ಶರಣಬಸವೇಶ್ವರ ದೇವಸ್ಥಾನ

ತಾ. ಗುಲಬರ್ಗಾ
ದೂರ : ೧ ಕಿ.ಮೀ.

ಮೂಲತಃ ಜೇವರ್ಗಿ ತಾಲೂಕಿನ ಅರಳಗುಂಡಿಯವರಾದ ಶರಣ ಬಸವೇಶ್ವರರು (೧೭೪೬ – ೧೮೨೨) ವೀರಶೈವ ಧರ್ಮದ ಪ್ರಚಾರ ಮಾಡುತ್ತ ಗುಲಬರ್ಗಾಕ್ಕೆ ಬಂದು ನೆಲೆ ನಿಂತು ಅದನ್ನೇ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡು ತ್ರಿವಿಧ ದಾಸೋಹ ಮೆರೆದು ಮಡಿದರು.  ಶರಣ ಬಸವೇಶ್ವರರ ಸಮಾಧಿಗೆ ನಂತರದಲ್ಲಿ ಗೋಪುರ ರಚಿಸಿದ್ದು ಇದೇ ಇಂದಿನ ಶರಣಬಸವೇಶ್ವರ ದೇವಾಲಯವಾಗಿದೆ. ಶರಣಬಸವೇಶ್ವರರಿಗೆ ಕಲ್ಬುರ್ಗಿಯಲ್ಲಿ ನೆಚ್ಚಿನ ಶಿಷ್ಯರಾಗಿ ನಿಂತವರು ದೊಡ್ಡಪ್ಪ ಶರಣರು.

ಶರಣಬಸವೇಶ್ವರರ ಸಮಾಧಿ ಇರುವ ಗರ್ಭ ಗೃಹದಲ್ಲಿ ಗದ್ದುಗೆಯ ಮೇಲೆ ಗುರು ಶಿಷ್ಯರ ಅವಿನಾಭಾವ ಸಂಬಂಧ ಹಾಗೂ ಸಾಮರಸ್ಯಗಳನ್ನು ಸೂಚಿಸಲು ಶರಣಬಸವೇಶ್ವರ ಹಾಗೂ ಅವರ ಗುರುಗಳ ಬೆಳ್ಳಿಮುಖಗಳನ್ನುಳ್ಳ ಜೋಡಿ ಮೂರ್ತಿಯನ್ನು ಪ್ರಾತಿನಿಧಿಕವಾಗಿ ಪ್ರತಿಷ್ಠಾಪಿಸಿದ್ದು, ಇಂದು ಇದೇ ಭಕ್ತರ ಆರಾಧನಾ ಬಿಂದುವಾಗಿದೆ.  ಇದನ್ನು ಬಳಸಿ ವಿಶಾಲವಾದ ಸಭಾ ಮಂಟಪವಿದ್ದು ಪ್ರದಕ್ಷಿಣಾ ಪಥವೂ ಇದೆ.  ಅರೆ ಕಂಬ, ಬಿಡ ಕಂಬ, ಜೋಡಿ ಕಂಬ ಹಾಗೂ ೩೬ ಕಮಾನುಗಳನ್ನು ಬಳಸಿ ನಿರ್ಮಿಸಿದ್ದು ಹಾಗೂ ವಿಶಿಷ್ಟ ಹೂ-ಬಳ್ಳಿಗಳಿಂದ ನಿರ್ಮಿಸಿದ್ದು, ಛಾವಣಿಯು ವಿಶಿಷ್ಟವಾಗಿದೆ.

ಶ್ರಾವಣ ಮಾಸದಲ್ಲಿ ನಡುವಣ ಸೋಮವಾರ ಶರಣಬಸವೇಶ್ವರರ ಪಲ್ಲಕ್ಕಿ ಉತ್ಸವ ಜರಗುತ್ತಿದ್ದು, ಅಂದು ಸಾವಿರಾರು ಜನ ಬಂದು ಪಾಲ್ಗೊಳ್ಳುತ್ತಾರೆ. ಶರಣ ಬಸವೇಶ್ವರ ಮಹಾದಾಸೋಹ ಪೀಠವು ಇಂದು ಶ್ರೀ ಶರಣಬಸವೇಶ್ವರ ವಿದ್ಯಾ ಸಂಸ್ಥೆಯ ಮೂಲಕ ಜ್ಞಾನ ದಾಸೋಹ ಕಾರ್ಯದಲ್ಲೂ ತನ್ನನ್ನು ತೊಡಗಿಸಿಕೊಂಡಿದೆ.

ಖ್ವಾಜಾ ಬಂದೇ ನವಾಜ್ ದರ್ಗಾ           

ತಾ. ಗುಲಬರ್ಗಾ
ದೂರ : ೨ ಕಿ.ಮೀ.

ಗುಲಬರ್ಗಾದಲ್ಲಿರುವ ಸೂಫಿ ಸಂತ ಖ್ವಾಜಾ ಬಂದೆ ನವಾಜರ ಸಮಾಧಿಯ ಮೇಲೆ ಕಟ್ಟಲಾಗಿರುವ ಇಂಡೋ – ಸಾರಸೆನಿಕ್ ಶೈಲಿಯ ಸುಂದರ ಕಟ್ಟಡ ಮುಸ್ಲಿಂ ಭಕ್ತರ ಹೃದಯಗಳಲ್ಲಿ ಒಂದು ಬಗೆಯ ಹೆಮ್ಮೆಯನ್ನು ಆದರವನ್ನು ಉಂಟು ಮಾಡುವಂತದೆಂಬುದರಲ್ಲಿ ಸಂದೇಹವಿಲ್ಲ.

ಈ ಸೂಫಿ ಸಂತನ ದರ್ಗಾಕ್ಕೆ ದಿನನಿತ್ಯವೂ ನೂರಾರು ಜನ ಮುಸ್ಲಿಮರೂ, ಹಿಂದೂಗಳು ಭೇಟಿ ಕೊಡುತ್ತಾರೆ.  ಗುಲಬರ್ಗಾ ನಗರಕ್ಕೆ ಯಾರೇ ಹೋದರೂ ಅವರು ಎರಡು ಸ್ಥಳಗಳನ್ನು ನೋಡದೆ ಹಿಂದಿರುಗುವುದಿಲ್ಲ.  ಒಂದು ಶರಣಬಸವೇಶ್ವರ ದೇವಾಲಯ ಮತ್ತೊಂದು ಖ್ವಾಜಾ ಬಂದೇ ನವಾಜ ಗೋರಿ.  ಸಾಮಾಜಿಕ ಸಮರಸತೆ, ಕಾಯಕದ ಮಹತ್ವ, ಧಾರ್ಮಿಕ ಸಹಿಷ್ಣುತೆ ಮೊದಲಾದ ಸದ್ಗುಣಗಳನ್ನು ಬೋಧಿಸಿದ ಶರಣರು ಜನಮಾನಸದಲ್ಲಿ ಅವರರಾಗಿ ಯಾವಾಗಲೂ ಉಳಿಯುತ್ತಾರೆ.  ವರ್ಷಕ್ಕೊಮ್ಮೆ ನಡೆಯುವ ಉರುಸಿನಲ್ಲಿ ಸುಮಾರು ಒಂದು ಕೋಟಿ ಜನ ಭಾಗವಹಿಸುತ್ತಾರೆ.

ಪ್ರತಿ ಚಂದ್ರಮಾಸದ ೧೫ನೇ ತೇರಾ ದರ್ಗಾದಲ್ಲಿ ನಡೆಯುವ ಉತ್ಸವಗಳಲ್ಲಿ ಪಾಲ್ಗೊಳ್ಳವ ಶ್ರದ್ಧಾಳುಗಳಲ್ಲಿ ಬಹುಮಂದಿ ಭಾವುಕರಾಗಿ ಮೈಮರೆತು ನರ್ತಿಸುವುದು ಸರ್ವೆಸಾಮಾನ್ಯ.  ಗ್ರಂಥಾಲಯದಲ್ಲಿ ಉರ್ದು, ಪರ್ಷಿಯನ್ ಹಾಗೂ ಅರೇಬಿಕ್ ಭಾಷೆಯ ಸುಮಾರು ಹತ್ತು ಸಾವಿರ ಗ್ರಂಥಗಳಿವೆ.

 

ಗುಲಬರ್ಗಾ ಕೋಟೆ      

ತಾ.ಗುಲಬರ್ಗಾ
ದೂರ : ೩ ಕಿ.ಮೀ.

ರಾಜಾಗುಲಚಂದ ನಿರ್ಮಿಸಿದ ಕಲ್ಬುರ್ಗಿ ಕೋಟೆಯನ್ನು ಮುಂದೆ ಛದ್ರಹೊಳಿಸಿದ್ದು ಅಲ್ಲಾವುದ್ದಿನ್ ಬಹಮನಿ.  ಕೊಡ್ಡ ಕಟ್ಟಡಗಳು, ಮಸೀದಿಗಳು, ದೇವಾಲಯ, ಅಶ್ವಶಾಲೆ ಶಸ್ತ್ರಾಸ್ತ್ರ ಕೋಠಿ ೨೬ ಫಿರಂಗಿಗಳು, ೧೫ ಗೋಪುರಗಳು ಇಲ್ಲಿಯ ವಿಶೇಷ.

೩೮ ಸಾವಿರ ಚದರ ಅಡಿ ಪ್ರದೇಶವನ್ನು ವ್ಯಾಪಿಸಿರುವ ಗುಮ್ಮಟಗಳ ಕಮಾನುಗಳ ಜುಮ್ಮಾ ಮಸೀದಿ.  ಸ್ಪೈನ್ ದೇಶದಲ್ಲಿರುವ ಕಾರ್ಡೋಬಾ ಮಸೀದಿಯನ್ನು ನೆನಪಿಸುತ್ತದೆ. ಇಲ್ಲಿ ಕುಸಿಯುತ್ತಿರುವ ಕೋಟೆಗಳು ಕರ್ನಾಟಕದ ಉರುಳಿ ಹೋದ ಇತಿಹಾಸದ ಕಥೆಯನ್ನು ಹೇಳುತ್ತವೆ.  ಸುಲ್ತಾನ ಹಸನ್ ಘಿಯಾಸುದ್ದೀನ್ ಗೋರಿಗಳು, ಫಿತೋಜ್ ಶಹಾ ಮತ್ತು ಅವರ ಕುಟುಂಬದವರ ಸಮಾಧಿ ನಗರ ಹೊರವಲಯದಲ್ಲಿರುವ ಹಫ್ತ ಗುಂಬಜ್ ಮತ್ತು ನಗರದಲ್ಲಿರುವ ಸುಂದರವಾದ ಮಸೀದಿಗಳು ನೋಡಲೇಬೇಕಾದ ಸ್ಥಳಗಳು.

 

ಬುದ್ಧ ವಿಹಾರ   

ತಾ. ಗುಲಬರ್ಗಾ
ದೂರ : ೩ ಕಿ.ಮೀ.

ಏಷ್ಯದ ಎರಡನೇ ಅತಿ ದೊಡ್ಡ ಬುದ್ಧನ ಗುಮ್ಮಟ ಮಾದರಿಯ ಬೃಹದಾಕಾರದ ಕಟ್ಟಡ.  ಬಿಸಿಲೂರಿನ ಗುಲಬರ್ಗಾದಲ್ಲಿ ಅಧಿಕೃತವಾಗಿ ೦೭-೦೧-೨೦೦೯ ರಂದು ರಾಷ್ಟ್ರದ ಪ್ರಥಮ ಪ್ರಜೆಯಾದ ಶ್ರೀಮತಿ ಪ್ರತಿಭಾದೇವಿ ಸಿಂಗ್ ಪಾಟೀಲ್ ಅವರಿಂದ ಉದ್ಘಾಟಿಸ್ಪಟ್ಟ ಈ ಬೃಹದಾಕಾರದ ಗುಮ್ಮಟದಲ್ಲಿರುವ ಬಂಗಾರ ಲೇಪಿತ ಬೃಹತ್ ಬುದ್ಧನ ವಿಗ್ರಹ ಏಷ್ಯಾದಲ್ಲಿಯೇ ಅತಿದೊಡ್ಡ ವಿಗ್ರಹವಾಗಿದೆ.  ಇದು ಕಲೆ, ಸಾಹಿತ್ಯ, ಸಂಸ್ಕೃತಿ ಮತ್ತು ಸರ್ವಧರ್ಮ ಸಮಾನತೆಗೆ ಗುಲಬರ್ಗಾ ಜಿಲ್ಲೆಯು ಇಡೀ ದೇಶಕ್ಕೆ ಮಾತ್ರವಲ್ಲ ವಿಶ್ವಕ್ಕೂ ಕೂಡ ಮಾದರಿಯಾಗಿದೆ.