ಭಾರತ ದೇಶವು ಹತ್ತಿ ಬಟ್ಟೆಯ ತಯಾರಿಕೆಯ ಜನ್ಮಸ್ಥಳವೆಂದು ಪರಿಗಣಿಸಲ್ಪಡುತ್ತದೆ. ಸಮಗ್ರ ಪ್ರಪಂಚದಲ್ಲಿ ಭಾರತೀಯರೇ ಪ್ರಥಮ ಬಟ್ಟೆ ಉತ್ಪಾದಕರೆಂದು ದೇಶ ವಿದೇಶಿ ಇತಿಹಾಸಕಾರರು ಒಮ್ಮತದಿಂದ ಒಪ್ಪುತ್ತಾರೆ. ಭಾರತದ ಬನಾರಸ್‌, ಬ್ರೋಕೆಡೆಸ್ಟ್‌, ಡಮಸ್ನಾಜ್‌, ಬಲಮುರಿ ಬುಟ್ಟೆದಾರ ಸೀರೆ ಮತ್ತು ಸ್ಕಾರಪ್ಸ್‌, ಡಾಕಾದ ಮಸಲಿನ್‌, ಜಾಮದಾನಿ ಸೀರೆ ಹಾಗೂ ಕುಪ್ಪಸಗಳಿಗೆ ಜಗತ್ತಿನ ತುಂಬ ಬೇಡಿಕೆ ಇಂದಿಗೂ ಇದೆ.

ಪಾಹಿಯಾನ್‌, ಹುಯನ್‌ತ್ಸಾಂಗ್‌, ವಾರ್ತಾಯನ್‌, ಬರ್ಮಿಲ್‌, ಮತ್ತು ಮಾರ್ಕೋಫೋಲೊ ಇನ್ನೂ ಅನೇಕ ವಿದೇಶಿ ಪ್ರವಾಸಿಗರು ತಮ್ಮ ತಮ್ಮ ಪ್ರವಾಸ ಕಥನಗಳಲ್ಲಿ ಭಾರತೀಯರ ಕೈಮಗ್ಗ ಉದ್ದಿಮೆಯ ವೈಭವವನ್ನು ಪ್ರಸ್ತಾಪಿಸಿದ್ದಾರೆ. ಅದರಲ್ಲಿಯೂ ಪ್ರಮುಖವಾಗಿ ಕರ್ನಾಟಕದಲ್ಲಿ ಉತ್ತಾದಿಸಲ್ಪಟ್ಟ ಬಟ್ಟೆಗಳನ್ನು ಗ್ರೀಕ್‌ ದೇಶಕ್ಕೆ ನಿರ್ಯಾತ ಮಾಡಲಾಗುತ್ತಿತ್ತೆಂದು ತಿಳಿದು ಬಂದಿದೆ. ಈ ನೇಕಾರಿಕೆಯ ಕೈಮಗ್ಗದ ಉದ್ದಿಮೆ ಹೆಚ್ಚು ಜನಗಳಿಗೆ ಉದ್ಯೋಗವನ್ನು ಕಲ್ಪಸಿಕೊಟ್ಟಿದೆ. ತಮಿಳನಾಡು, ಆಂಧ್ರಪ್ರದೇಶ, ಉತ್ತರ ಪ್ರದೇಶ, ಮಹಾರಾಷ್ಟ್ರ, ಕೇರಳ, ಬಿಹಾರ, ಓರಿಸ್ಸಾ, ಪಶ್ಚಿಮ ಬಂಗಾಳ, ಹರಿಯಾಣ ಹಾಗೂ ಕರ್ನಾಟಕ ರಾಜ್ಯಗಳಲ್ಲಿ ಕೈಮಗ್ಗದಿಂದ ನೇಯ್ದ ಬಟ್ಟೆಗಳು ತಯಾರಾಗುತ್ತವೆ. ಇವುಗಳಲ್ಲಿ ಕರ್ನಾಟಕವು ಬಹುದೊಡ್ಡ ಪ್ರಮಾಣದಲ್ಲಿ ನೂಲಿನ ಮತ್ತು ರೇಷ್ಮೆ ಬಟ್ಟೆಗಳನ್ನು ಉತ್ಪಾದಿಸುತ್ತದೆ.

ಗುಡಿ ಕೈಗಾರಿಕೆಗಳಲ್ಲಿ ಕೈಮಗ್ಗ ಉದ್ದಿಮೆ ಪ್ರಮುಖ ಕ್ಷೇತ್ರವಾಗಿದ್ದು ಗ್ರಾಮೀಣ ಪ್ರದೇಶಗಳಲ್ಲಿ ಕೇಂದ್ರೀಕೃತಗೊಂಡಿರುತ್ತದೆ. ಅತಿ ಕಡಿಮೆ ಬಂಡವಾಳದಿಂದ ಹೆಚ್ಚು ಜನರಿಗೆ ಉದ್ಯೋಗ ನೀಡುವ ಕ್ಷೇತ್ರವಾಗಿದೆ. ಹಿಂದೊಂದು ಕಾಲದ ಕರ್ನಾಟಕ ರಾಜ್ಯದಲ್ಲಿ ಒಂದು ಲಕ್ಷ ಐವತ್ತು ಸಾವಿರ ಮಗ್ಗಗಳು ಇದ್ದವು. ಇದೊಂದು ಇತಿಹಾಸ. ಸದ್ಯ ಎಂಭತ್ತೈದು ಸಾವಿರ ಮಗ್ಗಗಳಿದ್ದು ಅವುಗಳಲ್ಲಿ ಇಪ್ಪತ್ತೈದು ಸಾವಿರ ಮಗ್ಗಗಳು ಬಾಗಲಕೋಟೆ ಜಿಲ್ಲೆಯೊಂದರಲ್ಲಿಯೇ ಇದ್ದುದು ಕಂಡು ಬರುತ್ತದೆ. ಈ ಜಿಲ್ಲೆಯಲ್ಲಿ ಸುಮಾರು ಅರವತ್ತು ನೇಕಾರರ ಸಹಕಾರಿ ಸಂಘಗಳು ಇವೆ. ಇವುಗಳಲ್ಲಿ ಆರು ಸಾವಿರ ಕೈಮಗ್ಗಗಳು ಸಹಕಾರಿ ಕ್ಷೇತ್ರದಲ್ಲಿ ಉಳಿದ ಹತ್ತೊಂಭತ್ತು ಸಾವಿರ ಮಗ್ಗಗಳಲ್ಲಿ ನಾಲ್ಕು ಸಾವಿರ ಕೈಮಗ್ಗಗಳು ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದಡಿಯಲ್ಲಿ ಉಳಿದ ಹದಿನೈದು ಸಾವಿರ ಕೈಮಗ್ಗಗಳು ಅಸಂಘಟಿತ ವಲಯದಲ್ಲಿ ಇದ್ದುದು ಸರಕಾರಿ ಅಂಕಿ ಅಂಶಗಳಿಂದ ತಿಳಿದು ಬರುತ್ತದೆ.

ಗುಳೇದಗುಡ್ಡ, ಕಮತಗಿ, ಅಮೀನಗಡ, ಸೂಳೇಭಾವಿ, ಗುಡೂರ, ಇಳಕಲ್ಲ, ಶಿರೂರ, ನಾಗರಾಳ, ಹವೇಲಿ, ಗಿರಿಸಾಗರ, ಬೀಳಗಿ, ಕೊಂಕಣಕೊಪ್ಪ, ರಬಕವಿ, ಬನಹಟ್ಟಿ, ತೇರದಾಳ, ಮಹಾಲಿಂಗಪೂರ, ರಾಂಪೂರ, ಕೋಡಿಹಾಳ, ಹುಲ್ಯಾಳ, ಗೋವಿನಕೊಪ್ಪ, ಕೆರೂರ, ಹೊಸೂರ ಹೆಚ್ಚು ಕೈಮಗ್ಗಗಳಿರುವ ಪ್ರಮುಖ ಊರುಗಳಾಗಿವೆ. ಇಳಕಲ್ಲಿನಲ್ಲಿ ಹತ್ತಾರು ವಿನ್ಯಾಸಗಳ ಸೀರೆಗಳು, ಗುಳೇದಗುಡ್ಡದಲ್ಲಿ ಖಣಗಳು, ರಬಕವಿ, ಬನಹಟ್ಟಿ, ರಾಂಪೂರ, ಮಹಾಲಿಂಗಪೂರಗಳಲ್ಲಿ ಹತ್ತಿ ನೂಲಿನ ಸೀರೆಗಳು ಉತ್ಪಾದನೆಗೊಳ್ಳುತ್ತಿವೆ. ಕೆರೂರಿನಲ್ಲಿ ಚಮಕಾ ಸೀರೆ ಖಣಗಳು ತಯಾರಾಗುತ್ತಿವೆ. ಬೇಲೂರ ಜಾಲಿಹಾಳಗಳಲ್ಲಿ ಚಮಕಾ ಖಣಗಳು ಸಿದ್ಧಗೊಳ್ಳುತ್ತವೆ. ಇತ್ತಿತ್ತಲಾಗಿ ಇಲ್ಲಿನ ನೇಕಾರರು ಕೈಮಗ್ಗಗಳನ್ನು ತೊರೆದು ವಿದ್ಯುತ್‌ಚಾಲಿತ ಮಗ್ಗಗಳಿಗೆ ಆಕರ್ಷಿತರಾಗುತ್ತಿದ್ದಾರೆ.

ಇಂದಿಗೂ “ಉಟ್ಟರೆ ಇಳಕಲ್ಲ ಸೀರೆ ಉಡಬೇಕು ತೊಟ್ಟರೆ ಗುಳೇದಗುಡ್ಡದ ಖಣ ತೊಡಬೇಕು” ಎಂಬ ಗಾದೆ ಮಾತೊಂದು ಬೆಳೆದು ಬಂದಿದೆ. ಇಳಕಲ್ಲಿನ ಸೀರೆಗಳಿಗೆ ವಿಷೇಶವಿರುವ ಹಾಗೆ ಗುಳೇದಗುಡ್ಡ ಖಣಗಳಿಗೂ ಅದರ ಉತ್ಪಾದನೆಗೂ ಒಂದು ವಿಶೇಷ ಸ್ಥಾನಮಾನವಿದೆ. ಅಂತೆಯೇ “ಗುಳೇದಗುಡ್ಡಕೊಮ್ಮೆ ಅಕ್ಕವ್ವ ನೀ ಬಾರ ಬರುವಾಗ ಖಣಗಳಿಗೆ ರೂಪಾಯಿ ತಾರ”. ಹೀಗೆ ಹಾಡಿದ ಕವಿವಾಣಿಗೆ ಆಧಾರವಿರುವ ವಸ್ತುಸ್ಥಿತಿ. ಇಲ್ಲಿನ ನೇಕಾರರ ಬದುಕಿಗೆ ಹಿಡಿದ ಕೈಗನ್ನಡಿ. ಬಾಗಲಕೋಟೆ ಜಿಲ್ಲೆಯ ಚಾಲುಕ್ಯರ ನೆಲದ ಬಾದಾಮಿ ತಾಲೂಕಿನ ಪ್ರಮುಖ ಊರು ಗುಳೇದಗುಡ್ಡ. ಇಳಕಲ್ಲು ಸಾಂಪ್ರದಾಯಿಕ ಸೀರೆಗಳಿಗೆ ಪ್ರಸಿದ್ಧಿ ಪಡೆದಿದ್ದರೆ ಗುಳೇದಗುಡ್ಡವು ಸಾಂಪ್ರದಾಯಿಕ ಖಣಗಳಿಗೆ ಖ್ಯಾತಿ. ಇಳಕಲ್ಲಿನ ಕೈಮಗ್ಗದ ಮನಮೋಹಕ ಸೀರೆಗಳು ಮಹಿಳೆಯರಿಗೆ ಮಾನವಾದರೆ, ಗುಳೇದಗುಡ್ಡದ ಕೈಮಗ್ಗ ಖಣಗಳು ಮುದ್ದು ಮುಖಗಳ ನಾರಿಯರ ಎದೆಗಪ್ಪುವ, ಒಪ್ಪುವ ಚಲುವಿನ ಚಿತ್ತಾರದ ಖಣಗಳು ಮತ್ತು ಹಲವು ಬಗೆಯವು. ಖಣ ಎಣದರೆ ಕುಪ್ಪಸ. ಇಲ್ಲಿನ ಖಣಗಳು ಮಹಾರಷ್ಟ್ರದ ಮಹಿಳೆಯರಿಗಂತೂ ಬಲು ಪ್ರಿಯವಾದ ಉಡುಗೆ-ತೊಡುಗೆ. ಇಲ್ಲಿನ ಖಣಗಳ ಖ್ಯಾತಿಗೆ ಐದು ಶತಮಾನಗಳಿಗೂ ಹೆಚ್ಚು ವರ್ಷಗಳ ಇತಿಹಾಸ, ಪರಂಪರೆ ಇದೆ. ಊರಿನ ಯಾವುದೇ ಓಣಿಯಲ್ಲಿ ನಡೆದು ಹೋದರೂ ಸರಿ, ಕಿವಿಗಳಿಗೆ ಕೇಳುವ ಸಂಗೀತಮಯ ಶಬ್ದ ಚಟ್ಟಕ್‌ಪಟ್ಟಕ್‌, ಚಟ್ಟಕ್‌ಪಟ್ಟಕ್‌ ಆದರೆ ಈಗ ನೇಕಾರರು ಏರಿದರೆ ಪಟ್ಟಕ್ಕೆ ಇಲ್ಲವೇ ಚಟ್ಟಕ್ಕೆ. ಈ ಮಾತಿಗೆ ಪುಷ್ಠಿಕೊಡುವ ಹಾಗೆ ಸಾಯಂಕಾಲದ ಸಮಯದಲ್ಲಿ ಓಣಿ ಓಣಿಗಳಲ್ಲಿ ನೇಕಾರರ ಮಕ್ಕಳು ಆಡುವಾಗ ಹಾಡುವುದನ್ನು ಕೇಳಿಸಿಕೊಂಡರೆ ಹೌದೆನ್ನಿಸುತ್ತದೆ.

ಚಟ್ಟಕ್ಪಟ್ಟಕ್ಪುಟ್ಯಾಗ ರೊಟ್ಟಿಲ್ಲ
ಕಾಗಿ ಕಾಗಿ ಕವ್ವಾ, ಯಾರ ಬಂದಾರವ್ವಾ
ಮಾವಾ ಬಂದಾನವ್ವಾ, ಏನ ತಂದಾನವ್ವಾ
ಹಂಡೇದಂಥಾ ಹೊಟ್ಟಿ ಬಿಟಗೊಂಡ ಹಂಗ ಬಂದಾನವ್ವಾ
ಮಾವಗೇನೂಟ, ಬೀಸುಕಲ್ಲ ಗೂಟ

ಎಂದು ಹಾಡುತ್ತ ಆಡುವಾಗ ನೇಕಾರರ ಮಕ್ಕಳ ಬಾಯಿಯಿಂದ ಬರುವ ಈ ಹಾಡಿನ ವಸ್ತುನಿಷ್ಠ ಸ್ಥಿತಿ ಇಂದಿನದು. ಶೇಕಡಾ ತೊಂಭತ್ತೆಂಟರಷ್ಟು ಕುಟುಂಬಗಳು ನೇಕಾರಿಕೆಯ ಕಾಯಕವನ್ನೇ ನಂಬಿಕೊಂಡು ಬಂದಿವೆ.

ಈ ಕಾಯಕಕ್ಕೆ ಬೇಕಾಗುವ ಪರಿಕರಗಳು ಹಾಗೂ ಅವುಗಳ ಕಾರ್ಯವಿಧಾನವನ್ನು ಈ ಕೆಳಗಿನಂತೆ ಗುರುತಿಸಿಕೊಳ್ಳಬೇಕು.

ಮಗ್ಗದ ಕುಣ : ಇದರ ಅಳತೆ ‘೪’ ಅಡಿ ಉದ್ದ ‘೪’ ಅಡಿ ಅಗಲ ‘೪’ ಅಡಿ ಆಳ ಇರುವ ಕುಣಿಗೆಗೆ ಮಗ್ಗದ ಕುಣಿ ಎನ್ನುತ್ತಾರೆ.

ಮಗ್ಗದ ಚೌಕಟ್ಟು : ಮಗ್ಗದ ಕುಣಿಯ ಮೇಲೆ ಇರಿಸಲು ಕಟ್ಟಿಗೆ ಎಳೆಗಳು ಅಳತೆ ‘೪’ ಅಡಿ ಪಿಂಡ (ದಪ್ಪ) ಇರುವ ‘೫’ ಎತ್ತರವಿರುವ ‘೮’ ಎಳೆಗಳಿಂದ ತಯಾರಿಸಿದ ಮಗ್ಗದ ಚೌಕಟ್ಟು.

ಗಾಡ (ಚಕ್ರ) :  ಈ ಮಗ್ಗದ ಚೌಕಟ್ಟಿನ ಮೇಲೆ ಇರಿಸಿ ಬೇರೆ ಬೇರೆ ವಿನ್ಯಾಸ (ಡಿಸೈನ್‌) ಮಾಡಲು ಇದು ಪ್ರಮುಖ ಪಾತ್ರ ವಹಿಸುತ್ತದೆ. ಇದರಲ್ಲಿ ಕೆಲವು ಭಾಗಗಳನ್ನು ಕಬ್ಬಿಣ ಮೊಳೆಗಳಿಂದ ಕಬ್ಬಿಣ ಪಟ್ಟಿಗಳಿಂದ ತಯಾರಿಸಿದ ಕಟ್ಟಿಗೆ ಗಾಡ.

ಹಲಗಿ : ಇದನ್ನು ಕಟ್ಟಿಗೆಯ ಎಳೆಗಳಿಂದ ಹಾಗೂ ಪಟ್ಟಿಗಳಿಂದ ತಯಾರಿಸಿರುತ್ತಾರೆ. ಇದಕ್ಕೆ ಎಡಕ್ಕೆ ಮತ್ತು ಬಲಕ್ಕೆ ಚೌಕ ಕಪಾಳಗಳು (ಬಾಕ್ಸ್‌) ಇದಕ್ಕೆ ದಾರದಿಂದ ಜೋಟಾ ತಯಾರಿಸಿ ಇದನ್ನು ಜಗ್ಗಿದಾಗ ಕಪಾಳದಲ್ಲಿರುವ ಕಟ್ಟಿಗೆ ರೀಲುಗಳಿಂದ ಲಾಳಿ ಓಡಾಡುತ್ತದೆ. ಇದರ ಸಹಾಯದಿಂದ ಹೊಕ್ಕಿನ ಕಂಡರೆ ಎಳೆಯನ್ನು ಗಟ್ಟಿಯಾಗಿ ಬಡಿಯಲು ಉಪಯೋಗಿಸುತ್ತಾರೆ.

ತಟ್ಟು : ಇದನ್ನು ಮೊದಲು ಗಲಿಗಿನ ಕಟ್ಟಿಗಳಿಂದ ತಯಾರಿಸುತ್ತಾರೆ. ಇದರಲ್ಲಿ ಎರಡು ಕಡೆ ದಡಿಗಾಗಿ ಹಾಗೂ ನಡುವೆ ಗರ್ಭ ಅಥವಾ ಒಡ್ಡಲಕ್ಕೆ ಬೇರೆ ಬೇರೆ ಕಡ್ಡಿಗಳಿಂದ ಎರಡು ಕಟ್ಟಿಗೆ ಸೆಳ್ಳುಗಳ ನಡುವೆ ದಾರದ ಸಹಾಯದಿಂದ ಹೆಣೆದು ಬಿಗಿಗೊಳಿಸುತ್ತಾರೆ. ಇದರ ಉದ್ದ ೩೪” ಹಾಗೂ ಅಗಲ ೩” ಇರುತ್ತದೆ. ಇದನ್ನು ಮುಸ್ಲಿಂ ಬಂಧುಗಳು ತಯಾರಿಸುತ್ತಾರೆ. ಇವರಿಗೆ ತಟ್ಟು ಕಟ್ಟುವುದೇ ಒಂದು ವೃತ್ತಿ.

ಚೌಕಕುಂಟಿ ಅಥವಾ ಏಣಿನ (ಅಸ್ಟಪೈಲ್‌) ಕುಂಟಿ : ಇದನ್ನು ಗಟ್ಟಿ ಕಟ್ಟಿಗೆಯಿಂದ ತಯಾರಿಸುತ್ತಾರೆ. ಇದರ ವ್ಯಾಸ ೧೦”, ಇರುತ್ತದೆ. ಅಸ್ಟಪೈಲಿನದಾದರೆ ಕುಂಟಿಗೆ ೮ ಏಣುಗಳು ಇರುತ್ತವೆ. ಇದರ ವ್ಯಾಸ ೧೦”, ಉದ್ದ ೪೦” ಇದು ಬಾಳಿಕೆ ಬರಲು ಎರಡೂ ಕಡೆ ಕಬ್ಬಿಣದಿಂದ ತಯಾರಿಸಿದ ಅನುಸುಗಳನ್ನು ಹಾಕಿರುತ್ತಾರೆ. ಇದು ಸರಳವಾಗಿ ಸುತ್ತಲು ಬರುವಂತೆ ರಚಿಸಿ ಇದರ ಮೇಲೆ ನೇಯ್ದ ಬಟ್ಟೆ ಅಥವಾ ಖಣ ಸುತ್ತಲು ಬರುತ್ತದೆ.

ಕುಂಟಿ ಚಕ್ರ : ಇದನ್ನು ಕುಂಟಿಗಳಿಗೆ ಬಲಗಡೆಗೆ ಇರಿಸಿರುತ್ತಾರೆ. ಇದನ್ನು ಕಬ್ಬಿಣದಿಂದ ತಯಾರಿಸಿರುತ್ತಾರೆ. ಇದರ ಮೈ ಸುತ್ತಲೂ ಹಲ್ಲುಗಳನ್ನು ರಚಿಸಿರುತ್ತಾರೆ. ಇದರ ಸಹಾಯದಿಂದ ಕುಂಟಿ ಗಟ್ಟಿಯಾಗಿ ನಿಲ್ಲುತ್ತದೆ. ಇದರ ಸಹಾಯದಿಂದ ತಿರುಗಿಸುತ್ತಾರೆ. ಇದನ್ನು ತಿರುವಿದಾಗ ಮಾತ್ರ ಕುಂಟಿ ಹೊರಳುತ್ತದೆ.

ಕುತ್ತಾ (ನಾಯಿ) : ಇದನ್ನೂ ಕೂಡ ಕಬ್ಬಿಣದ ವಸ್ತುವಿನಿಂದ ಅರ್ಧ ಚಂದ್ರಾಕೃತಿಯಲ್ಲಿ ಮಾಡಿರುತ್ತಾರೆ. ಇದರ ಸಹಾಯದಿಂದ ಕುಂಟಿ ಚಕ್ರಕ್ಕೆ ವಿರುದ್ಧ ದಿಕ್ಕಿನಲ್ಲಿ ನಿಲ್ಲಿಸಿರುವುದರಿಂದ ಇದು ಕುಂಟಿ ಚಕ್ರ ಹೊರಳದಂತೆ ನೋಡಿಕೊಳ್ಳುತ್ತದೆ.

ಕೈಗೂಟ : ಇದನ್ನು ಕಟ್ಟಿಗೆಯಿಂದ ತಯಾರಿಸಿರುತ್ತಾರೆ. ಇದಕ್ಕೆ ಹಗ್ಗ ಬಿಗಿಯಲು ಕಾಚಾ (ಕಂಡ್ರ)ಗಳನ್ನು ಹಾಕಿ ಗಟ್ಟಿಯಾಗಿ ನೆಲದಲ್ಲಿ ನೇಕಾರನ ಕೈಗೆ ಎಟುಕುವಂತೆ ಹುಗಿದಿರುತ್ತಾರೆ. ಇದಕ್ಕೆ ಬಿಗಿದ ಹಗ್ಗ ಸಡಿಲಿಸಲು ನೇಯ್ದ ಖಣ ಕುಂಟಿಗೆ ಸುತ್ತಲು ಸಹಾಯವಾಗುತ್ತದೆ.

ಮಿಣಿಗೂಟ : ಇದನ್ನು ಕಟ್ಟಿಗೆಯಿಂದ ತಯಾರಿಸಿ ಗಟ್ಟಿಯಾಗಿ ನೆಲದಲ್ಲಿ ಹುಗಿದಿರುತ್ತಾರೆ. ನೆಲದಿಂದ ೨ ಅಡಿ ಎತ್ತರವಾಗಿರಿಸುತ್ತಾರೆ. ಒಂದು ಕಡೆ ಕಂಡ್ರಗಳನ್ನು ಹಾಕಿ ನೇಯ್ಗೆ ಹಗ್ಗವನ್ನು ಕಟ್ಟಿ ಚುಂಗಿ ಕೋಲು ಸಮತೂಕದಲ್ಲಿ ಇಡಲು ಬರುವ ಹಾಗೆ ನಿರ್ಮಿಸಿ ಇದನ್ನು ನೇಕಾರನಿಗೆ ನೇರವಾಗಿ ಎದರುಗಡೆ ಖಣ ನೇಯಲು ಬರುವಂತೆ ಮಗ್ಗದಿಂದ ದೂರವಿರಿಸಿರುತ್ತಾರೆ. ಇದು ಕೂಡ ಪ್ರಮುಖವಾದ ಭಾಗವಾಗಿರುತ್ತದೆ. ನೇಯ್ಗೆ ಹಗ್ಗವನ್ನು ಜಗ್ಗಿದರೂ ಹಿಂದೆ ಬಾಗದಂತೆ (ಮುರಿದು) ಬೀಳದಂತೆ ಗಟ್ಟಿಗೊಳಿಸಿರುತ್ತಾರೆ. ನೇಕಾರರು ಕಟ್ಟಿದ ಟಾಣಗಿಗಳನ್ನು ಎಂಟು ಭಾಗಗಳನ್ನಾಗಿ ಮಾಡಿ ಚುಂಗಿಗಳನ್ನು ಕಟ್ಟಿ ಚುಂಗಿ ಕೋಲಿಗೆ ಬಿಗಿದು ದಾರಗಳು ಸರಿದಾಡುದಂತೆ ನೇಯಲು ಅನುಕೂಲವಾಗುವಂತೆ ಕಟ್ಟಿ ಚುಂಗಿ ಕೋಲನ್ನು ಮಿಣಿಗೂಟಕ್ಕೆ ಕಟ್ಟುತ್ತಾರೆ.

ಕಾಲ ಪಾವಡಿಗಳು : ಇದನ್ನು ಕೂಡ ಕಟ್ಟಿಗೆಯಿಂದ ತಯಾರಿಸುತ್ತಾರೆ. ಎರಡು ಕಾಲ ಪಾವಡಿಗಳು ಇರುತ್ತವೆ. ಇದನ್ನು ಮಗ್ಗದ ಕುಣಿಯ ಮಧ್ಯದಲ್ಲಿ ನಾಲ್ಕು ಕಡೆಗೆ ಮೊಳೆಗಳನ್ನು ಜಡಿದು ಗಟ್ಟಿಯಾಗಿರಿಸಿ ಇವುಗಳಿಗೆ ಚರ್ಮದ ಬಾರಿನಿಂದ ಹಾಗೂ ದಾರಗಳ ಸಹಾಯದಿಂದ ಚಾಣ ಕೋಲುಗಳಿಗೆ ಕಟ್ಟುತ್ತಾರೆ. ಕಾಲುಗಳಿಂದ ತುಳಿದಾಗ ಲಾಳಿ ಓಡಾಡಲು ಬರುವ ಹಾಗೆ ಅಣಿ ತೆಗೆಯಲು ಸಹಾಯವಾಗುತ್ತದೆ ೧” ದಪ್ಪವಾಗಿರುವ ೮” ಉದ್ದವಿರುವ ಕಟ್ಟಿಗೆ ತುಂಡುಗಳಿಂದ ಕೆಲವರು ೨ ಕಾಲ ಪಾವಡಿಗಳನ್ನು ಇರಿಸಿದರೆ ಇನ್ನೂ ಕೆಲವರು ೪ ಕಾಲ ಪಾವಡಿಗಳನ್ನು ಇರಿಸಿರುತ್ತಾರೆ. ಇದು ನೇಕಾರನ ಕಾಲು ಒತ್ತುವ ಜಾಣತನ ಅವಲಂಬಿಸಿರುತ್ತದೆ.

ಕಂಬಿ : ಇವುಗಳನ್ನು ಬಿದಿರಿನಿಂದ ತಯಾರಿಸಿರುತ್ತಾರೆ. ಇವುಗಳು ೪” ಉದ್ದ ಹಾಗೂ ೧” ಅಗಲ ಅಳತೆಯನ್ನು ಹೊಂದಿರುತ್ತದೆ. ಒಂದು ಜ್ವಾಕಿಗೆ ೮ ಕಂಬಿಗಳು ಬೇಕಾಗುತ್ತವೆ. ಇವುಗಳನ್ನು ನಾಲ್ಕು ಅಣಿಗಳಲ್ಲಿ ಇರಿಸಿರುತ್ತಾರೆ. ಪಟ್ಟಿ ಆಕಾರ ಹೊಂದಿರುತ್ತವೆ.

ಸೆಳ್ಳು : ಇವುಗಳನ್ನು ದುಂಡನೆ ಆಕಾರದಲ್ಲಿರಿಸಿರುತ್ತಾರೆ. ೨ ಸೆಂಟಿಮೀಟರ್ ಗಾತ್ರ ಉಳ್ಳವುಗಳು ಇವು ಸಹಿತ ೪’ ಉದ್ದವಿರುತ್ತದೆ. ಇವುಗಳನ್ನು ಅಣಿ ಸೆಳ್ಳು ಪೇಟಿ ಸೆಳ್ಳು ತಂತಿಬೆಜ ಇರಿಸಲು ಬೇಕಾಗುವ ಸೆಳ್ಳುಗಳು. ಒಂದು ಮಗ್ಗಕ್ಕೆ ೧೫ ರಿಂದ ೩೦ ಸೆಳ್ಳುಗಳು ಬೇಕಾಗುತ್ತದೆ.

ಸವಾಲಾಖ : ಕಾಶ್ಮೀರದಲ್ಲಿ ಸವಾಲಾಖ ಎಂಬ ಊರು ಇದೆ. ಅಲ್ಲಿಂದ ಒಬ್ಬ ಶರಣ ಬಂದನೆಂದು ಇದನ್ನು ಅವನ ನೆನಪಿಗೆ ಹೆಸರಿಟ್ಟಿದ್ದಾರೆ. ಇದೊಂದು ಕಬ್ಬಿಣ ಹಲಪಿ ಇದು ೨ ಸೆಂಟಿಮೀಟರ್ ದಪ್ಪ ೩” ಅಗಲ ೪’ ಉದ್ದ ಇರುತ್ತದೆ. ಇದನ್ನು ಅಣಿ ಮುಂದಿನ ಸೆಳ್ಳು ಹಾಗೂ ಅಡದಂಡಿಗೆಯ ನಡುವೆ ಗಟ್ಟಿ ದಾರದ ಸಹಾಯದಿಂದ ಕಟ್ಟಿ ಮಗ್ಗದ ಕುಣಿಯಲ್ಲಿ ಇಳಿ ಬಿಟ್ಟಿರುತ್ತಾರೆ. ಇದು ಡಿಸೈನ್‌ ಸೆಳ್ಳುಗಳಿಗೆ ಹಿಂದೆ ಸರಿಯಬಾರದೆಂದು ಹಾಗೂ ಇದು ತೂಕವನ್ನು ಕಾಯ್ದಕೊಳ್ಳುತ್ತದೆ. ಇದಕ್ಕೆ ನೇಕಾರರು ಸವಾಲಾಖ ಅಥವಾ ಸವ್ವಾಲಕ್ಷ ಎನ್ನುತ್ತಾರೆ.

ಬಟ್ಟೆ ಚೀಲಗಳು : ಒಂದು ಕಿಲೋ ಉಸುಕು ಹಿಡಿಯುವಷ್ಟು ಅಥವಾ ಅರ್ಧ ಕಿಲೋ ಉಸುಕು ಹಿಡಿಯುವಷ್ಟು ಎರಡು ದೊಡ್ಡ ಚೀಲಗಳು ಬೇಕಾಗುತ್ತವೆ. ಇವಕ್ಕೆ ಪೇಟೆ ಚೀಲಗಳೆನ್ನುತ್ತಾರೆ. ಇವುಗಳಲ್ಲಿ ಉಸುಕು ತುಂಬಿ ಕಬ್ಬಿಣ ವಂಕಿಗಳನ್ನು ಇವುಗಳಿಗೆ ಕಟ್ಟಿ ಅವುಗಳನ್ನು ಪೇಟಿ ತೂಕಕ್ಕೆ ಸರಿದೂಗುವಂತೆ ಇಳಿಬಿಡುತ್ತಾರೆ. ಚಾಣಕೋಲಿನ ಮುಂದೆ ಇರುವ ತಂತಿಬೆಜ ಹಾಗೂ ನೂಲ ಬೆಜಗಳ ಸೆಳ್ಳುಗಳಿಗೆ ಕೆಳಗೆ ತೂಕವಿರಿಸಲು ಉಸುಕು ತುಂಬಿದ ಚೀಲಗಳ ತೂಕ ೨೦೦ ಗ್ರಾಂ. ದಿಂದ ೩೦೦ ಗ್ರಾಂ. ಇರಿಸುತ್ತಾರೆ. ಪ್ರತಿ ಸೆಳ್ಳುಗಳಿಗೆ ಎರಡು ಚೀಲಗಳನ್ನು ಇಳಿಬಿಡುತ್ತಾರೆ. ಇವುಗಳು ೧೦ ಚೀಲಗಳಿಂದ ೩೦ ಚೀಲಗಳು ಬೇಕಾಗುತ್ತವೆ.

ಕಂಡಕಿ : ಇದು ಮುಂದೆ ದಪ್ಪ ಇದ್ದ ಹಿಂದೆ ಕಡಿಮೆಯಾಗುತ್ತದೆ. ಇದರ ಉದ್ದ ೪” ಇರುತ್ತದೆ. ಇದರ ಮೇಲೆ ಹೊಕ್ಕಿನ ನೂಲನ್ನು (ಉಂಕಿಎಳೆ) ರಾಟಿಯ ಸಹಾಯದಿಂದ ಸುತ್ತುತ್ತಾರೆ. ಸುತ್ತಿದ ಉಂಕಿಎಳೆ ಬಿಚ್ಚಬಾರದೆಂದು ಗಣಿಗೆ ಕಂಡ್ರಗಳನ್ನು ಸುತ್ತಲೂ ನಿರ್ಮಿಸುತ್ತಾರೆ ಈ ಗಣಿಗಳ ಮೇಲೆ ಉಂಕಿಎಳೆಯನ್ನು ಸುತ್ತಿದಾಗ ಇದು ಕಂಡಕಿಯಾಗುತ್ತದೆ. ಇದನ್ನು ಲಾಳಿಯಲ್ಲಿಯ ಸೂಲಂಗಿಗೆ ಸಿಕ್ಕಿಸಿ ಕಂಡಕಿಯ ಎಳೆಯನ್ನು ಲಾಳಿ ಮಣಿಗಳಲ್ಲಿ ಪೋಣಿಸಿ ಅದರ ಸಹಾಯದಿಂದ ಬಟ್ಟೆಗೆ ಹೊಕ್ಕು (ಅಡ್ಡೆಎಳೆ) ಹಾಕುತ್ತಾರೆ.

ಲಾಳಿ : ಇದನ್ನು ಹಗುರವಾದ ಕಟ್ಟಿಗೆಯಿಂದ ತಯಾರಿಸಿ ಇದರ ಎರಡು ಕಡೆ ಉಕ್ಕಿನ ಸೂಜನೆಯ ಆಕಾರದ ತುಂಬುಗಳನ್ನು ಇರಿಸಿರುತ್ತಾರೆ. ಇದರ ಉದ್ದ ೧೨” ಇದರಲ್ಲಿಯೇ ಕಂಡಕಿ ಇರಿಸಲು ಸೂಲಂಗಿ ಇರಿಸಿರುತ್ತಾರೆ. ಕಂಡಕಿ ಎಳೆಯನ್ನು ಪೋಣಿಸಲು ಬರುವಂತೆ ಲಾಳಿಗೆ ಮೂರು ಮಣಿಗಳನ್ನು ಇರಿಸಿರುತ್ತಾರೆ. ಇದು ಬಹಳ ಸಫೆ ಕಟ್ಟಿಗೆಯದು ಇರುತ್ತದೆ. ಕಾರಣ ಇದು ನೂಲು ಅಥವಾ ರೇಷ್ಮೆ ಎಳೆಗಳ ಅಣಿ ಬಾಯಲ್ಲಿ ಓಡಾಡ ಬೇಕಾಗುತ್ತದೆ.

ತಿರುಕಿ ಲಾಳಿ : ಇದನ್ನು ಹೆಚ್ಚಾಗಿ ಸಾಗವಾನಿ ಕಟ್ಟಿಗೆಯಿಂದ ತಯಾರಿಸಿರುತ್ತಾರೆ. ಇದರ ಉದ್ದ ೬” ಹಾಗೂ ಇದರ ಆಕಾರವೂ ಸಹಿತ ಲಾಳಿ ಆಕಾರದಲ್ಲಿಯೇ ಇರುತ್ತದೆ. ಇದರ ಸಹಾಯದಿಂದ ಒಡ್ಡಲದಲ್ಲಿ ಅದರ ಅಣಿ ಬಾಯಲ್ಲಿ ಓಡಾಡುವಂತೆ ದಡಿ ಬಿಟ್ಟು ಕೇವಲ ಬಡ್ಡಲದಲ್ಲಿ ನೂಲಿನ ಎಳೆಗಳು ಬೀಳುವಂತೆ ಕೈಯಿಂದಲೇ ಇದನ್ನು ಆಚೆ ಈಚೆ ಓಡಾಡುವಂತೆ ಮಾಡಿ ಒಂದು ಹೂ ನೇಯ್ದು ಅದನ್ನು ಚೌಕಟ್ಟಿನಲ್ಲಿರುವಂತೆ ಮಾಡಲು ತಿರುಕಿ ಲಾಳಿಯನ್ನು ಉಪಯೋಗಿಸುತ್ತಾರೆ.

ತಂತಿ ಬೆಜ : ಇವುಗಳನ್ನು ಇತ್ತಿತ್ತವಾಗಿ ಉಕ್ಕಿನ ಕಡ್ಡಿಯಿಂದ ತಯಾರಿಸಿ ನುಣುಪಾಗಿರುವಂತೆ ಮಾಡಿರುತ್ತಾರೆ. ಇವುಗಳ ಉದ್ದ ಸುಮಾರು ೮” ಇದ್ದು ಎರಡೂ ಕಡೆಗೆ ಕೊಂಡಿಗಳನ್ನು ಇರಿಸಿ ಅವುಗಳಲ್ಲಿ ಸೆಳ್ಳುಗಳನ್ನು ಇರಿಸಲು ಬರುವಂತೆ ಮಾಡಿರುತ್ತಾರೆ. ಇದರ ಮಧ್ಯದಲ್ಲಿ ಒಂದು ದುಂಡನೆಯ ತೂತು (ಹೋಲ್‌) ಇರುತ್ತದೆ. ಇದರಲ್ಲಿ ಎಳೆಯನ್ನು ಹಾಸಲು ಅಥವಾ ಪೋಣಿಸಲು ಬರುವಂತೆ ಮಾಡಿರುತ್ತಾರೆ. ಇವುಗಳು ಒಬ್ಬ ನೇಕಾರನಿಗೆ ಒಂದು ಸಾವಿರದಿಂದ ಮೂರು ಸಾವಿರ ತಂತಿ ಬೆಜಗಳು ಬೇಕಾಗುತ್ತವೆ. ಮೊದಲು ಇವುಗಳನ್ನು ನೂಲಿನ ದಾರದಿಂದ ಮಾಡಿರುತ್ತಿದ್ದರು. ಹೆಚ್ಚು ಬಾಳಿಕೆ ಬಾರದ್ದರಿಂದ ಈಗ ತಂತಿ ಬೆಜಗಳನ್ನು ಉಪಯೋಗಿಸುತ್ತಿದ್ದಾರೆ.

ಚಕ್ರದ (ಗಾಡ) ಚೂರಿ : ಇದನ್ನು ಕಬ್ಬಿಣ ಪಟ್ಟಿಯಿಂದ ತಯಾರಿಸಿ ಇದನ್ನು ಗಾಡದ ಒಂದು ಭಾಗಕ್ಕೆ ಅಳವಡಿಸಿರುತ್ತಾರೆ. ಇದರಿಂದ ಗಾಡದಲ್ಲಿರಸಿ ಗಾಡದ ಮಳಿಗೆ ಸರಿಯಾಗಿ ಜೋಡಿಸಿರುತ್ತಾರೆ. ಕಾಲಪಾವಡಿ ತುಳಿದಾಗೊಮ್ಮೆ ಇದು ಒಂದು ಮಳಿಯಿಂದ ಇನ್ನೊಂದು ಮಳಿಯನ್ನು ಹಿಡಿದು ಜಗ್ಗುತ್ತದೆ. ಮಳಿಯನ್ನು ಜಗ್ಗಲು ಬರುವಂತೆ ಈ ಚೂರಿಗೆ ಮುಂದೆ ಒಂಕಿ ಇರುವಂತೆ ಮಾಡಿರುತ್ತಾರ. ಇದು ಜಗ್ಗುವುದರಿಂದ ಚಕ್ರದ ಮೇಲೆ ಇರಿಸಿದ ವಿನ್ಯಾಸದ ಸಾಕಳಾ ತನ್ನಿಂದ ತಾನೇ ಹೊರಳುತ್ತದೆ.

ಎದಿ ಚೂರಿ : ಈ ಎದಿ ಚೂರಿಯನ್ನು ಚಕ್ರದ ಚೂರಿ ವಿರುದ್ಧವಾಗಿ ಇಟ್ಟಿರುತ್ತಾರೆ. ಕಾಲಪಾವಡಿ ತುಳಿದಾಗ ಚಕ್ರದ ಚೂರಿ ಒಂದೊಂದೇ ಮಳೆಯನ್ನು ಎಳೆಯುವಾಗ ಪ್ರತಿಯೊಂದು ಮಳಿಗೆ ಇದು ಚಕ್ರದ ಚೂರಿ ಒಮ್ಮೆಲೇ ಮುಂದೆ ಬೀಳುವುದರಿಂದ ಇದರ ತಡೆಗೆ ಒಂದೊಂದೇ ಮಳಿಯನ್ನು ತಡೆದು ನಿಲ್ಲಿಸುತ್ತದೆ. ಇದಕ್ಕೆ ಎದಿ ಚೂರಿ ಎಂದು ಕರೆಯುತ್ತಾರೆ.

ಸಾಕಳಾ ಪಟ್ಟಿ (ವಿನ್ಯಾಸಪಟ್ಟಿ) : ನೇಕಾರರು ತಮಗೆ ಯಾವ ವಿನ್ಯಾಸ ಬೇಕೋ ಅದನ್ನು ತಯಾರಿಸಲು ಗಾಡಕ್ಕೆ ಹೊಂದಾಣಿಕೆ ಆಗುವಂತೆ ಕಟ್ಟಿಗೆ ಪಟ್ಟಿಗಳಿಂದ ತಯಾರಿಸಿರುತ್ತಾರೆ. ಇವುಗಳನ್ನು ಒಂದಕ್ಕೊಂದು ಹೊಂದಾಣಿಕೆ ಮಾಡಿ ಪ್ರತಿ ಪಟ್ಟಿಗೂ ಕಬ್ಬಿಣ ಉಂಗರಗಳನ್ನು ಒಂದರಲ್ಲಿ ಒಂದು ಇರಿಸಿ ಪ್ರತಿ ಪಟ್ಟಿಗಳ ನಡುವೆ ಇರಿಸುತ್ತಾರೆ. ಈ ಪಟ್ಟಿಗಳು ಒಂದು ಇಂಚು ಅಗಲ ೮” ಉದ್ದವಿರುತ್ತವೆ. ಇವುಗಳು ೪೦ ಪಟ್ಟಿಗಳಿಂದ ೧೦೦ ಪಟ್ಟಿಗಳವರೆಗೂ ಇರಿಸಿ ಸಾಕಳಾ ತಯಾರಿಸಿರುತ್ತಾರೆ. ಪ್ರತಿ ಪಟ್ಟಿಗೆಗೂ ಇಂಚಿಗೊಂದರಂತೆ ತೂತುಗಳನ್ನು ಮಾಡಿರುತ್ತಾರೆ.

ಗುಬ್ಬಿಗಳು : ಇವುಗಳನ್ನು ವಿನ್ಯಾಸದ ಆಕಾರಕ್ಕೆ ಬರುವಂತೆ ಒಂದು ಪಟ್ಟಿಗೆ ಒಂದು ಎರಡು ನಾಲ್ಕು ಕಟ್ಟಿಗೆ ತುಂಡುಗಳಿಂದ ಮಾಡಿರುತ್ತಾರೆ. ಒಂದೊಂದು ತುಂಡನ್ನು ವಿನ್ಯಾಸಕ್ಕೆ ಅನುಗುಣವಾಗಿ ಒಂದೊಂದು ಪಟ್ಟಿಯ ತೂತುಗಳಲ್ಲಿ ಗಟ್ಟಿಯಾಗಿ ನಿಲ್ಲುವಂತೆ ಸಾಕಳಾ ಪಟ್ಟಿಗೆ ಇರಿಸಿರುತ್ತಾರೆ. ಇವುಗಳ ಮುಂದೆ ಗಾಲಿಗಳುಳ್ಳ ಕಟ್ಟಿಗೆಯ ಇನ್ನೊಂದು ಪಟ್ಟಿ ಇರಿಸದಾಗ ಈ ಗಾಲಿಗಳು ಒಂದೊಂದೇ ಗುಬ್ಬಿಯಿಂದ ಇನ್ನೊಂದು ಗುಬ್ಬಿಗೆ ಹೊರಳುತ್ತದೆ.

ಹಗ್ಗ : ನೇಕಾರರು ನೇಯ್ದು ಉಳಿದ ರೇಷ್ಮೆಯ ಗುಂಜು (ವೇಸ್ಟ್‌) ಇದರಲ್ಲಿ ಎಳೆಗಳುಳ್ಳವುಗಳನ್ನು ಬೇರ್ಪಡಿಸಿ ಅವುಗಳಿಂದ ಹಗ್ಗ ಮಾಡುವುದೂ ಒಂದು ಕಲೆಯಾಗಿದೆ. ನೂಲಿನ ಎಳೆಗಳಿಂದಲೂ ಹಗ್ಗ ಹೊಸೆಯುತ್ತಾರೆ. ಇದರಲ್ಲಿ ೧೦ ಅಥವಾ ೨೦ ನಂಬರಿನ ದಪ್ಪ ಇರುವ ೩೦ ಅಥವಾ ೪೦ ಎಳೆಗಳನ್ನು ಕೈಯಿಂದ ಮತ್ತು ರಾಟಿಯ ಸಹಾಯದಿಂದ ಹುರಿ ಹಾಕಿ ಅವುಗಳನ್ನು ಒಂದೇ ಆಕಾರಕ್ಕೆ ತಂದು ಕೊನೆಗೊಮ್ಮೆ ಹುರಿ ಹಾಕಿ ಹಗ್ಗ ತಯಾರಿಸುತ್ತಾರೆ. ಇವುಗಳನ್ನು ತಯಾರಿಸಲು ಬೇರೆ ಕುಟುಂಬಗಳೇ ಇರುತ್ತವೆ. ಇವರನ್ನು ಹಗ್ಗ ಮಾಡುವವರು ಎನ್ನುತ್ತಾರೆ. ಇವುಗಳ ಉದ್ದಳತೆ ಸುಮಾರು ೨೦ ಮೊಳದಿಂದ ೩೦ ಮೊಳಗಳುಳ್ಳವುಗಳನ್ನು ನೇಯ್ಗೆ ಹಗ್ಗ. ಬಳದಾರ ಕಟ್ಟುವ ಹಗ್ಗ, ಉಡತ್ತಲ ಹಗ್ಗ ಹೀಗೆ ಬೇರೆ ಬೇರೆಯವುಗಳನ್ನಾಗಿ ತಯಾರಿಸುತ್ತಾರೆ. ಉಡೆತ್ತಲ ಹಗ್ಗ ಮಾತ್ರ ಎಲ್ಲ ಹಗ್ಗಗಳಿಗಿಂತ ದಪ್ಪ ಇರುತ್ತದೆ. ಕೆಲವೊಮ್ಮೆ ನಾರಿನಿಂದ ಇಲ್ಲವೆ ತೆಂಗಿನ ನಾರಿನಿಂದ ತಯಾರಿಸುತ್ತಾರೆ.

ಕುಂದರಕಿ ಮತ್ತು ಹೊಟ್ಟೆ ಅರಿವೆ : ನೇಕಾರರು ನೇಯಲು ಕೂಡುವಾಗ ತಮ್ಮ ಅಡಿ ಬುಡಕ್ಕೆ ಹಾಸಿಕೊಳ್ಳಲು ದಪ್ಪ ಬಟ್ಟೆಯಿಂದ ತಯಾರಿಸಿ ಇದರ ಮೇಲೆ ಕುಳಿತುಕೊಂಡು ನೇಯುತ್ತಾರೆ. ಇದಕ್ಕೆ ಕುಂದರಕಿ ಎನ್ನುತ್ತಾರೆ. ನೇಕಾರರು ನೇಯುವಾಗ ಮೈ ಬೆವರು ತಮ್ಮ ಖಣಗಳು ಅಂದಗೆಡಬಾರದೆಂದು ಕುಂಟಿಯ ಮೇಲೆ ತಮ್ಮ ಹೊಟ್ಟೆಯ ಮುಂದೆ ಇರಿಸಿಕೊಳ್ಳುವ ಇದಕ್ಕೆ ನೂಲಿನ ಬಟ್ಟೆಯೇ ಇರಬೇಕಾಗುವುದರಿಂದ ಇದಕ್ಕೆ ಹೊಟ್ಟೆ ಅರಿವೆ ಎನ್ನುತ್ತಾರೆ.

ಸೆಡವುಗಟಿಗೆ (ಸೇಡಗಟಿಗಿ) : ಇದನ್ನು ತೆಳ್ಳನೆಯ ಸೆಳ್ಳನಿಂದ ತಯಾರಿಸಿ ಎರಡೂ ಕಡೆ ಸೂಜಿಗಳನ್ನು ಕಟ್ಟಿರುತ್ತಾರೆ. ಈ ಸೂಜಿಯ ಮೊನೆಯನ್ನು ಮಾತ್ರ ಹೊರಗೆ ಇರುವಂತೆ ಸೆಳ್ಳಿಗೂ ಮತ್ತು ಸೂಜಿಯನ್ನು ದಾರಗಳಿಂದ ಕಟ್ಟಿರುತ್ತಾರೆ. ನೇಕಾರರು ನೇಯುವಾಗ ಬಟ್ಟೆಯ ಅಂಚು ಒಳ ಹೊರಗೆ ಆಗಬಾರದೆಂದು ಸೆಡವುಗಟಗಿಗೆ ಕಟ್ಟಿದ ಸೂಜಿಗಳು ಬಟ್ಟೆಯ ಎರಡೂ ಅಂಚಿಗೆ ಸಿಕ್ಕಿಸಿರುತ್ತಾರೆ. ಇದರಿಂದ ಜೋಟಾ ಜಗ್ಗಿ ವಾಟಾ ಒಗೆದಾಗ ಕಂಡಕಿಯು ಹೆಚ್ಚು ಕಡಿಮೆಯಾಗುವುದರಿಂದ ಇದನ್ನು ತಡೆಯಲು ಸೆಡವುಗಟಿಗೆಯನ್ನು ಇರಿಸುತ್ತಾರೆ. ಇದರಿಂದ ನೇಯ್ದ ಅಂಚು ಅಥವಾ ಕಡಿ ಡೊಗ್ಗಬಾರದೆಂಬ ಉದ್ದೇಶವಿದೆ.

ಮಣಿಕಡ್ಡಿ : ನೇಯುವಾಗ ಅಕಸ್ಮಾತ್‌ ನೂಲಿನಲ್ಲಾಗಲಿ, ರೇಷ್ಮೆಯಲ್ಲಾಗಲಿ ಕುಡುಪುಗಳು ಬಂದಾಗ ಎಳೆಗಳು ಹರಿಯುತ್ತವೆ. ಯಾವ ಕೋಲಿನ ಎಳೆ ಹರಿದಿರುತ್ತದೆಯೋ ಅದನ್ನು ಕೆಚ್ಚೆಳೆ ಹಚ್ಚಿ ಅದರ ಅಣಿಗುಂಟ ತಂತಿ ಬೆಜದಲ್ಲಿ ಮತ್ತು ನೂಲಿನ ಬೆಜದಲ್ಲಿ ಹಾಯಿಸಿಕೊಳ್ಳುವಾಗ ಮಣಿಕಡ್ಡಿಯನ್ನು ಉಪಯೋಗಿಸುತ್ತಾರೆ. ಇದು ಗಡುಸಾದ ತಂತಿಯಿಂದ ತಯಾರಿಸಿ ೮” ಉದ್ದವಿರಿಸಿದ ಕೈಯಲ್ಲಿ ಕಟ್ಟಿಗೆ ಹಿಡಿ ಇರಿಸಿ ಒಂದು ಕಡೆ ಮೊನಚು ಮಾಡಿ ಕೊಂಡಿ ಮಾಡಿರುತ್ತಾರೆ. ಹರಿದ ಹಚ್ಚಿದ ಎಳೆಯನ್ನು ತಟ್ಟಿನಲ್ಲಿ ಹಾಸಿ ಆ ಎಳೆಯನ್ನು ಬಟ್ಟೆಯ ಕೊನೆಗೆ ಗಟ್ಟಿ ನಿಲ್ಲುವಂತೆ ಮಾಡುವುದು ಇದಕ್ಕೆ ಮಣಿಕಡ್ಡಿ ಎನ್ನುತ್ತಾರೆ. ಇಲ್ಲಿ ಪ್ರಮುಖ ಉಪಕರಣಗಳನ್ನು  ಮಾತ್ರ ವಿವರಣೆ ಇದೆ. ಇನ್ನೂ ಚಿಕ್ಕ ಚಿಕ್ಕ ವಸ್ತುಗಳನ್ನು ಇರಿಸಿಕೊಳ್ಳಬೇಕಾಗುತ್ತದೆ. ಇವುಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಇಷ್ಟೆಲ್ಲ ಸಲಕರಣೆಗಳನ್ನು ಹೊಂದಿಸಿಕೊಂಡು ಒಂದು ಮಗ್ಗ ತಯಾರಾಗಬೇಕಾದಲ್ಲಿ ಸುಮಾರು ಇಂದು ೧೮ ರಿಂದ ೨೦ ಸಾವಿರ ರೂಪಾಯಿಗಳು ಬೇಕಾಗುತ್ತವೆ.

ಈ ಎಲ್ಲಾ ಪರಿಕರಗಳನ್ನು ಸಿದ್ಧಪಡಿಸಲು ಚಮ್ಮಾರ, ಕಮ್ಮಾರ, ಬಡಿಗೇರ, ಸಿಂಪಿಗೇರ, ಕುಂಬಾರ, ಹಗ್ಗ ಮಾಡುವವರು, ತಟ್ಟು ಕಟ್ಟುವವರು, ಹಣಗಿ ಕಟ್ಟುವವರು ಈ ಎಲ್ಲ ಕಸಬುದಾರರ ನೆರವು ಬೇಕಾಗುತ್ತದೆ. ಇವರೆಲ್ಲರ ಸಮನ್ವಯ ಕಾಯಕದ ಸಹಕಾರದಿಂದಾಗಿ ಒಬ್ಬ ನೇಕಾರನಿಗೆ ಒಂದು ಬೆತ್ತಲೆ ಕೈಮಗ್ಗ ಸಿದ್ಧಗೊಳ್ಳುತ್ತದೆ. ಇಲ್ಲಿಗೆ ಪ್ರಥಮ ಹಂತ ಮುಗಿಯುತ್ತದೆ.

ಇನ್ನು ಎರಡನೆಯ ಹಂತದಲ್ಲಿ ನೇಕಾರರು ಖಣಗಳನ್ನು ಉತ್ಪಾದಿಸಲು ಬೇಕಾಗುವ ಕಚ್ಚಾ ಮಾಲುಗಳಾದ ನೂಲು, ನಂಬರ ೪೦ (ಚಾಳಿಸ್‌) ೬೦ (ಸಾಟಿ). ೧೬ನೇ ಡಿನೀಯರದಿಂದ ೨೦ ಡಿನೀಯರವರೆಗೆ ಇರುವ ತಯಾರಿ ರೇಷ್ಮೆ ಮತ್ತು ನಂಬರ ೮೦ (ಐಸಿ) ಮಸರಾಯಿ, ಚಮಕಾ ನಂಬರ ೧೨೦ (ಏಕಸೆವೀಸ್‌) ಇದರಲ್ಲಿ ಸಿಂಗಲ್ಲ ಮತ್ತು ಡಬಲ್ಲ ದಡಿ, ದಡಿಪೇಟಿ, ಪೇಟಿ, ಭೂಮಿ (ವಡ್ಡಲ) ಇವುಗಳಿಗೆ ಬೇರೆ ಬೇರೆ ತೂಕದ ರೇಷ್ಮೆ ಬೇಕಾಗುತ್ತದೆ. ೬” ದಡಿ (ಬಾರ್ಡರ) ರೇಷ್ಮೆ ಖಣಕ್ಕೆ ೯” ದಡಿ ಮಸರಾಯಿ ಖಣಗಳು ಮದ್ರಾಸ ಚಿತ್ರಮಾಲಾ ಇವುಗಳಿಗೆ ಚಮಕಾ ಹಾಗೂ ಮಸರಾಯಿ ದಡಿಗಳುಳ್ಳ ಖಣಗಳನ್ನು ತಯಾರಿಸುತ್ತಾರೆ. ಇದಕ್ಕೆಲ್ಲ ಪೂರಕವಾಗಿ ಹಾಸು ತಯಾರಿಸಿಕೊಳ್ಳಲು ನೂಲು ಅಂದರೆ ಹೊಕ್ಕು ಹಾಕಲು (ಅಡ್ಡ ಎಳೆ) ತಮ್ಮ ತಮ್ಮ ಖಣಗಳ ಉತ್ಪನ್ನಗಳಿಗೆ ನಿರ್ಧರಿಸಿದ ನೂಲಿನ ನಂಬರುಗಳುಳ್ಳ ಕಚ್ಚಾ ಮಾಲು ಬೇಕಾಗುತ್ತದೆ.

ಹೊಕ್ಕು (ಹಾಸು) ತಯಾರಿಸುವ ವಿಧಾನವೂ ಅತ್ಯಂತ ಜಾಣ್ಮೆಯಿಂದ ಕೂಡಿರುತ್ತದೆ. ನೂಲಿನ ಗಿರಣಿಯಲ್ಲಿ ಮೊದಲು ಈ ನೂಲನ್ನು ಕೈಯಲ್ಲಿ ಝಾಡಿಸಿದ ನೂಲು ಬಳಿಗಳನ್ನು ರಾಟಿಗಳಿಗೆ ಹಾಕಿ ಸ್ವಲ್ಪ ಹುರಿ ಬೀಳುವ ಹಾಗೆ ಆ ನೂಲಿನ ಬಳಿಗಳಿಂದ ಒಂದೊಂದೇ ಎಳೆಯನ್ನು ಡಬ್ಬಿಗಳಿಂದ ಸುತ್ತುವಂತೆ ವ್ಯವಸ್ಥೆ ಇರುತ್ತದೆ. ಇವುಗಳು ದುಂಡನೆಯ ಆಕಾರದಲ್ಲಿದ್ದು ೧೦” ಉದ್ದ ೫” ವ್ಯಾಸವುಳ್ಳ ತಗಡಿನ ಡಬ್ಬಿಗಳು (ಬಾಬಿನ್‌) ಇವುಗಳಿಗೆ ನೂಲು ಸುತ್ತುತ್ತಾರೆ ಇವುಗಳಿಗೆ ಕುಕ್ಕುಡಿ ಎನ್ನುತ್ತಾರೆ.

ಈ ನೂಲಿನ ಕುಕ್ಕಡಿಗಳನ್ನು ಲೆಖ್ಖದ ಮೇಲೆ ಇರಿಸಿಕೊಂಡು ೯೦೦ ದಿಂದ ೧೦೦೦ ಗ್ರಾಂ. ತೂಕವುಳ್ಳ ಹಾಸು ತಯಾರಿಸಲು ಕುಕ್ಕಡಿಗಳನ್ನು ಇರಿಸಿಕೊಂಡು ನೂಲಿನ ಡೋಲೆಯ ಸಮೀಪ ಇರಿಸುತ್ತಾರೆ. ಈ ಡೋಲೆಯನ್ನು ಕಬ್ಬಿಣ ಪಟ್ಟಿಗಳಿಂದ ಮಾಡಿರುತ್ತಾರೆ. ಇದರ ವ್ಯಾಸ ದೊಡ್ಡದಾಗಿದ್ದು ಒಂದು ಸುತ್ತಿಗೆ ಹಾಸಿನ ಮುಂದಿನ ಹಾಗೂ ಹಿಂದಿನ ಅಣಿಗಳು ಬೀಳುವಂತೆ ಮಾಡುತ್ತಾರೆ. ಇದರ ನಡುವೆ ಪ್ರತಿ ೩’ ಒಂದು ಪ್ರತ್ಯೇಕ ಅಣಿ ಇರಿಸಿರುತ್ತಾರೆ ಡಬ್ಬೆಯ ಎಳೆಗಳನ್ನು ಒಂದೊಂದೇ, ಒಂದೊಂದು ೧೨ ರಿಂಗುಗಳಲ್ಲಿ ಹಾಸಿ ಅಣಿ (ಕತ್ತರಿ ಎಳಿ) ಬೀಳುವ ಹಾಗೆ ವ್ಯವಸ್ಥೆ ಇರುತ್ತದೆ. ಒಬ್ಬ ವ್ಯಕ್ತಿ ಕೈರಾಟಿಯಂತೆ ಈ ಡೋಲೆಯನ್ನು ಹ್ಯಾಂಡಲ್‌ ಸಹಾಯದಿಂದ ತಿರುವುತ್ತ ಸಾಗುತ್ತಾನೆ. ಆಗ ಅದು ಅಣಿಗಳನ್ನು ಹಾಕುತ್ತ ತಿರುಗತ್ತದೆ ಈ ಡೋಲೆ. ಈಗ ಇದನ್ನು ಕೈಬಿಟ್ಟು ಯಂತ್ರಗಳ ಸಹಾಯದಿಂದ ರಾಟಿ ಹಾಗೂ ಡೋಲೆ ತಿರುಗುತ್ತಿವೆ. ಈ ಕೆಲಸಕ್ಕೆ ಸುಮಾರು ೩ ರಿಂದ ೫ ಜನ ಕೆಲಸಗಾರರು ಬೇಕಾಗುತ್ತಾರೆ. ಇವರೆಲ್ಲರ ಜಾಣ್ಮೆಯಿಂದ ಹಾಸುಗಳು ಸಿದ್ಧಗೊಳ್ಳುತ್ತವೆ.