಂಡೆತ್ತ ಶೀತಲ
ಬಂಡಿ ಮೊದಲೆತ್ತ ದೇವಣ್ಣ ಬೆಳಿಯೊ ಬಿಳಿ..
ಬಂಡಿ ಮೊದಲೆತ್ತ ದೇವಣ್ಣ | ಮೂವರು
ತೊಂಡಲ ಸುಸಮಾನ ಮುಡಿ ಮ್ಯಾಲ | ಬೆಳಿಯೋ

ಮಿತ್ರೆ ಸುಸಮಕ್ಕ ಮುತ್ತ ಉಡಿಯಲಿಕಟ್ಟ
ಬಿತ್ತಲ್ಲಿ ಹೋಗ್ಯಾರ ನಿಮ್ಮರಸ | ಬೆಳಿಯೊ
ಬಿತ್ತಲ್ಲಿ ಹೋಗ್ಯಾರ ನಿಮ್ಮರಸ ಬಸರಾಜ
ಮುತ್ತ ಬಿತ್ತಿ ರತ್ನ ಬೆಳೆದಾರ ಬೆಳಿಯೊ

ಸೀತನಿ ಸುಲಗಾಯಿ ಮಾತಿನ ಉಮ್ಮಿಗಿ
ಗೋಪ ನಿಮ್ಹೊಲಕ ಮೆಲಿಬಂದ
ಗೋಪ ನಿಮ್ಮ್ಹೊಲಕ ಮೆಲಿಬಂದ ಶೀತಲ
ಭೂಪ ಮೆಂಚಿಗಿ ಇಳದಾನ | ಬೆಳಿಯೊ ಬಿಳಿ ಜ್ವಾಳವ

ನಾಗರ ಪಂಚಮಿ ಹಾಡುಗಳು, ಜೋಗುಳ ಹಾಡುಗಳು, ಬೀಗರನ್ನು ಎದುರುಗೊಳ್ಳುವ ಅಣಕು ಹಾಡುಗಳು, ಅಲ್ಲದೆ ಹಂತಿ ಹಾಡುಗಳು, ಭಜನೆ ಹಾಡುಗಳನ್ನು ಹಾಡುವ ಜೈನರು ಈ ಜಿಲ್ಲೆಗಳಲ್ಲಿದ್ದಾರೆ. ಕಲಬುರ್ಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಹಿಪ್ಪರಗಿಯ ಕಲಮಾಬಾಯಿ ತುಪ್ಪದ, ಶಹಾಪುರ ತಾಲೂಕಿನ ಗೋಗಿಯ ದಿ. ಸುದರಾಬಾಯಿ ಅಕ್ಕಿ ಕೌಸಲ್ಯಾಬಾಯಿ ಕಿರಣಗಿ ಸುಮಂಗಲಾ ಡಿ.ಅಕ್ಕಿ.ದಿ. ಪುತಳಾಬಾಯಿ ಕಿರಣಗಿ ಇವರು ನುರಿತ ಜಾನಪದ ಹಾಡುಗಾರರು. ಆಳಂದದಲ್ಲಿ ಜೈನ ವೀರಸೇವಾದಳ ಹಾಗೂ ಆಳಂದ ತಾಲೂಕಿನ ಭುಸನೂರಿನ ಅರಿಹಂತ ಭಜನಾಮಂಡಳಗಳು ತುಂಬಾ ಜನಪ್ರಿಯ ಭಜನಾ ಹಾಡುಗಾರರ ತಂಡಗಳಾಗಿವೆ. ಹಾಗೆಯೇ ಪೂಜೆಯ ಹಾಡುಗಳನ್ನು ಹೊಲದಲ್ಲಿ ಕಸ ತೆಗೆಯುವಾಗಿನ ಕಥನ ಕವನಗಳ ಹಾಡುಗಳನ್ನು ಆರತಿ ಪದಗಳನ್ನು ಒಗಟುಗಳನ್ನು ಕಥೆಗಳನ್ನು ಹೇಳುವ, ಹಾಡುವ ಅನೇಕ ಜೈನರಿದ್ದಾರೆ. ಕಸೂತಿ, ರಂಗೋಲಿ, ಬಗೆಬಗೆಯ ತಿಂಡಿ ತಿನಿಸುಗಳು, ಮದುವೆ, ಮುಂಜಿವೆ, ತೊಟ್ಟಿಲು ಕಾರಣ ಇನ್ನಿತರ ಸಂದರ್ಭದಲ್ಲಿ ಮಾಡುವ ವಿಶೇಷ ಅಲಂಕಾರಗಳು ಭಕ್ಷಗಳು ಕುಶಲ ಕಲೆಗಳು ಸುರಗಿ ಸಾಮಾನುಗಳು ಕೌದಿ ಹೊಲೆಯುವುದು, ಹಗ್ಗ, ಚಿಕ್ಕ, ಹೊರಸು ನೆಯ್ಯುವುದು, ಮುಂತಾದವುಗಳಲ್ಲಿ ಈ ಭಾಗದ ಜೈನ ಗೃಹಸ್ಥ ಗೃಹಿಣಿಯರು ಪರಿಣಿತರು.

ಅನುಬಂಧ ಆಧುನಿಕ ಜೈನ ಸಮಾಜ

ನಾನಾ ಕ್ಷೇತ್ರಗಳಲ್ಲಿ ತಮ್ಮ ಸಾಮರ್ಥ್ಯ ಹಾಗೂ ಸಹಕಾರ ಮನೋಭಾವದಿಂದ ಎಲ್ಲರೊಂದಿಗೆ ಕೂಡಿ ಬಾಳುವ ಕಲೆಯನ್ನು ಕರಗತ ಮಾಡಿಕೊಂಡು ಜೈನ ಸಮುದಾಯದವರು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಹೆಸರುಗಳಿಸಿದ್ದಾರೆ, ಖಾಸಗಿ ಕ್ಷೇತ್ರಗಳಲ್ಲಿ ಡಾಕ್ಟರ್, ಇಂಜಿನಿಯರ್, ಶಿಕ್ಷಕರಾಗಿ ಸೇವೆಸಲ್ಲಿಸಿ ತಮ್ಮ ಸಾರ್ಥಕತೆಯನ್ನು ಮೆರೆದಿದ್ದಾರೆ. ಸ್ವಾತಂತ್ರ ಹೋರಾಟಗಾರರಾದ ದಿ.ಗುಲಾಬಚಂದ ಕಿವಡೆ, ಚತುರ ರಾಜಕಾರಣಿ ಸಮರ್ಥ ವೈದ್ಯ ಹಾಗೂ ಬೋಧಕ ದೂರದೃಷ್ಟಿಯುಳ್ಳ ಮುತ್ಸದ್ದಿ ದಿ. ಡಾ.ಎಂ. ಆರ್. ತಂಗಾ ಮೂರು ಅವಧಿಗೆ ವಿಧಾನ ಪರಿಷತ್ ಸದಸ್ಯರಾಗಿ ರಾಜ್ಯ ಭಾಜಪದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿ ಹಿರಾಚಂದ ಶಹಾ ಅವರು ವಿಧಾನ ಪರಿಷತ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಆಳಂದ ತಾಲೂಕಿನ ಕೆಲವರು ತಮ್ಮ ತಮ್ಮ ಪ್ರತಿಭೆ ಪಾಂಡಿತ್ಯ, ಸಾಮರ್ಥ್ಯಗಲಿಂದ ತಮ್ಮದೇ ಆದ ಕಾಣಿಕೆ ನೀಡಿದ್ದಾರೆ. ಆಲಂದದ ನಿವೃತ್ತ ನ್ಯಾಯಾಧೀಶರಾದ ಶ್ರೀ ಅಶೋಕಢೋಲೆ ಉದ್ಯಮಪತಿಗಳಾದ ಶ್ರೀ ಗುಲಾಬಚಂದ ಸೂರಚಂದ ಶಹಾ, ಕಾಂತಿಲಾಲಶಹಾ ಅವರ ವಂಶಜರು ನಾನಾ ಕ್ಷೇತ್ರಗಳಲ್ಲಿ ಹೆಸರು ಮಾಡಿದವರಾಗಿದ್ದಾರೆ. ಆಳಂದದ ದಿ.ಶ್ರೀ ರಾಮಚಂದ್ರ ಭರಮಣ್ಣ ಕಾವೇರಿ ಇವರೊಬ್ಬ ಸ್ವಾತಂತ್ಯ್ರ ಹೋರಾಟಗಾರ ದೇಶಾಭಿಮಾನಿ ಹಾಗೆಯೇ ಧರ್ಮಾನುರಾಗಿ. ಪೂಜೆ, ವೃತನೇಮ, ಉಪವಾಸ ಪಾರಣಿಗಲಲ್ಲಿ ಆಸಕ್ತ ಜಯನರ ಪವಿತ್ರಪರ್ವ ಬಾದ್ರಮಾಸದ ಅನಂತರ ಚತುರ್ದಶಿ ದಿನ ಉಪವಾಸವಿದ್ದಾಗ ಹೈದರಾಬಾದನ ರಝಾಕಾರರ ಪುಂಡಾಟಿಕೆಯಲ್ಲಿ ಡೋಗಿಬನ ಎಂಬಲ್ಲಿ ಗುಂಡಿನ ದಾಳಿಗೊಳಗಾದರು. ಗುಂಡೇಟಿನಿಂದ ಭುಜಕ್ಕೆ ಗಾಯವಾಗಿ ರಕ್ತಹರಿಯುತ್ತಿದ್ದರೂ ಪಕ್ಕದ ಗಾಯಾಳುವಿಗೆ ಆರೈಕೆ ಮಾಡಲು ಮುಂದಾದಾಗ ಇವರು ಇನ್ನೂ ಜೀವಂತವಾಗಿರುವುದನ್ನು ಗಮನಿಸಿದ ರಝಾಕಾರರು ಗುಂಡಿಕ್ಕಿ ಸಾಯಿಸಿದರು. ರಾಜಕೀಯ ತೊಂದರೆ ಅನುಭವಿಸಿದವರಿಗಾಗಿ ಸರ್ಕಾರ ಆಗಿನ ಜಿಲ್ಲಾಧಿಕಾರಿ ಮುಖಾಂತರ ಇವರ ಧರ್ಮಪತ್ನಿ ಶ್ರೀಮತಿ ರತ್ನಾಬಾಯಿ ಕಾವೇರಿಯವರಿಗೆ ‘ವೀರಮಾತಾ’ ಪ್ರಶಸ್ತಿ ನೀಡಿ ಇತರ ಸೌಲಭ್ಯ ನೀಡಲು ಮುಂದಾದಾಗ ಶ್ರೀಮತಿ ರತ್ನಾಬಾಯಿ ಅವರು ಸರ್ಕಾರಿ ಸೌಲತ್ತುಗಳನ್ನು ನಿರಾಕರಿಸಿ ಹಿರಿಮೆಯನ್ನು ಮೆರೆದರು. ನರೋಣಾದ ಮಾರುತಿಕಾಸಾರ, ತಡಕಲ್ಲದ ಭರಮಶೆಟ್ಟಿ ಸುಂದರಲಾಲ ಪಾಟೀಲ ಬಾವಗೀತೆ ತತ್ವಪದ ಜಾನಪದ ಹಾಡುಗಳ ಕಲಾವಿದರು. ಮಾಡ್ಯಾಳದ ಪದ್ಮರಾಜ ಗೋಂಗಡೆ, ಹೊನ್ನಕಿರಣಗಿಯ ಹಿರಾಚಂದ ಪಾರ್ಶ್ವನಾಥಜೈನ ಚಿತ್ರಕಲೆಯಲ್ಲಿ ಸಿದ್ಧಹಸ್ತರು. ಜೇವರ್ಗಿ ತಾಲೂಕಿನ (ಎಸ್.ಎನ್.) ದ ರಾಜೇಂದ್ರ ಪಾಯಣ್ಣ ತುಪ್ಪದ ಉತ್ತಮ ಕೊಳಲುವಾದಕ. ಈ ಭಾಗದ ಕಲೆ, ಸಾಹಿತ್ಯ ಸಂಸ್ಕೃತಿ, ಶಿಕ್ಷಣ ಕ್ಷೇತ್ರಕ್ಕೆ ಎರಡು ಕೈ ಎತ್ತಿ ದಾನ ಮಾಡಿದ ಇತಿಹಾಸ ಪ್ರೇಮಿ,ದಿ. ಶ್ರೀ ವಿದ್ಯಾಚಂದ್ರ ಜಿ.ಕೋಠಾರಿಯವರ ಯೋಗದಾನ ಮರೆಯುವಂತಿಲ್ಲ. ಅವರು ಈ ನಾಡಚರಿ‌ತ್ರೆ ಕುರಿತು ಕೆಲಸ ಮಾಡವವರಿಗೆ, ಪ್ರಾಮಾಣಿಕ ಕೆಲಸಗಾರರಿಗೆ ಧಾರಾಳವಾಗಿ ಧನವಿತ್ತು ಮಾರ್ಗದರ್ಶನ ಮಾಡಿದ್ದಾರೆ. ದಿ.ಐಡಿಯಲ್ ಫೈನ್ ಆರ್ಟ್‌ಸಂಸ್ಥೆಯ ಅಧ್ಯಕ್ಷರಾಗಿ, ವಿದ್ಯಾವಿನಯ ಪ್ರತಿಷ್ಠಾನದ ಸಂಸ್ಥಾಪಕರಾಗಿ ಅವರು ಸಲ್ಲಿಸಿದ ಸೇವೆ ಅನನ್ಯ. ಅವರು ತಮ್ಮ ತಾಯಿಯವರ ನೆನಪಿಗಾಗಿ ೧೯೯೩ರಲ್ಲಿ (೧೭ ವರುಷಗಳ ಹಿಂದೆ ಹಣದ ಮೌಲ್ಯ ಲೆಕ್ಕ ಹಾಕಿದಾಗ ಈಗಿನ ದೊಡ್ಡ ಮೊತ್ತವೆ ಸರಿ) ಎಂಟು ಲಕ್ಷರೂಗಳ ದೇಣಿಗೆ ನೀಡಿ ಈ ಪ್ರದೇಶದ ಕಲಾಶಿಕ್ಷಣಕ್ಕೆ ಕಸುವನ್ನು ತುಂಬಿದವರು. ಆದರ್ಶ ಶಿಕ್ಷಕರೆಂದು ರಾಜ್ಯ, ರಾಷ್ಟ್ರ ಪ್ರಶಸ್ತಿ ಪಡೆದ ಸಾಹಿತಿ ನಾಟಕಕಾರ ದಿ.ಶ್ರೀ ಮೋಹನಚಂದ ಹೊಂಬಣ್ಣ ಕಿರಣಗಿ (ಮಳ್ಳಿ), ಸಂಶೋಧನೆ, ಸಾಹಿತ್ಯ, ಚಿತ್ರಕಲೆ ಇನ್ನಿತರ ಕ್ಷೇತ್ರಗಳಲ್ಲಿ ಸೈ ಎನಿಸಿಕೊಂಡ ಆದರ್ಶ ಶಿಕ್ಷಕರೆಂದು ರಾಜ್ಯ ರಾಷ್ಟ್ರ ಪ್ರಶಸ್ತಿ ಪಡೆದು ಗೋಗಿಯ ಡಿ.ಎನ್.ಅಕ್ಕಿ. ಗುಲಬರ್ಗಾ ಪ್ರದೇಶದ ಜೈನಧರ್ಮ ಕುರಿತಾಗಿ ಅಧ್ಯಯನಕ್ಕೆ ರಾಜ್ಯ, ರಾಷ್ಟ್ರ, ಪರರಾಷ್ಟ್ರಗಳಿಂದ ಬರುವ ವಿದ್ವಾಂಸರುಗಳಿಗೆ ವಾಹನ, ವಸತಿ, ಊಟೋಪಚಾರದ ವ್ಯವಸ್ಥೆ ಕಲ್ಪಿಸುವ ಹಾಗೂ ಅನಾರೋಗ್ಯದ ನಡುವೆಯೂ ಅವರೊಡನೆ ತಿರುಗಾಡಿ ಸ್ಥಳ ಪರಿಚಯ ಮಾಡಿಕೊಡುತ್ತಿದ್ದ, ಬಡ ವಿದ್ಯಾರ್ಥಿಗಳಿಗೆ ಇನ್ನಿತರ ಸಹಾಯ ಕೇಳಿ ಬಂದವರಿಗೆ ಉದಾರ ಸಹಾಯ ಮಾಡುತ್ತಿದ್ದ ದಿ.ಎ.ಬಿ.ಪಂಡಿತ ವಕೀಲರು. ದಕ್ಷ ಇಂಜಿಯನಿರ್ ಎಂದು ಖ್ಯಾತರಾಗಿ ನಿವೃತ್ತರಾಗಿರುವ ಶ್ರೀ ಸುಭಾಶ ಆರ್.ಕಾವೇರಿ ಗುಲಬರ್ಗಾ ಪ್ರದೇಶದ ಪ್ರಗತಿಗಾಗಿ ಶಕ್ತಿ ಮೀರಿ ಶ್ರಮಿಸಿದ ಜೈನಧರ್ಮೀಯರು. “ಹೈದರಾಬಾದ್ ಕರ್ನಾಟಕದ ಜೈನ ಸಾಹಿತ್ಯ ಎಂಬ ಶೀರ್ಷಿಕೆಯನ್ನು ಸ್ವೀಕರಿಸಿ ಅದರೊಳಗೆ ಹೈದರಾಬಾದ ಕರ್ನಾಟಕ ಪ್ರದೇಶವನ್ನು ಆಳಿದ ರಾಜರ ಕಾಲದ ಜೈನ ಸಾಹಿತ್ಯ ಎಂದು ಅನ್ವಯಿಸಿಕೊಂಡರೆ ಅಲ್ಲಿಗೆ ಇಡೀ ಕನ್ನಡ ಸಾಹಿತ್ಯದ ಶ್ರೇಷ್ಠ ಕೃತಿಗಳ ಸಿಂಹ ಪಾಲು ಹೈ. ಕ.ಭಾಗದ ಕೊಡುಗೆಯೇ ಆಗುತ್ತದೆ.”[9] ಎಂಬ ಪ್ರೊ. ಕಮಲಾ ಹಂಪನಾರವರ ಮಾತು ಸತ್ಯವಾದುದು. ಅದರಲ್ಲೂ ಕಲಬುರ್ಗಿ ಜಿಲ್ಲೆಗೆ ಬಹುಸಲ್ಲುತ್ತದೆ. ಈ ವಿಷಯ ನೂರಾರು ಪುಟಗಳಿಗೂ ಮಿಕ್ಕ ಸಂಪ್ರಬಂಧವಾಗ ಬಲ್ಲದುದನ್ನು ೩೦ – ೪೦ ಪುಟಗಳಲ್ಲಿ ಸಂಕಲಿಸುವುದು ಕಷ್ಟದ ಕೆಲಸ. ಲಭ್ಯವಿರುವ ಆಕರಗಳನ್ನು ಪರಿಶೀಲಿಸಿ ಸ್ವತಃ ಕ್ಷೇತ್ರ ಕಾರ್ಯ ಮಾಡಿ ಈ ಕಾರ್ಯಮುಗಿಸಿದ್ದೇನೆ. ಆದರೂ ಈ ಜಿಲ್ಲೆಯ ಆಳಂದ, ತಡಕಲ್, ಖಜೂರಿ, ಅಫಜಲ್ಪೂರ, ಅತ್ನೂರ, ಕರ್ಜಗಿ, ಮಳಖೇಡ, ಸೇಡಮ್, ಆಡಕಿ, ಚಿಂಚೋಳಿ, ಸುಲೇಪೇಟ, ಮಂಗಲಗಿ, ಗಡಿಕೇಶ್ವಾರ, ಚಿತ್ತಾಪೂರ, ತೆಂಗಳಿ, ಪೇಠಶಿರೂರ, ಕೊಲ್ಲೂರು ಕಲಬುರ್ಗಿ, ಅಲ್ಲೂರು, ಚಿತ್ತಾಪೂರ, ರಾಮತೀರ್ಥ, ಕಾಳಗಿ, ಗೋಗಿ, ಮಳ್ಳಿ, ಜೇವರ್ಗಿ, ಕುಳಗೇರಿ, ಮಾಲಗತ್ತಿ, ಮಲ್ಲಾ, ಅಗ್ನಿ, ಮುನೇರಬೊಮ್ಮನಹಳ್ಳಿ, ಮಣ್ಣೂರ, ಭಂಕೂರು, ಇಂಗಳಗಿ (ವಾಡಿ ಹತ್ತಿರ) ಗಂವ್ಹಾರ, ಸಗರ, ಯಾದಗಿರಿ, ಮಿರಿಯಾಣ, ಹಗರಟಗಿ, ಕೆಂಭಾವಿ ಇನ್ನಿತರ ಊರುಗಳ ಪುನರ್ ಶೋಧನೆಯಾಗಬೇಕು. ಸಾಲುಬೆಟ್ಟಗಳನ್ನು ಪರಿಶೀಲಿಸಬೇಕು. ಆಗ ಈ ಪ್ರದೇಶದ ನಿಚ್ಚಳ ಜೈನೇತಿಹಾಸ ಸಿಕ್ಕೀತು.

[1] ಜೈನ ಜನಪದ ಹಾಡುಗಳು, ಸಂ. ಡಿ.ಎನ್. ಅಕ್ಕಿ, ಶ್ರೀಮತಿ ಸುಮಂಗಲ ಡಿ. ಅಕ್ಕಿ

[2] ಜೈನ ಜನಪದ ಹಾಡುಗಳು, ಹಾಡಿದವರು ದಿ. ಶ್ರೀಮತಿ ಶ್ರೀಕಾಂತಮ್ಮ ನಾಭಿರಾಜ ಅಕ್ಕಿ ಸಂಪಾದನೆ. ಡಿ.ಎನ್. ಅಕ್ಕಿ, ಶ್ರೀಮತಿ ಸುಮಂಗಲ ಡಿ. ಅಕ್ಕಿ.

[3] ಮೋನಣ್ಣ, ಶ್ರೀಮತಿ ಶ್ರೀಕಾಂತಮ್ಮ ನನ್ನ ತಾಯಿಳ ಹಿರಿಯ ತಮ್ಮ ದಿ.ಶ್ರೀ ಮೋಹನ ಚಂದ ಕಿರಣಗಿ

[4] ನನ್ನ ಹಿರಿಯ ಮಗ ನನ್ನ ತಾಯಿಯ ಮೊಮ್ಮಗ ಬ್ರಹ್ಮರಾಜು (ಬಮ್ಮಣ್ಣ)ನ ಕುರಿತು ನನ್ನವ್ವ ಹಾಡಿದ್ದು.

[5] ಶೀತಲ, ನಾಭಿರಾಜ ನನ್ನ ೨ನೇ ಮಗ, ಮೊಮ್ಮಗನ ಮೇಲಿನ ಅಕ್ಕರತೆ ಹೀಗೆ ಹಾಡಿಸಿದೆ.

[6] ಹಡದವ್ವ ಹಾಡ್ಯಾಳ ಸಂಪಾದನೆ. ಡಿ.ಎನ್. ಅಕ್ಕಿ

[7] ಹಡದವ್ವ ಹಾಡ್ಯಾಳ ಸಂಪಾದನೆ. ಡಿ.ಎನ್. ಅಕ್ಕಿ

[8] ಹಡದವ್ವ ಹಾಡ್ಯಾಳ ಸಂಪಾದನೆ. ಡಿ.ಎನ್. ಅಕ್ಕಿ

[9] ಬದ್ದವಣ : ಪ್ರೊ. ಕಮಲಾ ಹಂಪನಾ.