ಕೇಲಿನ ಮನೆ : ಸಿದ್ಧಗೊಳಿಸಿದ ಹಾಸುಗಳನ್ನು ಕೇಲಿನ ಮನೆಗೆ ಕಳಿಸುತ್ತಾರೆ. ಈ ಕೇಲಿನ ಮನೆಯಲ್ಲಿ ನೂಲಿನ ಹಾಸುಗಳಿಗೆ ನ್ಯಾಚುರಲ್‌ ನೀಲಿ ಬಣ್ಣ ಎದ್ದುವ ಹಾಗೆ ಕೇಲಿನ ಮನೆಯನ್ನು ಸಿದ್ಧಪಡಿಸಿಕೊಳ್ಳಬೇಕಾಗುತ್ತದೆ. ಕುಂಬಾರರು ತಯಾರಿಸಿದ ೪’ ಎತ್ತರದ ಸುಮಾರು ೨ ಮೀಟರ್ ವ್ಯಾಸವುಳ್ಳ ಒಂದು ಇಂಚು ದಪ್ಪವಾಗಿ ತಯಾರಿಸಿದ ಈ ಕೇಲ ಹರವಿಗಳನ್ನು ಕಂಬಾರರು ಮಣ್ಣಿನಿಂದ ತಯಾರಿಸಿ ಅವುಗಳನ್ನು ಆವಿಗೆಯಲ್ಲಿ ಸರಿಯಾಗಿ ಸುಟ್ಟಿರುತ್ತಾರೆ. ಅಲ್ಲದೇ ಅವುಗಳು ಗಟ್ಟಿಯಾಗಿರಬೇಕು. ನೀಲಿ ಬಣ್ಣ ಎದ್ದಲು ೨೦ ಹರವಿಗಳನ್ನು ತಯಾರಿಸಿ ಒಂದು ಕೇವಲ ಅಂಗಡಿಗೆ ಅಥವಾ ಮನೆಗೆ ಕೊಟ್ಟಿರುತ್ತಾರೆ.

ಈ ಹರವಿಗಳನ್ನು ಕೇಲಿನ ಮನೆಯಲ್ಲಿ ಹುಗಿಯುವಾಗ ಮೀರಿ ಚೀಲ ಕುರಿ ಹಿಕ್ಕಿ (ಗೊಬ್ಬರ)ಗಳನ್ನು ನೆಲದಲ್ಲಿ ಹಾಕಿ ಅವುಗಳ ನಡುವೆ ಒಂದರ ಮಗ್ಗಲಲ್ಲಿ ಬರುವಂತೆ ಪಡಮಾಡುತ್ತಾರೆ. ಪ್ರತಿಯೊಂದು ಹರವಿಯ ಸುತ್ತಲೂ ಕುರಿ ಗೊಬ್ಬರ ಇರುವಂತೆ ಈ ಹರವಿಗಳನ್ನು ಹುಗಿದಿರುತ್ತಾರೆ ಪ್ರತಿ ನೀಲಿ ಮಂದಾಣಿ ಅಥವಾ ಹರವಿಗಳಲ್ಲಿ ಬೇರೆ ಕೇಲ ಅಂಗಡಿಯಿಂದ ತಂದ ನೀಲಿ ಬಣ್ಣದ ಗಟ್ಟಿ ನೀರನ್ನು (ನೀಲಿ ರಸ) ಐದು ಹರವಿಗಳಿಗೆ ಹಾಕಿ ಮುಂದೆ ಅವುಗಳಿಗೆ ಪುನಃ ನೀಲಿ ಪುಡಿ ಹಾಕಿ ರಸ ತಯಾರಿಸಿ ಮತ್ತೆ ಮುಂದಿನ ಐದು ಹರವಿಗಳಿಗೆ ನೀಲಿ ಗಟ್ಟಿ ರಸ ಹಾಕುತ್ತಾರೆ. ಹೀಗೆ ೨೦ ಹರವಿಗಳನ್ನು ನೀಲಿ ರಸದಿಂದ ತಯಾರಿಸಿರುತ್ತಾರೆ. ಕುರಿ ಗೊಬ್ಬರದಿಂದಾಗಿ ನೆಲದಲ್ಲಿಯೇ ಶಾಖ ಹುಟ್ಟಿ ಹರವಿಯಲ್ಲಿ ಹಾಕಿದ ನೀಲಿ ರಸ ಬೆಚ್ಚಗೆ ಉಳಿಯುವಂತೆ ಮಾಡುತ್ತಾರೆ. ಇಷ್ಟೆಲ್ಲ ಸಿದ್ದಗೊಳ್ಳಬೇಕಾದರೆ ೨ ತಿಂಗಳ ಸಮಯ ಬೇಕಾಗುತ್ತದೆ.

ಈ ಮೊದಲೇ ನೀಲಿ ಬೀಜಗಳನ್ನು ನೆನೆ ಇಟ್ಟು ಆ ಬೀಜಗಳನ್ನು ಕಲ್ಲಿನ ರುಬ್ಬು ಗುಂಡಿನ ಸಹಾಯದಿಂದ ಆ ಕಡೆ ಈ ಕಡೆ ಎರಡು ಗಟ್ಟಿಯಾದ ಗಂಡಾಳುಗಳು ೫೦ ಕೆ. ಜಿ. ಆ ತೂಕದ ರುಬ್ಬುಗುಂಡುನ್ನು ಉರುಳಿಸುತ್ತ ನೀಲಿ ಬೀಜ ಅರೆಯುತ್ತಾರೆ. ನೀಲಿ ಬೀಜ ಹಾಗೂ ನೀಲಿ ಗಟ್ಟಿ ವಡೆಗಳನ್ನು ಕೇರಳ ಹಾಗೂ ಆಂದ್ರ ರಾಜ್ಯಗಳಿಂದ ತರಿಸಬೇಕಾಗುತ್ತದೆ. ಅರೆದ ನೀಲಿ ಬೀಜದ ರಸದೊಂದಿಗೆ ನೀಲಿ ಪುಡಿ ಅಥವಾ ನೀಲಿ ಗಟ್ಟಿಗಳನ್ನು ನೀಲಿ ಬೀಜದ ರಸದೊಂದಿಗೆ ಪುನಃ ಸೇರಿಸಿ ಆ ರಸವನ್ನು ಪ್ರತಿ ನೀಲಿ ಹರವಿಗೆ ಅನುಭವದ ಆಧಾರದ ಮೇಲೆ ಕೂಡಿಸುತ್ತಾರೆ, ಈ ಕೇಲ ಮನೆಯನ್ನು ಕಾಯುವುದು ಅಷ್ಟೇ ಕಷ್ಡದ ಕೆಲಸವಾಗಿರುತ್ತದೆ. ಕಾರಣ ಈ ನೀಲಿ ರಸಕ್ಕೆ ಒಳ್ಳೆಣ್ಣೆ ಬಿದ್ದರೆ ನೀಲಿ ಬಣ್ಣ ಸಂಪೂರ್ಣವಾಗಿ ತನ್ನತನ ಕಳೆದುಕೊಳ್ಳುತ್ತದೆ. ಅದರ ದುರ್ನಾಥ ತಡೆಯುವುದನ್ನು ಅಥವಾ ಸಹಿಸಿಕೊಳ್ಳುವುದು ಅಸಾಧ್ಯವಾಗುತ್ತದೆ. ಆಗ ಇದಕ್ಕೆ ನೀಲಿ ಕಟ್ಟ ಸುದ್ದಿ ಎನ್ನುತ್ತಾರೆ.

ಇಷ್ಟೆಲ್ಲ ತಯಾರಿಸುವುದು ಬಹಳ ಕಷ್ಟದ ಕೆಲಸವಾಗಿರುತ್ತದೆ. ಈಗಿನವರೆಗೆ ಈ ನ್ಯಾಚರಲ್‌ ನೀಲಿ ತಯಾರಿಸಲು ಕೂಡ ಬರುವುದಿಲ್ಲ. ಇಂಥ ನೀಲಿ ಕೈಗೆ ಹತ್ತಿದರೆ ಅದನ್ನು ತೊಳೆದರೂ ಹೋಗುವುದಿಲ್ಲ. ಇಷ್ಟೆಲ್ಲ ಕಠಿಣವಾದ ಕೆಲಸವನ್ನು ಮಾಡಲು ಆಗದಿರುವುದರಿಂದ “ಇಂಡಿಗೊ” ಎಂಬ ಹೆಸರಿನ ನೀಲಿ ಪುಡಿಯು ಸುಲಭವಾಗಿ ಮಾರುಕಟ್ಟೆಯಲ್ಲಿ ಸಿಗುತ್ತದೆ. ಅದನ್ನು ಸಹಿತ ಮಹಾರಾಷ್ಟ್ರದಿಂದ ತರಿಸಬೇಕಾಗುತ್ತದೆ. ತರಿಸಿದ ‘ಇಂಡಿಗೊ’ ನೀಲಿ ಪುಡಿಯನ್ನು ನೇರವಾಗಿ ತೂಕದ ಆಧಾರದ ಮೇಲೆ ನೀಲಿ ಹರವಿಗೆ ನೇರವಾಗಿ ಹಾಕಿದರೆ ಸದಾ ಬೆಚ್ಚಗಿರುವ ನೀಲಿ ಬಣ್ಣದಲ್ಲಿ ಕರಗಿ ಪುನಃ ನೂಲು (ಹಾಸು) ಎದ್ದಲು ಬರುತ್ತದೆ. ಮರುದಿನ ಮುಂಜಾನೆ ಅದನ್ನು ಮೂಸಿ ನೋಡುತ್ತಾರೆ. ಅದರಿಂದ ಒಂದು ತರಹದ ಹಣ್ಣಿನ ವಾಸನೆ (ಸ್ಮೆಲ್‌) ಬರುತ್ತದೆ. ಈಗ ನೀಲಿ ಬಣ್ಣ ಸಿದ್ಧಗೊಂಡ ಹಾಗೆ ಎಂದು ಕೇಲ ಎದ್ದುವವರು (ನೀಲಗಾರರು) ಹೇಳುತ್ತಾರೆ. ಈ ನೀಲಿ ಬಣ್ಣಕ್ಕೆ ಸುಣ್ಣ ಹಾಗೂ ಸವಳ ಕೂಡಿಸುತ್ತಾರೆ. ತಯಾರಿಸಿ ತಂದ ಹಾಸುಗಳನ್ನು ಈ ಮೊದಲೇ ಒಂದು ದಿನ ಮುಂಜಾನೆ ಕಲ್ಲಿನ ಡೋಣಿಯಲ್ಲಿ ಸೋಪು ಹಾಕಿ ಹಾಸುಗಳನ್ನು ತೋಯಿಸಲು ಹಾಗೂ ನೂಲಿನ ಮೆಲೆ ಇರುವ ಅಂಟನ್ನು ತೆಗೆದು ಹಾಕಲು ಕಲ್ಲಿನ ಡೋಣಿಯಲ್ಲಿ ನೆನೆ ಬಿಟ್ಟಿರುತ್ತಾರೆ. ಮರುದಿನ ಮುಂಜಾನೆ ಒಂದೊಂದೇ ಹಾಸನ್ನು ಹಿಂಡಿ ಇನ್ನೊಂದು ಕಲ್ಲಿನ ಕಟ್ಟೆಯ ಮೇಲೆ ಇರಿಸಿ ಕಡಿಮೆ ಎಂದರೂ ೧೦ ಕಿಲೋ ತೂಕದ ಕಟ್ಟಿಗೆಯ ಕೊಡತಿಯಿಂದ ಹಾಸನ್ನು ಬಡಿಯುತ್ತಾರೆ. ಇದಕ್ಕೆ ಪಟಗೆ ಬಡಿಯುವುದು ಎನ್ನುತ್ತಾರೆ.

ಪಟಗೆ ಬಡಿದ ನಂತರ ಬೇರೆ ಸ್ವಚ್ಚ ಸಿಹಿ ನೀರಿನಲ್ಲಿ ತೊಳೆಯುತ್ತಾರೆ. ಕೆಲವರು ತೊಳೆದು ಒಣಗಿಸುತ್ತಾರೆ. ಇಲ್ಲವಾದಲ್ಲಿ ಈ ಮೊದಲೇ ಇದ್ದ ಸ್ಥಿತಿಯಲ್ಲಿ ಹಸಿಯಾಗಿರುವ ನೂಲಿನ ಹಾಸನ್ನು ಹಿಂಡಿ ನೇರವಾಗಿ ನೀಲಿ ಬಣ್ಣದ ಹರವಿಯಲ್ಲಿ ಎಷ್ಟು ಗಟ್ಟಿ ಬಣ್ಣಬೇಕೊ ಅಷ್ಟು ಹರವಿಗಳಲ್ಲಿ ಎದ್ದಿ ಹಿಂಡಿ ಅವುಗಳನ್ನು ಗಟ್ಟಿ ಬಿದಿರಿನ ಗಳದ ಮೇಲೆ ಒಣ ಹಾಕುತ್ತಾರೆ. ಇದೂ ಕೂಡ ನೆರಳನಲ್ಲಿಯೇ ನಡೆಯುತ್ತದೆ. ಅವುಗಳು ಒಣಗಿದ ನಂತರ ಹಾಸನ್ನು ಝಾಡಿಸಿ ಹಾಸು ಸುತ್ತಿ ಅವುಗಳನ್ನು ಒಂದು ಬಟ್ಟೆಯಲ್ಲಿ ಕಡಿಮೆ ಎಂದರೂ ಮೂರು ದಿನಗಳ ಕಾಲ ಕಟ್ಟಿ ಇರಿಸಿ ನಾಲ್ಕನೇ ದಿನ ಒಂದೊಂದು ಹಾಸನ್ನು ಗಂಜಿಯಲ್ಲಿ ಎದ್ದಲು ಅಥವಾ ಉಂಕಿ ಹೂಡಲಿಕ್ಕೆ ಕೊಡುತ್ತಾರೆ. ಈ ನೀಲಿ ಬಣ್ಣ ಮಾಡಲಿಕ್ಕೆ ೩ ಜನ ಗಂಡಾಳು ಬೇಕಾಗುತ್ತಾರೆ.

ಉಂಕಿ ಹೂಡುವುದು : ಉಂಕಿ ಹೂಡಲಿಕ್ಕೆ ಬೇರೆ ಹೆಣ್ಣು ಮಕ್ಕಳು ಇರುತ್ತಾರೆ. ತಾವು ತಂದ ಹಾಸನ್ನು ಮೊದಲು ಸರಿಯಾಗಿ ನೆಲಕ್ಕೆ ಬಡಿದು ಹಾಸಿನ ತಲೆ ಅಣಿಯಲ್ಲಿ ಎರಡೂ ಕಡೆ ಊಂಕಿ ಕೋಲುಗಳನ್ನು ಏರಿಸಿ ಪ್ರತಿ ಅಣಿಗಳಿಗೂ ಉಂಕಿ ಕಂಬಿಗಳನ್ನು ಹೂಡಿ (ಏರಿಸಿ) ಎರಡೂ ಕಡೆಗೆ ತಲೆ ಅಣಿಯನ್ನು ಒಂದೊಂದೇ ಏಳೆಯನ್ನು ಹಿಂಜಿ ಉಂಕಿ ಹೂಡಲು ಬೇಕಾದ ಗಂಜ (ರಾಗಿ) ಅಥವಾ ಅಕ್ಕಿ ಅಥವಾ ಜೋಳದ ಹಿಟ್ಟು ಸಮಪ್ರಮಾಣದಲ್ಲಿ ಸೇರಿಸಿ ನೀರು ಹಾಕಿ ಗಂಜಿ ಕುದಿಸುತ್ತಾರೆ. ಆ ಗಂಜಿಯನ್ನು ಪಿಡಚಿಯಿಂದ ಎದ್ದಿ ಪಿಡಚಿಯಿಂದ ಹಾಸಿನ ಮೇಲೆ ಬಡಿಯುತ್ತಾ ಇರುತ್ತಾರೆ. ಹಾಸಿಗೆ ಗಂಜಿ ಸರಿಯಾಗಿ ಹತ್ತಿದೆಯೋ ಇಲ್ಲವೇ ಎಂದು ಪರೀಕ್ಷಿಸುತ್ತಾರೆ. ಈ ಗಂಜೀ ಬಡಿಯುವ ಪಿಡಚಿಯನ್ನು ಹರಿದ ಕಂಬಳಿಗಳ ತುಂಡುಗಳಿಂದ ತಯಾರಿಸಿರುತ್ತಾರೆ. ಇದರಿಂದ ಗಂಜೀ ಬಡಿಯುತ್ತಾರೆ. ಕಾರಣ ಕಂಬಳಿಯು ಉಣ್ಣೆಯಿಂದ ತಯಾರಿಸಿರುವುದರಿಂದ ಬಟ್ಟೆಗಿಂತ ಹೆಚ್ಚು ಬಿರುಸು ಇರುತ್ತದೆ. ಅಲ್ಲದೇ ಉರುಟಾಗಿರುವುದರಿಂದ ಇಂಥ ಹರಿದ ಕಂಬಳಿಯಿಂದ ತಯಾರಿಸಿದ ಪಿಡಚಿ ಮಾಡಿ ಗಂಜೀ ಬಡೆಯುವುದರಿಂದ ನೀಲಿ ಬಣ್ಣದ ನೂಲು ಗಂಜಿಯನ್ನು ಹೀರುತ್ತದೆ. ಅಲ್ಲದೆ ಎಳೆಯು ನೀರಸಾಗುತ್ತದೆ.

ಗಂಜಿ ಬಡಿದ ನೂಲಿನ ಹಾಸನ್ನು ಬಂಕದ ಕಲ್ಲುಗಳ ತೂತುಗಳಲ್ಲಿ ಇರಿಸುತ್ತಾರೆ. ಇನ್ನೊಂದು ಕಡೆಗೆ ಉಡೆತ್ತಲ ಇರಿಸಿರುತ್ತಾರೆ. ಬಂಕದ ಕಲ್ಲುಗಳು ಸುಮಾರು ೫” ಉದ್ದ ಇದ್ದು ಇದನ್ನು ಎರಡು ಅಡಿ ಹುಗಿದಿರುತ್ತಾರೆ. ಉಡೆತ್ತಲವನ್ನು ಜಗ್ಗಿದರೂ ಬಂಕದ ಕಲ್ಲುಗಳು ಕಿತ್ತುವುದಿಲ್ಲ. ಅಲ್ಲದೇ ಉಡೆತ್ತಲವನ್ನು ಕೂಡ ೪” ದಪ್ಪ ಇರುವ ಕಟ್ಟಿಗೆ ಎಳೆಗಳಿಂದ ಕತ್ತರಿ (ಕ್ರಾಸ್‌)ಯಲ್ಲಿ ಇರಿಸಿ ಅದರ ಮೇಲೊಂದು ಕಟ್ಟಿಗೆಯ ಹಣಿಪಟ್ಟಿ ಇರಿಸಿ ಆ ಹಣಿಪಟ್ಟಿಯಲ್ಲಿ ಕ್ರಾಸ್‌ ಮಾಡಿದ ಕಟ್ಟಿಗೆ ಎಳೆಗಳನ್ನು ಇರಿಸಿ ಕಟ್ಟಿಗೆಯ ಬೆಣೆ ಇಟ್ಟು ಗಟ್ಟಿಗೊಳಿಸಿರುತ್ತಾರೆ. ಈ ಹನಿ ಪಟ್ಟಿಯಲ್ಲಿ ದಪ್ಪ ಉಡತ್ತಲ ಹಗ್ಗವನ್ನು ಕಟ್ಟಿ ಹಾಸನ್ನು ಬಿಗಿಗೊಳಿಸಲು ಈ ಹಗ್ಗವನ್ನು ಜಗ್ಗುತ್ತಾರೆ. ಹಗ್ಗ ಸರಿಯಾಗಿ ಜಗ್ಗಲು ಬರುವಂತೆ ಎರಡು ತೂತುಗಳಿರುವ ಕಟ್ಟಿಗೆ ಗುದ್ದೆಗಳ ತುಂಡುಗಳನ್ನು ಇವುಗಳಿಗೆ ಸಾಕಳಾ ಹಾಕಿ ಉಡೆತ್ತಲದ ಹಣಿಪಟ್ಟಿಯ ಮಧ್ಯಕ್ಕೆ ಕಟ್ಟಿ ಗಂಚಿ ಬಾಡಿದ ಹಾಸನ್ನು ಇವೆರೆಡರ ಮಧ್ಯ ನಿಗಚಿ ಉಂಕಿ ಹೂಡಲು ಪ್ರಾಂಭಿಸುತ್ತಾರೆ. ಈ ಕ್ರಿಯೆಯೂ ಕೂಡ ನೆರಳಿನಲ್ಲಿಯೇ ಸಾಗಬೇಕಾಗುತ್ತದೆ.

ಹರಿದ ಎಳೆಗಳನ್ನು ಅಣೆಗಳ ಗುಂಟ ಕೆಚ್ಚಿಡುತ್ತಾರೆ. ಹಾಸು ಸ್ವಲ್ಪ ಹಸಿ ಇದ್ದಾಗಲೇ ಈ ಮೊದಲೇ ತಂದಿರಿಸಿದ ಕಂಚಿಕೊರವರು ಕಟ್ಟಿಕೊಟ್ಟ ಕುಂಚಿಗೆಯನ್ನು ಹುಣಸಿ ಕಡ್ಡಿಗಳಿಂದ ತಯಾರಿಸಿರುತ್ತಾರೆ. ಇದನ್ನು ಕಟ್ಟಿಗೆ ಪಟ್ಟಿಗೆಗಳಿಂದ ಬಿಗಿದಿರುತ್ತಾರೆ. ಮೇಲೊಂದು ಗೂಟ ಇರಿಸಿರುತ್ತಾರೆ. ಹುಣಸಿ ಕಡ್ಡಿಗಳಿಂದ ಕಟ್ಟಿದ ಕುಂಚಗಿಗೆ ಎಣ್ಣೆಯನ್ನು ಕೆಳಗೆ ಸವರಿ ಅದರ ಸಹಾಯದಿಂದ ಹಾಸಿನ ಮೇಲೆ ಹಾಸುವುದರಿಂದ ನೂಲಿನ ಕೆಳಗೆ ಸವರಿ ಅದರ ಸಹಾಯದಿಂದ ಹಾಸಿನ ಮೇಲೆ ಹಾಸುವುದರಿಂದ ನೂಲಿನ ಎಳೆಗಳಲ್ಲಿ ಇದ್ದ ಕುಡುಪುಗಳು ಕಡಿಮೆಯಾಗುತ್ತವೆ. ಅಲ್ಲದೇ ನೂಲಿನ ಎಳೆಗಳು ಎದ್ದಿದ್ದರೆ ನೂಲಿನ ಎಳೆಗುಂಟ ಮಡುಚುತ್ತದೆ. ಅಲ್ಲದೇ ಎಣ್ಣೆ ಹಚ್ಚಿ ಕುಂಚಗಿ ಹಾಸುವುದರಿಂದ ಉಂಕಿಗೆ ಮಿಂಚು ಬರುತ್ತದೆ. ಅಲ್ಲದೇ ಎಣ್ಣೆ ಹಚ್ಚಿ ಕುಂಚಗಿ ಹಾಸುವುದರಿಂದ ಉಂಕಿಗೆ ಮಿಂಚು ಬರುತ್ತದೆ. ನೀಲಿ ನೂಲು ಕಪ್ಪಾಗಲು ಗಂಜಿಯಲ್ಲಿ ಉಂಕಿ ಕಾಚನ್ನೂ ಸಹ ಕೂಡಿಸಿರುವುದರಿಂದ ಉಂಕಿ ಕಪ್ಪಾಗಿ ಮಿಂಚು ಹೆಚ್ಚುತ್ತದೆ. ಕುಂಚಿಗೆ ಆಡಿಸುವುದರಿಂದ ಎಳಿಗೆ ಎಳಿ ಹತ್ತುವುದಿಲ್ಲ. ಹಾಸು ಕೂಡ ಬೇಗ ಬೇಗ ಒಣಗುತ್ತದೆ.

ಉಂಕಿ ಹರಿಯಲ್ಲಿ ಹಾಕಿ ಒಣಗಿಸಿದ ಹಾಸನ್ನು ಹತ್ತು ಲಡಿಗಳನ್ನಾಗಿ ಬೇರೆ ಬೇರೆ ಮಾಡಿ ಒಂದೊಂದಕ್ಕೆ ಹುರಿ ಹಾಕಿ ಉಂಕಿ ಲಡಿಗಳನ್ನು ಸುತ್ತುತ್ತಾರೆ. ಹಾಗೆ ಉಂಕಿಗಳು ಹೊಕ್ಕುಗಳಾಗಲು ಸಿದ್ಧಗೊಳ್ಳುತ್ತವೆ. ಈ ಕ್ರಿಯೆಗೆ ಒಬ್ಬರು ಅಥವಾ ಇಬ್ಬರು ಬೇಕಾಗುತ್ತಾರೆ.

ಹೀಗೆ ತಯಾರಿಸಿದ ಉಂಕಿಯ ಒಂದೊಂದೇ ಲಡಿಯನ್ನು ಬಿಚ್ಚಿ ಸ್ವಲ್ಪ ಪ್ರಮಾಣದಲ್ಲಿ ಕೈಯಿಂದ ತಿಕ್ಕಿ ಇದನ್ನು ಮುದ್ದಿ ಗುಣಿಗಳಿಗೆ ಹಾಕುತ್ತಾರೆ. ಈ ಮುದ್ದಿ ಗುಣಿಗಳನ್ನು ಪಟಗಗಳಿಂದ ಇಲ್ಲವೆ ಕಟ್ಟಿಗೆಯ ಎಳೆಗಳಿಂದ ತಯಾರಿಸಿರುತ್ತಾರೆ. ಒಂದೊಂದು ಕಡೆ ಒಂದೊಂದು ಮುದ್ದಿ ಗುಣಿಗಳನ್ನು ಇರಿಸಿ ಅವುಗಳ ಗುಣಿಗಳಿಗೆ ಉಂಕಿಯ ತಲೆ ಅಣಿಯನ್ನು ಸಿಕ್ಕಿಸಿ ಎಳಿಗೆ ಎಳಿ ಹಿಂಚಿ ಅದರ ಒಂದು ಮೊದಲಿನ ಎಳೆಯನ್ನು ತಂದು ರಾಟಿಯಲ್ಲಿರಿಸಿದ ಗುಣಿಗೆ ಸುತ್ತಲು ಪ್ರಾರಂಭಿಸುತ್ತಾರೆ. ಗುಣಿಯ ಮೆಲೆ ಬಿಗಿಯಾಗಿ ಉಂಕಿಯ ಎಳೆಯನ್ನು ಸುತ್ತುವುದರಿಂದ ಕಂಡಕಿ ತಯಾರಾಗುತ್ತದೆ. ಒಂದು ಉಂಕಿಗೆ ೧೫ ಅಥವಾ ೨೦ ಕಂಡಕಿಗಳು ತಯಾರಾಗುತ್ತವೆ. ಈ ಕ್ರಿಯೆಗೆ ಒಬ್ಬ ಹುಡುಗ ಇಲ್ಲವೆ ಒಂದು ಹುಡುಗಿ ಸಾಕಾಗುತ್ತದೆ. ಇಲ್ಲವೆ ದೊಡ್ಡ ಹೆಣ್ಣು ಮಗಳಾದರೂ ಸಿದ್ಧಗೊಳ್ಳಬೇಕಾಗುತ್ತದೆ. ಎಳಿ ಹರಿದಾಗೊಮ್ಮೆ ಹೆಣ್ಣು ಮಗಳಿಗೆ ಎದ್ದು ಕುಳಿತು ಮಾಡುವುದು ತೊಂದರೆಯಾದರೆ ಹರಿದ ಎಳೆಯನ್ನು ತಂದು ಕೊಡಲು ಒಂದು ಮಗುವಿನ ಸಹಾಯಬೇಕಾಗುತ್ತದೆ. ಕಂಡಕಿಗಳನ್ನು ಸಿದ್ಧಗೊಳಿಸುತ್ತಾರೆ.

ಹಣಗಿ ಕಟ್ಟುವ ಕೆಲಸ (ಪದ್ಧತಿ) : ಇದೂ ಕೂಡ ಬಹು ಜಾಣ್ಮೆಯ ಕೆಲಸವಾಗಿದೆ. ಹಣಗಿ ಕಟ್ಟಲಿಕ್ಕೆ ೧೨೦ ನಂಬರಿನ ಗಟ್ಟಿ ದಾರ ಬೇಕು. ೨೦೦ ರಿಂದ ೨೪೦ ಮೀಟರ್ ಉದ್ದವಿರುತ್ತದೆ ಇದನ್ನು ಒಂದು ರೀಲಿಗೆ ಸುತ್ತಿರುತ್ತಾರೆ. ಇದನ್ನು ಒಂದು ನುಣುಪಾದ ಕೈಕೊಡ್ಡದ ಮೇಲೆ ಮೇಲೆ ತಂದು ತಂತಿಯ ಕಡ್ಡಿಯನ್ನು ಇರಿಸಿ ಆ ತಂತಿಯ ಕಡ್ಡಿಗೆ ಒಮ್ಮೆ ಹಾಗೂ ಅಳತೆಯ ಕೈ ಕೊಡ್ಡಕ್ಕೆ ಒಮ್ಮೆ ಕೈಯಿಂದ ಹೆಣಕಿ ಹಾಕುತ್ತ ಹೋಗುತ್ತಾರೆ. ಇದಕ್ಕೆ ವಿನ್ಯಾಸವನ್ನು ಪ್ರಕಾರ ಬದನಿ ಸೆಳ್ಳುಗಳ ಮೇಲೆ ಕಟ್ಟುತ್ತಾರೆ. ದಡಿಗೆ, ದಡಿಪೆಟ್ಟಿಗೆ ಗೀರಿಗೆ ಭೂಮಿಗೆ ಬೇರೆ ಬೇರೆ ಬಣ್ಣಗಳ ಎಳೆಗಳಿಂದ ತಟ್ಟಿನ ಒಂದೊಂದೇ ಮಣಿಯಲ್ಲಿ ತುಂಬುತ್ತಾರೆ. ಇದರಿಂದ ನೇಕಾರರಿಗೆ ಬೇರೆ ಬೇರೆಯಾಗಿ ಕೆಚ್ಚಿಕೊಳ್ಳಲು ಅನುಕೂಲವಾಗುತ್ತದೆ.

ಹಣಗಿ ಕಟ್ಟುವಾಗ ಕಟ್ಟುವ ಕೈಗಳು ಚಕಮಕಿಯಾಗಿ ಓಡಾಡುವುದು ಒಂದು ಸೊಗಸು ಇದೊಂದು ಅದ್ಭುತವಾದ ಕಲೆಯೂ ಕೂಡ. ಹಣಗಿ ಕಟ್ಟುವವರಿಗೆ ಸಾಕಷ್ಟು ಬೆಳಕಿನ ಸೌಲಭ್ಯ ಬೇಕಾಗುತ್ತದೆ. ನೂಲಿನ ದಾರವನ್ನು ಹೀಗೆಯೇ ತಂತಿಬೆಜ, ತಟ್ಟು ಬದನಿ ಸೆಳ್ಳುಗಳ ಕಂಬಿಗಳು ಮಣಿಕಡ್ಡಿ ಇವೆಲ್ಲವು ಸಹಾಯದಿಂದ ಇದನ್ನು ಅನುಭವಿ ಹೆಣ್ಣು ಮಗಳು ಅಥವಾ ಗಂಡು ಮಗ ಒಬ್ಬರೆ ಇದ್ದರೆ ಕ್ರಿಯೆ ಮುಗಿಯುತ್ತದೆ. ನೇಕಾರನಿಗೆ ಅವಸರವಿದ್ದರೆ ಇಬ್ಬರು ಕೂಡಿಕೊಂಡು ಹಣಗಿ ಕಟ್ಟುತ್ತಾರೆ. ಈಗ ಹಣಗಿ ಕೆಚ್ಚಲಿಕ್ಕೆ ಸಿದ್ಧಗೊಳ್ಳುತ್ತದೆ. ಇಲ್ಲಿಗೆ ಎರಡನೆಯ ಹಂತ ಮುಗಿಯುತ್ತದೆ.

ಮೂರನೆಯ ಹಂತದಲ್ಲಿ ರೇಷ್ಮೆಗೆ ಬಣ್ಣ ಹಾಕುವ ಮೊದಲು ಕಚ್ಚಾ ರೇಷ್ಮೆಯನ್ನು ತಂದು ಅದನ್ನು ತೂಕ ಮಾಡಿ ಹುರಿಕಾರರ ಕಾರಖಾನಗೆ ಕಳುಹಿಸುತ್ತಾರೆ. ಹುರಿಕಾರರು (ಟ್ವಿಸ್ಸಿಂಗ್‌ ಫ್ಯಾಕ್ಟರಿಯವರು) ರೇಷ್ಮೆಯ ಮೂಟೆಗಳನ್ನು ತೂಕ ಮಾಡಿಕೊಂಡು ರೇಷ್ಮೆಯ ಮೂಟೆಯನ್ನು ಬಿಚ್ಚಿ ಬಳೆಗಳನ್ನು ಬೇರ್ಪಡಿಸಿ ನೀರಿನ ಕಡಾಯಿಯಲ್ಲಿ ಸ್ವಚ್ಛ ನೀರನ್ನು ಹಾಕಿ ಅದಕ್ಕೆ ಸ್ವಲ್ಪ ಪ್ರಮಾಣದಲ್ಲಿ ಕೊಬ್ಬರಿ ಎಣ್ಣೆಯನ್ನು ಕೈಯಲ್ಲಿ ಚೆನ್ನಾಗಿ ತಿಕ್ಕಿ ನೀರಿಗೆ ಹಾಕುತ್ತಾರೆ. ರೇಷ್ಮೆ ಬಳೆಗಳನ್ನು ಆ ಕಡಾಯಿಯ ನೀರಿನಲ್ಲಿ ತೋಯಿಸಿ ನೆನೆ ಬಿಡುತ್ತಾರೆ. ಕಾರಣ ರೇಷ್ಮೆಯ ಎಳೆಯ ಮೇಲೆ ಸ್ವಲ್ಪ ಪ್ರಮಾಣದಲ್ಲಿ ಅಂಟಿನ ಅಂಶವಿರುವುದರಿಂದ ಅದನ್ನು ತೆಗೆದು ಹಾಕಲು ಈ ಕ್ರಮ ಜರುಗಿಸುತ್ತಾರೆ. ರೇಷ್ಮೆ ಬಳೆಗಳನ್ನು ಸುಮಾರು ೬ ತಾಸುಗಳವರೆಗೆ ನೆನೆಸುತ್ತಾರೆ. ನಂತರ ಹೊರ ತೆಗೆದ ಬಳೆಗಳನ್ನು ಹಿಂಡಿ ಒಣಗಿಸುತ್ತಾರೆ.

ಹೀಗೆ ಸಿದ್ಧಗೊಳಿಸಿದ ಬಳಿಗಳನ್ನು ರಾಟಿಗಳ ಮೇಲೆ ಹಾಕುತ್ತಾರೆ. ಈ ತಂತಿಗಳಿಂದ ತಯಾರಿಸಿದ ರಾಟಿಗಳು ಇವುಗಳನ್ನು ರೇಷ್ಮೆ ಬಳಿಗಳಿಗೆ ಎಷ್ಟು ಬೇಕೋ ಅಷ್ಟು ಮಣಿಸುತ್ತ ರಾಟಿಗಳಿಗೆ ರೇಷ್ಮೆ ಬಳೆಯಲ್ಲಿಯ ಒಂದು ಎಳೆಯನ್ನು ಒಂದು ಕೊಂಡಿಯಲ್ಲಿ ಹಾಕಿ ಅದನ್ನು ರೀಲುಗಳಿಗೆ ಸುತ್ತುತ್ತಾರೆ. ರೇಷ್ಮೆಯ ಎಳೆಯಿಂದ ತುಂಬಿದ ರೀಲುಗಳನ್ನು ಇವುಗಳಿಗೆ ಅರ್ಧ ತಾಸು ಉಗಿ (ಸ್ಟೀಮ್‌) ಕೊಡುತ್ತಾರೆ. ಹೀಗೆ ಸ್ಟೀಮ್‌ ಮಾಡಿದ ರೀಲುಗಳನ್ನು ಒಂಟಿ ಎಳೆಯಿಂದ ಜೋಡೆಳಿ ಮಾಡಲು ಡಬ್ಲಿಂಗ್‌ ಮಷಿನ್‌ಗಳಿಗೆ ಒಂದೊಂದೇ ರೀಲುಗಳನ್ನು ಇಟ್ಟು ಎರಡು ರೀಲುಗಳ ಒಂಟಿ ಎಳೆ ಇನ್ನೊಂದು ರಿಂಗಿಗೆ ಹೋಗಿ ಅದು ಜೋಡಿ ಎಳೆಯಾಗಿ ಪರಿವರ್ತಗೊಂಡು ಒಂದು ರೀಲು ತಯಾರಾಗುತ್ತದೆ. ಜೋಡಿ ಎಳೆಯಾಗುವಾಗಲೇ ಅದಕ್ಕೆ ಹುರಿ ಬೀಳುತ್ತ ಸಾಗುತ್ತದೆ. ಹುರಿ ಹಾಕಿ ತಯಾರಿಸಿದ ಆ ರೀಲು (ಬಾಬಿನ್‌)ಗಳನ್ನು ಡೋಲೆಯ ಮುಂದೆ ಒಂದು ಕಟ್ಟಿಗೆಯ ಘಳಿಗಳಲ್ಲಿ ತೂತನ್ನು ಇರಿಸಿ ಅವುಗಳ ಕೆಳಗೆ ಇರಿಸಿದ ರೀಲುಗಳ ಒಂದೊಂದೇ ಎಳೆಯನ್ನು ಫಳಿಗಳ ತೂತುಗಳಲ್ಲಿ ಹಾಯಿಸಿ ದಡಿಗೆ, ಪೇಟಿಗೆ ಭೂಮಿಗೆ ಕೆಚ್ಚಲು ಬೇಕಾಗುವ ಎಳೆಗಳ ಲೆಖ್ಖಗಳಿಂದ ಡೋಲೆಯಲ್ಲಿಯೇ ವ್ಯವಸ್ಥೆ ಇರುತ್ತದೆ. ಈ ಡೋಲೆಯನ್ನು ಕಬ್ಬಿಣ ಸುಳಿಗಳಿಂದ ಹಾಗೂ ಪಟ್ಟಿಗಳಿಂದ ತಯಾರಿಸಿ ಇರಿಸಿರುತ್ತಾರೆ. ಪ್ರತಿ ೫’ ಗೊಮ್ಮೆ ಕತ್ತರಿ ಅಣಿ ಬೀಳುವಂತೆ ಇದರಲ್ಲಿ (ಡೋಲೆ) ವ್ಯವಸ್ಥೆ ಇರುತ್ತದೆ. ಒಬ್ಬ ವ್ಯಕ್ತಿ ತೂಕ ಎಳೆ ಹಾಗೂ ಉದ್ದಕ್ಕೆ ಬೇರೆ ಬೇರೆಯಾಗಿ ಪಾಗಡಿಗಳನ್ನು ತಯಾರಿಸುತ್ತಾನೆ. ಒಂದು ಪಾಗಡಿ ಉದ್ದ ೨೨ ಗಜದಿಂದ ೨೪ ಗಜದವರೆಗೆ ಇರಿಸುತ್ತಾರೆ. ಕಾರಣ ದಡಿಪೇಟಿ ಭುಮಿಗೆ ಉದ್ದಳತೆ ಹೆಚ್ಚು ಕಡಿಮೆ ಇರುವುದರಿಂದ ಈ ರೀತಿ ಕ್ರಮ ಜರುಗಿಸುತ್ತಾರೆ. ಇದಕ್ಕೆ ಹುರಿಹಾಕುವ ಅಥವಾ ಟ್ವಿಸ್ಟ್‌ ಮಾಡುವ ಪ್ರಕ್ರಿಯೆ ಎನ್ನುತ್ತಾರೆ. ಇಲ್ಲಿ ೨೫ ರಿಂದ ೩೦ ಜನ ಕೆಲಸಗಾರರು ಬೇಕಾಗುತ್ತಾರೆ. ನೂಲಿನ ಹಾಸು ತಯಾರಿಸುವ ಹಾಗೂ ರೇಷ್ಮೆ ಪಾಗಡಿಗಳನ್ನು ಮಾಡುವ ಕ್ರಿಯೆ ಹೆಚ್ಚು ಕಡಿಮೆ ಒಂದೇ ಆಗಿರುತ್ತದೆ. ಇವೆಲ್ಲವುಗಳು ಯಂತ್ರಗಳ ಸಹಾಯದಿಂದ ನಡೆಯುತ್ತದೆ.

ಹೀಗೆ ಸಿದ್ಧಗೊಳಿಸಿದ ರೇಷ್ಮೆ ಪಾಗಡಿಗಳನ್ನು ಬಣ್ಣದ ಮನೆಗೆ ಕಳುಹಿಸುತ್ತಾರೆ. ಈ ಬಣ್ಣದ ಮನೆಯಲ್ಲಿ ಬಣ್ಣ ಮಾಡಲು ಬೇಕಾಗುವ ಪ್ರಮುಖ ವಸ್ತುಗಳೆಂದರೆ ಗಟ್ಟಿ ಬಿದಿರಿನ ೬’ ಉದ್ದವಿರುವ ೪ ಕೋಲುಗಳು ಕುಂಬಾರರು ತಯಾರಿಸಿದ ೨’ ಎತ್ತರ ಹಾಗೂ ೪’ ವ್ಯಾಸವುಳ್ಳ ಒಂದು ಇಂಚು ದಪ್ಪವಿರುವ ೪ ಮಣ್ಣಿನ ಮಂದಾಣಿಗಳು ೪ ಚಿಕ್ಕ ಚಿಕ್ಕ ಕೈ ಕೋಲುಗಳು, ಬಣ್ಣ (ಕಾರ) ದಲ್ಲಿ ಅದ್ದಿದ ಪಾಗಡಿಗಳನ್ನು ಹಿಂಡಲು ೫’ ಎತ್ತರವಿರುವ ಗಟ್ಟಿ ಕಂಬ ಇದಕ್ಕೆ ಘೋಡಾ ಎನ್ನುತ್ತಾರೆ. ಕೈಗುಣಿಗಳು ಬಣ್ಣವನ್ನು ತೂಕ ಮಾಡಿ ಹಾಕಲು ಒಂದು ತಕ್ಕಡಿ ಹಾಗೂ ತೂಕದ ಕಲ್ಲುಗಳು ನಮಗೆ ಬೇಕಾಗುವ ಬೇರೆ ಬೇರೆ ಬಣ್ಣದ ಡಬ್ಬಿಗಳು. ಒಂದು ದಪ್ಪ ತಗಡಿನ ತಾಮ್ರದಿಂದ ತಯಾರಿಸಿದ ಒಂದು ಕಡಾವಿ (ಕಡಾಯಿ) ಇದರ ಎತ್ತರ ೨’ ಇದ್ದು ೮’ ವ್ಯಾಸವುಳ್ಳದ್ದು ಇರುತ್ತದೆ. ಇದಕ್ಕೆ ಎರಡು ಕಡೆಗೆ ಹಿತ್ತಾಳೆ ಬಳೆಗಳನ್ನು ಅಳವಡಿಸಿರುತ್ತಾರೆ. ರೇಷ್ಮೆ ಪಾಗಡಿಗಳನ್ನು ಕೆದರಲು ನಾಲ್ಕು ಸಣ್ಣ ಕೈ ಸಲಾಕೆಗಳು ರೇಷ್ಮೆ ಪಾಗಡಿಗಳನ್ನು ಬಣ್ಣದಿಂದ ತಯಾರಿಸಿದ ಮೇಲೆ ಸುತ್ತಿ ಇಡಲು ತಟ್ಟಿನ (ಗೋಣಿಚೀಲ) ತುಂಡುಗಳು ಬಣ್ಣದ ಕಾವಿನಿಂದ ಕೈ ಸುಡಬಾರದೆಂದು ಕೈ ಕುಬಸ (ಹ್ಯಾಂಡಗ್ಲೌಸ್‌) ೨ ಜೋಡಿಗಳು ಪ್ರಮುಖವಾಗಿ ಬೇಕಿರುವ ಸಾಮಗ್ರಿಗಳು.

ರೇಷ್ಮೆಯ ಪಾಗಡಿಗಳನ್ನು ಮೊದಲು ತಣ್ಣೀರಿನಲ್ಲಿ ಸ್ವಲ್ಪ ಸೋಪಿನ ನೀರು ಕೊಡಿಸಿ ಅವುಗಳನ್ನು ಒಂದು ಮಣ್ಣಿನ ಮಂದಾಣಿಯಲ್ಲಿ ನೆನೆ ಹಾಕುತ್ತಾರೆ. ನಂತರ ೨ ತಾಸುಗಳಲ್ಲಿ ನೆನೆದ ನಂತರ ಅವುಗಳನ್ನು ಸರಿಯಾಗಿ ಝಟಕಾ ಅಥವಾ ಘೋಟಾಕ್ಕೆ ಹಾಕಿ ನೀರನ್ನು ಹಿಂಡುತ್ತಾರೆ.

ಬಣ್ಣದ ಒಲೆಯನ್ನು ನೆಲದ ಮೇಲೆ ೪’ ಎತ್ತರದಲ್ಲಿ ಕಟ್ಟುತ್ತಾರೆ. ಇದರಲ್ಲಿ ಇಟ್ಟಿಗೆ ಅಥವಾ ಮಣ್ಣಿನಿಂದ ತಯಾರಿಸಿದ ಗಟ್ಟಿಗಳಿಂದ ಒಲೆಯನ್ನು ಕಟ್ಟುತ್ತಾರೆ. ಇದೂ ಒಂದು ವ್ಯವಸ್ಥಿತವಾಗಿರಬೇಕಾಗುತ್ತದೆ. ಕೆಳಗೆ ಹಚ್ಚಿದ ಜಲಾವ್‌ ಅಥವಾ ಕಟ್ಟಿಗಳಿಗೆ ಒಲೆ ಹೊತ್ತಿಸಿದಾಗ ಅದರ ಜ್ವಾಲೆಗಳು ತಾಂಬ್ರದ ಕಡಾಯಿಗೆ ಕೆಳಗೆ ಮಾತ್ರ ತಾಕುವಂತೆ ಮಾಡುತ್ತಾರೆ. ಜಲಾವಿನ ಜಳವಾಗಲಿ ಹೊರಗೆ ಬಂದರೆ ಬಣ್ಣ ಮಾಡುವವರಿಗೆ ಹೆಚ್ಚು ತೊಂದರೆಯಾಗುತ್ತದೆ. ಅಲ್ಲದೇ ಜ್ವಾಲೆಗಳು ಹೊರಗೆ ಹೋದರೆ ಕಡಾವಿಗೆಯಲ್ಲಿ ಕಟ್ಟಿದ ನೀರು ಬೇಗ ಕಾಯುವುದಿಲ್ಲ. ಹಾಗೆ ಕಡಾವಿಗೆಯ ಸುತ್ತ ಹಾಗೂ ಒಲೆಯನ್ನು ಕಟಗದಿಂದಲೇ ಮೆತ್ತಿ ಜ್ವಾಲೆಗಳು ಹೊರಗೆ ಬರದಂತೆ ರೂಪಿಸಿರುತ್ತಾರೆ. ಬಣ್ಣ ಮಾಡುವವರಿಗೆ ಒಂದು ಅಡಿ ಎತ್ತರದ ಕಟ್ಟೆಗಳನ್ನು ಕಟ್ಟಿರುತ್ತಾರೆ. ಆ ಒಲೆಗೆ ನಡುವೆ ದಪ್ಪ ಕಬ್ಬಿಣದ ಹಾರಿಗಳನ್ನು ಹಾಕುತ್ತಾರೆ ಕಾರಣ ಕಬ್ಬಿಣದ ಹಾರಿಗಳು ಬೇಗ ಕಾಯ್ದು ಹಚ್ಚು ಸಮಯದವರೆಗೆ ಬಿಸಿ ಇರುತ್ತವೆ. ಅಕಸ್ಮಾತ್‌ ಜಲಾವಗಳು ಸರಿಯಾಗಿ ಉರಿಯದಿದ್ದರೆ ಬಣ್ಣದ ನೀರು ಕುದಿಯಲು ಹೆಚ್ಚು ಶಾಖವಿರಬೇಕಾಗುತ್ತದೆ. ಕಟಗ ಹಚ್ಚುವುದರಿಂದ ಒಲೆಯಲ್ಲಿರುವ ಜ್ವಾಲೆಗಳನ್ನು ತಡೆಯುವ ಶಕ್ತಿ ಹೊಂದಿರುತ್ತದೆ. ಈ ಹಳೆಯ ಪದ್ಧತಿಯನ್ನೇ ಎಲ್ಲರೂ ಅನುಸರಿಸುತ್ತಾರೆ.

ಬಣ್ಣವು ಸ್ವಾಭಾವಿಕವಾಗಿ ರೇಷ್ಮೆ ಪಾಗಡಿಗಳಿಗೆ ಹತ್ತಿಕೊಳ್ಳಬೇಕಾಗುವುದರಿಂದ ಎಲ್ಲವೂ ನ್ಯಾಚರಲ್‌ ಸಿಸ್ಟಮ್‌ದಲ್ಲೇ ನಡೆಯುತ್ತದೆ. ನೇಕಾರರಿಗೆ ಬೇಕಾಗಿರುವ ಬಣ್ಣದ ಪಾಗಡಿಗಳನ್ನು ಮಾಡಲು ಬೇಕಾಗುವ ಬಣ್ಣವೂ ಕೂಡ ನೇಚರದಿಂದ ತಯಾರಾಗಿರುತ್ತದೆ. ಸೀಗಿಕಾಯಿ, ಅರಿಷಿಣ, ದಾಳಿಂಬರದ ಸೊಟ್ಟಗಳು, ಅಳ್ಳಿಕಾಯಿ ಹಿಟ್ಟು ಹೀಗೆ ಸೃಷ್ಟಿಯಲ್ಲೆಯೆ ಸಿಗುವ ವಸ್ತುಗಳಿಂದ ಬಣ್ಣಗಳನ್ನು ತಯಾರಿಸಿರುತ್ತಾರೆ. ಇವುಗಳಿಗೆ ಸ್ವಲ್ಪ ಪ್ರಮಾಣದಲ್ಲಿ ಕೆಮಿಕಲ್ಸ್‌ಗಳನ್ನು ಮಾತ್ರ ಸೇರಿಸಿರುತ್ತಾರೆ. ಹೀಗಾಗಿ ಬಣ್ಣವು ಸ್ವಾಭಾವಿಕವಾಗಿ ಅಧಿಕೃತವಾಗಿ ಉಳಿಯುತ್ತದೆ. ಬಣ್ಣ ಗ್ಯಾರಂಟಿ ಉಳಿಯಲು ಬಣ್ಣ ಮೂಲ ಗುಣಗಳನ್ನು ಬಿಟ್ಟು ಕೊಡುವುದಿಲ್ಲವಾದ್ದರಿಂದ ರೇಷ್ಮೆಯ ಬಣ್ಣವನ್ನು ಗ್ಯಾರಂಟಿ ಕಲರ್ ಎಂದು ಕೊಡುತ್ತಾರೆ. ನೆನೆ ಹಾಕಿದ ರೇಷ್ಮೆಯ ಪಾಗಡಿಗಳನ್ನು ಹಿಂಡಿದ ನಂತರ ಅವುಗಳನ್ನು ಬಿಸಿ ನೀರು ಕಳಕಳ ಕುದಿಯಬೇಕಾಗುತ್ತದೆ. ೧೪೦ ಡಿಗ್ರಿ ಸೆಂಟಿಗ್ರೇಡ್‌ ನೀರು ಕಾದ ಮೇಲೆ ಅದರಲ್ಲಿ ಸೋಡಾಪುಡಿ ಹಾಕಿ ತೋಯಿಸಿ ಹಿಂಡಿದ ರೇಷ್ಮೆಯನ್ನು ಎದ್ದಿದಾಗ ರೇಷ್ಮೆಯ ಮೇಲೆ ಅಂಡಿಕೊಂಡಿರುವ ಅಂಟಿನ ಅಂಶವನ್ನು ತೆಗೆಯುತ್ತಾರೆ. ಇದಕ್ಕೆ ಉಕಾರ ತೆಗೆಯುವುದು ಎನ್ನುತ್ತಾರೆ.

ಉಕಾರ ತೆಗೆದು ಪಾಗಡಿಗಳನ್ನು ನೀರಿನಲ್ಲಿ ತೊಳೆದು ಅವುಗಳನ್ನು ಬೀಸಿ ಕಲ್ಲಿನ ಕಟ್ಟಿಗೆ ಬಡಿಯುತ್ತಾರೆ. ಇದಕ್ಕೆ ಪಟಗೆ ಬಡೆಯುವುದು ಅನ್ನುತ್ತಾರೆ. ಇವುಗಳನ್ನು ಊಟಿ ನೀರಿನಲ್ಲಿ ತೊಳೆಯುತ್ತಾರೆ. ಇತ್ತಿತ್ತಲಾಗಿ ನಳದ ನೀರು ಮಲಪ್ರಭಾ ನದಿಯಿಂದ ಬರುವುದರಿಂದ ಈ ನದಿಯ ನೀರಿಗೆ ಕೆಲವು ಕೆಮಿಕಲ್ಸ್‌ಗಳನ್ನು ಹಾಕಿ ನೀರನ್ನು ಸ್ವಚ್ಛಗೊಳಿಸಿ ಆ ನೀರಿನಲ್ಲಿ ಪಾಗಡಿಗಳನ್ನು ತೊಳೆದು ಒಂದು ತಟ್ಟಿನ (ಬಾರದಾನ) ಅಥವಾ ಗೋಣಿ ಚೀಲದ ತಟ್ಟಿನಲ್ಲಿ ಸುತ್ತಿ ಇಡುತ್ತಾರೆ. ಮರುದಿವಸ ಮುಂಜಾನೆ ತೊಳೆದು ಬಣ್ಣ ಮಾಡಲು ಸಿದ್ಧಗೊಲಿಸುತ್ತಾರೆ. ತಮಗೆ ಬೇಕಾಗುವ ಕೆಂಪು, ಗಿಳಿಹಸಿರು, ಮಾವಿ, ಪಾರ್ವಿ, ಪೋಪಟಿ, ಕಪ್ಪು, ಬಿಳಿ, ಕಡುನೀಲಿ ಇತ್ಯಾದಿ ಬೇರೆ ಬೇರೆ ಬಣ್ಣಗಳನ್ನು ಕುದಿಯುವ ನೀರಿಗೆ ತೂಕದಿಂದ ಇರಿಸಿ ಅಸಿಡ್‌ದಲ್ಲಿ ಬಣ್ಣದ ಪಾಗಡಿಗಳನ್ನು ತಯಾರಿಸುವುದು ಒಂದು ರೀತಿಯದಾದರೆ. ತಣ್ಣಿರಿನಲ್ಲಿ ಕೆಲವು ಕೆಮಿಕಲ್ಸ್‌ ಹಾಕಿ ಬಣ್ಣಗಳನ್ನು ಮಂದಾಣಿಗಳಲ್ಲಿ ಕಲಸಿ ಅವುಗಳಲ್ಲಿ ಉಕಾರ ತೆಗೆದು ರೇಷ್ಮೆ ಪಾಗಡಿಗಳನ್ನು ಎದ್ದಿ ಬಣ್ಣ ಮಾಡುವುದು ಇದು ಎರಡನೆಯ ಪದ್ಧತಿ. ಇಲ್ಲಿ ಕೆಲವು ಬಣ್ಣಗಳನ್ನು ಮಾತ್ರ ಮಾಡುತ್ತಾರೆ.

ಪುನಃ ಇವುಗಳನ್ನು ಬಾರದಾನದಲ್ಲಿ ಸುತ್ತಿ ಇಟ್ಟು ಮತ್ತೊಂದು ದಿನ ಬಿಟ್ಟು ಪುನಃ ಸ್ವಚ್ಛವಾದ ಸಿಹಿ ನೀರಿನಲ್ಲಿ ತೊಳೆದು ಗಟ್ಟಿ ಬಿದಿರಿನ ಡಂಬೂಗಳ ಮೇಲೆ ನೆರಳಿನಲ್ಲಿ ಒಣಗಿಸುತ್ತಾರೆ. ಒಣಗಿದ ನಂತರ ಒಂದೊಂದೇ ಪಾಗಡಿಯನ್ನು ಜಟಕಾಕ್ಕೆ ಹಾಕಿ ಸಣ್ಣ ವಣಕಿಯಿಂದ ಬಡಿದು ಇಳಿಬಿದ್ದ ಪಾಗಡಿಗಳನ್ನು ಸರಿಪಡಿಸಿ ಒಂದೊಂದೇ ಪಾಗಡಿಯನ್ನು ಹುರಿ ಹಾಕುವಾಗ ರೇಷ್ಮೆ ಪಾಗಡಿ ನರಕ್‌ ನರಕ್‌ ಎಂದು ಸಣ್ಣಗೆ ಸಪ್ಪಳ ಮಾಡುತ್ತವೆ. ಇದಕ್ಕೆ ರೇಷ್ಮೆ ಹುರಿ ಮಾಡುವುದು ಎನ್ನತ್ತಾರೆ. ಹೀಗೆ ಕಟ್ಟಿದ ರೇಷ್ಮೆ ಹುರಿಗಳನ್ನು ಬೇರೆ ಬೇರೆ ಬಣ್ಣದಿಂದ ತಯಾರಿಸಿ ಒಂದು ಕಡೆ ನಿಟ್ಟು ಹಚ್ಚಿದಾಗ ನೋಡಬೇಕು ಅವುಗಳ ಬಣ್ಣದ ಚೆಲವು. ಈ ಕೆಲಸಗಾರರನ್ನು ಬಣ್ಣ ಮಾಡುವವರು ಎನ್ನುತ್ತಾರೆ. ಇದಕ್ಕೆ ೩ ಅಥವಾ ೪ ಜನ ಕೆಲಸಗಾರರು ಬೇಕಾಗುತ್ತಾರೆ. ಇಲ್ಲಿಗೆ ೩ನೇ ಹಂತ ಮುಕ್ತಾಯವಾಗುತ್ತದೆ.

ನಾಲ್ಕನೇ ಹಂತದಲ್ಲಿ ಹೀಗೆ ಬಣ್ಣದ ಪಾಗಡಿಗಳನ್ನು ಬಂಕದ ಕಲ್ಲು ಮತ್ತು ಉಡೆತ್ತಲದ ನಡುವೆ ಉದ್ದಕೆ ನಿಗಚಿ ತಲೆ ಅಣಿಗೆ ಕೋಲು ಸೇರಿಸಿ ಬಂಕದಕಲ್ಲ ಒಂದು ಕೋಲು ಇರಿಸಿ ಇನ್ನೊಂದನ್ನು ಉಡೆತ್ತಲಕ್ಕೆ ಬಳದಾರದ ಸಹಾಯದಿಂದ ಕೋಲನ್ನು ಕಟ್ಟುತ್ತಾರೆ. ನಡುವೆ ಇರುವ ೧೨ ಅಣಿಗಳಿಗೆ ಕಂಬಿಗಳನ್ನು ಏರಿಸಿ ಅಣಿ ಗುಂಟ ಹಿಂಜುತ್ತಾರೆ. ಪಾಗಡಿಯಲ್ಲಿ ಎಳೆಗಳು ಹರಿದಿದ್ದರೆ ಇವುಗಳನ್ನು ಅಣಿಗುಂಟ ಕಟ್ಟುತ್ತಾರೆ. ಕಟ್ಟುವಾಗ ಎದುರು ಬದರಿನ ಎಳೆಯೇ ಆಗಬೇಕು ಇಲ್ಲವಾದಲ್ಲಿ ಎಳೆಗಳು ಕತ್ತರಿಗೊಂಡು ನೇಯುವಾಗ ತೊಂದರೆಯಾಗುತ್ತದೆ. ಹೀಗೆ ಮಾಡುವ ಕ್ರಿಯೆಗೆ ಪಾಗಡಿ ಸ್ವಚ್ಛ ಮಾಡುವುದು ಎನ್ನುತ್ತಾರೆ.

ಮುಂದೆ ಇದನ್ನು ಸರಾಳಿ ಅಂಟು ಅಥವಾ ಜಾಲಿ ಅಂಟಿನ ನೀರಿನಲ್ಲಿ ಎದ್ದಿ ಪುನಃ ತಲೆ ಅಣಿಗೆ ಕೋಲುಗಳನ್ನು ಏರಿಸಿ ಪುನಃ ಬಂಕದ ಕಲ್ಲು ಮತ್ತು ಉಡೆತ್ತಲ ನಡುವೆ ಹಾಕಿ ಅಣಿಗುಂಟ ಹಿಂಜುತ್ತಾರೆ. ಆಗ ಇದನ್ನು ಲೆಖ್ಖಕ್ಕೆ ಸರಿಯಾಗಿ ಒಂದೊಂದು ನೂರು ಎಳೆಯ ಲೆಖ್ಖದ ಮೇಲೆ ೧೦೦೦ ಎಳೆಯ ೧೪ ನೂರು ಎಳೆಯ ಹಾಗೂ ೨೨೫ ಎಳೆಗಳ ಟಾಣಗಿಗಳನ್ನು ಮಾಡಿ ಅವುಗಳನ್ನು ಬೇರೆ ಬೇರೆ ಮಾಡಿ ಟಾಣಗಿಯನ್ನು ಸುತ್ತುತ್ತಾರೆ. ಕೈಗಳ ಸಹಾಯ ಇದಕ್ಕೆ ಹೆಚ್ಚು ಅನುಕೂಲವಾಗುತ್ತದೆ. ಹೀಗೆ ತಯಾರಿಸಿದ ಟಾಣಗಿಗಳು ಕೆಚ್ಚಲಿಕ್ಕೆ ತಯಾರಿಸುತ್ತಾರೆ.

ಈ ಮೊದಲೇ ಕಟ್ಟಿಸಿದ ಹಣಗಿಯನ್ನು ಮಗ್ಗದ ಮೇಲಿರಿಸಿ ಅದರಲ್ಲಿಯ ಚುಂಗಗಳನ್ನು ಸಮಗೊಳಿಸಿ ಚೂರಿಯಿಂದ ಮುಂದಿನ ತುದಿಯನ್ನು ಸ್ವಲ್ಪ ಪ್ರಮಾಣದಲ್ಲಿ ಗುಂಜು ಏಳುವಂತೆ ಮಾಡುತ್ತಾರೆ. ಹೆಣ್ಣು ಮಕ್ಕಳು ಇಬ್ಬರು ಸೇರಿ ಆಜು ಬಾಜು ಕುಳಿತು ಕೈಯಲ್ಲಿ ಟಾಣಗಿಯ ತಲೆ ಅಣಿಯನ್ನು ನಡು ಬೆರಳಿಗೆ ಮತ್ತು ಕಿರು ಬೆರಳಿಗೆ ಇರಿಸಿಕೊಂಡು ಒಂದೊಂದೇ ಎಲೆಯನ್ನು ಚಿವುಟುತ್ತ ಹಣಗಿಯಲ್ಲಿಯ ಒಂದು ಎಳೆಯನ್ನು ತೆಗೆದುಕೊಂಡು ಅಣಿಗುಂಟ ಕೆಚ್ಚು ಇಡುವ ಕ್ರಿಯೆಗೆ ಹಣಗಿ ಕಚ್ಚುವುದು ಎನ್ನುತ್ತಾರೆ. ಹಣಗಿ ಕಟ್ಟುವಾಗ ಇರಿಸಿದ ದಡಿ, ಪೇಟಿ ಮತ್ತು ಒಡಲ, ಗಿರುಗಳಿಗೆ ಬೇರೆ ಬೇರೆ ಟಾಣಗಿಗಳಿಂದ ಎಲೆ ಮಲಿಚುತ್ತಾರೆ. ಇಲ್ಲಿ ಹೆಣ್ಣು ಮಕ್ಕಳು ತಾ ಮುಂದು ನಾ ಮುಂದು ಎಂದು ಸ್ಪರ್ಧಿಸುತ್ತಾರೆ. ಕೆಚ್ಚುವಾಗ ಕೆಚ್ಚುಗಳೂ ಸಹಿತ ಒಂದೇ ರೀತಿಯಲ್ಲಿ ಇರಿಸುತ್ತಾರೆ. ಕೆಚ್ಚುವಾಗ ಕೆಚ್ಚುಗಳಿಗೆ ಅಂಟಿನ ಸಹಾಯ ಪಡೆಯುತ್ತಾರೆ. ಅಂದಾಗ ಕೆಚ್ಚುಗಳು ಗಟ್ಟಿಯಾಗಿ ನಿಲ್ಲುತ್ತವೆ. ಇದಕ್ಕೆ ಹಣಗಿ ಕೆಚ್ಚುವ ಕ್ರಮವೆನ್ನುತ್ತಾರೆ.

ಹೀಗೆ ಕೆಚ್ಚಿದ ಹಣಗಿಯನ್ನು ಮಗ್ಗದ ಚೌಕಟ್ಟಿನಲ್ಲಿರಿಸಿದ ಹಲಗಿಯ ಸಂದಿನಲ್ಲಿ ತಟ್ಟನ್ನು ಇಟ್ಟು ಅದರ ಮೇಲೆ ಹಲಗಿಯಲ್ಲಿ ಇರಿಸಿದ ಇನ್ನೊಂದು ಕಟಿಗೆಯ ಎಳೆಯನ್ನು ಇರಿಸುತ್ತಾರೆ. ತಟ್ಟಿನ ಹಿಂದೆ ಇರಿಸಿದ ಚುಂಗಿಗಳನ್ನು ಹಾಗೂ ಕೆಚ್ಚುಗಳನ್ನು ಹಿಂದಕ್ಕೆ ಎಳೆದುಕೊಂಡು ಒಂದು ಕಬ್ಬಿಣ ಸಳಿಗೆ ಕಟ್ಟಿ ಅದನ್ನು ಕುಂಟಿಯ ಸಂದಿನಲ್ಲಿ ಇರಿಸಿ ಕಟ್ಟಿಗೆಯ ಬೆಣೆಗಳನ್ನು ಸರಿಸಿ ಚುಂಗಿಗಳು ಮುಂದೆ ಬರದಂತೆ ಮಾಡುತ್ತಾರೆ. ಟಾಣಗಿಗಳನ್ನು ಮುಂದೆ ಒಯ್ದು  ಟಾಣಗಿಗಳನ್ನು ದಡಿ, ಪೇಟೆ, ದಡಿಪೇಟೆ, ಭೂಮಿ ಇವುಗಳನ್ನು ಬೇರೆ ಬೇರೆ ಮಾಡಿ ಪೇಟೆ ಟಾಣಗಿಗಳನ್ನು , ಮೇಲೆ ಇರಿಸಿದ ಒಂಕಿಗಳಿಗೆ ಹಾಕಿ ಅದಕ್ಕೆ ಪೇಚೀಲಗಳನ್ನು ತೂಗ ಬಿಡುತ್ತಾರೆ. ಮತ್ತು ದಡಿ, ಕೀರು ಒಡ್ಡಲ ಟಾಣಗಿಗಳನ್ನು ಎಂಟು ಚುಂಗಗಳನ್ನು ಮಾಡಿ ಅವುಗಳಿಗೆ ದಾರಗಳನ್ನು ಕಟ್ಟಿ ಅಣಿ ಮುರಿದು ದಾರಗಳನ್ನು ಚುಂಗಿ ಕೋಲಿಗೆ ಕಟ್ಟುತ್ತಾರೆ. ಮುಂದೆ ಕಂಬೆಳಿಗಳನ್ನು ಒಡೆದು ಹೊಕ್ಕು ಹಾಕಲು ಮಗ್ಗದ ಮೇಲೆ ಇರಿಸಿ ಸಿದ್ಧಗೊಳಿಸುತ್ತಾರೆ.

ಮಗ್ಗದ ಕುಣಿಯಲ್ಲಿ ಇರಿಸಿದ ಕಾಲಪಾವಡಿಗಳನ್ನು ಟಾಣಕೋಲಿಗೆ ಕಟ್ಟುತ್ತಾರೆ. ತಂತಿ ಬೆಜದ ಪ್ರತಿಯೊಂದು ಸೆಳ್ಳಿಗೆ ಎಡೆರಡು ಉಸುಕಿನ ಚೀಲಗಳನ್ನು ಕಟ್ಟುತ್ತಾರೆ. ಆ ಟಾಣಕೋಲಿನ ಬಳದಾರಗಳ ಸಹಾಯದಿಂದ ಚಕ್ರ (ಗಾಡ) ದಲ್ಲಿರಿಸಿದ ಕೋಲುಗಳಿಗೆ ಕಟ್ಟುತ್ತಾರೆ. ಚುಂಗಿ ಕೋಲಿಗೆ ಹಗ್ಗ ಹಾಕಿ ಆ ಹಗ್ಗವನ್ನು ಮಿಣಿಗೂಟಕ್ಕೆ ಕಟ್ಟಿ ಇನ್ನೊಂದು ಹಗ್ಗದ ತುದಿಯನ್ನು ಕೈಗೂಟಕ್ಕೆ ಕಟ್ಟುತ್ತಾರೆ. ಹೀಗೆ ತಯಾರಿಸಿದ ಜ್ವಾಕಿ ನೇಯಲು ಸಿದ್ಧಗೊಳ್ಳುತ್ತದೆ.

ಸುತ್ತಿದ ಕಂಡಕಿಯನ್ನು ಲಾಳಿಯ ಸೂಲಂಗಿಯಲ್ಲಿರಿಸಿ ಲಾಳಿಯಲ್ಲಿ ಇರಿಸಿದ ಮಣಿಗಳಲ್ಲಿ ಪೋಣಿಸಿ ಕಂಡಕಿಯ ಎಳೆಯನ್ನು ಸೆಡವುಗಟಿಗೆಗೆ ಸಿಕ್ಕಿಸಿ ಕಾಲಪಾವಡಿಯನ್ನು ತುಳಿದಾಗ ಅಣಿಯು ತೆರೆದುಕೊಳ್ಳುತ್ತದೆ. ಆಗ ಹಲಗಿಗೆ ಕಟ್ಟಿದ ಜೋಟಾವನ್ನು ಸರಿಯಾಗಿ ಜಗ್ಗಲು ವಾಟಾ ಒಗೆದಾಗ ಲಾಳಿಯಲ್ಲಿಯ ಒಂದೊಂದೇ ಎಳೆಯು ಅ ಕಡೆಯಿಂದ ಈ ಕಡೆಗೆ ಈ ಕಡೆಯಿಂದ ಆ ಕಡೆಗೆ ಓಡಾಡುವಾಗ ಲಾಳಿ ಓಡಾಡುತ್ತಲೇ ಅಣಿಯನ್ನು ತೆರೆಯುತ್ತಿರುವಾಗ ಎಡಗೈಯಿಂದ ಹಲಗಿಯನ್ನು ಬಡೆಯುತ್ತದ್ದಂತೆ ಚಕ್ರವು ತಾನೇ ಸಾಕಳಾದ ಸಹಾಯದಿಂದ ತಿರುಗುತ್ತ ವಿನ್ಯಾಸ (ಡಿಸೈನ್) ಬೀಳುತ್ತದೆ. ಜೋಟಾ ಜಗ್ಗಿ ವಾಟಾ ಒಗೆಯುವುದು ಕಾಲಪಾವಡಿಗಳನ್ನು  ತುಳಿಯುವುದು ಲಾಳಿ ಓಡಾಡುತ್ತಲೇ ಆ ಕಪಾಳದಿಂದ ಈ ಕಪಾಳದಲ್ಲಿ ಈ ಕಪಾಳದಿಂದ ಆ ಕಪಾಳದಲ್ಲಿ ಅಣಿಯು ತೆರೆಯುತ್ತಲೇ ಸರಿಯಾಗಿ ಎಡಗೈ ಹಲಗಿಯನ್ನು ಒಡೆಯುವಾಗ ಕಂಡಕಿಯ ಹೊಕ್ಕಿನ ಎಳೆಯು ಬಿಚ್ಚುತ್ತ ನಡೆಯುತ್ತದೆ. ಒಂದು ಹಲಗಿ ನೇಯುವಾಗ ಅದು ಹೊಕ್ಕಿನಿಂದ ನಾಲ್ಕು ಇಂಜು ನೇಯ್ದಾಗ ಹಲಗಿ ತುಂಬುತ್ತದೆ. ಹಲಗಿ ನಿಲ್ಲಿಸಿ ಕಾಲಪಾವಡಿ ತುಳಿಯುವುದನ್ನು ನಿಲ್ಲಿಸಿದಾಗ ಮಗ್ಗದ ಹಲಗಿ ನಿಲ್ಲುತ್ತದೆ. ಕೈಗೂಟಕ್ಕೆ ಕಟ್ಟಿದ ಹಗ್ಗವನ್ನು ನೇಗಿಮಲು ಹಾಕಿದ್ದನ್ನು ಸಡಿಲಿಸಿದರೆ ನೇಯ್ದ ಬಟ್ಟೆ (ಖಣ) ಕುಂಟಿಗೆ ಸುತ್ತುತ್ತವೆ. ಪುನಃ ಹಗ್ಗ ಬಿಗಿಗೊಳ್ಳುತ್ತದೆ. ತಾನು ನೇಯುತ್ತ ಹಗ್ಗ ಸಡಿಲಿಸುತ್ತ ಕುಂಟಿಗೆ ಖಣ ಸುತ್ತುತ್ತ ಮೊದಲು ೩ ಅಥವಾ ೪ ಹೂವು ಕೆಡುತ್ತವೆ. ಮುಂದೆ ನೇಯುತ್ತ ಹೋದಂತೆ ಎಲ್ಲ ಟಾಣಗಿಯ ಎಳೆಗಳು ೨೩ ಸರಿ ದಾರಿಯಲ್ಲಿರುತ್ತವೆ.

ಈ ಎಲ್ಲ ಪ್ರಕ್ರಿಯೆಗಳಲ್ಲಿ ಪ್ರತಿ ಹಂತದಲ್ಲೂ ಮೈತುಂಬ ಕಣ್ಣಾಗಿರಿಸಿಕೊಂಡು ಹುಷಾರಿಯಿಂದ ನೇಕಾರ ತನ್ನ ಎಲ್ಲ ಅನುಭವದಿಂದ ಶಾಂತ ಚಿತ್ತದಿಂದ ನೇಯುವಾಗ ಭಜನೆ ಪದಗಳನ್ನು ಗುಣಗುಡುತ್ತ ಇಲ್ಲವೆ ಹಾಡುತ್ತ ಜೋಟಾ ಜಗ್ಗಿ ವಾಟಾ ಒಗೆಯುತ್ತಾನೆ. ಹೀಗೇಯೇ ಖಣಗಳನ್ನು ಉತ್ಪಾದಿಸುತ್ತಾನೆ. ನೇಕಾರ ಇದನ್ನು ತಾನು ನಂಬಿದ ಕಾಯಕವನೆಸಿಕೊಳ್ಳುತ್ತದೆ.

ನೇಕಾರ ತಾನು ಆಸಕ್ತಿ ಹೊಂದಿದ ವಿನ್ಯಾಸದ ಹಣಗಿ ಕಟ್ಟಿಸಿಕೊಂಡು ನೇಯುತ್ತಾನೆ. ಇವುಗಳಲ್ಲಿ ಪ್ರಮುಖವಾಗಿ ವಾನುಗಳಾದ ಚಿತ್ರಮಾಲಾ ಕಳಾವಾರ ಕರಮಂಟಕ್ಕಿ, ಸೂಜ್ ಮಲ್ಲಿಗೆ, ಸಿದ್ಧೇಶ್ವರ ಮುಕುಟ , ನವಲಪರಿ, ತಿರುಕಿ ಕವಳಿ ಹೂ, ಗುಂಡಫೂಲ, ಹೊನ್ನು ಹೂವಾ, ಚೌಕಡಾ, ಐದಮನಿ ವಾರಸಾಲು, ಏಳಮನಿ ವಾರ ಸಾಲು, ಮೂರಮನಿ ವಾರಸಾಲು, ಅಡ್ಡ ವಾರ ಸಾಲು, ಸೂರ್ಯ ನಾರಾಯಣ, ತೇರು, ಕ್ಯಾದಗಿ ಬಳ್ಳಿ, ರುಂಡಮಾಲಿ, ಪಿಟ್ಟ ತೇರು-ಬಳ್ಳಿ, ಕಳವಾರ, ಆನೆ-ನವಿಲು, ಬಾತಗೋಳಿ, ಈಶ್ವರ ಬಸವಣ್ಣ, ಜೈ-ಹಿಂದ, ರಾಷ್ಟ್ರಧ್ವಜ, ಗಾಂಧೀಜಿ ಹೀಗೆ ಮಹಿಳೆಯರಿಗೊಪ್ಪುವ ಎದೆಗಪ್ಪುವ ಬೇರೆ ಬೇರೆ ವಿನ್ಯಾಸಗಳಲ್ಲಿ ಸಣ್ಣ ದಡಿಯಲ್ಲಿ ದೊಡ್ಡದಡಿಯಲ್ಲಿ ಮದ್ರಾಸ ಚಿತ್ರ ಮಾಲಾದಲ್ಲಿ ಆಯಾ ಕೋಲುಗಳಲ್ಲಿ ನೇಯುತ್ತಾನೆ.

೨೦ ಮೀಟರ್ ನೇಯ್ದಾಗ ಒಂದು ಹೊರಿಯಾಗುತ್ತದೆ. ಅಂದರೆ ೪೦ ಅಥವಾ ೪೧ ಖಣ ತಯಾರಾಗುತ್ತದೆ. ರೇಷ್ಮೆ ಒಂದು ಹೊರಿಗೆ ರೂ. ೩೮೦/- (ಸಣ್ಣದಡಿಗೆ) ರೇಷ್ಮೆ ಒಂದು ಮಸರಾಯ ಹೊರಿಗೆ ರೂ. ೩೪೦/- (ದೊಡ್ಡದಡಿ) ಹಾಗೂ ಮದ್ರಾಸ ಚಿತ್ರಮಾಲಾ ಒಂದು ಹೊರಿಗೆ ರೂ. ೩೦೦/- ಕೂಲಿ ಪಡೆ ಈಯುತ್ತಾನೆ ಈ ಒಂದು  ಕೂಲಿ ಪಡೆಯುತ್ತಾನೆ. ಈ ಒಂದು ಕೂಲಿ ಪಡೆಯಬೇಕಾದರೆ ಒಂದು ಕುಟುಂಬದ ನೇಕಾರ ನೇಯಲು ಪ್ರಾರಂಭಿಸಿದರೆ ಅವನ ಹಿಂದೆ ಮನೆಯ ೫ ಜನರು ಜೋಡಕಿ ಮಾಡಬೇಕಾಗುತ್ತದೆ. ಬೇರೆ ಬೇರೆ ವಿನ್ಯಾಸಗಳಿಗೆ ಮಜೂರಿ ಬೇರೆ ಬೇರೆಯಾಗಿರುತ್ತದೆ. ಸಣ್ಣ ದಡಿ, ದೊಡ್ಡದಡಿ, ಮದ್ರಾಸ ಚಿತ್ರಮಾಲಾ ಇವುಗಳನ್ನು ನೇಯ್ದು ಹೊರಿಗಳನ್ನು ಒಂದರ ಬದಿಗೆ ಒಂದನ್ನು ಇರಿಸಿದಾಗ ನೋಡಬೇಕು ಅವುಗಳ ಸುಂದರತೆ, ಚೆಲುವು ಒಂದಕ್ಕೊಂದು ಮಿಗಿಲು, ಇಷ್ಟೆಲ್ಲ ವೈವಿಧ್ಯಮಯ ಸುಂದರ ಚಿತ್ತಾರಗಳ ಖಣಗಳನ್ನು ನೋಡುವ ಮಹಿಳೆ ಕಣ್ಣುಗಳನ್ನು ತಣಿಸುತ್ತವೆ. ಆಗ ಅವರ ಮನಸ್ಸು ಖರೀದಿಸಲು ಮೋಹಕಗೊಳ್ಳುತ್ತದೆ. ಇಷ್ಟೆಲ್ಲ ರೋಚಕ ಇತಿಹಾಸ ಹೊಂದಿರುವ ಕೈ ಮಗ್ಗದ ಖಣಗಳನ್ನು ಉತ್ಪಾದಿಸಲು ಸರಿಸುಮಾರು ಒಂದು ಮಗ್ಗದ ಹಿಂದೆ ೧೦ ಜನಗಳಿಗೆ ಉಪಕಸುಬು ಲಭಿಸುವುದರಲ್ಲಿ ಸಹಾಯಕವಾಗುತ್ತದೆ.

ಪ್ರತಿ ನೇಕಾರರ ಕುಟುಂಬದ ಸದಸ್ಯರು ಹತ್ತು ಹಲವು ನೇಕಾರಿಕೆಯ ಪ್ರಕ್ರಿಯೆಗಳಲ್ಲಿ ತೊಡಗಿಸಿಕೊಳ್ಳುವವರಿಗೆ ಮೈ-ಕೈತುಂಬ ಕೆಲಸ ಇದ್ದು ಒಂದು ಸೂಕ್ಷ್ಮ ಕುಸುರಿನ ಕೆಲಸದ ಅದ್ಭುತ ಕ್ರಿಯೆ. ಇದಕ್ಕೆ ಪ್ರತಿ ಹಂತದಲ್ಲಿ ತಾಳ್ಮೆ ಅನುಭವ, ಜಾಣ್ಮೆಯ ಅವಶ್ಯಕತೆ ಇದೆ. ರೈತ ಹೊರಗೆ ಬಿಸಿಲಲ್ಲಿ ದುಡಿದರೆ ನೇಕಾರ ನೆರಳಿನಲ್ಲಿ ದುಡಿಯುತ್ತಾನೆ. ನೆರಳಲ್ಲಿ ದುಡಿದರೂ ನರಳಬೇಕಾಗುತ್ತದೆ. ಇವರು ಈ ನಾಡಿಗೆ ಒಬ್ಬರಿಗೊಬ್ಬರು ಪೂರಕ. ರೈತ ಹೊಟ್ಟೆಗೆ ಅನ್ನ ಕೊಟ್ಟರೆ ನೇಕಾರ ನೇಯ್ದು ಬಟ್ಟೆಯಿಂದ ಮಾನಾ ಮುಚ್ಚುತ್ತಾನೆ. ಅಂತೆಯೇ ‘ಲಾಳಿ-ಮೇಳಿ’ ಸಮ ಎಂದು ಸಾರುತ್ತ ಬಂದಿದ್ದಾರೆ. ಇವರಲ್ಲಿ ಪ್ರಮುಖವಾಗಿ ನಾಲ್ಕು ಭಾಗಗಳನ್ನಾಗಿ ಮಾಡಬಹುದು.