ನಾವು ಗುಲಾಮರು : ನಮಗೆಂದಿಗೂ
ಬೇಕಾಗಿಲ್ಲ ಬಿಡುಗಡೆ, ನಾವು ಹುಟ್ಟು
ಗುಲಾಮರು ; ನಮ್ಮದಲ್ಲದ ನೊಗವ
ಸದಾ ಹೆಗಲಲ್ಲಿ ಹೊತ್ತು ಮೆರೆಯುವವರು.

ಶತಮಾನಗಳ ಕಾಲ ಕೊರಳ ಪಟ್ಟಿಯಲ್ಲೇ
ಬೆಳೆದ ನಾಯಿಗಳು ನಾವು. ಬಿಚ್ಚಿದರೂ
ಮತ್ತೆ ಅಭ್ಯಾಸ ಬಲದಿಂದ ಅಲ್ಲೇ ನಿಂತು
ಟೇಬಲ್ಲಿನಿಂದುದುರುವೆಂಜಲಿಗಾಗಿ
ನಾಲಗೆ ಚಾಚಿ ನಿಂತ ಸೊಣಗಗಳು ನಾವು.
ಶುದ್ಧ ಗುಲಾಮರು.

ಇಲ್ಲ, ನಮಗೆ ನಾಚಿಕೆಯಿಲ್ಲ ; ನಾಚಿಕೆ-
ಯೆಂದರೇನೆಂದೂ ನಮಗೆ ಗೊತ್ತಿಲ್ಲ.
ಹೊತ್ತು ಹೊತ್ತಿಗೆ ಕತ್ತೆಯ ಕಾಲು ಹಿಡಿದು
ಬೆಲೆಯಿದ್ದದ್ದನೆಲ್ಲ ಕೊಲೆ ಮಾಡಿ ಬಡಿದು
ದೊಡ್ಡ ಮಾತುಗಳ ಹಲಗೆ ಹಿಡಿದು ಕುಣಿ-
ದಿದ್ದೇವೆ. ನಮ್ಮತನವೆಲ್ಲವನ್ನೂ ಹರಾಜಿಗಿಟ್ಟು
ನಿಂತಿದ್ದೇವೆ ಸ್ವಾಮಿ, ನಾವು ಗುಲಾಮರು.

ಬಿಡುಗಡೆ ಬಂತೆ ಈ ದೇಶಕ್ಕೆ ? ಬಿಡುಗಡೆಯ ಕೆಚ್ಚು
ನೂರಕ್ಕೆ ಐದರಷ್ಟಾದರೂ ಇದೆಯೆ ನಮ್ಲಲ್ಲಿ ?
ನಮಗೊ ಅಂತರ್ರಾಷ್ಟ್ರೀಯ ರೋಗ. ಇದರ
ಲಕ್ಷಣ-ಇಲ್ಲಿನದು ಏನೂ ದಕ್ಕುವುದಿಲ್ಲ.
ನಮ್ಮ ಹೆಂಗಸರನ್ನು ಸೌಂದರ್ಯಸ್ಪರ್ಧೆಗೆ
ಕಳಿಸಿ, ನ್ಯೂಯಾರ್ಕಿನಲ್ಲಿ ನ್ಯಾಯಮೂರ್ತಿಗಳೆದುರು
ಅರೆಬೆತ್ತಲೆಯಲ್ಲಿ ನಿಲ್ಲಿಸಲೂ ಹಿಂಜರಿವ
ಜನವಲ್ಲ ನಾವು, ಶುದ್ಧ ಗುಲಾಮರು.

ನಾವು ಸೆಂಟ್‌ಪರ್ಸೆಂಟ್ ಗುಲಾಮರು. ಪೂರ್ವದಿಂದ
ಪಶ್ಚಿಮಕ್ಕೆ ಅಗ್ಗದ ಬಟ್ಟೆಯ ಮಗ್ಗದಲ್ಲಿ ಸದಾ
ಲಾಳಿಯಾಡುವ ಮಂದಿ. ಇದ್ದ ಆತ್ಮವನು ಕುತ್ತಿಗೆ
ಹಿಸುಕಿ, ವಿಲಾಯಿತಿಯ ಹುಲ್ಲನು ತುರುಕಿ
ನಿಲ್ಲಿಸಿದ ಬೆದರು ಬೊಂಬೆಗಳು ನಾವು.
ಶುದ್ಧ ಗುಲಾಮರು, ನಾವು ಶುದ್ಧ ಗುಲಾಮರು.